ದೇಶ
MAITHILLI TAKUR : ತಮ್ಮದೇ ಸರ್ಕಾರದ ಸಚಿವರನ್ನು ಪ್ರಶ್ನಿಸಲು ಹಿಂಜರಿಯದ ಯುವ ಶಾಸಕಿ
ಪಾಟ್ನಾ:
ಬಿಹಾರ ವಿಧಾನಸಭೆಯಲ್ಲಿ ಈಗ ಎಲ್ಲರ ಗಮನ ಸೆಳೆಯುತ್ತಿರುವ ಹೆಸರು ಎಂದರೆ ಅತ್ಯಂತ ಕಿರಿಯ ವಯಸ್ಸಿನ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್. ಕೇವಲ ಬಿಜೆಪಿ ಅಲೆಯ ಪರಿಣಾಮವಾಗಿ ಗೆದ್ದಿದ್ದಾರೆ ಎನ್ನುವ ಮಾತುಗಳನ್ನು ಸುಳ್ಳು ಮಾಡುತ್ತಿರುವ ಅವರು, ವಿಧಾನಸಭಾ ಕಲಾಪಗಳಲ್ಲಿ ತಮ್ಮ ದಿಟ್ಟ ನಿಲುವು ಮತ್ತು ಸಕ್ರಿಯ ಭಾಗವಹಿಸುವಿಕೆಯಿಂದ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ.
ವಿಧಾನಸಭೆ ಕಲಾಪಗಳಲ್ಲಿ ನಿರಂತರವಾಗಿ ಪ್ರಶ್ನೆ ಕೇಳುವ ಮೈಥಿಲಿ ಠಾಕೂರ್, ತಮ್ಮದೇ ಪಕ್ಷದ ಸರ್ಕಾರದ ಸಚಿವರನ್ನೂ ಪ್ರಶ್ನಿಸಲು ಹಿಂದೇಟು ಹಾಕುವುದಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ, ಸೋಮವಾರ (ಫೆಬ್ರವರಿ 9) ನಡೆದ ಬಿಹಾರ ಬಜೆಟ್ ಅಧಿವೇಶನದಲ್ಲಿ ತಮ್ಮ ಅಲಿನಗರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಆಸ್ಪತ್ರೆಯ ದುಸ್ಥಿತಿಯನ್ನು ಪ್ರಶ್ನಿಸಿ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರಿಗೆ ಖಡಕ್ ಪ್ರಶ್ನೆ ಕೇಳಿ ಗಮನ ಸೆಳೆದಿದ್ದಾರೆ.
ಕಲಾಪದ ವೇಳೆ ಮಾತನಾಡಿದ ಮೈಥಿಲಿ ಠಾಕೂರ್, ಅಲಿನಗರದಲ್ಲಿರುವ ಸರ್ಕಾರಿ ಆಸ್ಪತ್ರೆ ಕಟ್ಟಡ ಶಿಥೀಲಾವಸ್ಥೆ ತಲುಪಿದ್ದು, ಛಾವಣಿಯಿಂದ ಪ್ಲಾಸ್ಟರ್ ಬೀಳುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. “ಯಾವುದೇ ಸಂದರ್ಭದಲ್ಲಿ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆ ಇದೆ. ಈ ಬಗ್ಗೆ ಆರೋಗ್ಯ ಇಲಾಖೆ ಏನು ಕ್ರಮ ಕೈಗೊಂಡಿದೆ?” ಎಂದು ಅವರು ಸಚಿವರನ್ನು ನೇರವಾಗಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ಮಂಗಲ್ ಪಾಂಡೆ, “ಅಲಿನಗರದ ಸರ್ಕಾರಿ ಆಸ್ಪತ್ರೆ ಕಟ್ಟಡ ಸುಸ್ಥಿತಿಯಲ್ಲಿದೆ” ಎಂದು ಹೇಳಿದರು. ಆದರೆ ಈ ಉತ್ತರದಿಂದ ತೃಪ್ತರಾಗದ ಮೈಥಿಲಿ ಠಾಕೂರ್, “ನಾನು ಸಚಿವರ ಉತ್ತರದಿಂದ ತೃಪ್ತಳಾಗಿಲ್ಲ” ಎಂದು ಸ್ಪಷ್ಟವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಮೈಥಿಲಿ ಠಾಕೂರ್ ಅವರ ಈ ನೇರ ಮಾತುಗಳು ಹಾಗೂ ದಿಟ್ಟ ನಿಲುವು ಕಲಾಪದಲ್ಲಿ ಭಾಗವಹಿಸಿದ್ದ ಎಲ್ಲಾ ಶಾಸಕರ ಗಮನ ಸೆಳೆದಿದ್ದು, ಯುವ ಶಾಸಕಿ ಎಂದೇನು ಹಿಂಜರಿಕೆ ಇಲ್ಲದೆ ಪ್ರಶ್ನಿಸುವ ಅವರ ಶೈಲಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ದೇಶ
ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ ಮತ್ತೊಂದು ಸಂಕಷ್ಟ: ಕ್ರೈಸ್ತ ಧರ್ಮಕ್ಕೆ ಅಪಮಾನ ಆರೋಪ, ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ದೂರು
ಬೆಂಗಳೂರು: ನಟ ಯಶ್ (Yash) ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ (Toxic Cinema) ಚಿತ್ರಕ್ಕೆ ಒಂದರ ಮೇಲೊಂದು ವಿವಾದಗಳು ಎದುರಾಗುತ್ತಿವೆ. ಕೆಲ ದಿನಗಳ ಹಿಂದೆ ಟೀಸರ್‌ನಲ್ಲಿನ ಅಶ್ಲೀಲ ದೃಶ್ಯಗಳನ್ನು ಖಂಡಿಸಿ ಮಹಿಳಾ ಒಕ್ಕೂಟಗಳು ಆಕ್ರೋಶ ವ್ಯಕ್ತಪಡಿಸಿದ್ದರೆ, ಇದೀಗ ರಾಷ್ಟ್ರೀಯ ಕ್ರೈಸ್ತರ ಒಕ್ಕೂಟ ಚಿತ್ರತಂಡದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಟಾಕ್ಸಿಕ್ ಸಿನಿಮಾದ ಕೆಲವು ದೃಶ್ಯಗಳಲ್ಲಿ ಕ್ರೈಸ್ತ ಧರ್ಮಕ್ಕೆ ಅಪಮಾನ ಮಾಡಲಾಗಿದೆ ಹಾಗೂ ಕ್ರೈಸ್ತ ಸಮುದಾಯಕ್ಕೆ ಮುಜುಗರ ಉಂಟುಮಾಡಲಾಗಿದೆ ಎಂದು ಆರೋಪಿಸಿ ನ್ಯಾಷನಲ್ ಕ್ರಿಶ್ಚಿಯನ್ ಫೆಡರೇಷನ್ (National Christian Federation) ಚಲನಚಿತ್ರ ವಾಣಿಜ್ಯ ಮಂಡಳಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಗೃಹಸಚಿವರು ಹಾಗೂ ಸೆನ್ಸಾರ್ ಬೋರ್ಡ್‌ಗೆ ದೂರು ಸಲ್ಲಿಸಿದೆ. ಕ್ರೈಸ್ತರ ದೇವದೂತ ಸಂತ ಮಿಕಯೇಲ್ ಅವರಿಗೆ ಸಂಬಂಧಿಸಿದ ದೃಶ್ಯಗಳಲ್ಲಿ ಅವಮಾನಕಾರಿ ಹಾಗೂ ಅಶ್ಲೀಲ ಚಿತ್ರೀಕರಣ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರೀಯ ಕ್ರೈಸ್ತರ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ಆ ದೃಶ್ಯಗಳನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಸಿನಿಮಾದಲ್ಲಿಯೂ ಸಂತ ಮಿಕಯೇಲ್ ಮುಂದೆ ಚಿತ್ರೀಕರಿಸಿರುವ ದೃಶ್ಯಗಳನ್ನು ತೆಗೆದುಹಾಕಿ, ಕ್ರೈಸ್ತ ಸಮುದಾಯದ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಟಾಕ್ಸಿಕ್ ಟೀಸರ್‌ನಲ್ಲಿನ ಕೆಲವು ದೃಶ್ಯಗಳು ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುತ್ತಿವೆ ಎಂದು ಆರೋಪಿಸಿ ಮಹಿಳಾ ಒಕ್ಕೂಟಗಳು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದವು. ಟೀಸರ್‌ನ ವಿವಾದಾತ್ಮಕ ದೃಶ್ಯಗಳನ್ನು ತೆಗೆದುಹಾಕುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರಿಗೆ ಮನವಿ ಮಾಡಲಾಗಿತ್ತು.
