ದೇಶ
ದುಡಿಯುವ ಸಿಪಾಯಿ ನಾನು: DCM ಡಿಕೆಶಿ
ದೆಹಲಿ/ಬೆಂಗಳೂರು: ಹೈಕಮಾಂಡ್ ಏನನ್ನಾದರೂ ಕೇಳಿದರೆ ನಾನು ನನಗೇನು ಬೇಕೋ ಅದನ್ನು ಹೇಳುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚ್ಯವಾಗಿ ಹೇಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೈಕಮಾಂಡ್ ನಾಯಕರನ್ನು ಮುಖ್ಯಮಂತ್ರಿ ಭೇಟಿಯಾಗಿರುವ ಬಗ್ಗೆ ಪ್ರಶ್ನೆಗಿಳಿದು, “ಅವರು ಯಾರನ್ನು ಭೇಟಿಯಾಗಿದ್ದಾರೆ, ಏನು ಮಾತನಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಬೇಕಾದರೆ ಮುಖ್ಯಮಂತ್ರಿಗಳನ್ನೇ ಕೇಳಿ,” ಎಂದರು.
ಪಕ್ಷದ ಶಿಸ್ತಿನ ಸಿಪಾಯಿ ಎಂಬ ಪ್ರಶ್ನೆಗೆ, “ಪಕ್ಷ ಹೇಗೆ ಹೇಳುತ್ತದೆಯೋ ಹಾಗೆ ನಾವು ಹೋಗಬೇಕು. ಅದೇ ನಮ್ಮ ಕರ್ತವ್ಯ,” ಎಂದು ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ ಪ್ರಧಾನಿ, ಗೃಹಸಚಿವರು ಹಾಗೂ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿರುವುದರ ಬಗ್ಗೆ, “ಭೇಟಿಯಾಗುವುದರಲ್ಲಿ ತಪ್ಪೇನಿಲ್ಲ. ಅವರು ಎಲ್ಲರನ್ನೂ ಭೇಟಿ ಮಾಡುವ ಹಕ್ಕು ಹೊಂದಿದ್ದಾರೆ,” ಎಂದು ಡಿಕೆಶಿ ಹೇಳಿದರು.
ಸಂಪುಟ ಪುನಾರಚನೆ ಕುರಿತ ಪ್ರಶ್ನೆಗೆ, “ನಾನು ಯಾವ ಮಾತನ್ನೂ ಮಾಡುವುದಿಲ್ಲ. ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೆ ಏನು ಬೇಕೋ ಅದನ್ನು ತಿಳಿಸುತ್ತೇನೆ,” ಎಂದು ಅವರು ಹೇಳಿದರು.
ಈ ನಡುವೆ ನವೆಂಬರ್ ಕ್ರಾಂತಿ ಚರ್ಚೆಗಳು ಜೋರಾಗಿರುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿ ದೊಡ್ಡ ಕುತೂಹಲ ಮೂಡಿಸಿದೆ. ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ, ಆಂತರಿಕ ರಾಜಕೀಯ ಸಮೀಕರಣಗಳ ಕುರಿತ ಚರ್ಚೆಗಳು ಕಾಂಗ್ರೆಸ್ ವಲಯದಲ್ಲಿ ಹೊಸ ಚಟುವಟಿಕೆಗಳಿಗೆ ಕಾರಣವಾಗಿವೆ.
