Connect with us

ದೇಶ

ಬಿಜೆಪಿ-ಜೆಡಿಎಸ್ ಮೈತ್ರಿ ಲೋಕಸಭೆ, ವಿಧಾನಸಭೆಗೆ ಮಾತ್ರ: ಮಾಜಿ ಪ್ರಧಾನಿ ಸ್ಪಷ್ಟನೆ

Published

on

ಕರ್ನಾಟಕದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಮಾತ್ರ ಬಿಜೆಪಿ–ಜೆಡಿಎಸ್ ಮೈತ್ರಿ ಇರುತ್ತದೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಮಹಾನಗರ ಪಾಲಿಕೆ, ನಗರಪಾಲಿಕೆ, ನಗರಸಭೆ ಹಾಗೂ ಪುರಸಭೆ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸ್ಪಷ್ಟಪಡಿಸಿದರು.

ಜೆಡಿಎಸ್ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ನಡುವೆ ಉತ್ತಮ ಮೈತ್ರಿಯಾಗಿದೆ. ಇದೇ ಮೈತ್ರಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿಯೂ ಮುಂದುವರಿಯಲಿದೆ ಎಂದರು. ಆದರೆ ಪಕ್ಷ ಸಂಘಟನೆಯ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಅತ್ಯಂತ ಮಹತ್ವದ್ದಾಗಿದ್ದು, ಈ ಚುನಾವಣೆಯಲ್ಲಿ ಜೆಡಿಎಸ್ ತನ್ನದೇ ಶಕ್ತಿ ಬಲದಿಂದ ಸ್ಪರ್ಧಿಸಲಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗೆ ನಮ್ಮ ಬಾಂಧವ್ಯ ಉತ್ತಮವಾಗಿದೆ. ಆದರೆ ಸ್ಥಳೀಯ ಸಂಸ್ಥೆಗಳ ಸೀಟು ಹಂಚಿಕೆ ಕುರಿತು ಯಾವುದೇ ಮೈತ್ರಿ ಇಲ್ಲ. ಜೆಡಿಎಸ್ ತನ್ನ ಶಕ್ತಿ ಇರುವ ಎಲ್ಲ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತದೆ ಎಂದು ದೇವೇಗೌಡರು ಹೇಳಿದರು.

ಪಕ್ಷ ಸಂಘಟನೆಯ ಸಂಬಂಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಜನವರಿ 18ರಂದು ಬೆಂಗಳೂರಿನಲ್ಲಿ ಹಾಗೂ ಜನವರಿ 23ರಂದು ಹಾಸನದಲ್ಲಿ ಪಕ್ಷದ ಸಭೆಗಳನ್ನು ನಡೆಸಲಾಗುವುದು ಎಂದರು. ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿಯೂ ಜೆಡಿಎಸ್ ಎನ್‌ಡಿಎ ಮೈತ್ರಿಕೂಟದಲ್ಲಿಯೇ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ ದೇವೇಗೌಡರು, ಹೆಚ್‌ಎಂಟಿ ಹಾಗೂ ಭದ್ರಾವತಿ ಉಕ್ಕು ಕಾರ್ಖಾನೆ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು. ಜೊತೆಗೆ, ಅಹಿಂದ ಸಮಾವೇಶ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನೆಗಳನ್ನು ಎಸೆದು ಸವಾಲು ಹಾಕಿದರು.

Continue Reading
Click to comment

Leave a Reply

Your email address will not be published. Required fields are marked *

ದೇಶ

MLA ವಾಹನ ಬಳಕೆಗೆ ಹೊಸ ನಿಯಮ ಜಾರಿ; ವೇತನ, ಪಿಂಚಣಿಯಿಂದಲೇ ಶುಲ್ಕ ಕಡಿತ!

Published

on

ಬೆಂಗಳೂರು, ಜು.8: ಶಾಸಕರ ಭವನದಲ್ಲಿರುವ ಸರ್ಕಾರಿ ವಾಹನಗಳ ದುರುಪಯೋಗಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ವಿಧಾನಸಭಾ ಸಚಿವಾಲಯ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇನ್ನು ಮುಂದೆ ಜನಪ್ರತಿನಿಧಿಗಳ ಆಪ್ತ ಸಹಾಯಕರು, ಬೆಂಬಲಿಗರು ಅಥವಾ ಅತಿಥಿಗಳು ಶಿಫಾರಸು ಪತ್ರದ ಆಧಾರದ ಮೇಲೆ ಸರ್ಕಾರಿ ವಾಹನಗಳನ್ನು ಪಡೆದು ಬೆಂಗಳೂರು ನಗರದ ಹೊರಗೆ ಸಂಚರಿಸಲು ಅವಕಾಶ ಇರುವುದಿಲ್ಲ.

