ರಾಜಕೀಯ
ಡಿ.ಕೆ.ಶಿವಕುಮಾರ್ ಸಿಎಂ? ಪುತ್ತೂರು ಶಾಸಕರ ಘೋಷಣೆ
ಪುತ್ತೂರು: ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತ ವಲಯದಲ್ಲೇ ಗುರುತಿಸಿಕೊಂಡಿದ್ದ ಪುತ್ತೂರು ಶಾಸಕ ಅಶೋಕ್ ರೈ ಅವರ ಇತ್ತೀಚಿನ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯರನ್ನು ಮನವೊಲಿಸಿ ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿಕೊಂಡು, ಸ್ವತಃ ಸಿಎಂ ಅವರನ್ನು ಪುತ್ತೂರಿಗೆ ಕರೆಸಿ ದೀಪಾವಳಿ ವಸ್ತ್ರ ವಿತರಣೆ ಸಮಾವೇಶ ಉದ್ಘಾಟಿಸಿ ಮೆಚ್ಚುಗೆ ಪಡೆದಿದ್ದ ಅಶೋಕ್ ರೈ, ಇದೀಗ ಇದ್ದಕ್ಕಿದ್ದಂತೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ.
ಶುಕ್ರವಾರ ರಾತ್ರಿ ಪುತ್ತೂರಿನ ಕಾಂಗ್ರೆಸ್ ಭವನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅಶೋಕ್ ರೈ, “ಇನ್ನೂ ಕೇವಲ ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪುತ್ತೂರಿಗೆ ಬರಲಿದ್ದಾರೆ. ಹೊಸ ಕಾಂಗ್ರೆಸ್ ಭವನವನ್ನು ಅವರು ಸಿಎಂ ಆಗಿ ಉದ್ಘಾಟಿಸಲಿದ್ದಾರೆ” ಎಂದು ಘಂಟಾಘೋಷವಾಗಿ ಹೇಳಿದರು.
ನಾನು ಬಿಜೆಪಿಯಲ್ಲಿದ್ದಾಗಲೂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಇತ್ತು. ನನಗೆ ಕಾಂಗ್ರೆಸ್ ಟಿಕೆಟ್ ಸಿಗಲು, ಶಾಸಕರಾಗಲು ಶಿವಕುಮಾರ್ ಮಾರ್ಗದರ್ಶನವೇ ಪ್ರಮುಖ ಕಾರಣ ಎಂದು ಅಶೋಕ್ ರೈ ಹೇಳಿದ್ದಾರೆ. ದೇವರ ಅನುಗ್ರಹ ಮತ್ತು ಸರ್ವಧರ್ಮದ ಮತದಾರರ ಆಶೀರ್ವಾದದ ಜೊತೆಗೆ ಡಿಕೆಶಿ ಬೆಂಬಲವೂ ನನಗೆ ಶಕ್ತಿಯಾಗಿದೆ ಎಂದರು.
ವೇದಿಕೆಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, “ಡಿಕೆಶಿ ಮತ್ತು ನಾನು ಒಂದೇ ಕಾಲದಲ್ಲಿ ರಾಜಕಾರಣ ಆರಂಭಿಸಿದವರು. ಅವರಿಗೆ ಸಿಎಂ ಆಗಲು ಇನ್ನೊಂದು ಮೆಟ್ಟಿಲು ಮಾತ್ರ ಬಾಕಿ ಇದೆ” ಎಂದು ಹೇಳಿದರು. ಇನ್ನೊಂದೆಡೆ ಕಾಂಗ್ರೆಸ್ ನಾಯಕ ಕಾವು ಹೇಮನಾಥ ಶೆಟ್ಟಿ, ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಹಾಗೂ ಅವರ ಸಂಪುಟದಲ್ಲಿ ಅಶೋಕ್ ರೈ ಸಚಿವರಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆದರೆ ಎಲ್ಲರೂ ಸಿಎಂ ವಿಚಾರ ಪ್ರಸ್ತಾಪಿಸಿದರೂ, ಡಿ.ಕೆ.ಶಿವಕುಮಾರ್ ಮಾತ್ರ ತಮ್ಮ ಭಾಷಣದಲ್ಲಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡದೆ, ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯಕರ್ತರನ್ನು ಹುರಿದುಂಬಿಸುವ ಮಾತುಗಳಿಗಷ್ಟೇ ಸೀಮಿತರಾದರು.
2023ರ ಚುನಾವಣೆಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದ ಅಶೋಕ್ ರೈಗೆ ಟಿಕೆಟ್ ನೀಡಿದ್ದೇ ಡಿಕೆಶಿ ಎಂಬ ಹಿನ್ನೆಲೆ ಇದೆ. ಗೆಲುವಿನ ನಂತರ ಸಿದ್ದರಾಮಯ್ಯರೊಂದಿಗೆ ಆತ್ಮೀಯತೆಯಿಂದ ಕಾಣಿಸಿಕೊಂಡಿದ್ದ ಅಶೋಕ್ ರೈ ಇದೀಗ ಡಿಕೆಶಿ ಸಿಎಂ ಹೇಳಿಕೆ ನೀಡಿರುವುದು ಕಾಂಗ್ರೆಸ್ ಒಳರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ದೇಶ
DCM D K SHIVKUMAR ಖರ್ಗೆ ಸೂಚನೆ ಪಾಲಿಸಬೇಕು: ಡಿಕೆ ಶಿವಕುಮಾರ್
ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಮಾತುಕತೆ ಬಗ್ಗೆ ಸ್ಪಷ್ಟನೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar), “ನಾನು ಸಿದ್ದರಾಮಯ್ಯ ಅವರೊಂದಿಗೆ ಏನು ಮಾತನಾಡಿದ್ದೇವೆ ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ನಾವು ಯಾವತ್ತೂ ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ” ಎಂದು ಹೇಳಿದರು.
ದೆಹಲಿಗೆ ತೆರಳುವ ಮುನ್ನ ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೊಂದಲ ಬೇರೆಯವರಿಗೆ ಇರಬಹುದು, ಆದರೆ ನನಗೆ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು. “ನಾವು ನಮ್ಮ ವರಿಷ್ಠ ನಾಯಕರೊಂದಿಗೆ ಚರ್ಚೆ ಮಾಡಿಕೊಂಡಿದ್ದೇವೆ. ಇತರರು ಟೆನ್ಶನ್ ತೆಗೆದುಕೊಳ್ಳುವುದರಿಂದಲೋ ಅಥವಾ ಹೇಳಿಕೆ ನೀಡುವುದರಿಂದಲೋ ಯಾರಿಗೂ ಪ್ರಯೋಜನವಿಲ್ಲ” ಎಂದು ಹೇಳಿದರು.
ಶಾಸಕರು ಹಾಗೂ ಸಚಿವರು ಪರ–ವಿರುದ್ಧ ಹೇಳಿಕೆ ನೀಡುವುದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದ್ದಾರೆ. ಆ ಸೂಚನೆಯನ್ನು ಎಲ್ಲರೂ ಪಾಲಿಸಬೇಕು ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಅಸ್ಸಾಂ ಚುನಾವಣೆಗೆ ಸಂಬಂಧಿಸಿದಂತೆ ಇಂದು ಸಂಜೆ ಎಐಸಿಸಿಯವರು ಚರ್ಚೆಗೆ ಕರೆದಿದ್ದಾರೆ. ಕೇರಳ ಪ್ರವಾಸ ಮುಗಿಸಿಕೊಂಡು ಅಸ್ಸಾಂಗೆ ತೆರಳಬೇಕಿದೆ ಎಂದರು. ಬಜೆಟ್ ಸಭೆಗೆ ಗೈರಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಮುಖ್ಯಮಂತ್ರಿಯವರೊಂದಿಗೆ ಮಾತನಾಡಿದ್ದೇನೆ. ದೆಹಲಿಯಿಂದ ವಾಪಸ್ಸಾದ ನಂತರ ಮತ್ತಷ್ಟು ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ದೆಹಲಿಯಿಂದ ‘ಗುಡ್ ನ್ಯೂಸ್’ ತರುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, “ಪ್ರತಿ ದಿನವೂ ಜೀವನದಲ್ಲಿ ಸಂತೋಷವೂ ಇದೆ, ಕಷ್ಟವೂ ಇದೆ. ಜನರ ಸಮಸ್ಯೆ ಬಗೆಹರಿಸಲು ಅನೇಕ ತೊಡಕುಗಳು ಬರುತ್ತವೆ. ಟೀಕೆಗಳನ್ನು ಎದುರಿಸುತ್ತಾ ನಮ್ಮ ಕೆಲಸ ಮಾಡಿಕೊಂಡು ಹೋಗಬೇಕು” ಎಂದು ಮಾರ್ಮಿಕವಾಗಿ ಹೇಳಿದರು.
