Connect with us

ದೇಶ

ಇರುವೆಗಳೂ ಆಪರೇಷನ್ ಮಾಡ್ತವೆ..! ಮನುಷ್ಯರ ಹೊರತುಪಡಿಸಿದ್ರೆ ಈ ಕಲೆಗಾರಿಕೆ ಇರೋದು ಇವುಗಳಿಗೆ ಮಾತ್ರ..!

Published

on

ಇರಲಾರದೇ ಇರುವೆ ಬಿಟ್ಕೊಂಡರು ಅನ್ನುವ ಹಾಗೆ ಸಂಶೋಧನೆಗೆ ಅಂತಾ ಒಂದಷ್ಟು ಇರುವೆಗಳನ್ನು ಬಿಟ್ಕೊಂಡಿದ್ದ ವಿಜ್ಞಾನಿಗಳ ತಂಡಕ್ಕೆ ಅಚ್ಚರಿಯ ಸಂಗತಿಯೊಂದು ಸಿಕ್ಕಿದೆ. ಇದು ವಿಜ್ಞಾನಿಗಳ ಕುತೂಹಲವನ್ನು ಮತ್ತಷ್ಟು ಕೆರಳಿಸಿದ್ದು, ಇನ್ನಷ್ಟು ಸಂಶೋಧನೆಗೆ ಮುಂದಾಗಿದ್ದಾರೆ. ಅಸಲಿ ವಿಚಾರ ಏನಂದರೆ ಇರುವೆಗಳು ಕೂಡ ತಮ್ಮವರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡುತ್ತವೆಯಂತೆ!

ಅಚ್ಚರಿ ಅನಿಸಿದರೂ ನಿಜ! ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಹೀಗೊಂದು ಮಾಹಿತಿ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಮನುಷ್ಯರಿಗೆ ದೈಹಿಕ ಸಮಸ್ಯೆಗಳು ಅಥವಾ ಅನಾರೋಗ್ಯ ಉಂಟಾದಾಗ ಗುಣಪಡಿಸಲು ಚಿಕಿತ್ಸೆಯ ಮೊರೆ ಹೋಗುತ್ತೇವೆ. ತೀರಾ ಅಗತ್ಯ ಬಿದ್ದರೆ ವೈದ್ಯರು ಶಸ್ತ್ರಚಿಕಿತ್ಸೆಯನ್ನೂ ಮಾಡುತ್ತಾರೆ. ಅಂತಹ ಪ್ರತಿಭೆ ಕೇವಲ ಮನುಷ್ಯರಿಗೆ ಮಾತ್ರ ಇರೋದು ಅನ್ಕೊಂಡರೆ ಅದು ಖಂಡಿತ ತಪ್ಪು. ಮಾನವರು ಮಾತ್ರವಲ್ಲ, ಇರುವೆಗಳು ಕೂಡ ಆಪರೇಷನ್ ಮಾಡಿಕೊಳ್ಳುತ್ತವೆ ಎಂದರೆ ನೀವು ನಂಬಲೇಬೇಕು!

ಈ ಮೂಲಕ ಮನುಷ್ಯರನ್ನು ಹೊರತುಪಡಿಸಿ ಭೂಮಿ ಮೇಲೆ ವೈದ್ಯಕೀಯ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುವ ಎರಡನೇ ಜೀವಿ ಇರುವೆಗಳು. ಹೌದು, ಫ್ಲೋರಿಡಾದಲ್ಲಿ (Florida) ಶಸ್ತ್ರಚಿಕಿತ್ಸೆ ನಡೆಸುತ್ತಿರುವ ಇರುವೆಗಳು (Ants) ಪತ್ತೆಯಾಗಿವೆ. ಅವುಗಳನ್ನು ಕ್ಯಾಂಪೊನೋಟಸ್ (Camponotus) ಇರುವೆ ಎಂದು ಕರೆಯಲಾಗುತ್ತಿದೆ. ಅಧ್ಯಯನದಲ್ಲಿ ತಿಳಿದುಬಂದಿರುವ ಅಂಶಗಳ ಪ್ರಕಾರ, ಇವು ಗೂಡಿನಲ್ಲಿ ಸಂಗಾತಿಗಳ ಜೊತೆ ಇರುತ್ತವೆ. ಈ ಸಂದರ್ಭದಲ್ಲಿ ತಮ್ಮ ಸಂಗಾತಿಗಳ ಕಾಲುಗಳಿಗೆ ಆಗಿರುವ ಗಾಯವನ್ನು ಗುರುತಿಸುತ್ತವೆ. ಗಾಯವನ್ನು ಗುರುತಿಸಿ ಅದಕ್ಕೆ ಟ್ರೀಟ್ಮೆಂಟ್ ನೀಡಿ ಸ್ವಚ್ಛವಾಗಿ ಗುಣಪಡಿಸುತ್ತವೆ. ಕೆಲವೊಮ್ಮೆ ಕಾಲು ಅಥವಾ ಇರುವೆಗಳ ಇತರೆ ಭಾಗಗಳನ್ನು ಕತ್ತರಿಸಿ ಹಾಕುತ್ತವೆ ಎಂದು Current Biology ಜರ್ನಲ್ ಜುಲೈ 2 ರಂದು ವರದಿಯನ್ನು ಪ್ರಕಟಿಸಿದೆ.

