Connect with us

ಬೆಂಗಳೂರು

ವಿಧಾನಸೌಧ ವಾಸ್ತು ಪ್ರಕಾರ ನಿರ್ಮಾಣಗೊಂಡಿದೆ: ‘ಶಕ್ತಿಸೌಧ’ ನವೀಕರಣ ವಿಚಾರದಲ್ಲಿ ಹೊರಟ್ಟಿ -ಖಾದರ್ ನಡುವೆ ಜಟಾಪಟಿ

Published

on

ಬೆಂಗಳೂರು: 16ನೇ ವಿಧಾನಸಭೆಯ 4ನೇ ಮುಂಗಾರು ಅಧಿವೇಶನ ಜುಲೈ 15 ರಿಂದ ಜುಲೈ 26 ರವರೆಗೆ ನಡೆಯಲಿದೆ. ಒಟ್ಟು 9 ದಿನಗಳ ಕಾಲ ಅಧಿವೇಶನ ನಡೆಯಲಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಎಪ್ಪತ್ತು ವರ್ಷಗಳ ನಂತರ ವಿಧಾನಸಭೆ ಪ್ರವೇಶದ್ವಾರದ ಬಳಿ ಸ್ವಲ್ಪ ಬದಲಾವಣೆ ಮಾಡಿದ್ದೇವೆ. ಕಬ್ಬಿಣದ ಗ್ರಿಲ್ ರೀತಿ ಇತ್ತು. ವಿಶಿಷ್ಠ ರೀತಿಯಲ್ಲಿ ಬದಲಾವಣೆ ಮಾಡಲಾಗಿದೆ. ಜುಲೈ 15 ರಂದು ಬೆಳಗ್ಗೆ 10.30 ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪ್ರವೇಶದ್ವಾರವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು ಸ್ಪೀಕರ್ ಯು.ಟಿ ಖಾದರ್ ತಿಳಿಸಿದರು. ಸೋಮವಾರದಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಮುಂಬರುವ ಮುಂಗಾರು ಅಧಿವೇಶನದ ಕುರಿತು ವಿವರ ನೀಡಲು ವಿಧಾನಸಭಾಧ್ಯಕ್ಷ ಖಾದರ್ ಮತ್ತು ಪರಿಷತ್ ಸಭಾಪತಿ ಹೊರಟ್ಟಿ ಶುಕ್ರವಾರ ಸುದ್ದಿಗೋಷ್ಠಿ ಕರೆದಿದ್ದ ವೇಳೆ ಈ ಭಿನ್ನಮತ ಕಂಡು ಬಂದಿದೆ.

