“ಅಧಿಕಾರಿಯ ಹೆಸರು ಸದನದಲ್ಲಿ ಬಹಿರಂಗಪಡಿಸುತ್ತೇನೆ” – ಡಿ.ಕೆ. ಶಿವಕುಮಾರ್ | Hosa Suddi

ಬೆಂಗಳೂರು

“ಅಧಿಕಾರಿಯ ಹೆಸರು ಸದನದಲ್ಲಿ ಬಹಿರಂಗಪಡಿಸುತ್ತೇನೆ” – ಡಿ.ಕೆ. ಶಿವಕುಮಾರ್

Published

on

ಹಸಿಕಸದಿಂದ ಗ್ಯಾಸ್ ಉತ್ಪಾದನೆ; ಗೇಲ್ ಸಂಸ್ಥೆ ಜೊತೆ ಸರ್ಕಾರದ ಒಪ್ಪಂದ

ಬೆಂಗಳೂರು: “ಡಿಸಿಎಂ ಆಗುತ್ತೀರೋ ಅಥವಾ ಜೈಲಿಗೆ ಹೋಗುವಿರೋ” ಎಂದು ಬಿಜೆಪಿ ಮಾಡಿದ ಟೀಕೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. “ನಾನು ಬಿಜೆಪಿಯವರು ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಿಲ್ಲ, ನಾನು ಹುದ್ದೆಯ ಸಮೇತ ಅಧಿಕಾರಿಯ ಕುರಿತು ಮಾತ್ರ ಉಲ್ಲೇಖ ಮಾಡಿದ್ದೇನೆ. ಬಿಜೆಪಿಯ ನಾಯಕರು ಯಾರೂ ನನ್ನನ್ನು ಜೈಲಿಗೆ ಹೋಗು ಎಂದು ಹೇಳಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಗೇಲ್ ಸಂಸ್ಥೆಯೊಂದಿಗೆ ಹಸಿಕಸದಿಂದ ಗ್ಯಾಸ್ ಉತ್ಪಾದನಾ ಘಟಕ ಸ್ಥಾಪನೆಗೆ ಸಂಬಂಧಿಸಿದ ಒಡಂಬಡಿಕೆ ಹಸ್ತಾಂತರದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

“ಈ ವಿಚಾರ ಈಗ ಮುಗಿದಿದೆ. ಐದು ವರ್ಷಗಳ ಹಿಂದಿನ ಸಂಗತಿ ಇದು. ಈಗ ಮತ್ತೆ ನಮ್ಮ ಪಕ್ಷ ಅಧಿಕಾರದಲ್ಲಿದೆ. ನಾನು ಹೇಳಿದ್ದು ಎಲ್ಲರಿಗೂ ತಿಳಿದ ವಿಷಯವೇ. ಇದರಲ್ಲಿ ಕಟ್ಟುಕತೆ ಇಲ್ಲ. ಅಧಿಕಾರಿಯ ಹೆಸರನ್ನು ಎಲ್ಲೆಂದರಲ್ಲಿ ಹೇಳುವುದಿಲ್ಲ, ಆದರೆ ಬಿಜೆಪಿ ನಾಯಕರು ಸದನದಲ್ಲಿ ಕೇಳಿದರೆ ಹೇಳುತ್ತೇನೆ,” ಎಂದು ಅವರು ಸವಾಲು ಹಾಕಿದರು.

ಇನ್ನು ಗೇಲ್ ಸಂಸ್ಥೆ 123 ಕೋಟಿ ರೂ. ವೆಚ್ಚದಲ್ಲಿ ಹಸಿಕಸದಿಂದ ಗ್ಯಾಸ್ ಉತ್ಪಾದನಾ ಘಟಕವನ್ನು ಬೆಂಗಳೂರಿನಲ್ಲಿ ಸ್ಥಾಪಿಸುತ್ತಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ಸ್ಥಳ ಒದಗಿಸಿದೆ. “ಇದು ಬೆಂಗಳೂರಿನ ಕಸದ ಸಮಸ್ಯೆ ಪರಿಹರಿಸಲು ಪ್ರಮುಖ ಹೆಜ್ಜೆ. ಸಾರ್ವಜನಿಕರು, ಹೋಟೆಲ್‌ಗಳು ಈ ಗ್ಯಾಸ್‌ನ್ನು ಬಳಸುವಂತಾಗಬೇಕು,” ಎಂದರು.

ಕಿರಣ್ ಮಜುಂದಾರ್ ಟ್ವೀಟ್ ಮೂಲಕ ಮಾಡಿದ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, “ಗೇಲ್ ಸಂಸ್ಥೆಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. ಕಸ ವಿಲೇವಾರಿಗಾಗಿ ನ್ಯಾಯಾಲಯದಿಂದ ಕೆಲವು ಅಡಚಣೆಗಳಿದ್ದವು, ಆದರೆ ಈಗ 33 ಪ್ಯಾಕೇಜ್‌ಗಳಲ್ಲಿ ವಿಲೇವಾರಿ ಘಟಕಗಳ ಸ್ಥಾಪನೆ ನಡೆಯುತ್ತಿದೆ,” ಎಂದು ತಿಳಿಸಿದರು.

ಶಿವಕುಮಾರ್ ಅವರು, “ಸರ್ಕಾರಿ ಅಧಿಕಾರಿಗಳು, ಜಿಬಿಎ ಆಯುಕ್ತರು ಮತ್ತು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ನನ್ನ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ,” ಎಂದು ವಿವರಿಸಿದರು.

Trending

Exit mobile version