ಜರ್ನಮನಿಯ University of Wurzburg ವಿಶ್ವವಿದ್ಯಾಲಯದ ಪರಿಸರ ಶಾಸ್ತ್ರಜ್ಞ ಎರಿಕ್ ಫ್ರಾಂಕ್ (Erik Frank) ಹೇಳುವಂತೆ.. ಜೀವ ಇರುವ ಯಾವುದೇ ಜೀವಿಗಳ ಅಂಗವನ್ನು ಕತ್ತರಿಸಬೇಕು ಅಂದಾಗ ಸಾಕಷ್ಟು ಪ್ರತಿಭೆ ಇರಬೇಕು. ಅದೊಂದು ಲಯಬದ್ಧ ಮತ್ತು ಸಂಕೀರ್ಣ ವಿಧಾನ. ಅಂತಹ ಕೆಲಸ ಮಾಡಲು ಮನುಷ್ಯರಿಗೆ ಸಾಕಷ್ಟು ಅಧ್ಯಯನ, ಸಮಯ ಹಾಗೂ ನಿಖರತೆಯ ಅಗತ್ಯ ಇರುತ್ತದೆ. ಆದರೆ ಈ ಇರುವೆಗಳ ಶಸ್ತ್ರಚಿಕಿತ್ಸೆಯು ಅಚ್ಚರಿ ತಂದಿದೆ ಎನ್ನುತ್ತಾರೆ.

2023ರಲ್ಲಿ ಫ್ರಾಂಕ್ ಅವರ ತಂಡವು ಆಫ್ರಿಕನ್ ಇರುವೆಗಳ ಜಾತಿಗಳನ್ನು (African ant species) ಕಂಡು ಹಿಡಿದಿದೆ. ಮೆಗಾಪೊನೆರಾ (Megaponera analis) ಎಂಬ ಪ್ರಬೇಧದ ಇರುವೆ ಗಾಯಗೊಂಡ ತನ್ನ ಸಹಚರರಿಗೆ ಆಂಟಿಮೈಕ್ರೋಬಿಯಲ್ (antimicrobial substance) ಮೂಲಕ ಚಿಕಿತ್ಸೆ ನೀಡುತ್ತಿತ್ತು. ಈ antimicrobial ಇರುವೆಯ ದೇಹದಿಂದ ಹೊರ ಬರುತ್ತದೆ. ಫ್ಲೊರಿಡಾದ ಕ್ಯಾಂಪೊನೋಟಸ್ ಜಾತಿಯ ಇರುವೆಗಳು ಈ ಸಾಮರ್ಥ್ಯವನ್ನು ಹೊಂದಿಲ್ಲ. ಆದರೆ ಅವು ಕಾಲು ಕತ್ತರಿಸುವುದರಲ್ಲಿ ನಿಪುಣವಾಗಿರುತ್ತವೆ ಎಂದು ಸ್ಟಡಿ ಹೇಳಿದೆ.

