ರಾಜ್ಯ
ಅಪ್ಪು ಸರ್ ನನಗೆ ಧೈರ್ಯ ತುಂಬಿದ್ದರು’: ಪುನೀತ್ ರಾಜ್ಕುಮಾರ್ ಸ್ಮರಿಸಿದ ಹರ್ಷಿಕಾ ಪೂಣಚ್ಚ – Harshika on Appu
ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಪುನೀತ್ ರಾಜ್ಕುಮಾರ್ ನಮ್ಮೆಲ್ಲರನ್ನು ಅಗಲಿ ದಿನಗಳು ಉರುಳಿವೆ. ಆದರೆ ಅವರ ನೆನಪು ಮಾತ್ರ ಸದಾ ಜೀವಂತ. ಅವರ ಸಿನಿಮಾ ಮತ್ತು ಸಾಮಾಜಿಕ ಸೇವೆ ಹೆಚ್ಚಿನ ಸಂಖ್ಯೆಯ ಜನರಲ್ಲಿ ಅಚ್ಚಳಿಯದೇ ಉಳಿದಿದೆ. ಅಪ್ಪು ಹೆಸರಲ್ಲಿ ಮಾನವೀಯ ಕಾರ್ಯಗಳು ಮತ್ತು ಅವರ ಸ್ಮರಣೆ ಮುಂದುವರೆದಿದೆ. ಇದೀಗ ನಟಿ ಹರ್ಷಿಕಾ ಪೂಣಚ್ಚ ಅವರು ಪುನೀತ್ ರಾಜ್ಕುಮಾರ್ ಕುರಿತಾದ ವಿಶೇಷ ಪೋಸ್ಟ್ ಶೇರ್ ಮಾಡೋ ಮೂಲಕ ಗಮನ ಸೆಳೆದಿದ್ದಾರೆ.
ಜಾಕಿ’, 2010ರ ಅಕ್ಟೋಬರ್ 14ರಂದು ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದ ಸಿನಿಮಾ. ಬಹುತೇಕ ಉತ್ತಮ ಪ್ರತಿಕ್ರಿಯೆ ಗಳಿಸಿದ್ದ ಈ ಚಿತ್ರ ಗಲ್ಲಾಪೆಟ್ಟಿಗೆ ವಿಚಾರದಲ್ಲೂ ಯಶ ಕಂಡಿತ್ತು. ದುನಿಯಾ ಸೂರಿ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಹಾಗೂ ಭಾವನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರೆ, ಹರ್ಷಿಕಾ ಪೂಣಚ್ಚ, ಸುಮಿತ್ರಾ, ರಂಗಾಯಣ ರಘು, ಪೆಟ್ರೋಲ್ ಪ್ರಸನ್ನ, ವಿಕಾಸ್ ಸೇರಿದಂತೆ ಹಲವರು ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದರು. ಪಾರ್ವತಮ್ಮ ರಾಜ್ಕುಮಾರ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದರು.
ಪುನೀತ್ ರಾಜ್ಕುಮಾರ್ ವೃತ್ತಿಜೀವನದಲ್ಲಿ ಈ ಚಿತ್ರ ಮಹತ್ವದ ಪಾತ್ರ ವಹಿಸಿದೆ. ಕನ್ನಡದಲ್ಲಿ ಇದು ಯಶಸ್ವಿ ಚಿತ್ರಗಳಲ್ಲೊಂದು. ಹರ್ಷಿಕಾ ಪೂಣಚ್ಚ ಅವರ ಆರಂಭದ ದಿನಗಳಲ್ಲಿ ಸಿಕ್ಕ ಸಿನಿಮಾ. ಸದ್ಯ ನಟಿ ತಮ್ಮ ಅನುಭವ, ಅಪ್ಪು ಕೊಟ್ಟ ಸಾಥ್ ಬಗ್ಗೆ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪುನೀತ್ ಅವರ ಜೊತೆಗಿನ ಒಂದು ಫೋಟೋ ಕೂಡಾ ಶೇರ್ ಮಾಡಿದ್ದಾರೆ.
