ಕ್ರೀಡೆ
CRICKET ಪಾಕ್ ಬಹಿಷ್ಕಾರ ನಡುವೆಯೂ ಕೊಲಂಬೋಗೆ ಟೀಂ ಇಂಡಿಯಾ: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಕುತೂಹಲ ತುದಿಗಾಲಿಗೆ
ಮುಂಬೈ: ಪಾಕಿಸ್ತಾನ ಪಂದ್ಯ ಬಹಿಷ್ಕಾರ ಮಾಡುವ ನಿರ್ಧಾರ ತೆಗೆದುಕೊಂಡಿದ್ದರೂ, ಭಾರತ (Team India) ಐಸಿಸಿ ಟಿ20 ವಿಶ್ವಕಪ್ (T20 World Cup) ಪಂದ್ಯವಾಡಲು ಶ್ರೀಲಂಕಾಗೆ (Sri Lanka) ತೆರಳಲಿದೆ. ಫೆಬ್ರವರಿ 15ರಂದು ಕೊಲಂಬೋದಲ್ಲಿರುವ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಬೇಕಿರುವ ಭಾರತ–ಪಾಕಿಸ್ತಾನ ಪಂದ್ಯ ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಪಾಕಿಸ್ತಾನ ತಂಡ ಕೊಲಂಬೋಗೆ ಆಗಮಿಸಿದರೂ ಭಾರತದ ವಿರುದ್ಧ ಪಂದ್ಯವಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಇದು ಪಾಕ್ ಸರ್ಕಾರದ ತೀರ್ಮಾನವಾಗಿದ್ದರೂ, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಈ ಕುರಿತು ಐಸಿಸಿಗೆ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಭಾರತವೂ ಕೊಲಂಬೋಗೆ ಹೋಗುತ್ತದೆಯೇ ಎಂಬ ಪ್ರಶ್ನೆ ಎದ್ದಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಪಾಕ್ ಬಹಿಷ್ಕಾರ ಇದ್ದರೂ ಭಾರತ ತಂಡ ಲಂಕಾಕ್ಕೆ ಪ್ರಯಾಣ ಬೆಳೆಸಲಿದೆ ಎಂದು ವರದಿಯಾಗಿದೆ.
ಬಿಸಿಸಿಐ ಮೂಲಗಳ ಪ್ರಕಾರ, ಐಸಿಸಿಯ ಶಿಷ್ಟಾಚಾರ ಮತ್ತು ನಿಯಮಗಳ ಪ್ರಕಾರ ಭಾರತ ತಂಡವು ಪೂರ್ಣ ಪ್ರಮಾಣದಲ್ಲಿ ಪ್ರವಾಸ ಕೈಗೊಳ್ಳಲಿದೆ. ವೇಳಾಪಟ್ಟಿಯಂತೆ ಅಭ್ಯಾಸ, ಪತ್ರಿಕಾಗೋಷ್ಠಿ ಮತ್ತು ಪೂರ್ವಸಿದ್ಧತೆಗಳನ್ನು ನಡೆಸಿ, ಪಂದ್ಯದ ರೆಫರಿ ಅಧಿಕೃತವಾಗಿ ಪಂದ್ಯ ರದ್ದುಪಡಿಸುವವರೆಗೆ ಕಾಯಲಿದೆ.
ಪಾಕಿಸ್ತಾನದ ನಡೆ ನಂಬಿಕೆಗೆ ಪಾತ್ರವಾಗಿಲ್ಲ ಎಂಬ ಅಭಿಪ್ರಾಯ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ. ಏಷ್ಯಾ ಕಪ್ ಟ್ರೋಫಿ ವಿಚಾರದಲ್ಲಿ ನಡೆದ ಹೈಡ್ರಾಮಾ ನೆನಪಿಸಿಕೊಂಡರೆ, ಕೊನೆ ಕ್ಷಣದಲ್ಲಿ ಮತ್ತೊಂದು ನಾಟಕ ನಡೆಯುವ ಸಾಧ್ಯತೆಯೂ ಇದೆ. ಭಾರತ ತಂಡ ಕೊಲಂಬೋಗೆ ಹೋಗದೇ ಇದ್ದರೆ, “ಭಾರತ ಆಡಲು ಬಂದಿಲ್ಲ” ಎಂಬ ಆರೋಪ ಮಾಡಲು ಪಾಕ್ ಅವಕಾಶ ಪಡೆಯಬಹುದು.
