Connect with us

ದೇಶ

ಸಿಂಧೂ ನೀರು ಪಾಕ್‌ಗೆ ಹರಿಯಬೇಕು, ಇಲ್ಲದಿದ್ರೆ ಭಾರತೀಯರ ರಕ್ತ ಹರಿಯುತ್ತೆ: ಬಿಲಾವಲ್‌ ಭುಟ್ಟೋ

Published

on

ಇಸ್ಲಾಮಾಬಾದ್: ಸಿಂಧೂ (Indus) ನಮ್ಮದು. ನದಿ ನೀರು ಪಾಕಿಸ್ತಾನಕ್ಕೆ ಹರಿಯಬೇಕು. ಇಲ್ಲವಾದಲ್ಲಿ ಭಾರತೀಯರ ರಕ್ತ ಹರಿಯುತ್ತದೆ ಎಂದು ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ ಅಧ್ಯಕ್ಷ ಬಿಲಾವಲ್‌ ಭುಟ್ಟೋ (Bilawal Bhutto) ನಾಲಿಗೆ ಹರಿಬಿಟ್ಟಿದ್ದಾರೆ.

ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಮಾರಕ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ಭುಟ್ಟೋ ಮಾತನಾಡಿದ್ದಾರೆ.

ಪಹಲ್ಗಾಮ್ ದಾಳಿಗೆ ಪಾಕಿಸ್ತಾನವನ್ನು ಬಲಿಪಶು ಮಾಡಲಾಗುತ್ತಿದೆ. ಆ ಮೂಲಕ ಭಾರತ ತನ್ನ ಆಂತರಿಕ ಭದ್ರತಾ ಲೋಪಗಳಿಂದ ಗಮನವನ್ನು ಬೇರೆಡೆ ಸೆಳೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಭಾರತವು ಇಸ್ಲಾಮಾಬಾದ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ನಿಲ್ಲಿಸಿದೆ. ಪಾಕಿಸ್ತಾನಿ ಮಿಲಿಟರಿ ಅಟ್ಯಾಚ್‌ಗಳನ್ನು ಹೊರಹಾಕುವುದು, ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು, ಅಟ್ಟಾರಿ ಭೂ ಸಾರಿಗೆ ಪೋಸ್ಟ್ ಅನ್ನು ಮುಚ್ಚುವುದು ಸೇರಿದಂತೆ ಹಲವಾರು ರಾಜತಾಂತ್ರಿಕ ಮತ್ತು ಆರ್ಥಿಕ ಕ್ರಮಗಳನ್ನು ಕೈಗೊಂಡಿದೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ರಾಜಕೀಯ

KS Eshwarappa: 2028ರ ಚುನಾವಣೆಗೆ ಈಶ್ವರಪ್ಪ ಬಿಗ್ ಘೋಷಣೆ; ಶಿವಮೊಗ್ಗದಿಂದ ತಾವೋ, ಮಗನೋ ಸ್ಪರ್ಧೆ ಖಚಿತ!

Published

on

ಶಿವಮೊಗ್ಗ: ಬಿಜೆಪಿ ವಿರುದ್ಧದ ತಮ್ಮ ಅಸಮಾಧಾನವನ್ನು ಮತ್ತೊಮ್ಮೆ ಬಹಿರಂಗಪಡಿಸಿರುವ ಹಿರಿಯ ರಾಜಕಾರಣಿ KS Eshwarappa, 2028ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ತಾವಾಗಲಿ ಅಥವಾ ತಮ್ಮ ಮಗನಾಗಲಿ ಸ್ಪರ್ಧಿಸುವುದು ಶೇ.100ರಷ್ಟು ಖಚಿತ ಎಂದು ಘೋಷಿಸಿದ್ದಾರೆ. ಈಶ್ವರಪ್ಪ ಅವರ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗನಿಗೆ ಬಿಜೆಪಿ ಟಿಕೆಟ್ ನೀಡದ ವಿಚಾರದ ಬೇಸರ ಇನ್ನೂ ತಮ್ಮಲ್ಲಿದೆ ಎಂದು ಹೇಳಿದ್ದಾರೆ. ಪಕ್ಷದ ನಾಯಕರ ನಿರ್ಧಾರದಿಂದ ತಮ್ಮ ಕುಟುಂಬಕ್ಕೆ ಅನ್ಯಾಯವಾಗಿದೆ ಎಂಬ ಅಸಮಾಧಾನವನ್ನು ಅವರು ವ್ಯಕ್ತಪಡಿಸಿದ್ದಾರೆ.