ಹೊಸ ಮಾರ್ಗಸೂಚಿಯ ಪ್ರಕಾರ, ಶಾಸಕರ ಭವನದ ಸರ್ಕಾರಿ ವಾಹನಗಳ ಸಂಚಾರವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ತುರ್ತು ಪರಿಸ್ಥಿತಿ ಅಥವಾ ವಿಮಾನ ನಿಲ್ದಾಣಕ್ಕೆ ತೆರಳುವಂತಹ ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ಬೆಂಗಳೂರಿನ ಗಡಿ ದಾಟಬೇಕಾದರೆ ವಿಧಾನಸಭಾಧ್ಯಕ್ಷರ ಲಿಖಿತ ಅನುಮತಿ ಕಡ್ಡಾಯವಾಗಲಿದೆ.

ವಿಧಾನಸಭಾ ಸಚಿವಾಲಯದ ಮಾಹಿತಿ ಪ್ರಕಾರ, ಸೀಮಿತ ಸಂಖ್ಯೆಯ ವಾಹನಗಳು ಮತ್ತು ಚಾಲಕರ ಲಭ್ಯತೆಯಿಂದಾಗಿ ಹಲವು ಬಾರಿ ಹಾಲಿ ಶಾಸಕರಿಗೂ ತುರ್ತು ಸಂದರ್ಭದಲ್ಲಿ ವಾಹನ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ಸಮಸ್ಯೆ ನಿವಾರಣೆ ಹಾಗೂ ಸಾರ್ವಜನಿಕ ಆಸ್ತಿಯ ಸಮರ್ಪಕ ಬಳಕೆಯನ್ನು ಖಚಿತಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಇನ್ನೊಂದು ಪ್ರಮುಖ ಬದಲಾವಣೆಯಾಗಿ, ನಗದುರಹಿತ (Cashless) ವಸೂಲಾತಿ ವ್ಯವಸ್ಥೆ ಜಾರಿಗೆ ತರಲಾಗಿದೆ. ವಾಹನ ಸಂಚರಿಸಿದ ಪ್ರತಿ ಕಿಲೋಮೀಟರ್‌ಗೆ ನಿಗದಿಪಡಿಸಿದ ಶುಲ್ಕವನ್ನು ಹಾಲಿ ಶಾಸಕರ ವೇತನದಿಂದ ಹಾಗೂ ಮಾಜಿ ಶಾಸಕರ ಪಿಂಚಣಿಯಿಂದ ನೇರವಾಗಿ ಕಡಿತಗೊಳಿಸಲಾಗುತ್ತದೆ.

ಈ ವ್ಯವಸ್ಥೆಯಿಂದ ಶಾಸಕರ ಹೆಸರಿನಲ್ಲಿ ಯಾರು ಸರ್ಕಾರಿ ವಾಹನ ಬಳಸಿದ್ದಾರೆ ಎಂಬ ಸಂಪೂರ್ಣ ದಾಖಲೆ ಲಭ್ಯವಾಗಲಿದ್ದು, ಪಾರದರ್ಶಕತೆ ಹೆಚ್ಚುವ ಜೊತೆಗೆ ಸಾರ್ವಜನಿಕ ಹಣದ ದುರುಪಯೋಗಕ್ಕೂ ಪರಿಣಾಮಕಾರಿ ತಡೆ ಬೀಳಲಿದೆ ಎಂದು ವಿಧಾನಸಭಾ ಸಚಿವಾಲಯ ತಿಳಿಸಿದೆ. ಹೊಸ ನಿಯಮಗಳು ಸರ್ಕಾರಿ ಸಂಪನ್ಮೂಲಗಳ ಸಮರ್ಪಕ ಬಳಕೆ ಹಾಗೂ ಆಡಳಿತದಲ್ಲಿ ಉತ್ತರದಾಯಿತ್ವ ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.