ಸೋನಿಯಾ ಗಾಂಧಿ ಅವರ ಜನಪಥ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ–ರಾಹುಲ್ ಗಾಂಧಿ ನಡುವೆ ನಡೆದ ಅರ್ಧ ಗಂಟೆಯ ಸಭೆಯೂ ರಾಜಕೀಯ ವಲಯದಲ್ಲಿ ಹೊಸ ಊಹಾಪೋಹಗಳಿಗೆ ಕಾರಣವಾಗಿದೆ. ಇತ್ತ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಎರಡು ದಿನ ದೆಹಲಿಯಲ್ಲೇ ಉಳಿದು ರಾಹುಲ್ ಗಾಂಧಿಯನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ದೇಶ
ಬಿಜೆಪಿ ಮಹತ್ವದ ಸಂಘಟನಾ ಬದಲಾವಣೆ: 4 ರಾಜ್ಯಗಳಿಗೆ ನೂತನ ಅಧ್ಯಕ್ಷರ ನೇಮಕ
ನವದೆಹಲಿ: ಮುಂಬರುವ ರಾಜಕೀಯ ಚಟುವಟಿಕೆಗಳು ಹಾಗೂ ಚುನಾವಣಾ ಸಿದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಲ್ಕು ಪ್ರಮುಖ ರಾಜ್ಯ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದೆ. ಪಂಜಾಬ್, ಹರಿಯಾಣ, ದೆಹಲಿ ಹಾಗೂ ತ್ರಿಪುರಾ ರಾಜ್ಯ ಘಟಕಗಳಲ್ಲಿ ಸಂಘಟನಾ ಪುನರ್‌ರಚನೆ ನಡೆಸಿ ಬಿಜೆಪಿ ಹೈಕಮಾಂಡ್ ಅಧಿಕೃತ ಆದೇಶ ಹೊರಡಿಸಿದೆ.
ಯಾರಿಗೆ ಯಾವ ರಾಜ್ಯದ ಜವಾಬ್ದಾರಿ?
ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೇವಲ್ ಸಿಂಗ್ ಧಿಲ್ಲೋನ್ ಅವರನ್ನು ನೇಮಕ ಮಾಡಲಾಗಿದೆ. ಹರಿಯಾಣ ಬಿಜೆಪಿ ಅಧ್ಯಕ್ಷೆಯಾಗಿ ಅರ್ಚನಾ ಗುಪ್ತಾ, ದೆಹಲಿ ಬಿಜೆಪಿ ಘಟಕದ ಅಧ್ಯಕ್ಷರಾಗಿ ಕೇಂದ್ರ ಸಚಿವ ಹರ್ಷ್ ಮಲ್ಹೋತ್ರಾ ಹಾಗೂ ತ್ರಿಪುರಾ ಬಿಜೆಪಿ ಅಧ್ಯಕ್ಷರಾಗಿ ಶಾಸಕ ಅಭಿಷೇಕ್ ದೆಬ್ರಾಯ್ ಅವರಿಗೆ ಜವಾಬ್ದಾರಿ ನೀಡಲಾಗಿದೆ.
ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದ ಧಿಲ್ಲೋನ್‌ಗೆ ದೊಡ್ಡ ಹುದ್ದೆ
ಪಂಜಾಬ್ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ಕೇವಲ್ ಸಿಂಗ್ ಧಿಲ್ಲೋನ್ ಈ ಹಿಂದೆ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದರು. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆಪ್ತರಾಗಿದ್ದ ಅವರು 2012 ರಿಂದ 2017ರವರೆಗೆ ಬರ್ನಾಲಾ ಕ್ಷೇತ್ರದ ಶಾಸಕರಾಗಿದ್ದರು. 2022ರಲ್ಲಿ ಬಿಜೆಪಿ ಸೇರ್ಪಡೆಯಾದ ಧಿಲ್ಲೋನ್‌ಗೆ ಈಗ ಪಂಜಾಬ್‌ನಲ್ಲಿ ಪಕ್ಷವನ್ನು ಬಲಪಡಿಸುವ ಜವಾಬ್ದಾರಿ ನೀಡಲಾಗಿದೆ.
ದೆಹಲಿ ಬಿಜೆಪಿಗೆ ಹರ್ಷ್ ಮಲ್ಹೋತ್ರಾ ನೇತೃತ್ವ
ದೆಹಲಿ ಬಿಜೆಪಿ ಅಧ್ಯಕ್ಷರಾಗಿರುವ ಹರ್ಷ್ ಮಲ್ಹೋತ್ರಾ ಪ್ರಸ್ತುತ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಕೇಂದ್ರ ಸರ್ಕಾರದಲ್ಲಿ ಕಾರ್ಪೊರೇಟ್ ವ್ಯವಹಾರಗಳು ಹಾಗೂ ರಸ್ತೆ ಸಾರಿಗೆ ಸಚಿವಾಲಯದ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೆಹಲಿ ರಾಜಕಾರಣದಲ್ಲಿ ದೀರ್ಘ ಅನುಭವ ಹೊಂದಿರುವ ಅವರ ನೇಮಕ ಪಕ್ಷಕ್ಕೆ ಹೊಸ ಚೈತನ್ಯ ನೀಡಲಿದೆ ಎಂದು ಹೇಳಲಾಗುತ್ತಿದೆ.