ಮಗನಿಗೆ ಟಿಕೆಟ್ ನೀಡದಿದ್ದಕ್ಕೆ ಅಸಮಾಧಾನ

ಬಿ.ಎಸ್. ಯಡಿಯೂರಪ್ಪ ಅವರ ಪುತ್ರರಾದ ಬಿ.ವೈ. ವಿಜಯೇಂದ್ರ ಮತ್ತು ಬಿ.ವೈ. ರಾಘವೇಂದ್ರ ಅವರಿಗೆ ರಾಜಕೀಯದಲ್ಲಿ ಅವಕಾಶ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರನಿಗೂ ಟಿಕೆಟ್ ನೀಡಲಾಗಿದೆ. ಆದರೆ ತಮ್ಮ ಮಗನಿಗೆ ಮಾತ್ರ ಅವಕಾಶ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ.

ಈ ವಿಚಾರ ತಮ್ಮಲ್ಲಿ ಇನ್ನೂ ಬೇಸರ ಮೂಡಿಸಿದೆ ಎಂದು ಅವರು ಹೇಳಿದ್ದಾರೆ. ಇದೇ ಕಾರಣದಿಂದ ಬಿಜೆಪಿಯಲ್ಲಿನ ತಮ್ಮ ರಾಜಕೀಯ ಸಂಬಂಧಗಳ ಬಗ್ಗೆ ಈಶ್ವರಪ್ಪ ಅವರ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.

‘ತಾವಾಗಲಿ, ಮಗನಾಗಲಿ ಸ್ಪರ್ಧೆ ಖಚಿತ’

2028ರ ವಿಧಾನಸಭಾ ಚುನಾವಣೆಯ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ಈಶ್ವರಪ್ಪ, ಶಿವಮೊಗ್ಗ ನಗರ ಕ್ಷೇತ್ರದಿಂದ ತಾವಾಗಲಿ ಅಥವಾ ತಮ್ಮ ಮಗನಾಗಲಿ ಸ್ಪರ್ಧಿಸುವುದು ಖಚಿತ ಎಂದು ಹೇಳಿದ್ದಾರೆ.

ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಶಿವಮೊಗ್ಗ ನಗರ ಕ್ಷೇತ್ರದ ರಾಜಕೀಯದಲ್ಲಿ ತಮ್ಮ ಕುಟುಂಬದ ಪಾತ್ರ ಇರಲಿದೆ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ. ಆದರೆ ಅಭ್ಯರ್ಥಿಯಾಗಿ ತಾವೇ ಸ್ಪರ್ಧಿಸುತ್ತಾರೆಯೇ ಅಥವಾ ತಮ್ಮ ಮಗನನ್ನು ಕಣಕ್ಕಿಳಿಸುತ್ತಾರೆಯೇ ಎಂಬುದನ್ನು ಅವರು ಇನ್ನೂ ಅಂತಿಮವಾಗಿ ತಿಳಿಸಿಲ್ಲ.