Continue Reading

ದೇಶ

ಹಾರ್ಮುಜ್ ಜಲಸಂಧಿ ದಾಳಿ ಬೆನ್ನಲ್ಲೇ ಟ್ರಂಪ್ ಘೋಷಣೆ; ‘ಇರಾನ್ ಜೊತೆ ಒಪ್ಪಂದ ಮುಗಿದಿದೆ’

Published

on

ಟೆಹ್ರಾನ್‌/ವಾಷಿಂಗ್ಟನ್‌, ಜು.8: ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಯ ಬಳಿಕ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಈ ಬೆಳವಣಿಗೆಯ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗಿನ ಮಧ್ಯಂತರ ಕದನ ವಿರಾಮ “ಅಂತ್ಯಗೊಂಡಿದೆ” ಎಂದು ಘೋಷಿಸಿದ್ದಾರೆ. ಈ ಹೇಳಿಕೆಯನ್ನು ಅವರು ಟರ್ಕಿಯ ಅಂಕಾರಾದಲ್ಲಿ ನಡೆದ ನ್ಯಾಟೋ ಶೃಂಗಸಭೆಯ ವೇಳೆ ನೀಡಿದ್ದಾರೆ.

ಮೂರು ವಾರಗಳ ಹಿಂದೆ ಇರಾನ್‌ನೊಂದಿಗೆ ಮಾಡಿಕೊಂಡಿದ್ದ ಮಧ್ಯಂತರ ತಿಳುವಳಿಕೆ ಒಪ್ಪಂದ (MoU) ಕುರಿತು ಪ್ರಶ್ನಿಸಿದಾಗ, “ನನ್ನ ಪ್ರಕಾರ ಅದು ಈಗ ಮುಗಿದ ಅಧ್ಯಾಯ. ಇರಾನ್ ಜೊತೆ ವ್ಯವಹರಿಸಲು ನನಗೆ ಇನ್ನು ಆಸಕ್ತಿಯಿಲ್ಲ” ಎಂದು ಟ್ರಂಪ್ ಪ್ರತಿಕ್ರಿಯಿಸಿದರು. ಅಲ್ಲದೆ, ಇರಾನ್ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಅವರೊಂದಿಗೆ ಮುಂದಿನ ಮಾತುಕತೆ ನಡೆಸುವುದು ಸಮಯ ವ್ಯರ್ಥ ಎಂದು ಹೇಳಿದರು.

ಈ ಬೆಳವಣಿಗೆಯ ಮೊದಲು ಹಾರ್ಮುಜ್ ಜಲಸಂಧಿಯಲ್ಲಿ ಮೂರು ವಾಣಿಜ್ಯ ತೈಲ ಹಡಗುಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆದಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ತನ್ನ CENTCOM ಮೂಲಕ ಇರಾನ್‌ನ 80ಕ್ಕೂ ಹೆಚ್ಚು ಮಿಲಿಟರಿ ಗುರಿಗಳ ಮೇಲೆ ವಾಯುದಾಳಿ ನಡೆಸಿರುವುದಾಗಿ ವರದಿಯಾಗಿದೆ. ದಾಳಿಯಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳು, ಡ್ರೋನ್ ಉಡಾವಣಾ ಕೇಂದ್ರಗಳು, ಕ್ಷಿಪಣಿ ನೆಲೆಗಳು ಹಾಗೂ ಕರಾವಳಿ ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಲಾಗಿದೆ.

ಇದರೊಂದಿಗೆ ಅಮೆರಿಕ, ಇರಾನ್‌ಗೆ ತೈಲ ಮಾರಾಟಕ್ಕೆ ನೀಡಿದ್ದ ವಿಶೇಷ ಪರವಾನಗಿಯನ್ನೂ ಹಿಂತೆಗೆದುಕೊಂಡಿದೆ. ಈ ಬೆಳವಣಿಗೆ ಜಾಗತಿಕ ತೈಲ ಮಾರುಕಟ್ಟೆ ಹಾಗೂ ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕದನ ವಿರಾಮ ಮುರಿದಿರುವುದರಿಂದ ಮುಂದಿನ ದಿನಗಳಲ್ಲಿ ರಾಜತಾಂತ್ರಿಕ ಮಾತುಕತೆಗಳು ಯಾವ ದಿಕ್ಕು ಪಡೆಯಲಿವೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Continue Reading