ಈ ಕಾರಣದಿಂದಲೇ ಯಾವುದೇ ವಿವಾದಕ್ಕೆ ಅವಕಾಶ ನೀಡದೆ, ಟೂರ್ನಿಯಲ್ಲಿ ತಮ್ಮ ಪಾತ್ರವನ್ನು ಸ್ಪಷ್ಟವಾಗಿ ನಿರ್ವಹಿಸಲು ಭಾರತ ಲಂಕಾಗೆ ತೆರಳುತ್ತಿದೆ. ಒಂದು ವೇಳೆ ಪಾಕಿಸ್ತಾನ ಪಂದ್ಯವಾಡದೇ ಇದ್ದರೆ, ಐಸಿಸಿ ಪಾಕಿಸ್ತಾನಕ್ಕೆ ಭಾರೀ ದಂಡ ಮತ್ತು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಭಾರತದ ಈ ನಡೆ ಪಾಕ್ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.
ಕ್ರೀಡೆ
JAIN UNIVERSITY : ಜೈನ್ ಯುನಿವರ್ಸಿಟಿಯಲ್ಲಿ ಮಹಿಳಾ ಬಾಸ್ಕೆಟ್‌ಬಾಲ್ ಹಬ್ಬ
ಬೆಂಗಳೂರು, ಫೆ.11: ಕನಕಪುರ ರಸ್ತೆಯ ಜೈನ್ ಯುನಿವರ್ಸಿಟಿ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಆಲ್ ಇಂಡಿಯಾ ಅಂತರ್ ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ (All India Inter University Women’s Basketball Championship) ಎರಡನೇ ದಿನದ ಲೀಗ್ ಪಂದ್ಯಗಳು ರೋಚಕತೆಯಿಂದ ಸಾಗಿದವು.
ಮೊದಲ ಪಂದ್ಯದಲ್ಲಿ ಚಂಡೀಗಢ ವಿಶ್ವವಿದ್ಯಾಲಯ 70-59 ಅಂತರದಲ್ಲಿ ಡಿಎವಿ ಇಂಡೋರ್ ತಂಡವನ್ನು ಮಣಿಸಿತು. ಕುಸುಭು (25) ಮತ್ತು ದೀಪ್ಷಿಖಾ (19) ಚಂಡೀಗಢ ತಂಡದ ಪರ ಮಿಂಚಿದರು.
ಎರಡನೇ ಪಂದ್ಯದಲ್ಲಿ ಆತಿಥೇಯ ಜೈನ್ ವಿಶ್ವವಿದ್ಯಾಲಯ 65-25 ಅಂತರದಲ್ಲಿ ಯುನಿವರ್ಸಿಟಿ ಆಫ್ ಕಲ್ಕತ್ತಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು. ಹರ್ಷಿತಾ (13) ಮತ್ತು ಆದ್ಯಾ ಗೌಡ (10) ಗಮನಾರ್ಹ ಆಟವಾಡಿದರು.
ಮೂರನೇ ಪಂದ್ಯದಲ್ಲಿ ಎಸ್‌ಆರ್‌ಎಂ ವಿಶ್ವವಿದ್ಯಾಲಯ 58-15 ಅಂತರದಲ್ಲಿ ಎಂಭಿಎಸ್‌ಪಿಎಸ್‌ಯು ಪಟಿಯಾಲಾ ವಿರುದ್ಧ ಜಯ ಸಾಧಿಸಿತು.
ನಾಲ್ಕನೇ ಪಂದ್ಯದಲ್ಲಿ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ 63-58 ಅಂತರದಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವನ್ನು ರೋಚಕವಾಗಿ ಸೋಲಿಸಿತು.
ಐದನೇ ಪಂದ್ಯದಲ್ಲಿ ಐಟಿಎಂ ವಿಶ್ವವಿದ್ಯಾಲಯ 65-30 ಅಂತರದಲ್ಲಿ ಎಸ್‌ಜಿಜಿವಿಎ ಯುನಿವರ್ಸಿಟಿಯನ್ನು ಮಣಿಸಿತು.
