Connect with us

ದೇಶ

“ಅಧಿಕಾರ ಮಾತ್ರ ಬೇಕು ಕೆಲವರಿಗೆ”: ಡಿಕೆಶಿ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ!

ಬೆಂಗಳೂರು: “ಕೆಲವರಿಗೆ ಅಧಿಕಾರ ಮಾತ್ರ ಬೇಕು… ಆದರೆ ನೀವು ಮೊದಲ ಗುಂಪಿಗೆ ಸೇರಬೇಕು,” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಾರ್ಯಕರ್ತರಿಗೆ ಹೇಳಿದ ಹೇಳಿಕೆ ಈಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ವಿರೋಧಿಗಳಿಗೆ ಪರೋಕ್ಷ ಟಾಂಗ್ ನೀಡಿದಂತಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಗಾಳಿ ಎಬ್ಬಿಸಿದೆ.

ಭಾರತ್ ಜೋಡೋ ಭವನದಲ್ಲಿ ನಡೆದ ಇಂದಿರಾ ಗಾಂಧಿ 108ನೇ ಜयंती ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, “ಜಗತ್ತಿನಲ್ಲಿ ಕೆಲಸ ಮಾಡುವವರು ಮತ್ತು ಅದರ ಲಾಭ ಪಡೆಯುವವರು ಎಂದು ಎರಡು ಬಗೆಯ ಜನರಿದ್ದಾರೆ. ಕಾರ್ಯಕರ್ತರು ಮೊದಲ ಗುಂಪಿಗೆ ಸೇರಬೇಕು” ಎಂದು ಸಂದೇಶ ನೀಡಿದರು.

“ಪಾರ್ಟಿ ಅಂದ್ರೆ ದೇವಸ್ಥಾನ ಎಂಬುದನ್ನೇ ಕೆಲವರು ಮರೆತಿದ್ದಾರೆ” ಎಂದು ಡಿಕೆಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದ ಕಚೇರಿಗಳಿಗೆ ಕೊಡುಗೆ ನೀಡಲು ಆಸಕ್ತಿ ತೋರಿಸದವರ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡುವುದಾಗಿ ತಿಳಿಸಿದ ಡಿಕೆಶಿ, “ಯಾರು 100 ಕೆಪಿಸಿಸಿ ಕಚೇರಿ ನಿರ್ಮಾಣಕ್ಕೆ ಕೈಜೋಡಿಸುತ್ತಿಲ್ಲವೋ ಅವರ ಬಗ್ಗೆ ದೆಹಲಿ ಸರಿಯಾದ ಸಮಯದಲ್ಲಿ ಉತ್ತರ ನೀಡುತ್ತದೆ” ಎಂದು ಸ್ಪಷ್ಟ ಸಂದೇಶ ಹಂಚಿದರು.

ಅವರು ಮುಂದುವರಿದು, “ನಾನು ಶಾಶ್ವತ ಅಧ್ಯಕ್ಷನಾಗಿ ಇರಲಾರೆ. ಡಿಸಿಎಂ ಆದ ದಿನವೇ ರಾಜೀನಾಮೆ ಕೊಡಲು ನಿರ್ಧರಿಸಿದ್ದೆ. ಆದರೆ ರಾಹುಲ್ ಗಾಂಧಿ ಮತ್ತು ಖರ್ಗೆ ಮುಂದುವರಿಯಿರಿ ಎಂದು ಹೇಳಿದರು” ಎಂದು ತಿಳಿಸಿದರು.

“ಅಧಿಕಾರ ಮುಖ್ಯವಲ್ಲ, ಕಾರ್ಯಕರ್ತರ ಸ್ವಾಭಿಮಾನ ಮುಖ್ಯ” ಎಂದು ಹೇಳಿದ ಡಿಕೆಶಿ, ತನ್ನ ತ್ಯಾಗಭಾವವನ್ನು ಕೂಡ ಕಾರ್ಯಕ್ರಮದಲ್ಲಿ ಹಂಚಿಕೊಂಡರು. ರಾಜ್ಯ ರಾಜಕೀಯದಲ್ಲಿ ಈ ಹೇಳಿಕೆ ಹೊಸ ಚರ್ಚೆಯ ದಿಕ್ಕು ತೋರಿಸಿದೆ.

