Connect with us

ದೇಶ

ಸಿದ್ದರಾಮಯ್ಯ–ಡಿಕೆ ಶಿವಕುಮಾರ್ ವಿರುದ್ಧ ಅವಹೇಳನ: ಬಿಜೆಪಿ ಎಕ್ಸ್ ಖಾತೆಗೆ ಕೇಸ್

Published

on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅವಹೇಳನಕಾರಿಯಾಗಿ ಚಿತ್ರಿಸಿದ ಆರೋಪದ ಮೇಲೆ ಕರ್ನಾಟಕ ಬಿಜೆಪಿಯ ಅಧಿಕೃತ ಎಕ್ಸ್ (X) ಖಾತೆ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್‌ ನಾಯಕರ ತೇಜೋವಧೆ ಮಾಡಲಾಗಿದ್ದು, ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸಲಾಗಿದೆ ಎಂದು ಆರೋಪಿಸಿ ಈ ದೂರು ಸಲ್ಲಿಸಲಾಗಿದೆ.

ಇತ್ತೀಚೆಗೆ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಅವರ ಸಂಪುಟದ ಕೆಲವು ಸಚಿವರು ಮತ್ತು ಮಾಜಿ ಸಚಿವರ ಚಿತ್ರವೊಂದನ್ನು ಪೋಸ್ಟ್ ಮಾಡಿತ್ತು. ‘ಸ್ಕ್ಯಾಮ್ ಲಾರ್ಡ್ಸ್’ ಎಂಬ ಶೀರ್ಷಿಕೆಯಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿದ್ದು, “ಇದು ಹಗರಣಗಳ ಕಥೆ ಅಲ್ಲ, ಹಗರಣಗಳನ್ನು ಮಾಡಿದವರ ಕಥೆ” ಎಂಬ ಸಾಲುಗಳನ್ನು ಬಳಸಲಾಗಿದೆ. ಜೊತೆಗೆ, “ಇದು ಕರ್ನಾಟಕವನ್ನು ಹಗಲಿರುಳು ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಸ್ಕ್ಯಾಮ್ ಸಾಮ್ರಾಜ್ಯದ ಅಸಲಿ ಕತೆ” ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ದುನಿಯಾ ವಿಜಯ್ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ ‘ಲ್ಯಾಂಡ್ ಲಾರ್ಡ್’ ಸಿನಿಮಾವನ್ನು ಸ್ಪೂರ್ತಿಯಾಗಿ ಬಳಸಿಕೊಂಡು ಈ ಚಿತ್ರವನ್ನು ರೂಪಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಪೋಸ್ಟ್ ವೈರಲ್ ಆದ ಒಂದು ದಿನದ ಬಳಿಕ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು (KPCC) ಪ್ರತಿನಿಧಿಸುವ ವಕೀಲರ ತಂಡ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬೆಳವಣಿಗೆಗಳು ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್–ಬಿಜೆಪಿ ನಡುವಿನ ತೀವ್ರ ರಾಜಕೀಯ ತಿಕ್ಕಾಟದ ನಡುವೆಯೇ ನಡೆದಿವೆ. ಅಬಕಾರಿ ಇಲಾಖೆಯಲ್ಲಿ 6,000 ಕೋಟಿ ರೂ. ಹಗರಣ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುತ್ತಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಅಬಕಾರಿ ಸಚಿವರು ಹಾಗೂ ಅವರ ಕುಟುಂಬಸ್ಥರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಸಿಬಿಐ ಅಥವಾ ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಸದನದ ಒಳಗೆ ಹಾಗೂ ಹೊರಗೆ ಸಚಿವರ ರಾಜೀನಾಮೆಗೆ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು

KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು; ರಾಜ್ಯಪಾಲರಿಂದ ರಾಷ್ಟ್ರಪತಿಗೆ ತನಿಖೆ ಶಿಫಾರಸು

Published

on

ಬೆಂಗಳೂರು: KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಮಾನತುಗೊಳಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಅವರ ವಿರುದ್ಧ ಕೇಳಿಬಂದಿರುವ ನೇಮಕಾತಿ ಅಕ್ರಮ, ಸ್ವಜನಪಕ್ಷಪಾತ ಹಾಗೂ ಅಧಿಕಾರ ದುರುಪಯೋಗದ ಆರೋಪಗಳ ಕುರಿತು ತನಿಖೆ ನಡೆಸಲು ಭಾರತದ ಸಂವಿಧಾನದ 317(1)ನೇ ವಿಧಿ ಅಡಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಉಲ್ಲೇಖಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲಾಗಿದೆ.

