ಅಪರಾಧ
ಚಿರತೆ ಸಾವು ಪ್ರಕರಣ: ಕಲ್ಲು ಕ್ರಷರ್ ನಿಷೇಧಕ್ಕೆ: ಶಾಸಕ ಎಸ್.ಟಿ. ಸೋಮಶೇಖರ್ ಆಗ್ರಹ
ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿ ಅವಿರತವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮತ್ತು ಸ್ಫೋಟಕಗಳ ಅಬ್ಬರ ಇದೀಗ ಮೂಕಪ್ರಾಣಿಗಳ ಜೀವಕ್ಕೆ ಮಾರಕವಾಗುತ್ತಿದೆ ಎಂದು ಯಶವಂತಪುರ ಶಾಸಕ ಹಾಗೂ ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಕೆಂಗೇರಿ ಹೋಬಳಿಯ ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಚಿರತೆ ಮರಿಗಳು ಹಾಗೂ ಗರ್ಭಿಣಿ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ಪರಿಸರ ಪ್ರೇಮಿಗಳು ಮತ್ತು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಎಲ್ಲಾ ಕಲ್ಲು ಕ್ರಷರ್‌ಗಳನ್ನು ತಕ್ಷಣವೇ ನಿಷೇಧಿಸಬೇಕು ಎಂದು ಶಾಸಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಗುರುವಾರ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ತುರ್ತು ಪತ್ರ ಬರೆದಿರುವ ಎಸ್.ಟಿ. ಸೋಮಶೇಖರ್, ಗಣಿಗಾರಿಕೆಯಿಂದ ಉಂಟಾಗುತ್ತಿರುವ ಪರಿಸರ ಅನಾಹುತಗಳ ಬಗ್ಗೆ ಅಂಕಿ-ಅಂಶಗಳ ಸಮೇತ ವಿವರಿಸಿದ್ದಾರೆ. ಸ್ಫೋಟಕಗಳ ಭಾರೀ ಸದ್ದಿನಿಂದ ಬೆಚ್ಚಿಬಿದ್ದ ಚಿರತೆ ಮರಿಗಳು ಹಾಗೂ ಗರ್ಭಿಣಿ ಚಿರತೆ ಸಾವನ್ನಪ್ಪಿರುವುದು ವನ್ಯಜೀವಿಗಳ ಆವಾಸಸ್ಥಾನಕ್ಕೆ ಭಾರಿ ಅಪಾಯ ಉಂಟಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಂಡೆಗಳನ್ನು ಸ್ಫೋಟಿಸುವ ತೀವ್ರತೆಯಿಂದ ಸುತ್ತಮುತ್ತಲಿನ ಮನೆಗಳು ಬಿರುಕು ಬಿಡುತ್ತಿದ್ದು, ನಿವಾಸಿಗಳು ಪ್ರತಿದಿನ ಪ್ರಾಣಭಯದಲ್ಲಿ ಜೀವನ ಸಾಗಿಸುವಂತಾಗಿದೆ. ಅಲ್ಲದೆ, ಗಣಿಗಾರಿಕೆ ಪ್ರದೇಶದಿಂದ ಹೊರಬರುವ ಧೂಳು ಹಾಗೂ ನೂರಾರು ಲಾರಿಗಳ ನಿರಂತರ ಸಂಚಾರದಿಂದ ವಾಯು ಮಾಲಿನ್ಯ ಮಿತಿಮೀರಿದ್ದು, ಇದು ಮನುಷ್ಯರು ಮಾತ್ರವಲ್ಲದೆ ಜಾನುವಾರುಗಳ ಆರೋಗ್ಯಕ್ಕೂ ಗಂಭೀರ ಅಪಾಯ ತಂದೊಡ್ಡುತ್ತಿದೆ.
