ಕ್ರೀಡೆ
“RIP ಟೆಸ್ಟ್ ಕ್ರಿಕೆಟ್” ಎಂದು ಹರ್ಭಜನ್ ಸಿಂಗ್
ಕೊಲ್ಕತ್ತಾ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಅನುಭವಿಸಿದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಮಾಜಿ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಈಡನ್ ಗಾರ್ಡನ್ಸ್ ಪಿಚ್ ಮೇಲೆ ಭಾರೀ ಕಿಡಿಕಾರಿದ್ದಾರೆ. ಕೇವಲ 124 ರನ್‌ಗಳ ಸಣ್ಣ ಗುರಿ ತಲುಪಲಾರದೆ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 93 ರನ್‌ಗಳಿಗೆ ಸರ್ವಪತನ ಕಂಡಿದ್ದೇ ಆಕ್ರೋಶಕ್ಕೆ ಕಾರಣವಾಗಿದೆ.
ಪಂದ್ಯದ ಮುನ್ನ ಕೋಚ್ ಗೌತಮ್ ಗಂಭೀರ್ ಸ್ಪಿನ್-ಸಹಾಯಕ ಪಿಚ್ ಸಿದ್ಧಪಡಿಸಲು ಆದೇಶಿಸಿದ್ದರೆಂಬ ವರದಿಗಳು ಹೊರಬಿದ್ದಿವೆ. ಆದರೆ ಈ ಪಿಚ್ ಭಾರತ ತಂಡದ ಮೇಲೆಯೇ ಬೂಮರಾಂಗ್ ಆಗಿದೆ. ಎರಡೂವರೆ ದಿನಗಳೊಳಗೆ 40 ವಿಕೆಟ್‌ಗಳು ಪತನಗೊಂಡಿರುವುದು ಪಿಚ್ ಗುಣಮಟ್ಟದ ಕುರಿತು ಭಾರೀ ಪ್ರಶ್ನೆಗಳಿಗೆ ಕಾರಣವಾಗಿದೆ.
ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಹರ್ಭಜನ್ ಸಿಂಗ್, “ಟೆಸ್ಟ್ ಕ್ರಿಕೆಟ್ ಹಾಳುಮಾಡಿದ್ದಾರೆ. RIP ಟೆಸ್ಟ್ ಕ್ರಿಕೆಟ್,” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅವರು ಮುಂದುವರಿಸಿ, “ತಂಡ ಗೆಲ್ಲುತ್ತಿರುವಾಗ ಯಾರೂ ಧ್ವನಿ ಮಾಡಲ್ಲ. ಆದರೆ ಇಂತಹ ಪಿಚ್‌ಗಳಲ್ಲಿ ಆಟಗಾರರು ಹೇಗೆ ಪ್ರಗತಿ ಸಾಧಿಸಲಿದ್ದಾರೆ? ಗಾಣಕ್ಕೆ ಕಟ್ಟಿದ ಎತ್ತುಗಳಂತೆ ಒಂದೇ ಸ್ಥಳದಲ್ಲಿ ಸುತ್ತುತ್ತಿರುವಂತಿದೆ,” ಎಂದು ತರಾಟೆಗೆ ತೆಗೆದುಕೊಂಡರು.
ಹರ್ಭಜನ್ ಅಭಿಪ್ರಾಯದ ಪ್ರಕಾರ, ಬೈಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ನೈಪುಣ್ಯ ಅಭಿವೃದ್ದಿಗೆ ಅವಕಾಶ ಕೊಡದ ಪಿಚ್‌ಗಳನ್ನು ಸಿದ್ಧಪಡಿಸುವುದು ಕ್ರಿಕೆಟ್‌ಗೆ ನಷ್ಟ. “ರನ್ ಹೇಗೆ ಗಳಿಸಬೇಕು ಎನ್ನುವುದೇ ಅರ್ಥವಾಗದ ಪಿಚ್‌ಗಳನ್ನು ಯಾಕೆ ರೆಡಿಯಾಡಿಸಬೇಕು?” ಎಂದು ಪ್ರಶ್ನಿಸಿದರು.