ರಾಜ್ಯಪಾಲರ ಆದೇಶದಂತೆ, ತನಿಖೆ ಪೂರ್ಣಗೊಂಡು ರಾಷ್ಟ್ರಪತಿಗಳಿಂದ ಮುಂದಿನ ಆದೇಶ ಬರುವವರೆಗೆ ಶಿವಶಂಕರಪ್ಪ ಸಾಹುಕಾರ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ. ಅಲ್ಲಿಯವರೆಗೆ ಆಯೋಗದ ಹಿರಿಯ ಸದಸ್ಯರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿಯರು ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹಿತಾಸಕ್ತಿ ಸಂಘರ್ಷವನ್ನು ಘೋಷಿಸದೇ ಇದ್ದಿರುವುದು, ನೇಮಕಾತಿ ಪ್ರಕ್ರಿಯೆಯಿಂದ ದೂರ ಉಳಿಯದಿರುವುದು ಹಾಗೂ ಮೀಸಲಾತಿ ಸೌಲಭ್ಯ ಪಡೆಯಲು ತಪ್ಪು ಮಾಹಿತಿ ನೀಡಿರುವ ಆರೋಪಗಳು ತನಿಖೆಗೆ ಕಾರಣವಾಗಿವೆ. ಪ್ರಕರಣದಲ್ಲಿ ಅವರ ಪುತ್ರಿಯೊಬ್ಬರು ವಾರ್ಷಿಕ ಆದಾಯವನ್ನು ಕೇವಲ ₹40,000 ಎಂದು ನಮೂದಿಸಿದ ಆದಾಯ ಪ್ರಮಾಣಪತ್ರ ಸಲ್ಲಿಸಿ ಹಿಂದುಳಿದ ವರ್ಗಗಳ ಮೀಸಲಾತಿ ಹಾಗೂ ‘ಕ್ರೀಮಿ ಲೇಯರ್’ ವಿನಾಯಿತಿ ಪಡೆಯಲು ಯತ್ನಿಸಿದ್ದರೆಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಸಂಬಂಧ ಕೆಪಿಎಸ್‌ಸಿ ಕಾರ್ಯದರ್ಶಿ ಶೋಭಾ ಅವರ ದೂರಿನ ಮೇರೆಗೆ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಆದಾಯ ಪ್ರಮಾಣಪತ್ರ ನೀಡಿದ ಕಂದಾಯ ಇಲಾಖೆಯ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಧಿಕಾರ ದುರುಪಯೋಗ ನಡೆದಿದೆಯೇ ಎಂಬುದರ ಕುರಿತು ಪೊಲೀಸರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಈ ಬೆಳವಣಿಗೆಯಿಂದ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆ ಮತ್ತು ಆಡಳಿತ ವ್ಯವಸ್ಥೆಯ ಪಾರದರ್ಶಕತೆ ಕುರಿತು ಹೊಸ ಚರ್ಚೆ ಆರಂಭವಾಗಿದ್ದು, ತನಿಖೆಯ ಅಂತಿಮ ವರದಿಯತ್ತ ರಾಜ್ಯದ ಗಮನ ಕೇಂದ್ರೀಕೃತವಾಗಿದೆ.

