Connect with us

ದೇಶ

Latest ನಾಸಾದಿಂದ ನಿವೃತ್ತಿ: 27 ವರ್ಷಗಳ ಜರ್ನಿಗೆ ಸುನಿತಾ ವಿಲಿಯಮ್ಸ್ ಗುಡ್‌ ಬೈ

ವಾಷಿಂಗ್ಟನ್‌: ಸುದೀರ್ಘ ಬಾಹ್ಯಾಕಾಶ ನಡಿಗೆ ಪೂರೈಸಿದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಭಾರತ ಮೂಲದ ಸುನಿತಾ ವಿಲಿಯಮ್ಸ್‌ ಅವರು ನಾಸಾದಿಂದ ನಿವೃತ್ತಿಯಾಗಿದ್ದಾರೆ. 2025ರ ಡಿಸೆಂಬರ್‌ 27ರಂದು ಅವರು ಅಧಿಕೃತವಾಗಿ ನಿವೃತ್ತಿಯಾಗಿದ್ದು, 27 ವರ್ಷಗಳ ಸುದೀರ್ಘ ಬಾಹ್ಯಾಕಾಶ ಸೇವೆಗೆ ತೆರೆ ಎಳೆದಿದ್ದಾರೆ ಎಂದು ನಾಸಾ ಮಂಗಳವಾರ ಘೋಷಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್, ಸುನಿತಾ ವಿಲಿಯಮ್ಸ್‌ ಅವರನ್ನು ಮಾನವ ಬಾಹ್ಯಾಕಾಶ ಹಾರಾಟದ ಪ್ರವರ್ತಕಿ ಎಂದು ಬಣ್ಣಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳು ಅಪಾರವಾಗಿದ್ದು, ಚಂದ್ರ ಮತ್ತು ಮಂಗಳ ಗ್ರಹದತ್ತ ನಾಸಾ ಕೈಗೊಂಡಿರುವ ಪ್ರಯತ್ನಗಳಿಗೆ ಭದ್ರ ಅಡಿಪಾಯ ಒದಗಿಸಿವೆ. ಅವರ ಸಾಧನೆಗಳು ಮುಂದಿನ ಪೀಳಿಗೆಯ ವಿಜ್ಞಾನಿಗಳಿಗೆ ಮತ್ತು ಗಗನಯಾತ್ರಿಗಳಿಗೆ ಪ್ರೇರಣೆಯಾಗಲಿವೆ ಎಂದು ಶ್ಲಾಘಿಸಿದರು.

1998ರಲ್ಲಿ ನಾಸಾಗೆ ಆಯ್ಕೆಯಾದ ಸುನಿತಾ ವಿಲಿಯಮ್ಸ್‌ ಅವರು ಮೂರು ಪ್ರಮುಖ ಮಿಷನ್‌ಗಳಲ್ಲಿ ಒಟ್ಟು 608 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಸೇವೆ ಸಲ್ಲಿಸಿದ್ದಾರೆ. ಗಗನಯಾತ್ರಿ ಬುಚ್‌ ವಿಲ್ಮೋರ್‌ ಅವರೊಂದಿಗೆ 286 ದಿನಗಳ ನಿರಂತರ ಬಾಹ್ಯಾಕಾಶ ವಾಸವು ಅತ್ಯಂತ ದೀರ್ಘ ಅವಧಿಯ ಕಾರ್ಯಾಚರಣೆಯಾಗಿ ದಾಖಲಾಗಿದೆ. ಎಂಟು ದಿನಗಳ ಮಿಷನ್‌ಗಾಗಿ ತೆರಳಿದ್ದ ಅವರು ತಾಂತ್ರಿಕ ಕಾರಣಗಳಿಂದಾಗಿ 286 ದಿನಗಳ ನಂತರ ಭೂಮಿಗೆ ಮರಳಿದ್ದರು.

