Connect with us

ದೇಶ

ಗಲ್ವಾನ್‌ ಘರ್ಷಣೆಯ ಬಳಿಕ ಚೀನಾದ ರಹಸ್ಯ ಅಣು ಪರೀಕ್ಷೆ ಬಹಿರಂಗ

ವಾಷಿಂಗ್ಟನ್‌: ಗಲ್ವಾನ್‌ ಘರ್ಷಣೆಯ (Galwan Clash) ಕೇವಲ ಒಂದು ವಾರದ ಬಳಿಕ ಚೀನಾ (China) ರಹಸ್ಯವಾಗಿ ಅಣ್ವಸ್ತ್ರ ಸ್ಫೋಟ ಪರೀಕ್ಷೆ (Nuclear Explosive Test) ನಡೆಸಿದ್ದ ಸ್ಫೋಟಕ ವಿಚಾರ ಇದೀಗ ಬಹಿರಂಗವಾಗಿದೆ. ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿ ಥಾಮಸ್ ಜಿ ಡಿನನ್ನೊ (Thomas G DiNanno) ಈ ಗಂಭೀರ ಆರೋಪ ಮಾಡಿದ್ದಾರೆ.

ಅಮೆರಿಕದ ಪ್ರಕಾರ, 2020ರ ಜೂನ್‌ 22ರಂದು ಚೀನಾ ತನ್ನ ಅಣುಪರೀಕ್ಷೆಯನ್ನು ಗುಪ್ತವಾಗಿ ನಡೆಸಿದ್ದು, ಜಾಗತಿಕ ಕಂಪನ ಮಾಪಕಗಳಿಂದ ತಪ್ಪಿಸಿಕೊಳ್ಳಲು ‘ಡಿಕೌಪ್ಲಿಂಗ್’ ತಂತ್ರಜ್ಞಾನವನ್ನು ಬಳಕೆ ಮಾಡಿದೆ. ಸಾಮಾನ್ಯವಾಗಿ ಭೂಮಿಯ ಅಡಿಯಲ್ಲಿ ಅಣು ಪರೀಕ್ಷೆ ನಡೆಸಿದಾಗ ಭೂಕಂಪದಂತ ಕಂಪನಗಳು ದಾಖಲಾಗುತ್ತವೆ. ಆದರೆ ಡಿಕೌಪ್ಲಿಂಗ್ ತಂತ್ರ ಬಳಸಿ ಕಂಪನದ ತೀವ್ರತೆಯನ್ನು ಕಡಿಮೆ ಮಾಡುವ ಮೂಲಕ ಚೀನಾ ಈ ಪರೀಕ್ಷೆಯನ್ನು ಜಗತ್ತಿನ ಗಮನಕ್ಕೆ ಬಾರದಂತೆ ನಡೆಸಿದೆ ಎಂದು ಅಮೆರಿಕ ಆರೋಪಿಸಿದೆ.

2020ರ ಜೂನ್‌ 15–16ರ ರಾತ್ರಿ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಿ ಸೇನೆಗಳ ಮಧ್ಯೆ ಭೀಕರ ಘರ್ಷಣೆ ನಡೆದಿತ್ತು. ಈ ಘಟನೆಯಲ್ಲಿ 20 ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡಿದ್ದರು. ಚೀನಿ ಸೇನೆಯಲ್ಲಿಯೂ 30ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಈ ಘರ್ಷಣೆಯ ಕೇವಲ ಏಳು ದಿನಗಳ ಬಳಿಕ ಚೀನಾ ಅಣು ಸ್ಫೋಟ ಪರೀಕ್ಷೆ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಭಾರತದ ಗಡಿಯಲ್ಲಿರುವ ಷಿನ್‌ಜಿಯಾಂಗ್ ಪ್ರದೇಶದ ಲಾಪ್ ನೂರ್‌ನಲ್ಲಿ ಈ ಪರೀಕ್ಷೆ ನಡೆದಿರುವ ಸಾಧ್ಯತೆ ಇದೆ ಎಂದು ಅಮೆರಿಕ ತಿಳಿಸಿದೆ. ಸಮಗ್ರ ಪರಮಾಣು ಪರೀಕ್ಷಾ ನಿಷೇಧ ಒಪ್ಪಂದದ (CTBT) ಅಡಿಯಲ್ಲಿ ಅಣುಪರೀಕ್ಷೆಗಳು ನಿಷೇಧಿತವಾಗಿದ್ದರೂ, ಚೀನಾ ಗಲ್ವಾನ್‌ ಘರ್ಷಣೆಯ ಹಿಂದೆ ಉದ್ದೇಶಪೂರ್ವಕ ತಂತ್ರವೊಂದನ್ನು ರೂಪಿಸಿದ್ದೇ ಎಂಬ ಚರ್ಚೆ ಈಗ ಜಾಗತಿಕ ಮಟ್ಟದಲ್ಲಿ ತೀವ್ರಗೊಂಡಿದೆ.

