Connect with us

ಬೆಂಗಳೂರು

ನಾಳೆ ನೇರಳೆ ಮಾರ್ಗದ ಮೆಟ್ರೋ ಪ್ರಯಾಣದಲ್ಲಿ ವ್ಯತ್ಯಯ  ಈ ಟೈಮಲ್ಲಿ ಸೇವೆ ಇಲ್ಲ

Published

on

ನಾಳೆ ನೇರಳೆ ಮಾರ್ಗದ ಮೆಟ್ರೋ ಪ್ರಯಾಣದಲ್ಲಿ ವ್ಯತ್ಯಯ ಈ ಟೈಮಲ್ಲಿ ಸೇವೆ ಇಲ್ಲ

ಬೆಂಗಳೂರುನಗರದ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಮಾಹಿತಿಯನ್ನು ಬಿಎಂಆರ್‌ಸಿಎಲ್‌ ನೀಡಿದೆ. ನೇರಳೆ ಮಾರ್ಗದ ಮೆಟ್ರೋ  ಬಳಸುವವರಿಗೆ ಗುರುವಾರ ಸಂಚಾರದಲ್ಲಿ ಅಡಚಣೆಯಾಗಲಿದೆ ಎಂದು ಮಾಹಿತಿ ನೀಡಿದೆ.

ಗುರುವಾರ (ಸೆಪ್ಟೆಂಬರ್‌ 21) ಬೈಯಪ್ಪನಹಳ್ಳಿ-ಕೆಆರ್ ಪುರ ವಿಭಾಗದ (Baiyappanahalli and KR Pura division) 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ತಪಾಸಣೆ ಕಾರ್ಯವನ್ನು ಕೈಗೊಳ್ಳಲಾಗಿದೆ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ (ದಕ್ಷಿಣ ವೃತ್ತ) ಸುರಕ್ಷತಾ ಪರಿಶೀಲನೆ ನಡೆಯಲಿದೆ. ಅಲ್ಲದೆ, ಸುರಕ್ಷತಾ ತಪಾಸಣೆ ಇರುವ ಕಾರಣ ಈ ಮಾರ್ಗದಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಬೈಯಪ್ಪನಹಳ್ಳಿ-ಇಂದಿರಾನಗರದ (Baiyappanahalli and Indiranagar) ನಡುವೆ ಸೆಪ್ಟೆಂಬರ್ 21ರಂದು ಮಧ್ಯಾಹ್ನ 1.30 ರಿಂದ ಸಂಜೆ 4.30ರವರೆಗೆ ಮೆಟ್ರೋ ರೈಲು ಸಂಚಾರ ಇರುವುದಿಲ್ಲ. ಮಧ್ಯಾಹ್ನ 1.30 ರವರೆಗೆ ಮತ್ತು ಸಂಜೆ 4.30ರ ನಂತರ ರೈಲು ಸಂಚಾರ ಎಂದಿನಂತೆ ಇರಲಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಕಾಡುಗೋಡಿ (ವೈಟ್‌ಫೀಲ್ಡ್) – ಗರುಡಾಚಾರ್ ಪಾಳ್ಯ ಮತ್ತು ಇಂದಿರಾನಗರ – ಕೆಂಗೇರಿ ನಡುವೆ ಮೆಟ್ರೋ ರೈಲು ಸಂಚಾರ ಎಂದಿನಂತೆ ಇರಲಿದೆ ಎಂದೂ ಬಿಎಂಆರ್‌ಸಿಎಲ್‌ ಸ್ಪಷ್ಟಪಡಿಸಿದೆ. ರಾಜಧಾನಿ ಬೆಂಗಳೂರಲ್ಲಿ ಬಿಎಂಆರ್‌ಸಿಎಲ್‌ ಮತ್ತೊಂದು ಹಂತದ ಮೆಟ್ರೋ ಸಂಚಾರಕ್ಕೆ ಸಜ್ಜಾಗುತ್ತಿದೆ. ಬೈಯಪ್ಪನಹಳ್ಳಿ-ಕೆಆರ್‌ಪುರಂ (Baiyappanahalli and KR Pura route), ಕೆಂಗೇರಿ-ಚಲ್ಲಘಟ್ಟ ಮಾರ್ಗದ (Kengeri and Challaghatta route) ಮೆಟ್ರೋ ಸಂಚಾರಕ್ಕೆ ಸಿದ್ಧ ಮಾಡಿಕೊಳ್ಳುತ್ತಿದೆ. ಈ ಮಾರ್ಗವು ಸೆ. 29ರಂದು ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ.

