ಬಿಬಿಎಂಪಿ
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಆಡಳಿತದ ಹೊಣೆ ಹೊತ್ತಿದ್ದ ʻಬಿಬಿಎಂಪಿʼ (BBMP) ಹೆಸರು ಇತಿಹಾಸ ಪುಟ ಸೇರಲಿದ್ದು, ನಾಳೆಯಿಂದ (ಮೇ 15) ಗ್ರೇಟರ್ ಬೆಂಗಳೂರು ಆಡಳಿತ ಜಾರಿಯಾಗಲಿದೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯು ʻಗ್ರೇಟರ್ ಬೆಂಗಳೂರು ಪ್ರಾಧಿಕಾರʼ (Greater Bengaluru Authority) ಆಗಿ ಬದಲಾಗಲಿದೆ. ಈ ಕುರಿತು ರಾಜ್ಯ ಸರ್ಕಾರ ಇಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಇದರೊಂದಿಗೆ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಲ್ಲಿ (Bengaluru Administrative Act) ಸುಗಮ ಆಡಳಿತ ತರುವ ದೃಷ್ಟಿಯಿಂದ ಗರಿಷ್ಠ 7 ಪಾಲಿಕೆ ರಚನೆಗೆ ಪ್ರಸ್ತಾಪ ಮಾಡಲಾಗಿದೆ. ಈ ಕಾಯ್ದೆಗೆ ನಿಯಮಾವಳಿ ರೂಪಿಸಿದ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಜೊತೆಗೆ ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ಜಿಬಿಎ ಮುಖ್ಯ ಆಯುಕ್ತರು ಎಂದು ಹೆಸರು ಬದಲಾವಣೆ ಮಾಡಲಾಗಿದೆ. ಜೊತೆಗೆ ಹೊಸ ಆಡಳಿತಾಧಿಕಾರಿಯನ್ನೂ ನೇಮಕ ಮಾಡಲಾಗುತ್ತದೆ.
ಕಾಯ್ದೆ ಹಾದಿ ಹೇಗೆ?
ವಿಧಾನ ಮಂಡಲದಲ್ಲಿ ಮಾರ್ಚ್ 13ರಂದು ಅಂಗೀಕಾರವಾಗಿದ್ದ ʻಗ್ರೇಟರ್ ಬೆಂಗಳೂರು ಆಡಳಿತ ಮಸೂದೆ-2024ʼಯನ್ನು ರಾಜ್ಯಪಾಲರ ಅಂಕಿತಕ್ಕಾಗಿ 2025ರ ಮಾರ್ಚ್ 17ರಂದು ಕಳುಹಿಸಲಾಗಿತ್ತು. ಮಸೂದೆಯು ಸಂವಿಧಾನದ 74ನೇʼ ತಿದ್ದುಪಡಿಗೆ ವಿರುದ್ಧವಾಗಿದೆ ಮತ್ತು ದೆಹಲಿ ಮಹಾನಗರ ಪಾಲಿಕೆಯ ವಿಭಜನೆ ಸಂದರ್ಭದಲ್ಲಿ ಆದಂತೆ ಸಮಸ್ಯೆಗಳು ಸೃಷ್ಟಿಯಾಗುತ್ತವೆʼ ಎಂದು ಬೆಂಗಳೂರು ಟೌನ್ ಹಾಲ್ ಸಂಘಟನೆ ಹಾಗೂ ಬಿಜೆಪಿ ನಾಯಕರ ನಿಯೋಗಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದವು. ಮಸೂದೆಯನ್ನು ತಡೆ ಹಿಡಿಯುವಂತೆಯೂ ಒತ್ತಾಯಿಸಿದ್ದವು.
ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯಪಾಲರು ʻಎರಡೂ ಮನವಿಗಳನ್ನು ನಾನು ಪರಿಶೀಲಿಸಿದ್ದೇನೆ. ಈ ಮಸೂದೆಯು ಕಾನೂನಾತ್ಮಕ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಒಳಗೊಂಡಿದೆ. ಆದ್ದರಿಂದ ಎರಡೂ ಮನವಿ ಪತ್ರಗಳಲ್ಲಿ ಪ್ರಸ್ತಾಪಿಸಿರುವ ಪ್ರಮುಖ ವಿಷಯಗಳ ಕುರಿತು ಸ್ಪಷ್ಟನೆ ಅಗತ್ಯವಿದೆ’ ಎಂದು ಮಾರ್ಚ್ 25ರಂದು ಮಸೂದೆಯನ್ನು ಹಿಂದಿರುಗಿಸಿದ್ದರು. ಅದಕ್ಕೆ ಅಗತ್ಯ ಸ್ಪಷನೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಏಪ್ರಿಲ್ 24ರಂದು ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದರು. ಅಂದು ಸಂಜೆಯೇ ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ- 2024’ ಅನ್ನು ಅಧಿಸೂಚಿಸಿ, ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು.
ಮೇ 15ರಿಂದ:
ಸದ್ಯ ಬಿಬಿಎಂಪಿಯ 225 ವಾರ್ಡ್ಗಳು ಜೆಬಿಎ ವ್ಯಾಪ್ತಿಯಲ್ಲಿರಲಿದೆ. ನಂತರ ಬಿಬಿಎಂಪಿ ವ್ಯಾಪ್ತಿ ಮಾತ್ರ ʻಗ್ರೇಟರ್ ಬೆಂಗಳೂರು ಪ್ರದೇಶʼ ಎಂದಾಗಲಿದ್ದರೂ ನಂತರದ ದಿನಗಳಲ್ಲಿ ವ್ಯಾಪ್ತಿ ಹಿಗ್ಗಲಿದೆ. ತಲಾ ಸುಮಾರು 125 ವಾರ್ಡ್ಗಳ ಮೂರು ನಗರ ಪಾಲಿಕೆಗಳನ್ನು ರಚಿಸುವ ಯೋಜನೆ ಇದ್ದು ಅದಕ್ಕೆ ತಕ್ಕಂತೆ ʻಗ್ರೇಟರ್ ಬೆಂಗಳೂರು ಪ್ರದೇಶʼದ ಗಡಿಯನ್ನು ಗುರುತಿಸಲಾಗುತ್ತದೆ. ನಗರದ ಸುತ್ತಲಿರುವ ಕೈಗಾರಿಕಾ ಪ್ರದೇಶಗಳನ್ನೂ ಒಳಗೊಂಡಂತೆ ಎಲೆಕ್ಟ್ರಾನಿಕ್ ಸಿಟಿ ಅತ್ತಿಬೆಲೆ ಜಿಗಣಿ ಕೈಗಾರಿಕೆ ಪ್ರದೇಶ ಬೊಮ್ಮಸಂದ್ರ, ಸರ್ಜಾಪುರ, ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ, ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ʻಗ್ರೇಟರ್ ಬೆಂಗಳೂರು ಪ್ರದೇಶʼಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಕಾಯ್ದೆಯಲ್ಲೇ ಇರುವಂತೆ ಎಲ್ಲ ನಗರ ಪಾಲಿಕೆಗಳ ಹೆಸರು ʻಬೆಂಗಳೂರುʼ ಎಂದೇ ಆರಂಭವಾಗಬೇಕಿದೆ. ʻಬೆಂಗಳೂರು ಕೇಂದ್ರ ನಗರ ಪಾಲಿಕೆʼ ʻಬೆಂಗಳೂರು ಉತ್ತರ ನಗರ ಪಾಲಿಕೆʼ ʻಬೆಂಗಳೂರು ದಕ್ಷಿಣ ನಗರ ಪಾಲಿಕೆʼ… ಹೀಗೆ ಹೆಸರಿಸಲಾಗುತ್ತದೆ. ʻಗ್ರೇಟರ್ ಬೆಂಗಳೂರು ಪ್ರದೇಶʼ ವ್ಯಾಪ್ತಿಯನ್ನು ಹಿಗ್ಗಿಸಿದ ಮೇಲೆ ಅದರನ್ವಯ ಮೂರು ಅಥವಾ ಐದು ನಗರಪಾಲಿಕೆಗಳನ್ನು ರಚಿಸಲಾಗುತ್ತದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.
