Connect with us

ಚುನಾವಣೆ

ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ ಆರಂಭ

Published

on

ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ ಆರಂಭ
ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ ಆರಂಭ

ನವ ದೆಹಲಿಕರ್ನಾಟಕ ರಾಜಕಾರಣದಲ್ಲಿ ಮೂರನೇ ನಿರ್ಣಾಯಕ ಶಕ್ತಿಯಾಗಿರುವ ಜಾತ್ಯತೀತ ಜನತಾದಳ ಇದೀಗ ರಾಷ್ಟ್ರೀಯ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷದೊಂದಿಗೆ ರಾಜಕೀಯ ಮೈತ್ರಿಯನ್ನು  ಅಧಿಕೃತವಾಡಿ ಮಾಡಿಕೊಳ್ಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಶಕೆ ಆರಂಭವಾಗುವ ಲಕ್ಷಣ ಕಾಣಿಸಿದೆ.

ಬಿಜೆಪಿಯ ಹಿರಿಯ ನಾಯಕ ಅಮಿತ್‌ ಶಾ ಅವರ ದಿಲ್ಲಿಯ ನಿವಾಸದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ಜೆಡಿಎಸ್‌ನ ಹಿರಿಯ ನಾಯಕ ಎಚ್‌.ಡಿ ಕುಮಾರಸ್ವಾಮಿ ಅವರು ಈ ಮೈತ್ರಿಗೆ ಅಧಿಕೃತವಾಗಿ ಒಪ್ಪಿಗೆ ನೀಡಿದ್ದಾರೆ. ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇದನ್ನು ಘೋಷಣೆ ಮಾಡಿದ್ದು ಇನ್ನು ಜೆಡಿಎಸ್‌ ಪಕ್ಷವು ಎನ್‌ಡಿಎ ಕೂಟದ ಮಿತ್ರ ಪಕ್ಷವಾಗಿರಲಿದೆ ಎಂದು ಪ್ರಕಟಿಸಿದ್ದಾರೆ.

ಇದರೊಂದಿಗೆ ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಕೇಳಿಬರುತ್ತಿದ್ದ ಬಿಜೆಪಿ-ಜೆಡಿಎಸ್‌ ಮೈತ್ರಿಯ ಊಹಾಪೋಹ ಮತ್ತು ಚರ್ಚೆಗಳಿಗೆ ತೆರೆ ಬಿದ್ದಂತಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಜತೆಯಾಗಿ ಸೆಣಸಲು ವೇದಿಕೆ ಸಜ್ಜಾದಂತಾಗಿದೆ.

