ರಾಜ್ಯ
ಕೆಆರ್ಎಸ್ ಡ್ಯಾಂನಿಂದ 1.3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಎಚ್ಚರ ವಹಿಸಲು ಜನರಿಗೆ ಸೂಚನೆ – KRS Dam Water Released
ಕೆಆರ್ಎಸ್ ಡ್ಯಾಂನಿಂದ 1.3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಎಚ್ಚರ ವಹಿಸಲು ಜನರಿಗೆ ಸೂಚನೆ
ಮಂಡ್ಯ: ಕಾವೇರಿ ಕಣಿವೆಯಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಕಾವೇರಿ ನದಿ ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಕೆಆರ್ಎಸ್ ಅಣೆಕಟ್ಟೆಗೆ 1 ಲಕ್ಷ ಕ್ಯೂಸೆಕ್ಗೂ ಹೆಚ್ಚು ಒಳಹರಿವು ಇರುವುದರಿಂದ 1,30,000 ಕ್ಯೂಸೆಕ್ಗೂ ಹೆಚ್ಚು ನೀರನ್ನು ಅಣೆಕಟ್ಟೆಯಿಂದ ಬಿಡುಗಡೆ ಮಾಡಲಾಗುತ್ತಿದೆ.
ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿ ಬಿಟ್ಟಿರುವುದರಿಂದ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮ, ಪಶ್ಚಿಮ ವಾಹಿನಿ, ಸ್ನಾನಘಟ್ಟೆ, ಶ್ರೀಸಾಯಿ ಮಂದಿರ, ವೆಲ್ಲೆಸ್ಲಿ ಸೇತುವೆ, ಕೋಟೆ ಗಣಪತಿ ದೇವಸ್ಥಾನ ಭಾಗಶಃ ಮುಳುಗಡೆಯಾಗಿದೆ. ನಿಮಿಷಾಂಬ ದೇವಾಲಯದ ಮೆಟ್ಟಿಲುಗಳವರೆಗೆ ನದಿಯ ನೀರು ಏರಿಕೆಯಾಗಿದ್ದು, ದೇವಾಲಯದ ಮುಂಭಾಗದ ರಸ್ತೆಯೂ ಜಲಾವೃತವಾಗಿದೆ. ಅಲ್ಲದೇ ಕಾವೇರಿ ನದಿ ತೀರದ ತಗ್ಗು ಪ್ರದೇಶಗಳು ಭಾಗಶಃ ಮುಳುಗಡೆಗೊಂಡಿವೆ. ಕೆಲವೆಡೆ ಜಮೀನುಗಳಿಗೆ ನೀರು ನುಗ್ಗಿದ್ದು, ಭತ್ತದ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದ ರೈತರಿಗೆ ಸಂಕಷ್ಟ ತಂದೊಡ್ಡಿದೆ.
ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ: ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿನ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿರುವ ಹಾಗೂ ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ಹಾಗೂ ರೈತರು ತಮ್ಮ ಆಸ್ತಿ – ಪಾಸ್ತಿ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಧಿಕಾರಿ ಡಾ.ಕುಮಾರ ಮನವಿ ಮಾಡಿದ್ದಾರೆ.