ಆರನೇ ಪಂದ್ಯದಲ್ಲಿ ಎಲ್‌ಎನ್‌ಐಪಿಇ ವಿಶ್ವವಿದ್ಯಾಲಯ 68-28 ಅಂತರದಲ್ಲಿ ಪಂಡಿತ್ ರವಿ ಶಂಕರ್ ವಿಶ್ವವಿದ್ಯಾಲಯವನ್ನು ಸೋಲಿಸಿತು.
ಇದಕ್ಕೂ ಮೊದಲು ಫೆ.10ರ ಸಂಜೆ ನಡೆದ ಲೀಗ್ ಪಂದ್ಯಗಳಲ್ಲಿ ಚಂಡೀಗಢ ವಿಶ್ವವಿದ್ಯಾಲಯ, ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಹಾಗೂ ಎಂಜಿ ಯುನಿವರ್ಸಿಟಿ ಕೊಟ್ಟಾಯಂ ಜಯಗಳಿಸಿದ್ದವು.
ಟೂರ್ನಿಯ ಮುಂದಿನ ಲೀಗ್ ಪಂದ್ಯಗಳು ಹಾಗೂ ನಾಕೌಟ್ ಹಂತದ ಪಂದ್ಯಗಳಿಗೆ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕ್ರೀಡೆ
T20 WORLD CUP : ಡಬಲ್ ಸೂಪರ್ ಓವರ್‌ನಲ್ಲಿ ದಕ್ಷಿಣ ಆಫ್ರಿಕಾದ ರೋಚಕ ಗೆಲುವು
ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ನಿಜವಾದ ಥ್ರಿಲ್ಲರ್ ಅನುಭವ ನೀಡಿತು. ಕೊನೆಯ ಕ್ಷಣದವರೆಗೂ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ‘ಡಬಲ್ ಸೂಪರ್ ಓವರ್’ನಲ್ಲಿ 4 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿತು. 188 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ 19.4 ಓವರ್‌ಗಳಲ್ಲಿ 187 ರನ್‌ಗಳಿಗೆ ಆಲೌಟ್ ಆಗಿ ಪಂದ್ಯ ಟೈ ಮಾಡಿತು.
ಮೊದಲ ಸೂಪರ್ ಓವರ್‌ನಲ್ಲಿ ಅಜ್ಮತ್ತುಲ್ಲ ಒಮರ್ಜಾಯಿ ಸ್ಫೋಟಕ ಬ್ಯಾಟಿಂಗ್ ಮೂಲಕ 17 ರನ್ ಗಳಿಸಿದರು. 18 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಗೆ ಕೊನೆಯ ಎಸೆತದಲ್ಲಿ 7 ರನ್ ಬೇಕಾಗಿದ್ದಾಗ ಟ್ರಿಸ್ಟನ್ ಸ್ಟಬ್ಸ್ ಫಜಲ್ಹಕ್ ಫಾರೂಕಿ ಎಸೆತವನ್ನು ಸಿಕ್ಸರ್‌ಗೆ ಬಾರಿಸಿ ಪಂದ್ಯವನ್ನು ಮತ್ತೆ ಟೈ ಮಾಡಿದರು.
ಎರಡನೇ ಸೂಪರ್ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಕೇವಲ 4 ಎಸೆತಗಳಲ್ಲಿ 16 ರನ್ ಸಿಡಿಸಿ ತಂಡವನ್ನು 23 ರನ್‌ಗಳಿಗೆ ಕೊಂಡೊಯ್ದರು. 24 ರನ್ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಪರ ರಹಮಾನುಲ್ಲಾ ಗುರ್ಬಾಜ್ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿ ಪಂದ್ಯವನ್ನು ತೀವ್ರ ರೋಚಕಗೊಳಿಸಿದರು. ಆದರೆ ಕೊನೆಯ ಎಸೆತದಲ್ಲಿ ಬೌಂಡರಿ ಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು. ಹೀಗಾಗಿ ದಕ್ಷಿಣ ಆಫ್ರಿಕಾ ರೋಚಕ 4 ರನ್ ಜಯ ಸಾಧಿಸಿತು.