ದೇಶ

GBA ELECTION : 5 ಪಾಲಿಕೆಗಳಿಗೆ ವಾರ್ಡ್ ಗಡಿ ಪಾಲನೆ ಕಡ್ಡಾಯ – ಮುಖ್ಯ ಆಯುಕ್ತ ಸೂಚನೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿ ಅಧಿಸೂಚನೆಯಲ್ಲಿ ನಮೂದಿಸಿರುವ ವಾರ್ಡ್ ಗಡಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಜಿಬಿಎ ಮುಖ್ಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕರಡು ಮತದಾರರ ಪಟ್ಟಿಯ ಪರಿಶೀಲನೆಗೆ ಸಂಬಂಧಿಸಿದ ಪ್ರಮಾಣಿತ ಕಾರ್ಯವಿಧಾನ (SOP) ಕುರಿತು ಚರ್ಚೆ ನಡೆಯಿತು. ಅಧಿಸೂಚನಾ ವಿವರಣೆಗಳಿಗೆ ಅನುಗುಣವಾಗಿ ವಾರ್ಡ್ ಮ್ಯಾಪ್ ಗಡಿಗಳನ್ನು ಸರಿಪಡಿಸಿ ನವೀಕರಿಸಲು ಐಟಿ ವಿಭಾಗಕ್ಕೆ ನಿರ್ದೇಶನ ನೀಡಲಾಗಿದೆ. ದೀರ್ಘಾವಧಿಯಲ್ಲಿ ವ್ಯವಸ್ಥಿತ ಸರ್ವೇ ನಡೆಸುವಂತೆ ಸೂಚಿಸಲಾಗಿದೆ.

ಚುನಾವಣಾ ವಿಭಾಗ ರಚನೆ

ಪ್ರತಿ ಪಾಲಿಕೆಯಲ್ಲಿ ತಹಸೀಲ್ದಾರ್, ವ್ಯವಸ್ಥಾಪಕ, ಎಫ್‌ಡಿ, ಎಸ್‌ಡಿಎ ಹಾಗೂ ಡೇಟಾ ಎಂಟ್ರಿ ಆಪರೇಟರ್ ಒಳಗೊಂಡ ವಿಶೇಷ ಚುನಾವಣಾ ವಿಭಾಗ ರಚಿಸಲು ಸೂಚಿಸಲಾಗಿದೆ.

ವಿಭಜಿತ ವಾರ್ಡ್‌ಗಳ ವಿಶೇಷ ಪರಿಶೀಲನೆ

ವಿಭಜಿತ ವಾರ್ಡ್‌ಗಳ ಮಾಹಿತಿಯನ್ನು ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಪಾಲಿಕೆ ಆಯುಕ್ತರು ಸ್ವತಂತ್ರವಾಗಿ ಮಾಹಿತಿ ದೃಢೀಕರಿಸಬೇಕು ಎಂದು ಮಹೇಶ್ವರ್ ರಾವ್ ತಿಳಿಸಿದ್ದಾರೆ.

ನೋಡಲ್ ಅಧಿಕಾರಿಗಳ ನೇಮಕ

ಡೇಟಾ ಸಮಸ್ಯೆಗಳ ಪರಿಹಾರ ಹಾಗೂ ಜಿಬಿಎ ಚುನಾವಣಾ ವಿಭಾಗದೊಂದಿಗೆ ಸಮನ್ವಯಕ್ಕಾಗಿ ಕಂದಾಯ ವಿಭಾಗದ ಅಪರ ಆಯುಕ್ತರನ್ನು ಐದು ಪಾಲಿಕೆಗಳಲ್ಲೂ ನೋಡಲ್ ಅಧಿಕಾರಿಗಳಾಗಿ ನಿಯೋಜಿಸಲು ಸೂಚಿಸಲಾಗಿದೆ.