ಮೈತ್ರಿ ಮಾತುಕತೆಗಾಗಿ ಎಚ್‌.ಡಿ ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರು ಗುರುವಾರವೇ ದಿಲ್ಲಿಗೆ ತೆರಳಿದ್ದರು. ಗುರುವಾರ ಸಂಜೆ ಮಾಜಿ ಪ್ರಧಾನಿ ಎಚ್.‌ಡಿ ದೇವೇಗೌಡರ ನಿವಾಸದಲ್ಲಿ ಜೆಡಿಎಸ್‌ನ ಆಂತರಿಕ ಸಭೆಯೊಂದನ್ನು ನಡೆಸಲಾಗಿದ್ದು, ಅದರಲ್ಲಿ ಮೈತ್ರಿಯ ಷರತ್ತಿನ ಬಗ್ಗೆ ಚರ್ಚೆಗಳು ನಡೆದಿದ್ದವು. ಬಳಿಕ ರಾತ್ರಿ ಗೋವಾದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಬಿಜೆಪಿಯ ರಾಯಭಾರಿಯಾಗಿ ದೇವೇಗೌಡರ ಮನೆಗೆ ಬಂದು ಚರ್ಚೆ ನಡೆಸಿದ್ದರು. ಇದಾದ ಬಳಿಕ ಶುಕ್ರವಾರ ಮಧ್ಯಾಹ್ನ ಎಚ್‌.ಡಿ. ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರು ಬಿಜೆಪಿ ನಾಯಕ ಅಮಿತ್‌ ಶಾ ಅವರ ನಿವಾಸಕ್ಕೆ ತೆರಳಿ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ಮೈತ್ರಿಯ ಅಂತಿಮ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಮೈತ್ರಿಯನ್ನು ಘೋಷಣೆ ಮಾಡಲಾಗಿದೆ. ಜಾತ್ಯತೀತ ಜನತಾದಳವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಭಾಗವಾಗಲು ಬಯಸಿರುವುದು ನಮಗೆ ಖುಷಿ ತಂದಿದೆ. ನಾವು ಅವರನ್ನು ಅತ್ಯಂತ ಪ್ರೀತಿಯಿಂದ ಎನ್‌ಡಿಎ ಮಿತ್ರಕೂಟಕ್ಕೆ ಸ್ವಾಗತಿಸುತ್ತೇವೆ ಎಂದು ಜೆ.ಪಿ. ನಡ್ಡಾ ಅವರು ಟ್ವೀಟ್‌ ಮಾಡುವುದರೊಂದಿಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಅಧಿಕೃತಗೊಂಡಂತಾಗಿದೆ. ಒಂದು ಹಂತದಲ್ಲಿ ರಾಜ್ಯ ವಿಧಾನಸಭೆಯಲ್ಲಿ ಎಚ್‌.ಡಿ ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕರಾಗಿದ್ದಾರೆ ಎನ್ನುವಷ್ಟು ಪ್ರಖರವಾಗಿ ಮಿಂಚಿದ್ದರು. ಇನ್ನೂ ಸದನ ನಾಯಕನ ಆಯ್ಕೆಯೇ ಆಗಿಲ್ಲದೆ ಇರುವುದರಿಂದ ಬಿಜೆಪಿಯೂ ಅವರನ್ನೇ ಮುಂದಾಳುವಾಗಿ ಮುಂಚೂಣಿಯಲ್ಲಿ ನಿಲ್ಲಿಸಿತ್ತು. ಜಂಟಿ ಪತ್ರಿಕಾಗೋಷ್ಠಿಯ ಮೂಲಕವೂ ಗಮನ ಸೆಳೆದಿತ್ತು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 135 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಭರ್ಜರಿ ಬಹುಮತ ಪಡೆದಿರುವುದು ಬಿಜೆಪಿ ಮತ್ತು ಜಾತ್ಯತೀತ ಜನತಾ ದಳದಲ್ಲಿ ತಲ್ಲಣ ಉಂಟು ಮಾಡಿತ್ತು. ಆಗಿನಿಂದಲೇ ಬಿಜೆಪಿ ಹಾಗೂ ಜೆಡಿಎಸ್‌ಗಳು ಒಂದಾಗಿ ಕಾಂಗ್ರೆಸ್‌ನ್ನು ಎದುರಿಸುವ ಚರ್ಚೆಗಳು ಆರಂಭಗೊಂಡಿದ್ದವು.

ಧಾನಸಭಾ ಅಧಿವೇಶನದಲ್ಲಿ ಹುಟ್ಟಿಕೊಂಡ ಮೈತ್ರಿಯ ಚರ್ಚೆ ಅದರ ಮುಕ್ತಾಯದ ಬಳಿಕ ತಣ್ಣಗಾಗಿತ್ತು. ಕೆಲವು ವಾರದ ಹಿಂದೆ ಮಾಜಿ ಮುಖ್ಯಮಂತ್ರಿ ಬಿಎಸ್‌. ಯಡಿಯೂರಪ್ಪ ಅವರು ಸದ್ಯವೇ ಬಿಜೆಪಿ-ಜೆಡಿಎಸ್‌ ಮೈತ್ರಿ ಘೋಷಣೆಯಾಗಲಿದೆ ಎಂದು ಪ್ರಕಟಿಸಿದರು. ಬಿಎಸ್‌ವೈ ಅವರ ಈ ಪ್ರಕಟಣೆಯನ್ನು ಬಿಜೆಪಿ ಮತ್ತು ಜೆಡಿಎಸ್‌ನ ಬಹುತೇಕ ಎಲ್ಲ ನಾಯಕರು ಸ್ವಾಗತಿಸಿದರು. ಈಗಿನ ಪರಿಸ್ಥಿತಿಯಲ್ಲಿ ಇದು ಅನಿವಾರ್ಯವಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಜೆಡಿಎಸ್‌ನಲ್ಲಿ ಕೆಲವು ನಾಯಕರು ಅದಕ್ಕೆ ಅಪಸ್ವರ ಹಾಡಿದ್ದರು. ಇದೀಗ ಜೆಡಿಎಸ್‌ ಮತ್ತು ಬಿಜೆಪಿ ನಡುವಿನ ಮೈತ್ರಿ ಅಧಿಕೃತ ಎನ್ನುವುದು ಘೋಷಣೆಯಾಗಿದೆ. ಜೆಡಿಎಸ್‌ನ ಕೆಲವು ನಾಯಕರು ಕಾಂಗ್ರೆಸ್‌ನ ಅಬ್ಬರದ ವಿರುದ್ಧ ಎದ್ದು ನಿಲ್ಲಲು ಬಿಜೆಪಿ ಜತೆ ಮೈತ್ರಿ ಅಗತ್ಯ ಎಂಬುದನ್ನು ಪ್ರತಿಪಾದಿಸಿದ್ದರು. ಆದರೆ ಬಿಜೆಪಿ ಪಾಲಿಗೂ ಈ ಮೈತ್ರಿ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಅತ್ಯಂತ ಅಗತ್ಯದ್ದಾಗಿತ್ತು.