ದೇಶ

‘ಟೀಮ್ ಬೆಂಗಳೂರು ಅಲ್ಲ, ಟೀಮ್ ಕರ್ನಾಟಕ’ : ಜಾಗತಿಕ ಹೂಡಿಕೆದಾರರಿಗೆ ಡಿಕೆ ಶಿವಕುಮಾರ್ ಮಹತ್ವದ ಸಂದೇಶ

Published

on

ಬೆಂಗಳೂರು, ಜು.8: ಕರ್ನಾಟಕವನ್ನು ಜಾಗತಿಕ ಹೂಡಿಕೆ ಮತ್ತು ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಜಾಗತಿಕ ಹೂಡಿಕೆದಾರರ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಇದು ಕೇವಲ ಟೀಮ್ ಬೆಂಗಳೂರು ಅಲ್ಲ, ಟೀಮ್ ಕರ್ನಾಟಕ. ರಾಜ್ಯದ ಸಮಗ್ರ ಅಭಿವೃದ್ಧಿಯೇ ನಮ್ಮ ಸರ್ಕಾರದ ಗುರಿ” ಎಂದು ಹೇಳಿದರು.

ಸುಮಾರು 200ಕ್ಕೂ ಹೆಚ್ಚು ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್ (GCC) ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದು, ಬೆಂಗಳೂರಿನ ಅಭಿವೃದ್ಧಿ, ಕೈಗಾರಿಕಾ ವಿಸ್ತರಣೆ ಹಾಗೂ ಭವಿಷ್ಯದ ಹೂಡಿಕೆಗಳ ಕುರಿತು ಸರ್ಕಾರಕ್ಕೆ ಹಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ ಎಂದು ಸಿಎಂ ತಿಳಿಸಿದರು. ಜಾಗತಿಕ ಕಂಪನಿಗಳು ಸರ್ಕಾರದ ಆಡಳಿತದ ಮೇಲೆ ವಿಶ್ವಾಸ ವ್ಯಕ್ತಪಡಿಸಿರುವುದು ಸಂತಸದ ವಿಷಯ ಎಂದರು.

‘Beyond Bengaluru’ ಯೋಜನೆಯಡಿ ಐಟಿ-ಬಿಟಿ ಹಾಗೂ ಕೈಗಾರಿಕೆಗಳನ್ನು ಬೆಂಗಳೂರಿನ ಹೊರಗಿನ 2-Tier ಮತ್ತು 3-Tier ನಗರಗಳಿಗೆ ವಿಸ್ತರಿಸಲು ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ರೂಪಿಸುತ್ತಿದೆ. ಈ ಪ್ರದೇಶಗಳಲ್ಲಿ ಉದ್ಯಮ ಆರಂಭಿಸುವ ಕಂಪನಿಗಳಿಗೆ ಕಡಿಮೆ ದರದಲ್ಲಿ ಜಾಗ, ಕಟ್ಟಡ ಹಾಗೂ ಅಗತ್ಯ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ಭರವಸೆಯನ್ನೂ ಸಿಎಂ ನೀಡಿದರು.

ರಾಜ್ಯದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಹೂಡಿಕೆದಾರರನ್ನು ರಾಜ್ಯದ ಎಲ್ಲ ಭಾಗಗಳಿಗೆ ಆಕರ್ಷಿಸುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಉದ್ಯೋಗ ಸೃಷ್ಟಿಗೆ ಸಹಕರಿಸುವ ಕೈಗಾರಿಕೆಗಳಿಗೆ ಅಗತ್ಯ ಸಬ್ಸಿಡಿ ಮತ್ತು ಪ್ರೋತ್ಸಾಹಕ ಯೋಜನೆಗಳನ್ನು ಸರ್ಕಾರ ನೀಡಲಿದೆ ಎಂದರು.

ಇದೇ ವೇಳೆ, ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಮುಂಚೂಣಿಗೆ ತರುವ ಉದ್ದೇಶದಿಂದ ಅತ್ಯಾಧುನಿಕ AI University ಸ್ಥಾಪಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ಈ ವಿಶ್ವವಿದ್ಯಾಲಯದ ರೂಪುರೇಷೆಗಳ ಕುರಿತು ಜಾಗತಿಕ ತಂತ್ರಜ್ಞಾನ ತಜ್ಞರು ಹಾಗೂ GCC ಮುಖ್ಯಸ್ಥರಿಂದ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

Continue Reading

Trending