ಬಿಬಿಎಂಪಿ
Apex Bank News ಡಿಕೆಶಿ ವಿರುದ್ಧ ಧ್ವನಿ ಎತ್ತಿದವರಿಗೆ ಶಾಕ್? ಅಪೆಕ್ಸ್ ಬ್ಯಾಂಕ್ ಹುದ್ದೆ ರವಿಗೆ, ಕಾಂಗ್ರೆಸ್ನಲ್ಲಿ ಮತ್ತೆ ಚರ್ಚೆ!
ಬೆಂಗಳೂರು: ರಾಜ್ಯ ಸಹಕಾರ ಕ್ಷೇತ್ರದ ಪ್ರಮುಖ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ನ ಅಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ರವಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಬಂಧಿ ಹಾಗೂ ಆಪ್ತರಾಗಿರುವ ರವಿ ಅವರಿಗೆ ಅಧ್ಯಕ್ಷ ಸ್ಥಾನ ಒಲಿದಿದ್ದು, ಉಪಾಧ್ಯಕ್ಷರಾಗಿ ಶರಣಗೌಡ ಬಯ್ಯಾಪುರ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಯಾರಿಗೆ ಎಂಬ ಹಲವು ದಿನಗಳ ಕುತೂಹಲಕ್ಕೆ ತೆರೆ ಬಿದ್ದಿದೆ.

ಅವಿರೋಧವಾಗಿ ಆಯ್ಕೆಯಾದ ರವಿ ಮತ್ತು ಶರಣಗೌಡ
ಅಪೆಕ್ಸ್ ಬ್ಯಾಂಕ್ಗೆ ಸುಮಾರು ನಾಲ್ಕು ತಿಂಗಳ ಹಿಂದೆಯೇ ಚುನಾವಣೆ ನಡೆಯಬೇಕಿತ್ತು. ಆದರೆ ಅಧ್ಯಕ್ಷ ಸ್ಥಾನಕ್ಕೆ ಹಲವು ಆಕಾಂಕ್ಷಿಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದ್ದರಿಂದ ಚುನಾವಣೆ ಮುಂದೂಡಿಕೆಯಾಗಿತ್ತು. ಅಂತಿಮವಾಗಿ ಎಂಎಲ್ಸಿ ರವಿ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದಿತ್ತು.
ಇದೀಗ ಕಾಂಗ್ರೆಸ್ ಹೈಕಮಾಂಡ್ನ ತೀರ್ಮಾನದಂತೆ ರವಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಶರಣಗೌಡ ಬಯ್ಯಾಪುರ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಬಹುತೇಕ ನಿರ್ದೇಶಕರು ರವಿ ಅವರ ಪರ ಒಲವು ತೋರಿದ ಹಿನ್ನೆಲೆಯಲ್ಲಿ ಚುನಾವಣೆಯ ಬದಲಿಗೆ ಇಬ್ಬರನ್ನೂ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
19 ನಿರ್ದೇಶಕರೊಂದಿಗೆ ಡಿಕೆಶಿ ಸಭೆ
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಬುಧವಾರ ಮಹತ್ವದ ರಾಜಕೀಯ ಚಟುವಟಿಕೆಗಳು ನಡೆದಿದ್ದವು. ಸಹಕಾರ ಸಚಿವ ಲಕ್ಷ್ಮಣ ಸವದಿ ಅವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಪೆಕ್ಸ್ ಬ್ಯಾಂಕ್ನ 19 ನಿರ್ದೇಶಕರೊಂದಿಗೆ ಸಭೆ ನಡೆಸಿದ್ದರು.