ಅಧ್ಯಯನದಲ್ಲಿ ವಿಜ್ಞಾನಿಗಳು ಇರುವೆಗಳ ಎರಡು ರೀತಿಯ ಚಿಕಿತ್ಸೆಯನ್ನು ಗಮನಿಸಿದ್ದಾರೆ. ಇರುವೆಗಳ ತೊಡೆಯ ಭಾಗದಲ್ಲಿ ಸೀಳುವಿಕೆ ಆದಾಗ ಹಾಗೂ ಟಿಬಿಯಾದಲ್ಲಿ ಸೀಳುವಿಕೆ ಆದಾಗ ಅದನ್ನು ಗುಣಪಡಿಸಲು ಪ್ರಯತ್ನಿಸುತ್ತವೆ. ಮೊದಲು ಗಾಯವನ್ನು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತವೆ. ಅದಕ್ಕಾಗಿ ಇರುವೆಗಳು ತಮ್ಮ ಬಾಯಿ ಬಳಸುತ್ತವೆ. ಒಂದು ವೇಳೆ ವಾಸಿಯಾಗದಿದ್ದರೆ ಬಾಯಿ ಮೂಲಕವೇ ಕತ್ತರಿಸಿ ಪ್ರತ್ಯೇಕಿಸಿ ಜೀವ ಉಳಿಸುತ್ತವೆಯಂತೆ.

ಎರಡು ರೀತಿಯ ಚಿಕಿತ್ಸೆಯಲ್ಲೂ ಜೀವದಾನ
ಟಿಬಿಯಾವನ್ನು ಸ್ವಚ್ಛಗೊಳಿಸುವ ಮೂಲಕ ಗಾಯವನ್ನು ವಾಸಿ ಮಾಡಲು ಪ್ರಯತ್ನಿಸುತ್ತವೆ. ಇದರಿಂದ ಅವು ಸಾಯದಂತೆ ರಕ್ಷಣೆಯಾಗುತ್ತದೆ. ತೊಡೆಯ ಮೇಲಿನ ಗಾಯವು ವಾಸಿಯಾದರೆ ಶೇಕಡಾ 40 ರಷ್ಟು ಇರುವೆಗಳು ಬದುಕುತ್ತವೆ. ತೊಡೆಯನ್ನು ಕತ್ತರಿಸಿಕೊಂಡ ಇರುವೆಗಳು ಶೇಕಡಾ 90 ರಿಂದ 95 ರಷ್ಟು ಇರುವೆಗಳು ಬದುಕುಳಿಯುತ್ತವೆ. ಅದೇ ರೀತಿ ಟಿಬಿಯಾ ಗಾಯವನ್ನು ಗುಣಪಡಿಸಿದ ನಂತರ ಶೇಕಡಾ 15 ರಿಂದ 75 ರಷ್ಟು ಪತಿಶತ ಇರುವೆಗಳು ಬದುಕುಳಿಯುತ್ತವೆ. ತೊಡೆಗೆ ಗಾಯವಾದಾಗ ಮಾತ್ರ ಇರುವೆಗಳು ಕಾಲನ್ನು ಕಚ್ಚುತ್ತವೆ. ಕಾಲಿನ ಇತರೆ ಭಾಗಗಳಲ್ಲಿ ಗಾಯವಾದರೆ ಕಾಲನ್ನು ಕತ್ತರಿಸುವುದಿಲ್ಲ. ಗಾಯಗೊಂಡ ಇರುವೆಯ ಕಾಲನ್ನು ಕತ್ತರಿಸಲು ಅವುಗಳಿಗೆ ಕನಿಷ್ಠ 40 ನಿಮಿಷಗಳು ಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

Micro-CT scans ಬಳಸಿ ಅಧ್ಯಯನ
ಈ ಅಧ್ಯಯನಕ್ಕಾಗಿ ವಿಜ್ಞಾನಿಗಳು ಮೈಕ್ರೋ ಸಿಟಿ ಸ್ಕ್ಯಾನ್ ಸಹಾಯವನ್ನು ತೆಗೆದುಕೊಂಡರು. ಗಾಯಗೊಂಡ ಕಾಲಿನಿಂದ ರಕ್ತ ಸೋರುತ್ತಿದ್ದಾಗ, ರಕ್ತವನ್ನು ಪೂರೈಸುವ ಸ್ನಾಯುಗಳಲ್ಲಿನ ರಕ್ತದ ಹರಿವನ್ನು ನಿಧಾನಗೊಳಿಸುವುದನ್ನೂ ವಿಜ್ಞಾನಿಗಳು ಕಂಡುಕೊಂಡಿದ್ದಾರೆ ಎಂದು ವರದಿಯಾಗಿದೆ. ಏನೇ ಇರಲಿ. ನೋಡೋಕೆ ಇರುವೆ ಅಂತೀವಿ. ಮನುಷ್ಯರನ್ನೂ ಮೀರಿ ಚಿಕಿತ್ಸೆ ನೀಡುವ ಕಲೆಗಾರಿಕೆ ಮತ್ತು ನ್ಯಾಕ್ ಇರುವೆಗಳಿಗೆ ಇದೆ ಅಂದರೆ ಅದು ಸಾಮಾನ್ಯ ಸಂಗತಿಯೇನಲ್ಲ.

