Connect with us

ಬೆಂಗಳೂರು

MLA Pradeep Eshwar: ಕ್ಷೇತ್ರದ ಅಭಿವೃದ್ದಿಗೆ ಪ್ರದೀಪ್‌ ಹೊಸ ಸಂಕಲ್ಪ

Published

on

ಬೆಂಗಳೂರು: ಹಲವು ವಿನೂತನ ಯೋಜನೆಗಳ ಮೂಲಕ ‘ಮಾದರಿ’ ಎನಿಸಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು, ಹೊಸ ವರ್ಷಕ್ಕೆ ಹೊಸ ಆಲೋಚನೆಗಳೊಂದಿಗೆ ವರ್ಷ ಆರಂಭಿಸಲು ಮುಂದಾಗಿದ್ದಾರೆ.

ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡುವುದು, ಚಿಕ್ಕಬಳ್ಳಾಪುರಕ್ಕೆ ಹೆಚ್ಚೆಚ್ಚು ಕೈಗಾರಿಕೆಗಳನ್ನು ತರುವ ನಿಟ್ಟಿನಲ್ಲಿ ಪ್ರಯಾಣಿಕ ಪ್ರಯತ್ನ ಮಾಡುವುದು, ಎಸ್‌ಎಸ್ ಎಲ್‌ಸಿ ವಿದ್ಯಾರ್ಥಿ ಗಳಿಗೆ ವಿಶೇಷ ಕೋಚಿಂಗ್ ನೀಡಲು ಕ್ರಮ ವಹಿಸುವುದು ಸೇರಿದಂತೆ ಹತ್ತು ಹಲವು ಹೊಸ ಸಂಕಲ್ಪಗಳನ್ನು ಮಾಡಿದ್ದಾರೆ.

ನಮ್ಮೂರಿಗೆ ನಮ್ಮ ಶಾಸಕ ಕನಸಿನ ಯೋಜನೆ ಯಶಸ್ವಿ: ಶಾಸಕರಾಗಿ ಆಯ್ಕೆಯಾದ ಕ್ಷಣ ಆರಂಭಿಸಿದ್ದ ‘ನಮಸ್ತೆ ಚಿಕ್ಕಬಳ್ಳಾಪುರ’ ಅಭಿಯಾನ ಮನೆಮಾತಾಗಿತ್ತು. ಅದಾದ ಬಳಿಕ ಆರಂಭಿಸಿದ ‘ನಮ್ಮೂರಿಗೆ ನಮ್ಮ ಶಾಸಕ ಕನಸಿನ ಯೋಜನೆ’ ಆರಂಭಿಸಿದ ಕೆಲವೇ ತಿಂಗಳಲ್ಲಿ ನೂರು ಗ್ರಾಮಗಳಿಗೆ ಭೇಟಿ ನೀಡಿ, ಜನರ ಸಂಕಷ್ಟವನ್ನು ಆಲಿಸಿದ್ದಾರೆ. ಪ್ರದೀಪ್ ಈಶ್ವರ್ ಆರಂಭಿಸಿದ ನಮ್ಮೂರಿಗೆ ನಮ್ಮ ಶಾಸಕ ಅಭಿಯಾನವನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರು ಶ್ಲಾಸಿದ್ದರು. ಇದೀಗ ಈ ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸಲು ಪ್ರದೀಪ್ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ನಮ್ಮೂರಿಗೆ ನಮ್ಮ ಶಾಸಕ ಅಭಿಯಾನದಲ್ಲಿ ಕೇವಲ ಪ್ರದೀಪ್ ಈಶ್ವರ್ ಮಾತ್ರ ವಲ್ಲದೇ, ತಾಲೂಕಿನ ಎಲ್ಲ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಆದ್ದರಿಂದ ಗ್ರಾಮಗಳಲ್ಲಿರುವ ಶೇ.60ಕ್ಕೂ ಹೆಚ್ಚು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸಿಗುತ್ತಿದೆ.

ಇದರೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಚರಂಡಿ, ಸಾರಿಗೆ ಸಮಸ್ಯೆ ಇದ್ದಂತೆ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡಲು ಕ್ರಮವಹಿಸಲಾಗಿದೆ. ಈ ಮೂಲಕ ಜನತೆ ಅನುಭವಿಸುತ್ತಿರುವ ನೈಜ ಸಮಸ್ಯೆಗಳಿಗೆ ಪರಿಹಾರ ನೀಡುವ
ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈಯಕ್ತಿಕವಾಗಿಯೂ ಸಹಾಯ: ಬಹುತೇಕ ಶಾಸಕರು ತಮ್ಮ ಕ್ಷೇತ್ರಕ್ಕೆ ಸರಕಾರದಿಂದ ಬರುವ ಅನುದಾನವನ್ನು ಪಡೆದು ಅಭಿವೃದ್ಧಿ ಪಡಿಸುತ್ತಾರೆ. ಆದರೆ ಇದಕ್ಕೆ ಅಪವಾದ ಎನ್ನುವ ರೀತಿಯಲ್ಲಿ ಪ್ರದೀಪ್ ಈಶ್ವರ್ ಅವರು ತಮ್ಮ
ವೈಯಕ್ತಿಕ ಹಣದಿಂದ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ವಿಶೇಷ ತರಬೇತಿ, ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ವಿಶೇಷ ತರಬೇತಿ, ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ, ತಮ್ಮ ತಾಯಿಯ ನೆನಪಿನಲ್ಲಿ ‘ಅಮ್ಮ’ ಆಂಬ್ಯುಲೆನ್ಸ್ ಸೇವೆ, ಉಚಿತ ಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ಯೋಜನೆಗಳನ್ನು ಕಳೆದ ವರ್ಷ ಕೈಗೆತ್ತಿಕೊಂಡಿದ್ದರು.

ಇದರೊಂದಿಗೆ ಇಡೀ ಕ್ಷೇತ್ರದ ಮಹಿಳೆಯರಿಗೆ ಸೀರೆಯನ್ನು ವಿತರಿಸಿದ್ದಾರೆ. ಪ್ರದೀಪ್ ಈಶ್ವರ್ ಕಾರ್ಯಚರಣೆ ಬಗ್ಗೆ
ರೇಣುಮಾಕಲಹಳ್ಳಿಯ ಮಾರಪ್ಪ ಮಾತನಾಡಿದ್ದು, ಈ ಹಿಂದೆ ಶಾಸಕರನ್ನು ಚುನಾವಣೆಯ ಸಮಯದಲ್ಲಿ ಮಾತ್ರ ನೋಡುತ್ತಿದ್ದೇವು. ಆದರೀಗ ಶಾಸಕರೇ ನಮ್ಮ ಮನೆಗೆ ಆಗಮಿಸಿ ಕಷ್ಟಗಳನ್ನು ಆಲಿಸುತ್ತಿದ್ದಾರೆ. ಇಂತಹ ಶಾಸಕ ರಿದ್ದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯ. ರಾಜಕೀಯದಲ್ಲಿ ಇನ್ನಷ್ಟು ಎತ್ತರದ ಸ್ಥಾನ ಅವರಿಗೆ ಸಿಕ್ಕರೆ ಕ್ಷೇತ್ರದ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

200 ಕೋಟಿ ರು. ಅನುದಾನ ಹಂಚಿಕೆ: ಶಾಸಕರಾಗಿ ಆಯ್ಕೆಯಾದ ದಿನದಿಂದ ವಿವಿಧ ಕಾಮಗಾರಿಗಳಿಗೆ ಸಂಬಂಧಿ ಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಭೆ ನಡೆಸಿರುವ ಅವರು, ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 200 ಕೋಟಿ ರು.ಗೂ ಹೆಚ್ಚುವರಿ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದಾರೆ. ಅನುದಾನ ಬಿಡುಗಡೆಯಾದ ಎಲ್ಲ ಯೋಜನೆಗಳು ಕಾಲಮಿತಿಯಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರೊಂದಿಗೆ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಕಳೆದ ಒಂದೂ ವರೆ ವರ್ಷದ ಅವಧಿಯಲ್ಲಿ ಸಿಎಂ, ಡಿಸಿಎಂ ಅವರೊಂದಿಗೆ 10ಕ್ಕೂ ಹೆಚ್ಚು ಬಾರಿ ಸಭೆ ನಡೆಸಿದ್ದಾರೆ.

ಹೊಸ ಆಲೋಚನೆಗಳೇನು?
ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವಂತೆ ಸರಕಾರಕ್ಕೆ ಮನವಿ; ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ
ಚಿಕ್ಕಬಳ್ಳಾಪುರಕ್ಕೆ ಹೆಚ್ಚೆಚ್ಚು ಕೈಗಾರಿಕೆಗಳನ್ನು ತರುವ ನಿಟ್ಟಿನಲ್ಲಿ ಪ್ರಯಾಣಿಕ ಪ್ರಯತ್ನ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್ ನೀಡಲು ಕ್ರಮ

ಪ್ರಾಯೋಗಿಕವಾಗಿ ಇಸ್ರೇಲ್ ಮಾದರಿಯ ಕೃಷಿ ಆರಂಭ

2027ರ ವೇಳೆಗೆ ಎತ್ತಿನಹೊಳೆ ನೀರು ಚಿಕ್ಕಬಳ್ಳಾಪುರಕ್ಕೆ ಬರುವುದಕ್ಕೆ ಅಗತ್ಯ ತಯಾರಿ

ಸರಕಾರಿ ಮಕ್ಕಳನ್ನು ಏಮ್ಸ್, ಐಐಟಿಯಲ್ಲಿ ಪ್ರವೇಶ ಪಡೆಯುವಂತೆ ಮಾಡಲು ಉಚಿತ ಕೋಚಿಂಗ್

ವೈಯಕ್ತಿಕವಾಗಿ ಸಾವಿರ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಕೋಚಿಂಗ್ (ಪ್ರತಿಯೊಬ್ಬರಿಗೂ 50 ಸಾವಿರ ವೆಚ್ಚ).