ಇದಾದ ಬಳಿಕ ಸಂಜೆ ನಿರ್ದೇಶಕರು, ಸಹಕಾರ ಸಚಿವ ಲಕ್ಷ್ಮಣ ಸವದಿ ಹಾಗೂ ಕೆ.ಎನ್. ರಾಜಣ್ಣ ಅವರು ಖಾಸಗಿ ಹೋಟೆಲ್ನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದರು. ಈ ಸಭೆಯ ವೇಳೆಗೆ ಬಹುತೇಕ ನಿರ್ದೇಶಕರು ರವಿ ಅವರ ಪರವಾಗಿದ್ದ ಹಿನ್ನೆಲೆಯಲ್ಲಿ ಚುನಾವಣೆಗೆ ಹೋಗದೆ ಅವಿರೋಧ ಆಯ್ಕೆಗೆ ಒಮ್ಮತ ಮೂಡಿದೆ ಎನ್ನಲಾಗಿದೆ.
ಮೊದಲ ಎರಡೂವರೆ ವರ್ಷ ರವಿಗೆ ಅಧ್ಯಕ್ಷ ಸ್ಥಾನ
ಅಪೆಕ್ಸ್ ಬ್ಯಾಂಕ್ ಚುನಾವಣಾ ಪ್ರಕ್ರಿಯೆ ಕುರಿತು ಬೆಂಗಳೂರಿನಲ್ಲಿ ಸಹಕಾರ ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ. ಮೊದಲ ಎರಡೂವರೆ ವರ್ಷಗಳ ಅವಧಿಗೆ ಎಂಎಲ್ಸಿ ರವಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಶರಣಗೌಡ ಬಯ್ಯಾಪುರ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆಯ ಬಳಿಕ ಇಬ್ಬರ ಆಯ್ಕೆ ಅಂತಿಮಗೊಂಡಿದ್ದು, ನಂತರದ ಎರಡೂವರೆ ವರ್ಷಗಳ ಅಧಿಕಾರಾವಧಿ ಕುರಿತು ಆ ಬಳಿಕವೇ ತೀರ್ಮಾನಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ರಾಜಣ್ಣಗೆ ತಪ್ಪಿದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಪಡೆಯುವ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಇದೀಗ ಹಿನ್ನಡೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿರುವ ರಾಜಣ್ಣ ಅವರು ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನದಿಂದ ವಂಚಿತರಾದ ಬಳಿಕ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಪಡೆಯುವ ನಿರೀಕ್ಷೆಯಲ್ಲಿದ್ದರು.
ಆದರೆ ಇದೀಗ ರವಿ ಅವರಿಗೆ ಅಧ್ಯಕ್ಷ ಸ್ಥಾನ ಒಲಿದಿರುವುದರಿಂದ ರಾಜಣ್ಣ ಅವರ ರಾಜಕೀಯ ನಿರೀಕ್ಷೆಗೆ ಹಿನ್ನಡೆಯಾಗಿದೆ. ಈ ಬೆಳವಣಿಗೆ ಕಾಂಗ್ರೆಸ್ನೊಳಗಿನ ಅಧಿಕಾರದ ಸಮೀಕರಣಗಳ ಬಗ್ಗೆಯೂ ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್ನಲ್ಲಿ ಮತ್ತೆ ರಾಜಕೀಯ ಚರ್ಚೆ
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಹಂಚಿಕೆಯ ಬೆನ್ನಲ್ಲೇ ಕಾಂಗ್ರೆಸ್ನ ಆಂತರಿಕ ರಾಜಕೀಯದ ಕುರಿತು ಚರ್ಚೆ ಮತ್ತಷ್ಟು ತೀವ್ರವಾಗಿದೆ. ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿಯನ್ನು ಬಹಿರಂಗವಾಗಿ ಪ್ರಶ್ನಿಸುತ್ತಿದ್ದ ನಾಯಕರನ್ನು ಪ್ರಮುಖ ಹುದ್ದೆಗಳಿಂದ ದೂರವಿಡಲಾಗುತ್ತಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಮಾಜಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಕೆ.ಎನ್. ರಾಜಣ್ಣ ಅವರು ಅಧಿಕಾರದಿಂದ ದೂರ ಉಳಿದಿರುವುದನ್ನು ಈ ಬೆಳವಣಿಗೆಯೊಂದಿಗೆ ಹೋಲಿಸಲಾಗುತ್ತಿದೆ. ಮತ್ತೊಂದೆಡೆ, ರಾಜಕೀಯ ಸನ್ನಿವೇಶಕ್ಕೆ ತಕ್ಕಂತೆ ಹೆಜ್ಜೆ ಇಟ್ಟಿರುವ ಜಮೀರ್ ಅಹ್ಮದ್ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಒಟ್ಟಿನಲ್ಲಿ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ರವಿ ಅವರ ಪಾಲಾಗಿರುವುದು ಕಾಂಗ್ರೆಸ್ನೊಳಗಿನ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿಸಿದೆ. ವಿಶೇಷವಾಗಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಣಗಳ ನಡುವಿನ ರಾಜಕೀಯ ಸಮೀಕರಣಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ರಾಜ್ಯ
Karnataka ಮುಂಗಾರು ಅಧಿವೇಶನದ ಹೈಲೈಟ್ ಸಿದ್ದರಾಮಯ್ಯ! ಮಾಜಿ ಸಿಎಂ ಹೊಸ ಪಾತ್ರದತ್ತ ಎಲ್ಲರ ಕಣ್ಣು
ಬೆಂಗಳೂರು: Karnataka ವಿಧಾನಮಂಡಲದ ಮುಂಗಾರು ಅಧಿವೇಶನ ಆಗಸ್ಟ್ 13ರಿಂದ ಆರಂಭವಾಗಲಿದ್ದು, ಈ ಬಾರಿಯ ಅಧಿವೇಶನ ಹಲವು ರಾಜಕೀಯ ಕಾರಣಗಳಿಂದ ವಿಶೇಷ ಮಹತ್ವ ಪಡೆದುಕೊಂಡಿದೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ siddaramaiah ಅವರ ಹಾಜರಾತಿ ಎಲ್ಲರ ಗಮನ ಸೆಳೆದಿದೆ. ಎರಡು ಬಾರಿ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿ, ಬಳಿಕ ಸುಮಾರು ಏಳೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಸಿದ್ದರಾಮಯ್ಯ ಇದೀಗ ಹಲವು ವರ್ಷಗಳ ಬಳಿಕ ಕೇವಲ ಶಾಸಕರಾಗಿ ವಿಧಾನಸಭೆಗೆ ಪ್ರವೇಶಿಸುತ್ತಿರುವುದು ವಿಶೇಷ ಚರ್ಚೆಗೆ ಕಾರಣವಾಗಿದೆ.
ರಾಜಕೀಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬಿದ್ದ ಸಿದ್ದರಾಮಯ್ಯ ಈಗ ಸದನದಲ್ಲಿ ಯಾವ ಆಸನದಲ್ಲಿ ಕುಳಿತುಕೊಳ್ಳಲಿದ್ದಾರೆ ಎಂಬ ಕುತೂಹಲವೂ ಹೆಚ್ಚಾಗಿದೆ. ವಿಧಾನಸಭೆಯ ಶಿಷ್ಟಾಚಾರದ ಪ್ರಕಾರ ಸಚಿವ ಸಂಪುಟದ ಸದಸ್ಯರಿಗೆ ಮೊದಲ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗುತ್ತದೆ. ಮಾಜಿ ಮುಖ್ಯಮಂತ್ರಿಗಳಿಗೆ ಆಸನ ಆಯ್ಕೆ ಮಾಡುವ ಸ್ವಾತಂತ್ರ್ಯವಿದ್ದು, ಅವರು ಬಯಸಿದ ಸ್ಥಳದಲ್ಲಿ ಕುಳಿತುಕೊಳ್ಳಬಹುದು.
