Connect with us

ಅಪರಾಧ

CRIME ಬೆಂಗಳೂರುದಲ್ಲಿ ಎಟಿಎಂ ವಾಹನ ದರೋಡೆ: ಹಿಟಾಚಿ ಸಿಬ್ಬಂದಿಯಿಂದಲೇ 1.37 ಕೋಟಿ ರೂ. ಲೂಟಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ಅಪರಾಧಗಳ ನಗರಿಯಾಗುತ್ತಿದೆಯೇ ಎಂಬ ಆತಂಕ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ರಾಬರಿ ಹಾಗೂ ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದರ ನಡುವೆಯೇ ಬೆಂಗಳೂರಿನಲ್ಲಿ ಮತ್ತೊಂದು ಭಾರೀ ಎಟಿಎಂ ವಾಹನ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.

ಎಸ್‌ಬಿಐ ಹಾಗೂ ಯ್ಯಾಕ್ಸಿಸ್ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬುವ ಹೊಣೆಗಾರಿಕೆ ಹೊಂದಿರುವ ಹಿಟಾಚಿ ಕಂಪನಿ ಸಿಬ್ಬಂದಿಯಿಂದಲೇ 1.37 ಕೋಟಿ ರೂ. ಹಣವನ್ನು ದರೋಡೆ ಮಾಡಲಾಗಿದೆ ಎಂಬ ಆರೋಪ ಇದೀಗ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಜನವರಿ 19ರಂದು ಈ ದರೋಡೆ ನಡೆದಿದ್ದು, ಪ್ರಕರಣವು ತಡವಾಗಿ ಬಹಿರಂಗವಾಗಿದೆ.

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ದರೋಡೆಕೋರರು ಎರಡು ತಂಡಗಳಾಗಿ ವಿಭಜನೆಯಾಗಿ ಅತ್ಯಂತ ಯೋಜಿತವಾಗಿ ಕೃತ್ಯ ಎಸಗಿದ್ದಾರೆ. ಒಂದು ತಂಡವು 57 ಲಕ್ಷ ರೂ., ಮತ್ತೊಂದು ತಂಡವು 80 ಲಕ್ಷ ರೂ. ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ದರೋಡೆ ಪ್ರಕರಣದಲ್ಲಿ ಹಿಟಾಚಿ ಕಂಪನಿಯ ಸಿಬ್ಬಂದಿಗಳಾದ ಪ್ರವೀಣ್, ಧನಶೇಖರ್, ರಾಮಕ್ಕ ಹಾಗೂ ಹರೀಶ್ ಕುಮಾರ್ ಎಂಬವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕಂಪನಿ ಅಧಿಕಾರಿಗಳು ಕೋರಂಗಲ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಸಿಸಿಟಿವಿ ದೃಶ್ಯಗಳು ಮತ್ತು ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ.

ಒಟ್ಟಿನಲ್ಲಿ, ಎಟಿಎಂ ವಾಹನ ದರೋಡೆ ಪ್ರಕರಣವು ಬೆಂಗಳೂರಿನ ಭದ್ರತಾ ವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಮುಂದಿನ ದಿನಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣದ ಸಂಪೂರ್ಣ ಸತ್ಯವನ್ನು ಹೊರತೆಗೆದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಅಪರಾಧ

BENGALURU : ಬೆಂಗಳೂರು ರಸ್ತೆ ಅಪಘಾತಕ್ಕೆ ಇಬ್ಬರು ಪುಟ್ಟ ಮಕ್ಕಳ ಬಲಿ

ಬೆಂಗಳೂರು: ನಗರದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಶಾಲಾ ಬಸ್ ಹರಿದು ಇಬ್ಬರು ಪುಟ್ಟ ಮಕ್ಕಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ (Bengaluru Accident) ಹೆಣ್ಣೂರು ಸಂಚಾರ ಠಾಣಾ ವ್ಯಾಪ್ತಿಯ ಥಣಿಸಂದ್ರದಲ್ಲಿ ನಡೆದಿದೆ.

ಮೃತರನ್ನು ನಗರದ ಸಿಎಆರ್ ವಿಭಾಗದ ಕಾನ್ಸ್‌ಟೇಬಲ್ ನಾಗನಗೌಡ ಅವರ ಮಕ್ಕಳಾದ ವರ್ಷ (2) ಮತ್ತು ಭಾನು (4) ಎಂದು ಗುರುತಿಸಲಾಗಿದೆ.