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ರಾಜ್ಯ

ಸಚಿವ B Nagendra ರಾಜೀನಾಮೆ ನೀಡ್ತಾರಾ?CM D.K.Shiv Kumar ಗೆ ಕರೆ, ‘ಸರ್ಕಾರಕ್ಕೆ ಮುಜುಗರ ಬೇಡ’ ಎಂದ ಸಚಿವ!

Published

on

ಬೆಂಗಳೂರು: ಬಿಜೆಪಿ ಘೋಷಿಸಿರುವ ಬಳ್ಳಾರಿ ಪಾದಯಾತ್ರೆಗೂ ಮುನ್ನವೇ ಸಚಿವ B Nagendra ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿ D.K.Shiv Kumar ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.

ವಿಪಕ್ಷಗಳ ನಿರಂತರ ಹೋರಾಟ, ಬಿಜೆಪಿ ಘೋಷಿಸಿರುವ ಪಾದಯಾತ್ರೆ ಹಾಗೂ ರಾಜ್ಯಪಾಲರ ಮುಂದಿರುವ ಪ್ರಾಸಿಕ್ಯೂಷನ್ ಅನುಮತಿ ವಿಚಾರದಿಂದಾಗಿ ಸಚಿವ ನಾಗೇಂದ್ರ ಅವರ ಮೇಲೆ ರಾಜಕೀಯ ಒತ್ತಡ ಹೆಚ್ಚಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಪಕ್ಷಕ್ಕೆ ಮತ್ತಷ್ಟು ಮುಜುಗರವಾಗದಂತೆ ತಾವೇ ರಾಜೀನಾಮೆ ನೀಡುವ ಬಗ್ಗೆ ಸಚಿವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

‘ಸರ್ಕಾರಕ್ಕೆ ಮುಜುಗರ ಬೇಡ, ರಾಜೀನಾಮೆ ಕೊಡ್ತೇನೆ’

ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿದ್ದ ಸಚಿವ ನಾಗೇಂದ್ರ ಅವರು ರಾಜೀನಾಮೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

“ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಆಗುವುದು ಬೇಡ. ನಾನು ರಾಜೀನಾಮೆ ಕೊಡುತ್ತೇನೆ” ಎಂದು ತಮ್ಮ ನಿಲುವನ್ನು ಸಿಎಂ ಮುಂದೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಅಲ್ಲದೆ, ತಮ್ಮ ವಿರುದ್ಧದ ರಾಜಕೀಯ ಟೀಕೆಗಳ ಕುರಿತು ಮಾತನಾಡಿರುವ ನಾಗೇಂದ್ರ, ತಾವು ದಲಿತ ಸಮುದಾಯಕ್ಕೆ ಸೇರಿದವರಾಗಿರುವ ಕಾರಣಕ್ಕೆ ಗುರಿಯಾಗಿಸಲಾಗುತ್ತಿದೆ ಎಂಬ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಗತ್ಯವಿದ್ದರೆ ಬೇರೆಯವರಿಗೆ ಅವಕಾಶ ನೀಡಬಹುದು ಎಂಬ ಅಭಿಪ್ರಾಯವನ್ನೂ ಸಿಎಂ ಬಳಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ ನಾಗೇಂದ್ರ ಅವರನ್ನು ಸಮಾಧಾನಪಡಿಸಿರುವ ಡಿ.ಕೆ.ಶಿವಕುಮಾರ್, ಸದ್ಯಕ್ಕೆ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳದಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಹೈಕಮಾಂಡ್ ಜೊತೆ ಚರ್ಚಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಪಕ್ಷಗಳ ಹೋರಾಟದಿಂದ ಹೆಚ್ಚಿದ ಒತ್ತಡ

ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳು ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಿದ್ದವು. ಈ ವೇಳೆ ಸದನದ ಕಲಾಪಕ್ಕೂ ಅಡ್ಡಿಯುಂಟಾಗಿತ್ತು.

ಇದೀಗ ಬಿಜೆಪಿ ಮತ್ತೊಂದು ಹಂತದ ಹೋರಾಟಕ್ಕೆ ಸಜ್ಜಾಗಿದ್ದು, ಪಾದಯಾತ್ರೆ ಘೋಷಿಸಿರುವುದು ಸಚಿವ ನಾಗೇಂದ್ರ ಅವರ ಮೇಲಿನ ರಾಜಕೀಯ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಲಾಗಿದೆ.