ಕೋಲ್ಕತ್ತಾ ಟೆಸ್ಟ್‌ನ ಈ ಸೋಲಿನಿಂದ 15 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ಭಾರತ ಭೂಮಿಯಲ್ಲಿ ಟೆಸ್ಟ್ ಗೆಲುವು ಸಾಧಿಸಿದೆ. ಇದೀಗ ನವೆಂಬರ್ 22ರಂದು ನಡೆಯಲಿರುವ ಎರಡನೇ ಟೆಸ್ಟ್‌ಗಾಗಿ ಯಾವ ರೀತಿಯ ಪಿಚ್ ಸಿದ್ಧವಾಗಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಿದೆ.
ಕ್ರೀಡೆ
IND vs PAK ಹೈವೋಲ್ಟೇಜ್ ಪಂದ್ಯಕ್ಕೆ ಮುನ್ನ ಉಸ್ಮಾನ್ ತಾರಿಕ್ ಎಚ್ಚರಿಕೆ: “ಭಾರತೀಯರು ನನ್ನ ಬೌಲಿಂಗ್‌ಗೆ ಹೆದರುತ್ತಿದ್ದಾರೆ!”
ಟಿ20 ವಿಶ್ವಕಪ್ ಟೂರ್ನಿಯ ಬಹು ನಿರೀಕ್ಷಿತ ಭಾರತ–ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ಫೆಬ್ರವರಿ 15ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದೆ. ಶಿವರಾತ್ರಿ ಹಬ್ಬದಂದೇ ನಡೆಯಲಿರುವ ಈ ನಿರ್ಣಾಯಕ ಸಮರಕ್ಕಾಗಿ ಎರಡೂ ತಂಡಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ, ಫೆ.12ರಂದು ನಮೀಬಿಯಾ ವಿರುದ್ಧ ಕಣಕ್ಕಿಳಿದು ಗೆಲುವಿನ ಆತ್ಮವಿಶ್ವಾಸದೊಂದಿಗೆ ಪಾಕಿಸ್ತಾನ ಎದುರಿಸಲು ಸಜ್ಜಾಗಿದೆ.
ಈ ಮಧ್ಯೆ, ಪಾಕಿಸ್ತಾನದ ನಿಗೂಢ ಸ್ಪಿನ್ನರ್ ಉಸ್ಮಾನ್ ತಾರಿಕ್ ಭಾರತಕ್ಕೆ ಬಲವಾದ ಎಚ್ಚರಿಕೆ ನೀಡಿದ್ದಾರೆ. “ಭಾರತೀಯರು ನನ್ನ ಬೌಲಿಂಗ್‌ಗೆ ಹೆದರುತ್ತಿದ್ದಾರೆ. ಅದಕ್ಕಾಗಿ ನನ್ನ ಬೌಲಿಂಗ್ ಶೈಲಿಯ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಸಂಚಲನಕಾರಿ ಹೇಳಿಕೆ ನೀಡಿದ್ದಾರೆ.
ಮಾತಿನ ಸಮರ ಜೋರಾಗಿದೆ
ಟಿ20 ವಿಶ್ವಕಪ್ ಈಗ ರೋಚಕ ಹಂತ ತಲುಪಿದ್ದು, ಈಗಾಗಲೇ 15ಕ್ಕೂ ಹೆಚ್ಚು ಪಂದ್ಯಗಳು ಪೂರ್ಣಗೊಂಡಿವೆ. ಭಾರತ–ಪಾಕಿಸ್ತಾನ ಪಂದ್ಯ ನಡೆಯುತ್ತದೆಯೇ? ಎಂಬ ಅನುಮಾನಕ್ಕೆ ತೆರೆಬಿದ್ದಿದ್ದು, ಪಾಕಿಸ್ತಾನ ಪಂದ್ಯಕ್ಕೆ ಒಪ್ಪಿಗೆ ನೀಡಿದೆ.
