ದೇಶ
“ನನಗೆ ಯಾವುದೇ ನೋವಿಲ್ಲ”: ರಾಜೀನಾಮೆ ಬಗ್ಗೆ ಸಿದ್ದರಾಮಯ್ಯ ಭಾವುಕ ಮಾತು
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಕುರಿತ ಊಹಾಪೋಹಗಳಿಗೆ ತೆರೆ ಎಳೆಯುವ ರೀತಿಯಲ್ಲಿ ವಿದಾಯ ಉಪಹಾರ ಸಭೆಯಲ್ಲಿ ಭಾವುಕವಾಗಿ ಮಾತನಾಡಿದ್ದಾರೆ. “ನನಗೆ ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಅವರು ಸಚಿವ ಸಂಪುಟದ ಸಹೋದ್ಯೋಗಿಗಳ ಎದುರು ಸ್ಪಷ್ಟಪಡಿಸಿದ್ದಾರೆ.
ಗುರುವಾರ ಬೆಳಗ್ಗೆ ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ನಡೆದ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವನ್ನು ಗೌರವಿಸುವುದು ತಮ್ಮ ಕರ್ತವ್ಯ ಎಂದು ಹೇಳಿದ್ದಾರೆ. “ಹೈಕಮಾಂಡ್ ಹೇಳುವುದನ್ನು ಪಾಲನೆ ಮಾಡುವುದು ನನ್ನ ಜವಾಬ್ದಾರಿ” ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆ ಕುರಿತು ಮಹತ್ವದ ಸಂದೇಶ ನೀಡಿದ್ದಾರೆ.
ಸಭೆಯಲ್ಲಿ ಸಿದ್ದರಾಮಯ್ಯ ಅವರು ಈ ಹಿಂದೆ ನಡೆದಿದ್ದ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಸಹ ಉಲ್ಲೇಖ ಮಾಡಿದ್ದು, ಅದರ ಅನ್ವಯವೇ ಈ ನಿರ್ಧಾರ ಕೈಗೊಂಡಿರುವ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸಚಿವ ಸಂಪುಟದ ಸಹೋದ್ಯೋಗಿಗಳ ಸಮ್ಮುಖದಲ್ಲೇ ರಾಜೀನಾಮೆ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿರುವುದು ಕಾಂಗ್ರೆಸ್ ವಲಯದಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಲು ಸಿದ್ದರಾಮಯ್ಯ ನಿರಾಕರಿಸಿದರು. “ಮುಂದಿನ ಸಿಎಂ ಯಾರು ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ನಾಯಕರು ಮುಂದಿನ ಎಲ್ಲ ಪ್ರಕ್ರಿಯೆಗಳನ್ನು ನಡೆಸುತ್ತಾರೆ” ಎಂದು ಅವರು ಹೇಳಿದರು.
ಈ ನಡುವೆ ಡಿಕೆ ಶಿವಕುಮಾರ್ ಹೆಸರು ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಪ್ರಕ್ರಿಯೆ ಇದೀಗ ನಿರ್ಣಾಯಕ ಹಂತ ತಲುಪಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಾಗೂ ಹೈಕಮಾಂಡ್ ಮುಂದಿನ ನಡೆಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಕ್ರೀಡೆ
ವೈಭವ್ ಸೂರ್ಯವಂಶಿ ಆಟಕ್ಕೆ ಕಮಿನ್ಸ್ ಫಿದಾ: ‘ಅವನನ್ನು ತಡೆಯಲು ಸಾಧ್ಯವಿಲ್ಲ’
ನವದೆಹಲಿ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿ ಅಂತಿಮ ಹಂತ ತಲುಪಿರುವ ಸಂದರ್ಭದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಈ ಸೋಲಿನ ಬಳಿಕ ಮಾತನಾಡಿದ ತಂಡದ ನಾಯಕ ಪ್ಯಾಟ್ ಕಮಿನ್ಸ್, ನಿರ್ಣಾಯಕ ಘಟ್ಟಗಳಲ್ಲಿ ಸರಣಿ ವಿಕೆಟ್ ಕಳೆದುಕೊಂಡಿದ್ದೇ ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ನ್ಯೂ ಚಂಡೀಗಢದ ಮುಲ್ಲನ್ಪುರ್ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 47 ರನ್‌ಗಳ ಭರ್ಜರಿ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ, ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿತು. ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿದ ಸೂರ್ಯವಂಶಿ ಶತಕದ ಅಂಚಿನಲ್ಲಿ ಔಟಾದರೆ, ಧ್ರುವ್ ಜುರೆಲ್ 50 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು.