ದೇಶ
Cockroach Janata Party ಗೆ ಬೆಂಗಳೂರು ಪೊಲೀಸರ ಶಾಕ್! ಟೌನ್ ಹಾಲ್ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ಗೆ ಇದೀಗ Bengaluru City Police ದೊಡ್ಡ ಶಾಕ್ ನೀಡಿದೆ. ಮೇ 24ರಂದು ಟೌನ್ ಹಾಲ್ ಬಳಿ ಆಯೋಜಿಸಲು ಯೋಜಿಸಲಾಗಿದ್ದ ಶಾಂತಿಯುತ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಿಲ್ಲ ಎಂದು ಬೆಂಗಳೂರು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಪೋಸ್ಟ್‌ಗಳಲ್ಲಿ, ಬೆಳಗ್ಗೆ 11 ಗಂಟೆಗೆ ಟೌನ್ ಹಾಲ್ ಬಳಿ ಮಾನವ ಸರಪಳಿ ನಿರ್ಮಿಸಲು ಕರೆ ನೀಡಲಾಗಿತ್ತು. ಆದರೆ ಈ ಸಂಬಂಧ ಯಾವುದೇ ಅಧಿಕೃತ ಮನವಿ ಪೊಲೀಸ್ ಇಲಾಖೆಗೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಅರ್ಜಿ ಸಲ್ಲಿಸಿದರೂ ಟೌನ್ ಹಾಲ್ ಪ್ರದೇಶದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ ಎಂದು ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
Town Hall Bengaluru ಬಳಿ ಧರಣಿ, ಪ್ರತಿಭಟನೆ ಅಥವಾ ಮೆರವಣಿಗೆಗಳಿಗೆ ಅನುಮತಿ ನೀಡಬಾರದು ಎಂಬ High Court of Karnataka ಆದೇಶ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ Freedom Park ಹೊರತುಪಡಿಸಿ ನಗರದ ಬೇರೆ ಭಾಗಗಳಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು Abhijeet Dipke ಸ್ಥಾಪಿಸಿದ್ದು, ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿತ್ತು. ಪಕ್ಷದ ಎಕ್ಸ್ ಖಾತೆ ಒಂದೇ ವಾರದಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಪಡೆದಿತ್ತು. ನಂತರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಸೂಚನೆಯ ಮೇರೆಗೆ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ.
ಇತ್ತೀಚೆಗೆ ಭಾರತದ ಮುಖ್ಯ ನ್ಯಾಯಮೂರ್ತಿ Surya Kant ಯುವಕರನ್ನು ‘ಜಿರಳೆ’ಗಳಿಗೆ ಹೋಲಿಸಿ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಮೀಮ್ಸ್ ಮತ್ತು ಟ್ರೋಲಿಂಗ್‌ಗಳ ನಡುವೆ ‘ಕಾಕ್ರೋಚ್ ಜನತಾ ಪಾರ್ಟಿ’ ಟ್ರೆಂಡ್ ಆಗಿತ್ತು.
ಪಕ್ಷದ ಇನ್‌ಸ್ಟಾಗ್ರಾಮ್ ಖಾತೆಗೆ 5 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್ಸ್ ಸೇರಿದ್ದು, ವೆಬ್‌ಸೈಟ್‌ನಲ್ಲಿ ಲಕ್ಷಾಂತರ ಮಂದಿ ನೋಂದಾಯಿಸಿಕೊಂಡಿದ್ದರು. ಇದೀಗ ಟೌನ್ ಹಾಲ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ ಹೊಸ ಚರ್ಚೆಗೆ ಕಾರಣವಾಗಿದೆ.
ದೇಶ
ವಿಕಾಸ ದಶಕೋತ್ಸವ 2026: ಹಿರಿಯ ಪತ್ರಕರ್ತರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ
ತುಮಕೂರು/ಗುಬ್ಬಿ: ಸಮಾನ ಮನಸ್ಕ ಮಾಧ್ಯಮ ಮಿತ್ರರ ಸಂಘಟನೆಯಾದ ‘ವಿಕಾಸ’ ಸಂಸ್ಥೆ ತನ್ನ ಯಶಸ್ವಿ ಹತ್ತು ವರ್ಷಗಳ ಪಯಣವನ್ನು ಸಂಭ್ರಮಿಸುವ ಅಂಗವಾಗಿ ‘ವಿಕಾಸ ದಶಕದ ಸಂಭ್ರಮ: 2026’ ಹಾಗೂ ತುಮಕೂರು ಜಿಲ್ಲಾ ಸಮಾವೇಶವನ್ನು ಆಯೋಜಿಸಿದೆ. ಮೇ 24, 2026ರ ಭಾನುವಾರ ಬೆಳಿಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೆ ಗುಬ್ಬಿಯ ಪ್ರಸಿದ್ಧ ಶ್ರೀ ಚಿದಂಬರ ಆಶ್ರಮದ ಆವರಣದಲ್ಲಿ ಈ ಭವ್ಯ ಸಮಾವೇಶ ನಡೆಯಲಿದೆ ಎಂದು ತುಮಕೂರು ಜಿಲ್ಲಾ ಸಂಚಾಲಕರಾದ ಭಾರತೀಶ ರಾವ್ ಹೊನ್ನಾಳಿ ಹಾಗೂ ಸುರೇಶ್ ವತ್ಸ ತಿಳಿಸಿದ್ದಾರೆ.
