ಬೆಂಗಳೂರು
ಗೃಹಲಕ್ಷ್ಮಿ ಯೋಜನೆ ಸಿಹಿ ಸುದ್ದಿ: 23ನೇ ಕಂತು ಬಿಡುಗಡೆ ದಿನಾಂಕ ಘೋಷಣೆ!
ಬೆಂಗಳೂರು: ರಾಜ್ಯ ಸರ್ಕಾರದ ಜನಪರ ಗೃಹಲಕ್ಷ್ಮಿ ಯೋಜನೆ (GruhaLakshmi) ಹಣ ಬಿಡುಗಡೆ ವಿಳಂಬದಿಂದ ಮಹಿಳೆಯರು ನಿರಾಶೆಯಲ್ಲಿದ್ದರು. ಪ್ರತಿ ತಿಂಗಳು ಸಮಯಕ್ಕೆ ಹಣ ಜಮೆಯಾಗದ ಕಾರಣ ಅನೇಕ ಬಡ ಮಹಿಳೆಯರು ಸರ್ಕಾರಕ್ಕೆ ಮನವಿ ಮಾಡುತ್ತ, “ದಯವಿಟ್ಟು ನಮ್ಮ ಖಾತೆಗೆ ಹಣ ಜಮೆ ಮಾಡಿ” ಎಂದು ಕೇಳಿಕೊಳ್ಳುತ್ತಿದ್ದ ಪರಿಸ್ಥಿತಿ ಎದುರಾಗಿದೆ.
ಈ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಘೋಷಣೆ ಮಾಡಿದ್ದಾರೆ. 23ನೇ ಕಂತಿನ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ರಾಜ್ಯದ 1.27 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಈ ಮೂಲಕ ಸಿಹಿ ಸುದ್ದಿ ದೊರೆತಿದೆ. ಈ ತಿಂಗಳ 28ರೊಳಗೆ ಹಣ ಬಿಡುಗಡೆವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, “ಇಲ್ಲಿವರೆಗೂ ಪ್ರತಿಯೊಬ್ಬರ ಖಾತೆಗೆ ₹44,000 ಜಮೆ ಮಾಡಲಾಗಿದೆ. ಈಗ ಸೆಪ್ಟೆಂಬರ್ ತಿಂಗಳ 23ನೇ ಕಂತಿಗೆ ಕ್ರಮ ಕೈಗೊಳ್ಳಲಾಗಿದ್ದು, ಒಂದು ವಾರದಲ್ಲಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ” ಎಂದರು. ಇದರಿಂದ ಆರ್ಥಿಕ ಸಂಕಷ್ಟದಲ್ಲಿ ಇದ್ದ ಮಹಿಳೆಯರು ನಿಟ್ಟುಸಿರು ಬಿಡುವಂತೆ ಆಗಿದೆ.
ಗೃಹಲಕ್ಷ್ಮಿ ಬ್ಯಾಂಕ್ ಪ್ರಾರಂಭ
ಗೃಹಲಕ್ಷ್ಮಿ ಯೋಜನೆಯ ಯಶಸ್ಸಿನ ಹಿನ್ನೆಲೆ, ಮಹಿಳಾ ಸಬಲೀಕರಣಕ್ಕಾಗಿ ‘ಗೃಹಲಕ್ಷ್ಮಿ ಬ್ಯಾಂಕ್’ ಸ್ಥಾಪಿಸಲಾಗುತ್ತಿದೆ. ಇದರ ಮೂಲಕ ಮಹಿಳೆಯರನ್ನು ಆರ್ಥಿಕ ಸ್ವಾವಲಂಭಿಗಳನ್ನಾಗಿ ರೂಪಿಸಲಾಗುತ್ತಿದೆ ಎಂದು ಹೆಬ್ಬಾಳ್ಕರ್ ಹೇಳಿದರು.
ಮಹಿಳೆಯರಿಗೆ ಸಾಲ ಸೌಲಭ್ಯ
ಈ ಬ್ಯಾಂಕ್ನಲ್ಲಿ ಮಹಿಳೆಯರು ಷೇರುದಾರರಾಗಬಹುದು. ಪ್ರತಿ ತಿಂಗಳು ₹200 ಉಳಿತಾಯ ಮಾಡಿದರೆ, 6 ತಿಂಗಳ ಬಳಿಕ ಸಾಲ ಪಡೆಯಲು ಅರ್ಹತೆ ಇದೆ. ₹30,000 ರಿಂದ ₹3 ಲಕ್ಷವರೆಗಿನ ಸಾಲವನ್ನು ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಉದ್ದೇಶಗಳಿಗೆ ಪಡೆಯಬಹುದು.