2019ರ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ 25+1ನ್ನು ಗೆದ್ದುಕೊಂಡಿದ್ದ ಬಿಜೆಪಿಗೆ ಈ ಬಾರಿಯೂ ಅದನ್ನೇ ಮರುಸೃಷ್ಟಿಸಿರುವ ಅನಿವಾರ್ಯತೆ ಇದೆ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ ಪರ ನಿಂತಿರುವ ಹಿನ್ನೆಲೆಯಲ್ಲಿ ಕಳೆದ ಬಾರಿ ಫಲಿತಾಂಶದ ಮರು ಸೃಷ್ಟಿ ಕಷ್ಟವಾದೀತು ಎಂಬ ನೆಲೆಯಲ್ಲಿ ಅದು ಕೂಡಾ ಜೆಡಿಎಸ್‌ನ ಮೈತ್ರಿಯನ್ನು ಬಯಸಿದೆ. ಜೆಡಿಎಸ್‌ನ ಬೆಂಬಲವಿದ್ದರೆ ಬೆಂಗಳೂರು ಸೇರಿದಂತೆ ಹಳೆಮೈಸೂರು ಪ್ರಾಂತ್ಯದಲ್ಲಿ ಗೆಲ್ಲಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ. ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದರೆ ದೇಶದಲ್ಲಿ ಹಿಂದೆ ಗೆದ್ದ ಬಹುತೇಕ ಎಲ್ಲ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಇಲ್ಲವಾದರೆ ಇಂಡಿಯಾ ಮೈತ್ರಿಕೂಟದ ಮುಂದೆ ಮಂಡಿಯೂರಬೇಕಾದೀತು ಎಂಬ ಆತಂಕವಿದೆ. ಹೀಗಾಗಿ ಕರ್ನಾಟಕದ ಬಲವನ್ನು ಗಟ್ಟಿಗೊಳಿಸುವ ಪ್ರಯತ್ನವಾಗಿ ಮೈತ್ರಿಗೆ ಮುಂದಾಗಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಮೈತ್ರಿಯಲ್ಲಿ ಎರಡು ಪಕ್ಷಗಳ ನಡುವೆ ಸ್ಥಾನ ಹೊಂದಾಣಿಕೆ ಅತ್ಯಂತ ಮಹತ್ವದ ಹಂತದ್ದಾಗಿರುತ್ತದೆ. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಜೆಡಿಎಸ್‌ ಐದು ಲೋಕಸಭಾ ಕ್ಷೇತ್ರ (ಮಂಡ್ಯ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ), ಎರಡು ಎಂಎಲ್‌ಸಿ ಸ್ಥಾನ, ಒಂದು ಕೇಂದ್ರ ಮಂತ್ರಿ ಸ್ಥಾನವನ್ನು ಕೇಳಿದೆ ಎನ್ನಲಾಗುತ್ತಿದೆ. ಆದರೆ, ಬಿಜೆಪಿ ಇಷ್ಟು ಸ್ಥಾನಗಳನ್ನು ಕೊಡುತ್ತದೆಯೇ ಎನ್ನುವುದು ಕಾದು ನೋಡಬೇಕಾಗಿದೆ. ಇದರ ವಿಚಾರ ಮುಂದಿನ ಚುನಾವಣೆಯ ಹಂತದಲ್ಲಿ ಅಂತಿಮವಾಗಲಿದೆ.

ಅಂತಿಮವಾಗಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಮಧ್ಯಸ್ಥಿಕೆಯಲ್ಲೇ ಜೆಡಿಎಸ್‌ ಈ ಬಾರಿ ಅಧಿಕೃತವಾಗಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಂತಾಗಿದೆ. ಜಾತ್ಯತೀತ ಎಂಬ ಹೆಸರಿನೊಂದಿಗೇ ಇರುವ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಜಕೀಯದಲ್ಲಿ ಯಾರೂ ಯಾರಿಗೂ ಅಸ್ಪೃಶ್ಯವಲ್ಲ ಎನ್ನುವುದು ಮತ್ತೆ ಋಜುವಾತಾಗಿದೆ.

ದೇಶ

ಪಂಜಾಬ್ ಚುನಾವಣೆಗೆ Waris Punjab De ಮೊದಲ ಅಭ್ಯರ್ಥಿ; ಸತ್ವಂತ್ ಸಿಂಗ್ ಕಣಕ್ಕೆ

Published

on

ಚಂಡೀಗಢ: 2027ರ ಪಂಜಾಬ್ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿರುವ ಬೆನ್ನಲ್ಲೇ, ಅಕಾಲಿ ದಳ್ Waris Punjab De ತನ್ನ ಮೊದಲ ಅಭ್ಯರ್ಥಿಯನ್ನು ಘೋಷಿಸಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿ ಶಿಕ್ಷೆಗೆ ಗುರಿಯಾಗಿದ್ದ ಕೆಹರ್ ಸಿಂಗ್ ಅವರ ಪುತ್ರ ಸತ್ವಂತ್ ಸಿಂಗ್ ಅವರನ್ನು ಬಸ್ಸಿ ಪಠಾನಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ.

ಈ ಘೋಷಣೆ ಪಂಜಾಬ್‌ನ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಇಂದಿರಾ ಗಾಂಧಿ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಕೆಹರ್ ಸಿಂಗ್ ದೋಷಿಯಾಗಿದ್ದರು. ಪ್ರಕರಣದಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು. ಇದೀಗ ಅವರ ಪುತ್ರನಿಗೆ 2027 Punjab Assembly Election ಟಿಕೆಟ್ ನೀಡಿರುವುದು ಪಂಥಿಕ್ ರಾಜಕೀಯದಲ್ಲಿ ಗಮನ ಸೆಳೆದಿದೆ.

ತ್ಯಾಗ ಮಾಡಿದ ಕುಟುಂಬಗಳಿಗೆ ಗೌರವ: ತರ್ಸೆಮ್ ಸಿಂಗ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತರ್ಸೆಮ್ ಸಿಂಗ್, ಪಕ್ಷದ ರಾಜಕೀಯ ಕೇವಲ ಅಧಿಕಾರ ಹಿಡಿಯುವುದಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದ್ದಾರೆ. ಪಂಥಿಕ್ ತತ್ವಗಳು, ಪಂಜಾಬ್‌ನ ಹಕ್ಕುಗಳು ಹಾಗೂ ಸಮುದಾಯಕ್ಕಾಗಿ ತ್ಯಾಗ ಮಾಡಿದ ಕುಟುಂಬಗಳ ಗೌರವವನ್ನು ಎತ್ತಿಹಿಡಿಯುವುದು ಪಕ್ಷದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಪಂಥ್ ಮತ್ತು ಸಮುದಾಯಕ್ಕಾಗಿ ತ್ಯಾಗ ಮಾಡಿದ ಕುಟುಂಬಗಳನ್ನು ಪಕ್ಷ ಕಡೆಗಣಿಸುತ್ತಿದೆ ಎಂಬ ಆರೋಪಗಳು ಇತ್ತೀಚೆಗೆ ಕೇಳಿಬಂದಿದ್ದವು. ಆದರೆ, ಮೊದಲ ಅಭ್ಯರ್ಥಿಯಾಗಿಯೇ ಅಂತಹ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸುವ ಮೂಲಕ ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ಎಂದು ತರ್ಸೆಮ್ ಸಿಂಗ್ ಹೇಳಿದ್ದಾರೆ.