ಈಗಾಗಲೇ ಸಂಪೂರ್ಣ ಕಾಮಗಾರಿ ಮುಗಿಸಿ ರೈಲಿನ ಟ್ರಯಲ್ ರನ್ ನಡೆಸಲಾಗುತ್ತಿದೆ. ಮೆಟ್ರೊ ರೈಲು ಸುರಕ್ಷತಾ ಆಯುಕ್ತರು (Commissioner of Railway Safety – ಸಿಎಂಆರ್‌ಎಸ್) ಬಿಎಂಆರ್‌ಸಿಎಲ್‌ಗೆ ಕೆಲವು ಸ್ಪಷ್ಟೀಕರಣಗಳನ್ನು ಕೇಳಿದೆ. ಅದೆಲ್ಲವೂ ಮುಗಿದು ಸಿಎಂಆರ್‌ಎಸ್‌ ಗ್ರೀನ್‌ ಸಿಗ್ನಲ್‌ ನೀಡಿದರೆ ಸೆ.29 ರಂದು ಬೈಯಪ್ಪನಹಳ್ಳಿ-ಕೆಆರ್‌ ಪುರಂ ಮತ್ತು ಕೆಂಗೇರಿ-ಚಲ್ಲಘಟ್ಟ ನಡುವಿನ ಮೆಟ್ರೋ ಸಂಚಾರ ಆರಂಭಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ನೇರಳೆ ಮಾರ್ಗವು 39.34 ಕಿ.ಮೀ ಉದ್ದವಿದ್ದು, ಬೈಯಪ್ಪನಹಳ್ಳಿಯಿಂದ ಕೆಂಗೇರಿ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಿಂದ ಕೆಆರ್ ಪುರಕ್ಕೆ ಸಂಪರ್ಕಿಸುತ್ತದೆ. ಕೆ.ಆರ್. ಪುರ ಮತ್ತು ಬೈಯಪ್ಪನಹಳ್ಳಿ ನಡುವಿನ ಚೈನ್‌ ಲಿಂಕ್ ಪೂರ್ಣಗೊಂಡರೆ ಪ್ರಯಾಣಿಕರಿಗೆ ಸುಲಭವಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಹದೇವಪುರ, ಐಟಿಪಿಬಿ ಮತ್ತು ಕಾಡುಗೋಡಿ ಮುಂತಾದ ಪ್ರದೇಶಗಳಿಗೆ ಹೋಗುವ ಐಟಿ ಮಂದಿಗೆ ಸಹಾಯವಾಗುತ್ತದೆ.

ರಾಜ್ಯ

Government Office ಗಳಿಗೆ ಡಿಸಿ ದಿಢೀರ್ ಭೇಟಿ; ತಡವಾಗಿ ಬಂದ ಅಧಿಕಾರಿಗಳ ವಿರುದ್ಧ ಕಠಿಣ ಸೂಚನೆ

Published

on

ಬೆಂಗಳೂರು ಗ್ರಾಮಾಂತರ: Government Office ಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಯಕ್ಕೆ ಹಾಜರಾಗುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಅವರು ಸೋಮವಾರ ಬೆಳಗ್ಗೆ ವಿವಿಧ ಇಲಾಖೆಗಳಿಗೆ ದಿಢೀರ್ ಭೇಟಿ ನೀಡಿ ರಿಯಾಲಿಟಿ ಚೆಕ್ ನಡೆಸಿದರು. ಬೆಳಗ್ಗೆ 10.30ರಿಂದ 11 ಗಂಟೆಯೊಳಗೆ ನಡೆದ ಈ ಪರಿಶೀಲನೆ ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ಕೆಲಕಾಲ ಆತಂಕ ಮೂಡಿಸಿತು.