ಬಿಜೆಪಿ ನಾಯಕರೊಂದಿಗೆ ಸಂಪರ್ಕ ಮುಂದುವರಿಕೆ

ಇದೇ ವೇಳೆ ಬಿಜೆಪಿ ನಾಯಕರೊಂದಿಗೆ ತಮ್ಮ ಸಂಪರ್ಕ ಇನ್ನೂ ಮುಂದುವರಿದಿದೆ ಎಂದು ಈಶ್ವರಪ್ಪ ಹೇಳಿದ್ದಾರೆ. ಪಕ್ಷದ ಹಲವು ನಾಯಕರು ತಮ್ಮೊಂದಿಗೆ ಮಾತನಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿಯಲ್ಲಿ ಪ್ರಸ್ತುತ ಹಲವು ಗಂಭೀರ ಸಮಸ್ಯೆಗಳಿವೆ ಎಂದು ಅಭಿಪ್ರಾಯಪಟ್ಟಿರುವ ಈಶ್ವರಪ್ಪ, ಇದೇ ಪರಿಸ್ಥಿತಿಯಲ್ಲಿ ಪಕ್ಷ ಮುಂದಿನ ಚುನಾವಣೆಯನ್ನು ಎದುರಿಸಿದರೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಥಾನಗಳನ್ನು ಗೆಲ್ಲುವುದು ಕಷ್ಟವಾಗಬಹುದು ಎಂದು ಹೇಳಿದ್ದಾರೆ.

ಪಕ್ಷ ಸಂಘಟನೆ ಬಲಪಡಿಸಬೇಕು

ಬಿಜೆಪಿಯನ್ನು ಮತ್ತಷ್ಟು ಸಂಘಟಿಸುವ ಅಗತ್ಯವಿದೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. ಪಕ್ಷದ ಹೈಕಮಾಂಡ್ ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಸದ್ಯಕ್ಕೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಹೈಕಮಾಂಡ್‌ನ ನಿರ್ಧಾರವನ್ನು ಗಮನಿಸುತ್ತಿರುವುದಾಗಿ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಈಶ್ವರಪ್ಪ ಅವರ ‘ತಾವಾಗಲಿ ಅಥವಾ ಮಗನಾಗಲಿ 2028ರಲ್ಲಿ ಶಿವಮೊಗ್ಗ ನಗರದಿಂದ ಸ್ಪರ್ಧೆ ಖಚಿತ’ ಎಂಬ ಹೇಳಿಕೆ, ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ ಶಿವಮೊಗ್ಗದ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

Continue Reading

ಬೆಂಗಳೂರು

Bengaluru Teenage Pregnancy: ಬೆಂಗಳೂರಿನಲ್ಲಿ 17 ವರ್ಷದ ಬಾಲಕಿಯರ ಗರ್ಭಧಾರಣೆ ಹೆಚ್ಚಳ; 4 ತಿಂಗಳಲ್ಲಿ 60 ಪ್ರಕರಣ

Published

on

ಬೆಂಗಳೂರು:Bengaluru ನಗರದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಗರ್ಭಧಾರಣೆ ಪ್ರಕರಣಗಳು ಆರೋಗ್ಯ ಇಲಾಖೆಯ ಅಂಕಿ-ಅಂಶಗಳಲ್ಲಿ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ. 2026ರ ಏಪ್ರಿಲ್‌ನಿಂದ ಜುಲೈವರೆಗೆ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ 14ರಿಂದ 17 ವರ್ಷದೊಳಗಿನ 60 ಬಾಲಕಿಯರ ಗರ್ಭಧಾರಣೆ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ.