ಒಟ್ಟಾರೆ, ಬಿಡುಗಡೆಗೂ ಮುನ್ನವೇ ‘ಟಾಕ್ಸಿಕ್’ ಸಿನಿಮಾ ಭಾರೀ ವಿವಾದದ ಕೇಂದ್ರಬಿಂದುವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ಯಾವ ತಿರುವು ಪಡೆಯಲಿದೆ ಎಂಬುದರ ಮೇಲೆ ಚಿತ್ರತಂಡದ ನಡೆ ಮಹತ್ವ ಪಡೆದುಕೊಂಡಿದೆ.
ದೇಶ
ಬಿ.ಕೆ. ಹರಿಪ್ರಸಾದ್ ಅವರನ್ನು ತಕ್ಷಣವೇ ರಾಜ್ಯ ಸಂಪುಟಕ್ಕೆ ಸೇರಿಸಿ ಉಪ ಮುಖ್ಯಮಂತ್ರಿ ಮಾಡಬೇಕು: ರಾಷ್ಟ್ರೀಯ ಅಹಿಂದ ಸಂಘಟನೆ ಆಗ್ರಹ
ಬೆಂಗಳೂರು, ಫೆ.10: ಶೋಷಿತರು, ಹಿಂದುಳಿದ ವರ್ಗಗಳು, ದಲಿತರು ಹಾಗೂ ಅಹಿಂದ ಸಮುದಾಯದ ಹಕ್ಕುಗಳಿಗಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ತಕ್ಷಣವೇ ರಾಜ್ಯ ಸಂಪುಟಕ್ಕೆ ಸೇರಿಸಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ರಾಷ್ಟ್ರೀಯ ಅಹಿಂದ ಸಂಘಟನೆ ಸರ್ಕಾರವನ್ನು ಒತ್ತಾಯಿಸಿದೆ. ರಾಷ್ಟ್ರೀಯ ಅಹಿಂದ ಸಂಘಟನೆಯ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ಹಾಗೂ ಕರ್ನಾಟಕ ರಾಜ್ಯ ಒಬಿಸಿ ಘಟಕದ ಅಧ್ಯಕ್ಷ ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ಈ ಬೇಡಿಕೆ ಮುಂದಿಡಲಾಗಿದೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕರು, ಬಿ.ಕೆ. ಹರಿಪ್ರಸಾದ್ ಅವರು ಕೇವಲ ರಾಜಕೀಯ ನಾಯಕನಲ್ಲ, ಸಾಮಾಜಿಕ ನ್ಯಾಯದ ಹೋರಾಟಗಾರರಾಗಿದ್ದಾರೆ ಎಂದು ಬಣ್ಣಿಸಿದರು. ಜಾತಿ ಗಣತಿಯಂತಹ ಸಂವೇದನಾಶೀಲ ಹಾಗೂ ಐತಿಹಾಸಿಕ ಮಹತ್ವದ ವಿಷಯದಲ್ಲಿ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಶೋಷಿತ ಸಮುದಾಯಗಳ ಪರವಾಗಿ ಅವರು ದಿಟ್ಟ ನಿಲುವು ತಳೆದಿದ್ದಾರೆ ಎಂದು ಹೇಳಿದರು. ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಮೌಲ್ಯಗಳನ್ನು ರಾಜಕೀಯದ ಕೇಂದ್ರಬಿಂದುವಾಗಿಸಿಕೊಂಡು ನಡೆಸಿರುವ ಅವರ ಹೋರಾಟ ಅಹಿಂದ ಚಳವಳಿಗೆ ಹೊಸ ಬಲ ನೀಡಿದೆ ಎಂದು ಅಭಿಪ್ರಾಯಪಟ್ಟರು.
ಹಿಂದುಳಿದ ವರ್ಗದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ಆಡಳಿತಕ್ಕೆ ರಾಜಕೀಯ ಹಾಗೂ ನೈತಿಕವಾಗಿ ಬಲ ತುಂಬಿದ ನಾಯಕರಲ್ಲಿ ಬಿ.ಕೆ. ಹರಿಪ್ರಸಾದ್ ಪ್ರಮುಖರು ಎಂದು ಹೇಳಿದರು. ಪಕ್ಷದ ಒಳಗೂ ಹೊರಗೂ ಅಹಿಂದ ಧ್ವನಿಯನ್ನು ಸ್ಪಷ್ಟವಾಗಿ ಪ್ರತಿನಿಧಿಸಿರುವ ಇಂತಹ ನಾಯಕನನ್ನು ಸಂಪುಟಕ್ಕೆ ಸೇರಿಸುವುದರಿಂದ ಸರ್ಕಾರದ ವಿಶ್ವಾಸಾರ್ಹತೆ ಇನ್ನಷ್ಟು ಹೆಚ್ಚಲಿದೆ ಎಂದರು.
ಬಿ.ಕೆ. ಹರಿಪ್ರಸಾದ್ ಅವರು ಸಂಪುಟ ಸೇರಿದ್ದಲ್ಲಿ ಅಹಿಂದ ಸಂಘಟನೆಗಳಿಗೆ ಹೊಸ ಶಕ್ತಿ ಸಿಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆಗಳು, ಚರ್ಚೆಗಳು ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನಾಯಕರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಬಿ. ಶಿವಣ್ಣ ಸೇರಿದಂತೆ ಅಹಿಂದ ಕಾರ್ಯಕರ್ತರು ಮತ್ತು ಬಿ.ಕೆ. ಹರಿಪ್ರಸಾದ್ ಬೆಂಬಲಿಗರು ಉಪಸ್ಥಿತರಿದ್ದರು.
ದೇಶ
ಹಿರಿಯ ಪತ್ರಕರ್ತ ಹಾಗೂ ಮಾಜಿ ಎಂಎಲ್‌ಸಿ ಪಿ. ರಾಮಯ್ಯ ನಿಧನ: ಪತ್ರಿಕೋದ್ಯಮದ ‘ತಪಸ್ವಿ’ಗೆ ಅಂತಿಮ ವಿದಾಯ
ಬೆಂಗಳೂರು: ಹಿರಿಯ ಪತ್ರಕರ್ತರು ಹಾಗೂ ಮಾಜಿ ವಿಧಾನಪರಿಷತ್ ಸದಸ್ಯರಾದ ಪಿ. ರಾಮಯ್ಯ (93) (P Ramiah) ಅವರು ಮಂಗಳವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ರಾತ್ರಿ 9 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಅವರ ಪುತ್ರ ಡಾ. ಬಾಲಜಿ ಮಾಹಿತಿ ನೀಡಿದ್ದಾರೆ. ಅವರ ನಿಧನದಿಂದ ಕನ್ನಡ ಪತ್ರಿಕೋದ್ಯಮ ಲೋಕಕ್ಕೆ ಅಪಾರ ನಷ್ಟವಾಗಿದೆ.
1933 ಸೆಪ್ಟೆಂಬರ್ 12ರಂದು ಜನಿಸಿದ ಪಿ. ರಾಮಯ್ಯ ಅವರು ಸುಮಾರು ಐದು ದಶಕಗಳ ಕಾಲ ‘ದಿ ಹಿಂದೂ’ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಅದರಲ್ಲೂ ಸುಮಾರು 45 ವರ್ಷಗಳ ಕಾಲ ಕರ್ನಾಟಕದಲ್ಲಿ The Hindu ಪತ್ರಿಕೆಯ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದು, ಸತ್ಯ, ನೈತಿಕತೆ ಮತ್ತು ಪ್ರಾಮಾಣಿಕತೆಗೆ ಅವರು ಬದ್ಧರಾಗಿದ್ದರು. ಇದೇ ಕಾರಣಕ್ಕೆ ಅವರನ್ನು ‘ಪತ್ರಿಕೋದ್ಯಮದ ತಪಸ್ವಿ’ ಎಂದು ಗೌರವದಿಂದ ಕರೆಯಲಾಗುತ್ತಿತ್ತು.
ಪತ್ರಿಕೋದ್ಯಮದ ಜೊತೆಗೆ ಸಾರ್ವಜನಿಕ ಜೀವನದಲ್ಲೂ ಸಕ್ರಿಯರಾಗಿದ್ದ ರಾಮಯ್ಯ ಅವರು ವಿಧಾನಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿ, ಸರ್ಕಾರದ ನೀತಿ ನಿರೂಪಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಅನುಭವ ಕಥನ “ನಾನು ಹಿಂದೂ ರಾಮಯ್ಯ” ಕೃತಿ, ಪತ್ರಿಕೋದ್ಯಮದ ಮೌಲ್ಯಗಳನ್ನು ಎತ್ತಿ ಹಿಡಿಯುವ ದಾಖಲೆ ಎಂದು ಪರಿಗಣಿಸಲಾಗಿದೆ.
ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಆದಿಚುಂಚನಗಿರಿ ಮಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ರಾಮಯ್ಯ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮತ್ತು ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಬುಧವಾರ ಬೆಳಗ್ಗೆ 9 ಗಂಟೆಯಿಂದ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ ಎಂದು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ ಮಾಹಿತಿ ನೀಡಿದ್ದಾರೆ. ಅವರಿಗೆ ಇಬ್ಬರು ಪುತ್ರರು, ಪುತ್ರಿ ಹಾಗೂ ಅಪಾರ ಬಂಧು ಬಳಗ ಉಳಿದಿದೆ.
-
Blog23 hours agoS T SOMASHEKHAR : ಜಿಬಿಎ ಚುನಾವಣೆಗೆ ಸ್ಪಷ್ಟ ನಿಯಮ: ಸ್ಥಳೀಯರಿಗೆ ಮಾತ್ರ ಟಿಕೆಟ್
-
ಕ್ರೀಡೆ20 hours agoT20 WORLD CUP : ಪಾಕ್ಗೆ ಯುಎಸ್ಎ ಆಟಗಾರನ ಖಡಕ್ ಎಚ್ಚರಿಕೆ
-
ಅಪರಾಧ19 hours agoVIRAL NEWS : ಹಾಸಿಗೆಯಲ್ಲಿ ಹಾವಿನ ಪೊರೆ: ಗ್ರಾಮವೇ ಬೆಚ್ಚಿಬಿತ್ತು
-
ದೇಶ19 hours agoBENGALURU : BCCI Centre of Excellence ಬೆಂಗಳೂರಿನಲ್ಲಿ 10 ಹುದ್ದೆಗಳ ನೇಮಕಾತಿ
-
ದೇಶ22 hours agoಮಂಡ್ಯದಲ್ಲಿ ಎಆರ್ಎಐ ಸ್ಥಾವರ ಸ್ಥಾಪನೆಗೆ 105 ಎಕರೆ ಸರ್ಕಾರಿ ಭೂಮಿ ಸಿದ್ಧ
-
ಅಪರಾಧ17 hours agoಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿಗೆ ನ್ಯಾಯಾಲಯ ನೋಟಿಸ್
-
ಕ್ರೀಡೆ17 hours ago“ಈ ನಾಟಕ ಮೊದಲೇ ಗೊತ್ತಿತ್ತು” – ರಿಕಿ ಪಾಂಟಿಂಗ್
-
ಕ್ರೀಡೆ21 hours agoCRICKET : ಪಿಸಿಬಿಯ ಮೂರು ಬೇಡಿಕೆಗಳಿಗೆ ಐಸಿಸಿ ಶಾಕ್