ಕಳೆದ ಒಂದು ದಶಕದಿಂದ ಸಮಾಜಮುಖಿ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ‘ವಿಕಾಸ’ ಸಂಸ್ಥೆ, ರಾಜ್ಯದ ವಿವಿಧ ಜಿಲ್ಲೆಗಳ ಮಾಧ್ಯಮ ಮಿತ್ರರನ್ನು ಒಂದೇ ವೇದಿಕೆಗೆ ತರಲು ಯಶಸ್ವಿಯಾಗಿದೆ. ಪತ್ರಿಕೋದ್ಯಮ, ಡಿಜಿಟಲ್ ಮೀಡಿಯಾ, ವ್ಯಂಗ್ಯಚಿತ್ರ, ವರದಿಗಾರಿಕೆ ಸೇರಿದಂತೆ ಮಾಧ್ಯಮ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವವರನ್ನು ಒಗ್ಗೂಡಿಸಿ ಕ್ರಿಯಾಶೀಲ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸಂಸ್ಥೆಯ ವಿಶೇಷತೆ.
ಗಣ್ಯರಿಂದ ಉದ್ಘಾಟನೆ
ವಿಕಾಸದ ಗೌರವಾಧ್ಯಕ್ಷ ಬಿ.ಎಲ್. ಹನುಮಂತ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾವೇಶವನ್ನು ಖ್ಯಾತ ವೈದಿಕ ಜ್ಯೋತಿಷಿ ಹಾಗೂ ರಾಜಗುರು ದ್ವಾರಕಾನಾಥ ಗುರೂಜಿ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಸೊಗಡು ಶಿವಣ್ಣ, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಹಾಗೂ ಎಸ್.ಆರ್. ಶ್ರೀನಿವಾಸ್ (ವಾಸು), ವಿಜಯವಾಣಿ ಹಿರಿಯ ಉಪ ಪ್ರಧಾನ ಸಂಪಾದಕ ರಾಘವೇಂದ್ರ ಗಣಪತಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಮಾಜಿ ಎಂಎಲ್‌ಸಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ ಹೊಸೂರ, ಖ್ಯಾತ ವಾಗ್ಮಿ ವೈ.ವಿ. ಗುಂಡುರಾವ್, ಆರ್ಟ್ ಆಫ್ ಲಿವಿಂಗ್ ಟ್ರಸ್ಟಿ ರಂಗನಾಥ ಪ್ರಸಾದ್, ಕೈಗಾರಿಕೋದ್ಯಮಿ ಎಚ್.ಜಿ. ಚಂದ್ರಶೇಖರ್ ಹಾಗೂ ಗುಬ್ಬಿ ಶ್ರೀ ಚಿದಂಬರ ಆಶ್ರಮದ ಅಧ್ಯಕ್ಷ ಸಚ್ಚಿದಾನಂದ ಶರ್ಮಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ವಿಶೇಷ ಉಪನ್ಯಾಸ ಮತ್ತು ಚರ್ಚಾಗೋಷ್ಠಿ
ಸಮಾವೇಶದ ಅಂಗವಾಗಿ ‘ಆಧುನಿಕ ಸಮಾಜಕ್ಕೆ ಮನುಸ್ಮೃತಿಯ ಅವಶ್ಯಕತೆ’ ವಿಷಯದ ಕುರಿತು ಡಾ. ರಾಘವೇಂದ್ರ ಭಟ್ಟ ಉಪನ್ಯಾಸ ನೀಡಲಿದ್ದು, ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಮಂಜುನಾಥ ಸ್ವಾಮಿ ಉಪಸ್ಥಿತರಿರಲಿದ್ದಾರೆ.