ರಾಯಚೂರಿನಿಂದ ಬಳ್ಳಾರಿಗೆ ಬಿಜೆಪಿ ಪಾದಯಾತ್ರೆ

ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಹಗರಣವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಯಚೂರಿನಿಂದ ಬಳ್ಳಾರಿ ವರೆಗೆ ಪಾದಯಾತ್ರೆ ನಡೆಸಲು ಮುಂದಾಗಿದೆ.

ಪಾದಯಾತ್ರೆ ಮೂಲಕ ಪ್ರಕರಣವನ್ನು ಮತ್ತಷ್ಟು ರಾಜಕೀಯವಾಗಿ ಮುನ್ನೆಲೆಗೆ ತರುವ ಸಾಧ್ಯತೆಯಿದೆ. ಇದರಿಂದ ತಮ್ಮ ವೈಯಕ್ತಿಕ ವರ್ಚಸ್ಸಿನ ಜೊತೆಗೆ ಕಾಂಗ್ರೆಸ್ ಸರ್ಕಾರಕ್ಕೂ ರಾಜಕೀಯ ಹಿನ್ನಡೆಯಾಗಬಹುದು ಎಂಬ ಆತಂಕ ಸಚಿವ ನಾಗೇಂದ್ರ ಅವರಲ್ಲಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಪಾದಯಾತ್ರೆ ಆರಂಭವಾಗುವುದಕ್ಕೂ ಮುನ್ನವೇ ರಾಜೀನಾಮೆ ನೀಡಿದರೆ ಸರ್ಕಾರದ ಮೇಲಿನ ಒತ್ತಡ ಕಡಿಮೆಯಾಗಬಹುದು ಎಂಬ ಲೆಕ್ಕಾಚಾರವೂ ಇರಬಹುದು ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ರಾಜ್ಯಪಾಲರ ಮುಂದಿರುವ ಪ್ರಾಸಿಕ್ಯೂಷನ್ ಫೈಲ್

ಇನ್ನೊಂದೆಡೆ, ಸಚಿವ ನಾಗೇಂದ್ರ ವಿರುದ್ಧ ಸಿಬಿಐ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸಂಬಂಧದ ಕಡತ ರಾಜ್ಯಪಾಲರ ಮುಂದಿದೆ ಎಂದು ವರದಿಯಾಗಿದೆ.

ಒಂದು ವೇಳೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ. ಈ ಬೆಳವಣಿಗೆಯೂ ಸಚಿವ ನಾಗೇಂದ್ರ ಅವರ ಮೇಲೆ ಹೆಚ್ಚುವರಿ ರಾಜಕೀಯ ಒತ್ತಡಕ್ಕೆ ಕಾರಣವಾಗಬಹುದು ಎನ್ನಲಾಗಿದೆ.

ರಾಜೀನಾಮೆ ನೀಡುತ್ತಾರಾ ನಾಗೇಂದ್ರ?

ಬಿಜೆಪಿ ಪಾದಯಾತ್ರೆ, ವಿಪಕ್ಷಗಳ ನಿರಂತರ ಹೋರಾಟ ಹಾಗೂ ಪ್ರಾಸಿಕ್ಯೂಷನ್ ಅನುಮತಿ ವಿಚಾರಗಳ ನಡುವೆ ಸಚಿವ ನಾಗೇಂದ್ರ ಅವರ ರಾಜೀನಾಮೆ ಕುರಿತ ಚರ್ಚೆ ಇದೀಗ ತೀವ್ರಗೊಂಡಿದೆ.

ನಾಗೇಂದ್ರ ಅವರು ನಿಜವಾಗಿಯೂ ರಾಜೀನಾಮೆ ನೀಡುತ್ತಾರಾ? ಅಥವಾ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿ ಬಿಕ್ಕಟ್ಟನ್ನು ಬಗೆಹರಿಸುತ್ತಾರಾ? ಎಂಬುದು ಸದ್ಯ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿರುವ ಪ್ರಶ್ನೆಯಾಗಿದೆ.

ಸೂಚನೆ: ನಾಗೇಂದ್ರ ರಾಜೀನಾಮೆ ನೀಡುವ ಸಾಧ್ಯತೆ ಕುರಿತ ಮೇಲಿನ ಮಾಹಿತಿ ಮೂಲಗಳನ್ನು ಉಲ್ಲೇಖಿಸಿ ಬಂದಿರುವ ವರದಿಯಾಗಿದೆ; ರಾಜೀನಾಮೆ ಅಧಿಕೃತವಾಗಿ ಘೋಷಣೆಯಾಗುವವರೆಗೆ ಇದನ್ನು ಖಚಿತ ನಿರ್ಧಾರವೆಂದು ಪರಿಗಣಿಸಬಾರದು.

