Connect with us

ಬೆಂಗಳೂರು

ನಾವು ಯಾವುದನ್ನೂ ಮುಚ್ಚಿ ಹಾಕುವುದಿಲ್ಲ, ಎಲ್ಲ ಪ್ರಕರಣಗಳ ತನಿಖೆ ನಡೆಯುತ್ತದೆ’ – G Parameshwar

Published

on

ಬೆಂಗಳೂರು: “ನಾವು ಯಾವುದನ್ನೂ ಮುಚ್ಚಿ ಹಾಕೋದಿಲ್ಲ, ಎಲ್ಲದರ ತನಿಖೆ ನಡೆಯುತ್ತೆ. ಈಗಾಗಲೇ ಇದರ ಬಗ್ಗೆ ಸಿಎಂ‌ ಸ್ಪಷ್ಟೀಕರಣ ಕೊಟ್ಟಿದ್ದಾರೆ” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಮುಡಾ ಪ್ರಕರಣ ಮುಚ್ಚಿ ಹಾಕಲು ಹುನ್ನಾರ ಎಂಬ ಬಿಜೆಪಿ, ಹೆಚ್​ಡಿಕೆ ಆರೋಪಗಳ ಕುರಿತು ಪ್ರತಿಕ್ರಿಯಿಸಿದರು.

“ಸಿಎಂ ಆಗಲು ಪೈಪೋಟಿ ನಡೆಸುತ್ತಿರುವವರು ಮುಡಾ ಪ್ರಕರಣವನ್ನು ಬಯಲಿಗೆ ತಂದಿದ್ದಾರೆ ಎಂಬ ಹೆಚ್​ಡಿಕೆ ಹೇಳಿಕೆ ಬಗ್ಗೆಯೂ ನನಗೆ ಗೊತ್ತಿಲ್ಲ. ಮುಡಾ ಪ್ರಕರಣದಲ್ಲಿ ಇಲಾಖೆ ತನಿಖೆ ನಡೆಯುತ್ತಿದೆ. ಹೀಗಾಗಿ ಎಸ್ಐಟಿ ತನಿಖೆ ಅಗತ್ಯವಿಲ್ಲ. ಈಗಾಗಲೇ ಇದರ ಬಗ್ಗೆ ಸಿಎಂ ಸ್ಪಷ್ಟನೆ ಕೊಟ್ಟಿದ್ದಾರೆ” ಎಂದರು.

ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖೆ ಕುರಿತು ಮಾತನಾಡಿ, “ಆರೋಪಿಗಳನ್ನು ಬಂಧಿಸಲಾಗಿದೆ, ಸಾಕ್ಷ್ಯಗಳ‌ ಸಂಗ್ರಹ ನಡೆಯುತ್ತಿದೆ. ಚಾರ್ಜ್‌ಶೀಟ್ ಹಾಕುತ್ತಾರೆ. ಪ್ರಕರಣದ ತನಿಖೆ ಶೀಘ್ರಗತಿಯಲ್ಲಿ ಮಾಡುವುಂತೆ ಮಾಧ್ಯಮದವರು ಹೇಳಿಬಿಟ್ಟರೆ ಆಗುತ್ತಾ? ಅದಕ್ಕೇ ಆದಂಥ ನಿಯಮ, ಪ್ರಕ್ರಿಯೆಗಳಿವೆ. ಅಗತ್ಯ ಸಾಕ್ಷ್ಯ ಸಂಗ್ರಹಿಸಿ ಚಾರ್ಜ್‌ಶೀಟ್ ಹಾಕ್ತಾರೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಅಗತ್ಯ ಇಲ್ಲ, ಮಾಡೋದೂ ಇಲ್ಲ” ಎಂದು ಸ್ಪಷ್ಟಪಡಿಸಿದರು.