ವಿಧಾನಸೌಧ ಸೌಂದರ್ಯೀಕರಣ ವಿಚಾರದಲ್ಲಿ ಸ್ಪೀಕರ್‌ ಖಾದರ್‌ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಭಿನ್ನಧ್ವನಿ ಪ್ರಕಟಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. . ಮೊದಲು ಖಾದರ್‌ ಮಾತನಾಡಿ, 70 ವರ್ಷದ ಬಳಿಕ ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ದ್ವಾರವನ್ನು ಬದಲಾವಣೆ ಮಾಡಲಾಗುತ್ತಿದೆ. ಇಲ್ಲಿ ಮೊದಲು ಕಬ್ಬಿಣದ ಗ್ರಿಲ್‌ ಇತ್ತು. ದೇಶ-ವಿದೇಶದ ಗಣ್ಯರು ಭೇಟಿ ನೀಡಲು ಬಂದಾಗ ಇದು ಸೊಗಸಾಗಿ ಕಾಣುತ್ತಿರಲಿಲ್ಲ. ಹೀಗಾಗಿ ದ್ವಾರವನ್ನು ಸುಂದರವಾಗಿ ರೂಪಿಸಲಾಗಿದ್ದು ಜುಲೈ 15ರಂದು 10.30ಕ್ಕೆ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಭವಿಷ್ಯದಲ್ಲಿ ಸಂಪೂರ್ಣ ವಿಧಾನಸೌಧವನ್ನು ಪರಂಪರೆಗೆ ಧಕ್ಕೆಯಾಗದಂತೆ ಸೌಂದರ್ಯೀಕರಿಸಲಾಗುವುದು ಎಂದು ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಹೊರಟ್ಟಿ, ಪರೋಕ್ಷವಾಗಿ ವಿರೋಧಿಸಿದರು. ವಿಧಾನಸೌಧದ ಕೊಠಡಿಗಳ ಮೂಲೆಯನ್ನು ಬದಲಾಯಿಸಬಾರದು ಎಂಬ ನಿಯಮವೇ ಇದೆ. ಈ ಹಿಂದೆ ಸಚಿವರೊಬ್ಬರು ಗೋಡೆ ಒಡೆದು ವಿವಾದಕ್ಕೆ ಕಾರಣವಾಗಿದ್ದರು. ಸಣ್ಣಪುಟ್ಟ ಬದಲಾವಣೆ ಬೇಕಾದರೆ ಮಾಡಿಕೊಳ್ಳಬಹುದು. ಆದರೆ ಸಂಪೂರ್ಣವಾಗಿ ಗೋಡೆ ಒಡೆಯುವುದಕ್ಕೆ ಅವಕಾಶವೇ ಇಲ್ಲ. ಇತಿಹಾಸವನ್ನು ಸ್ವಲ್ಪ ಓದಿದರೆ ಗೊತ್ತಾಗುತ್ತದೆ, ವಿಧಾನಸೌಧದಲ್ಲಿ ವಾಸ್ತು ಪ್ರಕಾರ ನವೀಕರಣ ಮಾಡುವ ಅಗತ್ಯವೇ ಇಲ್ಲ. ಏಕೆಂದರೆ ಇಡೀ ವಿಧಾನಸೌಧ ವಾಸ್ತು ಪ್ರಕಾರ ನಿರ್ಮಾಣಗೊಂಡಿದೆ ಎಂದರು..

ಅಧಿವೇಶನ ಸಮಯಕ್ಕೆ ಸರಿಯಾಗಿ ಹಾಜರಾಗುವ ಶಾಸಕರಿಗೆ ಟೀ ಕಪ್ ನೀಡಲಾಗುವುದು. ಕಳೆದ ಬಾರಿ ನೀಡಿದ ಅವಕಾಶ ಈ ಬಾರಿಯೂ ನೀಡುತ್ತೇವೆ. ಇಡೀ‌ ದಿನ ಇರುವ ಸದಸ್ಯರುಗಳಿಗೆ ವಿಶೇಷ ಅವಕಾಶ ನೀಡಲಾಗುತ್ತದೆ. ಹೊಸ ತಂತ್ರಜ್ಞಾನ ಮೂಲಕ ಶಾಸಕರು ಎಷ್ಟುತ್ತಿಗೆ ಬರುತ್ತಾರೆ, ಹೋಗುತ್ತಾರೆ ಎಂದು ತಿಳಿದುಕೊಳ್ಳಲಾಗುವುದು. ಒಬ್ಬ ಸದಸ್ಯ ಅಧಿವೇಶನದ ಒಳಗೆ ಎಷ್ಟೊತ್ತು ಕುಳಿತಿದ್ದಾರೆ ಎಂಬ ಮಾಹಿತಿ ಪಡೆದುಕೊಳ್ಳುತ್ತೇವೆ ಎಂದರು. ಕ್ರೀಡೆಗೆ ಪ್ರೋತ್ಸಾಹ ನೀಡಲು ಶಾಸಕರು, ವಿಧಾನಮಂಡಲದ ಸಿಬ್ಬಂದಿಗೆ ಕಪ್ ಇಡಲಾಗಿದೆ. ವಿಧಾನಸೌಧದ ಬ್ಯಾಕ್ವೆಂಟ್ ಹಾಲ್​ನಲ್ಲಿ ಜು.20 ರಂದು ಚೆಸ್ ಸ್ಪರ್ಧೆ ಏರ್ಪಡಿಸಲಾಗಿದೆ. ವಿಧಾನಸಭೆ ಮತ್ತು‌ ವಿಧಾನ ಪರಿಷತ್​ನ ಸದಸ್ಯರು ಭಾಗಿಯಾಗಬಹುದು. ಗೆದ್ದವರಿಗೆ ಬಹುಮಾನ ನೀಡುತ್ತೇವೆ. ಕಲಾಪ‌ ವೀಕ್ಷಣೆಗೆ ಬರುವ ಮಕ್ಕಳು, ವಿದ್ಯಾರ್ಥಿಗಳಿಗೆ ಎಂದಿನಂತೆ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು.