Continue Reading
Click to comment

Leave a Reply

Your email address will not be published. Required fields are marked *

ದೇಶ

ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ ಮತ್ತೊಂದು ಸಂಕಷ್ಟ: ಕ್ರೈಸ್ತ ಧರ್ಮಕ್ಕೆ ಅಪಮಾನ ಆರೋಪ, ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ದೂರು

ಬೆಂಗಳೂರು: ನಟ ಯಶ್ (Yash) ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ (Toxic Cinema) ಚಿತ್ರಕ್ಕೆ ಒಂದರ ಮೇಲೊಂದು ವಿವಾದಗಳು ಎದುರಾಗುತ್ತಿವೆ. ಕೆಲ ದಿನಗಳ ಹಿಂದೆ ಟೀಸರ್‌ನಲ್ಲಿನ ಅಶ್ಲೀಲ ದೃಶ್ಯಗಳನ್ನು ಖಂಡಿಸಿ ಮಹಿಳಾ ಒಕ್ಕೂಟಗಳು ಆಕ್ರೋಶ ವ್ಯಕ್ತಪಡಿಸಿದ್ದರೆ, ಇದೀಗ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ಚಿತ್ರತಂಡದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಟಾಕ್ಸಿಕ್ ಸಿನಿಮಾದ ಕೆಲವು ದೃಶ್ಯಗಳಲ್ಲಿ ಕ್ರೈಸ್ತ ಧರ್ಮಕ್ಕೆ ಅಪಮಾನ ಮಾಡಲಾಗಿದೆ ಹಾಗೂ ಕ್ರೈಸ್ತ ಸಮುದಾಯಕ್ಕೆ ಮುಜುಗರ ಉಂಟುಮಾಡಲಾಗಿದೆ ಎಂದು ಆರೋಪಿಸಿ ನ್ಯಾಷನಲ್ ಕ್ರಿಶ್ಚಿಯನ್ ಫೆಡರೇಷನ್ (National Christian Federation) ಚಲನಚಿತ್ರ ವಾಣಿಜ್ಯ ಮಂಡಳಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಗೃಹಸಚಿವರು ಹಾಗೂ ಸೆನ್ಸಾರ್ ಬೋರ್ಡ್‌ಗೆ ದೂರು ಸಲ್ಲಿಸಿದೆ. ಕ್ರೈಸ್ತರ ದೇವದೂತ ಸಂತ ಮಿಕಯೇಲ್‌ ಅವರಿಗೆ ಸಂಬಂಧಿಸಿದ ದೃಶ್ಯಗಳಲ್ಲಿ ಅವಮಾನಕಾರಿ ಹಾಗೂ ಅಶ್ಲೀಲ ಚಿತ್ರೀಕರಣ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಕ್ರೈಸ್ತರ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ಆ ದೃಶ್ಯಗಳನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಸಿನಿಮಾದಲ್ಲಿಯೂ ಸಂತ ಮಿಕಯೇಲ್‌ ಮುಂದೆ ಚಿತ್ರೀಕರಿಸಿರುವ ದೃಶ್ಯಗಳನ್ನು ತೆಗೆದುಹಾಕಿ, ಕ್ರೈಸ್ತ ಸಮುದಾಯದ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದಕ್ಕೂ ಮುನ್ನ ಟಾಕ್ಸಿಕ್ ಟೀಸರ್‌ನಲ್ಲಿನ ಕೆಲವು ದೃಶ್ಯಗಳು ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುತ್ತಿವೆ ಎಂದು ಆರೋಪಿಸಿ ಮಹಿಳಾ ಒಕ್ಕೂಟಗಳು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದವು. ಟೀಸರ್‌ನ ವಿವಾದಾತ್ಮಕ ದೃಶ್ಯಗಳನ್ನು ತೆಗೆದುಹಾಕುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರಿಗೆ ಮನವಿ ಮಾಡಲಾಗಿತ್ತು.

ಒಟ್ಟಾರೆ, ಬಿಡುಗಡೆಗೂ ಮುನ್ನವೇ ‘ಟಾಕ್ಸಿಕ್’ ಸಿನಿಮಾ ಭಾರೀ ವಿವಾದದ ಕೇಂದ್ರಬಿಂದುವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಯಾವ ತಿರುವು ಪಡೆಯಲಿದೆ ಎಂಬುದರ ಮೇಲೆ ಚಿತ್ರತಂಡದ ನಡೆ ಮಹತ್ವ ಪಡೆದುಕೊಂಡಿದೆ.

