Connect with us

ದೇಶ

2028 ವಿಧಾನಸಭೆ: ರಾಮನಗರವನ್ನೇ ಬಿಡಲ್ಲ – ನಿಖಿಲ್ ಕುಮಾರಸ್ವಾಮಿ ಸ್ಪಷ್ಟ ಘೋಷಣೆ

Published

on

2028ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯ ಇದ್ದರೂ, ಜೆಡಿಎಸ್ ನಾಯಕರು ಈಗಿಂದಲೇ ಸಜ್ಜಾಗುತ್ತಿರುವ ಸೂಚನೆಗಳು ಸ್ಪಷ್ಟವಾಗಿವೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಈಗಾಗಲೇ ಹಲವು ಸುತ್ತಿನ ರಾಜಕೀಯ ಸಭೆಗಳನ್ನು ನಡೆಸಿದ್ದು, ಪಕ್ಷದ ಮುಂದಿನ ತಂತ್ರ ರೂಪಿಸುವಲ್ಲಿ ತೊಡಗಿದ್ದಾರೆ.

ಈ ನಡುವೆ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಮ್ಮ ಮುಂದಿನ ಚುನಾವಣಾ ಕ್ಷೇತ್ರದ ಕುರಿತು ಸ್ಪಷ್ಟ ನಿಲುವು ಪ್ರಕಟಿಸಿದ್ದಾರೆ. ರಾಮನಗರವೇ ತಮ್ಮ ರಾಜಕೀಯ ಕರ್ಮಭೂಮಿ ಎಂದು ಘೋಷಿಸಿರುವ ಅವರು, “ತಂದೆ ಎಚ್.ಡಿ.ಕುಮಾರಸ್ವಾಮಿ ಅವರ ಕರ್ಮಭೂಮಿ ಹಾಗೂ ತಾತ ದೇವೇಗೌಡರಿಗೆ ರಾಜಕೀಯ ಮರುಜನ್ಮ ನೀಡಿದ ಪುಣ್ಯಭೂಮಿಯನ್ನು ಬಿಟ್ಟು ನಾನು ಎಲ್ಲಿಗೂ ಹೋಗುವುದಿಲ್ಲ” ಎಂದು ಹೇಳಿದ್ದಾರೆ. ಆ ಮೂಲಕ, 2028ರ ವಿಧಾನಸಭಾ ಚುನಾವಣೆಯನ್ನು ರಾಮನಗರದಿಂದಲೇ ಎದುರಿಸುವುದು ಖಚಿತ ಎಂದು ತಿಳಿಸಿದ್ದಾರೆ.

ಚುನಾವಣಾ ರಾಜಕೀಯದಲ್ಲಿ ಇದುವರೆಗೂ ನಿಖಿಲ್ ಅವರಿಗೆ ಯಶಸ್ಸು ಲಭಿಸಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಸುಮಲತಾ ಅಂಬರೀಶ್ ವಿರುದ್ಧ ಸೋಲುಂಡಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಎ.ಇಕ್ಬಾಲ್ ಹುಸೇನ್ ವಿರುದ್ಧ ಸೋಲು ಕಂಡಿದ್ದರು. ಬಳಿಕ ಚನ್ನಪಟ್ಟಣ ಉಪಚುನಾವಣೆಯಲ್ಲೂ ಸಿಪಿ ಯೋಗೇಶ್ವರ್ ಎದುರು ಪರಾಭವ ಅನುಭವಿಸಿದ್ದರು.

ಆದರೂ ರಾಜಕೀಯದಲ್ಲಿ ಏರಿಳಿತಗಳು ಸಹಜವೆಂದು ನಿಖಿಲ್ ಹೇಳಿದ್ದಾರೆ. “ನಾನು ಸ್ವತಃ ಸೋಲು ಅನುಭವಿಸಿದ್ದೇನೆ. ಸೋಲು–ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳಬೇಕು. ನಮ್ಮ ಕುಟುಂಬವನ್ನು ಪ್ರೀತಿಸುವ ದೊಡ್ಡ ವರ್ಗ ಇಲ್ಲಿದೆ. ಅವರನ್ನು ಬಿಟ್ಟು ಬೇರೆ ಕ್ಷೇತ್ರ ಹುಡುಕುವುದು ನನ್ನ ಜಾಯಮಾನವಲ್ಲ” ಎಂದು ಹೇಳಿದ್ದಾರೆ.

ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ದೇವೇಗೌಡರ ಕುಟುಂಬದ ಕೊಡುಗೆ ಪ್ರಶ್ನಿಸುವವರಿಗೆ ಜನರೇ ಉತ್ತರ ಕೊಡುತ್ತಾರೆ ಎಂದು ಹೇಳಿದ ನಿಖಿಲ್, ನೀರಾವರಿ, ರಸ್ತೆ, ಮೂಲಭೂತ ಸೌಕರ್ಯಗಳಲ್ಲಿ ನಮ್ಮ ಕುಟುಂಬದ ಪರಿಶ್ರಮವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆರೋಗ್ಯ

Meditation Benefits : ಮಾನಸಿಕ ಆರೋಗ್ಯ ಕಾಪಾಡಲು ಧ್ಯಾನ ಯಾಕೆ ಅಗತ್ಯ ಗೊತ್ತಾ?

Published

on

ಧ್ಯಾನ (Meditation) ಇತ್ತೀಚಿನ ದಿನಗಳಲ್ಲಿ ಕೇವಲ ಆಧ್ಯಾತ್ಮಿಕ ಅಭ್ಯಾಸವಾಗಿಯೇ ಉಳಿದಿಲ್ಲ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅತ್ಯುತ್ತಮ ವಿಧಾನವಾಗಿಯೂ ಪರಿಗಣಿಸಲಾಗುತ್ತಿದೆ. ಇಂದಿನ ಬ್ಯುಸಿ ಜೀವನಶೈಲಿ, ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿ ಮತ್ತು ಹಣಕಾಸಿನ ಚಿಂತೆಗಳಿಂದ ಅನೇಕರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರತಿದಿನ ಕೇವಲ 10 ನಿಮಿಷ ಧ್ಯಾನ ಮಾಡುವ ಅಭ್ಯಾಸ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಧ್ಯಾನ ಮಾಡುವುದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಒತ್ತಡ, ಆತಂಕ ಮತ್ತು ಮಾನಸಿಕ ಅಶಾಂತಿ ಕಡಿಮೆಯಾಗಲು ಸಹಾಯವಾಗುತ್ತದೆ. ಜೊತೆಗೆ ಕೆಲಸದ ಮೇಲೆ ಏಕಾಗ್ರತೆ ಹೆಚ್ಚಾಗಿ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಉತ್ತಮಗೊಳ್ಳುತ್ತದೆ.

ನಿತ್ಯ ಧ್ಯಾನ ಮಾಡುವವರು ಭಾವನಾತ್ಮಕವಾಗಿ ಹೆಚ್ಚು ಸಮತೋಲನದಲ್ಲಿರುತ್ತಾರೆ. ಮನೆಯ ಸಮಸ್ಯೆಗಳು, ಕೆಲಸದ ಒತ್ತಡ ಅಥವಾ ಹಣಕಾಸಿನ ಗೊಂದಲಗಳ ನಡುವೆಯೂ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಧ್ಯಾನ ಸಹಕಾರಿಯಾಗುತ್ತದೆ. ಕೋಪ ಕಡಿಮೆಯಾಗುವುದರ ಜೊತೆಗೆ ಸಕಾರಾತ್ಮಕ ಚಿಂತನೆಗಳು ಹೆಚ್ಚಾಗುತ್ತವೆ.

ಆರೋಗ್ಯದ ದೃಷ್ಟಿಯಿಂದಲೂ ಧ್ಯಾನ ಬಹಳ ಪ್ರಯೋಜನಕಾರಿ. ನಿಯಮಿತ ಧ್ಯಾನದಿಂದ ರಕ್ತದೊತ್ತಡ ನಿಯಂತ್ರಣದಲ್ಲಿರಲು ಸಹಾಯವಾಗುತ್ತದೆ. ಹೃದಯದ ರಕ್ತಪರಿಚಲನೆ ಸುಧಾರಿಸಿ ದೇಹದ ಶಕ್ತಿ ಕುಂದುವುದನ್ನು ತಡೆಯುತ್ತದೆ. ಹೀಗಾಗಿ ಪ್ರತಿದಿನ ಕೆಲ ನಿಮಿಷ ಧ್ಯಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