ಇಂದು ಬೆಳಗ್ಗೆ ನಾಗನಗೌಡ ಅವರು ಸ್ಕೂಟರ್‌ನಲ್ಲಿ ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ಹಾಲು ತರಲು ತೆರಳಿದ್ದರು. ಥಣಿಸಂದ್ರ ಮುಖ್ಯರಸ್ತೆಯ ಬಳಿ ಎದುರುಗಡೆಯಿಂದ ಬಂದ ಅಜ್ ಮೋನಿ ಶಾಲೆಯ ಬಸ್ ಏಕಾಏಕಿ ತಿರುವು ಪಡೆದುಕೊಂಡಿದೆ. ಈ ವೇಳೆ ಸ್ಕೂಟರ್ ಮೇಲೆ ಬಸ್ ಹರಿದ ಪರಿಣಾಮ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ನಂತರ ಸ್ಥಳಕ್ಕೆ ಉತ್ತರ ವಿಭಾಗದ ಸಂಚಾರ ಪೊಲೀಸ್ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಣ್ಣೂರು ಸಂಚಾರ ಪೊಲೀಸರು ಮಹಜರು ನಡೆಸಿ, ಶಾಲಾ ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದು, ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿಯ ಅವಶ್ಯಕತೆ ಮತ್ತೆ ಒತ್ತಿ ಹೇಳಲಾಗಿದೆ.

Continue Reading

ಅಪರಾಧ

ಮನುಷ್ಯತ್ವ ಹೂತುಹೋದ ಎಪ್‌ಸ್ಟೀನ್ ದ್ವೀಪ: ಜಗತ್ತಿನ ಎಲೈಟ್‌ಗಳನ್ನು ನಡುಗಿಸುತ್ತಿರುವ ‘ಲೋಲಿಟಾ ಎಕ್ಸ್‌ಪ್ರೆಸ್’ ರಹಸ್ಯ

ನವದೆಹಲಿ/ವಾಷಿಂಗ್ಟನ್:
ಮನುಷ್ಯತ್ವವೇ ಮರಳಲ್ಲಿ ಹೂತುಹೋದ ದ್ವೀಪವೊಂದು ವರ್ಷಗಳ ಕಾಲ ಜಗತ್ತಿನ ಕಣ್ಣು ತಪ್ಪಿಸಿ ಅನಾಚಾರದ ಸ್ವರ್ಗವಾಗಿ ಬೆಳೆದಿತ್ತು. ‘ಲೋಲಿಟಾ ಎಕ್ಸ್‌ಪ್ರೆಸ್’ ಎಂಬ ಖಾಸಗಿ ಜೆಟ್‌ ವಿಮಾನ ದಿನವೂ ಲಿಟಲ್ ಸೇಂಟ್ ಜೇಮ್ಸ್ ದ್ವೀಪಕ್ಕೆ ಹಾರಾಟ ನಡೆಸುತ್ತಿತ್ತು. ಹದಿಹರೆಯದ ಹುಡುಗಿಯರನ್ನು ಲೈಂಗಿಕ ದೌರ್ಜನ್ಯಕ್ಕೆ ಬಲಿಕೊಡುತ್ತಿದ್ದ ಈ ದ್ವೀಪವನ್ನು ಇಂದು ಜಗತ್ತು ‘ಎಪ್‌ಸ್ಟೀನ್ ದ್ವೀಪ’ ಅಥವಾ ‘ಪೆಡೋಪೈಲ್ ಐಲ್ಯಾಂಡ್’ ಎಂದೇ ಕರೆಯುತ್ತಿದೆ.

1998ರಲ್ಲಿ ಅಮೆರಿಕದ ಶತಕೋಟ್ಯಧಿಪತಿ ಜೆಫ್ರಿ ಎಪ್‌ಸ್ಟೀನ್ 8 ಮಿಲಿಯನ್ ಡಾಲರ್ ನೀಡಿ ಖರೀದಿಸಿದ 71 ಎಕರೆ ವಿಸ್ತೀರ್ಣದ ಈ ದ್ವೀಪದಲ್ಲಿ ಐಷಾರಾಮಿ ರೆಸಾರ್ಟ್‌ಗಳು, ವಿಲ್ಲಾಗಳು, ಹೆಲಿಪ್ಯಾಡ್‌ಗಳು ನಿರ್ಮಾಣವಾಗಿದ್ದವು. ಹೊರಜಗತ್ತಿನಿಂದ ಸಂಪೂರ್ಣ ಕಡಿದುಹಾಕಲ್ಪಟ್ಟ ಈ ಪ್ರದೇಶದಲ್ಲಿ ನೂರಾರು ಅಪ್ರಾಪ್ತ ಬಾಲಕಿಯರನ್ನು ಬಂಧಿಸಿ, ಜಗತ್ತಿನ ಎಲೈಟ್‌ಗಳಿಗೆ ಪೂರೈಸಲಾಗುತ್ತಿತ್ತು ಎಂಬ ಆರೋಪಗಳು ತನಿಖೆಯಲ್ಲಿ ಬಹಿರಂಗವಾದವು.