Continue Reading

ದೇಶ

ಬಿ.ಕೆ. ಹರಿಪ್ರಸಾದ್ ಅವರನ್ನು ತಕ್ಷಣವೇ ರಾಜ್ಯ ಸಂಪುಟಕ್ಕೆ ಸೇರಿಸಿ ಉಪ ಮುಖ್ಯಮಂತ್ರಿ ಮಾಡಬೇಕು: ರಾಷ್ಟ್ರೀಯ ಅಹಿಂದ ಸಂಘಟನೆ ಆಗ್ರಹ

ಬೆಂಗಳೂರು, ಫೆ.10: ಶೋಷಿತರು, ಹಿಂದುಳಿದ ವರ್ಗಗಳು, ದಲಿತರು ಹಾಗೂ ಅಹಿಂದ ಸಮುದಾಯದ ಹಕ್ಕುಗಳಿಗಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ತಕ್ಷಣವೇ ರಾಜ್ಯ ಸಂಪುಟಕ್ಕೆ ಸೇರಿಸಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ರಾಷ್ಟ್ರೀಯ ಅಹಿಂದ ಸಂಘಟನೆ ಸರ್ಕಾರವನ್ನು ಒತ್ತಾಯಿಸಿದೆ. ರಾಷ್ಟ್ರೀಯ ಅಹಿಂದ ಸಂಘಟನೆಯ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ಹಾಗೂ ಕರ್ನಾಟಕ ರಾಜ್ಯ ಒಬಿಸಿ ಘಟಕದ ಅಧ್ಯಕ್ಷ ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ಈ ಬೇಡಿಕೆ ಮುಂದಿಡಲಾಗಿದೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕರು, ಬಿ.ಕೆ. ಹರಿಪ್ರಸಾದ್ ಅವರು ಕೇವಲ ರಾಜಕೀಯ ನಾಯಕನಲ್ಲ, ಸಾಮಾಜಿಕ ನ್ಯಾಯದ ಹೋರಾಟಗಾರರಾಗಿದ್ದಾರೆ ಎಂದು ಬಣ್ಣಿಸಿದರು. ಜಾತಿ ಗಣತಿಯಂತಹ ಸಂವೇದನಾಶೀಲ ಹಾಗೂ ಐತಿಹಾಸಿಕ ಮಹತ್ವದ ವಿಷಯದಲ್ಲಿ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಶೋಷಿತ ಸಮುದಾಯಗಳ ಪರವಾಗಿ ಅವರು ದಿಟ್ಟ ನಿಲುವು ತಳೆದಿದ್ದಾರೆ ಎಂದು ಹೇಳಿದರು. ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಮೌಲ್ಯಗಳನ್ನು ರಾಜಕೀಯದ ಕೇಂದ್ರಬಿಂದುವಾಗಿಸಿಕೊಂಡು ನಡೆಸಿರುವ ಅವರ ಹೋರಾಟ ಅಹಿಂದ ಚಳವಳಿಗೆ ಹೊಸ ಬಲ ನೀಡಿದೆ ಎಂದು ಅಭಿಪ್ರಾಯಪಟ್ಟರು.

ಹಿಂದುಳಿದ ವರ್ಗದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ಆಡಳಿತಕ್ಕೆ ರಾಜಕೀಯ ಹಾಗೂ ನೈತಿಕವಾಗಿ ಬಲ ತುಂಬಿದ ನಾಯಕರಲ್ಲಿ ಬಿ.ಕೆ. ಹರಿಪ್ರಸಾದ್ ಪ್ರಮುಖರು ಎಂದು ಹೇಳಿದರು. ಪಕ್ಷದ ಒಳಗೂ ಹೊರಗೂ ಅಹಿಂದ ಧ್ವನಿಯನ್ನು ಸ್ಪಷ್ಟವಾಗಿ ಪ್ರತಿನಿಧಿಸಿರುವ ಇಂತಹ ನಾಯಕನನ್ನು ಸಂಪುಟಕ್ಕೆ ಸೇರಿಸುವುದರಿಂದ ಸರ್ಕಾರದ ವಿಶ್ವಾಸಾರ್ಹತೆ ಇನ್ನಷ್ಟು ಹೆಚ್ಚಲಿದೆ ಎಂದರು.