ಹರ್ಷಿಕಾ ಪೂಣಚ್ಚ ಪೋಸ್ಟ್: ”ಚಿತ್ರೀಕರಣದ ಮೊದಲ ದಿನ ನನಗಾದ ಅನುಭವ, ಭಯ, ಹತಾಶೆಯನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ. ಅದರಲ್ಲೂ, ಒಂದೇ ಒಂದು ಡೈಲಾಗ್ ಇಲ್ಲದೇ ದೃಶ್ಯವೊಂದನ್ನು ನಿಭಾಯಿಸಬೇಕಾದ ಕ್ಷಣ. ಅದೊಂದು ಕಠಿಣ ಪರಿಸ್ಥಿತಿ. ಕಣ್ಣೀರಿಟ್ಟಿದ್ದೆ. ಆದ್ರೆ ಅಪ್ಪು ಸರ್ ನನ್ನ ಸಂಕಟ ಗಮನಿಸಿ ಸಮಾಧಾನ ಹೇಳಲು ಬಂದಿದ್ದರು. ನನ್ನ ಪಾತ್ರ ಮಹತ್ವದ್ದು, ಸಾಕಷ್ಟು ಡೈಲಾಗ್ಸ್ ಸಿಗಲಿದೆ ಎಂದು ಭರವಸೆಯ ಮಾತುಗಳನ್ನಾಡಿದ್ದರು. ಚಿಂತಿಸಬೇಡಿ ಎಂದು ಸಮಾಧಾನ ಹೇಳಿದ್ದರು. 15 ವರ್ಷ ವಯಸ್ಸಿನವಳಾಗಿದ್ದಾಗ, ಅವರೊಂದಿಗೆ ಕೆಲಸ ಮಾಡಿದ್ದು ನನಗೆ ಬಹಳ ಸಂತೋಷ ಕೊಟ್ಟಿತ್ತು. ಜಾಕಿ ಚಿತ್ರದ ಚಿತ್ರೀಕರಣದ ಸಮಯ ಸ್ಮರಣೀಯ. ಅವರ ವಿನಮ್ರತೆ, ಸಮರ್ಪಣೆ, ಪ್ಯಾಶನ್, ಹಾಗೆಯೇ ಅವರು ತಮ್ಮ ಜೀವನ ನಡೆಸಿದ ರೀತಿಯನ್ನು ಅನುಸರಿಸಲು ಬಯಸುತ್ತೇನೆ” ಎಮದು ಬರೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಸಿನಿಮಾ ಸೆಟ್ನ ಫೋಟೋವನ್ನು ಹಂಚಿಕೊಂಡಿದ್ದಾರೆ.
ದೇಶ
Kadapa ದಲ್ಲಿ ಕೋವಿಡ್ ಆತಂಕ; ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಣೆ
ಆಂಧ್ರಪ್ರದೇಶ: ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್-19 (Covid-19) ಸೋಂಕಿನ ಆತಂಕ ಮತ್ತೊಮ್ಮೆ ಆಂಧ್ರಪ್ರದೇಶದಲ್ಲಿ ಕಾಣಿಸಿಕೊಳ್ಳತೊಡಗಿದೆ. ವೈಎಸ್‌ಆರ್ ಕಡಪ ಜಿಲ್ಲೆಯಲ್ಲೇ ಇತ್ತೀಚೆಗೆ ಎಂಟು ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಇಬ್ಬರು ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ಆರೋಗ್ಯ ಇಲಾಖೆಯನ್ನು ಎಚ್ಚರಕ್ಕೆ ತಂದಿದೆ.
ಮೃತರಲ್ಲಿ ರಾಜಂಪೇಟೆಯ 52 ವರ್ಷದ ವ್ಯಕ್ತಿಯೊಬ್ಬರು ವೇಲ್ಲೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ. ಮತ್ತೊಬ್ಬ 43 ವರ್ಷದ ವ್ಯಕ್ತಿ ಕಡಪ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ. ಇದೇ ವೇಳೆ 25 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರಿಗೂ ಸೋಂಕು ದೃಢಪಟ್ಟಿದ್ದು, ಅವರು ಸದ್ಯ ಗೃಹಬಂಧನದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಿದೆ. ಸೋಂಕು ಪೀಡಿತ ಪ್ರದೇಶಗಳಿಂದ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಪ್ರಸ್ತುತ ಹರಡುತ್ತಿರುವ ವೈರಸ್ ಯಾವ ರೂಪಾಂತರಕ್ಕೆ ಸೇರಿದೆ ಎಂಬುದನ್ನು ತಿಳಿಯಲು ಮಾದರಿಗಳನ್ನು ಪುಣೆಯ ಪ್ರಯೋಗಾಲಯಕ್ಕೆ ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ರವಾನಿಸಲಾಗಿದೆ.