ಈ ವೇಳೆ, ಶಾಸಕ ಬಿ.ನಾಗೇಂದ್ರ ಅವರನ್ನು ವಶಕ್ಕೆ ಪಡೆದ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್​, ಇಡಿ ಅವರು ನಮಗೆ ಮಾಹಿತಿ ನೀಡಿಲ್ಲ. ಅಧಿವೇಶನದ ಒಳಗೆ ಇದ್ದರೆ ನಮ್ಮ ಅನುಮತಿ ಪಡೆಯಬೇಕು. ಹೊರಗಿದ್ದರೆ ಒಬ್ಬ ಶಾಸಕರನ್ನು ವಶಕ್ಕೆ ತೆಗೆದುಕೊಳ್ಳುವಾಗ ಸ್ಪೀಕರ್ ಅವರಿ​ಗೆ ಮಾಹಿತಿ ನೀಡಬೇಕಾಗುತ್ತದೆ. ಆದರೆ ಆ ಬಗ್ಗೆ ಮಾಹಿತಿ ಬಂದಿಲ್ಲ ಎಂದು ಹೇಳಿದರು.

ಬೆಂಗಳೂರು

Liver ಚಿಕಿತ್ಸೆಗೆ ಗುಡ್ ನ್ಯೂಸ್: ಹಲವು ತಜ್ಞರು ಒಂದೇ ಕಡೆ, ರೋಗಿಗಳಿಗೆ ಸುಲಭ ಚಿಕಿತ್ಸೆ

Published

on

By

ಬೆಂಗಳೂರು: ಯಕೃತ್ತಿನಲ್ಲಿ ಕಂಡುಬರುವ ಗಂಟು, ಗೆಡ್ಡೆ ಹಾಗೂ ಅಸಹಜ ಬೆಳವಣಿಗೆಗಳಿಗೆ ಸಮನ್ವಯದ ತಪಾಸಣೆ, ನಿಖರ ರೋಗನಿರ್ಣಯ ಮತ್ತು ಸಮಗ್ರ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಬೆಂಗಳೂರಿನ ಕೆಂಗೇರಿಯಲ್ಲಿರುವ ಫೋರ್ಟಿಸ್ ಹೆಲ್ತ್‌ಕೇರ್ ಜಾಲದ ಭಾಗವಾಗಿರುವ ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ ಕರ್ನಾಟಕದ ಮೊದಲ ಪ್ರತ್ಯೇಕ ಲಿವರ್ ನೊಡ್ಯೂಲ್ ಕ್ಲಿನಿಕ್ ಆರಂಭಿಸಲಾಗಿದೆ.

ರೋಗಿಗಳು ವಿವಿಧ ವೈದ್ಯರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಒಂದೇ ರೀತಿಯ ಪರೀಕ್ಷೆಗಳನ್ನು ಪುನರಾವರ್ತಿಸುವ ಅಗತ್ಯವನ್ನು ಕಡಿಮೆ ಮಾಡುವುದು ಕ್ಲಿನಿಕ್‌ನ ಪ್ರಮುಖ ಉದ್ದೇಶವಾಗಿದೆ. ಯಕೃತ್ತಿನ ತಜ್ಞರು, ಲಿವರ್ ಟ್ರಾನ್ಸ್‌ಪ್ಲಾಂಟ್ ಮತ್ತು ಎಚ್‌ಪಿಬಿ ಸರ್ಜರಿ ತಜ್ಞರು, ಜಠರ-ಕರುಳಿನ ತಜ್ಞರು, ರೇಡಿಯಾಲಜಿಸ್ಟ್‌ಗಳು, ಕ್ಯಾನ್ಸರ್ ತಜ್ಞರು, ರೋಗಶಾಸ್ತ್ರ ತಜ್ಞರು ಹಾಗೂ ಪೌಷ್ಟಿಕ ಆಹಾರ ತಜ್ಞರು ಒಂದೇ ತಂಡವಾಗಿ ರೋಗಿಯ ಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.