ಬಸ್ಸಿ ಪಠಾನಾದಲ್ಲಿ ಪಂಥಿಕ್ ಮತಗಳ ಲೆಕ್ಕಾಚಾರ

ಸತ್ವಂತ್ ಸಿಂಗ್ ಅವರ ಅಭ್ಯರ್ಥಿತನವು ಬಸ್ಸಿ ಪಠಾನಾ ಕ್ಷೇತ್ರದಲ್ಲಿ Panthic Politics in Punjab ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಅವರ ಕುಟುಂಬದ ಹಿನ್ನೆಲೆ ಮತದಾರರ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಕುತೂಹಲ ಮೂಡಿಸಿದೆ.

2022ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ 117 ಸ್ಥಾನಗಳ ಪೈಕಿ 92 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತ ಪಡೆದಿತ್ತು. ಕಾಂಗ್ರೆಸ್ 18 ಸ್ಥಾನಗಳಿಗೆ ಸೀಮಿತವಾಗಿತ್ತು. ಇದೀಗ 2027ರ ಚುನಾವಣೆಯಲ್ಲಿ ಪಂಥಿಕ್ ರಾಜಕೀಯದ ಪ್ರಭಾವ ಎಷ್ಟಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Continue Reading

ಬೆಂಗಳೂರು

SIR ಸಮೀಕ್ಷೆ ವೇಳೆ ಸರ್ಕಾರಿ ಅಧಿಕಾರಿಗೆ ಹಲ್ಲೆ: ಡಿ.ಜೆ.ಹಳ್ಳಿಯಲ್ಲಿ ಇಬ್ಬರು ಆರೋಪಿಗಳ ಬಂಧನ

Published

on

ಬೆಂಗಳೂರು: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಕಾರ್ಯಾಚರಣೆ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಜೀವನಹಳ್ಳಿ (D J Halli) ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಯಾರಬ್ ಮತ್ತು ದಸ್ತಗೀರ್ ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ ಸುಮಾರು 1.30 ಗಂಟೆ ವೇಳೆಗೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಸ್ಲಂ ಡೆವಲಪ್‌ಮೆಂಟ್ ಬೋರ್ಡ್ ಅಧಿಕಾರಿಗಳ ತಂಡವು ಡಿ.ಜೆ.ಹಳ್ಳಿಯ ರೋಶನ್ ನಗರದಲ್ಲಿರುವ ಕೌಸರ್ ಮಸೀದಿ ಸಮೀಪ SIR ಸಮೀಕ್ಷೆ ನಡೆಸುತ್ತಿತ್ತು.

ಈ ವೇಳೆ ಸ್ಥಳಕ್ಕೆ ಬಂದ ದಸ್ತಗೀರ್, ತನಗೂ SIR ಫಾರ್ಮ್ ನೀಡುವಂತೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾನೆ. ಆದರೆ ಆತ ಈಗಾಗಲೇ ಜಯನಗರಕ್ಕೆ ವಾಸ್ತವ್ಯ ಬದಲಾಯಿಸಿರುವುದರಿಂದ ಆ ಪ್ರದೇಶದಲ್ಲಿ ಫಾರ್ಮ್ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.

ಈ ಉತ್ತರದಿಂದ ಆಕ್ರೋಶಗೊಂಡ ದಸ್ತಗೀರ್ ಹಾಗೂ ಆತನಿಗೆ ಬೆಂಬಲ ನೀಡಿದ ಯಾರಬ್, ಕರ್ತವ್ಯದಲ್ಲಿದ್ದ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಅಧಿಕಾರಿಗೆ ಗಾಯ

ಹಲ್ಲೆಯಲ್ಲಿ ಸ್ಲಂ ಡೆವಲಪ್‌ಮೆಂಟ್ ಬೋರ್ಡ್‌ನ ಸೂಪರಿಂಟೆಂಡೆಂಟ್ ಫಕೀರಪ್ಪ ಗಾಯಗೊಂಡಿದ್ದಾರೆ. ಆರೋಪಿಗಳು ಮುಖ ಹಾಗೂ ಕಟಿ ಭಾಗಕ್ಕೆ ಹೊಡೆದಿದ್ದು, ಬೆನ್ನಿನ ಮೇಲೂ ಹಲ್ಲೆ ನಡೆಸಿದ ಪರಿಣಾಮ ಅವರ ತುಟಿಗೆ ಗಾಯವಾಗಿ ರಕ್ತಸ್ರಾವವಾಗಿದೆ ಎಂದು ತಿಳಿದುಬಂದಿದೆ.