ದೇಶ

Mantralaya ದಲ್ಲಿ ಭಕ್ತಿಯ ವೈಭವ: ರಾಯರ ಆರಾಧನೆಗೆ ಚಾಲನೆ, ಆಗಸ್ಟ್ 31ಕ್ಕೆ ಮಹಾರಥೋತ್ಸವ

Published

on

By

ರಾಯಚೂರು: ಕಲಿಯುಗದ ಕಾಮಧೇನು ಎಂದೇ ಭಕ್ತರಿಂದ ಆರಾಧಿಸಲ್ಪಡುವ Guru Raghavendra Swamy 355th Aaradhana ಮಹೋತ್ಸವಕ್ಕೆ Mantralaya ದಲ್ಲಿ ಅದ್ದೂರಿ ಚಾಲನೆ ದೊರೆತಿದೆ. ಶ್ರೀ ಮಠದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಸಪ್ತರಾತ್ರೋತ್ಸವಕ್ಕೆ ಚಾಲನೆ ನೀಡಿದರು.

ಗೋ, ಗಜ, ಅಶ್ವ, ಧಾನ್ಯ ಹಾಗೂ ಲಕ್ಷ್ಮಿ ಪೂಜೆಯೊಂದಿಗೆ ರಾಯರ ಆರಾಧನಾ ಮಹೋತ್ಸವಕ್ಕೆ ವಿಧಿವತ್ತಾಗಿ ಚಾಲನೆ ದೊರೆತಿದ್ದು, ಏಳು ದಿನಗಳ ಕಾಲ ಮಂತ್ರಾಲಯದಲ್ಲಿ ಧಾರ್ಮಿಕ ಸಂಭ್ರಮ ಮನೆ ಮಾಡಲಿದೆ. ಆಗಸ್ಟ್ 27ರಿಂದ ಸೆಪ್ಟೆಂಬರ್ 2ರವರೆಗೆ ನಡೆಯಲಿರುವ ಸಪ್ತರಾತ್ರೋತ್ಸವದ ಅಂಗವಾಗಿ ಪ್ರತಿದಿನ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ತಿರುಪತಿ ತಿರುಮಲ ದೇವಾಲಯದಿಂದ ಮಂತ್ರಾಲಯಕ್ಕೆ ತರಲಾಗಿರುವ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ರಾಯರ ವೃಂದಾವನಕ್ಕೆ ಸಮರ್ಪಿಸಲಾಗಿದೆ. ಸಪ್ತರಾತ್ರೋತ್ಸವಕ್ಕೆ ಚಾಲನೆ ನೀಡಿದ ಶ್ರೀಗಳು ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದರು.

ಆಗಸ್ಟ್ 29ರಂದು ಪೂರ್ವಾರಾಧನೆ, 30ರಂದು ಮಧ್ಯಾರಾಧನೆ ಹಾಗೂ 31ರಂದು ಉತ್ತರಾರಾಧನೆ ನಡೆಯಲಿದೆ. ಮಠದ ಆವರಣದಲ್ಲಿರುವ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ವಿಶೇಷ ತೆಪ್ಪೋತ್ಸವ ಕೂಡ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಆಗಸ್ಟ್ 29ರಂದು ಸಾಧಕರಿಗೆ ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಆಗಸ್ಟ್ 31ರಂದು ಅದ್ದೂರಿ ಮಹಾರಥೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ನೆರವೇರಲಿದೆ. ಮಠದ ಆವರಣದಲ್ಲಿ ಮಾಡಲಾಗಿರುವ ವಿದ್ಯುತ್ ಅಲಂಕಾರ ಭಕ್ತರ ಗಮನ ಸೆಳೆಯುತ್ತಿದೆ.

ರಾಯರ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಆಗಮಿಸುತ್ತಿದ್ದು, ಮಠದ ಆವರಣ ಭಕ್ತಿಯಿಂದ ಕಳೆಗಟ್ಟಿದೆ. ಏಳು ದಿನಗಳ ಕಾಲ ನಡೆಯಲಿರುವ ಈ ಮಹೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಭಕ್ತರನ್ನು ಆಕರ್ಷಿಸಲಿವೆ.

