ರಾಜ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ:ರಾಜ್ಯದಲ್ಲಿ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದೆಲ್ಲಾ ಪಟಾಕಿಗಳಿಗೆ ನಿಷೇಧ!
ರಾಜ್ಯದಲ್ಲಿ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದೆಲ್ಲಾ ಪಟಾಕಿಗಳಿಗೆ ನಿಷೇಧ ವಿಧಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.ರಾಜ್ಯದಲ್ಲಿ ಪಟಾಕಿ ಮಾರಾಟಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ಕುರಿತು ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ. ಉಳಿದ ಪಟಾಕಿಗಳಿಗೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದರು.ಅತ್ತಿಬೆಲೆ ಪಟಾಕಿ ಅಂಗಡಿ ಅವಘಡ ಪ್ರಕರಣ ಕುರಿತು ಮಾತನಾಡಿ, 2026 ರ ವರೆಗೆ ಒಂದು ಲೈಸೆನ್ಸ್ ಇಶ್ಯು ಆಗಿದೆ. ಅದು ನಕಲಿ ಲೈಸೆನ್ಸ್ ಎನ್ನಲಾಗಿದೆ. ಸ್ಥಳ ಪರಿಶೀಲನೆ ಮಾಡಿ ಮೂರು ಜನ ರಿಪೋರ್ಟ್ ಕೊಡಬೇಕು.ಬಳಿಕ ಡಿಸಿ ಲೈಸೆನ್ಸ್ ಕೊಡಬೇಕು.ಇಲ್ಲಿ ರಾಮಸ್ವಾಮಿ ರೆಡ್ಡಿ ಎಂಬವನು ಮಾರಾಟ ಮಾಡೋದಕ್ಕೆ ಲೈಸೆನ್ಸ್ ತಗೊಂಡಿದ್ದಾನೆ. ಉಗ್ರಾಣಕ್ಕೆ ಲೈಸೆನ್ಸ್ ತಗೊಂಡಿಲ್ಲ.ತಮಿಳುನಾಡಿನಿಂದ ಪಟಾಕಿ ಸಾಮಾಗ್ರಿ ತಗೊಂಡಿದ್ದಾನೆ ಎಂದು ಹೇಳಿದರು.ಸ್ಥಳೀಯ ತಹಸಿಲ್ದಾರ್, ಸ್ಥಳೀಯ ಪೊಲೀಸ್ ಇನ್‌ಸ್ಪೆಕ್ಟರ್, ಸ್ಥಳೀಯ ಅಗ್ನಿಶಾಮಕ ದಳ ಮುಖ್ಯಸ್ಥರ ಅಮಾನತಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.ಲೈಸೆನ್ಸ್ ಪರಿಷ್ಕರಣೆ ಮಾಡಲು ಸೂಚನೆ ನೀಡಲಾಗಿದೆ. ಈ ಮೊದಲು 5 ವರ್ಷಕ್ಕೆ ಲೈಸೆನ್ಸ್ ಅವಧಿ ಇತ್ತು. ಈಗ ಪ್ರತಿ ವರ್ಷವೂ ಲೈಸೆನ್ಸ್ ಪಡೆಯಬೇಕಿರುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ರಾಜಕೀಯ ಸಮಾರಂಭ, ಸಮಾವೇಶ, ಕಾರ್ಯಕ್ರಮಗಳಲ್ಲಿ ಪಟಾಕಿ ಬ್ಯಾನ್ ಮಾಡಲಾಗಿದೆ. ಮದುವೆ, ಗಣೇಶ ಉತ್ಸವ, ಎಲ್ಲ ಮೆರವಣಿಗೆಗಳಲ್ಲಿ ಇನ್ಮುಂದೆ ಪಟಾಕಿ ನಿಷೇಧ ವಿಧಿಸಲಾಗಿದೆ. ಆದರೆ ದೀಪಾವಳಿಗೆ ಪಟಾಕಿ ನಿಷೇಧ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹಸಿರು ಪಟಾಕಿ ನಿಯಾಮವಳಿಗಳಿಗೆ ವಿರುದ್ಧವಾಗಿ ಅಂಗಡಿಗಳಿದ್ದರೆ ಕ್ರಮ ಕೈಗೊಳ್ಳಲಾಗುವುದು. ಪರಿಶೀಲನೆ ಮಾಡಿ ಕ್ರಮಕ್ಕೆ ಸೂಚಿಸಿದ್ದೇವೆ. ಇನ್ಮುಂದೆ ಪಟಾಕಿ ಅಂಗಡಿಗಳಿಗೆ ಲೈಸೆನ್ಸ್‌ಗಳಿಗೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರವೇ ಲೈಸೆನ್ಸ್ ಕಡ್ಡಾಯ ಮಾಡಲಾಗಿದೆ. ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಬೇಕು ಎಂದರು.