ಈ ಬಗ್ಗೆ ಈಗಾಗಲೇ ಭೂವಿಜ್ಞಾನ ಮತ್ತು ಗಣಿ ಇಲಾಖೆಗೆ ಹಲವು ದೂರುಗಳನ್ನು ಸಲ್ಲಿಸಿದ್ದರೂ ಯಾವುದೇ ಪರಿಣಾಮಕಾರಿಯಾದ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿ ಮತ್ತು ವನ್ಯಜೀವಿಗಳ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಚಿಕ್ಕನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್‌ಗಳಲ್ಲಿ ನಡೆಯುತ್ತಿರುವ ಎಲ್ಲಾ ಕಲ್ಲು ಕ್ರಷರ್‌ಗಳನ್ನು ಕೂಡಲೇ ನಿಷೇಧಿಸಬೇಕು ಎಂದು ಎಸ್.ಟಿ. ಸೋಮಶೇಖರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅಪರಾಧ
ಖಾನ್ ಸರ್ ಕೋಚಿಂಗ್ ಸೆಂಟರ್ ಮೇಲೆ ದಾಳಿ; ಗುಂಡಿನ ಸದ್ದುಗೆ ಬೆಚ್ಚಿಬಿದ್ದ ಪಾಟ್ನಾ
ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಖ್ಯಾತ ಶಿಕ್ಷಣ ತಜ್ಞ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರರಾದ Khan Sir ಅವರ ಕೋಚಿಂಗ್ ಸೆಂಟರ್‌ನಲ್ಲಿ ಮಂಗಳವಾರ ಸಂಜೆ ಆತಂಕಕಾರಿ ಘಟನೆ ನಡೆದಿದೆ. ಮುಸಲ್ಲಾಪುರ್ ಹಾತ್ ಪ್ರದೇಶದಲ್ಲಿರುವ ಸಂಸ್ಥೆಯ ಹೊರಭಾಗ ಮತ್ತು ಒಳಭಾಗದಲ್ಲಿ ಕೆಲ ದುಷ್ಕರ್ಮಿಗಳು ದಾಳಿ ನಡೆಸಿ ಗುಂಡು ಹಾರಿಸಿರುವುದಾಗಿ ವರದಿಯಾಗಿದೆ.
ಘಟನೆಯಲ್ಲಿ ಕೋಚಿಂಗ್ ಸೆಂಟರ್‌ನ ಭದ್ರತಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಟ್ನಾ ಎಸ್‌ಎಸ್‌ಪಿ, ಎಸ್‌ಪಿ ಸೇರಿದಂತೆ ಹಲವು ಪೊಲೀಸ್ ತಂಡಗಳು ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ಆರಂಭಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ Kartikeya K Sharma, ಇದು ದೈಹಿಕ ಹಲ್ಲೆಗೆ ಸಂಬಂಧಿಸಿದ ಪ್ರಕರಣವಾಗಿದ್ದು, ಕಾವಲುಗಾರನಿಗೆ ಗಾಯಗಳಾಗಿವೆ. ಗಾಯಾಳುವಿನ ಹೇಳಿಕೆ ಹಾಗೂ ಸ್ಥಳೀಯರ ಮಾಹಿತಿಯನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ದಾಳಿಯ ಹಿಂದೆ ಪ್ರತಿಸ್ಪರ್ಧಿ ಕೋಚಿಂಗ್ ಸಂಸ್ಥೆಗಳ ಕೈವಾಡ ಇರಬಹುದೆಂಬ ಅನುಮಾನವನ್ನು ಖಾನ್ ಸರ್ ವ್ಯಕ್ತಪಡಿಸಿದ್ದಾರೆ. “ನಾವು ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಕೆಲವರಿಗೆ ಸಮಸ್ಯೆಯಾಗಿದೆ. ಇತ್ತೀಚೆಗೆ ಬಿಹಾರ ಪೊಲೀಸ್ ನೇಮಕಾತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಮ್ಮ ಸಂಸ್ಥೆಯ ಸಾವಿರಾರು ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಇದರಿಂದ ಕೆಲ ಸಮಾಜವಿರೋಧಿ ಶಕ್ತಿಗಳು ಬೆದರಿಕೆ ಹಾಕಲು ಆರಂಭಿಸಿವೆ” ಎಂದು ಆರೋಪಿಸಿದ್ದಾರೆ.