ಇನ್ನೊಂದು ವಿಶೇಷ ಚರ್ಚಾಗೋಷ್ಠಿಯಲ್ಲಿ ‘ಮಾಧ್ಯಮ ಕ್ಷೇತ್ರದ ಭವಿಷ್ಯ’ ಕುರಿತು ಡಾ. ಆಶಾ ಕೃಷ್ಣಸ್ವಾಮಿ, ಡಾ. ನಂದಿನಿ ಲಕ್ಷ್ಮೀಕಾಂತ್ ಹಾಗೂ ಉದಯ ಕಾಲ ದಿನಪತ್ರಿಕೆಯ ಕಾರ್ಯಕಾರಿ ಸಂಪಾದಕ ಪಿ. ರಾಜೇಂದ್ರ ವಿಚಾರ ಮಂಡನೆ ನಡೆಸಲಿದ್ದಾರೆ.
ಹಿರಿಯ ಪತ್ರಕರ್ತರಿಗೆ ಸನ್ಮಾನ
‘ನಮ್ಮ ಹಿರಿಯರು – ನಮ್ಮ ಹೆಮ್ಮೆ’ ಕಾರ್ಯಕ್ರಮದಡಿ ಹಿರಿಯ ವ್ಯಂಗ್ಯಚಿತ್ರಕಾರ ರಘುಪತಿ ಶೃಂಗೇರಿ, ಶ್ರೀಧರ್ ಕೋಮರವಳ್ಳಿ, ಅಂಕಣಕಾರ ತುರುವೇಕೆರೆ ಪ್ರಸಾದ್, ಹಿರಿಯ ಪತ್ರಕರ್ತರಾದ ಕರ್ಣಂ ರಮೇಶ್, ಸೊಗಡು ಸತ್ಯಣ್ಣ, ಆರ್. ಲಕ್ಷ್ಮಣ್, ಸಿ.ಟಿ. ಜೋಶಿ, ಜಿ.ಎಂ. ಜಗನ್ನಾಥ್, ಎಸ್.ಎನ್. ರಾಜಗೋಪಾಲ್ ಸೇರಿದಂತೆ ಹಲವು ಮಾಧ್ಯಮ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುತ್ತದೆ.
ವಿಕಾಸ ಸ್ಮಾರಕ ಪ್ರಶಸ್ತಿ ಪ್ರದಾನ
‘ವಿಕಾಸ ಸ್ಮಾರಕ ಪ್ರಶಸ್ತಿ – 2026’ಗೆ ಕೆ.ಬಿ. ಚಂದ್ರಮೌಳಿ, ಎಸ್.ಎನ್. ಪ್ರಸನ್ನ ಮೂರ್ತಿ, ವಾಸುದೇವ ಜಹಗೀರದಾರ್, ಕೃಷ್ಣಮೂರ್ತಿ ಚಿ.ಸು., ಸಿ.ಡಿ. ರವಿ, ಆರ್.ಎಸ್. ಅಯ್ಯರ್, ಎನ್.ಎಸ್. ಮಾರುತಿ ಪ್ರಸಾದ್, ಭಾನುಪ್ರಶಾಂತ, ಶ್ರೀನಿವಾಸ್ ಮೂರ್ತಿ, ಗುರುದತ್ತ ಹಾಗೂ ನಾಗಭೂಷಣ ಎಸ್. ಆಯ್ಕೆಯಾಗಿದ್ದಾರೆ.