ಪಂದ್ಯ ಖಚಿತವಾದ ಬೆನ್ನಲ್ಲೇ ಎರಡೂ ತಂಡಗಳ ನಡುವೆ ಮಾತಿನ ಸಮರ ಜೋರಾಗಿದೆ. ಪಾಕಿಸ್ತಾನಿ ಆಟಗಾರರು ಭಾರತವನ್ನು ಸೋಲಿಸುತ್ತೇವೆ ಎಂದು ಹೇಳುತ್ತಿದ್ದರೆ, ಭಾರತೀಯರು ಪಾಕಿಸ್ತಾನವನ್ನು ಮಣಿಸುತ್ತೇವೆ ಎಂದು ತಿರುಗೇಟು ನೀಡುತ್ತಿದ್ದಾರೆ.
ತಾರಿಕ್ ಸಮರ್ಥನೆ
ಭಾರತೀಯರು ನನ್ನ ಬೌಲಿಂಗ್ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಐಸಿಸಿ ನಿಯಮಗಳ ಪ್ರಕಾರ ನನ್ನ ಬೌಲಿಂಗ್ ಶೈಲಿ ಮಾನ್ಯವಾಗಿದೆ ಎಂದು ಉಸ್ಮಾನ್ ತಾರಿಕ್ ಸಮರ್ಥಿಸಿಕೊಂಡಿದ್ದಾರೆ.
“ಭಾರತೀಯ ಆಟಗಾರರಿಗೆ ನನ್ನ ಬೌಲಿಂಗ್‌ನಿಂದ ಹೆಚ್ಚುವರಿ ಒತ್ತಡ ಇದೆ. ಅದಕ್ಕಾಗಿಯೇ ಆರೋಪ ಮಾಡುತ್ತಿದ್ದಾರೆ. ಫೆಬ್ರವರಿ 15ರಂದು ಭಾರತದ ಅಗ್ರ ಕ್ರಮಾಂಕವನ್ನು ಕೆಡವುತ್ತೇನೆ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ನನ್ನ ಬಗ್ಗೆ ಏನು ಚರ್ಚೆ ನಡೆಯುತ್ತಿದೆ ಎಂಬುದನ್ನು ನಾನು ಪರಿಗಣಿಸುವುದಿಲ್ಲ. ನನ್ನ ಗಮನ ಪಂದ್ಯದಲ್ಲೇ ಇದೆ” ಎಂದು ತಾರಿಕ್ ಹೇಳಿದ್ದಾರೆ.
ಕ್ರೀಡೆ
RCB ಮಾರಾಟ ಪ್ರಕ್ರಿಯೆ ಆರಂಭ: ಜೈಲಿನಿಂದಲೇ ಸುಕೇಶ್ ₹8,300 ಕೋಟಿ ಬಿಡ್?