ವೈದ್ಯಕೀಯ ಜಠರರೋಗ ಶಾಸ್ತ್ರ, ಹೆಪಟಾಲಜಿ ಮತ್ತು ಸುಧಾರಿತ ಎಂಡೋಸ್ಕೋಪಿ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಸಲಹೆಗಾರ ಡಾ. ಆದರ್ಶ್ ಸಿ.ಕೆ. ಮಾತನಾಡಿ, ನಿಯಮಿತ ತಪಾಸಣೆ ವೇಳೆ ಯಕೃತ್ತಿನ ಗೆಡ್ಡೆಗಳು ಮತ್ತು ದ್ರವ ತುಂಬಿದ ಚೀಲಗಳು ಆಕಸ್ಮಿಕವಾಗಿ ಪತ್ತೆಯಾಗುತ್ತಿರುವುದು ಹೆಚ್ಚಾಗಿದೆ. ಇವುಗಳಲ್ಲಿ ಅನೇಕವು ಅಪಾಯಕಾರಿಯಲ್ಲದಿದ್ದರೂ, ಕೆಲವು ಯಕೃತ್ತಿನ ಕಾಯಿಲೆ ಅಥವಾ ಆರಂಭಿಕ ಹಂತದ ಕ್ಯಾನ್ಸರ್‌ನ ಸೂಚನೆಯಾಗಿರಬಹುದು. ಹೀಗಾಗಿ ಯಾವ ಗೆಡ್ಡೆಗೆ ಚಿಕಿತ್ಸೆ ಬೇಕು ಮತ್ತು ಯಾವುದನ್ನು ಮೇಲ್ವಿಚಾರಣೆ ಮಾಡಿದರೆ ಸಾಕು ಎಂಬುದನ್ನು ಗುರುತಿಸುವುದು ಪ್ರಮುಖ ಸವಾಲಾಗಿದೆ ಎಂದು ಹೇಳಿದ್ದಾರೆ.

ಲಿವರ್ ಟ್ರಾನ್ಸ್‌ಪ್ಲಾಂಟ್ ಮತ್ತು ಎಚ್‌ಪಿಬಿ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಮಹೇಶ್ ಗೋಪಸೆಟ್ಟಿ, ಚಿಕಿತ್ಸೆಯ ನಿರ್ಧಾರವು ಗೆಡ್ಡೆಯ ಗಾತ್ರ ಮತ್ತು ಸ್ಥಳಕ್ಕೆ ಮಾತ್ರ ಸೀಮಿತವಾಗಿರದೆ ಯಕೃತ್ತಿನ ಕಾರ್ಯಕ್ಷಮತೆ ಹಾಗೂ ರೋಗಿಯ ಒಟ್ಟಾರೆ ಆರೋಗ್ಯವನ್ನೂ ಆಧರಿಸಿರಬೇಕು ಎಂದು ತಿಳಿಸಿದ್ದಾರೆ. ಸಮಗ್ರ ಮೌಲ್ಯಮಾಪನದಿಂದ ಸೂಕ್ತ ಚಿಕಿತ್ಸೆಯನ್ನು ಆಯ್ಕೆ ಮಾಡುವುದರ ಜೊತೆಗೆ, ಅಗತ್ಯವಿಲ್ಲದ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಬಹುದು ಎಂದಿದ್ದಾರೆ.

ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಬಗಲಿ ಮಾತನಾಡಿ, ಕರ್ನಾಟಕದ ಮೊದಲ ಪ್ರತ್ಯೇಕ ಲಿವರ್ ನೊಡ್ಯೂಲ್ ಕ್ಲಿನಿಕ್ ಆರಂಭಿಸಿರುವುದು ರೋಗಿ ಕೇಂದ್ರಿತ ಹಾಗೂ ವಿವಿಧ ವೈದ್ಯಕೀಯ ವಿಭಾಗಗಳ ಸಮನ್ವಯದ ಆರೋಗ್ಯ ಸೇವೆ ಒದಗಿಸುವ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಅತ್ಯಾಧುನಿಕ ವೈದ್ಯಕೀಯ ಪರಿಣತಿಯನ್ನು ಒಂದೇ ವ್ಯವಸ್ಥೆಯಲ್ಲಿ ಒದಗಿಸುವ ಮೂಲಕ ಚಿಕಿತ್ಸಾ ಫಲಿತಾಂಶ ಮತ್ತು ರೋಗಿಗಳ ಅನುಭವ ಸುಧಾರಿಸುವುದು ಕ್ಲಿನಿಕ್‌ನ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಯಕೃತ್ತಿನ ಚೀಲಗಳು, ರಕ್ತನಾಳದ ಗೆಡ್ಡೆಗಳು, ಫೋಕಲ್ ನೊಡ್ಯುಲರ್ ಹೈಪರ್‌ಪ್ಲಾಸಿಯಾ, ಯಕೃತ್ತಿನ ಕ್ಯಾನ್ಸರ್, ದೇಹದ ಇತರ ಭಾಗಗಳಿಂದ ಯಕೃತ್ತಿಗೆ ಹರಡಿದ ಕ್ಯಾನ್ಸರ್ ಹಾಗೂ ಸಂಕೀರ್ಣ ಯಕೃತ್ತಿನ ಗೆಡ್ಡೆಗಳಿಗೆ ಇಲ್ಲಿ ಸಮಗ್ರ ಮೌಲ್ಯಮಾಪನ ಮತ್ತು ಚಿಕಿತ್ಸಾ ಸಲಹೆ ದೊರೆಯಲಿದೆ. ರೋಗನಿರ್ಣಯದ ನಿಖರತೆ ಹೆಚ್ಚಿಸುವುದು ಮತ್ತು ಚಿಕಿತ್ಸೆಯಲ್ಲಿನ ವಿಳಂಬ ಕಡಿಮೆ ಮಾಡುವುದು ಕ್ಲಿನಿಕ್‌ನ ಪ್ರಮುಖ ಗುರಿಯಾಗಿದೆ.

Continue Reading

ಬೆಂಗಳೂರು

Bengaluru ನಲ್ಲಿ ಖಾಲಿ ಸೈಟ್ ಮಾಲೀಕರಿಗೆ ಬಿಗ್ ಶಾಕ್: ಕಸ ತೆರವು ಮಾಡದಿದ್ದರೆ ₹38,400 ದಂಡ, ದೊಡ್ಡ ಸೈಟ್‌ಗೆ ಲಕ್ಷಕ್ಕೂ ಹೆಚ್ಚು!

Published

on

By

ಬೆಂಗಳೂರು: Bengaluru ನಲ್ಲಿ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಕಸ ಹಾಗೂ ಕಟ್ಟಡ ನಿರ್ಮಾಣದ ತ್ಯಾಜ್ಯವನ್ನು ಹಾಗೆಯೇ ಬಿಟ್ಟಿರುವ ಆಸ್ತಿ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬಿಗ್ ಶಾಕ್ ನೀಡಿದೆ. ಆಗಸ್ಟ್ 27ರಿಂದ ನಗರದಾದ್ಯಂತ ಖಾಲಿ ನಿವೇಶನಗಳ ಸ್ವಚ್ಛತಾ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ನಿಯಮ ಉಲ್ಲಂಘಿಸುವ ಮಾಲೀಕರಿಗೆ ಭಾರಿ ದಂಡ ವಿಧಿಸಲು ನಿರ್ಧರಿಸಲಾಗಿದೆ.

ಶಾಂತಿನಗರದಲ್ಲಿ ವಿಶೇಷ ಅಭಿಯಾನಕ್ಕೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷ ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಉಪಸ್ಥಿತರಿದ್ದರು.