ರಾಜ್ಯದ ಜಿಲ್ಲಾ ಉಸ್ತುವಾರಿ ಸಚಿವೆ ಸವಿತಾ ಅವರು ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲು ಸೂಚಿಸಿದ್ದಾರೆ. ಸಾರ್ವಜನಿಕರು ಹೆಚ್ಚು ಜನಸಂದಣಿ ಇರುವ ಪ್ರದೇಶಗಳು ಹಾಗೂ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ವೈದ್ಯಕೀಯ ಇಲಾಖೆ ಸಲಹೆ ನೀಡಿದೆ.
ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್‌ಗಳು ಮತ್ತು ಅಗತ್ಯ ಹಾಸಿಗೆಗಳನ್ನು ಸಜ್ಜುಗೊಳಿಸುವಂತೆ ನಿರ್ದೇಶನ ನೀಡಲಾಗಿದೆ. ನಾಗರಿಕರು ಅನಗತ್ಯ ಆತಂಕಕ್ಕೆ ಒಳಗಾಗದೆ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಬೆಂಗಳೂರು
Shakthi Scheme ಬಳಿಕ BMTC ಸೇವೆ ಹೇಗಿದೆ? ಬಸ್‌ನಲ್ಲಿ ಪ್ರಯಾಣಿಸಿದ ಸಚಿವರಿಗೆ ಸಿಕ್ಕ ಉತ್ತರ
ಬೆಂಗಳೂರು: Shakthi Scheme ಜಾರಿಯಾದ ಬಳಿಕ ಬಿಎಂಟಿಸಿ ಸೇವೆಗಳ ನೈಜ ಸ್ಥಿತಿ ತಿಳಿಯಲು ಸಾರಿಗೆ ಸಚಿವ ಬೈರತಿ ಸುರೇಶ್ ಸಾಮಾನ್ಯ ಪ್ರಯಾಣಿಕರಂತೆ ಬಸ್‌ನಲ್ಲಿ ಸಂಚರಿಸಿ ರಿಯಾಲಿಟಿ ಚೆಕ್ ನಡೆಸಿದರು. ಜಯಮಹಲ್, ಆರ್.ಟಿ.ನಗರ, ಸಿಬಿಐ ರಸ್ತೆ, ಹೆಬ್ಬಾಳ ಹಾಗೂ ನಾಗವಾರ ಮಾರ್ಗಗಳಲ್ಲಿ ಪ್ರಯಾಣಿಸಿದ ಸಚಿವರು, ಸಾರ್ವಜನಿಕರು ಪ್ರತಿದಿನ ಎದುರಿಸುವ ಸಮಸ್ಯೆಗಳನ್ನು ಖುದ್ದಾಗಿ ಗಮನಿಸಿದರು.
ಈ ವೇಳೆ ಹೆಬ್ಬಾಳ ಮಾರ್ಗದ ಬಸ್‌ನಲ್ಲಿ ಸಚಿವರಿಗೆ ಅಚ್ಚರಿಯ ಅನುಭವ ಎದುರಾಯಿತು. ಟಿಕೆಟ್ ಪಡೆಯಲು ಅವರು ₹100 ಮುಖಬೆಲೆಯ ನೋಟು ನೀಡಿದಾಗ, ಅವರನ್ನು ಗುರುತಿಸದ ಕಂಡಕ್ಟರ್ ತನ್ನ ಬಳಿ ಚಿಲ್ಲರೆ ಇಲ್ಲ ಎಂದು ಹೇಳಿ ಬಸ್‌ನಿಂದ ಕೆಳಗೆ ಇಳಿಯುವಂತೆ ಸೂಚಿಸಿದ್ದಾನೆ. ಸಚಿವರು ಯಾವುದೇ ವಾಗ್ವಾದ ನಡೆಸದೆ ಬಸ್‌ನಿಂದ ಇಳಿದು, ಬಳಿಕ ಚಿಲ್ಲರೆ ಹಣ ಹೊಂದಿಸಿಕೊಂಡು ಮತ್ತೊಂದು ಬಸ್‌ನಲ್ಲಿ ಪ್ರಯಾಣ ಮುಂದುವರಿಸಿದರು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪರಿಶೀಲನೆ ವೇಳೆ ಮತ್ತೊಂದು ಗಂಭೀರ ಲೋಪವೂ ಸಚಿವರ ಗಮನಕ್ಕೆ ಬಂತು. ಫನ್ ವರ್ಲ್ಡ್ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಕೈ ತೋರಿಸಿದರೂ ಬಸ್ ನಿಲ್ಲಿಸದೇ ಚಾಲಕ ಮುಂದಕ್ಕೆ ಚಲಿಸಿದ್ದನ್ನು ಅವರು ಖುದ್ದಾಗಿ ವೀಕ್ಷಿಸಿದರು. ಪ್ರಯಾಣಿಕರಿಗೆ ಆಗಿರುವ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಸಂಬಂಧಿಸಿದ ಚಾಲಕ ಮತ್ತು ನಿರ್ವಾಹಕರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಚಿವರ ಆದೇಶದಂತೆ ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದು ಸಾರಿಗೆ ಇಲಾಖೆಯ ಮೊದಲ ಆದ್ಯತೆಯಾಗಿದ್ದು, ನಿರ್ಲಕ್ಷ್ಯ ತೋರಿಸುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂಬ ಸ್ಪಷ್ಟ ಸಂದೇಶವನ್ನು ಬೈರತಿ ಸುರೇಶ್ ನೀಡಿದ್ದಾರೆ.