ವಿಧಾನಸಭೆಯಲ್ಲಿ ಮಂಡಿಸಲಾದ ಆರೋಗ್ಯ ಇಲಾಖೆಯ ಪೋರ್ಟಲ್‌ನ ಅಂಕಿ-ಅಂಶಗಳ ಆಧಾರದ ಮೇಲೆ ಈ ಮಾಹಿತಿ ಲಭ್ಯವಾಗಿದೆ. ಆದರೆ ಇವು ತಾತ್ಕಾಲಿಕ ಅಂಕಿ-ಅಂಶಗಳಾಗಿದ್ದು, ಆರೋಗ್ಯ ಕೇಂದ್ರಗಳ ದಾಖಲೆಗಳು ನವೀಕರಣಗೊಂಡ ಬಳಿಕ ಅಂತಿಮ ಸಂಖ್ಯೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಕರಣಗಳ ಇಳಿಕೆ

2024-25ರಲ್ಲಿ ಬೆಂಗಳೂರು ನಗರದಲ್ಲಿ 14ರಿಂದ 17 ವರ್ಷದ ಬಾಲಕಿಯರಿಗೆ ಸಂಬಂಧಿಸಿದಂತೆ ಒಟ್ಟು 394 ಗರ್ಭಧಾರಣೆ ಪ್ರಕರಣಗಳು ದಾಖಲಾಗಿದ್ದವು. 2025-26ರಲ್ಲಿ ಈ ಸಂಖ್ಯೆ 262ಕ್ಕೆ ಇಳಿಕೆಯಾಗಿದೆ. ಅಂದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.33.5ರಷ್ಟು ಇಳಿಕೆ ಕಂಡುಬಂದಿದೆ.

ಆದರೆ 2026-27ರ ಆರಂಭದ ಕೇವಲ ನಾಲ್ಕು ತಿಂಗಳಲ್ಲಿ 60 ಪ್ರಕರಣಗಳು ದಾಖಲಾಗಿರುವುದು ಗಮನ ಸೆಳೆದಿದೆ. ಈ ಸಂಖ್ಯೆ ವರ್ಷದ ಉಳಿದ ಅವಧಿಯಲ್ಲಿ ಹೇಗೆ ಬದಲಾಗಲಿದೆ ಎಂಬುದು ಆರೋಗ್ಯ ಇಲಾಖೆಯ ಅಂತಿಮ ಅಂಕಿ-ಅಂಶಗಳು ಬಿಡುಗಡೆಯಾದ ಬಳಿಕ ಸ್ಪಷ್ಟವಾಗಲಿದೆ.

ರಾಜ್ಯದಲ್ಲೂ ಗರ್ಭಧಾರಣೆ ಪ್ರಕರಣಗಳ ಇಳಿಕೆ

ಕರ್ನಾಟಕದ ಒಟ್ಟಾರೆ ಅಂಕಿ-ಅಂಶಗಳನ್ನು ಗಮನಿಸಿದರೆ, 2024-25ರಲ್ಲಿ 14ರಿಂದ 17 ವರ್ಷದ ಬಾಲಕಿಯರಲ್ಲಿ 4,579 ಗರ್ಭಧಾರಣೆ ಪ್ರಕರಣಗಳು ದಾಖಲಾಗಿದ್ದವು. 2025-26ರಲ್ಲಿ ಈ ಸಂಖ್ಯೆ 3,308ಕ್ಕೆ ಇಳಿಕೆಯಾಗಿದೆ. ಅಂದರೆ ಸುಮಾರು ಶೇ.28ರಷ್ಟು ಇಳಿಕೆ ಕಂಡುಬಂದಿದೆ.

2026ರ ಏಪ್ರಿಲ್‌ನಿಂದ ಜುಲೈವರೆಗೆ ರಾಜ್ಯಾದ್ಯಂತ 725 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಬೆಂಗಳೂರಿನ 60 ಪ್ರಕರಣಗಳು ಶೇ.8.3ರಷ್ಟು ಪಾಲು ಹೊಂದಿವೆ.