ಖಾಲಿ ಸೈಟ್‌ ಸ್ವಚ್ಛವಾಗಿಡುವುದು ಕಡ್ಡಾಯ

2020ರ ಘನತ್ಯಾಜ್ಯ ನಿರ್ವಹಣೆ ಉಪನಿಯಮಗಳ ಬೈಲಾ 18(1)(b) ಪ್ರಕಾರ, ಪ್ರತಿಯೊಬ್ಬ ಆಸ್ತಿ ಮಾಲೀಕರು ತಮ್ಮ ಖಾಲಿ ನಿವೇಶನಗಳನ್ನು ನೈರ್ಮಲ್ಯಯುತವಾಗಿ ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ.

ಈಗಾಗಲೇ ಆಗಸ್ಟ್ 15ರೊಳಗೆ ಖಾಲಿ ಸೈಟ್‌ಗಳಲ್ಲಿರುವ ಕಸ ಮತ್ತು ತ್ಯಾಜ್ಯವನ್ನು ಸ್ವತಃ ತೆರವುಗೊಳಿಸುವಂತೆ ಮಾಲೀಕರಿಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಗಡುವು ಮುಗಿದರೂ ಸ್ವಚ್ಛಗೊಳಿಸದ ನಿವೇಶನಗಳ ವಿರುದ್ಧ ಇದೀಗ ಜಿಬಿಎ ನೇರವಾಗಿ ಕ್ರಮ ಕೈಗೊಳ್ಳಲಿದೆ.

ಕಸ ತೆರವು ಮಾಡದಿದ್ದರೆ ಭಾರಿ ದಂಡ!

ಮಾಲೀಕರು ತಮ್ಮ ಜಾಗವನ್ನು ಸ್ವಚ್ಛಗೊಳಿಸದಿದ್ದರೆ, ಪ್ರಾಧಿಕಾರವೇ ನಿವೇಶನದಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸಲಿದೆ. ಇದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ದಂಡದ ರೂಪದಲ್ಲಿ ಆಸ್ತಿ ತೆರಿಗೆಯೊಂದಿಗೆ ಸೇರಿಸಿ ವಸೂಲಿ ಮಾಡಲಾಗುತ್ತದೆ.

ನಿವೇಶನದ ಗಾತ್ರಕ್ಕೆ ಅನುಗುಣವಾಗಿ ದಂಡದ ಮೊತ್ತವೂ ಬದಲಾಗಲಿದೆ.

  • 20×30 ಸೈಟ್‌: ₹19,200ರಿಂದ ದಂಡ
  • 30×40 ಸೈಟ್‌: ₹38,400ರವರೆಗೆ ದಂಡ
  • ದೊಡ್ಡ ನಿವೇಶನಗಳು: ₹1 ಲಕ್ಷಕ್ಕೂ ಅಧಿಕ ದಂಡ ಬೀಳುವ ಸಾಧ್ಯತೆ

ಹೀಗಾಗಿ ಖಾಲಿ ಸೈಟ್‌ ಹೊಂದಿರುವವರು ತಕ್ಷಣವೇ ತಮ್ಮ ನಿವೇಶನದಲ್ಲಿರುವ ಕಸ, ಕಟ್ಟಡ ತ್ಯಾಜ್ಯ ಸೇರಿದಂತೆ ಎಲ್ಲ ರೀತಿಯ ತ್ಯಾಜ್ಯವನ್ನು ತೆರವುಗೊಳಿಸುವುದು ಸೂಕ್ತವಾಗಿದೆ.

ಮಾಲೀಕರೇ ಕಸ ಒಟ್ಟುಗೂಡಿಸಿದರೆ ಹೆಚ್ಚುವರಿ ಶುಲ್ಕವಿಲ್ಲ

ಆಸ್ತಿ ಮಾಲೀಕರು ಸ್ವತಃ ಮುಂದೆ ನಿಂತು ನಿವೇಶನದಲ್ಲಿರುವ ಕಸ ಮತ್ತು ತ್ಯಾಜ್ಯವನ್ನು ಒಂದೆಡೆ ಒಟ್ಟುಗೂಡಿಸಿದರೆ, ಅದನ್ನು ಪಾಲಿಕೆಯೇ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ವಿಲೇವಾರಿ ಮಾಡಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಬೆಂಗಳೂರಿನ ಖಾಲಿ ನಿವೇಶನಗಳು ಕಸ ಹಾಕುವ ಸ್ಥಳಗಳಾಗುವುದನ್ನು ತಡೆಯುವುದು ಹಾಗೂ ನಗರವನ್ನು ಸ್ವಚ್ಛವಾಗಿಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Continue Reading