2005ರಲ್ಲಿ ಫ್ಲೋರಿಡಾದ 14 ವರ್ಷದ ಬಾಲಕಿಯ ತಾಯಿಯೊಬ್ಬರು ನೀಡಿದ ದೂರು ಈ ಮಹಾ ಲೈಂಗಿಕ ಹಗರಣದ ಮೊದಲ ಕಿಡಿಯಾಗಿತ್ತು. ಬಳಿಕ 50ಕ್ಕೂ ಹೆಚ್ಚು ಅಪ್ರಾಪ್ತೆಯರು ದೂರು ದಾಖಲಿಸಿದರು. 2008ರಲ್ಲಿ ಎಪ್‌ಸ್ಟೀನ್ ತಪ್ಪಿತಸ್ಥನಾಗಿದ್ದರೂ, ಕೇವಲ 13 ತಿಂಗಳ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದನು. 2019ರಲ್ಲಿ ಪುನಃ ಮಕ್ಕಳ ಕಳ್ಳಸಾಗಣೆ ಆರೋಪದ ಮೇಲೆ ಬಂಧನಕ್ಕೊಳಗಾದ ಎಪ್‌ಸ್ಟೀನ್, ವಿಚಾರಣೆಗೆ ಮುನ್ನವೇ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಮೆರಿಕ ಸರ್ಕಾರ ಘೋಷಿಸಿತು. ಆದರೆ, ಈ ಸಾವಿನ ಸುತ್ತ ಇನ್ನೂ ಹಲವು ಅನುಮಾನಗಳಿವೆ.

ಜನವರಿ 30ರಂದು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಸುಮಾರು 30 ಲಕ್ಷ ಪುಟಗಳ ದಾಖಲೆಗಳು ಜಗತ್ತನ್ನೇ ಬೆಚ್ಚಿಬೀಳುವಂತೆ ಮಾಡಿವೆ. ರಾಜಕೀಯ ನಾಯಕರು, ಬಿಲಿಯನೇರ್‌ಗಳು, ರಾಜಮನೆತನದವರು, ವಿಜ್ಞಾನಿಗಳು, ಉದ್ಯಮಿಗಳೆಂದರೆ ಯಾರೂ ಹೊರತಲ್ಲ. 80ಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳು ತನಿಖೆಗೆ ಒಳಗಾಗಿದ್ದು, ಯುರೋಪ್‌ನ ಹಲವೆಡೆ ರಾಜೀನಾಮೆ ಅಲೆ ಎದ್ದಿದೆ.

ಆದರೆ, ಎಪ್‌ಸ್ಟೀನ್ ಫೈಲ್‌ನಲ್ಲಿ ಹೆಸರು ಕಾಣಿಸಿಕೊಂಡ ಮಾತ್ರಕ್ಕೆ ಅಪರಾಧ ಸಾಬೀತಾಗುವುದಿಲ್ಲ ಎಂದು ಅಮೆರಿಕದ ನ್ಯಾಯಾಲಯ ಸ್ಪಷ್ಟಪಡಿಸಿದೆ. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ಅಥವಾ ಹಣಕಾಸು ದಾಖಲೆಗಳಿದ್ದಾಗ ಮಾತ್ರ ಕಾನೂನು ಕ್ರಮ ಸಾಧ್ಯವೆಂದು ಹೇಳಿದೆ.

ಈ ಎಲ್ಲದ ನಡುವೆ, ಈ ಮಹಾ ಹಗರಣದ ನಿಜವಾದ ಬಲಿಪಶುಗಳು ನೂರಾರು ಅಪ್ರಾಪ್ತ ಬಾಲಕಿಯರು ಎಂಬ ಸತ್ಯ ಮಾತ್ರ ಬದಲಾಗಿಲ್ಲ. ಅಧಿಕಾರ, ಹಣ ಮತ್ತು ಪ್ರಭಾವದ ಅಡ್ಡೆಗೋಡೆಯ ಹಿಂದೆ ನಡೆದ ಈ ಅಮಾನುಷ ಕೃತ್ಯಗಳು ಇಂದು ಜಗತ್ತಿನ ಅಂತರಾತ್ಮವನ್ನೇ ಪ್ರಶ್ನಿಸುತ್ತಿವೆ.

