Connect with us

ಬೆಂಗಳೂರು

ಇಂದು ಫ್ರೆಂಡ್‌ಶಿಪ್ ಡೇ! ಕುಚಿಕು ಗೆಳೆಯರಾದ ವಿಷ್ಣು-ಅಂಬಿ ಸ್ನೇಹ ಬಾಂಧವ್ಯದ ಸವಿ ನೆನಪು – Vishnu Ambi Friendship

Published

on

ಕನ್ನಡ ಚಿತ್ರರಂಗದಲ್ಲಿ ಕುಚಿಕು ಗೆಳೆಯರಾಗಿ ಇವತ್ತಿಗೂ ಅಭಿಮಾನಿಗಳ ಹೃದಯವನ್ನು ಆವರಿಸಿರುವ ಇಬ್ಬರು ದಿಗ್ಗಜ ನಟರೆಂದರೆ ಅದು ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ರೆಬಲ್ ಸ್ಟಾರ್ ಅಂಬರೀಶ್.

ಅನೇಕ ಬಾರಿ ಅಂಬರೀಶ್ ಅವರು ಸಂದರ್ಶನಗಳಲ್ಲಿ ಮಾತನಾಡುತ್ತಾ, ನನ್ನ ಮತ್ತು ವಿಷ್ಣುವರ್ಧನ್ ಸ್ನೇಹಕ್ಕೆ ಬೆಲೆನೇ ಕಟ್ಟೋಕಾಗಲ್ಲ. ವಿಷ್ಣು ಅಪರೂಪದ ಗೆಳೆಯ ಅಂದಿದ್ರು.

ಮೂಲತಃ ಮೈಸೂರಿನವರಾದ ವಿಷ್ಣುವರ್ಧನ್ ಹಾಗೂ ಅಂಬರೀಶ್ ಸ್ನೇಹ ಶುರುವಾಗಿದ್ದು ನಾಗರಹಾವು ಸಿನಿಮಾದಿಂದ.

ನಾಗರಹಾವು ಸೆಟ್​ನಲ್ಲಿ ಮೊದಲ ಭೇಟಿ: ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಾಗರಹಾವು ಸಿನಿಮಾಗಾಗಿ ಹೊಸ ನಟರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆಗ ಚಿಗುರು ಮೀಸೆಯ ತೀಕ್ಷ್ಣ ಕಣ್ಣಿನ ಹುಡುಗ ವಿಷ್ಣುವರ್ಧನ್ ನಾಯಕನಾಗಿ ಆಯ್ಕೆಯಾಗಿದ್ದರು. ಇದೇ ಚಿತ್ರದಲ್ಲಿ ಜಲೀಲನ ಪಾತ್ರಕ್ಕಾಗಿ ತುಸು ಪುಂಡನ ಲುಕ್ ಇರುವ ನಟನಿಗಾಗಿ ಪುಟ್ಟಣ್ಣ ಹುಡುಕಾಡುತ್ತಿದ್ದರು. ಆಗ ರೆಬಲ್ ಸ್ಟಾರ್ ಅಂಬರೀಶ್ ಜಲೀಲನ ಪಾತ್ರಕ್ಕೆ ಆಯ್ಕೆಯಾಗಿದ್ದರು.

ವಿಷ್ಣುವರ್ಧನ್ ಅವರದು ಸ್ವಲ್ಪ ತಮಾಷೆ ಮಾಡುವ ವ್ಯಕ್ತಿತ್ವ. ಹೀಗಾಗಿ ಅಂಬರೀಶ್​ಗೆ ವಿಷ್ಣುವರ್ಧನ್ ಬಹಳ ಬೇಗನೆ ಇಷ್ಟವಾಗಿದ್ದರು. ಈ ಚಿತ್ರದಲ್ಲಿ ವಿಷ್ಣು ಹೀರೋ ಆಗಿದ್ರೆ, ಅಂಬರೀಶ್ ವಿಲನ್ ರೋಲ್‌ನಲ್ಲಿ ಮಿಂಚಿದ್ದರು. ನಿಜ ಜೀವನದಲ್ಲಿ ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತರಾಗಲು ಈ ಚಿತ್ರವೂ ಕಾರಣವಾಯಿತು. ಜಲೀಲನ ಪಾತ್ರದಲ್ಲಿದ್ದ ಅಂಬರೀಶ್ ನಟಿ ಆರತಿ ಅವರನ್ನು ರೇಗಿಸುತ್ತಿದ್ದರೆ, ಇತ್ತ ವಿಷ್ಣುವರ್ಧನ್ ಸೈಕಲ್​​ನಲ್ಲಿ ಬಂದು ಫೈಟ್ ಮಾಡುವ ದೃಶ್ಯ ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು.