ಮಹಿಳಾ ನಾಯಕಿ ಅರ್ಚನಾ ಗುಪ್ತಾ ಭಾವುಕ ಪೋಸ್ಟ್
ಹರಿಯಾಣ ಬಿಜೆಪಿ ಅಧ್ಯಕ್ಷೆಯಾಗಿ ನೇಮಕಗೊಂಡ ಅರ್ಚನಾ ಗುಪ್ತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ನಾಯಕತ್ವಕ್ಕೆ ಧನ್ಯವಾದ ತಿಳಿಸಿದ್ದಾರೆ. “ಈ ಜವಾಬ್ದಾರಿಯನ್ನು ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವದಿಂದ ನಿಭಾಯಿಸುತ್ತೇನೆ” ಎಂದು ಅವರು ಬರೆದುಕೊಂಡಿದ್ದಾರೆ.
ತ್ರಿಪುರಾ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಅಭಿಷೇಕ್ ದೆಬ್ರಾಯ್ 2023ರ ವಿಧಾನಸಭೆ ಚುನಾವಣೆಯಲ್ಲಿ ಮಾತಬಾರಿ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು.
ಈ ನಾಲ್ಕು ರಾಜ್ಯಗಳಲ್ಲಿ ನಡೆದಿರುವ ಸಂಘಟನಾ ಬದಲಾವಣೆ ಬಿಜೆಪಿಯ ಮುಂದಿನ ಚುನಾವಣಾ ರಣತಂತ್ರದಲ್ಲಿ ಮಹತ್ವದ ಪಾತ್ರವಹಿಸುವ ನಿರೀಕ್ಷೆಯಿದೆ.
ದೇಶ
ಪ್ರಿಯಾಂಕ ಖರ್ಗೆಗೆ ಡಿಸಿಎಂ ಸ್ಥಾನ ನೀಡುವಂತೆ ಕಲಬುರಗಿಯಲ್ಲಿ ವಿಶೇಷ ಪೂಜೆ, 101 ತೆಂಗಿನಕಾಯಿ ಒಡೆದು ಪ್ರಾರ್ಥನೆ
ಕಲಬುರಗಿ: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ತೀವ್ರಗೊಂಡಿರುವ ನಡುವೆಯೇ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನ ನೀಡಬೇಕು ಎಂಬ ಒತ್ತಾಯ ಕಲಬುರಗಿಯಲ್ಲಿ ಜೋರಾಗಿದೆ. ಪ್ರಿಯಾಂಕ ಖರ್ಗೆ ಅಭಿಮಾನಿಗಳ ಬಳಗ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಸಮಿತಿಯ ನೇತೃತ್ವದಲ್ಲಿ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ 101 ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಲಾಯಿತು.
ಸಮಿತಿಯ ಜಿಲ್ಲಾಧ್ಯಕ್ಷ ಶಿವಾನಂದ ಹೊನಗುಂಟಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದರು. ರಾಜ್ಯ ಸರ್ಕಾರದಲ್ಲಿ ನಡೆಯಬಹುದಾದ ನಾಯಕತ್ವ ಬದಲಾವಣೆಯ ಸಂದರ್ಭದಲ್ಲಿ ಪ್ರಿಯಾಂಕ ಖರ್ಗೆ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ಮುಖಂಡ ಶಿವಾನಂದ ಹೊನಗುಂಟಿ, “2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಿಯಾಂಕ ಖರ್ಗೆ ಮಹತ್ವದ ಪಾತ್ರವಹಿಸಿದ್ದರು. ಬಿಜೆಪಿ ಸರ್ಕಾರದ ಅವಧಿಯ ಪಿಎಸ್‌ಐ ನೇಮಕಾತಿ ಅಕ್ರಮ ಹಾಗೂ ಕೆಕೆಆರ್‌ಡಿಬಿ ಹಗರಣಗಳನ್ನು ಬಹಿರಂಗಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು” ಎಂದು ಹೇಳಿದರು.