Continue Reading

ದೇಶ

ಕೇವಲ ₹5ಕ್ಕೆ ಮೀನು-ಊಟ; ಪಶ್ಚಿಮ ಬಂಗಾಳ ಸರ್ಕಾರದ ಹೊಸ ಯೋಜನೆ

Published

on

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ Suvendu Adhikari ರಾಜ್ಯದಲ್ಲಿ ಹಲವು ಮಹತ್ವದ ಕಲ್ಯಾಣ ಯೋಜನೆಗಳು ಮತ್ತು ಕಠಿಣ ಸಾಮಾಜಿಕ ನಿಯಮಗಳನ್ನು ಘೋಷಿಸಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ.

ನಾಡಿಯಾ ಜಿಲ್ಲೆಯ ಕಲ್ಯಾಣಿಯಲ್ಲಿ ನಡೆದ ಆಡಳಿತಾತ್ಮಕ ಸಭೆಯ ಬಳಿಕ ಮಾತನಾಡಿದ ಸುವೇಂದು ಅಧಿಕಾರಿ, ರಾಜ್ಯದ ಯಾವುದೇ ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆ ಹಾಗೂ ದೇವಸ್ಥಾನ-ಧಾರ್ಮಿಕ ಕೇಂದ್ರಗಳ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳಿಗೆ ಅವಕಾಶ ಇರುವುದಿಲ್ಲ ಎಂದು ಘೋಷಿಸಿದ್ದಾರೆ. ಹೊಸ ಪರವಾನಗಿಗಳಿಗೂ ನಿಷೇಧ ಹೇರಲಾಗಿದೆ.

ಮಹಿಳೆಯರಿಗಾಗಿ ‘ಅನ್ನಪೂರ್ಣ ಯೋಜನೆ’ ಹೆಸರಿನ ಹೊಸ ಯೋಜನೆ ಘೋಷಿಸಿರುವ ಸರ್ಕಾರ, ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು ₹3,000 ಆರ್ಥಿಕ ನೆರವು ನೀಡುವುದಾಗಿ ತಿಳಿಸಿದೆ. ಮೇ 27ರಿಂದಲೇ ಅರ್ಜಿ ನಮೂನೆಗಳ ವಿತರಣೆ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. “ಬಂಗಾಳದಲ್ಲಿ ವಾಸಿಸುವ ಭಾರತೀಯ ಮಹಿಳೆಯರಿಗೆ ಮಾತ್ರ ಈ ಯೋಜನೆಯ ಲಾಭ ಸಿಗಲಿದೆ” ಎಂದು ಹೇಳುವ ಮೂಲಕ ಅಕ್ರಮ ವಲಸಿಗರಿಗೆ ಯೋಜನೆ ಅನ್ವಯವಾಗುವುದಿಲ್ಲ ಎಂಬ ಸಂದೇಶವನ್ನು ಸರ್ಕಾರ ನೀಡಿದೆ.

ಇದೇ ವೇಳೆ ಬಡವರು ಮತ್ತು ದಿನಗೂಲಿ ಕಾರ್ಮಿಕರಿಗಾಗಿ ರಾಜ್ಯಾದ್ಯಂತ 400 ಸಬ್ಸಿಡಿ ಕ್ಯಾಂಟೀನ್‌ಗಳನ್ನು ಆರಂಭಿಸುವುದಾಗಿ ಘೋಷಿಸಲಾಗಿದೆ. ಈ ಕ್ಯಾಂಟೀನ್‌ಗಳಲ್ಲಿ ಕೇವಲ ₹5ಕ್ಕೆ ಮೀನು ಮತ್ತು ಅನ್ನದ ಊಟ ದೊರೆಯಲಿದೆ ಎಂದು ಸರ್ಕಾರ ತಿಳಿಸಿದೆ.

ಆರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ದೊಡ್ಡ ಬದಲಾವಣೆಯಾಗಿ ಆಯುಷ್ ವಿಭಾಗವನ್ನು ಆರೋಗ್ಯ ಇಲಾಖೆಯಿಂದ ಪ್ರತ್ಯೇಕಿಸಿ, ಪ್ರತ್ಯೇಕ ಆಯುಷ್ ಸಚಿವಾಲಯ ರಚಿಸಲು ಸರ್ಕಾರ ತೀರ್ಮಾನಿಸಿದೆ.

ಈ ಆಡಳಿತಾತ್ಮಕ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ Kakoli Ghosh Dastidar ಭಾಗವಹಿಸಿರುವುದು ಮತ್ತಷ್ಟು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದ ಅವರು, “ಸಾರ್ವಜನಿಕ ಅಭಿವೃದ್ಧಿಗಾಗಿ ಸರ್ಕಾರದ ಜೊತೆ ಕೆಲಸ ಮಾಡುವುದು ಅಗತ್ಯ” ಎಂದು ಪ್ರತಿಕ್ರಿಯಿಸಿದ್ದಾರೆ.

Continue Reading

ದೇಶ

ತಮಿಳುನಾಡು ರೈತರ ಪರ ದಳಪತಿ ವಿಜಯ್ ಬ್ಯಾಟಿಂಗ್; ಕೇಂದ್ರಕ್ಕೆ ಮಹತ್ವದ ಮನವಿ

Published

on

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಹಾಗೂ ನಟ Vijay ದೆಹಲಿ ಪ್ರವಾಸಕ್ಕೂ ಮುನ್ನ ಪ್ರಧಾನಿ Narendra Modi ಅವರಿಗೆ ಮೇಕೆದಾಟು ಯೋಜನೆ ಕುರಿತು ಮಹತ್ವದ ಪತ್ರ ಬರೆದಿದ್ದಾರೆ.

ಕರ್ನಾಟಕ ಮತ್ತು ತಮಿಳುನಾಡು ನಡುವಿನ ಬಹುಕಾಲದ ಕಾವೇರಿ-ಮೇಕೆದಾಟು ವಿವಾದವನ್ನು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿರುವ ವಿಜಯ್, ತಮಿಳುನಾಡಿನ ಹಿತಾಸಕ್ತಿ ಕಾಪಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕರ್ನಾಟಕ ಸರ್ಕಾರ ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಮುಂದಾಗಿರುವ ವಿಚಾರವನ್ನು ಉಲ್ಲೇಖಿಸಿರುವ ಅವರು, ಈ ಯೋಜನೆ ಜಾರಿಯಾದರೆ ತಮಿಳುನಾಡಿನ ಡೆಲ್ಟಾ ಭಾಗದ ರೈತರಿಗೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನ ಲಕ್ಷಾಂತರ ರೈತರ ಕೃಷಿ ಮತ್ತು ಬದುಕಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ವಿಜಯ್ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ದೆಹಲಿಗೆ ತೆರಳುವ ಮುನ್ನವೇ ಈ ಪತ್ರ ಬರೆದಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ ಪೂರ್ಣ ಪ್ರಮಾಣದ ರಾಜಕೀಯಕ್ಕೆ ಕಾಲಿಟ್ಟಿರುವ ವಿಜಯ್, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ ಹಾಗೂ ಜನಪರ ವಿಷಯಗಳನ್ನು ಪ್ರಮುಖ ಅಸ್ತ್ರವಾಗಿಸಿಕೊಳ್ಳುತ್ತಿದ್ದಾರೆ.

ಮೇಕೆದಾಟು ಯೋಜನೆ ತಮಿಳುನಾಡಿನಲ್ಲಿ ಅತ್ಯಂತ ಸೂಕ್ಷ್ಮ ಹಾಗೂ ಭಾವನಾತ್ಮಕ ವಿಷಯವಾಗಿದ್ದು, ಇದೇ ವಿಚಾರವನ್ನು ಮುಂದಿಟ್ಟುಕೊಂಡು ವಿಜಯ್ ರಾಜಕೀಯವಾಗಿ ಭದ್ರ ನೆಲೆ ನಿರ್ಮಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಅವರ ಈ ನಡೆ ದಕ್ಷಿಣ ಭಾರತದ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

Continue Reading

Trending