ಸಾಹಸಸಿಂಹ ವಿಷ್ಣು ಬಗ್ಗೆ ಅಂಬಿ​ಗೆ ಎಲ್ಲಿಲ್ಲದ ಅಭಿಮಾನ. ಇಬ್ಬರೂ ಗಂಟೆಗಟ್ಟಲೆ ಕೂತು ಹರಟೆ ಹೊಡೆಯುತ್ತಾ, ಒಬ್ಬರ ಕಾಲು ಮತ್ತೊಬ್ಬರು ಎಳೆದು ನಕ್ಕು ನಲಿಯುತ್ತಿದ್ದರು. ಚಿತ್ರದುರ್ಗದಲ್ಲಿ ನಾಗರಹಾವು ಶೂಟಿಂಗ್ ಸಂದರ್ಭದಲ್ಲಿ ಇಬ್ಬರೂ ಒಂದೇ ರೂಂನಲ್ಲಿ ವಿಶ್ರಾಂತಿ ಪಡೆಯುವ ಸಂದರ್ಭವಿತ್ತು. ಈ ಸಂದರ್ಭದಲ್ಲಂತೂ ಇಬ್ಬರೂ ಮತ್ತಷ್ಟು ಕ್ಲೋಸ್ ಆದರು. ಚಿತ್ರದುರ್ಗದಲ್ಲಿ ನಡೆಯುತ್ತಿದ್ದ ಶೂಟಿಂಗ್ ಯಾವಾಗ ಬೆಂಗಳೂರಿಗೆ ಶಿಫ್ಟ್ ಆಯ್ತೋ ಆಗ ಅಂಬರೀಶ್ ಸಿನಿಮಾ ಶೂಟಿಂಗ್ ಬಿಡುವು ಸಿಕ್ಕಾಗೆಲ್ಲಾ ವಿಷ್ಣುವರ್ಧನ್ ಮನೆಗೆ ಹೋಗುತ್ತಿದ್ದರು. ಬಹುಶಃ ನಾಗರಹಾವು ಚಿತ್ರದ ಮೂಲಕ ಚಿಗುರಿದ ಸ್ನೇಹ ಆದರ್ಶ ಸ್ನೇಹವಾಗುತ್ತೆ ಅಂತಾ ಅವರಿಬ್ಬರಿಗೂ ಅಂದು ಅರಿವೇ ಇರಲಿಲ್ಲ.

ಓ ಗೆಳೆಯ ನಿನಗೆ ಸ್ಯಾಣೆ ಕೋಪ ಕಣೋ..: ಇಲ್ಲಿಂದ ಸಾಕಷ್ಟು ಸಿನಿಮಾಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದಾರೆ‌. ಆದರೆ ಇವರ ಸ್ನೇಹ ಮತ್ತಷ್ಟು ಗಟ್ಟಿಯಾಗಿದ್ದು ಡಿ.ರಾಜೇಂದ್ರ ಬಾಬು‌ ನಿರ್ದೇಶನದ ದಿಗ್ಗಜರು ಸಿನಿಮಾದಲ್ಲಿ. ಈ ಚಿತ್ರದಲ್ಲಿ ನಿಜ ಜೀವನದಲ್ಲಿ ಅಂಬಿ ಮತ್ತು ವಿಷ್ಣು ಇರುವಂತೆಯೇ ತೋರಿಸಲಾಗಿತ್ತು. ಈ ಚಿತ್ರದಲ್ಲಿ ಅಂಬರೀಶ್ ‘ಓ ಗೆಳೆಯ ನಿನಗೆ ಸ್ಯಾಣೆ ಕೋಪ ಕಣೋ’ ಅಂತಾ ವಿಷ್ಣುವರ್ಧನ್ ಬಗ್ಗೆ ಹಾಡುವ ಗೀತೆ ಗೆಳೆತನದ ಎವರ್‌ಗ್ರೀನ್ ಹಾಡು ಆಗಿದೆ.