17 ವರ್ಷದ ಬಾಲಕಿಯರ ಸಂಖ್ಯೆಯೇ ಹೆಚ್ಚು

ಬೆಂಗಳೂರಿನ ವಯಸ್ಸುವಾರು ಅಂಕಿ-ಅಂಶಗಳನ್ನು ಗಮನಿಸಿದರೆ 17 ವರ್ಷದ ಬಾಲಕಿಯರಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. 2025-26ರಲ್ಲಿ 17 ವರ್ಷದವರಲ್ಲಿ 342 ಪ್ರಕರಣಗಳು ವರದಿಯಾಗಿದ್ದರೆ, 16 ವರ್ಷದವರಲ್ಲಿ 37, 15 ವರ್ಷದವರಲ್ಲಿ 12 ಹಾಗೂ 14 ವರ್ಷದವರಲ್ಲಿ 3 ಪ್ರಕರಣಗಳು ದಾಖಲಾಗಿದ್ದವು.

2026ರ ಏಪ್ರಿಲ್‌ನಿಂದ ಜುಲೈವರೆಗೆ ದಾಖಲಾಗಿರುವ 60 ಪ್ರಕರಣಗಳಲ್ಲಿ 17 ವರ್ಷದವರು 37, 16 ವರ್ಷದವರು 16, 15 ವರ್ಷದವರು 5 ಮತ್ತು 14 ವರ್ಷದವರು 2 ಪ್ರಕರಣಗಳಿದ್ದಾರೆ.

ಹದಿಹರೆಯದ ಗರ್ಭಧಾರಣೆಯಿಂದ ಆರೋಗ್ಯ ಅಪಾಯ

ತಜ್ಞರ ಪ್ರಕಾರ, ಹದಿಹರೆಯದಲ್ಲೇ ಗರ್ಭಧಾರಣೆಯಾಗುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಹಲವು ರೀತಿಯ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಅಕಾಲಿಕ ಹೆರಿಗೆ ಹಾಗೂ ಕಡಿಮೆ ತೂಕದ ಮಗು ಜನಿಸುವ ಅಪಾಯ ಹೆಚ್ಚಾಗಬಹುದು. ಹೀಗಾಗಿ ಪ್ರತಿಯೊಂದು ಪ್ರಕರಣದಲ್ಲೂ ಆರಂಭಿಕ ಪ್ರಸವಪೂರ್ವ ಆರೈಕೆ, ಪೌಷ್ಟಿಕಾಂಶದ ಮೌಲ್ಯಮಾಪನ ಮತ್ತು ಸೂಕ್ತ ಸಮಾಲೋಚನೆಗೆ ಆದ್ಯತೆ ನೀಡಬೇಕಿದೆ.

ಚಿಕ್ಕ ವಯಸ್ಸಿನ ಗರ್ಭಧಾರಣೆಯನ್ನು ಕೇವಲ ಸಾಮಾಜಿಕ ಸಮಸ್ಯೆಯಾಗಿ ನೋಡುವ ಬದಲು ವೈದ್ಯಕೀಯ ದೃಷ್ಟಿಯಿಂದಲೂ ಗಂಭೀರವಾಗಿ ಪರಿಗಣಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಾಲ್ಯವಿವಾಹ, ದೌರ್ಜನ್ಯ ಕುರಿತು ಪ್ರಶ್ನೆಗಳು

ಹದಿಹರೆಯದ ಬಾಲಕಿಯರಲ್ಲಿ ಗರ್ಭಧಾರಣೆ ಮುಂದುವರಿದಿರುವುದು ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ, ಸಂತಾನೋತ್ಪತ್ತಿ ಆರೋಗ್ಯದ ಕುರಿತು ಅರಿವಿನ ಕೊರತೆ ಹಾಗೂ ಅಗತ್ಯ ಆರೋಗ್ಯ ಸೇವೆಗಳ ಲಭ್ಯತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಅದೇ ವೇಳೆ, ಆರೋಗ್ಯ ಇಲಾಖೆಯ ಪೋರ್ಟಲ್‌ನಲ್ಲಿರುವ ಅಂಕಿ-ಅಂಶಗಳು ಇನ್ನೂ ಅಂತಿಮಗೊಂಡಿಲ್ಲ. ಆದ್ದರಿಂದ ಪ್ರಸ್ತುತ ಲಭ್ಯವಿರುವ ಸಂಖ್ಯೆಯನ್ನು ಅಂತಿಮ ವರ್ಷದ ಅಂಕಿ-ಅಂಶವೆಂದು ಪರಿಗಣಿಸಬಾರದು. ಆರೋಗ್ಯ ಕೇಂದ್ರಗಳ ದಾಖಲೆಗಳ ನವೀಕರಣದ ಬಳಿಕ ಪ್ರಕರಣಗಳ ನಿಖರ ಚಿತ್ರಣ ಲಭ್ಯವಾಗಲಿದೆ.