Continue Reading

ಅಪರಾಧ

ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿಗೆ ನ್ಯಾಯಾಲಯ ನೋಟಿಸ್

ದಾಂಡೇಲಿ (ಉತ್ತರ ಕನ್ನಡ):

ಉತ್ತರ ಕನ್ನಡ ಜಿಲ್ಲೆಯ 25ನೇ ಕನ್ನಡ ಸಾಹಿತ್ಯ ಸಮ್ಮೇಳನವು ನ್ಯಾಯಾಲಯದ ಶರತ್ತುಬದ್ಧ ಮಧ್ಯಂತರ ಆದೇಶದ ಅಡಿಯಲ್ಲಿ ನಡೆದಿದ್ದರೂ, ಇದೀಗ ಮತ್ತೆ ತೀವ್ರ ವಿವಾದಗಳ ಕೇಂದ್ರಬಿಂದುವಾಗಿದೆ.
ನ್ಯಾಯಾಲಯ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರನ್ನು ಮೂರನೇ ಪ್ರತಿವಾದಿಯಾಗಿ ಸೇರಿಸಲಾಗಿದ್ದು, ದಾಂಡೇಲಿ ನ್ಯಾಯಾಲಯವು ಅವರಿಗೆ ನೋಟಿಸ್ ಜಾರಿ ಮಾಡಿದೆ.

ಈ ಪ್ರಕರಣದಲ್ಲಿ ಜಿಲ್ಲಾಧ್ಯಕ್ಷ ಬೊಮ್ಮಯ್ಯ ನಾರಾಯಣ ನಾಯಕ (ಬಿ.ಎನ್. ವಾಸರೆ) ಮೊದಲ ಪ್ರತಿವಾದಿಯಾಗಿದ್ದು, ಕ.ಸಾ.ಪ. ಆಡಳಿತಾಧಿಕಾರಿ ಕೆ.ಎಂ. ಗಾಯತ್ರಿ ಎರಡನೇ ಪ್ರತಿವಾದಿಯಾಗಿದ್ದಾರೆ. ಫೆಬ್ರವರಿ 5ರಂದು ನಡೆದ ವಿಚಾರಣೆಗೆ ಆಡಳಿತಾಧಿಕಾರಿ ಹಾಜರಾಗದ ಹಿನ್ನೆಲೆ, ರಾಜ್ಯಾಧ್ಯಕ್ಷರನ್ನು ಮೂರನೇ ಪ್ರತಿವಾದಿಯಾಗಿ ಸೇರಿಸಲಾಗಿದೆ.

ಸಮ್ಮೇಳನ ಆಯೋಜನೆಗೆ ಸಂಬಂಧಿಸಿದ ವಿವಾದ

2025ರ ಡಿಸೆಂಬರ್‌ನಲ್ಲಿ ದಾಂಡೇಲಿಯಲ್ಲಿ ಮೂರು ದಿನಗಳ ಕಾಲ ನಡೆದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಯೋಜಿಸಿದ್ದರು. ಆದರೆ, ಅಜೀವ ಸದಸ್ಯರಾದ ಅಕ್ರಂ ವುಲ್ಲಾ ಖಾನ್, ಪ್ರವೀಣ ಕೊಠಾರಿ ಮತ್ತು ಸಂದೀಪ ಬಂಡಾರಿ, ಹಣ ದುರುಪಯೋಗ ಪ್ರಕರಣ ತನಿಖೆಯ ನಡುವೆ ಸರ್ಕಾರದ ಅಗತ್ಯ ಅನುಮತಿ ಪಡೆಯದೇ ಸಾರ್ವಜನಿಕ ವಂತಿಕೆ ಸಂಗ್ರಹಿಸಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.

ತಹಶೀಲ್ದಾರ್ ಮತ್ತು ಪಿಎಸ್‌ಐ ಅನುಮತಿ ಹೊರತುಪಡಿಸಿ, ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕ, ಡಿವೈಎಸ್‌ಪಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಅನುಮತಿ ಪಡೆಯಲಾಗಿಲ್ಲ ಎಂದು ಅವರು ದೂರಿದ್ದಾರೆ.