ಜಿಲ್ಲಾಡಳಿತ ಭವನದಲ್ಲಿರುವ ಕಂದಾಯ, ಭೂ ದಾಖಲೆ, ಆರೋಗ್ಯ, ಕೃಷಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸೇರಿದಂತೆ ಹಲವು ಕಚೇರಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಸಮಯಕ್ಕೆ ಕಚೇರಿಗೆ ಬಂದಿದ್ದಾರೆಯೇ ಎಂಬುದನ್ನು ಪರಿಶೀಲಿಸಿದರು.

ರಾಜ್ಯ ಸರ್ಕಾರ ಇತ್ತೀಚೆಗೆ ಸರ್ಕಾರಿ ನೌಕರರಿಗೆ ‘ಕರ್ತವ್ಯ’ ಡಿಜಿಟಲ್ ಹಾಜರಾತಿ ಆಪ್ ಮೂಲಕ ಹಾಜರಾತಿ ಕಡ್ಡಾಯಗೊಳಿಸಿದೆ. ಇದರಂತೆ ಬೆಳಗ್ಗೆ 10 ಗಂಟೆಗೆ ಲಾಗಿನ್ ಹಾಗೂ ಸಂಜೆ 5.30ಕ್ಕೆ ಲಾಗ್‌ಔಟ್ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಆಪ್‌ನಲ್ಲಿ ಹಾಜರಾತಿ ದಾಖಲಿಸಿದ್ದಾರೆಯೇ, ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದಾರೆಯೇ ಹಾಗೂ ಫೀಲ್ಡ್ ವರ್ಕ್‌ಗೆ ತೆರಳಿದ್ದರೆ ಅದರ ವಿವರವನ್ನು ಆಪ್‌ನಲ್ಲಿ ದಾಖಲಿಸಿದ್ದಾರೆಯೇ ಎಂಬುದನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.

ಪರಿಶೀಲನೆ ವೇಳೆ ಕೆಲವು ಕಚೇರಿಗಳಲ್ಲಿ ಅಧಿಕಾರಿಗಳ ಕುರ್ಚಿಗಳು ಖಾಲಿ ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ನಿಗದಿತ ಸಮಯಕ್ಕೆ ಕಡ್ಡಾಯವಾಗಿ ಹಾಜರಾತಿ ದಾಖಲಿಸಬೇಕು, ಇಲ್ಲದಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಈ ಅನಿರೀಕ್ಷಿತ ಭೇಟಿ ಸಿಬ್ಬಂದಿಯನ್ನು ಅಚ್ಚರಿಗೆ ದೂಡಿದ್ದು, ಇಂತಹ ಪರಿಶೀಲನೆಗಳು ನಿರಂತರವಾಗಿ ನಡೆದರೆ ಅಧಿಕಾರಿಗಳ ಕಾರ್ಯಕ್ಷಮತೆ ಹೆಚ್ಚುವುದರ ಜೊತೆಗೆ ಸಾರ್ವಜನಿಕರ ಕೆಲಸಗಳು ಸಮಯಕ್ಕೆ ಆಗಲಿವೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Continue Reading

ಬೆಂಗಳೂರು

KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು; ರಾಜ್ಯಪಾಲರಿಂದ ರಾಷ್ಟ್ರಪತಿಗೆ ತನಿಖೆ ಶಿಫಾರಸು

Published

on

ಬೆಂಗಳೂರು: KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಮಾನತುಗೊಳಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಅವರ ವಿರುದ್ಧ ಕೇಳಿಬಂದಿರುವ ನೇಮಕಾತಿ ಅಕ್ರಮ, ಸ್ವಜನಪಕ್ಷಪಾತ ಹಾಗೂ ಅಧಿಕಾರ ದುರುಪಯೋಗದ ಆರೋಪಗಳ ಕುರಿತು ತನಿಖೆ ನಡೆಸಲು ಭಾರತದ ಸಂವಿಧಾನದ 317(1)ನೇ ವಿಧಿ ಅಡಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಉಲ್ಲೇಖಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲಾಗಿದೆ.