ಕ್ರೀಡೆ
“ಈ ನಾಟಕ ಮೊದಲೇ ಗೊತ್ತಿತ್ತು” – ರಿಕಿ ಪಾಂಟಿಂಗ್
ಇಸ್ಲಾಮಾಬಾದ್:
ಹಲವು ಸುತ್ತಿನ ನಾಟಕದ ನಂತರ ಕೊನೆಗೂ ಪಾಕಿಸ್ತಾನ ಕ್ರಿಕೆಟ್ ತಂಡವು ಹೈವೋಲ್ಟೇಜ್ ಭಾರತ ವಿರುದ್ಧದ ಪಂದ್ಯವನ್ನು ಫೆಬ್ರವರಿ 15ರಂದು ಆಡಲು ಒಪ್ಪಿಗೆ ಸೂಚಿಸಿದೆ. ಕೊಲೊಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಶಿವರಾತ್ರಿ ದಿನದಂದು ಈ ಮಹತ್ವದ ಪಂದ್ಯ ನಡೆಯಲಿದೆ.
ಭಾರತ ವಿರುದ್ಧ ಪಂದ್ಯ ಆಡಲು ಮೊದಲಿಗೆ ಒಪ್ಪಿಕೊಂಡು, ಬಳಿಕ ಯು-ಟರ್ನ್ ಹೊಡೆದಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ನಿರ್ಧಾರಕ್ಕೆ ಈಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಬೆಳವಣಿಗೆಯ ಕುರಿತು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತೀವ್ರ ವ್ಯಂಗ್ಯವಾಡಿದ್ದು, “ಪಾಕಿಸ್ತಾನದ ಈ ಡ್ರಾಮಾ ಮೊದಲೇ ಗೊತ್ತಿತ್ತು” ಎಂದು ಲೇವಡಿ ಮಾಡಿದ್ದಾರೆ. ಇದೇ ಅಭಿಪ್ರಾಯವನ್ನು ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ವ್ಯಕ್ತಪಡಿಸಿದ್ದರು.
ಪಾಕಿಸ್ತಾನ ಟಿವಿ ಚರ್ಚೆಯಲ್ಲಿ ಭಾಗವಹಿಸಿದ್ದ ಮಾಜಿ ನಾಯಕ ಶಹೀದ್ ಅಫ್ರಿದಿ, ಪಿಸಿಬಿಯ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. “ಯು-ಟರ್ನ್ ತೆಗೆದುಕೊಳ್ಳುವುದೇ ಇದ್ದರೆ ಇಷ್ಟೊಂದು ನಾಟಕ ಯಾಕೆ? ಕೊನೆಗೆ ಪಿಸಿಬಿ ಬಿಸಿಸಿಐ ಮುಂದೆ ಮಂಡಿಯೂರಿದೆ” ಎಂದು ಅವರು ಕಿಡಿಕಾರಿದ್ದಾರೆ.
“ನಾವು ಹಿಂದೆ ಭಾರತದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಅಲ್ಲಿನ ಜನರು ಪಾಕಿಸ್ತಾನಿಗಳನ್ನು ಪ್ರೀತಿಸುತ್ತಿದ್ದರು. ಆದರೆ, ನರೇಂದ್ರ ಮೋದಿ ಪ್ರಧಾನಿಯಾದ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಾಲ್ಕು ಗುಜರಾತಿಗಳು ಭಾರತವನ್ನು ನಡೆಸುತ್ತಿದ್ದಾರೆ. ಅವರ ಆಟಕ್ಕೆ ಪಿಸಿಬಿ ಬುಗುರಿಯಂತೆ ಸುತ್ತುತ್ತಿದೆ” ಎಂದು ಅಫ್ರಿದಿ ಲೇವಡಿ ಮಾಡಿದ್ದಾರೆ.