Continue Reading

ಅಪರಾಧ

Instagram Influencer Manjeet Kaur Death: ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ, ಕೊನೆಗೂ ದಾರುಣ ಅಂತ್ಯ

Published

on

ಚಂಡೀಗಢ: Instagram Influencer ಹಾಗೂ ಮಾಡೆಲ್ ಆಗಿ ಗುರುತಿಸಿಕೊಂಡಿದ್ದ Manjeet Kaur ಅವರ ಅಪಹರಣ ಮತ್ತು ಬೆಂಕಿ ಹಚ್ಚಿದ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಗಂಭೀರ ಸುಟ್ಟ ಗಾಯಗಳಿಂದಾಗಿ ಸುಮಾರು ಎರಡು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 28 ವರ್ಷದ ಮಂಜಿತ್ ಕೌರ್, ಆಗಸ್ಟ್ 26ರಂದು ಚಂಡೀಗಢದ ಪಿಜಿಐಎಂಇಆರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮಂಜಿತ್ ಕೌರ್ ವಿಚ್ಛೇದಿತರಾಗಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಅವರು ಏಳು ವಾರಗಳ ಗರ್ಭಿಣಿಯಾಗಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ಪರಿಚಯಸ್ಥರಿಂದಲೇ ತಮ್ಮ ಮಗಳ ಮೇಲೆ ದಾಳಿ ನಡೆದಿದೆ ಎಂದು ಮಂಜಿತ್ ಅವರ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಅಪಹರಿಸಿ ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ ಆರೋಪ

ತಾಯಿಯ ದೂರಿನ ಪ್ರಕಾರ, ಜುಲೈ 3ರಂದು ಮಂಜಿತ್ ಕೌರ್ ಅವರನ್ನು ಚಂಡೀಗಢದ ಸೆಕ್ಟರ್ 34ರ ಸಮೀಪಕ್ಕೆ ಬರುವಂತೆ ಪರಿಚಯಸ್ಥರಾದ ಶುಭಿ ಮತ್ತು ಪಿಂಡಾ ಎಂಬವರು ಬೆದರಿಸಿದ್ದರು ಎನ್ನಲಾಗಿದೆ. ಅಲ್ಲಿಗೆ ತೆರಳಿದ ಬಳಿಕ ಅವರನ್ನು ಬಲವಂತವಾಗಿ ಪಂಜಾಬ್‌ನ ರೂಪನಗರ ಜಿಲ್ಲೆಯ ಮೊರಿಂಡಾಗೆ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಅಲ್ಲಿ ಮಂಜಿತ್ ಅವರ ಮೇಲೆ ಹಲ್ಲೆ ನಡೆಸಿ ಮರಕ್ಕೆ ಕಟ್ಟಿ ಬೆಂಕಿ ಹಚ್ಚಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಮಂಜಿತ್ ಅವರ ಸ್ನೇಹಿತರೊಬ್ಬರು ಸ್ಥಳಕ್ಕೆ ಆಗಮಿಸಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು ಎನ್ನಲಾಗಿದೆ.