Continue Reading

ಸಿನಿಮಾ

Yash ‘Toxic’ ನೋಡಿ ಪ್ರೇಕ್ಷಕರಿಂದ ಸೀಟಿ-ಚಪ್ಪಾಳೆ; ಗೀತು ಮೋಹನ್‌ದಾಸ್ ನಿರ್ದೇಶನಕ್ಕೆ ಭಾರೀ ಮೆಚ್ಚುಗೆ

Published

on

ಬೆಂಗಳೂರು: ರಾಕಿಂಗ್ ಸ್ಟಾರ್ Yash ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಕೊನೆಗೂ ಬೆಳ್ಳಿತೆರೆಗೆ ಅಪ್ಪಳಿಸಿದ್ದು, ಮೊದಲ ಪ್ರದರ್ಶನ ವೀಕ್ಷಿಸಿದ ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾದ ದೃಶ್ಯ ವೈಭವ, ಯಶ್ ಅವರ ಮಾಸ್ ಲುಕ್ ಹಾಗೂ ಮ್ಯಾನರಿಸಂ ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಚಿತ್ರದ ಮೊದಲ ಪ್ರದರ್ಶನದ ಬಳಿಕ ಸಾಮಾಜಿಕ ಜಾಲತಾಣಗಳಲ್ಲೂ ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ‘ಟಾಕ್ಸಿಕ್’ ಪಕ್ಕಾ ಹಾಲಿವುಡ್ ರೇಂಜ್‌ನ ಸಿನಿಮಾ ಎಂಬ ಮಾತುಗಳು ಕೇಳಿಬರುತ್ತಿವೆ.

ಅಂತರರಾಷ್ಟ್ರೀಯ ಮಟ್ಟದ ಮೇಕಿಂಗ್

‘ಟಾಕ್ಸಿಕ್’ ಸಿನಿಮಾದ ಛಾಯಾಗ್ರಹಣ ಹಾಗೂ ಮೇಕಿಂಗ್ ಶೈಲಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಚಿತ್ರದ ಹಲವು ದೃಶ್ಯಗಳನ್ನು ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ರೂಪಿಸಲಾಗಿದೆ ಎಂಬ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಶೇಷವಾಗಿ ರಾಕಿಂಗ್ ಸ್ಟಾರ್ ಯಶ್ ಅವರ ವಿಭಿನ್ನ ಮಾಸ್ ಲುಕ್ ಹಾಗೂ ಪರದೆ ಮೇಲಿನ ಅವರ ಸ್ಕ್ರೀನ್ ಪ್ರೆಸೆನ್ಸ್ ಅಭಿಮಾನಿಗಳಲ್ಲಿ ಭಾರೀ ಉತ್ಸಾಹ ಮೂಡಿಸಿದೆ. ಯಶ್ ಅವರ ಮ್ಯಾನರಿಸಂ ಮತ್ತು ಪಾತ್ರದ ಸ್ಟೈಲ್ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಡಾರ್ಕ್ ಗ್ಯಾಂಗ್‌ಸ್ಟರ್ ಲೋಕದ ರೋಮಾಂಚನ

‘ಟಾಕ್ಸಿಕ್’ ಸಿನಿಮಾದ ಕಥಾಹಂದರ ಡಾರ್ಕ್ ಗ್ಯಾಂಗ್‌ಸ್ಟರ್ ಜಗತ್ತಿನ ಸುತ್ತ ಸಾಗುತ್ತದೆ. ಸಿನಿಮಾದಲ್ಲಿನ ಮಾಸ್ ಆ್ಯಕ್ಷನ್ ದೃಶ್ಯಗಳು ಪ್ರೇಕ್ಷಕರಿಗೆ ಥ್ರಿಲ್ ನೀಡುತ್ತಿವೆ.

ಭರ್ಜರಿ ಆ್ಯಕ್ಷನ್ ಸನ್ನಿವೇಶಗಳು ದೊಡ್ಡ ಪರದೆಯಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿದ್ದು, ಹಲವು ದೃಶ್ಯಗಳಿಗೆ ಥಿಯೇಟರ್‌ಗಳಲ್ಲಿ ಸೀಟಿ ಹಾಗೂ ಚಪ್ಪಾಳೆಗಳ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಯಶ್ ಅವರ ಮಾಸ್ ಇಮೇಜ್‌ಗೆ ಹೊಂದುವಂತಹ ಆ್ಯಕ್ಷನ್ ಸೀಕ್ವೆನ್ಸ್‌ಗಳು ಅಭಿಮಾನಿಗಳಿಗೆ ವಿಶೇಷ ಅನುಭವ ನೀಡುತ್ತಿವೆ.