ಸ್ಥಳದಲ್ಲಿದ್ದ ಸಾರ್ವಜನಿಕರು ಮಧ್ಯಪ್ರವೇಶಿಸಿ ಗಲಾಟೆ ನಿಲ್ಲಿಸಿದ್ದು, ಗಾಯಗೊಂಡ ಅಧಿಕಾರಿಯನ್ನು ತಕ್ಷಣ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಪ್ರಕರಣ ದಾಖಲು, ಇಬ್ಬರ ಬಂಧನ

ಚಿಕಿತ್ಸೆಯ ಬಳಿಕ ಫಕೀರಪ್ಪ ಅವರು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಹಾಗೂ ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Continue Reading

ಬೆಂಗಳೂರು

GBA ಸೇರಿ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆ ಡಿಸೆಂಬರ್ ಒಳಗೆ; ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

Published

on

ನವದೆಹಲಿ: ಬೆಂಗಳೂರು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಚುನಾವಣೆ ಸೇರಿದಂತೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು (Local Body Elections) ನಿಗದಿತ ಅವಧಿಯೊಳಗೆ ನಡೆಸಲು ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳು ಹಾಗೂ ಚುನಾವಣಾ ಸಿದ್ಧತೆಗಳ ಕುರಿತು ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಚುನಾವಣೆಗಳನ್ನು ಅನಗತ್ಯವಾಗಿ ಮುಂದೂಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ಡಿ.ಕೆ. ಶಿವಕುಮಾರ್ ಅವರ ಪ್ರಕಾರ, ಬೆಂಗಳೂರು ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮೊದಲಿಗೆ ಆಗಸ್ಟ್ 31ರೊಳಗೆ ನಡೆಸುವ ಉದ್ದೇಶ ಹೊಂದಲಾಗಿತ್ತು. ಆದರೆ ಎಸ್‌ಐಆರ್ (SIR) ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಹಾಗೂ ಕೆಲವು ತಾಂತ್ರಿಕ ಕಾರಣಗಳಿಂದಾಗಿ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ನಲ್ಲಿ ಹೆಚ್ಚಿನ ಕಾಲಾವಕಾಶ ಕೋರಿತ್ತು.

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದಂತೆ ಮುಂದಿನ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ ಸಿಎಂ, ಚುನಾವಣೆ ಪ್ರಕ್ರಿಯೆಯನ್ನು ವಿಳಂಬ ಮಾಡುವುದು ಸರ್ಕಾರದ ಉದ್ದೇಶವಲ್ಲ ಎಂದು ಪುನರುಚ್ಚರಿಸಿದರು.

ಬೆಂಗಳೂರು ಮಾತ್ರವಲ್ಲದೆ, ರಾಜ್ಯದಲ್ಲಿ ಬಾಕಿ ಉಳಿದಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳ ಚುನಾವಣೆಗಳನ್ನು ಈ ವರ್ಷದ ಡಿಸೆಂಬರ್ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಸಂವಿಧಾನದ 73ನೇ ಮತ್ತು 74ನೇ ತಿದ್ದುಪಡಿ ಆಶಯಕ್ಕೆ ಅನುಗುಣವಾಗಿ ಗ್ರಾಮ ಪಂಚಾಯತ್‌ನಿಂದ ಮಹಾನಗರ ಪಾಲಿಕೆವರೆಗೆ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಯುವ ನಾಯಕತ್ವ ಹಾಗೂ ಹೊಸ ಮುಖಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಗಡುವಿನ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಅಗತ್ಯ ಸಿದ್ಧತೆಗಳನ್ನು ವೇಗಗೊಳಿಸುವ ಸಾಧ್ಯತೆ ಇದ್ದು, ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಂಡ ಬಳಿಕ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ. ಇದರಿಂದ GBA ಚುನಾವಣೆ ಸೇರಿದಂತೆ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಕುರಿತ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.

Continue Reading

Trending