Continue Reading

ದೇಶ

PM Narendra Modi Foreign Visit: ಮೋದಿ 4 ದಿನಗಳ ವಿದೇಶ ಪ್ರವಾಸ, ಎಸ್‌ಸಿಒ ಶೃಂಗಸಭೆಯಲ್ಲಿ ಭಾಗಿ

Published

on

By

ನವದೆಹಲಿ: PM Narendra Modi ಅವರು ಆಗಸ್ಟ್ 29ರಿಂದ ನಾಲ್ಕು ದಿನಗಳ ಕಾಲ ಉಜ್ಬೇಕಿಸ್ತಾನ್ ಮತ್ತು ಕಿರ್ಗಿಸ್ತಾನ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಪ್ರವಾಸದ ವೇಳೆ ಎರಡೂ ದೇಶಗಳೊಂದಿಗೆ ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಪ್ರಧಾನಿ ಮೋದಿ ಅವರು ಆಗಸ್ಟ್ 29ರಿಂದ 30ರವರೆಗೆ ಉಜ್ಬೇಕಿಸ್ತಾನ್‌ಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ವ್ಯಾಪಾರ, ಹೂಡಿಕೆ, ಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಮತ್ತು ಉಜ್ಬೇಕಿಸ್ತಾನ್ ನಡುವಿನ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಮಾರ್ಗಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಈ ಭೇಟಿ ಹೊಸ ವೇಗ ನೀಡುವ ಸಾಧ್ಯತೆಯಿದೆ.

ಉಜ್ಬೇಕಿಸ್ತಾನ್ ಪ್ರವಾಸದ ಬಳಿಕ ಪ್ರಧಾನಿ ಮೋದಿ ಅವರು ಕಿರ್ಗಿಸ್ತಾನ್ ರಾಜಧಾನಿ ಬಿಷ್ಕೆಕ್‌ಗೆ ತೆರಳಲಿದ್ದಾರೆ. ಅಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (SCO) ವಾರ್ಷಿಕ ಶೃಂಗಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ.

ಎಸ್‌ಸಿಒ ಶೃಂಗಸಭೆಯಲ್ಲಿ ಪ್ರಾದೇಶಿಕ ಭದ್ರತೆ ಸೇರಿದಂತೆ ಹಲವು ಪ್ರಮುಖ ಅಂತಾರಾಷ್ಟ್ರೀಯ ವಿಚಾರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ. ವಿಶೇಷವಾಗಿ ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದದಂತಹ ಸವಾಲುಗಳನ್ನು ಎದುರಿಸುವ ಕುರಿತು ರಾಷ್ಟ್ರಗಳ ನಡುವೆ ಸಹಕಾರ ಹೆಚ್ಚಿಸುವ ವಿಚಾರ ಪ್ರಮುಖವಾಗಲಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪಶ್ಚಿಮ ವಿಭಾಗದ ಕಾರ್ಯದರ್ಶಿ ಸಿಬಿ ಜಾರ್ಜ್ ಮಾತನಾಡಿ, ಬದಲಾಗುತ್ತಿರುವ ಪ್ರಾದೇಶಿಕ ಭದ್ರತಾ ಪರಿಸ್ಥಿತಿಯ ಕುರಿತು ಶೃಂಗಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದವನ್ನು ಎದುರಿಸುವುದು ಎಸ್‌ಸಿಒ ಸ್ಥಾಪನೆಯ ಪ್ರಮುಖ ಉದ್ದೇಶಗಳಾಗಿದ್ದು, ಈ ಸವಾಲುಗಳು ಇಂದಿಗೂ ಮುಂದುವರಿದಿವೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ಈ ನಾಲ್ಕು ದಿನಗಳ ಪ್ರವಾಸವು ಮಧ್ಯ ಏಷ್ಯಾದ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಮಹತ್ವ ಪಡೆದಿದೆ. ದ್ವಿಪಕ್ಷೀಯ ಸಹಕಾರದ ಜೊತೆಗೆ ಪ್ರಾದೇಶಿಕ ಶಾಂತಿ ಮತ್ತು ಭದ್ರತೆ ಕುರಿತ ಭಾರತದ ನಿಲುವನ್ನು ಮತ್ತಷ್ಟು ಬಲಪಡಿಸಲು ಈ ಪ್ರವಾಸ ನೆರವಾಗುವ ನಿರೀಕ್ಷೆಯಿದೆ.