ಗೀತು ಮೋಹನ್‌ದಾಸ್ ನಿರ್ದೇಶನಕ್ಕೆ ಮೆಚ್ಚುಗೆ

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ವಿಭಿನ್ನ ಕಥೆ ಹೇಳುವ ಶೈಲಿಗೂ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಗ್ಯಾಂಗ್‌ಸ್ಟರ್ ಕಥೆಯನ್ನು ಸಾಂಪ್ರದಾಯಿಕ ರೀತಿಗಿಂತ ಭಿನ್ನವಾಗಿ ತೆರೆಗೆ ತಂದಿರುವ ನಿರ್ದೇಶನ ಶೈಲಿ ಪ್ರೇಕ್ಷಕರ ಗಮನ ಸೆಳೆದಿದೆ. ಕಥೆಯ ವಾತಾವರಣ, ಪಾತ್ರಗಳ ನಿರೂಪಣೆ ಹಾಗೂ ಆ್ಯಕ್ಷನ್ ದೃಶ್ಯಗಳನ್ನು ಕಟ್ಟಿಕೊಟ್ಟಿರುವ ರೀತಿಗೆ ಸಿನಿಪ್ರಿಯರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಯಶ್ ಅಭಿಮಾನಿಗಳಲ್ಲಿ ಹೆಚ್ಚಿದ ಕ್ರೇಜ್

ಸಿನಿಮಾ ಬಿಡುಗಡೆಗೂ ಮುನ್ನವೇ ‘ಟಾಕ್ಸಿಕ್’ ಭಾರೀ ನಿರೀಕ್ಷೆ ಮೂಡಿಸಿತ್ತು. ಇದೀಗ ಮೊದಲ ಪ್ರದರ್ಶನದ ಬಳಿಕ ಯಶ್ ಅಭಿಮಾನಿಗಳ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ. ಸಿನಿಮಾದ ಮೇಕಿಂಗ್, ಯಶ್ ಅವರ ಲುಕ್, ಆ್ಯಕ್ಷನ್ ಹಾಗೂ ಗೀತು ಮೋಹನ್‌ದಾಸ್ ಅವರ ನಿರ್ದೇಶನ ಚಿತ್ರದ ಪ್ರಮುಖ ಹೈಲೈಟ್‌ಗಳಾಗಿ ಪ್ರೇಕ್ಷಕರ ಚರ್ಚೆಯಲ್ಲಿ ಕಾಣಿಸಿಕೊಳ್ಳುತ್ತಿವೆ.

ಒಟ್ಟಿನಲ್ಲಿ, ‘ಟಾಕ್ಸಿಕ್’ ಮೊದಲ ಪ್ರದರ್ಶನದ ಬಳಿಕ ಯಶ್ ಅಭಿಮಾನಿಗಳು ಹಾಗೂ ಸಿನಿಪ್ರಿಯರಿಂದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಸಿನಿಮಾ ಕುರಿತ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲೂ ಜೋರಾಗಿದೆ.

Continue Reading

ಬೆಂಗಳೂರು

Raghavendra Swamy Mutt Jayanagar ಆಗಸ್ಟ್ 29 ರಿಂದ ಪೂರ್ವಾರಾಧನೆ, ಮಧ್ಯಾರಾಧನೆ, ಉತ್ತರಾರಾಧನೆ; ರಾಯರ ಆರಾಧನೆಗೆ ಸಜ್ಜಾದ ಬೆಂಗಳೂರು

Published

on

ಬೆಂಗಳೂರು:Raghavendra Swamy Mutt Jayanagar ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಗಸ್ಟ್ 27ರಿಂದ ಸೆಪ್ಟೆಂಬರ್ 2ರವರೆಗೆ ಏಳು ದಿನಗಳ ಕಾಲ ಆರಾಧನಾ ಸಪ್ತ ರಾತ್ರೋತ್ಸವ-ಮಹೋತ್ಸವ ನಡೆಯಲಿದೆ.

ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಹಾಗೂ ಅನುಗ್ರಹದೊಂದಿಗೆ, ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಹಾಗೂ ಭಕ್ತರ ಸಹಕಾರದೊಂದಿಗೆ ಈ ಮಹೋತ್ಸವವನ್ನು ಆಯೋಜಿಸಲಾಗಿದೆ.

ಆಗಸ್ಟ್ 27ರಂದು ಸಂಜೆ 6.30ಕ್ಕೆ ಮುಳಬಾಗಲು ಶ್ರೀಪಾದರಾಜ ಮಠದ ಪರಮಪೂಜ್ಯ ಶ್ರೀ 1008 ಶ್ರೀ ಸುಜಯನಿಧಿತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಗೋಪೂಜೆ, ಧ್ವಜಾರೋಹಣ, ಶ್ರೀಲಕ್ಷ್ಮೀಪೂಜೆ, ಧನ-ಧಾನ್ಯ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಸಾವಿರಾರು ಭಕ್ತರಿಗೆ ವಿಶೇಷ ಪ್ರಸಾದ

ಆರಾಧನಾ ಮಹೋತ್ಸವಕ್ಕೆ ಆಗಮಿಸುವ ಸಾವಿರಾರು ಭಕ್ತರಿಗಾಗಿ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. 55ಕ್ಕೂ ಹೆಚ್ಚಿನ ಅಡುಗೆ ಬಾಣಸಿಗರಿಂದ ವಿವಿಧ ರೀತಿಯ ಪ್ರಸಾದ ಹಾಗೂ ಪಂಚಭಕ್ಷ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ.