ಸಾಮಾನ್ಯವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಹಿರಿಯ ಸಚಿವರಿಗೆ ಮೊದಲ ಸಾಲಿನಲ್ಲಿ ಆಸನಗಳನ್ನು ಮೀಸಲಿಡಲಾಗುತ್ತದೆ. ಒಟ್ಟು ಸುಮಾರು 33 ಸಚಿವರ ಆಸನಗಳ ಬಳಿಕ ಉಳಿಯುವ ಸ್ಥಳಗಳಲ್ಲಿ ಅಥವಾ ಹಿಂಬದಿ ಸಾಲುಗಳಲ್ಲಿ ಮಾಜಿ ಮುಖ್ಯಮಂತ್ರಿಗಳಿಗೆ ಆಸನ ಕಲ್ಪಿಸುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಮಂತ್ರಿಗಳ ಸಾಲಿನ ಹಿಂದಿನ ಆಸನವನ್ನು ಆಯ್ಕೆ ಮಾಡುತ್ತಾರೆಯೇ ಅಥವಾ ಸಂಪೂರ್ಣ ಹಿಂಬದಿ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆಯೇ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್ ಹಾಗೂ ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಹಿಂಬದಿ ಸಾಲಿನ ಆಸನಗಳನ್ನೇ ಆಯ್ಕೆ ಮಾಡಿಕೊಂಡಿದ್ದರು. ಅದೇ ಸಂಪ್ರದಾಯವನ್ನು ಸಿದ್ದರಾಮಯ್ಯ ಮುಂದುವರಿಸುತ್ತಾರೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ಆಸನದ ಆಯ್ಕೆ ಮಾತ್ರವಲ್ಲ, ಈ ಬಾರಿಯ ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರ ಪಾತ್ರವೂ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ಪ್ರತಿಪಕ್ಷಗಳು ಹಲವು ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಳ್ಳಲು ಸಜ್ಜಾಗಿವೆ. ಬರ ಪರಿಸ್ಥಿತಿ ನಿರ್ವಹಣೆ, ಕಾನೂನು ಸುವ್ಯವಸ್ಥೆ, ಕೆಪಿಎಸ್ಸಿ ನೇಮಕಾತಿ ಅಕ್ರಮ ಆರೋಪಗಳು ಸೇರಿದಂತೆ ಹಲವು ವಿಷಯಗಳು ಸದನದಲ್ಲಿ ಪ್ರತಿಧ್ವನಿಸುವ ಸಾಧ್ಯತೆಯಿದೆ.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಪರವಾಗಿ ಯಾವ ರೀತಿಯಲ್ಲಿ ವಾದ ಮಂಡಿಸುತ್ತಾರೆ, ತಮ್ಮ ಅನುಭವವನ್ನು ಹೇಗೆ ಬಳಸಿಕೊಳ್ಳುತ್ತಾರೆ ಹಾಗೂ ಆಡಳಿತಕ್ಕೆ ಯಾವ ರೀತಿಯ ರಾಜಕೀಯ ಬೆಂಬಲ ನೀಡುತ್ತಾರೆ ಎಂಬುದರ ಮೇಲೆ ಆಡಳಿತ ಮತ್ತು ಪ್ರತಿಪಕ್ಷ ಎರಡರ ಕಣ್ಣೂ ನೆಟ್ಟಿದೆ.