ರಾಜ್ಯಪಾಲರ ಆದೇಶದಂತೆ, ತನಿಖೆ ಪೂರ್ಣಗೊಂಡು ರಾಷ್ಟ್ರಪತಿಗಳಿಂದ ಮುಂದಿನ ಆದೇಶ ಬರುವವರೆಗೆ ಶಿವಶಂಕರಪ್ಪ ಸಾಹುಕಾರ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ. ಅಲ್ಲಿಯವರೆಗೆ ಆಯೋಗದ ಹಿರಿಯ ಸದಸ್ಯರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿಯರು ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹಿತಾಸಕ್ತಿ ಸಂಘರ್ಷವನ್ನು ಘೋಷಿಸದೇ ಇದ್ದಿರುವುದು, ನೇಮಕಾತಿ ಪ್ರಕ್ರಿಯೆಯಿಂದ ದೂರ ಉಳಿಯದಿರುವುದು ಹಾಗೂ ಮೀಸಲಾತಿ ಸೌಲಭ್ಯ ಪಡೆಯಲು ತಪ್ಪು ಮಾಹಿತಿ ನೀಡಿರುವ ಆರೋಪಗಳು ತನಿಖೆಗೆ ಕಾರಣವಾಗಿವೆ. ಪ್ರಕರಣದಲ್ಲಿ ಅವರ ಪುತ್ರಿಯೊಬ್ಬರು ವಾರ್ಷಿಕ ಆದಾಯವನ್ನು ಕೇವಲ ₹40,000 ಎಂದು ನಮೂದಿಸಿದ ಆದಾಯ ಪ್ರಮಾಣಪತ್ರ ಸಲ್ಲಿಸಿ ಹಿಂದುಳಿದ ವರ್ಗಗಳ ಮೀಸಲಾತಿ ಹಾಗೂ ‘ಕ್ರೀಮಿ ಲೇಯರ್’ ವಿನಾಯಿತಿ ಪಡೆಯಲು ಯತ್ನಿಸಿದ್ದರೆಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಸಂಬಂಧ ಕೆಪಿಎಸ್‌ಸಿ ಕಾರ್ಯದರ್ಶಿ ಶೋಭಾ ಅವರ ದೂರಿನ ಮೇರೆಗೆ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಆದಾಯ ಪ್ರಮಾಣಪತ್ರ ನೀಡಿದ ಕಂದಾಯ ಇಲಾಖೆಯ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಧಿಕಾರ ದುರುಪಯೋಗ ನಡೆದಿದೆಯೇ ಎಂಬುದರ ಕುರಿತು ಪೊಲೀಸರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಈ ಬೆಳವಣಿಗೆಯಿಂದ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆ ಮತ್ತು ಆಡಳಿತ ವ್ಯವಸ್ಥೆಯ ಪಾರದರ್ಶಕತೆ ಕುರಿತು ಹೊಸ ಚರ್ಚೆ ಆರಂಭವಾಗಿದ್ದು, ತನಿಖೆಯ ಅಂತಿಮ ವರದಿಯತ್ತ ರಾಜ್ಯದ ಗಮನ ಕೇಂದ್ರೀಕೃತವಾಗಿದೆ.

Continue Reading

ಬೆಂಗಳೂರು

₹13 Crores ವೆಚ್ಚ, 2 ವರ್ಷ ಕಾಯುವಿಕೆ! ವಿಜಯನಗರ ಅಂಡರ್‌ಗ್ರೌಂಡ್ ಮಾರುಕಟ್ಟೆ ಇನ್ನೂ ಬಂದ್; 80ಕ್ಕೂ ಹೆಚ್ಚು ಮಳಿಗೆಗಳು ಖಾಲಿ