ಶ್ರೀಮಠದ ಪ್ರಾಕಾರ, ಪೂಜಾ ಮಂದಿರ, ದ್ವಾರ, ಕಟ್ಟಡ ಹಾಗೂ ಮಠದ ಮುಂಭಾಗದ ರಾಜಬೀದಿಯನ್ನು ವಿಶೇಷ ದೀಪಗಳಿಂದ ಅಲಂಕರಿಸಲಾಗುತ್ತಿದೆ. ಭಕ್ತರಿಗೆ ಮಂತ್ರಾಕ್ಷತೆ ನೀಡಲು ವೇದಮಂತ್ರ ಹಾಗೂ ಸ್ತೋತ್ರಗಳೊಂದಿಗೆ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪೂರ್ವಾರಾಧನೆ, ಮಧ್ಯಾರಾಧನೆ, ಉತ್ತರಾರಾಧನೆ

ಆಗಸ್ಟ್ 29ರಂದು ಪೂರ್ವಾರಾಧನೆ, ಆಗಸ್ಟ್ 30ರಂದು ಮಧ್ಯಾರಾಧನೆ ಹಾಗೂ ಆಗಸ್ಟ್ 31ರಂದು ಉತ್ತರಾರಾಧನೆ ನಡೆಯಲಿದೆ.

ಈ ಮೂರು ದಿನಗಳಂದು ಬೆಳಗ್ಗೆ 6.30ಕ್ಕೆ ಅರ್ಚಕರಾದ ಶ್ರೀ ಕೃಷ್ಣಾಚಾರ್ ಹಾಗೂ ಗೊಗ್ಗಿ ರಾಮಚಂದ್ರಾಚಾರ್ ಅವರಿಂದ ಗುರು ರಾಯರ ಬೃಂದಾವನಕ್ಕೆ ವಿಶೇಷ ಫಲ ಪಂಚಾಮೃತ ಅಭಿಷೇಕ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ ನಡೆಯಲಿದೆ.

ನಂತರ ನೂತನ ವಸ್ತ್ರ ಸಮರ್ಪಣೆ, ನವರತ್ನ ಕವಚ ಅಲಂಕಾರ, ವಿಶೇಷ ಹೂವಿನ ಅಲಂಕಾರ ಸೇರಿದಂತೆ ವಿವಿಧ ಉತ್ಸವಗಳು ನೆರವೇರಲಿವೆ.

ಪ್ರತಿದಿನ ಬೆಳಗ್ಗೆ 7 ಗಂಟೆಗೆ ಸೇವಾಕರ್ತರಿಗೆ ಸಂಕಲ್ಪ, ರಾಯರಿಗೆ ಫಲ ಸಮರ್ಪಣೆ ಹಾಗೂ ಸಾಮೂಹಿಕ ಪಾದಪೂಜೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಕನಕಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಹಾಗೂ 12.30ಕ್ಕೆ ಭಕ್ತರಿಗೆ ಅನ್ನಸಂತರ್ಪಣೆ ಪ್ರಸಾದ ವಿತರಣೆ ನಡೆಯಲಿದೆ.

ರಥೋತ್ಸವ, ಪಲ್ಲಕ್ಕಿ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ

ಮಹೋತ್ಸವದ ಏಳು ದಿನಗಳಲ್ಲೂ ಸಂಜೆ ಹರಿಭಜನೆ, ವಿದ್ವಾಂಸರಿಂದ ಪ್ರವಚನ, ಸಂಗೀತ, ಭರತನಾಟ್ಯ, ಪಲ್ಲಕ್ಕಿ ಉತ್ಸವ, ಗಜವಾಹನ ಉತ್ಸವ ಹಾಗೂ ರಥೋತ್ಸವ ಸೇರಿದಂತೆ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಆಗಸ್ಟ್ 30ರಂದು ಬೆಳಗ್ಗೆ 8.30ಕ್ಕೆ ಜಯನಗರ 5ನೇ ಬಡಾವಣೆಯ ರಾಜಬೀದಿಯಲ್ಲಿ ಚಂಡೇವಾದನ, ಗೊಂಬೆಗಳ ಕುಣಿತ ಹಾಗೂ ವಿವಿಧ ವಾದ್ಯಗಳೊಂದಿಗೆ ಮಹಾರಥೋತ್ಸವ ನಡೆಯಲಿದೆ.