ಇದೇ ವೇಳೆ, ರಿಕಿ ಪಾಂಟಿಂಗ್ ಕೂಡ ಪಾಕಿಸ್ತಾನ ಸರ್ಕಾರದ ಮಾನವನ್ನೂ ಈ ವಿಷಯದಲ್ಲಿ ಹರಾಜು ಹಾಕಲಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. “ಪ್ರತಿ ಬಾರಿ ಪಿಸಿಬಿಯ ಮಾನ ಹೋಗುತ್ತಿತ್ತು. ಈ ಬಾರಿ ಸರ್ಕಾರದ ಮಾನವೂ ಹಾಳಾಗಿದೆ” ಎಂದು ಹೇಳಿದ್ದಾರೆ.
ಪಾಕಿಸ್ತಾನ ಭಾರತ ವಿರುದ್ಧ ಪಂದ್ಯ ಆಡಲು ಮೂರು ಷರತ್ತುಗಳನ್ನು ಮುಂದಿಟ್ಟಿತ್ತು. ದ್ವಿಪಕ್ಷೀಯ ಸರಣಿ ಹಾಗೂ ಬಾಂಗ್ಲಾದೇಶ ಸೇರಿ ತ್ರಿಕೋಣ ಸರಣಿಯ ಪ್ರಸ್ತಾಪವೂ ಇದರಲ್ಲಿ ಸೇರಿತ್ತು. ಆದರೆ, ಐಸಿಸಿ ಈ ಎಲ್ಲಾ ಷರತ್ತುಗಳನ್ನು ತಿರಸ್ಕರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
-
ದೇಶ6 hours agoರಾಷ್ಟ್ರಗೀತೆಗೆ ಮುನ್ನ ವಂದೇ ಮಾತರಂ ಹಾಡುವುದು ಕಡ್ಡಾಯ
-
ದೇಶ13 hours agoಬಿ.ಕೆ. ಹರಿಪ್ರಸಾದ್ ಅವರನ್ನು ತಕ್ಷಣವೇ ರಾಜ್ಯ ಸಂಪುಟಕ್ಕೆ ಸೇರಿಸಿ ಉಪ ಮುಖ್ಯಮಂತ್ರಿ ಮಾಡಬೇಕು: ರಾಷ್ಟ್ರೀಯ ಅಹಿಂದ ಸಂಘಟನೆ ಆಗ್ರಹ
-
ಚುನಾವಣೆ13 hours agoBENGALURU : ವಾರ್ಡ್ ಮರುವಿಂಗಡಣೆ ವಿರೋಧಿಸಿ ಶಾಸಕ ಎಂ. ಕೃಷ್ಣಪ್ಪ ಹೈಕೋರ್ಟ್ ಅರ್ಜಿ
-
ದೇಶ5 hours agoBIG NEWS : ಫೆ.12 ರಾಷ್ಟ್ರವ್ಯಾಪಿ ಮುಷ್ಕರ: 30 ಕೋಟಿ ಕಾರ್ಮಿಕರು ಬೀದಿಗೆ? ಬ್ಯಾಂಕ್, ಸಾರಿಗೆ ಸೇವೆಗೆ ಹೊಡೆತ ಸಾಧ್ಯತೆ
-
ದೇಶ13 hours agoDigital Services Tax: ಡಿಜಿಟಲ್ ತೆರಿಗೆಗೆ ಅಮೆರಿಕದ ವಿರೋಧ ಏಕೆ?
-
ದೇಶ13 hours agoಚರ್ಚೆ ಮುಗಿಯುವವರೆಗೆ ಸದನಕ್ಕೆ ಹಾಜರಾಗಲ್ಲ ಎಂದ ಲೋಕಸಭಾ ಸ್ಪೀಕರ್
-
ಕ್ರೀಡೆ6 hours agoT20 WORLD CUP : ಡಬಲ್ ಸೂಪರ್ ಓವರ್‌ನಲ್ಲಿ ದಕ್ಷಿಣ ಆಫ್ರಿಕಾದ ರೋಚಕ ಗೆಲುವು
-
ಅಪರಾಧ5 hours agoBENGALURU : ಬೆಂಗಳೂರು ರಸ್ತೆ ಅಪಘಾತಕ್ಕೆ ಇಬ್ಬರು ಪುಟ್ಟ ಮಕ್ಕಳ ಬಲಿ