ಕಳೆದ ಅಧಿವೇಶನದಲ್ಲಿ ಮುಖ್ಯಮಂತ್ರಿಯಾಗಿ ಸದನ ಮುನ್ನಡೆಸಿದ್ದ ಸಿದ್ದರಾಮಯ್ಯ, ಈ ಬಾರಿ ಮಾಜಿ ಮುಖ್ಯಮಂತ್ರಿಯಾಗಿ ಮತ್ತು ಸಾಮಾನ್ಯ ಶಾಸಕರಾಗಿ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿರುವುದು ವಿಧಾನಸಭೆಯ ಇತಿಹಾಸದಲ್ಲಿಯೂ ಗಮನಾರ್ಹ ಬೆಳವಣಿಗೆಯಾಗಿದೆ. ಹೀಗಾಗಿ ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಅವರ ಪ್ರತಿಯೊಂದು ನಡೆ ಮತ್ತು ಹೇಳಿಕೆ ರಾಜಕೀಯವಾಗಿ ಹೆಚ್ಚಿನ ಮಹತ್ವ ಪಡೆಯುವ ನಿರೀಕ್ಷೆಯಿದೆ.
ಚುನಾವಣೆ
GBA ELECTION : ಜುಲೈ ಮೊದಲ ವಾರದಲ್ಲೇ ವೇಳಾಪಟ್ಟಿ? ಬೆಂಗಳೂರು ರಾಜಕೀಯ ಕಣ ರಂಗೇರಲು ಸಜ್ಜು
ಬೆಂಗಳೂರು: ಸುಪ್ರೀಂ ಕೋರ್ಟ್ ನೀಡಿರುವ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರಪಾಲಿಕೆಗಳ ಚುನಾವಣೆ ಆಗಸ್ಟ್ 31ರೊಳಗೆ ನಡೆಸುವುದು ಬಹುತೇಕ ಖಚಿತವಾಗಿದೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಚುನಾವಣಾ ಆಯೋಗವು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಆರಂಭಿಸಿದೆ.
ಮೂಲಗಳ ಪ್ರಕಾರ, ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಅಧಿಕೃತ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಜುಲೈ 10ರೊಳಗೆ ದಿನಾಂಕ ಘೋಷಣೆಯಾಗಬಹುದು ಎಂದು ಹೇಳಲಾಗುತ್ತಿದ್ದು, ವೇಳಾಪಟ್ಟಿ ಪ್ರಕಟವಾದ ತಕ್ಷಣವೇ ಬೆಂಗಳೂರು ನಗರದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಆಗಸ್ಟ್ ಮೂರನೇ ವಾರದಲ್ಲಿ ಮತದಾನ ನಡೆಸುವ ಬಗ್ಗೆ ಆಯೋಗ ಚಿಂತನೆ ನಡೆಸಿದೆ.
ಈ ಹಿಂದೆ ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಗಡುವು ನೀಡಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಹಾಗೂ ಸಿಬ್ಬಂದಿ ಕೊರತೆಯನ್ನು ಪರಿಗಣಿಸಿ ನ್ಯಾಯಾಲಯವು ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿತ್ತು. ಜೊತೆಗೆ, ಯಾವುದೇ ಕಾರಣಕ್ಕೂ ಮತ್ತೆ ಚುನಾವಣೆ ಮುಂದೂಡುವ ಪ್ರಸ್ತಾಪವನ್ನು ತನ್ನ ಮುಂದೆ ತರಬಾರದು ಎಂದು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ ಅಂತ್ಯದವರೆಗೆ ಕಾಲಾವಕಾಶ ನೀಡುವಂತೆ ಸರ್ಕಾರ ಸಲ್ಲಿಸಿದ್ದ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.