ಐಟಿ-ಬಿಟಿ ಸಚಿವರಾಗಿ ಪ್ರಿಯಾಂಕ ಖರ್ಗೆ ರಾಜ್ಯದ ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡಿದ್ದರು. ಕೈಗಾರಿಕಾ ಮತ್ತು ಐಟಿ ವಲಯದ ಬೆಳವಣಿಗೆಗೆ ಅವರ ಕೊಡುಗೆ ಮಹತ್ವದ್ದಾಗಿದ್ದು, ಮತ್ತೆ ಅವರಿಗೆ ಅದೇ ಖಾತೆ ನೀಡಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ ಎಂದು ಅವರು ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ದೂರದೃಷ್ಟಿಯ ನಾಯಕತ್ವ ಅಗತ್ಯವಿದ್ದು, ಪ್ರಿಯಾಂಕ ಖರ್ಗೆ ಅವರಿಗೆ ಡಿಸಿಎಂ ಸ್ಥಾನ ನೀಡಿದರೆ ಈ ಭಾಗಕ್ಕೆ ಮತ್ತಷ್ಟು ಶಕ್ತಿ ಸಿಗಲಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟರು.
ಕೋಲಿ, ಕಬ್ಬಲಿಗ, ಬೆಸ್ತ, ಮೊಗವೀರ ಮತ್ತು ಅಂಬಿಗ ಸಮುದಾಯಗಳಿಗೆ ಎಸ್‌ಟಿ ಮಾನ್ಯತೆ ವಿಚಾರದಲ್ಲಿ ಪ್ರಿಯಾಂಕ ಖರ್ಗೆ ಸ್ಪಂದಿಸುತ್ತಿದ್ದಾರೆ ಎಂದು ಸಮುದಾಯದ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿರುವ ಸಂದರ್ಭದಲ್ಲಿ ಈ ಬೆಳವಣಿಗೆ ರಾಜಕೀಯವಾಗಿ ಸಾಕಷ್ಟು ಕುತೂಹಲ ಮೂಡಿಸಿದೆ.
ದೇಶ
ಹೈಕಮಾಂಡ್ ಸೂಚನೆಯಂತೆ ರಾಜೀನಾಮೆ ನೀಡಿದ್ದೇನೆ: ಸಿದ್ದರಾಮಯ್ಯ ಸ್ಪಷ್ಟನೆ
ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಲೋಕಭವನದಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹೈಕಮಾಂಡ್ ಹೇಳಿದ ತಕ್ಷಣ ನಾನು ರಾಜೀನಾಮೆ ನೀಡುವುದಾಗಿ ಮೊದಲೇ ಹೇಳಿದ್ದೆ. ಅದರಂತೆಯೇ ಇಂದು ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದೇನೆ” ಎಂದರು.
ರಾಜೀನಾಮೆ ಪ್ರಕ್ರಿಯೆ ಕುರಿತು ವಿವರಿಸಿದ ಸಿದ್ದರಾಮಯ್ಯ, “ನಾನು ರಾಜಭವನಕ್ಕೆ ತೆರಳಿ ರಾಜೀನಾಮೆ ಪತ್ರ ನೀಡಲು ಹೋದೆ. ಆದರೆ ರಾಜ್ಯಪಾಲರು ಸದ್ಯ ನಗರದಲ್ಲಿ ಇರಲಿಲ್ಲ. ಅವರು ಇಂದು ರಾತ್ರಿ ವಾಪಸ್ ಬರುತ್ತಾರೆ ಎಂದು ಕಚೇರಿಯಲ್ಲಿ ತಿಳಿಸಿದರು. ಹೀಗಾಗಿ ಅವರ ಕಾರ್ಯದರ್ಶಿಗೆ ಪತ್ರ ಸಲ್ಲಿಸಿದ್ದೇನೆ. ರಾಜ್ಯಪಾಲರು ಬಂದ ಬಳಿಕ ಸಂವಿಧಾನಾತ್ಮಕವಾಗಿ ಅದನ್ನು ಅಂಗೀಕರಿಸಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.
ರಾಜ್ಯದ ರಾಜಕೀಯ ಸ್ಥಿತಿಗತಿ ಬಗ್ಗೆ ಮಾತನಾಡಿದ ಅವರು, “ನಮ್ಮ ಪಕ್ಷಕ್ಕೆ 135ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ. ಇಬ್ಬರು ಪಕ್ಷೇತರ ಶಾಸಕರೂ ನಮ್ಮೊಂದಿಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಹೊಂದಿದ್ದು ಯಾವುದೇ ಗೊಂದಲವಿಲ್ಲದೆ ಮುಂದಿನ ಮುಖ್ಯಮಂತ್ರಿಗೆ ಅವಕಾಶ ಕಲ್ಪಿಸಬೇಕು” ಎಂದು ಮನವಿ ಮಾಡಿದರು.