ಬೋಯಿಂಗ್‌ ಸ್ಟಾರ್‌ಲೈನರ್‌ ಕ್ಯಾಪ್ಸುಲ್ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ್ದ ಸುನಿತಾ, ಒಟ್ಟು 62 ಗಂಟೆ 6 ನಿಮಿಷಗಳ ಬಾಹ್ಯಾಕಾಶ ನಡಿಗೆ ಪೂರೈಸಿ ಹೊಸ ದಾಖಲೆ ನಿರ್ಮಿಸಿದ್ದರು. ಈ ಮೂಲಕ ಸುದೀರ್ಘ ಬಾಹ್ಯಾಕಾಶ ನಡಿಗೆ ಮಾಡಿದ ಮೊದಲ ಮಹಿಳಾ ಗಗನಯಾತ್ರಿ ಎಂಬ ಗೌರವಕ್ಕೂ ಪಾತ್ರರಾದರು. ತಮ್ಮ ಕಾರ್ಯಾಚರಣೆಯ ಅವಧಿಯಲ್ಲಿ ಅವರು ಸುಮಾರು 12.13 ಲಕ್ಷ ಮೈಲುಗಳಷ್ಟು ದೂರ ಪ್ರಯಾಣಿಸಿದ್ದರು.

ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿಯಾಗಿ ಸುನಿತಾ ವಿಲಿಯಮ್ಸ್‌ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಶಾಶ್ವತ ಗುರುತು ಮೂಡಿಸಿದ್ದು, ಅವರ ನಿವೃತ್ತಿ ನಾಸಾ ಇತಿಹಾಸದ ಮಹತ್ವದ ಅಧ್ಯಾಯವಾಗಿ ಉಳಿಯಲಿದೆ.

ದೇಶ

SHAKTI SCHEME : ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್: ಸಚಿವ ಸಂಪುಟದ ಮಹತ್ವದ ನಿರ್ಧಾರ

ಬೆಂಗಳೂರು, ಫೆಬ್ರವರಿ 13: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ Shakti Scheme ಅಡಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಇನ್ನುಮುಂದೆ ಆಧಾರ್ ಕಾರ್ಡ್ ಬದಲಾಗಿ ಸ್ಮಾರ್ಟ್ ಕಾರ್ಡ್ ಕಡ್ಡಾಯವಾಗಲಿದೆ. ಈ ಕುರಿತು ಮುಖ್ಯಮಂತ್ರಿ Siddaramaiah ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಮಹಿಳೆಯರಿಗೆ ‘ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಿಸಲಿವೆ. ಈ ಕಾರ್ಡ್ ತೋರಿಸಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದರೊಂದಿಗೆ ಆಧಾರ್ ಕಾರ್ಡ್ ತೋರಿಸಿ ಉಚಿತ ಪ್ರಯಾಣಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.


ಬೆಂಗಳೂರು ರೇಸ್ ಕೋರ್ಸ್ ಕುಣಿಗಲ್‌ಗೆ ಶಿಫ್ಟ್

ಬೆಂಗಳೂರಿನ ಪ್ರಸಿದ್ಧ Bangalore Turf Club (ರೇಸ್ ಕೋರ್ಸ್) ಅನ್ನು ತುಮಕೂರು ಜಿಲ್ಲೆಯ ಕುಣಿಗಲ್‌ನ ಸ್ಟಡ್ ಫಾರ್ಮ್‌ಗೆ ಸ್ಥಳಾಂತರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಲೀಸ್ ಅವಧಿ ಮುಕ್ತಾಯವಾಗಿರುವುದು ಹಾಗೂ ಬಾಡಿಗೆ ಪರಿಷ್ಕರಣೆ ಆಗಿರದ ಹಿನ್ನೆಲೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಕ್ಲಬ್‌ನ ಜಾಗವನ್ನು ಹಾಗೆಯೇ ಉಳಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.


ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಶೂ–ಸಾಕ್ಸ್

1ರಿಂದ 10ನೇ ತರಗತಿ ತನಕ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾವಿಕಾಸ ಯೋಜನೆಯಡಿ 2026-27ನೇ ಸಾಲಿಗೆ ಒಂದು ಜೊತೆ ಶೂ ಹಾಗೂ ಎರಡು ಜೊತೆ ಸಾಕ್ಸ್ ಉಚಿತವಾಗಿ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ.


ಇತರೆ ಪ್ರಮುಖ ನಿರ್ಧಾರಗಳು

  • ಬಳ್ಳಾರಿ ವಿಮ್ಸ್ ಆವರಣದಲ್ಲಿ 200 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ
  • ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1777 ಎಕರೆ ಭೂಮಿಯನ್ನು ‘ಶಾಶ್ವತ ವಿಶೇಷ ಕೃಷಿವಲಯ’ವಾಗಿ ಘೋಷಣೆ
  • ತಿಕೋಟಾದಲ್ಲಿ ದ್ರಾಕ್ಷಾರಸ ಶೀತಲೀಕರಣ ಘಟಕ ಸ್ಥಾಪನೆ
  • ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡುವ ಶಿಷ್ಟಾಚಾರ ನಿಯಮ ಜಾರಿಗೆ ಅನುಮೋದನೆ
  • ನ್ಯಾಯಾಲಯ ಕಟ್ಟಡ ಉದ್ಘಾಟನಾ ಕಾರ್ಯಕ್ರಮಗಳಿಗೆ ಶಿಷ್ಟಾಚಾರ ಅನುಮತಿ

ವಿಪಕ್ಷಗಳ ಟೀಕೆಗೆ ಗುರಿಯಾಗಿರುವ SIR ವಿಷಯದಲ್ಲಿಯೂ ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆದಿದೆ. ಕಾನೂನು ಇಲಾಖೆ ಸಮಗ್ರ ಅಧ್ಯಯನ ನಡೆಸಿ ಮುಂದಿನ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ.

Continue Reading

ದೇಶ

ದೇವನಹಳ್ಳಿ ಸಮೀಪ ಭೀಕರ ರಸ್ತೆ ಅಪಘಾತ: 7 ಮಂದಿ ದುರ್ಮರಣ

ದೇವನಹಳ್ಳಿ, ಫೆಬ್ರವರಿ 13: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ. ಸತ್ಯವರ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿ ಏಳು ಮಂದಿ ಮೃತಪಟ್ಟಿದ್ದಾರೆ.

ಹೊಸಕೋಟೆ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್, ಬೈಕ್ ಮತ್ತು ಎಕ್ಸ್‌ಯುವಿ ಕಾರಿನ ನಡುವೆ ಸರಣಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಆರು ಮಂದಿ ಹಾಗೂ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ಅತಿವೇಗವೇ ಕಾರಣ?

ಪ್ರಾಥಮಿಕ ತನಿಖೆಯ ಪ್ರಕಾರ, ಅತಿವೇಗವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹೆದ್ದಾರಿಯಲ್ಲಿ ಸಾಗುತ್ತಿದ್ದ ಎಕ್ಸ್‌ಯುವಿ ಕಾರು ಮೊದಲು ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು, ಬಳಿಕ ನಿಯಂತ್ರಣ ತಪ್ಪಿ ಕ್ಯಾಂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮೃತರಲ್ಲಿ ಆರು ಮಂದಿ ಬೆಂಗಳೂರಿನ ಕೊತ್ತನೂರು ಮೂಲದವರು ಎಂದು ತಿಳಿದುಬಂದಿದೆ.


ಪೊಲೀಸ್ ಪರಿಶೀಲನೆ

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಮೃತದೇಹಗಳನ್ನು ಹೊಸಕೋಟೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.