ಗ್ಯಾರಂಟಿಗಳಿಂದ ಆರ್ಥಿಕ ವಿಪತ್ತು, ಗ್ಯಾರಂಟಿ ರದ್ದಿಗೆ ಸೂಚಿಸಿ ಎಂದು ಕೇಂದ್ರಕ್ಕೆ ಯತ್ನಾಳ್ ಪತ್ರ ಬರೆದ ವಿಚಾರವಾಗಿ ಮಾತನಾಡಿ, “ರಾಜ್ಯದ ಆಡಳಿತ ನಡೆಸಲು ಜನ ನಮ್ಮನ್ನು ಆರಿಸಿರುವುದು, ಅವರನ್ನಲ್ಲ. ಕೇಂದ್ರದಲ್ಲಿ ಅವರಿಗೆ ಆಡಳಿತ ನಡೆಸಲು ಜನ ಅವಕಾಶ ಕೊಟ್ಟಿದ್ದಾರೆ. ಅವರು ಅಲ್ಲಿ, ನಾವು ಇಲ್ಲಿ ಆಡಳಿತ ನಡೆಸುತ್ತೇವೆ. ಪತ್ರ ಬರೆದಿದ್ದಾರೆ, ಕೇಂದ್ರದ ನಿರ್ದೇಶನ ಬರಲಿ, ಆಮೇಲೆ ನೋಡುತ್ತೇವೆ. ಗ್ಯಾರಂಟಿಗಳಿಂದ ಆರ್ಥಿಕ ಮುಗ್ಗಟ್ಟು ಇದೆ ಅನ್ನೋದು ಬಿಜೆಪಿಯವರ ಆರೋಪ. ಅದನ್ನು ಆಡಳಿತ ನಡೆಸುವ ನಾವು ಹೇಳಿಲ್ಲವಲ್ಲ. ನಾವು ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಏನು ಮಾಡಬೇಕೋ ಅದಕ್ಕಾಗಿ ಗ್ಯಾರಂಟಿ ಜಾರಿ ಮಾಡಿದ್ದೇವೆ. ಸಮಸ್ಯೆ ಏನಾದರೂ ಬಂದರೆ ಅದನ್ನು ಪರಿಹರಿಸುವ ಜವಾಬ್ದಾರಿ ನಮ್ಮದೇ. 58 ಸಾವಿರ ಕೋಟಿ ರೂ. ಹಣವನ್ನು ನಾವು ಗ್ಯಾರಂಟಿಗಳಿಗೆ ಖರ್ಚು ಮಾಡುತ್ತಿದ್ದೇವೆ. ಗ್ಯಾರಂಟಿಗಳ ಸಾಧಕ-ಬಾಧಕ ನಾವೇ ನೋಡಿಕೊಳ್ಳುತ್ತೇವೆ. ಇದರಲ್ಲಿ ಬಿಜೆಪಿಯವರ ಸಲಹೆ ಸೂಚನೆ ನಮಗೆ ಬೇಕಾಗಿಲ್ಲ” ಎಂದು ತಿರುಗೇಟು ನೀಡಿದರು.

ಅಕ್ಕಿ ಖರೀದಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂಬ ಜೋಶಿ ಟೀಕೆ ಕುರಿತು ಪ್ರತಿಕ್ರಿಯಿಸಿ, “ಮಾನ್ಯ ಜೋಶಿಯವರು ಪತ್ರ ಬರೆಯಲಿ. ನಾವು ಅವರ ಪತ್ರಕ್ಕೆ ಯಾವ ರೀತಿ ಸ್ಪಂದಿಸುತ್ತೇವೆ ಎನ್ನುವುದು ಅವರಿಗೆ ಗೊತ್ತಾಗುತ್ತೆ” ಎಂದು ಟಾಂಗ್ ಕೊಟ್ಟರು.

ಸಿಎಂ, ಡಿಸಿಎಂ ಚರ್ಚೆಗೆ ಫುಲ್ ಸ್ಟಾಪ್ ಹಾಕಿ ಎಂದು ಹೈಕಮಾಂಡ್ ಸಂದೇಶ ಬಂದಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, “ಮೊನ್ನೆ ನಾವೆಲ್ಲಾ ದೆಹಲಿಗೆ ಹೋಗಿದ್ದೆವು. ಆಗ ಹೈಕಮಾಂಡ್​ ಆ ವಿಚಾರವಾಗಿ ಏನೂ ಮಾತಾಡಲೇ ಇಲ್ಲ. ಒಳ್ಳೆಯ ಕೆಲಸ ಮಾಡ್ತಿದ್ದೀರಿ ಅಂತ ನಮಗೆ ಶಹಬ್ಬಾಸ್‌ಗಿರಿ ಕೊಟ್ಟು ಕಳಿಸಿದ್ರು” ಎಂದರು.