ಇದೇ ವೇಳೆ ಲೇಖಕ ಪ್ರಕಾಶ್ ನಾಡಿಗ್ ಅವರಿಗೆ ‘ದಿ. ಸುಬ್ಬರಾಯರು ಸ್ಮಾರಕ ವಿಕಾಸ ಪ್ರಶಸ್ತಿ – 2025’ ಪ್ರದಾನ ಮಾಡಲಾಗುತ್ತದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆ.ಎನ್. ವೆಂಕಟನಾರಾಯಣ, ವಾಮಾನಾಚಾರ್ಯ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಡಾ. ಎಸ್. ಸುದರ್ಶನ್ ಉಪಸ್ಥಿತರಿರಲಿದ್ದಾರೆ.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
ಕಾರ್ಯಕ್ರಮದ ಯಶಸ್ಸಿಗಾಗಿ ವಿಕಾಸದ ಪ್ರಧಾನ ಸಂಚಾಲಕ ಬಿ.ವಿ. ಗೋಪಿನಾಥ್, ರಾಜ್ಯಾಧ್ಯಕ್ಷ ಶ್ರೀನಾಥ್ ಜೋಶಿ, ಹಿರಿಯ ಉಪಾಧ್ಯಕ್ಷ ಬಿ.ಎನ್. ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಹನುಮೇಶ್ ಕೆ. ಯಾವಗಲ್, ಖಜಾಂಚಿ ಬಿ.ಎನ್. ಮುರಳಿ ಪ್ರಸಾದ್, ಕಾರ್ಯದರ್ಶಿ ಗೋದಾವರಿ ಡಿ.ಎಸ್. ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
ದೇಶ
Karnataka BJP President: ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿಯುವುದು ಬಹುತೇಕ ಖಚಿತ!
ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ (Karnataka BJP President) ಬಿ.ವೈ. ವಿಜಯೇಂದ್ರ ಅವರೇ ಮುಂದುವರಿಯುವುದು ಬಹುತೇಕ ಖಚಿತವಾಗಿದೆ ಎನ್ನುವ ಮಾಹಿತಿ ಪಕ್ಷದ ಆಂತರಿಕ ವಲಯದಿಂದ ಹೊರಬಿದ್ದಿದೆ. ಪಕ್ಷದ ಹಿರಿಯ ನಾಯಕರು ನಡೆಸಿದ ಆಂತರಿಕ ಅಭಿಪ್ರಾಯ ಸಂಗ್ರಹದಲ್ಲೂ ವಿಜಯೇಂದ್ರ ಪರವಾಗಿ ಬಹುಮತದ ಬೆಂಬಲ ವ್ಯಕ್ತವಾಗಿದ್ದು, ಈ ವರದಿ ಇದೀಗ ಬಿಜೆಪಿ ಹೈಕಮಾಂಡ್‌ಗೆ ಸಲ್ಲಿಕೆಯಾಗಲಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಕುರಿತ ಗೊಂದಲ ಕಳೆದ ಕೆಲವು ವಾರಗಳಿಂದ ಪಕ್ಷದ ಒಳಗೆ ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದೇ ವಿಚಾರ ಪಕ್ಷದ ಸಂಘಟನೆ ಹಾಗೂ ಹೋರಾಟದ ರಾಜಕಾರಣದ ಮೇಲೂ ಪರಿಣಾಮ ಬೀರಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದ ಹಿನ್ನೆಲೆ, ಗೊಂದಲ ನಿವಾರಣೆಗೆ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹ ನಡೆಸಿದ್ದರು.
ಭಾನುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರಾಜ್ಯಕ್ಕೆ ಭೇಟಿ ನೀಡಿದ ಬಳಿಕ ಈ ವರದಿಯನ್ನು ದೆಹಲಿಗೆ ಕಳುಹಿಸುವ ಸಾಧ್ಯತೆ ಇದೆ. ಸೋಮವಾರದ ನಂತರ ಅಧಿಕೃತವಾಗಿ ರಾಷ್ಟ್ರೀಯ ನಾಯಕತ್ವದ ಮುಂದೆ ವರದಿ ಮಂಡನೆಯಾಗಲಿದ್ದು, ಅದರ ಬಳಿಕ ರಾಜ್ಯಾಧ್ಯಕ್ಷರ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.
ವಿಜಯೇಂದ್ರ ಪರ ಬಹುಮತ ಬೆಂಬಲ
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಆಗ್ರಹಿಸಿದ್ದ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಅಭಿಪ್ರಾಯವನ್ನೂ ಸಂಗ್ರಹಿಸಲಾಗಿದೆ. “ರಾಜ್ಯಾಧ್ಯಕ್ಷರನ್ನು ಬದಲಾಯಿಸಬೇಕೇ? ಬದಲಿಸಿದರೆ ಯಾರಿಗೆ ಅವಕಾಶ ನೀಡಬೇಕು?” ಎಂಬ ಪ್ರಶ್ನೆಗಳ ಆಧಾರದಲ್ಲಿ ನಾಯಕರು ಹಾಗೂ ಶಾಸಕರ ಅಭಿಪ್ರಾಯ ಪಡೆದುಕೊಳ್ಳಲಾಗಿದೆ.