Continue Reading

ಅಪರಾಧ

Telangana ‘ಇದು ನನ್ನ ಆಯ್ಕೆ’ ಎಂದ ಎಸ್‌ಐಗೆ ದುಬಾರಿ ಆಯಿತು; ಡಿಜಿಪಿಯಿಂದ ಅಮಾನತು ಸೂಚನೆ

Published

on

ಹೈದರಾಬಾದ್: Telangana ದ ರಂಗಾರೆಡ್ಡಿ ಜಿಲ್ಲೆಯಲ್ಲಿ ಆರು ವರ್ಷದ ಮೊಮ್ಮಗಳಿಗೆ ಸಾರ್ವಜನಿಕ ರಸ್ತೆಯಲ್ಲಿ ಕಾರು ಚಾಲನೆ ಮಾಡಲು ಅವಕಾಶ ನೀಡಿದ ಪೊಲೀಸ್ ಸಬ್‌-ಇನ್‌ಸ್ಪೆಕ್ಟರ್ (SI) ವಿರುದ್ಧ ಪ್ರಕರಣ ದಾಖಲಾಗಿದ್ದು, ರಾಜ್ಯ ಪೊಲೀಸ್ ಮಹಾನಿರ್ದೇಶಕರು (DGP) ಅಮಾನತು ಮಾಡಲು ಆದೇಶ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ವರದಿಗಳ ಪ್ರಕಾರ, ಸಬ್‌-ಇನ್‌ಸ್ಪೆಕ್ಟರ್ ಪೂಜಾರಿ ತಿರುಪತಿ ಅವರು ತಮ್ಮ ಆರು ವರ್ಷದ ಮೊಮ್ಮಗಳನ್ನು ನಗರದ ಜನನಿಬಿಡ ರಸ್ತೆಯಲ್ಲಿ ಕಾರಿನ ಸ್ಟೀರಿಂಗ್ ಹಿಂದೆ ಕುಳ್ಳಿರಿಸಿ ಚಾಲನೆ ಮಾಡಲು ಅವಕಾಶ ನೀಡಿದ್ದರು. ವಾಹನ ನಿಧಾನವಾಗಿ ಚಲಿಸುತ್ತಿದ್ದರೂ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿ ವಾಹನಗಳ ಸಾಲು ನಿರ್ಮಾಣವಾಗಿತ್ತು.

ಸ್ಥಳೀಯರು ಈ ಅಪಾಯಕಾರಿ ಕ್ರಮವನ್ನು ಪ್ರಶ್ನಿಸಿದಾಗ, “ಇದು ನನ್ನ ಆಯ್ಕೆ, ಪ್ರಶ್ನೆ ಮಾಡಲು ನೀವು ಯಾರು?” ಎಂದು ಅಧಿಕಾರಿ ಪ್ರತಿಕ್ರಿಯಿಸಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆದ ನಂತರ ಸಾರ್ವಜನಿಕರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಪೊಲೀಸ್ ಇಲಾಖೆಯ ವಿರುದ್ಧ ಟೀಕೆ ವ್ಯಕ್ತಪಡಿಸಿ, ಕಾನೂನು ಎಲ್ಲರಿಗೂ ಸಮಾನವಾಗಿರಬೇಕು ಎಂದು ಆಗ್ರಹಿಸಿದರು.

ಘಟನೆಯ ಬಳಿಕ ನರ್ಸಿಂಗಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 125 ಹಾಗೂ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 180 ಮತ್ತು 184ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆ ವೇಳೆ ಇದು ಆಟೋಮ್ಯಾಟಿಕ್ ಕಾರಾಗಿದ್ದರಿಂದ ವಾಹನ ತನ್ನ ನಿಯಂತ್ರಣದಲ್ಲೇ ಇತ್ತು ಎಂದು ಎಸ್‌ಐ ಹೇಳಿದ್ದು, ಮೊಮ್ಮಗಳನ್ನು ವಿಶ್ವದ ಅತಿ ಕಿರಿಯ ಚಾಲಕಿ ಎಂಬ ಗಿನ್ನೆಸ್ ವಿಶ್ವ ದಾಖಲೆ ಪ್ರಯತ್ನಕ್ಕೆ ಸಿದ್ಧಪಡಿಸುತ್ತಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ತೆಲಂಗಾಣ ಡಿಜಿಪಿ ಸಿ.ವಿ. ಆನಂದ್, ಸೈಬರಾಬಾದ್ ಪೊಲೀಸ್ ಆಯುಕ್ತರಿಗೆ ಆರೋಪಿತ ಎಸ್‌ಐ ಅವರನ್ನು ಅಮಾನತುಗೊಳಿಸಿ ಇಲಾಖಾ ತನಿಖೆ ಆರಂಭಿಸುವಂತೆ ಸೂಚಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಮುಂದಿನ ಕ್ರಮವನ್ನು ಇಲಾಖೆ ಕೈಗೊಳ್ಳಲಿದೆ.