ಇಬ್ಬರೂ ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲ. ವಿಷ್ಣುವರ್ಧನ್ ಸಿನಿಮಾ ಕಾರ್ಯಕ್ರಮವಾಗಲಿ ಅಥವಾ ಹೊರೆಗೆ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಂಬರೀಶ್ ಅಲ್ಲಿರಬೇಕಿತ್ತು. ಅಂಬಿಯಿಲ್ಲದೇ ವಿಷ್ಣುವರ್ಧನ್ ಯಾವುದೇ ಕಾರ್ಯಕ್ರಮಕ್ಕೆ ಹೋಗುತ್ತಿರಲಿಲ್ವಂತೆ.

ಈ ಸಂಗತಿ ನಿಮಗೆ ಗೊತ್ತೇ?: ಈ ಸ್ಟಾರ್ ಸ್ನೇಹಿತರ ಬಗ್ಗೆ ಇಲ್ಲೊಂದು ಅಚ್ಚರಿಯ ವಿಚಾರವಿದೆ. ಅಂಬಿ-ವಿಷ್ಣು ಆಪ್ತರಾಗಿದ್ದರೂ ಅವರ ಆಲೋಚನೆಗಳು ಮಾತ್ರ ತದ್ವಿರುದ್ಧ. ಜನರ ಜೊತೆ ಬೆರೆಯುವ ವಿಚಾರದಲ್ಲಿ ವಿಷ್ಣುವರ್ಧನ್ ಸ್ವಲ್ಪ ದೂರ ಸರಿಯುತ್ತಿದ್ದರು. ಆದರೆ ಅಂಬರೀಶ್​ ಸದಾ ಜನರೊಂದಿಗೆ ಬೆರೆಯುತ್ತಿದ್ದರು. ವಿಷ್ಣು ರಾಜಕೀಯ ಎಂದರೆ ದೂರ ಸರಿದು ನಿಲ್ಲುತ್ತಿದ್ದರು. ಹಾಗಾಗಿ ರಾಜಕೀಯಕ್ಕೆ ಕಾಲಿಡಲೇ ಇಲ್ಲ. ಆದರೆ ಮಂಡ್ಯದಲ್ಲಿ ಅಂಬರೀಶ್ ಸ್ಪರ್ಧಿಸುವ ವೇಳೆ ನಾಮಿನೇಷನ್ ದಿನ ಗೆಳೆಯನ ಜೊತೆ ವಿಷ್ಣುವರ್ಧನ್ ಬಂದಿದ್ದರು. ಸದ್ಯ ನಮ್ಮೊಂದಿಗೆ ಇಬ್ಬರೂ ಇಲ್ಲ. ಆದರೆ ರೀಲ್ ಹಾಗೂ ರಿಯಲ್​ ಲೈಫ್​ನಲ್ಲೂ ಅವರ ಗೆಳೆತನ ಇಂದಿಗೂ ಮಾದರಿ.