ಬೆಂಗಳೂರು
Liver ಚಿಕಿತ್ಸೆಗೆ ಗುಡ್ ನ್ಯೂಸ್: ಹಲವು ತಜ್ಞರು ಒಂದೇ ಕಡೆ, ರೋಗಿಗಳಿಗೆ ಸುಲಭ ಚಿಕಿತ್ಸೆ
ಬೆಂಗಳೂರು: ಯಕೃತ್ತಿನಲ್ಲಿ ಕಂಡುಬರುವ ಗಂಟು, ಗೆಡ್ಡೆ ಹಾಗೂ ಅಸಹಜ ಬೆಳವಣಿಗೆಗಳಿಗೆ ಸಮನ್ವಯದ ತಪಾಸಣೆ, ನಿಖರ ರೋಗನಿರ್ಣಯ ಮತ್ತು ಸಮಗ್ರ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಬೆಂಗಳೂರಿನ ಕೆಂಗೇರಿಯಲ್ಲಿರುವ ಫೋರ್ಟಿಸ್ ಹೆಲ್ತ್‌ಕೇರ್ ಜಾಲದ ಭಾಗವಾಗಿರುವ ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ ಕರ್ನಾಟಕದ ಮೊದಲ ಪ್ರತ್ಯೇಕ ಲಿವರ್ ನೊಡ್ಯೂಲ್ ಕ್ಲಿನಿಕ್ ಆರಂಭಿಸಲಾಗಿದೆ.
ರೋಗಿಗಳು ವಿವಿಧ ವೈದ್ಯರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಒಂದೇ ರೀತಿಯ ಪರೀಕ್ಷೆಗಳನ್ನು ಪುನರಾವರ್ತಿಸುವ ಅಗತ್ಯವನ್ನು ಕಡಿಮೆ ಮಾಡುವುದು ಕ್ಲಿನಿಕ್‌ನ ಪ್ರಮುಖ ಉದ್ದೇಶವಾಗಿದೆ. ಯಕೃತ್ತಿನ ತಜ್ಞರು, ಲಿವರ್ ಟ್ರಾನ್ಸ್‌ಪ್ಲಾಂಟ್ ಮತ್ತು ಎಚ್‌ಪಿಬಿ ಸರ್ಜರಿ ತಜ್ಞರು, ಜಠರ-ಕರುಳಿನ ತಜ್ಞರು, ರೇಡಿಯಾಲಜಿಸ್ಟ್‌ಗಳು, ಕ್ಯಾನ್ಸರ್ ತಜ್ಞರು, ರೋಗಶಾಸ್ತ್ರ ತಜ್ಞರು ಹಾಗೂ ಪೌಷ್ಟಿಕ ಆಹಾರ ತಜ್ಞರು ಒಂದೇ ತಂಡವಾಗಿ ರೋಗಿಯ ಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.