Continue Reading

ದೇಶ

Nepal ಭೀಕರ ಪ್ರವಾಹ: ಸಾವಿನ ಸಂಖ್ಯೆ 469ಕ್ಕೆ ಏರಿಕೆ, ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆ!

Published

on

By

ಕಠ್ಮಂಡು, ನೇಪಾಳ: Nepal ದ ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ದೇಶ ತತ್ತರಿಸಿದೆ. ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 469ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದ್ದು, ನೂರಾರು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳು ಭರದಿಂದ ಸಾಗಿವೆ.

ಪ್ರವಾಹದಲ್ಲಿ ನಾಪತ್ತೆಯಾಗಿರುವವರಲ್ಲಿ ನೇಪಾಳ ಪೊಲೀಸ್, ಸೇನೆ, ಸಶಸ್ತ್ರ ಪೊಲೀಸ್ ಪಡೆ, ಕಸ್ಟಮ್ಸ್ ಹಾಗೂ ವಲಸೆ ಕಚೇರಿ ಸಿಬ್ಬಂದಿಯೂ ಸೇರಿದ್ದಾರೆ. ವಿದೇಶಿ ಪ್ರಜೆಗಳು ಹಾಗೂ ವಿದೇಶಗಳಲ್ಲಿ ವಾಸಿಸುವ ನೇಪಾಳಿ ನಾಗರಿಕರೂ ನಾಪತ್ತೆಯಾಗಿರುವವರ ಪಟ್ಟಿಯಲ್ಲಿದ್ದಾರೆ. ಪ್ರವಾಹದಲ್ಲಿ ಗಾಯಗೊಂಡವರಿಗೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಕ್ಷಣಾ ಕಾರ್ಯಾಚರಣೆಗೆ ಸಾವಿರಾರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ನೇಪಾಳ ಸೇನೆ ಹಾಗೂ ಖಾಸಗಿ ವಲಯದ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ಸಿಲುಕಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಹೆಲಿಕಾಪ್ಟರ್‌ಗಳ ಮೂಲಕ ಈಗಾಗಲೇ ಸಾವಿರಾರು ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಏಕಾಏಕಿ ನೀರಿನ ಪ್ರಮಾಣ ಹೆಚ್ಚಾದ ಪರಿಣಾಮ ಭಾರೀ ಪ್ರಮಾಣದಲ್ಲಿ ಕೆಸರು, ಬಂಡೆಗಳು ಮತ್ತು ನೀರು ಹರಿದುಬಂದಿದ್ದು, ಹಲವು ಪ್ರದೇಶಗಳಲ್ಲಿ ರಸ್ತೆ, ಸೇತುವೆ ಸೇರಿದಂತೆ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ರಸ್ತೆ ಸಂಪರ್ಕ ಪುನಃಸ್ಥಾಪನೆ ಹಾಗೂ ಪರಿಹಾರ ಕಾರ್ಯಾಚರಣೆಗಳೂ ಮುಂದುವರಿದಿವೆ.

ಈ ನಡುವೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಭಾರತೀಯರ ರಕ್ಷಣಾ ಕಾರ್ಯವೂ ನಡೆಯುತ್ತಿದೆ. ನೇಪಾಳದ ತ್ರಿಶೂಲಿ-1 ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರು ಸೇರಿದಂತೆ ಹಲವು ಮಂದಿಯನ್ನು ರಕ್ಷಿಸಲಾಗಿದೆ. ಭಾರತೀಯ ಪ್ರಜೆಗಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಭಾರತೀಯ ಅಧಿಕಾರಿಗಳು ನೇಪಾಳದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ನೇಪಾಳದಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದ್ದು, ನಾಪತ್ತೆಯಾದವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ರಸ್ತೆ ಮತ್ತು ಸಂವಹನ ವ್ಯವಸ್ಥೆ ಹಾನಿಗೊಳಗಾಗಿರುವುದರಿಂದ ರಕ್ಷಣಾ ತಂಡಗಳಿಗೆ ಹಲವು ಸವಾಲುಗಳು ಎದುರಾಗಿವೆ.

Continue Reading

Trending