ನ್ಯಾಯಾಲಯದ ಮಹತ್ವದ ಆದೇಶ

O.S. No.216/25 ಪ್ರಕರಣದಲ್ಲಿ, ಸಮ್ಮೇಳನ ನಡೆಸಲು ಅಗತ್ಯವಿರುವ ಯಾವುದೇ ಅಧಿಕೃತ ಅನುಮತಿಗಳನ್ನು ಪ್ರತಿವಾದಿಗಳು ಸಲ್ಲಿಸಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಹೆಚ್ಚಿನ ಜನರು ಸೇರುವ ಸಾಧ್ಯತೆಯಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ಹಿನ್ನೆಲೆ, ಎಲ್ಲಾ ಇಲಾಖೆಗಳ ಅನುಮತಿ, ಆಡಳಿತಾಧಿಕಾರಿಯಿಂದ ಲಿಖಿತ ಆದೇಶ, ಹಾಗೂ ಅನುಮತಿ ಪಡೆದ ಬಳಿಕ ಮಾತ್ರ ಸಮ್ಮೇಳನ ನಡೆಸಬೇಕು ಎಂಬ ಶರತ್ತುಗಳೊಂದಿಗೆ ಡಿಸೆಂಬರ್ 12ರ ಸಂಜೆ 6 ಗಂಟೆಗೆ ಮಧ್ಯಂತರ ಆದೇಶ ನೀಡಲಾಗಿತ್ತು.

ರಾತ್ರಿ ಇ-ಮೇಲ್ ಅನುಮತಿಗೆ ಸಂಶಯ

ಆದರೆ, ಅದೇ ದಿನ ರಾತ್ರಿ 9 ಗಂಟೆಗೆ ಆಡಳಿತಾಧಿಕಾರಿ ಕೆ.ಎಂ. ಗಾಯತ್ರಿ ಅವರಿಂದ ಇ-ಮೇಲ್ ಮೂಲಕ ಅನುಮತಿ ಬಂದಿದೆ ಎಂದು ಜಿಲ್ಲಾಧ್ಯಕ್ಷ ವಾಸರೆ ಉದ್ಘಾಟನಾ ಭಾಷಣದಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ, ನ್ಯಾಯಾಲಯಕ್ಕೆ ಮೊರೆ ಹೋದ ಅಜೀವ ಸದಸ್ಯರ ವಿರುದ್ಧ ತೀವ್ರ ಹೇಳಿಕೆ ನೀಡಿದ್ದಾರೆ ಎಂಬ ಆರೋಪವೂ ಇದೆ.

ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕಚೇರಿ ವೇಳೆಯಲ್ಲೇ ಕಡತ ಪರಿಶೀಲನೆ ನಡೆಯಬೇಕು. ರಾತ್ರಿ ವೇಳೆ ಇಂತಹ ಆದೇಶ ಸಂಶಯಾಸ್ಪದ ಎಂದು ವಾದಿಗಳ ಪರ ವಕೀಲ ರಾಘವೇಂದ್ರ ವಿ. ಗಡೆಪ್ಪನವರ ವಾದಿಸಿದ್ದಾರೆ.

RTI ಮೂಲಕ ಬಯಲಾದ ಅಂಶ

RTI ಮೂಲಕ ಲಭ್ಯವಾದ ಮಾಹಿತಿಯಲ್ಲಿ, ಆಡಳಿತಾಧಿಕಾರಿಗಳ ಅಧಿಕೃತ ಇ-ಮೇಲ್‌ನಲ್ಲಿ ಕೇವಲ ಎರಡು ಸಾಲಿನ ಉತ್ತರ ಮಾತ್ರ ಲಭ್ಯವಾಗಿದ್ದು, ಯಾವುದೇ ಡಿಜಿಟಲ್ ಸಹಿ, ಕಡತ, ಟಿಪ್ಪಣಿ ಅಥವಾ ಅಧಿಕೃತ ದಾಖಲೆಗಳು ಇಲ್ಲ ಎಂದು ಮಾಹಿತಿ ಅಧಿಕಾರಿಗಳು ತಿಳಿಸಿದ್ದಾರೆ.

ಆಡಳಿತ ಪ್ರಕ್ರಿಯೆ ಕುರಿತು ಗಂಭೀರ ಪ್ರಶ್ನೆಗಳು

ಡಿಸೆಂಬರ್ 12ರಂದು ಆಡಳಿತಾಧಿಕಾರಿ ಗಾಯತ್ರಿ ಅವರು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಹಾಜರಿದ್ದರು ಎಂಬ ಮಾಹಿತಿ ಹೊರಬಿದ್ದಿದ್ದು, ಈ ಸಂದರ್ಭದಲ್ಲಿ ಬೆಂಗಳೂರಿನ ಕಚೇರಿಯಿಂದ ಕಡತವಿಲ್ಲದೇ ಇ-ಮೇಲ್ ಆದೇಶ ನೀಡಿದರೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಇದೀಗ ಕೇಂದ್ರ ಕ.ಸಾ.ಪ. ಅಧಿಕಾರಿಗಳು ಸ್ಪಷ್ಟನೆ ನೀಡಬೇಕಾದ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿದೆ.

Continue Reading

Trending