ಯತೀಂದ್ರಗೆ ನೋಟಿಸ್ ನೀಡದ ಕುರಿತು ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆಯ ಪ್ರಶ್ನೆಗೆ, “ಅದನ್ನು ಹೈಕಮಾಂಡ್ ಬಳಿ ಕೇಳೋಣ” ಎಂದು ಹೇಳಿ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದರು.
ದೇಶ
ಡಿ.ಕೆ. ಶಿವಕುಮಾರ್‌ಗೆ ಈ ಅವಧಿಯಲ್ಲೇ ಸಿಎಂ ಅವಕಾಶ ಕೊಡಬೇಕು: ಶಾಸಕ ಇಕ್ಬಾಲ್ ಹುಸೇನ್ ಆಗ್ರಹ
ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ಮಾಡಿಕೊಡಬೇಕು. ಈ ಅವಧಿಯಲ್ಲೇ ಡಿಕೆಶಿ ಅವರು ಸಿಎಂ ಆಗಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಮನವಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ. ದೇವರಾಜ ಅರಸು ನಂತರ ದಲಿತರ, ಶೋಷಿತರ ಪರವಾಗಿ ಅಳಿಲು ಸೇವೆ ಮಾಡಿದವರು ಸಿದ್ದರಾಮಯ್ಯ ಎಂದರು. ಆದರೆ, ಸಾಮಾಜಿಕ ನ್ಯಾಯದ ಮಾತು ಹೇಳುವ ಕಾಂಗ್ರೆಸ್ ಸರ್ಕಾರ, ಅದನ್ನು ಕಾರ್ಯರೂಪದಲ್ಲೂ ತೋರಿಸಬೇಕು. ಈ ಅವಧಿಯಲ್ಲೇ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದು ಒತ್ತಾಯಿಸಿದರು.
ಎರಡೂವರೆ ವರ್ಷ ಪೂರ್ಣಗೊಂಡ ಬಳಿಕ ಸಾಕಷ್ಟು ಶಾಸಕರು ಡಿಕೆಶಿ ಪರವಾಗಿ ಮಾತನಾಡಿದ್ದೇವೆ. ಅವರು ಪಕ್ಷಕ್ಕಾಗಿ ನಡೆಸಿದ ಹೋರಾಟ, ಶ್ರಮಕ್ಕೆ ಬೆಲೆ ಸಿಗಬೇಕು. ಸುಮಾರು 80–90 ಶಾಸಕರು ಡಿ.ಕೆ. ಶಿವಕುಮಾರ್ ಅವರಿಗೆ ಅವಕಾಶ ನೀಡಬೇಕು ಎಂಬ ಆಶಯ ಹೊಂದಿದ್ದಾರೆ ಎಂದು ಹೇಳಿದರು.
ಅಸಹ್ಯವಾಗಿ ಮಾತನಾಡುವುದು ಸರಿಯಲ್ಲ
ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಇಕ್ಬಾಲ್ ಹುಸೇನ್, ನಮ್ಮದು ಶಿಸ್ತಿನ ಪಕ್ಷ. ತಂದೆ ಪರವಾಗಿ ಮಗ ಈ ರೀತಿ ಪದೇ ಪದೇ ಮಾತನಾಡುವುದು ಸರಿಯಲ್ಲ. ಹೀಗೆ ಮಾತನಾಡಿ ಪಕ್ಷದ ಒಳಜಗಳ ಹೆಚ್ಚಿಸಬಾರದು ಎಂದು ಎಚ್ಚರಿಸಿದರು.