ಬೆಂಗಳೂರು
ಬೇಡ ಬ್ರೋ: ಡ್ರಗ್ಸ್ ವಿರುದ್ಧ MLA ಎಸ್.ಟಿ. ಸೋಮಶೇಖರ್ ಖಡಕ್ ಎಚ್ಚರಿಕೆ; ಯುವಕರಿಗೆ ಮಹತ್ವದ ಸಂದೇಶ
ಬೆಂಗಳೂರು: ‘ಬೇಡ ಬ್ರೋ’… ಇದೇ ಘೋಷಣೆಯೊಂದಿಗೆ ಬೆಂಗಳೂರು ಪಶ್ಚಿಮ ವಿಭಾಗ ಪೊಲೀಸ್ ವತಿಯಿಂದ ಗ್ಲೋಬಲ್ ವಿಲೇಜ್‌ನಲ್ಲಿ ಡ್ರಗ್ಸ್ ವಿರೋಧಿ ಬೃಹತ್ ಜಾಗೃತಿ ಅಭಿಯಾನ ನಡೆಯಿತು. ಯುವಜನಾಂಗವನ್ನು ಮಾದಕ ವಸ್ತುಗಳ ವ್ಯಸನದಿಂದ ದೂರವಿಡುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವೈದ್ಯರು, ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವೈದ್ಯೆ ಡಾ. ಮಾತಂಗಿ, ದೇಶದಲ್ಲಿ ಮಾದಕ ವ್ಯಸನ ಗಂಭೀರ ಸಮಸ್ಯೆಯಾಗಿ ಬೆಳೆಯುತ್ತಿದ್ದು, ವಿಶೇಷವಾಗಿ 18ರಿಂದ 25 ವರ್ಷದೊಳಗಿನ ಯುವಕರು ಡ್ರಗ್ಸ್ ಜಾಲಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಗಾಂಜಾ, ಅಪೀಮು ಸೇರಿದಂತೆ ವಿವಿಧ ಮಾದಕ ವಸ್ತುಗಳು ಯುವಕರ ಶಿಕ್ಷಣ, ಆರೋಗ್ಯ ಮತ್ತು ಭವಿಷ್ಯವನ್ನು ಹಾಳು ಮಾಡುತ್ತಿವೆ. ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳು ಉತ್ತಮ ಮೌಲ್ಯಗಳನ್ನು ಬೆಳೆಸುವ ಸಂದೇಶ ನೀಡಬೇಕು ಎಂದು ಅವರು ಕರೆ ನೀಡಿದರು.
ಶಾಸಕ ಎಸ್.ಟಿ. ಸೋಮಶೇಖರ್ ಮಾತನಾಡಿ, ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಸರ್ಕಾರ, ಶಿಕ್ಷಣ ಸಂಸ್ಥೆಗಳು, ಪೊಲೀಸರು ಹಾಗೂ ಸಮಾಜ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದರು. ಕೆಲವು ಕಾಲೇಜುಗಳಲ್ಲಿ ಡ್ರಗ್ಸ್ ಜಾಲದ ಬಗ್ಗೆ ಆತಂಕಕಾರಿ ಮಾಹಿತಿ ದೊರೆಯುತ್ತಿದ್ದು, ಯುವಕರನ್ನು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು. ಡ್ರಗ್ಸ್ ವಿರುದ್ಧದ ‘ಬೇಡ ಬ್ರೋ’ ಅಭಿಯಾನ ಸಮಾಜದಲ್ಲಿ ದೊಡ್ಡ ಜಾಗೃತಿ ಮೂಡಿಸಬೇಕು ಎಂದು ಆಶಿಸಿದರು.