ಬೆಂಗಳೂರು

Shakthi Scheme ಬಳಿಕ BMTC ಸೇವೆ ಹೇಗಿದೆ? ಬಸ್‌ನಲ್ಲಿ ಪ್ರಯಾಣಿಸಿದ ಸಚಿವರಿಗೆ ಸಿಕ್ಕ ಉತ್ತರ

Published

on

ಬೆಂಗಳೂರು: Shakthi Scheme ಜಾರಿಯಾದ ಬಳಿಕ ಬಿಎಂಟಿಸಿ ಸೇವೆಗಳ ನೈಜ ಸ್ಥಿತಿ ತಿಳಿಯಲು ಸಾರಿಗೆ ಸಚಿವ ಬೈರತಿ ಸುರೇಶ್ ಸಾಮಾನ್ಯ ಪ್ರಯಾಣಿಕರಂತೆ ಬಸ್‌ನಲ್ಲಿ ಸಂಚರಿಸಿ ರಿಯಾಲಿಟಿ ಚೆಕ್ ನಡೆಸಿದರು. ಜಯಮಹಲ್, ಆರ್.ಟಿ.ನಗರ, ಸಿಬಿಐ ರಸ್ತೆ, ಹೆಬ್ಬಾಳ ಹಾಗೂ ನಾಗವಾರ ಮಾರ್ಗಗಳಲ್ಲಿ ಪ್ರಯಾಣಿಸಿದ ಸಚಿವರು, ಸಾರ್ವಜನಿಕರು ಪ್ರತಿದಿನ ಎದುರಿಸುವ ಸಮಸ್ಯೆಗಳನ್ನು ಖುದ್ದಾಗಿ ಗಮನಿಸಿದರು.

ಈ ವೇಳೆ ಹೆಬ್ಬಾಳ ಮಾರ್ಗದ ಬಸ್‌ನಲ್ಲಿ ಸಚಿವರಿಗೆ ಅಚ್ಚರಿಯ ಅನುಭವ ಎದುರಾಯಿತು. ಟಿಕೆಟ್ ಪಡೆಯಲು ಅವರು ₹100 ಮುಖಬೆಲೆಯ ನೋಟು ನೀಡಿದಾಗ, ಅವರನ್ನು ಗುರುತಿಸದ ಕಂಡಕ್ಟರ್ ತನ್ನ ಬಳಿ ಚಿಲ್ಲರೆ ಇಲ್ಲ ಎಂದು ಹೇಳಿ ಬಸ್‌ನಿಂದ ಕೆಳಗೆ ಇಳಿಯುವಂತೆ ಸೂಚಿಸಿದ್ದಾನೆ. ಸಚಿವರು ಯಾವುದೇ ವಾಗ್ವಾದ ನಡೆಸದೆ ಬಸ್‌ನಿಂದ ಇಳಿದು, ಬಳಿಕ ಚಿಲ್ಲರೆ ಹಣ ಹೊಂದಿಸಿಕೊಂಡು ಮತ್ತೊಂದು ಬಸ್‌ನಲ್ಲಿ ಪ್ರಯಾಣ ಮುಂದುವರಿಸಿದರು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪರಿಶೀಲನೆ ವೇಳೆ ಮತ್ತೊಂದು ಗಂಭೀರ ಲೋಪವೂ ಸಚಿವರ ಗಮನಕ್ಕೆ ಬಂತು. ಫನ್ ವರ್ಲ್ಡ್ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಕೈ ತೋರಿಸಿದರೂ ಬಸ್ ನಿಲ್ಲಿಸದೇ ಚಾಲಕ ಮುಂದಕ್ಕೆ ಚಲಿಸಿದ್ದನ್ನು ಅವರು ಖುದ್ದಾಗಿ ವೀಕ್ಷಿಸಿದರು. ಪ್ರಯಾಣಿಕರಿಗೆ ಆಗಿರುವ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಸಂಬಂಧಿಸಿದ ಚಾಲಕ ಮತ್ತು ನಿರ್ವಾಹಕರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವರ ಆದೇಶದಂತೆ ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದು ಸಾರಿಗೆ ಇಲಾಖೆಯ ಮೊದಲ ಆದ್ಯತೆಯಾಗಿದ್ದು, ನಿರ್ಲಕ್ಷ್ಯ ತೋರಿಸುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂಬ ಸ್ಪಷ್ಟ ಸಂದೇಶವನ್ನು ಬೈರತಿ ಸುರೇಶ್ ನೀಡಿದ್ದಾರೆ.