ನೋಟಿಸ್ ವಿಚಾರ
ಯತೀಂದ್ರ ಅವರಿಗೆ ನೋಟಿಸ್ ನೀಡದಿರುವ ಬಗ್ಗೆ ಪ್ರತಿಕ್ರಿಯಿಸಿ, ನಾನು ಶಾಸಕ, ಅವರು ವಿಧಾನಪರಿಷತ್ ಸದಸ್ಯ. ಹಿಂದೆ ನನಗೆ ನೋಟಿಸ್ ನೀಡಲಾಗಿತ್ತು. ಯಾರು ನೋಟಿಸ್ ಕೊಡಬೇಕೋ ಅವರು ತೀರ್ಮಾನ ಮಾಡಬೇಕು. ಎಷ್ಟು ನೋಟಿಸ್ ಕೊಟ್ಟರೂ ನನ್ನ ಉತ್ತರ ಒಂದೇ—ಡಿ.ಕೆ. ಶಿವಕುಮಾರ್ ಒಮ್ಮೆ ಸಿಎಂ ಆಗಬೇಕು ಎಂದು ಪುನರುಚ್ಚರಿಸಿದರು.
ರಾಮನಗರ ಯಾರಪ್ಪನ ಸ್ವತ್ತು ಅಲ್ಲ
ನಿಖಿಲ್ ಕುಮಾರಸ್ವಾಮಿ ಹಾಗೂ ಎಚ್.ಡಿ. ಕುಮಾರಸ್ವಾಮಿ ರಾಮನಗರದಲ್ಲಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವ. ರಾಮನಗರ ಯಾರಪ್ಪನ ಸ್ವತ್ತು ಅಲ್ಲ. ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು ಎಂದು ಟಾಂಗ್ ನೀಡಿದರು.
ದೇಶ
ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನಿರಾಕರಣೆ: ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ವಿಪಕ್ಷ ಸಜ್ಜು
ನವದೆಹಲಿ
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಸ್ಥಾನದಿಂದ ವಜಾಗೊಳಿಸಲು ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಲು ತೀರ್ಮಾನಿಸಿವೆ ಎಂದು ಮೂಲಗಳು ತಿಳಿಸಿವೆ.
ಈ ಅವಿಶ್ವಾಸ ನಿರ್ಣಯವನ್ನು ಭಾರತೀಯ ಸಂವಿಧಾನದ 94ಸಿ ವಿಧಿಯ ಅಡಿಯಲ್ಲಿ ಮಂಡಿಸಲು ವಿಪಕ್ಷಗಳು ನಿರ್ಧರಿಸಿದ್ದು, ಶೀಘ್ರದಲ್ಲೇ ಲೋಕಸಭೆಯಲ್ಲಿ ಶಾಸನಬದ್ಧ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ ಇದೆ. ಈ ನಿರ್ಣಯಕ್ಕೆ ಕನಿಷ್ಠ 100 ಸಂಸದರ ಸಹಿ ಅಗತ್ಯವಿದ್ದು, ವಿವಿಧ ವಿರೋಧ ಪಕ್ಷದ ಸಂಸದರ ಸಹಿ ಸಂಗ್ರಹ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.
ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪ್ರತಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶ ನೀಡದಿರುವುದು, ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ಕ್ರಮ ಕೈಗೊಳ್ಳದಿರುವುದು ಮತ್ತು ಕಾಂಗ್ರೆಸ್ ಮಹಿಳಾ ಸಂಸದರ ವಿರುದ್ಧ ಆಧಾರರಹಿತ ಆರೋಪಗಳು ನಡೆದಿವೆ ಎಂಬುದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಉಪಸ್ಥಿತಿಯಲ್ಲಿ ನಡೆದ ವಿಪಕ್ಷ ನಾಯಕರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಟಿಎಂಸಿ, ಡಿಎಂಕೆ, ಸಮಾಜವಾದಿ ಪಕ್ಷ, ಆರ್ಜೆಡಿ, ಶಿವಸೇನಾ (ಯುಬಿಟಿ), ಎನ್ಸಿಪಿ (ಎಸ್ಪಿ) ಮತ್ತು ಆರ್‌ಎಸ್‌ಪಿ ಸೇರಿದಂತೆ ಹಲವು ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್, ಲೋಕಸಭೆಯಲ್ಲಿ ವಿಪಕ್ಷಗಳಿಗೆ ಮಾತನಾಡಲು ಅವಕಾಶವೇ ಇಲ್ಲದಂತಾಗಿದೆ. ಸರ್ಕಾರದ ಸದಸ್ಯರು ಯಾರ ವಿರುದ್ಧ ಬೇಕಾದರೂ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ವಿಪಕ್ಷ ಸದಸ್ಯರ ಮಾತಿಗೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ, ವಿಪಕ್ಷ ಸದಸ್ಯರ ನಿರಂತರ ಘೋಷಣೆಗಳ ನಡುವೆಯೇ, ಪ್ರಧಾನಿ ಭಾಷಣಕ್ಕೆ ಸಾಂಪ್ರದಾಯಿಕ ಉತ್ತರವಿಲ್ಲದೇ ಲೋಕಸಭೆಯಲ್ಲಿ ವಂದನಾ ನಿರ್ಣಯ ಅಂಗೀಕಾರಗೊಂಡಿತ್ತು. ಈ ಸಂದರ್ಭದಲ್ಲಿ ಸ್ಪೀಕರ್ ಓಂ ಬಿರ್ಲಾ, ಪ್ರಜಾಪ್ರಭುತ್ವದ ಸಂಪ್ರದಾಯಗಳಿಗೆ ಧಕ್ಕೆ ಆಗಬಾರದೆಂದು ಪ್ರಧಾನಿಯವರನ್ನು ಸದನಕ್ಕೆ ಬರದಂತೆ ನಾನೇ ಕೋರಿದ್ದೆ ಎಂದು ಸ್ಪಷ್ಟನೆ ನೀಡಿದ್ದರು.
ಆದರೆ, ಇದಕ್ಕೆ ತೀವ್ರ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಇದು ಶುದ್ಧ ಸುಳ್ಳು. ಪ್ರಧಾನಿ ಸ್ಪೀಕರ್ ಹಿಂದೆ ಅವಿತುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
-
Blog17 hours agoS T SOMASHEKHAR : ಜಿಬಿಎ ಚುನಾವಣೆಗೆ ಸ್ಪಷ್ಟ ನಿಯಮ: ಸ್ಥಳೀಯರಿಗೆ ಮಾತ್ರ ಟಿಕೆಟ್
-
ಕ್ರೀಡೆ14 hours agoT20 WORLD CUP : ಪಾಕ್ಗೆ ಯುಎಸ್ಎ ಆಟಗಾರನ ಖಡಕ್ ಎಚ್ಚರಿಕೆ
-
ಅಪರಾಧ13 hours agoVIRAL NEWS : ಹಾಸಿಗೆಯಲ್ಲಿ ಹಾವಿನ ಪೊರೆ: ಗ್ರಾಮವೇ ಬೆಚ್ಚಿಬಿತ್ತು
-
ದೇಶ16 hours agoಮಂಡ್ಯದಲ್ಲಿ ಎಆರ್ಎಐ ಸ್ಥಾವರ ಸ್ಥಾಪನೆಗೆ 105 ಎಕರೆ ಸರ್ಕಾರಿ ಭೂಮಿ ಸಿದ್ಧ
-
ದೇಶ12 hours agoBENGALURU : BCCI Centre of Excellence ಬೆಂಗಳೂರಿನಲ್ಲಿ 10 ಹುದ್ದೆಗಳ ನೇಮಕಾತಿ
-
ಕ್ರೀಡೆ14 hours agoCRICKET : ಪಿಸಿಬಿಯ ಮೂರು ಬೇಡಿಕೆಗಳಿಗೆ ಐಸಿಸಿ ಶಾಕ್
-
ಅಪರಾಧ11 hours agoಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿಗೆ ನ್ಯಾಯಾಲಯ ನೋಟಿಸ್
-
ದೇಶ17 hours agoMAITHILLI TAKUR : ತಮ್ಮದೇ ಸರ್ಕಾರದ ಸಚಿವರನ್ನು ಪ್ರಶ್ನಿಸಲು ಹಿಂಜರಿಯದ ಯುವ ಶಾಸಕಿ