Continue Reading

ಬೆಂಗಳೂರು

₹13 Crores ವೆಚ್ಚ, 2 ವರ್ಷ ಕಾಯುವಿಕೆ! ವಿಜಯನಗರ ಅಂಡರ್‌ಗ್ರೌಂಡ್ ಮಾರುಕಟ್ಟೆ ಇನ್ನೂ ಬಂದ್; 80ಕ್ಕೂ ಹೆಚ್ಚು ಮಳಿಗೆಗಳು ಖಾಲಿ

Published

on

ಬೆಂಗಳೂರು: ₹13 Crores ರೂಪಾಯಿ ಸಾರ್ವಜನಿಕರ ತೆರಿಗೆ ಹಣ ವೆಚ್ಚ ಮಾಡಿ ವಿಜಯನಗರದಲ್ಲಿ ನಿರ್ಮಿಸಲಾಗಿರುವ ಅಂಡರ್‌ಗ್ರೌಂಡ್ ಮಾರುಕಟ್ಟೆ (Underground Market) ಉದ್ಘಾಟನೆಯಾಗಿ ಎರಡು ವರ್ಷ ಕಳೆದರೂ ವ್ಯಾಪಾರಿಗಳ ಬಳಕೆಗೆ ಇನ್ನೂ ಲಭ್ಯವಾಗಿಲ್ಲ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ 80ಕ್ಕೂ ಹೆಚ್ಚು ಸುಸಜ್ಜಿತ ಮಳಿಗೆಗಳು ಖಾಲಿಯಾಗಿ ಪಾಳುಬಿದ್ದಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ವ್ಯಾಪಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೆಹಲಿ ಪಾಲಿಕಾ ಬಜಾರ್ ಮಾದರಿಯಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಸುಮಾರು ₹13 ಕೋಟಿ ವೆಚ್ಚದಲ್ಲಿ ಈ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಉದ್ಘಾಟನೆ ನಡೆದಿದ್ದರೂ ಇಂದಿಗೂ ವ್ಯಾಪಾರ ಆರಂಭವಾಗದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸ್ಥಳೀಯರ ಆರೋಪದ ಪ್ರಕಾರ, ಟೆಂಡರ್ ಪ್ರಕ್ರಿಯೆಯ ವಿಳಂಬ ಮತ್ತು ಆಡಳಿತಾತ್ಮಕ ನಿರಾಸಕ್ತಿಯಿಂದ ಈ ಯೋಜನೆ ಸಾರ್ವಜನಿಕರಿಗೆ ಯಾವುದೇ ಪ್ರಯೋಜನ ನೀಡದಂತಾಗಿದೆ.

ಇದೇ ವೇಳೆ ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ಸಣ್ಣ ವ್ಯಾಪಾರಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಅವರಿಗೆ ಪರ್ಯಾಯವಾಗಿ ಬಳಸಬೇಕಿದ್ದ ವಿಜಯನಗರ ಅಂಡರ್‌ಗ್ರೌಂಡ್ ಮಾರುಕಟ್ಟೆ ಇನ್ನೂ ಕಾರ್ಯಾರಂಭ ಮಾಡದಿರುವುದು ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮಾರುಕಟ್ಟೆಯೊಳಗಿನ ಲಿಫ್ಟ್, ಎಸ್ಕಲೇಟರ್ ಸೇರಿದಂತೆ ಹಲವು ಸೌಲಭ್ಯಗಳು ಉದ್ಘಾಟನೆಯಾದ ದಿನದಿಂದಲೇ ಬಂದ್ ಆಗಿದ್ದು, ನಿರ್ವಹಣೆಯ ಕೊರತೆಯಿಂದ ಕಟ್ಟಡವು ಪಾಳು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯೇ ನಿರುಪಯುಕ್ತವಾಗುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ವ್ಯಾಪಾರಿಗಳು ಮತ್ತು ಸ್ಥಳೀಯರು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಮಳಿಗೆಗಳನ್ನು ಹಂಚಿಕೆ ಮಾಡಿ ವ್ಯಾಪಾರ ಆರಂಭಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

“ಸರ್ಕಾರ ಸಾರ್ವಜನಿಕರ ತೆರಿಗೆ ಹಣದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿದೆ. ಆದರೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೇ ಅದು ಉಪಯೋಗಕ್ಕೆ ಬರುತ್ತಿಲ್ಲ. ಸಚಿವರು ಮತ್ತು ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ವ್ಯಾಪಾರಿಗಳಿಗೆ ಮಳಿಗೆಗಳನ್ನು ನೀಡಬೇಕು.”
– ರಮೇಶ್, ವ್ಯಾಪಾರಸ್ಥ

Continue Reading

Trending