ತೀವ್ರ ಸುಟ್ಟ ಗಾಯಗಳಿಂದ ಚಿಕಿತ್ಸೆ

ಮೊದಲು ಮಂಜಿತ್ ಅವರನ್ನು ಮೊರಿಂಡಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೊಹಾಲಿಗೆ ಸ್ಥಳಾಂತರಿಸಲಾಗಿತ್ತು. ಸುಟ್ಟ ಗಾಯಗಳ ಗಂಭೀರತೆಯಿಂದಾಗಿ ಜುಲೈ 9ರಂದು ಚಂಡೀಗಢದ ಪಿಜಿಐಎಂಇಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು.

ಹಲವು ವಾರಗಳ ಕಾಲ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಆಗಸ್ಟ್ 5ರಂದು ಸ್ವಲ್ಪ ಚೇತರಿಸಿಕೊಂಡು ಮಾತನಾಡಲು ಆರಂಭಿಸಿದ್ದ ಮಂಜಿತ್, ತಮ್ಮ ಪೋಷಕರಿಗೆ ನಡೆದ ಘಟನೆಯ ಕುರಿತು ಕೆಲವು ಮಾಹಿತಿಗಳನ್ನು ನೀಡಿದ್ದರು ಎನ್ನಲಾಗಿದೆ. ಆದರೆ ನಂತರ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 26ರಂದು ಮೃತಪಟ್ಟಿದ್ದಾರೆ.

‘ಚೇತರಿಸಿಕೊಳ್ಳುತ್ತಿದ್ದಾರೆ’ ಎಂದಿದ್ದ ಸ್ನೇಹಿತ

ಜುಲೈ 28ರಂದು ಮಂಜಿತ್ ಅವರ ಆಪ್ತ ಸ್ನೇಹಿತ ಹಾಗೂ ಪಂಜಾಬ್ ಮೂಲದ ಇನ್‌ಫ್ಲುಯೆನ್ಸರ್ ಗಿಲ್ ಮೊಹಾಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಮಂಜಿತ್ ಸುಮಾರು ಶೇ.50ರಷ್ಟು ಚೇತರಿಸಿಕೊಂಡಿದ್ದಾರೆ ಮತ್ತು 10ರಿಂದ 15 ದಿನಗಳಲ್ಲಿ ಸ್ವತಃ ಲೈವ್ ಬಂದು ನಡೆದ ಘಟನೆ ಬಗ್ಗೆ ಮಾತನಾಡಲಿದ್ದಾರೆ ಎಂದು ತಿಳಿಸಿದ್ದರು.

ಆದರೆ, ಆಕೆ ಚೇತರಿಸಿಕೊಂಡು ಸಾರ್ವಜನಿಕವಾಗಿ ಮಾತನಾಡುವ ಮುನ್ನವೇ ಮೃತಪಟ್ಟಿರುವುದು ಕುಟುಂಬಸ್ಥರು ಹಾಗೂ ಆಪ್ತರಲ್ಲಿ ಆಘಾತ ಮೂಡಿಸಿದೆ.

ಇಬ್ಬರು ಆರೋಪಿಗಳಿಗಾಗಿ ಶೋಧ

ಮಂಜಿತ್ ಕೌರ್ ಸಾವಿನ ಬಳಿಕ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 140(1) ಅಪಹರಣ, 103(1) ಕೊಲೆ ಮತ್ತು 3(5) ಜಂಟಿ ಅಪರಾಧ ಹೊಣೆಗಾರಿಕೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಸೆಕ್ಟರ್ 34ರ ಎಸ್‌ಎಚ್‌ಒ ಶಾಧಿ ಲಾಲ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿರುವ ಶುಭಿ ಮತ್ತು ಪಿಂಡಾ ಅವರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಕರಣದ ಸಂಪೂರ್ಣ ತನಿಖೆಯ ಬಳಿಕ ದಾಳಿಯ ಹಿಂದಿನ ನಿಖರ ಕಾರಣ ಹಾಗೂ ಇತರ ಆರೋಪಿಗಳ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.

Continue Reading

Trending