‘ಅವೈಜ್ಞಾನಿಕ ರಸ್ತೆ’ ಆರೋಪ

ಅಪಘಾತ ನಡೆದ ಸ್ಥಳದ ರಸ್ತೆ ವಿನ್ಯಾಸ ಮತ್ತು ನಿರ್ಮಾಣದ ಬಗ್ಗೆ ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಸಾಧುಪ್ಪನಹಳ್ಳಿಯಿಂದ ಕಮಳಿಪುರ ಬ್ರಿಡ್ಜ್ ವರೆಗಿನ ಹೆದ್ದಾರಿ ಸರಿಯಾದ ವಿನ್ಯಾಸ ಹೊಂದಿಲ್ಲ ಎಂದು ಅವರು ದೂರಿದ್ದಾರೆ.

ಸ್ಥಳೀಯ ನಿವಾಸಿ ಮಂಜುನಾಥ್ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದೆ ಎಂದು ಆರೋಪಿಸಿದ್ದಾರೆ. ಕಾಮಗಾರಿ ಸಂದರ್ಭದಲ್ಲೇ ಎಂಜಿನಿಯರ್ ಒಬ್ಬರು ವಿನ್ಯಾಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರೂ ಅದನ್ನು ಪರಿಗಣಿಸಲಿಲ್ಲ ಎಂದು ಹೇಳಿದ್ದಾರೆ.

ಸರ್ವೀಸ್ ರಸ್ತೆಗಳು ಕನಿಷ್ಠ 18 ಅಡಿ ಅಗಲ ಇರಬೇಕಿದ್ದರೂ, ಕೆಲವೆಡೆ ಮೂರೂವರೆ ಅಥವಾ ಎರಡೂವರೆ ಅಡಿ ಮಾತ್ರ ಇರುವುದಾಗಿ ಅವರು ತಿಳಿಸಿದ್ದಾರೆ. 2010ರಲ್ಲಿ ರೈತರು ಜಮೀನುಗಳನ್ನು ಹೆದ್ದಾರಿ ಯೋಜನೆಗೆ ನೀಡಿದ್ದರೂ, ಸಮರ್ಪಕ ಪರಿಹಾರವೂ ಸಿಗಲಿಲ್ಲ ಮತ್ತು ರಸ್ತೆ ಗುಣಮಟ್ಟವೂ ಸಮರ್ಪಕವಾಗಿಲ್ಲ ಎಂದು ಆರೋಪಿಸಲಾಗಿದೆ.

Continue Reading

ದೇಶ

VALENTINES DAY : ಚಿಕ್ಕಬಳ್ಳಾಪುರದಲ್ಲಿ ರೆಡ್ ರೋಸ್‌ಗೆ ಭಾರೀ ಬೇಡಿಕೆ

ಚಿಕ್ಕಬಳ್ಳಾಪುರ: ಕೆಂಪು ಗುಲಾಬಿ ಕಂಡರೆ ಯಾರಿಗೇನು ಇಷ್ಟವಾಗಲ್ಲ ಹೇಳಿ! ಫೆಬ್ರವರಿ 14ರ Valentine’s Day ಸಮೀಪಿಸುತ್ತಿದ್ದಂತೆ ರೆಡ್ ರೋಸ್‌ಗಳಿಗೆ ಭಾರೀ ಬೇಡಿಕೆ ಏರಿಕೆಯಾಗಿದೆ. ಪ್ರೀತಿಯನ್ನು ವ್ಯಕ್ತಪಡಿಸಲು ಪ್ರೇಮಿಗಳು ಮೊದಲು ಆಯ್ಕೆಮಾಡುವ ಹೂವೇ ಕೆಂಪು ಗುಲಾಬಿ. ಇದೇ ಕಾರಣಕ್ಕೆ ಈಗ ಮಾರುಕಟ್ಟೆಯಲ್ಲಿ ರೆಡ್ ರೋಸ್‌ಗಳ ದರ ಗಗನಕ್ಕೇರಿದೆ.