ದಾಳಿಕೋರರು ಕಚೇರಿಯ ಆಸ್ತಿಪಾಸ್ತಿಗಳನ್ನು ಹಾನಿಗೊಳಿಸಿ ಗುಂಡು ಹಾರಿಸಿದ್ದಾರೆ ಎಂದು ಹೇಳಿರುವ ಖಾನ್ ಸರ್, ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿಸಿದ್ದಾರೆ. ಪ್ರಕರಣದ ನಿಖರ ಕಾರಣ ಹಾಗೂ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಪರಾಧ
“ನನ್ನ ಸಾವಿಗೆ ಹೈಕಮಾಂಡ್ ಕಾರಣ”: ಪ್ರತಿಭಟನೆಯಲ್ಲಿ ಆಕ್ರೋಶ
ಯಾದಗಿರಿ: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಅಭಿಮಾನಿಗಳ ಆಕ್ರೋಶ ವ್ಯಕ್ತವಾಗುತ್ತಿದೆ. ಅದರ ನಡುವೆಯೇ ಯಾದಗಿರಿಯಲ್ಲಿ ನಡೆದ ಪ್ರತಿಭಟನೆ ವೇಳೆ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆತಂಕ ಮೂಡಿಸಿದೆ.
ನಗರದ ಸುಭಾಷ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಿದ್ದರಾಮಯ್ಯ ಬೆಂಬಲಿಗರು, “ಸಿದ್ದರಾಮಯ್ಯ ಬೇಕು” ಎಂದು ಘೋಷಣೆ ಕೂಗುತ್ತಾ ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಭೀಮು ಪೂಜಾರಿ ಎಂಬ ಅಭಿಮಾನಿಯೊಬ್ಬರು ಸಾರ್ವಜನಿಕರ ಎದುರೇ ಕ್ರಿಮಿನಾಶಕದ ಬಾಟಲಿ ಹಿಡಿದು ಆತ್ಮಹತ್ಯೆಗೆ ಯತ್ನಿಸಿದರು.
“ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಕ್ಕೆ ಕಾಂಗ್ರೆಸ್ ಹೈಕಮಾಂಡ್ ಕಾರಣ. ನನ್ನ ಸಾವಿಗೂ ಅವರೇ ಹೊಣೆ” ಎಂದು ಆಕ್ರೋಶ ವ್ಯಕ್ತಪಡಿಸಿದ ಭೀಮು ಪೂಜಾರಿ, ವಿಷ ಸೇವಿಸಲು ಮುಂದಾದರು ಎನ್ನಲಾಗಿದೆ.
ಘಟನೆ ಗಮನಿಸಿದ ಪ್ರತಿಭಟನಾಕಾರರು ಹಾಗೂ ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ, ಅವರ ಕೈಯಲ್ಲಿದ್ದ ಕ್ರಿಮಿನಾಶಕದ ಬಾಟಲಿಯನ್ನು ಕಸಿದುಕೊಂಡು ಅನಾಹುತ ತಪ್ಪಿಸಿದ್ದಾರೆ. ಬಳಿಕ ಅವರನ್ನು ಸಮಾಧಾನಪಡಿಸಿ ಸ್ಥಳದಿಂದ ಕರೆದೊಯ್ಯಲಾಗಿದೆ.
ಸಿದ್ದರಾಮಯ್ಯ ಅವರ ರಾಜೀನಾಮೆ ಹಿನ್ನೆಲೆ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿದ್ದು, ಅವರ ಬೆಂಬಲಿಗರು ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ವಿಶೇಷವಾಗಿ ಹಿಂದುಳಿದ ವರ್ಗ ಹಾಗೂ ಅಹಿಂದ ಸಮುದಾಯದ ಕಾರ್ಯಕರ್ತರು ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.
ಇದೀಗ ಯಾದಗಿರಿಯಲ್ಲಿ ನಡೆದ ಈ ಘಟನೆ ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳ ಭಾವನಾತ್ಮಕ ಪ್ರತಿಕ್ರಿಯೆಗಳು ಗಮನ ಸೆಳೆಯುತ್ತಿವೆ.
ಅಪರಾಧ
ಪಹಲ್ಗಾಮ್ ದಾಳಿ ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ: ₹3 ಸಾವಿರಕ್ಕೆ ಉಗ್ರರಿಗೆ ಆಶ್ರಯ, ಆಹಾರ-ಮಾಹಿತಿ ನೀಡಿದ್ದ ಸ್ಥಳೀಯರು!