ಬೆಂಗಳೂರು

Bengaluru ಪಾರ್ಕ್‌ ಜಾಗ ಬಳಕೆಗೆ ವಿರೋಧ: ಸರ್ಕಾರದ ವಿರುದ್ಧ ಸಿಡಿದೆದ್ದ ನಾಗರಿಕರು, 6 ಪ್ರಮುಖ ಬೇಡಿಕೆ

Published

on

By

ಬೆಂಗಳೂರು: ರಾಜ್ಯ ಸರ್ಕಾರದ ಮೂಲಸೌಕರ್ಯ ಯೋಜನೆಗಳಿಗೆ Bengaluru ರಿನ ಉದ್ಯಾನವನ ಹಾಗೂ ಉದ್ಯಾನಗಳ ಜಾಗವನ್ನು ಬಳಸಿಕೊಳ್ಳುವ ಸಚಿವ ಸಂಪುಟದ ನಿರ್ಧಾರಕ್ಕೆ ನಾಗರಿಕರು ಮತ್ತು ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಪಾರ್ಕ್‌ಗಳ ಭೂಮಿಯನ್ನು ಇತರ ಕಾಮಗಾರಿಗಳಿಗೆ ಬಳಸುವುದರಿಂದ ನಗರದ ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಲಾಲ್‌ಬಾಗ್‌ನಲ್ಲಿ ಬೃಹತ್ ಬ್ಯಾನರ್‌ಗಳನ್ನು ಪ್ರದರ್ಶಿಸುವ ಮೂಲಕ ನಾಗರಿಕರು ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಮುಖ್ಯಮಂತ್ರಿ ಅವರಿಗೆ ಜಂಟಿ ಮನವಿ ಸಲ್ಲಿಸಿ, ಉದ್ಯಾನವನಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ನಾಗರಿಕ ಸಂಘಟನೆಗಳ ಪ್ರಕಾರ, ಉದ್ಯಾನವನಗಳು ಖಾಲಿ ಜಾಗವಲ್ಲ. ಅವು ನಗರದ ಉಷ್ಣಾಂಶ ನಿಯಂತ್ರಣ, ಮಳೆನೀರು ನಿರ್ವಹಣೆ, ಜೀವವೈವಿಧ್ಯ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಮೂಲಸೌಕರ್ಯಗಳಾಗಿವೆ.

ಸಂಶೋಧನೆಗಳನ್ನು ಉಲ್ಲೇಖಿಸಿರುವ ಸಂಘಟನೆಗಳು, ಬೆಂಗಳೂರಿನ ಹಸಿರು ಪ್ರದೇಶಗಳು ಸುತ್ತಮುತ್ತಲಿನ ಪ್ರದೇಶಗಳಿಗಿಂತ ಸರಾಸರಿ 2.23 ಡಿಗ್ರಿ ಸೆಲ್ಸಿಯಸ್‌ವರೆಗೆ ತಂಪಾಗಿರುತ್ತವೆ ಎಂದು ಹೇಳಿದ್ದಾರೆ. ಉದ್ಯಾನವನಗಳಿಂದ ಉಂಟಾಗುವ ಈ ತಂಪಿನ ಪರಿಣಾಮ ಸುಮಾರು 347 ಮೀಟರ್‌ ವ್ಯಾಪ್ತಿಯವರೆಗೆ ಕಂಡುಬರುತ್ತದೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.

ಶೇ.28ರಷ್ಟು ವಾರ್ಡ್‌ಗಳಲ್ಲಿ ಪಾರ್ಕ್‌ಗಳೇ ಇಲ್ಲ!