ಬೆಂಗಳೂರು, ಫೆ.12: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರಾಟ ಪ್ರಕ್ರಿಯೆಯ ಮೊದಲ ಹಂತ ಅಧಿಕೃತವಾಗಿ ಆರಂಭವಾಗಿದೆ. ಫ್ರಾಂಚೈಸಿಯ ಮಾಲೀಕತ್ವ ಹೊಂದಿರುವ ಡಿಯಾಜಿಯೋ (Diageo) ಕಂಪನಿಯು ಆಸಕ್ತ ಖರೀದಿದಾರರಿಗೆ ಮಾಹಿತಿ ಪತ್ರಗಳನ್ನು ವಿತರಿಸಿದೆ. ಈ ನಡುವೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಅವರು RCB ಖರೀದಿಗೆ ಬಿಡ್ ಸಲ್ಲಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಕೇಂದ್ರ ಕಾನೂನು ಸಚಿವಾಲಯದ ಅಧಿಕಾರಿ ಎಂದು ಬಿಂಬಿಸಿಕೊಂಡು ವಂಚನೆ ಆರೋಪದಡಿ ಬಂಧನದಲ್ಲಿರುವ ಸುಕೇಶ್, ತಮ್ಮ ಎಲ್‌ಎಸ್ ಹೋಲ್ಡಿಂಗ್ಸ್ (LS Holdings) ಸಂಸ್ಥೆ ಮೂಲಕ ಡಿಯಾಜಿಯೋಗೆ ಪತ್ರ ಬರೆದು 1 ಬಿಲಿಯನ್ ಯುಎಸ್ ಡಾಲರ್ (ಸುಮಾರು ₹8,300 ಕೋಟಿ) ಮೊತ್ತದ ಸಂಪೂರ್ಣ ನಗದು ಬಿಡ್ ನೀಡಲು ಸಿದ್ಧ ಎಂದು ತಿಳಿಸಿದ್ದಾರೆ. 48 ಗಂಟೆಗಳೊಳಗೆ ಪಾವತಿ ಪೂರ್ಣಗೊಳಿಸಲು ಸಿದ್ಧತೆ ಇದೆ ಎಂದು ಕೂಡ ಹೇಳಿದ್ದಾರೆ.
ಸುಕೇಶ್, RCB ಅನ್ನು ತಮ್ಮ ತವರು ತಂಡ ಎಂದು ಬಣ್ಣಿಸಿ, ಫ್ರಾಂಚೈಸಿಯನ್ನು ಸ್ವಾಧೀನಪಡಿಸಿಕೊಂಡರೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಉಡುಗೊರೆಯಾಗಿ ನೀಡುವುದಾಗಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಇದೇವರೆಗೆ 9 ಬಿಡ್‌ಗಳು ಸಲ್ಲಿಕೆಯಾಗಿವೆ ಎಂದು ವರದಿಗಳು ಸೂಚಿಸುತ್ತವೆ. ಸೀರಂ ಇನ್‌ಸ್ಟಿಟ್ಯೂಟ್‌ನ ಅದಾರ್ ಪೂನಾವಾಲಾ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್ ಸಹ ಮಾಲೀಕತ್ವ ಹೊಂದಿರುವ ಗ್ಲೇಝರ್ಸ್ ಕಂಪನಿಗಳು ಪೈಪೋಟಿಯಲ್ಲಿ ಇದ್ದಾರೆ. ಗ್ಲೇಝರ್ಸ್ ಸಂಸ್ಥೆ ಸುಮಾರು ₹16,300 ಕೋಟಿ ಮೊತ್ತದ ಬಿಡ್ ಸಲ್ಲಿಸಿದೆ ಎನ್ನಲಾಗಿದೆ.
RCB ಮಾರಾಟ ಪ್ರಕ್ರಿಯೆ ಈಗ ಕ್ರಿಕೆಟ್ ಮತ್ತು ಉದ್ಯಮ ವಲಯದಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ.
ಕ್ರೀಡೆ
ಕನ್ನಡದ ಹೆಮ್ಮೆ ಜಿಆರ್ ವಿಶ್ವನಾಥ್‌ಗೆ ಜನ್ಮದಿನ ಸಂಭ್ರಮ: ವಿಶಿಯ ಕಲಾತ್ಮಕ ಬ್ಯಾಟಿಂಗ್‌ಗೆ 77ನೇ ವಸಂತ
ಬೆಂಗಳೂರು: ಭಾರತೀಯ ಕ್ರಿಕೆಟ್ ಇತಿಹಾಸದ ಕಲಾತ್ಮಕ ಬ್ಯಾಟ್ಸ್‌ಮನ್‌ಗಳಲ್ಲಿ ಅಗ್ರಸ್ಥಾನ ಪಡೆದಿರುವ ಗುಂಡಪ್ಪ ರಂಗನಾಥ್ ವಿಶ್ವನಾಥ್ (GR Vishwanath) ಅವರಿಗೆ ಫೆಬ್ರವರಿ 12ರಂದು ಜನ್ಮದಿನ ಸಂಭ್ರಮ. ವಿಶಿ ಕ್ರೀಸಿಗೆ ಬಂದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತಿತ್ತು. ಶತಕ ಸಿಡಿಸಿದ ಯಾವುದೇ ಪಂದ್ಯದಲ್ಲಿ ಭಾರತ ಸೋತ ಉದಾಹರಣೆ ಇಲ್ಲ — ಒಂದೋ ಗೆಲುವು, ಇಲ್ಲವೇ ಡ್ರಾ!