ವೈದ್ಯಕೀಯ ಜಠರರೋಗ ಶಾಸ್ತ್ರ, ಹೆಪಟಾಲಜಿ ಮತ್ತು ಸುಧಾರಿತ ಎಂಡೋಸ್ಕೋಪಿ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಸಲಹೆಗಾರ ಡಾ. ಆದರ್ಶ್ ಸಿ.ಕೆ. ಮಾತನಾಡಿ, ನಿಯಮಿತ ತಪಾಸಣೆ ವೇಳೆ ಯಕೃತ್ತಿನ ಗೆಡ್ಡೆಗಳು ಮತ್ತು ದ್ರವ ತುಂಬಿದ ಚೀಲಗಳು ಆಕಸ್ಮಿಕವಾಗಿ ಪತ್ತೆಯಾಗುತ್ತಿರುವುದು ಹೆಚ್ಚಾಗಿದೆ. ಇವುಗಳಲ್ಲಿ ಅನೇಕವು ಅಪಾಯಕಾರಿಯಲ್ಲದಿದ್ದರೂ, ಕೆಲವು ಯಕೃತ್ತಿನ ಕಾಯಿಲೆ ಅಥವಾ ಆರಂಭಿಕ ಹಂತದ ಕ್ಯಾನ್ಸರ್‌ನ ಸೂಚನೆಯಾಗಿರಬಹುದು. ಹೀಗಾಗಿ ಯಾವ ಗೆಡ್ಡೆಗೆ ಚಿಕಿತ್ಸೆ ಬೇಕು ಮತ್ತು ಯಾವುದನ್ನು ಮೇಲ್ವಿಚಾರಣೆ ಮಾಡಿದರೆ ಸಾಕು ಎಂಬುದನ್ನು ಗುರುತಿಸುವುದು ಪ್ರಮುಖ ಸವಾಲಾಗಿದೆ ಎಂದು ಹೇಳಿದ್ದಾರೆ.
ಲಿವರ್ ಟ್ರಾನ್ಸ್‌ಪ್ಲಾಂಟ್ ಮತ್ತು ಎಚ್‌ಪಿಬಿ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಮಹೇಶ್ ಗೋಪಸೆಟ್ಟಿ, ಚಿಕಿತ್ಸೆಯ ನಿರ್ಧಾರವು ಗೆಡ್ಡೆಯ ಗಾತ್ರ ಮತ್ತು ಸ್ಥಳಕ್ಕೆ ಮಾತ್ರ ಸೀಮಿತವಾಗಿರದೆ ಯಕೃತ್ತಿನ ಕಾರ್ಯಕ್ಷಮತೆ ಹಾಗೂ ರೋಗಿಯ ಒಟ್ಟಾರೆ ಆರೋಗ್ಯವನ್ನೂ ಆಧರಿಸಿರಬೇಕು ಎಂದು ತಿಳಿಸಿದ್ದಾರೆ. ಸಮಗ್ರ ಮೌಲ್ಯಮಾಪನದಿಂದ ಸೂಕ್ತ ಚಿಕಿತ್ಸೆಯನ್ನು ಆಯ್ಕೆ ಮಾಡುವುದರ ಜೊತೆಗೆ, ಅಗತ್ಯವಿಲ್ಲದ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಬಹುದು ಎಂದಿದ್ದಾರೆ.
ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಬಗಲಿ ಮಾತನಾಡಿ, ಕರ್ನಾಟಕದ ಮೊದಲ ಪ್ರತ್ಯೇಕ ಲಿವರ್ ನೊಡ್ಯೂಲ್ ಕ್ಲಿನಿಕ್ ಆರಂಭಿಸಿರುವುದು ರೋಗಿ ಕೇಂದ್ರಿತ ಹಾಗೂ ವಿವಿಧ ವೈದ್ಯಕೀಯ ವಿಭಾಗಗಳ ಸಮನ್ವಯದ ಆರೋಗ್ಯ ಸೇವೆ ಒದಗಿಸುವ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಅತ್ಯಾಧುನಿಕ ವೈದ್ಯಕೀಯ ಪರಿಣತಿಯನ್ನು ಒಂದೇ ವ್ಯವಸ್ಥೆಯಲ್ಲಿ ಒದಗಿಸುವ ಮೂಲಕ ಚಿಕಿತ್ಸಾ ಫಲಿತಾಂಶ ಮತ್ತು ರೋಗಿಗಳ ಅನುಭವ ಸುಧಾರಿಸುವುದು ಕ್ಲಿನಿಕ್‌ನ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಯಕೃತ್ತಿನ ಚೀಲಗಳು, ರಕ್ತನಾಳದ ಗೆಡ್ಡೆಗಳು, ಫೋಕಲ್ ನೊಡ್ಯುಲರ್ ಹೈಪರ್‌ಪ್ಲಾಸಿಯಾ, ಯಕೃತ್ತಿನ ಕ್ಯಾನ್ಸರ್, ದೇಹದ ಇತರ ಭಾಗಗಳಿಂದ ಯಕೃತ್ತಿಗೆ ಹರಡಿದ ಕ್ಯಾನ್ಸರ್ ಹಾಗೂ ಸಂಕೀರ್ಣ ಯಕೃತ್ತಿನ ಗೆಡ್ಡೆಗಳಿಗೆ ಇಲ್ಲಿ ಸಮಗ್ರ ಮೌಲ್ಯಮಾಪನ ಮತ್ತು ಚಿಕಿತ್ಸಾ ಸಲಹೆ ದೊರೆಯಲಿದೆ. ರೋಗನಿರ್ಣಯದ ನಿಖರತೆ ಹೆಚ್ಚಿಸುವುದು ಮತ್ತು ಚಿಕಿತ್ಸೆಯಲ್ಲಿನ ವಿಳಂಬ ಕಡಿಮೆ ಮಾಡುವುದು ಕ್ಲಿನಿಕ್‌ನ ಪ್ರಮುಖ ಗುರಿಯಾಗಿದೆ.
ಬೆಂಗಳೂರು
Bengaluru ನಲ್ಲಿ ಖಾಲಿ ಸೈಟ್ ಮಾಲೀಕರಿಗೆ ಬಿಗ್ ಶಾಕ್: ಕಸ ತೆರವು ಮಾಡದಿದ್ದರೆ ₹38,400 ದಂಡ, ದೊಡ್ಡ ಸೈಟ್‌ಗೆ ಲಕ್ಷಕ್ಕೂ ಹೆಚ್ಚು!
ಬೆಂಗಳೂರು: Bengaluru ನಲ್ಲಿ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಕಸ ಹಾಗೂ ಕಟ್ಟಡ ನಿರ್ಮಾಣದ ತ್ಯಾಜ್ಯವನ್ನು ಹಾಗೆಯೇ ಬಿಟ್ಟಿರುವ ಆಸ್ತಿ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬಿಗ್ ಶಾಕ್ ನೀಡಿದೆ. ಆಗಸ್ಟ್ 27ರಿಂದ ನಗರದಾದ್ಯಂತ ಖಾಲಿ ನಿವೇಶನಗಳ ಸ್ವಚ್ಛತಾ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ನಿಯಮ ಉಲ್ಲಂಘಿಸುವ ಮಾಲೀಕರಿಗೆ ಭಾರಿ ದಂಡ ವಿಧಿಸಲು ನಿರ್ಧರಿಸಲಾಗಿದೆ.
ಶಾಂತಿನಗರದಲ್ಲಿ ವಿಶೇಷ ಅಭಿಯಾನಕ್ಕೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷ ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಉಪಸ್ಥಿತರಿದ್ದರು.
ಖಾಲಿ ಸೈಟ್ ಸ್ವಚ್ಛವಾಗಿಡುವುದು ಕಡ್ಡಾಯ
2020ರ ಘನತ್ಯಾಜ್ಯ ನಿರ್ವಹಣೆ ಉಪನಿಯಮಗಳ ಬೈಲಾ 18(1)(b) ಪ್ರಕಾರ, ಪ್ರತಿಯೊಬ್ಬ ಆಸ್ತಿ ಮಾಲೀಕರು ತಮ್ಮ ಖಾಲಿ ನಿವೇಶನಗಳನ್ನು ನೈರ್ಮಲ್ಯಯುತವಾಗಿ ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ.
ಈಗಾಗಲೇ ಆಗಸ್ಟ್ 15ರೊಳಗೆ ಖಾಲಿ ಸೈಟ್‌ಗಳಲ್ಲಿರುವ ಕಸ ಮತ್ತು ತ್ಯಾಜ್ಯವನ್ನು ಸ್ವತಃ ತೆರವುಗೊಳಿಸುವಂತೆ ಮಾಲೀಕರಿಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಗಡುವು ಮುಗಿದರೂ ಸ್ವಚ್ಛಗೊಳಿಸದ ನಿವೇಶನಗಳ ವಿರುದ್ಧ ಇದೀಗ ಜಿಬಿಎ ನೇರವಾಗಿ ಕ್ರಮ ಕೈಗೊಳ್ಳಲಿದೆ.
ಕಸ ತೆರವು ಮಾಡದಿದ್ದರೆ ಭಾರಿ ದಂಡ!
ಮಾಲೀಕರು ತಮ್ಮ ಜಾಗವನ್ನು ಸ್ವಚ್ಛಗೊಳಿಸದಿದ್ದರೆ, ಪ್ರಾಧಿಕಾರವೇ ನಿವೇಶನದಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸಲಿದೆ. ಇದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ದಂಡದ ರೂಪದಲ್ಲಿ ಆಸ್ತಿ ತೆರಿಗೆಯೊಂದಿಗೆ ಸೇರಿಸಿ ವಸೂಲಿ ಮಾಡಲಾಗುತ್ತದೆ.
ನಿವೇಶನದ ಗಾತ್ರಕ್ಕೆ ಅನುಗುಣವಾಗಿ ದಂಡದ ಮೊತ್ತವೂ ಬದಲಾಗಲಿದೆ.
- 20×30 ಸೈಟ್: ₹19,200ರಿಂದ ದಂಡ
- 30×40 ಸೈಟ್: ₹38,400ರವರೆಗೆ ದಂಡ
- ದೊಡ್ಡ ನಿವೇಶನಗಳು: ₹1 ಲಕ್ಷಕ್ಕೂ ಅಧಿಕ ದಂಡ ಬೀಳುವ ಸಾಧ್ಯತೆ
ಹೀಗಾಗಿ ಖಾಲಿ ಸೈಟ್ ಹೊಂದಿರುವವರು ತಕ್ಷಣವೇ ತಮ್ಮ ನಿವೇಶನದಲ್ಲಿರುವ ಕಸ, ಕಟ್ಟಡ ತ್ಯಾಜ್ಯ ಸೇರಿದಂತೆ ಎಲ್ಲ ರೀತಿಯ ತ್ಯಾಜ್ಯವನ್ನು ತೆರವುಗೊಳಿಸುವುದು ಸೂಕ್ತವಾಗಿದೆ.
ಮಾಲೀಕರೇ ಕಸ ಒಟ್ಟುಗೂಡಿಸಿದರೆ ಹೆಚ್ಚುವರಿ ಶುಲ್ಕವಿಲ್ಲ
ಆಸ್ತಿ ಮಾಲೀಕರು ಸ್ವತಃ ಮುಂದೆ ನಿಂತು ನಿವೇಶನದಲ್ಲಿರುವ ಕಸ ಮತ್ತು ತ್ಯಾಜ್ಯವನ್ನು ಒಂದೆಡೆ ಒಟ್ಟುಗೂಡಿಸಿದರೆ, ಅದನ್ನು ಪಾಲಿಕೆಯೇ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ವಿಲೇವಾರಿ ಮಾಡಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬೆಂಗಳೂರಿನ ಖಾಲಿ ನಿವೇಶನಗಳು ಕಸ ಹಾಕುವ ಸ್ಥಳಗಳಾಗುವುದನ್ನು ತಡೆಯುವುದು ಹಾಗೂ ನಗರವನ್ನು ಸ್ವಚ್ಛವಾಗಿಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ರಾಜ್ಯ
Mysuru ರಲ್ಲೂ ಭೂಸ್ವಾಧೀನ ವಿವಾದ: 165 ಎಕರೆ ಕೃಷಿ ಭೂಮಿಗೆ KIADB ನೋಟಿಸ್, ರೈತರ ಆಕ್ರೋಶ
ಮೈಸೂರು: ರಾಮನಗರ ಜಿಲ್ಲೆಯ ಬಿಡದಿ ಟೌನ್‌ಶಿಪ್ ಭೂಸ್ವಾಧೀನ ವಿವಾದದ ಬೆನ್ನಲ್ಲೇ ಇದೀಗ Mysuru ಜಿಲ್ಲೆಯಲ್ಲೂ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ 165 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ ಎನ್ನಲಾಗಿದ್ದು, ಸ್ಥಳೀಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದ ಸಮೀಪದಲ್ಲಿರುವ ವರುಣಾ ಕ್ಷೇತ್ರದ ಮರಸೆ ಹಾಗೂ ಮದರಗಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಭೂಮಿಯನ್ನು ಗುರುತಿಸಲಾಗಿದೆ. ಈ ಪ್ರದೇಶದ ಜಮೀನುಗಳಲ್ಲಿ ರೈತರು ಅಡಕೆ, ಬಾಳೆ, ತೆಂಗು, ಭತ್ತ ಸೇರಿದಂತೆ ವಿವಿಧ ವಾಣಿಜ್ಯ ಹಾಗೂ ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಫಲವತ್ತಾದ ಜಮೀನು ಕೈಗಾರಿಕೆಗೆ?
ತಮ್ಮ ಜೀವನಾಧಾರವಾಗಿರುವ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸುತ್ತಿರುವ ಜಮೀನುಗಳನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಸ್ಥಳೀಯ ರೈತರು ಪಟ್ಟುಹಿಡಿದಿದ್ದಾರೆ.
ವಿಮಾನ ನಿಲ್ದಾಣದ ಸಮೀಪವಿರುವ ಮರಸೆ-ಮದರಗಳ್ಳಿ ಭಾಗದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸುವ ಉದ್ದೇಶದಿಂದ KIADB ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವುದಾಗಿ ತಿಳಿದುಬಂದಿದೆ. ಭೂಸ್ವಾಧೀನ ಪ್ರಕ್ರಿಯೆ ಮುಂದುವರಿದರೆ ತಮ್ಮ ಕೃಷಿ ಮತ್ತು ಜೀವನೋಪಾಯಕ್ಕೆ ತೀವ್ರ ಹೊಡೆತ ಬೀಳಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಬಿಡದಿ ಮಾದರಿಯಲ್ಲಿ ಮೈಸೂರಲ್ಲೂ ಹೋರಾಟ?
ಬೆಂಗಳೂರು ಸಮೀಪದ ಬಿಡದಿಯಲ್ಲಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಮಾದರಿಯಲ್ಲೇ ಮೈಸೂರಿನಲ್ಲೂ ಪ್ರತಿಭಟನೆ ತೀವ್ರಗೊಳಿಸಲು ರೈತ ಸಂಘಟನೆಗಳು ಹಾಗೂ ಭೂಮಾಲೀಕರು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.
165 ಎಕರೆ ಕೃಷಿ ಭೂಮಿ ಸ್ವಾಧೀನದ ವಿಚಾರ ಇದೀಗ ವರುಣಾ ಕ್ಷೇತ್ರದಲ್ಲಿ ರಾಜಕೀಯ ಹಾಗೂ ರೈತ ಹೋರಾಟಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಸರ್ಕಾರದ ಭೂಸ್ವಾಧೀನ ಪ್ರಸ್ತಾವನೆಗೆ ರೈತರ ಪ್ರತಿಕ್ರಿಯೆ ಮತ್ತು ಮುಂದಿನ ಕ್ರಮಗಳತ್ತ ಇದೀಗ ಗಮನ ಹರಿದಿದೆ
-
ಬೆಂಗಳೂರು19 ಗಂಟೆಗಳು agoBengaluru ನಲ್ಲಿ ಖಾಲಿ ಸೈಟ್ ಮಾಲೀಕರಿಗೆ ಬಿಗ್ ಶಾಕ್: ಕಸ ತೆರವು ಮಾಡದಿದ್ದರೆ ₹38,400 ದಂಡ, ದೊಡ್ಡ ಸೈಟ್‌ಗೆ ಲಕ್ಷಕ್ಕೂ ಹೆಚ್ಚು!
-
ಬೆಂಗಳೂರು21 ಗಂಟೆಗಳು agoNalanda English Medium School ವಾರ್ಷಿಕೋತ್ಸವದಲ್ಲಿ ಎಸ್. ಜಾನಕಿ ಗೀತೆಗಳಿಗೆ ವಿದ್ಯಾರ್ಥಿಗಳ ನೃತ್ಯ ನಮನ
-
ದೇಶ20 ಗಂಟೆಗಳು agoNepal flood ಮರಿಗಳನ್ನು ಬಿಟ್ಟು ಕದಲಲಿಲ್ಲ! ಪ್ರವಾಹದ ಮಧ್ಯೆ ಆನೆಗಳ ವಾತ್ಸಲ್ಯದ ದೃಶ್ಯ ವೈರಲ್
-
ದೇಶ21 ಗಂಟೆಗಳು agoMantralaya: ಇಂದಿನಿಂದ ಸಪ್ತರಾತ್ರೋತ್ಸವ ಆರಂಭ; ಮಹಾರಥೋತ್ಸವ, ತೆಪ್ಪೋತ್ಸವ ಸೇರಿದಂತೆ ಹಲವು ಕಾರ್ಯಕ್ರಮ
-
ಬೆಂಗಳೂರು22 ಗಂಟೆಗಳು agoEid Milad ಮೆರವಣಿಗೆ ಗಲಾಟೆ: ಪುನೀತ್ ಕೆರೆಹಳ್ಳಿ ಸೇರಿ ಹಲವರ ವಿರುದ್ಧ FIR, 6 ಮಂದಿ ಬಂಧನ
-
ಬೆಂಗಳೂರು20 ಗಂಟೆಗಳು agoBengaluru ಪಾರ್ಕ್ ಜಾಗ ಬಳಕೆಗೆ ವಿರೋಧ: ಸರ್ಕಾರದ ವಿರುದ್ಧ ಸಿಡಿದೆದ್ದ ನಾಗರಿಕರು, 6 ಪ್ರಮುಖ ಬೇಡಿಕೆ
-
ರಾಜ್ಯ20 ಗಂಟೆಗಳು agoMysuru ರಲ್ಲೂ ಭೂಸ್ವಾಧೀನ ವಿವಾದ: 165 ಎಕರೆ ಕೃಷಿ ಭೂಮಿಗೆ KIADB ನೋಟಿಸ್, ರೈತರ ಆಕ್ರೋಶ
-
ಬೆಂಗಳೂರು16 ಗಂಟೆಗಳು agoLiver ಚಿಕಿತ್ಸೆಗೆ ಗುಡ್ ನ್ಯೂಸ್: ಹಲವು ತಜ್ಞರು ಒಂದೇ ಕಡೆ, ರೋಗಿಗಳಿಗೆ ಸುಲಭ ಚಿಕಿತ್ಸೆ