ಬಿ.ಕೆ. ಹರಿಪ್ರಸಾದ್ ಅವರು ಸಂಪುಟ ಸೇರಿದ್ದಲ್ಲಿ ಅಹಿಂದ ಸಂಘಟನೆಗಳಿಗೆ ಹೊಸ ಶಕ್ತಿ ಸಿಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆಗಳು, ಚರ್ಚೆಗಳು ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನಾಯಕರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಬಿ. ಶಿವಣ್ಣ ಸೇರಿದಂತೆ ಅಹಿಂದ ಕಾರ್ಯಕರ್ತರು ಮತ್ತು ಬಿ.ಕೆ. ಹರಿಪ್ರಸಾದ್ ಬೆಂಬಲಿಗರು ಉಪಸ್ಥಿತರಿದ್ದರು.

Continue Reading

ದೇಶ

ಹಿರಿಯ ಪತ್ರಕರ್ತ ಹಾಗೂ ಮಾಜಿ ಎಂಎಲ್‌ಸಿ ಪಿ. ರಾಮಯ್ಯ ನಿಧನ: ಪತ್ರಿಕೋದ್ಯಮದ ‘ತಪಸ್ವಿ’ಗೆ ಅಂತಿಮ ವಿದಾಯ

ಬೆಂಗಳೂರು: ಹಿರಿಯ ಪತ್ರಕರ್ತರು ಹಾಗೂ ಮಾಜಿ ವಿಧಾನಪರಿಷತ್ ಸದಸ್ಯರಾದ ಪಿ. ರಾಮಯ್ಯ (93) (P Ramiah) ಅವರು ಮಂಗಳವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ರಾತ್ರಿ 9 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಅವರ ಪುತ್ರ ಡಾ. ಬಾಲಜಿ ಮಾಹಿತಿ ನೀಡಿದ್ದಾರೆ. ಅವರ ನಿಧನದಿಂದ ಕನ್ನಡ ಪತ್ರಿಕೋದ್ಯಮ ಲೋಕಕ್ಕೆ ಅಪಾರ ನಷ್ಟವಾಗಿದೆ.

1933 ಸೆಪ್ಟೆಂಬರ್ 12ರಂದು ಜನಿಸಿದ ಪಿ. ರಾಮಯ್ಯ ಅವರು ಸುಮಾರು ಐದು ದಶಕಗಳ ಕಾಲ ‘ದಿ ಹಿಂದೂ’ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಅದರಲ್ಲೂ ಸುಮಾರು 45 ವರ್ಷಗಳ ಕಾಲ ಕರ್ನಾಟಕದಲ್ಲಿ The Hindu ಪತ್ರಿಕೆಯ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದು, ಸತ್ಯ, ನೈತಿಕತೆ ಮತ್ತು ಪ್ರಾಮಾಣಿಕತೆಗೆ ಅವರು ಬದ್ಧರಾಗಿದ್ದರು. ಇದೇ ಕಾರಣಕ್ಕೆ ಅವರನ್ನು ‘ಪತ್ರಿಕೋದ್ಯಮದ ತಪಸ್ವಿ’ ಎಂದು ಗೌರವದಿಂದ ಕರೆಯಲಾಗುತ್ತಿತ್ತು.

ಪತ್ರಿಕೋದ್ಯಮದ ಜೊತೆಗೆ ಸಾರ್ವಜನಿಕ ಜೀವನದಲ್ಲೂ ಸಕ್ರಿಯರಾಗಿದ್ದ ರಾಮಯ್ಯ ಅವರು ವಿಧಾನಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿ, ಸರ್ಕಾರದ ನೀತಿ ನಿರೂಪಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಅನುಭವ ಕಥನ “ನಾನು ಹಿಂದೂ ರಾಮಯ್ಯ” ಕೃತಿ, ಪತ್ರಿಕೋದ್ಯಮದ ಮೌಲ್ಯಗಳನ್ನು ಎತ್ತಿ ಹಿಡಿಯುವ ದಾಖಲೆ ಎಂದು ಪರಿಗಣಿಸಲಾಗಿದೆ.

ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಆದಿಚುಂಚನಗಿರಿ ಮಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಾಮಯ್ಯ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮತ್ತು ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಬುಧವಾರ ಬೆಳಗ್ಗೆ 9 ಗಂಟೆಯಿಂದ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ ಎಂದು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ ಮಾಹಿತಿ ನೀಡಿದ್ದಾರೆ. ಅವರಿಗೆ ಇಬ್ಬರು ಪುತ್ರರು, ಪುತ್ರಿ ಹಾಗೂ ಅಪಾರ ಬಂಧು ಬಳಗ ಉಳಿದಿದೆ.

Continue Reading
Advertisement

Trending