1969ರಲ್ಲಿ ಕಾನ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಾದಾರ್ಪಣೆ ಮಾಡಿದ ವಿಶಿ, ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟ್ ಆದರೂ, ಎರಡನೇ ಇನ್ನಿಂಗ್ಸ್‌ನಲ್ಲಿ 25 ಬೌಂಡರಿಗಳೊಂದಿಗೆ 137 ರನ್ ಸಿಡಿಸಿ ಕ್ರಿಕೆಟ್ ಲೋಕದ ಗಮನ ಸೆಳೆದರು. ಅವರ ಸ್ಕ್ವೇರ್ ಕಟ್ ಶಾಟ್ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಗೆದ್ದಿತ್ತು.
ಗವಾಸ್ಕರ್ ಪ್ರಶಂಸೆ, ಹೆಲ್ಮೆಟ್ ಇಲ್ಲದೆ ವೇಗದ ಬೌಲರ್ ಎದುರಿಸಿದ ಧೈರ್ಯ
“ನನ್ನಂತಹ ನೂರು ಗವಾಸ್ಕರ್ ಬರಬಹುದು, ಆದರೆ ವಿಶಿಯಂತವರು ಬರಲಾರರು” ಎಂಬ ಸುನಿಲ್ ಗವಾಸ್ಕರ್ ಮಾತುಗಳು ವಿಶಿಯ ಮಹತ್ವ ಸಾರುತ್ತವೆ. ಆಂಡಿ ರಾಬರ್ಟ್ಸ್, ಜೆಫ್ ಥಾಂಪ್ಸನ್‌ಂತಹ ವೇಗದ ಬೌಲರ್‌ಗಳನ್ನು ಹೆಲ್ಮೆಟ್ ಇಲ್ಲದೆ ಎದುರಿಸಿದ ಧೈರ್ಯವೂ ವಿಶಿಯ ವಿಶೇಷ.
ಕ್ರೀಡಾಸ್ಪೂರ್ತಿಗೆ ಮಾದರಿ
1980ರ ಸುವರ್ಣ ಮಹೋತ್ಸವ ಟೆಸ್ಟ್‌ನಲ್ಲಿ ಅಂಪೈರ್ ತಪ್ಪು ತೀರ್ಪು ನೀಡಿದಾಗ ಬಾಬ್ ಟೇಲರ್ ಅವರನ್ನು ಮರು ಕ್ರೀಸಿಗೆ ಕರೆಸಿದ ವಿಶಿಯ ಕ್ರೀಡಾಸ್ಫೂರ್ತಿ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ.
ರಣಜಿ ಫೈನಲ್‌ಗೂ ಮದುವೆಯೂ ಒಂದೇ ಸಮಯ
1978ರಲ್ಲಿ ಗವಾಸ್ಕರ್ ಸಹೋದರಿ ಕವಿತಾ ಅವರನ್ನು ಮದುವೆಯಾದ ವಿಶಿ, ಮದುವೆಯ ಬಳಿಕ ನೇರವಾಗಿ ಮೈದಾನಕ್ಕಿಳಿದು ರಣಜಿ ಫೈನಲ್‌ನಲ್ಲಿ 247 ರನ್ ಸಿಡಿಸಿ ಕರ್ನಾಟಕಕ್ಕೆ ಕಿರೀಟ ತಂದುಕೊಟ್ಟರು.