ಐಐಹೆಚ್‌ಎಸ್‌ ಸಂಶೋಧನೆಯನ್ನು ಉಲ್ಲೇಖಿಸಿರುವ ನಾಗರಿಕ ಗುಂಪುಗಳು, ಬೆಂಗಳೂರಿನ ಸುಮಾರು 28 ಪ್ರತಿಶತ ವಾರ್ಡ್‌ಗಳಲ್ಲಿ ಒಂದೇ ಒಂದು ಉದ್ಯಾನವನ ಅಥವಾ ಸೂಕ್ತ ಹಸಿರು ಪ್ರದೇಶವಿಲ್ಲ ಎಂದು ಹೇಳಿದ್ದಾರೆ. ಈಗಿರುವ ಉದ್ಯಾನವನಗಳ ಜಾಗವನ್ನೂ ಮೂಲಸೌಕರ್ಯ ಯೋಜನೆಗಳಿಗೆ ಬಳಸಿಕೊಂಡರೆ ಪರಿಸರದ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಲಿದೆ ಎಂದು ಎಚ್ಚರಿಸಿದ್ದಾರೆ.

ಸರ್ಕಾರದ ಮುಂದೆ 6 ಪ್ರಮುಖ ಬೇಡಿಕೆ

ನಾಗರಿಕ ಸಂಘಟನೆಗಳು ಸರ್ಕಾರದ ಮುಂದೆ ಪ್ರಮುಖವಾಗಿ ಆರು ಬೇಡಿಕೆಗಳನ್ನು ಇಟ್ಟಿವೆ.

  1. ಕರ್ನಾಟಕ ಸರ್ಕಾರಿ ಉದ್ಯಾನವನಗಳ ಸಂರಕ್ಷಣೆ ಕಾಯ್ದೆಗೆ ಉದ್ದೇಶಿಸಿರುವ ತಿದ್ದುಪಡಿಯನ್ನು ಹಿಂಪಡೆಯಬೇಕು.
  2. ಅಸ್ತಿತ್ವದಲ್ಲಿರುವ ಉದ್ಯಾನವನಗಳನ್ನು ನಿರ್ಮಾಣ ಕಾಮಗಾರಿಗಳಿಗೆ ಬಳಸುವುದನ್ನು ತಡೆಯಬೇಕು.
  3. ಯೋಜನೆಗಳಿಗೆ ಉದ್ಯಾನವನಗಳನ್ನು ಹೊರತುಪಡಿಸಿ ಪರ್ಯಾಯ ಜಾಗಗಳನ್ನು ಮೊದಲು ಪರಿಶೀಲಿಸಬೇಕು.
  4. ಹಸಿರು ಪ್ರದೇಶಗಳಿಗೆ ಸಂಬಂಧಿಸಿದ ಯೋಜನೆಗಳ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು.
  5. ಪರಿಸರ, ಸಾಮಾಜಿಕ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಯೋಜನೆಗಳ ಪರಿಣಾಮದ ಸಮಗ್ರ ಅಧ್ಯಯನ ನಡೆಸಬೇಕು.
  6. ನಗರ ಯೋಜನೆಯಲ್ಲಿ ಉದ್ಯಾನವನಗಳನ್ನು ಅತ್ಯಗತ್ಯ ಸಾರ್ವಜನಿಕ ಆಸ್ತಿಯಾಗಿ ಗುರುತಿಸಿ ರಕ್ಷಿಸಬೇಕು.

ಬೆಂಗಳೂರು ನಗರಕ್ಕೆ ಇನ್ನಷ್ಟು ಹಸಿರು ಪ್ರದೇಶಗಳ ಅಗತ್ಯವಿದೆ. ಇರುವ ಉದ್ಯಾನವನಗಳ ಜಾಗವನ್ನು ಕಡಿಮೆ ಮಾಡುವ ಬದಲು ಅವುಗಳನ್ನು ಮತ್ತಷ್ಟು ಸಂರಕ್ಷಿಸಿ ವಿಸ್ತರಿಸಬೇಕು ಎಂದು ನಾಗರಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Continue Reading

Trending