244 ರನ್‌ಗಳ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ 19.2 ಓವರ್‌ಗಳಲ್ಲಿ 196 ರನ್‌ಗಳಿಗೆ ಆಲೌಟ್ ಆಯಿತು. ನಿತೀಶ್ ಕುಮಾರ್ ರೆಡ್ಡಿ, ಸಲೀಲ್ ಅರೋರಾ ಹಾಗೂ ಇಶಾನ್ ಕಿಶನ್ ಹೋರಾಟ ನಡೆಸಿದರೂ ಗೆಲುವು ಸಾಧ್ಯವಾಗಲಿಲ್ಲ. ರಾಜಸ್ಥಾನ ಪರ ಜೋಫ್ರಾ ಆರ್ಚರ್ 3 ವಿಕೆಟ್ ಪಡೆದು ಮಿಂಚಿದರು.
ಪಂದ್ಯದ ಬಳಿಕ ಮಾತನಾಡಿದ ಪ್ಯಾಟ್ ಕಮಿನ್ಸ್, “ಪಿಚ್ ಬ್ಯಾಟಿಂಗ್‌ಗೆ ಅತ್ಯಂತ ಅನುಕೂಲಕರವಾಗಿತ್ತು. 244 ರನ್ ಗುರಿ ಬೆನ್ನಟ್ಟಲು ಸಾಧ್ಯವಿತ್ತು. ಆದರೆ ಪ್ರಮುಖ ಘಟ್ಟಗಳಲ್ಲಿ ವಿಕೆಟ್ ಕಳೆದುಕೊಂಡದ್ದು ಪಂದ್ಯ ಕೈತಪ್ಪಲು ಕಾರಣವಾಯಿತು” ಎಂದು ಹೇಳಿದರು.
ಇದೇ ವೇಳೆ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್‌ನ್ನು ಕಮಿನ್ಸ್ ಮುಕ್ತಕಂಠದಿಂದ ಶ್ಲಾಘಿಸಿದರು. “ಅವನು ಆ ರೀತಿಯಲ್ಲಿ ಬ್ಯಾಟ್ ಬೀಸುತ್ತಿದ್ದಾಗ ಬೌಲರ್‌ಗಳು ಏನೂ ಮಾಡಲು ಸಾಧ್ಯವಿಲ್ಲ. ಯಾರ್ಕರ್‌ಗಳನ್ನೂ ಸಿಕ್ಸರ್‌ಗೆ ಅಟ್ಟುತ್ತಿದ್ದ ರೀತಿ ಅದ್ಭುತ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೂರು ವರ್ಷಗಳಲ್ಲಿ ಎರಡನೇ ಬಾರಿ ಪ್ಲೇಆಫ್ ತಲುಪಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಕಮಿನ್ಸ್, ಯುವ ಆಟಗಾರರ ಪ್ರದರ್ಶನದ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದರು.
ದೇಶ
ಎಸ್‌ಐಆರ್-2026 ಪ್ರಕ್ರಿಯೆಗೆ ಚಾಲನೆ: ಬಿಎಲ್‌ಒಗಳಿಗೆ ಕಟ್ಟುನಿಟ್ಟಿನ ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (SIR)-2026 ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆತಿದ್ದು, ಈ ಕಾರ್ಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ ಎಂದು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಕುಕುಮಾರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಪರಿಷ್ಕರಣೆ ವೇಳೆ ಉದ್ದೇಶಪೂರ್ವಕವಾಗಿ ಅರ್ಹ ಮತದಾರರ ಹೆಸರನ್ನು ಕೈಬಿಟ್ಟರೆ ಅಥವಾ ಕರ್ತವ್ಯಲೋಪ ಎಸಗಿದರೆ ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳ (BLO) ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನ ವಾರ್ತಾ ಸೌಧದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ನಡೆದ ಮಾಧ್ಯಮ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, “ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಹಾಗೂ ಅನರ್ಹ ವ್ಯಕ್ತಿಗಳು ಪಟ್ಟಿಯಲ್ಲಿ ಉಳಿಯಬಾರದು ಎಂಬ ಉದ್ದೇಶದಿಂದ ಈ ಸಮಗ್ರ ಪರಿಷ್ಕರಣೆ ಕೈಗೊಳ್ಳಲಾಗಿದೆ” ಎಂದು ಹೇಳಿದರು.