ಬೆಂಗಳೂರು

Shakthi Scheme ಬಳಿಕ BMTC ಸೇವೆ ಹೇಗಿದೆ? ಬಸ್‌ನಲ್ಲಿ ಪ್ರಯಾಣಿಸಿದ ಸಚಿವರಿಗೆ ಸಿಕ್ಕ ಉತ್ತರ

Published

on

ಬೆಂಗಳೂರು: Shakthi Scheme ಜಾರಿಯಾದ ಬಳಿಕ ಬಿಎಂಟಿಸಿ ಸೇವೆಗಳ ನೈಜ ಸ್ಥಿತಿ ತಿಳಿಯಲು ಸಾರಿಗೆ ಸಚಿವ ಬೈರತಿ ಸುರೇಶ್ ಸಾಮಾನ್ಯ ಪ್ರಯಾಣಿಕರಂತೆ ಬಸ್‌ನಲ್ಲಿ ಸಂಚರಿಸಿ ರಿಯಾಲಿಟಿ ಚೆಕ್ ನಡೆಸಿದರು. ಜಯಮಹಲ್, ಆರ್.ಟಿ.ನಗರ, ಸಿಬಿಐ ರಸ್ತೆ, ಹೆಬ್ಬಾಳ ಹಾಗೂ ನಾಗವಾರ ಮಾರ್ಗಗಳಲ್ಲಿ ಪ್ರಯಾಣಿಸಿದ ಸಚಿವರು, ಸಾರ್ವಜನಿಕರು ಪ್ರತಿದಿನ ಎದುರಿಸುವ ಸಮಸ್ಯೆಗಳನ್ನು ಖುದ್ದಾಗಿ ಗಮನಿಸಿದರು.

ಈ ವೇಳೆ ಹೆಬ್ಬಾಳ ಮಾರ್ಗದ ಬಸ್‌ನಲ್ಲಿ ಸಚಿವರಿಗೆ ಅಚ್ಚರಿಯ ಅನುಭವ ಎದುರಾಯಿತು. ಟಿಕೆಟ್ ಪಡೆಯಲು ಅವರು ₹100 ಮುಖಬೆಲೆಯ ನೋಟು ನೀಡಿದಾಗ, ಅವರನ್ನು ಗುರುತಿಸದ ಕಂಡಕ್ಟರ್ ತನ್ನ ಬಳಿ ಚಿಲ್ಲರೆ ಇಲ್ಲ ಎಂದು ಹೇಳಿ ಬಸ್‌ನಿಂದ ಕೆಳಗೆ ಇಳಿಯುವಂತೆ ಸೂಚಿಸಿದ್ದಾನೆ. ಸಚಿವರು ಯಾವುದೇ ವಾಗ್ವಾದ ನಡೆಸದೆ ಬಸ್‌ನಿಂದ ಇಳಿದು, ಬಳಿಕ ಚಿಲ್ಲರೆ ಹಣ ಹೊಂದಿಸಿಕೊಂಡು ಮತ್ತೊಂದು ಬಸ್‌ನಲ್ಲಿ ಪ್ರಯಾಣ ಮುಂದುವರಿಸಿದರು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪರಿಶೀಲನೆ ವೇಳೆ ಮತ್ತೊಂದು ಗಂಭೀರ ಲೋಪವೂ ಸಚಿವರ ಗಮನಕ್ಕೆ ಬಂತು. ಫನ್ ವರ್ಲ್ಡ್ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಕೈ ತೋರಿಸಿದರೂ ಬಸ್ ನಿಲ್ಲಿಸದೇ ಚಾಲಕ ಮುಂದಕ್ಕೆ ಚಲಿಸಿದ್ದನ್ನು ಅವರು ಖುದ್ದಾಗಿ ವೀಕ್ಷಿಸಿದರು. ಪ್ರಯಾಣಿಕರಿಗೆ ಆಗಿರುವ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಸಂಬಂಧಿಸಿದ ಚಾಲಕ ಮತ್ತು ನಿರ್ವಾಹಕರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವರ ಆದೇಶದಂತೆ ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದು ಸಾರಿಗೆ ಇಲಾಖೆಯ ಮೊದಲ ಆದ್ಯತೆಯಾಗಿದ್ದು, ನಿರ್ಲಕ್ಷ್ಯ ತೋರಿಸುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂಬ ಸ್ಪಷ್ಟ ಸಂದೇಶವನ್ನು ಬೈರತಿ ಸುರೇಶ್ ನೀಡಿದ್ದಾರೆ.

Continue Reading

ಬೆಂಗಳೂರು

ಬೇಡ ಬ್ರೋ: ಡ್ರಗ್ಸ್ ವಿರುದ್ಧ MLA ಎಸ್.ಟಿ. ಸೋಮಶೇಖರ್ ಖಡಕ್ ಎಚ್ಚರಿಕೆ; ಯುವಕರಿಗೆ ಮಹತ್ವದ ಸಂದೇಶ

Published

on

ಬೆಂಗಳೂರು: ‘ಬೇಡ ಬ್ರೋ’… ಇದೇ ಘೋಷಣೆಯೊಂದಿಗೆ ಬೆಂಗಳೂರು ಪಶ್ಚಿಮ ವಿಭಾಗ ಪೊಲೀಸ್ ವತಿಯಿಂದ ಗ್ಲೋಬಲ್ ವಿಲೇಜ್‌ನಲ್ಲಿ ಡ್ರಗ್ಸ್ ವಿರೋಧಿ ಬೃಹತ್ ಜಾಗೃತಿ ಅಭಿಯಾನ ನಡೆಯಿತು. ಯುವಜನಾಂಗವನ್ನು ಮಾದಕ ವಸ್ತುಗಳ ವ್ಯಸನದಿಂದ ದೂರವಿಡುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವೈದ್ಯರು, ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವೈದ್ಯೆ ಡಾ. ಮಾತಂಗಿ, ದೇಶದಲ್ಲಿ ಮಾದಕ ವ್ಯಸನ ಗಂಭೀರ ಸಮಸ್ಯೆಯಾಗಿ ಬೆಳೆಯುತ್ತಿದ್ದು, ವಿಶೇಷವಾಗಿ 18ರಿಂದ 25 ವರ್ಷದೊಳಗಿನ ಯುವಕರು ಡ್ರಗ್ಸ್ ಜಾಲಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಗಾಂಜಾ, ಅಪೀಮು ಸೇರಿದಂತೆ ವಿವಿಧ ಮಾದಕ ವಸ್ತುಗಳು ಯುವಕರ ಶಿಕ್ಷಣ, ಆರೋಗ್ಯ ಮತ್ತು ಭವಿಷ್ಯವನ್ನು ಹಾಳು ಮಾಡುತ್ತಿವೆ. ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳು ಉತ್ತಮ ಮೌಲ್ಯಗಳನ್ನು ಬೆಳೆಸುವ ಸಂದೇಶ ನೀಡಬೇಕು ಎಂದು ಅವರು ಕರೆ ನೀಡಿದರು.

ಶಾಸಕ ಎಸ್.ಟಿ. ಸೋಮಶೇಖರ್ ಮಾತನಾಡಿ, ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಸರ್ಕಾರ, ಶಿಕ್ಷಣ ಸಂಸ್ಥೆಗಳು, ಪೊಲೀಸರು ಹಾಗೂ ಸಮಾಜ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದರು. ಕೆಲವು ಕಾಲೇಜುಗಳಲ್ಲಿ ಡ್ರಗ್ಸ್ ಜಾಲದ ಬಗ್ಗೆ ಆತಂಕಕಾರಿ ಮಾಹಿತಿ ದೊರೆಯುತ್ತಿದ್ದು, ಯುವಕರನ್ನು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು. ಡ್ರಗ್ಸ್ ವಿರುದ್ಧದ ‘ಬೇಡ ಬ್ರೋ’ ಅಭಿಯಾನ ಸಮಾಜದಲ್ಲಿ ದೊಡ್ಡ ಜಾಗೃತಿ ಮೂಡಿಸಬೇಕು ಎಂದು ಆಶಿಸಿದರು.