ನೈರುತ್ಯ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣ ಮಾತನಾಡಿ, ಇಂದಿನ ಕಾಲದಲ್ಲಿ ಬಂದೂಕಿಗಿಂತ ಡ್ರಗ್ಸ್ ಸಮಾಜವನ್ನು ಹೆಚ್ಚು ಅಪಾಯಕ್ಕೆ ತಳ್ಳುತ್ತಿದೆ ಎಂದು ಎಚ್ಚರಿಸಿದರು. ಎಸಿಪಿ ಸತ್ಯವತಿ ಕೂಡ ಕ್ಷಣಿಕ ಸುಖಕ್ಕಾಗಿ ವ್ಯಸನದ ದಾರಿ ಹಿಡಿಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿಗಳು “ಡ್ರಗ್ಸ್‌ಗೆ ಬೇಡ… ಬದುಕಿಗೆ ಹೌದು” ಎಂಬ ಸಂದೇಶದೊಂದಿಗೆ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿದರು.
-
ಬೆಂಗಳೂರು16 hours agoಬೇಡ ಬ್ರೋ: ಡ್ರಗ್ಸ್ ವಿರುದ್ಧ MLA ಎಸ್.ಟಿ. ಸೋಮಶೇಖರ್ ಖಡಕ್ ಎಚ್ಚರಿಕೆ; ಯುವಕರಿಗೆ ಮಹತ್ವದ ಸಂದೇಶ
-
ದೇಶ15 hours agoಗಾನಕೋಗಿಲೆ ಎಸ್. ಜಾನಕಿ ಪಂಚಭೂತಗಳಲ್ಲಿ ಲೀನ; ಸರ್ಕಾರಿ ಗೌರವದೊಂದಿಗೆ ಮೈಸೂರಿನಲ್ಲಿ ಅಂತ್ಯಸಂಸ್ಕಾರ
-
ಸುತ್ತ ಮುತ್ತ18 hours agoBorivali Railway Station Viral Video ಪ್ರೇಮಿಗಳ ಹಂಗಾಮಾ? 60 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಿದ ವೈರಲ್ ವಿಡಿಯೋ
-
ದೇಶ16 hours agoManmohan Singh ಕುರಿತು ಮಾಜಿ ಮುಖ್ಯ ಚುನಾವಣಾ ಆಯುಕ್ತರ ಪುಸ್ತಕದಲ್ಲಿ ಹೊಸ ಬಹಿರಂಗ; ರಾಜಕೀಯ ವಲಯದಲ್ಲಿ ಚರ್ಚೆ
-
ದೇಶ15 hours agoಜಮ್ಮು-ಕಾಶ್ಮೀರದಲ್ಲಿ ಉಗ್ರರ ವೈಭವೀಕರಣ ಆರೋಪ; ಪುಸ್ತಕ ಪ್ರಕಟಿಸಿದ ಮೂವರು ಪ್ರಕಾಶಕರು ಬಂಧನ
-
ರಾಜ್ಯ18 hours agoS Janaki ಹೆಸರನ್ನು ಮೈಸೂರಿನ ಗದ್ದಿಗೆ ರಸ್ತೆಗೆ ನಾಮಕರಣ ಮಾಡಿ: ಕೇರ್ಟೇಕರ್ ನವೀನ್ ಮನವಿ
-
ರಾಜ್ಯ23 hours agoಮಹಾರಾಜ ಕಾಲೇಜು ಮೈದಾನದಲ್ಲಿ ಎಸ್. ಜಾನಕಿಗೆ ಅಂತಿಮ ನಮನ; ಅಭಿಮಾನಿಗಳ ಕಣ್ಣೀರಿನ ಸಾಗರ
-
ಕ್ರೀಡೆ17 hours agoSouth Africa ಫುಟ್ಬಾಲ್ಗೆ ಆಘಾತ; ಜೇಡನ್ ಆಡಮ್ಸ್ ಅಕಾಲಿಕ ನಿಧನ