“ಕರಡು ಮತದಾರರ ಪಟ್ಟಿಯ ಪರಿಶೀಲನೆಯಲ್ಲಿ ಪಾರದರ್ಶಕತೆ, ನಿಖರತೆ ಹಾಗೂ ವಿಶ್ವಾಸಾರ್ಹತೆ ಖಚಿತಪಡಿಸಲು SOP ಕಟ್ಟುನಿಟ್ಟಾಗಿ ಅನುಸರಿಸಬೇಕು” ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ಸಭೆಯಲ್ಲಿ ವಿವಿಧ ಪಾಲಿಕೆಗಳ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

ಕ್ರೀಡೆ

ಭಾರತ–ಪಾಕಿಸ್ತಾನ ಟಿ20 ವಿಶ್ವಕಪ್ ಮುಖಾಮುಖಿ: ‘ನಾವು ಸಿದ್ಧ’ ಎಂದ ತಿಲಕ್ ವರ್ಮಾ

ನವದೆಹಲಿ, ಫೆ.11: ಫೆಬ್ರವರಿ 15ರಂದು ಕೊಲಂಬೊದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ (T20 World Cup) ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಸಂಪೂರ್ಣ ಸಿದ್ಧವಾಗಿದೆ ಎಂದು ತಿಲಕ್ ವರ್ಮಾ (Tilak Varma) ತಿಳಿಸಿದ್ದಾರೆ.

ನಮೀಬಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ನಾವು ಈಗಾಗಲೇ ಸಿದ್ಧರಾಗಿದ್ದೇವೆ. ಆ ಪಂದ್ಯಕ್ಕಾಗಿ ತಂಡ ಉತ್ಸುಕವಾಗಿದೆ” ಎಂದು ಹೇಳಿದರು.

ಅನಿಶ್ಚಿತತೆಗೆ ತೆರೆ

ಸರ್ಕಾರದ ನಿರ್ದೇಶನಗಳ ಹಿನ್ನೆಲೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಆರಂಭದಲ್ಲಿ ಪಂದ್ಯದಿಂದ ಹಿಂದೆ ಸರಿಯುವುದಾಗಿ ಸೂಚಿಸಿತ್ತು. ಆದರೆ ನಂತರ ಎಲ್ಲಾ ನಿಗದಿತ ಪಂದ್ಯಗಳಲ್ಲಿ ಭಾಗವಹಿಸುವುದಾಗಿ ಐಸಿಸಿಗೆ ತಿಳಿಸಿದ್ದರಿಂದ ಹೈ-ವೋಲ್ಟೇಜ್ ಪಂದ್ಯ ಸುತ್ತಲಿನ ಗೊಂದಲ ಅಂತ್ಯಗೊಂಡಿದೆ.

ಗಾಯದಿಂದ ಮರಳಿದ ತಿಲಕ್

ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ತಿಲಕ್ ವರ್ಮಾ ವಿಶ್ವಕಪ್ ತಂಡಕ್ಕೆ ಮರಳಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. “ವಿಶ್ವಕಪ್ ಗೆಲ್ಲುವುದೇ ನಮ್ಮ ಗುರಿ. ತಂಡಕ್ಕಾಗಿ ಯಾವಾಗಲೂ ಕೊಡುಗೆ ನೀಡಲು ಸಿದ್ಧನಿದ್ದೇನೆ” ಎಂದರು.

ಅಭ್ಯಾಸ ಪಂದ್ಯದಲ್ಲಿ ಭಾರತ ‘ಎ’ ತಂಡ ನಮೀಬಿಯಾವನ್ನು 100 ರನ್‌ಗಳೊಳಗೆ ಆಲೌಟ್ ಮಾಡಿರುವುದರಿಂದ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಫೇವರಿಟ್ ಎನ್ನಲಾಗುತ್ತಿದೆ.

ಅಭಿಷೇಕ್ ಶರ್ಮಾ ಸ್ಥಿತಿ

ಹೊಟ್ಟೆ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಅಭಿಷೇಕ್ ಶರ್ಮಾ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ಮುಂದಿನ ಪಂದ್ಯದಲ್ಲಿ ಅವರು ಹಾಗೂ ಜಸ್ಪ್ರೀತ್ ಬುಮ್ರಾ ಆಡಲಿರುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ತಿಲಕ್ ತಿಳಿಸಿದರು.