ನವದೆಹಲಿ: ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರರ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಹಲವು ಆಘಾತಕಾರಿ ಸಂಗತಿಗಳು ಬಹಿರಂಗವಾಗಿವೆ. ಕೇವಲ ₹3,000 ಹಣಕ್ಕಾಗಿ ಸ್ಥಳೀಯರು ಉಗ್ರರಿಗೆ ಆಶ್ರಯ, ಆಹಾರ ಹಾಗೂ ಭದ್ರತಾ ಪಡೆಗಳ ಮಾಹಿತಿಯನ್ನು ಒದಗಿಸಿದ್ದರೆಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಎನ್‌ಐಎ ತನಿಖೆಯ ಪ್ರಕಾರ, ದಾಳಿಗೂ ಮುನ್ನ ಪ್ರಮುಖ ಆರೋಪಿ ಬಶೀರ್ ಅಹ್ಮದ್ ಜೋತತಾದ್ ಹಿಲ್ ಪಾರ್ಕ್ ಅರಣ್ಯ ಪ್ರದೇಶದಲ್ಲಿ ಕುದುರೆಗಳನ್ನು ನೋಡಲು ಹೋಗಿದ್ದ ವೇಳೆ ಶಸ್ತ್ರಸಜ್ಜಿತ ಮೂವರು ವ್ಯಕ್ತಿಗಳು ಆತನನ್ನು ಸಂಪರ್ಕಿಸಿದ್ದರು. ಪಂಜಾಬಿ ಮಿಶ್ರಿತ ಉರ್ದು ಭಾಷೆಯಲ್ಲಿ ಮಾತನಾಡಿದ ಅವರು ಅಲ್ಲಾಹನ ಹೆಸರಿನಲ್ಲಿ ಸುರಕ್ಷಿತ ತಂಗುದಾಣ ಮತ್ತು ಆಹಾರ ನೀಡುವಂತೆ ಕೇಳಿಕೊಂಡಿದ್ದರು.
ಅವರು ಲಷ್ಕರ್-ಎ-ತೈಬಾ ಹಾಗೂ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಸಂಘಟನೆಗೆ ಸೇರಿದ ಉಗ್ರರು ಎಂಬುದು ತಿಳಿದಿದ್ದರೂ, ಬಶೀರ್ ಅವರನ್ನು ತನ್ನ ಸೋದರಳಿಯ ಪರ್ವೇಜ್ ಅಹ್ಮದ್‌ನ ಅಡಗುತಾಣಕ್ಕೆ ಕರೆದೊಯ್ದಿದ್ದಾನೆ. ಯಾರಿಗೂ ಅನುಮಾನ ಬಾರದಂತೆ ತಾನೇ ಮೊದಲು ಒಳಗೆ ಪ್ರವೇಶಿಸಿ ಬಳಿಕ ಉಗ್ರರಿಗೆ ಕೈಸನ್ನೆ ಮೂಲಕ ಒಳಬರಲು ಸೂಚಿಸಿದ್ದಾನೆ ಎಂದು ಎನ್‌ಐಎ ಹೇಳಿದೆ.
ಅಡಗುತಾಣದಲ್ಲಿ ಪರ್ವೇಜ್ ಮತ್ತು ಆತನ ಕುಟುಂಬ ಉಗ್ರರಿಗೆ ನೀರು, ಚಹಾ ಹಾಗೂ ಊಟದ ವ್ಯವಸ್ಥೆ ಮಾಡಿದ್ದು, ಮದ್ದುಗುಂಡು ಮತ್ತು ಶಸ್ತ್ರಾಸ್ತ್ರಗಳನ್ನು ಕಂಬಳಿಗಳ ಕೆಳಗೆ ಮರೆಮಾಡಲು ಸಹಾಯ ಮಾಡಿದ್ದರು. ಅಲ್ಲದೆ ಮುಂದಿನ ಪ್ರಯಾಣಕ್ಕಾಗಿ ರೊಟ್ಟಿ, ಪಾತ್ರೆಗಳು, ಕಂಬಳಿ ಮತ್ತು ಪ್ಲಾಸ್ಟಿಕ್ ಟಾರ್ಪಾಲಿನ್ ಕೂಡ ಒದಗಿಸಿದ್ದರು.