ಈ ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗುವುದು ಎಂದು ತಿಳಿಸಿದ ಅವರು, ಬಿಎಲ್‌ಒಗಳು ಪ್ರತಿಯೊಬ್ಬ ಮತದಾರರ ಮನೆಗೆ ಭೇಟಿ ನೀಡಿ ಅವರ ಸಹಿಯೊಂದಿಗೆ ಎಣಿಕೆ ಫಾರ್ಮ್ ಹಾಗೂ ಅಗತ್ಯ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ ಎಂದು ವಿವರಿಸಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ ಎಂದು ಹೇಳಿದ ಅನ್ಕುಕುಮಾರ್, ಸಾರ್ವಜನಿಕರಿಗೆ ಉಂಟಾಗುವ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲೇ ಪರಿಹರಿಸಲು ಪಂಚಾಯತ್ ಮಟ್ಟದಲ್ಲಿ ವಿಶೇಷ ಸಹಾಯ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ರಾಜಕೀಯ ಪಕ್ಷಗಳ ಭಾಗವಹಿಸುವಿಕೆ ಕುರಿತು ಮಾಹಿತಿ ನೀಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಒಟ್ಟು 69,977 ಬೂತ್ ಮಟ್ಟದ ಏಜೆಂಟರು (BLA) ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು. ಇದರಲ್ಲಿ ಕಾಂಗ್ರೆಸ್ ಪಕ್ಷದ 36,213, ಬಿಜೆಪಿ 31,115 ಹಾಗೂ ಜೆಡಿಎಸ್ 2,316 ಏಜೆಂಟರು ಸೇರಿದ್ದಾರೆ.
ಕಾರ್ಯಾಗಾರದಲ್ಲಿ ಜಂಟಿ ಮುಖ್ಯ ಚುನಾವಣಾಧಿಕಾರಿ ರಾಘವೇಂದ್ರ, ಉಪ ಮುಖ್ಯ ಚುನಾವಣಾಧಿಕಾರಿ ವಂದನಾ ಹಾಗೂ ಸಹಾಯಕ ಮುಖ್ಯ ಚುನಾವಣಾಧಿಕಾರಿ ಮಹೇಂದ್ರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ದೇಶ
‘ಅಪ್ಪಾಜಿ ಹೋಗಬೇಡಿ’: ಸಿದ್ದರಾಮಯ್ಯ ನೋಡಿ ಸಿಬ್ಬಂದಿ ಕಣ್ಣೀರು
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 28ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ನಡುವೆಯೇ, ವಿಧಾನಸೌಧದಲ್ಲಿ ಭಾವುಕ ದೃಶ್ಯಗಳು ಕಂಡುಬಂದಿವೆ. ವಿಶೇಷವಾಗಿ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೆಲ ಮಹಿಳಾ ಸಿಬ್ಬಂದಿ ಹಾಗೂ ಗುತ್ತಿಗೆ ಆಧಾರಿತ ನೌಕರರು ಕಣ್ಣೀರಿಟ್ಟು ಸಿಎಂಗೆ ವಿದಾಯ ಹೇಳಿದ ಘಟನೆ ಗಮನ ಸೆಳೆಯಿತು.
“ಅಪ್ಪಾಜಿ… ನೀವು ಹೋದ್ರೆ ನಮ್ಮನ್ನ ಕೈ ಬಿಡ್ತಾರೆ” ಎಂದು ಕೆಲ ಸಿಬ್ಬಂದಿ ಭಾವುಕರಾಗಿ ಗೋಳಾಡಿದರೆ, “ನಿಮ್ಮ ಹೆಸರು ಹೇಳಿಕೊಂಡೇ ಬದುಕುತ್ತಿದ್ದೇವೆ” ಎಂದು ಹೇಳುತ್ತಾ ನೌಕರರು ಕಣ್ಣೀರು ಹಾಕಿದರು. ಸಿದ್ದರಾಮಯ್ಯ ಅವರೊಂದಿಗೆ ಹೊಂದಿದ್ದ ಆತ್ಮೀಯತೆಯನ್ನು ವ್ಯಕ್ತಪಡಿಸಿದ ಸಿಬ್ಬಂದಿಯ ಭಾವನಾತ್ಮಕ ಮಾತುಗಳು ಅಲ್ಲಿ ನೆರೆದಿದ್ದವರ ಮನಸ್ಸನ್ನು ಮಿಡಿಯುವಂತೆ ಮಾಡಿತು.
ಈ ಭಾವುಕ ಕ್ಷಣಗಳ ನಡುವೆಯೂ ಸಿದ್ದರಾಮಯ್ಯ ಅವರು ತಮ್ಮ ಎಂದಿನ ಶೈಲಿಯಲ್ಲೇ ಶಾಂತವಾಗಿ ನಡೆದುಕೊಂಡರು. ಯಾವುದೇ ಪ್ರತಿಕ್ರಿಯೆ ನೀಡದೇ, ಸಣ್ಣ ನಗೆಯೊಂದಿಗೆ ವಿಷಲ್ ಹೊಡೆದುಕೊಂಡೇ ಅಲ್ಲಿಂದ ತೆರಳಿದ ದೃಶ್ಯ ಹಲವರ ಗಮನ ಸೆಳೆಯಿತು. ರಾಜಕೀಯದ ತೀವ್ರ ಬೆಳವಣಿಗೆಗಳ ನಡುವೆಯೂ ಅವರ ಸಮಾಧಾನಭರಿತ ನಡೆ ವಿಶೇಷ ಚರ್ಚೆಗೆ ಕಾರಣವಾಯಿತು.
ಇನ್ನೊಂದೆಡೆ, ವಿಧಾನಸೌಧದ ಆವರಣದಲ್ಲಿ ಸಿಎಂ ಅಭಿಮಾನಿಗಳು ಹಾಗೂ ಸಿಬ್ಬಂದಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. “ಸಿದ್ದರಾಮಯ್ಯ ಬೇಕು” ಎಂದು ಘೋಷಣೆ ಕೂಗಿದ ಅಭಿಮಾನಿಗಳು ಸಿಎಂ ಪರ ಬೆಂಬಲ ವ್ಯಕ್ತಪಡಿಸಿದರು. ಆದರೆ ಸಿದ್ದರಾಮಯ್ಯ ಅವರು ಯಾವುದೇ ರಾಜಕೀಯ ಹೇಳಿಕೆ ನೀಡದೇ ಮೌನವಾಗಿ ಅಲ್ಲಿಂದ ನಿರ್ಗಮಿಸಿದರು.
ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ತೀವ್ರವಾಗಿರುವ ವೇಳೆಯಲ್ಲೇ ವಿಧಾನಸೌಧದಲ್ಲಿ ಕಂಡುಬಂದ ಈ ಭಾವುಕ ದೃಶ್ಯಗಳು ಕಾಂಗ್ರೆಸ್ ವಲಯದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.
-
ದೇಶ23 hours agoಕರ್ನಾಟಕಕ್ಕೆ ಹೊಸ ಸಿಎಂ? ಡಿಕೆ ಶಿವಕುಮಾರ್ ಪಾಲಿಗೆ ‘ಶುಭ ಶುಕ್ರವಾರ’ ಫಿಕ್ಸ್!
-
ದೇಶ2 hours agoಸಿಎಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆ ಶಿವಕುಮಾರ್
-
ಕ್ರೀಡೆ24 hours ago“That’s a silly question!”: ಆರ್ಸಿಬಿ ಸೋಲಿನ ಬಳಿಕ ಪತ್ರಕರ್ತರ ಮೇಲೆ ಫಿಲಿಪ್ಸ್ ಸಿಡಿತ
-
ದೇಶ22 hours agoಕಾಂಗ್ರೆಸ್ನಲ್ಲಿ ಭಾರಿ ಶಿಸ್ತು ಕ್ರಮ: ನಟಿ ಭಾವನಾ ರಾಮಣ್ಣ ಸೇರಿ ಹಲವರಿಗೆ ಶಾಕ್
-
ದೇಶ2 hours ago‘ಸಿದ್ದರಾಮಯ್ಯ ಹಳೇ ಹುಲಿ’: ಶೋಭಾ ಕರಂದ್ಲಾಜೆ ಕುತೂಹಲಕಾರಿ ಹೇಳಿಕೆ
-
ದೇಶ3 hours agoBreaking News : “ಮತ್ತೆ ದಾಳಿ ಮಾಡಿದರೆ ಸರ್ವನಾಶ”: ಅಮೆರಿಕಕ್ಕೆ ಇರಾನ್ ಖಡಕ್ ಎಚ್ಚರಿಕೆ
-
ದೇಶ3 hours agoLatest : ‘5 ವರ್ಷ ಸಿದ್ದರಾಮಯ್ಯ ಸಿಎಂ’ ಘೋಷಣೆ ನಡುವೆ ಡಿಕೆಶಿ ಕಾವೇರಿ ನಿವಾಸಕ್ಕೆ ಎಂಟ್ರಿ
-
ದೇಶ3 hours agoರಾಹುಲ್ ಗಾಂಧಿ ನಿರ್ಧಾರದಿಂದ ರಾಜ್ಯ ಕಾಂಗ್ರೆಸ್ಗೆ ಹೊಸ ಚೈತನ್ಯ: ಪಿ ಗಾಂಧಿ