Published

on

ಬೆಂಗಳೂರು: ₹13 Crores ರೂಪಾಯಿ ಸಾರ್ವಜನಿಕರ ತೆರಿಗೆ ಹಣ ವೆಚ್ಚ ಮಾಡಿ ವಿಜಯನಗರದಲ್ಲಿ ನಿರ್ಮಿಸಲಾಗಿರುವ ಅಂಡರ್‌ಗ್ರೌಂಡ್ ಮಾರುಕಟ್ಟೆ (Underground Market) ಉದ್ಘಾಟನೆಯಾಗಿ ಎರಡು ವರ್ಷ ಕಳೆದರೂ ವ್ಯಾಪಾರಿಗಳ ಬಳಕೆಗೆ ಇನ್ನೂ ಲಭ್ಯವಾಗಿಲ್ಲ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ 80ಕ್ಕೂ ಹೆಚ್ಚು ಸುಸಜ್ಜಿತ ಮಳಿಗೆಗಳು ಖಾಲಿಯಾಗಿ ಪಾಳುಬಿದ್ದಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ವ್ಯಾಪಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೆಹಲಿ ಪಾಲಿಕಾ ಬಜಾರ್ ಮಾದರಿಯಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಸುಮಾರು ₹13 ಕೋಟಿ ವೆಚ್ಚದಲ್ಲಿ ಈ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಉದ್ಘಾಟನೆ ನಡೆದಿದ್ದರೂ ಇಂದಿಗೂ ವ್ಯಾಪಾರ ಆರಂಭವಾಗದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸ್ಥಳೀಯರ ಆರೋಪದ ಪ್ರಕಾರ, ಟೆಂಡರ್ ಪ್ರಕ್ರಿಯೆಯ ವಿಳಂಬ ಮತ್ತು ಆಡಳಿತಾತ್ಮಕ ನಿರಾಸಕ್ತಿಯಿಂದ ಈ ಯೋಜನೆ ಸಾರ್ವಜನಿಕರಿಗೆ ಯಾವುದೇ ಪ್ರಯೋಜನ ನೀಡದಂತಾಗಿದೆ.

ಇದೇ ವೇಳೆ ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ಸಣ್ಣ ವ್ಯಾಪಾರಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಅವರಿಗೆ ಪರ್ಯಾಯವಾಗಿ ಬಳಸಬೇಕಿದ್ದ ವಿಜಯನಗರ ಅಂಡರ್‌ಗ್ರೌಂಡ್ ಮಾರುಕಟ್ಟೆ ಇನ್ನೂ ಕಾರ್ಯಾರಂಭ ಮಾಡದಿರುವುದು ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮಾರುಕಟ್ಟೆಯೊಳಗಿನ ಲಿಫ್ಟ್, ಎಸ್ಕಲೇಟರ್ ಸೇರಿದಂತೆ ಹಲವು ಸೌಲಭ್ಯಗಳು ಉದ್ಘಾಟನೆಯಾದ ದಿನದಿಂದಲೇ ಬಂದ್ ಆಗಿದ್ದು, ನಿರ್ವಹಣೆಯ ಕೊರತೆಯಿಂದ ಕಟ್ಟಡವು ಪಾಳು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯೇ ನಿರುಪಯುಕ್ತವಾಗುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ವ್ಯಾಪಾರಿಗಳು ಮತ್ತು ಸ್ಥಳೀಯರು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಮಳಿಗೆಗಳನ್ನು ಹಂಚಿಕೆ ಮಾಡಿ ವ್ಯಾಪಾರ ಆರಂಭಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

“ಸರ್ಕಾರ ಸಾರ್ವಜನಿಕರ ತೆರಿಗೆ ಹಣದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿದೆ. ಆದರೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೇ ಅದು ಉಪಯೋಗಕ್ಕೆ ಬರುತ್ತಿಲ್ಲ. ಸಚಿವರು ಮತ್ತು ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ವ್ಯಾಪಾರಿಗಳಿಗೆ ಮಳಿಗೆಗಳನ್ನು ನೀಡಬೇಕು.”
– ರಮೇಶ್, ವ್ಯಾಪಾರಸ್ಥ

Continue Reading

Trending