ತಮ್ಮ ರಾಜಕೀಯ ಬದುಕಿನ ಕುರಿತು ಭಾವುಕರಾಗಿ ಮಾತನಾಡಿದ ಸಿದ್ದರಾಮಯ್ಯ, “ಡಾ. ರಾಜ್‌ಕುಮಾರ್ ಜನರನ್ನು ‘ಅಭಿಮಾನಿ ದೇವರುಗಳು’ ಎಂದು ಕರೆಯುತ್ತಿದ್ದರು. ನನ್ನ ಪಾಲಿಗೂ ರಾಜ್ಯದ ಮತದಾರರೇ ಅಭಿಮಾನಿ ದೇವರುಗಳು. ಸಂವಿಧಾನವೇ ನನ್ನ ಧರ್ಮ ಎಂದು ನಂಬಿ ರಾಜಕೀಯ ಜೀವನ ನಡೆಸಿದ್ದೇನೆ” ಎಂದು ಹೇಳಿದರು.
“ರಾಜ್ಯದ ಜನತೆ ನನಗೆ ಎರಡು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ನೀಡಿದ್ದಾರೆ. ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಅದಕ್ಕಾಗಿ ನಾನು ಜನರಿಗೆ ಸದಾ ಋಣಿ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಇದೇ ವೇಳೆ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿದ್ದರಾಮಯ್ಯ ಧನ್ಯವಾದ ಸಲ್ಲಿಸಿದರು.
-
ದೇಶ9 hours agoಸಿಎಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆ ಶಿವಕುಮಾರ್
-
ದೇಶ9 hours ago‘ಸಿದ್ದರಾಮಯ್ಯ ಹಳೇ ಹುಲಿ’: ಶೋಭಾ ಕರಂದ್ಲಾಜೆ ಕುತೂಹಲಕಾರಿ ಹೇಳಿಕೆ
-
ದೇಶ4 hours agoಹೈಕಮಾಂಡ್ ಸೂಚನೆಯಂತೆ ರಾಜೀನಾಮೆ ನೀಡಿದ್ದೇನೆ: ಸಿದ್ದರಾಮಯ್ಯ ಸ್ಪಷ್ಟನೆ
-
ದೇಶ9 hours ago‘ಅಪ್ಪಾಜಿ ಹೋಗಬೇಡಿ’: ಸಿದ್ದರಾಮಯ್ಯ ನೋಡಿ ಸಿಬ್ಬಂದಿ ಕಣ್ಣೀರು
-
ದೇಶ7 hours ago“ಒಗ್ಗಟ್ಟೇ ನಮ್ಮ ಶಕ್ತಿ”: ಸಿದ್ದು-ಡಿಕೆಶಿ ಫೋಟೋ ಹಂಚಿಕೊಂಡ ಕಾಂಗ್ರೆಸ್, ವೈರಲ್ ಆದ ಪೋಸ್ಟ್
-
ದೇಶ7 hours agoಸಚಿವರ ಮುಂದೆ ಕಣ್ಣೀರು ಹಾಕಿದ ಸಿದ್ದರಾಮಯ್ಯ: ‘ನಿಮ್ಮ ಸಹಕಾರ ಮರೆಯಲಾರೆ’
-
ದೇಶ10 hours agoBreaking News : “ಮತ್ತೆ ದಾಳಿ ಮಾಡಿದರೆ ಸರ್ವನಾಶ”: ಅಮೆರಿಕಕ್ಕೆ ಇರಾನ್ ಖಡಕ್ ಎಚ್ಚರಿಕೆ
-
ದೇಶ6 hours ago“ನಮ್ಮ ಸಾಹೇಬ್ರು” ಸಿಎಂ ಸ್ಥಾನ ತೊರೆದ ದಿನ: ಸಿದ್ದರಾಮನಹುಂಡಿಯಲ್ಲಿ ಆವರಿಸಿದ ಮೌನ