ಕೆಲವರು ವಿಜಯೇಂದ್ರ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರೂ, ಬಹುತೇಕ ನಾಯಕರು ಮತ್ತು ಸಂಘಟನಾ ವಲಯ ವಿಜಯೇಂದ್ರ ಪರವೇ ಅಭಿಪ್ರಾಯ ನೀಡಿರುವುದು ಅವರ ಸ್ಥಾನ ಇನ್ನಷ್ಟು ಬಲಪಡಿಸಿದೆ.
ದೆಹಲಿಯಲ್ಲಿ ಮಹತ್ವದ ಚರ್ಚೆ ಸಾಧ್ಯತೆ
ಶಿವಪ್ರಕಾಶ್ ಹಾಗೂ ಬೈಜಯಂತ್ ಪಾಂಡಾ ಈಗಾಗಲೇ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಜೊತೆಗೆ ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ. ರಾಜ್ಯ ಸಂಘಟನೆ, ಮುಂಬರುವ ರಾಜಕೀಯ ಹೋರಾಟಗಳು ಹಾಗೂ ಅಧ್ಯಕ್ಷರ ಆಯ್ಕೆ ಕುರಿತು ಹೈಕಮಾಂಡ್ ಮಟ್ಟದಲ್ಲಿ ಅಂತಿಮ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರಮಣಕಾರಿ ಹೋರಾಟ ಸಂಘಟಿಸಲು ಮುಂದಿನ ದಿನಗಳಲ್ಲಿ ಹೊಸ ತಂತ್ರ ರೂಪಿಸುವ ಸಾಧ್ಯತೆ ಇದ್ದು, ವಿಜಯೇಂದ್ರ ಮುಂದುವರಿದರೆ ಪಕ್ಷದ ಸಂಘಟನೆಗೆ ಮತ್ತಷ್ಟು ಚೈತನ್ಯ ಸಿಗಲಿದೆ ಎನ್ನುವ ಲೆಕ್ಕಾಚಾರವೂ ಪಕ್ಷದೊಳಗೆ ಕೇಳಿಬರುತ್ತಿದೆ.
-
ಕ್ರೀಡೆ24 hours agoಮೈದಾನದಲ್ಲಿ ಕೋಪ ಸಿಡಿಸಿದ ವಿರಾಟ್ ಕೊಹ್ಲಿ: ವಿಡಿಯೊಗೆ ಭಾರೀ ಚರ್ಚೆ
-
ದೇಶ22 hours agoCockroach Janata Party ಗೆ ಬೆಂಗಳೂರು ಪೊಲೀಸರ ಶಾಕ್! ಟೌನ್ ಹಾಲ್ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ
-
ದೇಶ22 hours agoಮೋದಿ ಸರ್ಕಾರದ 2025 ರಿಪೋರ್ಟ್ ಕಾರ್ಡ್ ಬಿಡುಗಡೆ! ಯಾವ ಸಚಿವಾಲಯ ಟಾಪ್, ಯಾವುದು ಹಿಂದುಳಿತು?
-
ಕ್ರೀಡೆ21 hours agoಕೃಣಾಲ್ ಪಾಂಡ್ಯ ಬೌಲಿಂಗ್ಗೆ ಕಾವ್ಯ ಮಾರನ್ ಆಕ್ಷೇಪ? ವೈರಲ್ ಆಯ್ತು SRH ಮಾಲಕಿಯ ರಿಯಾಕ್ಷನ್
-
ದೇಶ22 hours agoಲಡಾಖ್ನಲ್ಲಿ ಸೇನಾ ಹೆಲಿಕಾಪ್ಟರ್ ಪತನ! ಕೂದಲೆಳೆ ಅಂತರದಲ್ಲಿ ಪಾರಾದ ಅಧಿಕಾರಿಗಳ ಸೆಲ್ಫಿ ವೈರಲ್