ಅಕ್ಕಪಡೆ ಆರಂಭ
ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ‘ಅಕ್ಕಪಡೆ’ ಎಂಬ ವಿಶೇಷ ಘಟಕವನ್ನು ಆರಂಭಿಸಲಾಗುತ್ತದೆ. ಬೆಳಗ್ಗೆ 8 ರಿಂದ ರಾತ್ರಿ 9 ರವರೆಗೆ ಕಾಲೇಜು, ಬಸ್ ನಿಲ್ದಾಣ, ದೇವಸ್ಥಾನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಲಾಗುತ್ತದೆ.
ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣಕ್ಕಾಗಿ ಮಾಡಿದ ಈ ಘೋಷಣೆ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ದೇಶ
SIR ಎಂದರೇನು? ಕರ್ನಾಟಕದ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಸಂಪೂರ್ಣ ಮಾಹಿತಿ
ಬೆಂಗಳೂರು: ಕರ್ನಾಟಕದಲ್ಲಿ Special Intensive Revision (SIR) ಅಥವಾ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, ಮತದಾರರ ಪಟ್ಟಿಯನ್ನು ಹೆಚ್ಚು ನಿಖರಗೊಳಿಸುವ ಉದ್ದೇಶದಿಂದ ಚುನಾವಣಾ ಆಯೋಗ (ECI) ರಾಜ್ಯಾದ್ಯಂತ ಮನೆ-ಮನೆ ಪರಿಶೀಲನೆ ನಡೆಸುತ್ತಿದೆ.
ಈ ಪ್ರಕ್ರಿಯೆಯ ಪ್ರಮುಖ ಉದ್ದೇಶ ಸತ್ತವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ನಕಲಿ ಹಾಗೂ ಅನರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕುವುದು ಮತ್ತು ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದಾಗಿದೆ. ಕರ್ನಾಟಕದಲ್ಲಿ 5.54 ಕೋಟಿಗೂ ಅಧಿಕ ಮತದಾರರು ನೋಂದಾಯಿತರಾಗಿದ್ದು, ಅವರಲ್ಲಿ ಸುಮಾರು 91.61% ಮತದಾರರ ವಿವರಗಳು ಈಗಾಗಲೇ ಮ್ಯಾಪ್ ಆಗಿವೆ. ಉಳಿದ ಮತದಾರರ ಮಾಹಿತಿಯನ್ನು ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸಾವಿರಾರು ಅಧಿಕಾರಿಗಳು ಹಾಗೂ 5,950 BLOಗಳು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮತದಾರರಿಗೆ ಅಗತ್ಯ ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ಸೇವಾ ಸಿಂಧು, ನಾಡಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳ ಮೂಲಕ ಪಡೆಯುವ ವ್ಯವಸ್ಥೆಯನ್ನೂ ಸರ್ಕಾರ ಕಲ್ಪಿಸಿದೆ.
ಇದೀಗ SIR ಪ್ರಕ್ರಿಯೆ ರಾಜಕೀಯ ವಿವಾದಕ್ಕೂ ಕಾರಣವಾಗಿದೆ. ಕೆಲವು ರಾಜಕೀಯ ಪಕ್ಷಗಳು ಮನೆ-ಮನೆ ಪರಿಶೀಲನೆಯ ಬದಲು ಸಾರ್ವಜನಿಕ ಸ್ಥಳಗಳಲ್ಲಿ ಅರ್ಜಿ ವಿತರಣೆ, ನಿಯಮ ಉಲ್ಲಂಘನೆ ಹಾಗೂ ರಾಜಕೀಯ ಹಸ್ತಕ್ಷೇಪದ ಆರೋಪಗಳನ್ನು ಮಾಡಿವೆ. ಆದರೆ, ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು, ಇನ್ನೂ ಮ್ಯಾಪ್ ಆಗದ ಮತದಾರರ ಹೆಸರುಗಳು ತಕ್ಷಣವೇ ಪಟ್ಟಿಯಿಂದ ಕೈಬಿಡಲಾಗುವುದಿಲ್ಲ. ಕರಡು ಪಟ್ಟಿ ಪ್ರಕಟವಾದ ಬಳಿಕ ದಾಖಲೆ ಸಲ್ಲಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಸೂಕ್ತ ಅವಕಾಶ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮತದಾರರ ಪಟ್ಟಿಯನ್ನು ಪಾರದರ್ಶಕ ಹಾಗೂ ನಿಖರವಾಗಿಡುವ ಉದ್ದೇಶದಿಂದ ನಡೆಯುತ್ತಿರುವ ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ.