ಇದೇ ವೇಳೆ ಉಗ್ರರು ಅಮರನಾಥ ಯಾತ್ರೆಯ ಮಾರ್ಗಗಳು, ಭದ್ರತಾ ಪಡೆಗಳ ಶಿಬಿರಗಳು ಹಾಗೂ ಸ್ಥಳೀಯ ಭೌಗೋಳಿಕ ಮಾಹಿತಿ ಕುರಿತು ಆರೋಪಿಗಳಿಂದ ಮಾಹಿತಿ ಪಡೆದುಕೊಂಡಿದ್ದರು. ರಾತ್ರಿ ತೆರಳುವಾಗ ಉಗ್ರರು ಪರ್ವೇಜ್‌ಗೆ ₹3,000 ನೀಡಿದ್ದರು ಎನ್ನಲಾಗಿದೆ.
ಎನ್‌ಐಎ ಪ್ರಕಾರ, ಸ್ಥಳೀಯರ ಈ ಸಹಕಾರವೇ ನಂತರ ನಡೆದ ದಾಳಿಯಲ್ಲಿ 26 ಅಮಾಯಕರ ಸಾವಿಗೆ ಕಾರಣವಾಗಿದ್ದು, ದೇಶದ್ರೋಹದ ಈ ಜಾಲವನ್ನು ತನಿಖೆ ಸಂಪೂರ್ಣವಾಗಿ ಬಯಲಿಗೆಳೆದಿದೆ.
-
ದೇಶ21 hours agoಅಮಿತ್ ಷಾ ಭೇಟಿಗೆ ದೆಹಲಿಗೆ ಅಣ್ಣಾಮಲೈ ದೌಡು; ಬಿಜೆಪಿ ತೊರೆಯುವ ಚರ್ಚೆ ತೀವ್ರ
-
ದೇಶ21 hours agoನೆತನ್ಯಾಹು ವಿರುದ್ಧ ಟ್ರಂಪ್ ಆಕ್ರೋಶ: ‘ನಿನಗೆ ಹುಚ್ಚು ಹಿಡಿದಿದ್ಯಾ?’ ಎಂದು ದೂರವಾಣಿಯಲ್ಲೇ ತರಾಟೆ
-
ದೇಶ20 hours agoಜಮೀರ್ ನಿವಾಸಕ್ಕೆ ಡಿ.ಕೆ. ಸುರೇಶ್ ದಿಢೀರ್ ಭೇಟಿ: ಕಾಂಗ್ರೆಸ್ನಲ್ಲಿ ಹೊಸ ರಾಜಕೀಯ ಲೆಕ್ಕಾಚಾರ!
-
ದೇಶ20 hours agoಪ್ರಮಾಣವಚನ ಸಮಾರಂಭದ ಭದ್ರತೆಗಾಗಿ ಸರ್ಕಾರಿ ನೌಕರರಿಗೆ ವಿಶೇಷ ರಜೆ ಘೋಷಣೆ
-
ದೇಶ20 hours ago‘ಚೋರ್, ಚೋರ್’ ಘೋಷಣೆಗಳ ನಡುವೆ ಅಭಿಷೇಕ್ ಓಟ; ಬಿಜೆಪಿ-ಟಿಎಂಸಿ ವಾಕ್ಸಮರ ತೀವ್ರ
-
ಆರೋಗ್ಯ1 hour agoಬೇಸಿಗೆಯ ಬಿಸಿಗೆ ರಾಮಬಾಣ: ಮೋದಿ ಮೆಚ್ಚಿದ ಸಾಂಪ್ರದಾಯಿಕ ಭಾರತೀಯ ಪಾನೀಯಗಳು
-
ದೇಶ1 hour agoಮಾನವೀಯತೆ ಮೆರೆದ CM ಡಿಕೆಶಿ: ತಾವು ಓದಿದ ಶಾಲೆಯ ಮಕ್ಕಳಿಗೆ ಪಟ್ಟಾಭಿಷೇಕ ವೀಕ್ಷಣೆಯ ಅವಕಾಶ
-
ದೇಶ2 hours agoಸಚಿವರ ಪಟ್ಟಿ ಇನ್ನೂ ಅಂತಿಮವಾಗಿಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ
