ದೇಶ
ನಿತ್ಯ ಮೊಟ್ಟೆ ಸೇವಿಸಿದರೆ ಏನಾಗುತ್ತೆ ಗೊತ್ತೇ?; ಎಗ್ನಲ್ಲಿರುವ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಒಳ್ಳೆಯದಾ? ಸಂಶೋಧನೆ ಹೇಳುವುದಿಷ್ಟು!
ಬಹುತೇಕ ಜನರು ಸೋಮವಾರದಿಂದ ಭಾನುವಾರದವರೆಗೆ ಅಂದ್ರೆ, ನಿತ್ಯ ಕನಿಷ್ಠ ಒಂದು ಮೊಟ್ಟೆ ಸೇವಿಸುತ್ತಾರೆ. ಆದ್ರೆ, ಕೆಲವರು ಮೊಟ್ಟೆಗಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಿರುವುದರಿಂದ ತಿನ್ನುವುದನ್ನು ನಿಲ್ಲಿಸಿದ್ದಾರೆ. ಇನ್ನು ಕೆಲವರು ಮೊಟ್ಟೆಯ ಬಿಳಿ ಭಾಗವನ್ನು ಸೇವಿಸುತ್ತಾರೆ, ಹಳದಿ ಭಾಗವನ್ನು ಪಕ್ಕಕ್ಕೆ ಇಡುತ್ತಾರೆ. ಇವೆರಡರಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಈಗ ಮೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ತಜ್ಞರು ತಿಳಿಸುವುದೇನು?
ಮೊಟ್ಟೆಗಳಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿವೆ. ಇದು ದೃಷ್ಟಿ ಸುಧಾರಣೆ, ಹೃದಯದ ಆರೋಗ್ಯ ಮತ್ತು ತೂಕ ನಿರ್ವಹಣೆ ಸೇರಿದಂತೆ ವಿವಿಧ ಪ್ರಯೋಜನಗಳನ್ನು ಒದಗಿಸುತ್ತದೆ. ಆದ್ರೆ, ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಅನೇಕ ಜನರು ಪ್ರತಿದಿನ ಮೊಟ್ಟೆ ತಿನ್ನುವುದಿಲ್ಲ. ಮೊಟ್ಟೆ ತಿನ್ನುವುದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಮೊಟ್ಟೆಗಳಲ್ಲಿ ಕೊಲೆಸ್ಟ್ರಾಲ್: ಮೊಟ್ಟೆಯ ಬಿಳಿಭಾಗದಲ್ಲಿ ಪ್ರೋಟೀನ್ ಅಧಿಕ ಇರುತ್ತದೆ. ಮೊಟ್ಟೆಯ ಹಳದಿ ಲೋಳೆಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಆದರೆ, ಹಳದಿ ಲೋಳೆಯಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಇರುವುದರಿಂದ ಅನೇಕ ಜನರು ಮೊಟ್ಟೆಗಳನ್ನು ಅನಾರೋಗ್ಯಕರವೆಂದು ಪರಿಗಣಿಸುತ್ತಾರೆ ಎಂದು ಮೇಯೋಕ್ಲಿನಿಕ್ (mayoclinic) ತಿಳಿಸಿದೆ. ಹೆಚ್ಚಿನ ಕೊಲೆಸ್ಟ್ರಾಲ್ ಹೃದಯ ಕಾಯಿಲೆಗೆ ಕಾರಣವಾಗುತ್ತದೆ ಎಂದು ಹಲವು ಅಧ್ಯಯನಗಳು ತೋರಿಸುತ್ತವೆ. ಇದರಿಂದಾಗಿ ಅನೇಕ ಜನರು ಕೊಲೆಸ್ಟ್ರಾಲ್ ಅಧಿಕವಾಗಿರುವ ಆಹಾರಗಳಿಂದ ದೂರವಿರುತ್ತಾರೆ. ಅವುಗಳಲ್ಲಿ ಮೊಟ್ಟೆಗಳು ಒಂದು ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.
ಆರೋಗ್ಯಕ್ಕೆ ಉತ್ತಮ: ಮೊಟ್ಟೆಗಳಲ್ಲಿ ಕೊಲೆಸ್ಟ್ರಾಲ್ ಅಧಿಕವಾಗಿರುತ್ತದೆ. ಎರಡು ದೊಡ್ಡ ಮೊಟ್ಟೆಗಳು ಸರಿಸುಮಾರು 411 ಮಿಗ್ರಾಂ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತವೆ ಎಂದು ವೈದ್ಯರು ಹೇಳುತ್ತಾರೆ. ಆದರೆ, ಹಲವಾರು ಅಧ್ಯಯನಗಳ ಪ್ರಕಾರ, ದಿನಕ್ಕೆ 300 ಮಿಗ್ರಾಂಗಿಂತ ಹೆಚ್ಚು ಕೊಲೆಸ್ಟ್ರಾಲ್ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೃದಯ ಕಾಯಿಲೆ ಇರುವವರು ದಿನಕ್ಕೆ 200 ಮಿಗ್ರಾಂಗಿಂತ ಕಡಿಮೆ ಕೊಲೆಸ್ಟ್ರಾಲ್ ಸೇವಿಸುವುದು ಉತ್ತಮ ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಷನ್ (National Library of Medicine) ಹೇಳುತ್ತದೆ. ಮೊಟ್ಟೆಗಳಲ್ಲಿ ಅತಿಯಾದ ಕೊಲೆಸ್ಟ್ರಾಲ್ ಇದ್ದು ಅದನ್ನು ತಿನ್ನಬಾರದು ಎಂದು ನೀವು ಭಾವಿಸಿದರೆ ಅದು ತಪ್ಪು ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇದ್ದು, ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ವಿವರಿಸಲಾಗಿದೆ.
ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್ (Harvard Health publishing) ವರದಿಯ ಪ್ರಕಾರ, ಕೊಲೆಸ್ಟ್ರಾಲ್ ಯಕೃತ್ತಿನಿಂದ ಉತ್ಪತ್ತಿಯಾಗುತ್ತದೆ ಎಂದು ಹೇಳುತ್ತದೆ. ಮೊಟ್ಟೆಯಂತಹ ಹೆಚ್ಚಿನ ಕೊಲೆಸ್ಟ್ರಾಲ್ ಇರುವ ಆಹಾರಗಳನ್ನು ಸೇವಿಸಿದಾಗ ಕೆಲವೊಮ್ಮೆ ಯಕೃತ್ತು ಕಡಿಮೆ ಕೊಲೆಸ್ಟ್ರಾಲ್ ಉತ್ಪಾದಿಸುತ್ತದೆ. ಇದರರ್ಥ ನೀವು ಪ್ರತಿದಿನ ಮೊಟ್ಟೆಗಳನ್ನು ಸೇವಿಸಿದರೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಜ್ಞರು ವಿವರಿಸುತ್ತಾರೆ.
ಹೃದಯ ಕಾಯಿಲೆ ಇರುವವರು: ಮೊಟ್ಟೆಗಳನ್ನು ನಿಯಮಿತವಾಗಿ ತಿನ್ನುವುದರಿಂದ ಹೃದಯ ಕಾಯಿಲೆಯ ಅಪಾಯ ಕಡಿಮೆಯಾಗುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ, ತಜ್ಞರು ಹೇಳುವಂತೆ ದಿನಕ್ಕೆ ಒಂದು ಅಥವಾ ಎರಡು ಮೊಟ್ಟೆಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದಿಲ್ಲ ಅಥವಾ ಹೃದ್ರೋಗದ ಅಪಾಯ ಹೆಚ್ಚಾಗುವುದಿಲ್ಲ. ಅಧಿಕ ತೂಕ ಹೊಂದಿರುವವರು ಅಥವಾ ಅದರಿಂದ ಬಳಲುತ್ತಿರುವವರಲ್ಲಿಯೂ ಸಹ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಗ್ಲೈಸೆಮಿಕ್ ನಿಯಂತ್ರಣದಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ ಎಂದು ಹೇಳುತ್ತಾರೆ.
ಮೊಟ್ಟೆಗಳನ್ನು ತಿನ್ನುವುದರಿಂದ ಮೆಟಾಬಾಲಿಕ್ ಸಿಂಡ್ರೋಮ್ ಅಪಾಯ ಕಡಿಮೆಯಾಗುತ್ತದೆ. ಮೊಟ್ಟೆಗಳಲ್ಲಿ ಕಾರ್ಬೋಹೈಡ್ರೇಟ್ಗಳು ಕಡಿಮೆ ಇರುವುದರಿಂದ ಹೃದ್ರೋಗ ಮತ್ತು ಮಧುಮೇಹ ರೋಗಿಗಳ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರುವುದಿಲ್ಲ. ಇದಲ್ಲದೇ, ಇದು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಲು ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.