ಪ್ರತಿ ಹೂವಿಗೆ ರೂ.20ರಷ್ಟು ನೀಡಿ ಹೂ ವ್ಯಾಪಾರಿಗಳು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ರೆಡ್ ರೋಸ್ ಬೆಳೆದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.


ರೈತ ಕೃಷ್ಣರೆಡ್ಡಿಗೆ ಲಾಭದ ಹಬ್ಬ

ಚಿಂತಾಮಣಿ ತಾಲೂಕಿನ ಆನೂರು ಹೊಸಕೋಟೆ ಗ್ರಾಮದ ರೈತ ಕೃಷ್ಣರೆಡ್ಡಿ ಅವರು 4 ಎಕರೆ ಪಾಲಿಹೌಸ್‌ನಲ್ಲಿ 16 ಬಣ್ಣಗಳ ಗುಲಾಬಿ ಬೆಳೆದಿದ್ದಾರೆ. ಆದರೆ ಪ್ರೇಮಿಗಳ ದಿನದ ಪ್ರಯುಕ್ತ ಕೆಂಪು ಗುಲಾಬಿಗೆ ಮಾತ್ರ ಭಾರೀ ಬೇಡಿಕೆ ಬಂದಿದೆ.

ಉದ್ದ ಕಾಂಡ, ಹೊಳಪು, ವೈಯ್ಯಾರ ಮತ್ತು ಮುಳ್ಳು ಕಡಿಮೆ ಇರುವ ಕೆಂಪು ಗುಲಾಬಿಗೆ ಹೆಚ್ಚಿನ ಡಿಮ್ಯಾಂಡ್ ಇದೆ. ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ.


ದೇಶ–ವಿದೇಶಗಳಲ್ಲಿ ಬೇಡಿಕೆ

ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಬೆಳೆಯುವ ಗುಲಾಬಿಗೆ ದೇಶ–ವಿದೇಶಗಳಲ್ಲಿ ವಿಶೇಷ ಬೇಡಿಕೆ ಇದೆ. ಫೆಬ್ರವರಿ ತಿಂಗಳಲ್ಲಿ ವಿಶೇಷವಾಗಿ ಪ್ರೇಮಿಗಳ ವಾರದ ಸಂದರ್ಭದಲ್ಲಿ ರಫ್ತು ಪ್ರಮಾಣ ಹೆಚ್ಚುತ್ತದೆ.

ಪ್ರೇಮಿಗಳ ವಾರದಲ್ಲಿ ಆಚರಿಸಲಾಗುವ ಪ್ರಮುಖ ದಿನಗಳು:

  • Rose Day
  • Propose Day
  • Teddy Day
  • Chocolate Day
  • Promise Day
  • Hug Day
  • Kiss Day

ಈ ಎಲ್ಲಾ ದಿನಗಳಲ್ಲಿ ಪ್ರೀತಿ ವ್ಯಕ್ತಪಡಿಸಲು ರೆಡ್ ರೋಸ್ ಮುಖ್ಯ ಪಾತ್ರವಹಿಸುತ್ತದೆ.


ರೈತರಿಗೆ ಸಿಹಿ ಸುದ್ದಿ

ವರ್ಷಪೂರ್ತಿ ಹೂ ಬೆಳೆದರೂ, ಫೆಬ್ರವರಿ ತಿಂಗಳು ರೈತರಿಗೆ ವಿಶೇಷ ಲಾಭ ತರುತ್ತದೆ. ಪ್ರೇಮಿಗಳ ದಿನದ ಸಂಭ್ರಮದಲ್ಲಿ ರೆಡ್ ರೋಸ್ ಬೆಳೆಗಾರರಿಗೆ ಉತ್ತಮ ಆದಾಯ ಸಿಗುತ್ತಿದ್ದು, ಗ್ರಾಮೀಣ ಆರ್ಥಿಕತೆಗೆ ಇದು ಸಹಕಾರಿಯಾಗುತ್ತಿದೆ.

Continue Reading

Trending