ವಿಶಿಯ ಮೂರು ಸ್ಮರಣೀಯ ಇನ್ನಿಂಗ್ಸ್
- 1975, ಮದ್ರಾಸ್: ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್
- 1969, ಕಾನ್ಪುರ: ಪಾದಾರ್ಪಣೆ ಪಂದ್ಯದಲ್ಲೇ 137 ರನ್
- 1981, ಎಂಸಿಜಿ: ಆಸ್ಟ್ರೇಲಿಯಾ ವಿರುದ್ಧ 114 ರನ್
77ನೇ ವಸಂತಕ್ಕೆ ಕಾಲಿಡುತ್ತಿರುವ ಕನ್ನಡದ ಹೆಮ್ಮೆ ಜಿಆರ್ ವಿಶ್ವನಾಥ್ ಅವರಿಗೆ ಹಾರ್ದಿಕ ಶುಭಾಶಯಗಳು.
-
ಬೆಂಗಳೂರು9 hours agoBENGALURU : ವಸಂತಪುರ ಶ್ರೀವಸಂತವಲ್ಲಭರಾಯ ಸ್ವಾಮಿಯ ಶಯನೋತ್ಸವ ವೈಭವ
-
ದೇಶ8 hours agoGBA ELECTION : 5 ಪಾಲಿಕೆಗಳಿಗೆ ವಾರ್ಡ್ ಗಡಿ ಪಾಲನೆ ಕಡ್ಡಾಯ – ಮುಖ್ಯ ಆಯುಕ್ತ ಸೂಚನೆ
-
ಅಪರಾಧ8 hours agoCRIME : ಬೆಂಗಳೂರಿನಲ್ಲಿ ಮತ್ತೆ ರೋಡ್ ರೇಜ್: ಬಾನೆಟ್ ಮೇಲೆ ವ್ಯಕ್ತಿ ಇದ್ದರೂ 1 ಕಿ.ಮೀ ಕಾರು ಚಲಾಯಿಸಿದ ಚಾಲಕ
-
ದೇಶ7 hours agoLATEST : “ದೆಹಲಿಗೆ ಬಂದಿರೋದೇ ರಾಜಕಾರಣಕ್ಕೆ”: ಡಿಕೆಶಿ ಹೇಳಿಕೆ ಕುತೂಹಲ
-
ದೇಶ6 hours ago2026 ಪ್ರೇಮಿಗಳ ದಿನ ಶನಿವಾರ: ರೋಮ್ಯಾಂಟಿಕ್ ವಾರಾಂತ್ಯಕ್ಕೆ ಟಾಪ್ 5 ಪ್ರವಾಸ ತಾಣಗಳು
-
ದೇಶ7 hours agoBHARATH BANDH : ದೇಶವ್ಯಾಪಿ ಮುಷ್ಕರ: 30 ಕೋಟಿ ಕಾರ್ಮಿಕರ ಹೋರಾಟ, ಹಲವು ರಾಜ್ಯಗಳಲ್ಲಿ ಬಂದ್ ಪರಿಣಾಮ
-
ದೇಶ8 hours agoಹೊಸಕೋಟೆಗೆ ಬಜೆಟ್ ಬಲ ಸಿಗುತ್ತಾ? ಮೆಟ್ರೋ, ನೀರಾವರಿ, ಒಳಚರಂಡಿ ಯೋಜನೆಗಳ ನಿರೀಕ್ಷೆ
-
ಅಪರಾಧ7 hours agoBAIRATHI BASAVARJU BREAKING NEWS : ಸಿಐಡಿ ಲುಕ್ಔಟ್ ನೋಟಿಸ್ ಜಾರಿ, ತನಿಖೆ ತೀವ್ರ