Continue Reading

ಬೆಂಗಳೂರು

ಬೇಡ ಬ್ರೋ: ಡ್ರಗ್ಸ್ ವಿರುದ್ಧ MLA ಎಸ್.ಟಿ. ಸೋಮಶೇಖರ್ ಖಡಕ್ ಎಚ್ಚರಿಕೆ; ಯುವಕರಿಗೆ ಮಹತ್ವದ ಸಂದೇಶ

Published

on

ಬೆಂಗಳೂರು: ‘ಬೇಡ ಬ್ರೋ’… ಇದೇ ಘೋಷಣೆಯೊಂದಿಗೆ ಬೆಂಗಳೂರು ಪಶ್ಚಿಮ ವಿಭಾಗ ಪೊಲೀಸ್ ವತಿಯಿಂದ ಗ್ಲೋಬಲ್ ವಿಲೇಜ್‌ನಲ್ಲಿ ಡ್ರಗ್ಸ್ ವಿರೋಧಿ ಬೃಹತ್ ಜಾಗೃತಿ ಅಭಿಯಾನ ನಡೆಯಿತು. ಯುವಜನಾಂಗವನ್ನು ಮಾದಕ ವಸ್ತುಗಳ ವ್ಯಸನದಿಂದ ದೂರವಿಡುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವೈದ್ಯರು, ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವೈದ್ಯೆ ಡಾ. ಮಾತಂಗಿ, ದೇಶದಲ್ಲಿ ಮಾದಕ ವ್ಯಸನ ಗಂಭೀರ ಸಮಸ್ಯೆಯಾಗಿ ಬೆಳೆಯುತ್ತಿದ್ದು, ವಿಶೇಷವಾಗಿ 18ರಿಂದ 25 ವರ್ಷದೊಳಗಿನ ಯುವಕರು ಡ್ರಗ್ಸ್ ಜಾಲಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಗಾಂಜಾ, ಅಪೀಮು ಸೇರಿದಂತೆ ವಿವಿಧ ಮಾದಕ ವಸ್ತುಗಳು ಯುವಕರ ಶಿಕ್ಷಣ, ಆರೋಗ್ಯ ಮತ್ತು ಭವಿಷ್ಯವನ್ನು ಹಾಳು ಮಾಡುತ್ತಿವೆ. ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳು ಉತ್ತಮ ಮೌಲ್ಯಗಳನ್ನು ಬೆಳೆಸುವ ಸಂದೇಶ ನೀಡಬೇಕು ಎಂದು ಅವರು ಕರೆ ನೀಡಿದರು.

ಶಾಸಕ ಎಸ್.ಟಿ. ಸೋಮಶೇಖರ್ ಮಾತನಾಡಿ, ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಸರ್ಕಾರ, ಶಿಕ್ಷಣ ಸಂಸ್ಥೆಗಳು, ಪೊಲೀಸರು ಹಾಗೂ ಸಮಾಜ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದರು. ಕೆಲವು ಕಾಲೇಜುಗಳಲ್ಲಿ ಡ್ರಗ್ಸ್ ಜಾಲದ ಬಗ್ಗೆ ಆತಂಕಕಾರಿ ಮಾಹಿತಿ ದೊರೆಯುತ್ತಿದ್ದು, ಯುವಕರನ್ನು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು. ಡ್ರಗ್ಸ್ ವಿರುದ್ಧದ ‘ಬೇಡ ಬ್ರೋ’ ಅಭಿಯಾನ ಸಮಾಜದಲ್ಲಿ ದೊಡ್ಡ ಜಾಗೃತಿ ಮೂಡಿಸಬೇಕು ಎಂದು ಆಶಿಸಿದರು.