ಇದರ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿ ಅಂತಿಮಗೊಳಿಸುವುದು, ಮತಗಟ್ಟೆಗಳ ಸಿದ್ಧತೆ ಹಾಗೂ ಸಿಬ್ಬಂದಿ ನಿಯೋಜನೆ ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿದೆ. ರಾಜಕೀಯ ಪಕ್ಷಗಳೂ ಚುನಾವಣೆಗೆ ಸಜ್ಜಾಗಿವೆ. ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಕಾರ್ಯಕರ್ತರಿಗೆ ಸೂಚನೆ ನೀಡಿದೆ. ಬಿಜೆಪಿ, ಕಳೆದ ಆರು ವರ್ಷಗಳಿಂದ ಚುನಾವಣೆ ನಡೆಯದ ಪರಿಣಾಮ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಆರೋಪಿಸುತ್ತಿದೆ. ಇತ್ತ ಬಿಜೆಪಿ-ಜೆಡಿಎಸ್ ಮೈತ್ರಿಯೂ ಚುನಾವಣಾ ಅಖಾಡಕ್ಕೆ ಸಜ್ಜಾಗಿದ್ದು, ಪಂಚ ಪಾಲಿಕೆ ಚುನಾವಣೆ ಭಾರೀ ಪೈಪೋಟಿಗೆ ಸಾಕ್ಷಿಯಾಗುವ ನಿರೀಕ್ಷೆ ಮೂಡಿದೆ.
-
ರಾಜ್ಯ23 ಗಂಟೆಗಳು agoCM D K Shiv Kumar: ಟನ್ಗೆ ₹1,000 ಪ್ರೋತ್ಸಾಹಧನಕ್ಕೆ ರೈತರ ಪಟ್ಟು; ಸಿಎಂ ಹೇಳಿದ್ದೇನು?
-
ಬೆಂಗಳೂರು19 ಗಂಟೆಗಳು agoKarnataka ಸರ್ಕಾರಿ ನೌಕರರಿಗೆ ಹೊಸ ರೂಲ್ಸ್: ರಾತ್ರಿ ಹಾಜರಾತಿ ಕಡ್ಡಾಯ
-
ದೇಶ24 ಗಂಟೆಗಳು agoKolkata Stampede: ಕೋಲ್ಕತ್ತಾ ದುರ್ಗಾ ಪೂಜಾ ಪೆಂಡಾಲ್ನಲ್ಲಿ ಕಾಲ್ತುಳಿತ: 19 ಮಂದಿ ಸಾವು
-
ದೇಶ15 ಗಂಟೆಗಳು agoIshraque Hossain: ಬಾಂಗ್ಲಾದೇಶದಲ್ಲಿ ಡ್ರಗ್ಸ್ ಅಡ್ಡೆ ಮೇಲೆ ಸಚಿವ ಇಶ್ರಾಕ್ ಹುಸೇನ್ ದಾಳಿ
-
ಬೆಂಗಳೂರು24 ಗಂಟೆಗಳು agoLeopard: ಹುಣಸನಹಳ್ಳಿ ಬಳಿ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ
-
ಬೆಂಗಳೂರು17 ಗಂಟೆಗಳು agoBangalore: ಬೆಂಗಳೂರು ನೈಸ್ ರಸ್ತೆಯಲ್ಲಿ ಕೆಮಿಕಲ್ ಟ್ಯಾಂಕರ್ಗೆ ಬೆಂಕಿ; ಟ್ರಾಫಿಕ್ ಜಾಮ್
-
ರಾಜ್ಯ16 ಗಂಟೆಗಳು agoKR Nagar Arkeshwara Temple: ಮೈಸೂರು ಅರ್ಕೇಶ್ವರ ದೇವಾಲಯದ ಗೋಡೆಯ ಚಿತ್ರಗಳಿಗೆ ಬಣ್ಣ: ಪೊಲೀಸರಿಂದ ಮುಂದಿನ ಕ್ರಮದ ಭರವಸೆ
-
ಸಿನಿಮಾ16 ಗಂಟೆಗಳು agoPrabhas: ಪ್ರಭಾಸ್ ಸ್ಪಿರಿಟ್ ಸಿನಿಮಾ ಬಿಡುಗಡೆ ದಿನಾಂಕ; ಮುಂದಿನ ದೀಪಾವಳಿಗೆ ತೆರೆಗೆ?