ದೇಶ
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅವ್ಯವಸ್ಥೆ? ಬಿಎಲ್ಒಗಳ ಮೇಲೆ ಒತ್ತಡ ಆರೋಪಿಸಿದ ವಿಜಯೇಂದ್ರ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ ಗಂಭೀರ ಅವ್ಯವಸ್ಥೆ ನಡೆಯುತ್ತಿದ್ದು, ರಾಜ್ಯ ಸರ್ಕಾರ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಬೂತ್ ಮಟ್ಟದ ಅಧಿಕಾರಿಗಳ (BLO) ಮೇಲೆ ಒತ್ತಡ ಹೇರುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಐಆರ್ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮನೆ ಮನೆಗೆ ತೆರಳಿ ನಮೂನೆಗಳನ್ನು ವಿತರಿಸುವ ಬದಲು ಕಲ್ಯಾಣ ಮಂಟಪ, ಚೌಲ್ಟ್ರಿ ಹಾಗೂ ಮಸೀದಿಗಳಲ್ಲಿ ಕುಳಿತು ಅರ್ಜಿಗಳನ್ನು ಹಂಚುತ್ತಿರುವುದು ನಿಯಮ ಉಲ್ಲಂಘನೆಯಾಗಿದೆ ಎಂದು ದೂರಿದರು. ಕೆಲವು ಶಾಸಕರ ಕಚೇರಿಗಳಲ್ಲೇ ಬಿಎಲ್ಒಗಳನ್ನು ಕೂರಿಸಿ ಕೆಲಸ ಮಾಡಿಸಲಾಗುತ್ತಿದೆ ಎಂದು ಆರೋಪಿಸಿ, ಈ ಕುರಿತು ಸಾಕ್ಷ್ಯ ಸಮೇತ ದೂರು ಸಲ್ಲಿಸಿರುವುದಾಗಿ ತಿಳಿಸಿದರು.
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಿತರಿಸಲಾಗುತ್ತಿರುವ ಅರ್ಜಿಗಳ ಮೇಲೆ ಕಾಂಗ್ರೆಸ್ ಮುಖಂಡರ ಫೋಟೋಗಳು ಮುದ್ರಣಗೊಂಡಿರುವ ವಿಚಾರವನ್ನೂ ಚುನಾವಣಾ ಆಯೋಗದ ಗಮನಕ್ಕೆ ತಂದಿರುವುದಾಗಿ ವಿಜಯೇಂದ್ರ ಹೇಳಿದರು. ಎಸ್ಐಆರ್ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಿರುವ ಎಲ್ಲೆಡೆ ಮರುಪರಿಷ್ಕರಣೆ ನಡೆಸುವಂತೆ ಆಗ್ರಹಿಸಿದರು.
ಮೈಸೂರು ಸಂಸದ ಯದುವೀರ್ ಒಡೆಯರ್ ಮಾತನಾಡಿ, ನರಸಿಂಹರಾಜ ಕ್ಷೇತ್ರದಲ್ಲಿ ಮತದಾರರ ಸಂಖ್ಯೆಯಲ್ಲಿ ಅಸಹಜ ಏರಿಕೆ ಕಂಡುಬಂದಿದ್ದು, ಮನೆಗಳ ಸಂಖ್ಯೆ ಹೆಚ್ಚಳವಾಗದೆ ಮತದಾರರ ಸಂಖ್ಯೆ ಮಾತ್ರ ಹೆಚ್ಚಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು. ಅಕ್ರಮ ಮತದಾರರನ್ನು ತಡೆಯಲು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುವುದು ಅಗತ್ಯ ಎಂದು ಒತ್ತಾಯಿಸಿದರು.