ನೈರುತ್ಯ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣ ಮಾತನಾಡಿ, ಇಂದಿನ ಕಾಲದಲ್ಲಿ ಬಂದೂಕಿಗಿಂತ ಡ್ರಗ್ಸ್ ಸಮಾಜವನ್ನು ಹೆಚ್ಚು ಅಪಾಯಕ್ಕೆ ತಳ್ಳುತ್ತಿದೆ ಎಂದು ಎಚ್ಚರಿಸಿದರು. ಎಸಿಪಿ ಸತ್ಯವತಿ ಕೂಡ ಕ್ಷಣಿಕ ಸುಖಕ್ಕಾಗಿ ವ್ಯಸನದ ದಾರಿ ಹಿಡಿಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿಗಳು “ಡ್ರಗ್ಸ್‌ಗೆ ಬೇಡ… ಬದುಕಿಗೆ ಹೌದು” ಎಂಬ ಸಂದೇಶದೊಂದಿಗೆ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿದರು.

Continue Reading

ರಾಜ್ಯ

Cabinet Expansion: ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರ ಪೈಪೋಟಿ; ಹೈಕಮಾಂಡ್ ಅಂತಿಮ ತೀರ್ಮಾನ ಯಾವಾಗ?

Published

on

ಬೆಂಗಳೂರು: Cabinet Expansion ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕುರಿತ ಚಟುವಟಿಕೆಗಳು ಮತ್ತೆ ವೇಗ ಪಡೆದಿದ್ದು, ಶೀಘ್ರದಲ್ಲೇ ರಾಜ್ಯದ ಪ್ರಮುಖ ನಾಯಕರಿಗೆ ದೆಹಲಿ ಬುಲಾವ್ ಬರಬಹುದಾದ ಸಾಧ್ಯತೆ ಇದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಹೈಕಮಾಂಡ್ ನಾಯಕರೊಂದಿಗೆ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಸ್ತುತ ರಾಜ್ಯ ಸಚಿವ ಸಂಪುಟದಲ್ಲಿ 20 ಸಚಿವ ಸ್ಥಾನಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ರಾಜ್ಯ ನಾಯಕರು ತಮ್ಮ ಬೆಂಬಲಿಗ ಶಾಸಕರ ಪಟ್ಟಿಯೊಂದಿಗೆ ದೆಹಲಿಗೆ ತೆರಳಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ, ಜಾತಿ ಹಾಗೂ ರಾಜಕೀಯ ಸಮೀಕರಣಗಳ ಆಧಾರದ ಮೇಲೆ ಸಚಿವರ ಆಯ್ಕೆ ನಡೆಯುವ ಸಾಧ್ಯತೆ ಇದೆ.

ಜುಲೈ 14ರಿಂದ ಆಷಾಢ ಮಾಸ ಆರಂಭವಾಗಲಿರುವ ಹಿನ್ನೆಲೆ, ಅದರ ಮೊದಲು ಸಂಪುಟ ವಿಸ್ತರಣೆ ನಡೆಯಬಹುದೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ವೇಳಾಪಟ್ಟಿ ಪ್ರಕಟವಾಗಿಲ್ಲ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಂಪುಟ ವಿಸ್ತರಣೆ ಶೀಘ್ರದಲ್ಲೇ ನಡೆಯಲಿದೆ ಎಂದು ಹೇಳಿದ್ದು, ಬರ ಹಾಗೂ ಪ್ರವಾಹದಂತಹ ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪೂರ್ಣ ಪ್ರಮಾಣದ ಸಚಿವ ಸಂಪುಟ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತ್ತ ಹಲವು ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮುಂದುವರಿಸಿದ್ದಾರೆ. ಅಜಯ್ ಸಿಂಗ್, ಸಿ. ಪುಟ್ಟರಂಗಶೆಟ್ಟಿ, ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಹಲವು ನಾಯಕರು ತಮ್ಮ ಹಕ್ಕು ಮಂಡಿಸುತ್ತಿದ್ದಾರೆ. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಕೈಗೊಳ್ಳುವ ನಿರ್ಧಾರದತ್ತ ರಾಜ್ಯ ರಾಜಕೀಯದ ಗಮನ ನೆಟ್ಟಿದೆ.

Continue Reading

Trending