ನೈರುತ್ಯ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣ ಮಾತನಾಡಿ, ಇಂದಿನ ಕಾಲದಲ್ಲಿ ಬಂದೂಕಿಗಿಂತ ಡ್ರಗ್ಸ್ ಸಮಾಜವನ್ನು ಹೆಚ್ಚು ಅಪಾಯಕ್ಕೆ ತಳ್ಳುತ್ತಿದೆ ಎಂದು ಎಚ್ಚರಿಸಿದರು. ಎಸಿಪಿ ಸತ್ಯವತಿ ಕೂಡ ಕ್ಷಣಿಕ ಸುಖಕ್ಕಾಗಿ ವ್ಯಸನದ ದಾರಿ ಹಿಡಿಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿಗಳು “ಡ್ರಗ್ಸ್‌ಗೆ ಬೇಡ… ಬದುಕಿಗೆ ಹೌದು” ಎಂಬ ಸಂದೇಶದೊಂದಿಗೆ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿದರು.

Continue Reading

ರಾಜ್ಯ

Cabinet Expansion: ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರ ಪೈಪೋಟಿ; ಹೈಕಮಾಂಡ್ ಅಂತಿಮ ತೀರ್ಮಾನ ಯಾವಾಗ?

Published

on

ಬೆಂಗಳೂರು: Cabinet Expansion ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕುರಿತ ಚಟುವಟಿಕೆಗಳು ಮತ್ತೆ ವೇಗ ಪಡೆದಿದ್ದು, ಶೀಘ್ರದಲ್ಲೇ ರಾಜ್ಯದ ಪ್ರಮುಖ ನಾಯಕರಿಗೆ ದೆಹಲಿ ಬುಲಾವ್ ಬರಬಹುದಾದ ಸಾಧ್ಯತೆ ಇದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಹೈಕಮಾಂಡ್ ನಾಯಕರೊಂದಿಗೆ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಸ್ತುತ ರಾಜ್ಯ ಸಚಿವ ಸಂಪುಟದಲ್ಲಿ 20 ಸಚಿವ ಸ್ಥಾನಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ರಾಜ್ಯ ನಾಯಕರು ತಮ್ಮ ಬೆಂಬಲಿಗ ಶಾಸಕರ ಪಟ್ಟಿಯೊಂದಿಗೆ ದೆಹಲಿಗೆ ತೆರಳಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ, ಜಾತಿ ಹಾಗೂ ರಾಜಕೀಯ ಸಮೀಕರಣಗಳ ಆಧಾರದ ಮೇಲೆ ಸಚಿವರ ಆಯ್ಕೆ ನಡೆಯುವ ಸಾಧ್ಯತೆ ಇದೆ.

ಜುಲೈ 14ರಿಂದ ಆಷಾಢ ಮಾಸ ಆರಂಭವಾಗಲಿರುವ ಹಿನ್ನೆಲೆ, ಅದರ ಮೊದಲು ಸಂಪುಟ ವಿಸ್ತರಣೆ ನಡೆಯಬಹುದೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ವೇಳಾಪಟ್ಟಿ ಪ್ರಕಟವಾಗಿಲ್ಲ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಂಪುಟ ವಿಸ್ತರಣೆ ಶೀಘ್ರದಲ್ಲೇ ನಡೆಯಲಿದೆ ಎಂದು ಹೇಳಿದ್ದು, ಬರ ಹಾಗೂ ಪ್ರವಾಹದಂತಹ ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪೂರ್ಣ ಪ್ರಮಾಣದ ಸಚಿವ ಸಂಪುಟ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತ್ತ ಹಲವು ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮುಂದುವರಿಸಿದ್ದಾರೆ. ಅಜಯ್ ಸಿಂಗ್, ಸಿ. ಪುಟ್ಟರಂಗಶೆಟ್ಟಿ, ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಹಲವು ನಾಯಕರು ತಮ್ಮ ಹಕ್ಕು ಮಂಡಿಸುತ್ತಿದ್ದಾರೆ. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಕೈಗೊಳ್ಳುವ ನಿರ್ಧಾರದತ್ತ ರಾಜ್ಯ ರಾಜಕೀಯದ ಗಮನ ನೆಟ್ಟಿದೆ.

Continue Reading

Trending