ಪ್ರತಿದಿನ ಸಂಜೆ 5ರಿಂದ 6ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಹರಿಭಜನೆ ಆಯೋಜಿಸಲಾಗಿದೆ. ಆಗಸ್ಟ್ 27ರಂದು ಶ್ರೀಮತಿ ಗೀತಾ ಬತ್ತದ್ ಮತ್ತು ತಂಡ, ಆಗಸ್ಟ್ 28ರಂದು ಶ್ರೀಮತಿ ಗೀತಾ ಪ್ರಸಾದ್ ಹಿರಣ್ಮಯಿ ತಂಡ, ಆಗಸ್ಟ್ 29ರಂದು ಹೃಷಿಕೇಶ ಭಜನಾ ಮಂಡಳಿ, ಆಗಸ್ಟ್ 30ರಂದು ಅಕ್ಷಯ ವಿಪ್ರ ಭಜನಾ ಮಂಡಳಿ, ಆಗಸ್ಟ್ 31ರಂದು ಮಂಜುಳವಾಣಿ ಭಜನಾ ಮಂಡಳಿ, ಸೆಪ್ಟೆಂಬರ್ 1ರಂದು ಹರಿ ವಾಯು ಭಜನಾ ಮಂಡಳಿ ಹಾಗೂ ಸೆಪ್ಟೆಂಬರ್ 2ರಂದು ಅಂಭ್ರಣೀಶ ಭಜನಾ ಮಂಡಳಿಯಿಂದ ಹರಿಭಜನೆ ನಡೆಯಲಿದೆ.

ದಾಸವಾಣಿ, ವಾದ್ಯ ಸಂಗೀತ, ದಾಸ ಲಹರಿ

ಸಂಜೆ 6.30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆಗಸ್ಟ್ 28ರಂದು ವಿದುಷಿ ಶ್ರೀಮತಿ ರಂಜಿತಾ ಪ್ರಸಾದ್ ಮತ್ತು ಸಂಗಡಿಗರಿಂದ ದಾಸವಾಣಿ, ಆಗಸ್ಟ್ 31ರಂದು ನಾದಸ್ವಾದ ತಂಡದಿಂದ ವಾದ್ಯ ಸಂಗೀತ, ಸೆಪ್ಟೆಂಬರ್ 1ರಂದು ಡಾ. ರಾಯಚೂರು ಶೇಷಗಿರಿದಾಸ್ ತಂಡದಿಂದ ದಾಸ ಲಹರಿ ಹಾಗೂ ಸೆಪ್ಟೆಂಬರ್ 2ರಂದು ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ನಿರ್ದೇಶನದ ನೃತ್ಯ ದಿಶಾ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

ಭಕ್ತರಿಗೆ ವಿಶೇಷ ವ್ಯವಸ್ಥೆ

ಮಹೋತ್ಸವದ ಸಂದರ್ಭದಲ್ಲಿ ಭಕ್ತರ ಅನುಕೂಲಕ್ಕಾಗಿ ಜಯನಗರ ಪೊಲೀಸ್ ಸಿಬ್ಬಂದಿಯ ಸಹಕಾರದೊಂದಿಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗುತ್ತಿದೆ. ವಯೋವೃದ್ಧರು, ವಿಕಲಚೇತನರು, ಗರ್ಭಿಣಿಯರು, ಸೇವಾಕರ್ತರು ಹಾಗೂ ಇತರ ಭಕ್ತರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ಯರು ತಿಳಿಸಿದ್ದಾರೆ.

ಆರಾಧನಾ ಮಹೋತ್ಸವದಲ್ಲಿ ಸೇವೆ ಸಲ್ಲಿಸಲು ಬಯಸುವ ಭಕ್ತರು 9449133929 ಸಂಖ್ಯೆಯ ಮೂಲಕ ಆನ್‌ಲೈನ್ ಸೇವೆಯ ಮಾಹಿತಿಯನ್ನು ಪಡೆಯಬಹುದು. ಸೇವೆ ಸಲ್ಲಿಸಿದ ಭಕ್ತರು ಶ್ರೀಮಠಕ್ಕೆ ಆಗಮಿಸಿ ರಾಯರ ಶೇಷವಸ್ತ್ರ, ಪರಿಮಳ ಪ್ರಸಾದ ಹಾಗೂ ಫಲಮಂತ್ರಾಕ್ಷತೆ ಸ್ವೀಕರಿಸಬಹುದು.

ಇದೇ ವೇಳೆ ದಾನಿಗಳಿಗಾಗಿ ವಿಶೇಷ ಮಂತ್ರಾಲಯ ಯಾತ್ರೆ ಸೇವೆಯನ್ನೂ ಆಯೋಜಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ 08022443962, 9945429129 ಹಾಗೂ 9448847586 ಸಂಖ್ಯೆಯನ್ನು ಸಂಪರ್ಕಿಸಬಹುದು.

Continue Reading

Trending