ಟಿ20 ಸ್ವರೂಪದಲ್ಲಿ ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.

Continue Reading

ದೇಶ

ಬೇಸಿಗೆಗೆ ಮುನ್ನ ಬೆಂಗಳೂರು ಜಲಮಂಡಳಿ ಎಚ್ಚರಿಕೆ: ಕಾವೇರಿ ನೀರಿಗೆ ಪರ್ಯಾಯ ಯೋಜನೆ

ಬೆಂಗಳೂರು: ಶಿವರಾತ್ರಿ ಮುಗಿಯುತ್ತಿದ್ದಂತೆ ನಗರದಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಮಾರ್ಚ್‌ನಿಂದ ಅಧಿಕೃತವಾಗಿ ಬೇಸಿಗೆ (Summer) ಆರಂಭವಾಗಲಿದ್ದು, ನೀರಿನ ಅಭಾವದ ಆತಂಕ ಸಹಜ. ಆದರೆ ಈ ಬಾರಿ ಬೆಂಗಳೂರಿನ ಜನರಿಗೆ ಬೇಸಿಗೆಯಲ್ಲಿ ಕಾವೇರಿ ಕುಡಿಯುವ ನೀರಿನ (Drinking Water) ಕೊರತೆ ಆಗದಂತೆ ಬೆಂಗಳೂರು ಜಲಮಂಡಳಿ (Bengaluru Water Board) ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

54 ಟಿಎಂಸಿ ನೀರು ಲಭ್ಯ

ಸದ್ಯ ಕೆಆರ್‌ಎಸ್ ಜಲಾಶಯದಲ್ಲಿ 54 ಟಿಎಂಸಿ ನೀರು ಲಭ್ಯವಿದ್ದು, ಜುಲೈವರೆಗೆ ಬೆಂಗಳೂರಿಗೆ ಅಗತ್ಯವಿರುವ 14 ಟಿಎಂಸಿ ನೀರು ಸಾಕಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ಯಾಂಕರ್ ವ್ಯವಸ್ಥೆ ಸಿದ್ಧ

ನೀರಿನ ಕೊರತೆ ಕಾಣಿಸಬಹುದಾದ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಜಲಮಂಡಳಿ ಯೋಜನೆ ರೂಪಿಸಿದೆ. ಬೋರ್‌ವೆಲ್‌ ನೀರು ಬೇಸಿಗೆಯಲ್ಲಿ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ, ಕಳೆದ ವರ್ಷದಿಂದಲೇ ಬೋರ್‌ವೆಲ್ ನಿರ್ವಹಣೆಯನ್ನು ಜಲಮಂಡಳಿ ವಹಿಸಿಕೊಂಡಿದೆ. ಅಂತರ್ಜಲ ಕುಸಿತ ತಡೆಯಲು ಕ್ರಮ ಕೈಗೊಳ್ಳಲಾಗಿದೆ.

ನೀರು ವ್ಯರ್ಥ ಮಾಡಿದ್ರೆ ದಂಡ

ಕಾವೇರಿ ನೀರನ್ನು ಬೈಕ್, ಕಾರು ತೊಳೆಯಲು ಬಳಸುವುದು ಅಥವಾ ಅನಗತ್ಯವಾಗಿ ಪೋಲು ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಜಲಮಂಡಳಿ ಸಿದ್ಧವಾಗಿದೆ. ವೀಕ್ಷಕರು ಹಾಗೂ ಬ್ಲೂಫೋರ್ಸ್ ತಂಡಗಳು ಪರಿಶೀಲನೆ ನಡೆಸಲಿದ್ದು, ನಿಯಮ ಉಲ್ಲಂಘನೆಗೆ ದಂಡ ವಿಧಿಸಲಾಗುತ್ತದೆ.

ಜನರು ನೀರನ್ನು ಜಾಗರೂಕತೆಯಿಂದ ಬಳಕೆ ಮಾಡಿದರೆ ಬೇಸಿಗೆಯಲ್ಲಿ ಜಲಕ್ಷಾಮ ಸಮಸ್ಯೆ ತಗ್ಗಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

Continue Reading

Trending