ಇದೇ ವೇಳೆ, ಬರ ಪರಿಸ್ಥಿತಿಯಲ್ಲಿ ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆಗೆ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡುವ ಬದಲು ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಣೆ ನಡೆಸುವುದು ಸೂಕ್ತ ಎಂದು ಯದುವೀರ್ ಒಡೆಯರ್ ಅಭಿಪ್ರಾಯಪಟ್ಟರು.
ಅಪರಾಧ
ಸಿಲಿಕಾನ್ ಸಿಟಿಯಲ್ಲಿ ಶಾಕ್: ಫ್ಲ್ಯಾಟ್ನಲ್ಲಿ ಕಾರ್ಡ್ಬೋರ್ಡ್ ಬಾಕ್ಸ್ನಲ್ಲಿ ಹೆಬ್ಬಾವುಗಳು ಪತ್ತೆ
ಬೆಂಗಳೂರು: ಸಿಲಿಕಾನ್ ಸಿಟಿಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಅಪಾರ್ಟ್ಮೆಂಟ್ನ ಫ್ಲ್ಯಾಟ್ವೊಂದರಲ್ಲಿ ಅಕ್ರಮವಾಗಿ ಹೆಬ್ಬಾವುಗಳನ್ನು ಸಾಕಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಹಲವು ಹೆಬ್ಬಾವುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.
ಅಪಾರ್ಟ್ಮೆಂಟ್ನಲ್ಲಿ ಕಳೆದ ಕೆಲವು ದಿನಗಳಿಂದ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದನ್ನು ಗಮನಿಸಿದ್ದ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ದೂರಿನ ಮೇರೆಗೆ ಅಧಿಕಾರಿಗಳು ಶುಕ್ರವಾರ ರಾತ್ರಿ ಫ್ಲ್ಯಾಟ್ ಮೇಲೆ ದಾಳಿ ನಡೆಸಿದಾಗ, ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ಹೆಬ್ಬಾವುಗಳನ್ನು ಇಟ್ಟುಕೊಂಡಿರುವುದು ಪತ್ತೆಯಾಗಿದೆ.
ಪರಿಶೀಲನೆ ವೇಳೆ ಕಾರ್ಡ್ಬೋರ್ಡ್ ಬಾಕ್ಸ್ನಲ್ಲಿ ಹೆಬ್ಬಾವುಗಳನ್ನು ಇರಿಸಲಾಗಿದ್ದು, ಅವುಗಳನ್ನು ಅಪಾಯಕಾರಿ ಪರಿಸ್ಥಿತಿಯಲ್ಲಿ ವಸತಿ ಪ್ರದೇಶದೊಳಗೆ ಸಾಕಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಫ್ಲ್ಯಾಟ್ನಲ್ಲಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಹೆಬ್ಬಾವುಗಳನ್ನು ಇಟ್ಟುಕೊಂಡಿದ್ದ ಪ್ರಮುಖ ವ್ಯಕ್ತಿ ಆಂಧ್ರಪ್ರದೇಶ ಮೂಲದವನಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ (Non-Cognizable Report) ದಾಖಲಾಗಿದೆ.
ಈ ಹೆಬ್ಬಾವುಗಳನ್ನು ಎಲ್ಲಿಂದ ತರಲಾಗಿತ್ತು, ವನ್ಯಜೀವಿಗಳ ಅಕ್ರಮ ಸಾಗಣೆ ಅಥವಾ ಮಾರಾಟ ಜಾಲದೊಂದಿಗೆ ಯಾವುದೇ ಸಂಬಂಧವಿದೆಯೇ ಹಾಗೂ ಅವುಗಳನ್ನು ಅಪಾರ್ಟ್ಮೆಂಟ್ನಲ್ಲಿ ಇಟ್ಟುಕೊಳ್ಳಲು ಉದ್ದೇಶವೇನು ಎಂಬ ಕುರಿತು ಅರಣ್ಯ ಇಲಾಖೆ ಮತ್ತು ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ. ವನ್ಯಜೀವಿಗಳನ್ನು ಅನುಮತಿಯಿಲ್ಲದೆ ಸಾಕುವುದು ಕಾನೂನುಬಾಹಿರವಾಗಿದ್ದು, ಇಂತಹ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
