Connect with us

ಕ್ರೀಡೆ

ಸತತ 2ನೇ ಕಿರೀಟ ಗೆದ್ದ ಆರ್‌ಸಿಬಿ; ಫೈನಲ್ ಬಳಿಕ ಗುಜರಾತ್ ಬಸ್‌ನಲ್ಲಿ ಬೆಂಕಿ

Published

on

ಅಹಮದಾಬಾದ್: IPL 2026ರ ಗ್ರ್ಯಾಂಡ್ ಫಿನಾಲೆ ಮುಗಿದ ಕೆಲವೇ ಗಂಟೆಗಳಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಆಘಾತಕಾರಿ ಅನುಭವ ಎದುರಾಯಿತು. ನರೇಂದ್ರ ಮೋದಿ ಕ್ರೀಡಾಂಗಣದಿಂದ ಹೋಟೆಲ್‌ಗೆ ತೆರಳುತ್ತಿದ್ದ ವೇಳೆ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ತಾಂತ್ರಿಕ ದೋಷದಿಂದ ಹೊಗೆ ಕಾಣಿಸಿಕೊಂಡು ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

ಭಾನುವಾರ ತಡರಾತ್ರಿ ನಡೆದ ಈ ಘಟನೆ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತು. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಸ್‌ನ ಎಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಹೊಗೆ ಹೊರಬರಲು ಆರಂಭಿಸಿತು. ಚಾಲಕ ಹಾಗೂ ಭದ್ರತಾ ಸಿಬ್ಬಂದಿ ಪರಿಸ್ಥಿತಿಯನ್ನು ತಕ್ಷಣ ಗಮನಿಸಿ ಬಸ್‌ನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದರು. ಬಳಿಕ ನಾಯಕ Shubman Gill ಸೇರಿದಂತೆ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.

ಘಟನೆಯಿಂದಾಗಿ ಗುಜರಾತ್ ತಂಡದ ಸದಸ್ಯರು ಸುಮಾರು ಒಂದು ಗಂಟೆ ಕಾಲ ರಸ್ತೆಯಲ್ಲೇ ಕಾಯಬೇಕಾಯಿತು. ನಂತರ ಆಡಳಿತವು ಪರ್ಯಾಯ ಬಸ್ ವ್ಯವಸ್ಥೆ ಮಾಡಿ ಎಲ್ಲರನ್ನು ಸುರಕ್ಷಿತವಾಗಿ ಹೋಟೆಲ್‌ಗೆ ಕರೆದೊಯ್ದಿತು. ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ತಂಡದ ನಿರ್ವಹಣಾ ಮಂಡಳಿ ಸ್ಪಷ್ಟಪಡಿಸಿದೆ.

ಇನ್ನೊಂದೆಡೆ, ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ವಿಭಾಗ ಸಂಪೂರ್ಣ ವಿಫಲವಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ತಂಡ 155 ರನ್‌ಗಳಿಗೆ ಆಲೌಟ್ ಆಯಿತು. ಶುಭಮನ್ ಗಿಲ್, ಸಾಯಿ ಸುದರ್ಶನ್ ಹಾಗೂ Jos Buttler ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಆದರೆ Washington Sundar 37 ಎಸೆತಗಳಲ್ಲಿ 50 ರನ್ ಗಳಿಸಿ ತಂಡದ ಪರ ಹೋರಾಟ ನಡೆಸಿದರು.

ಆರ್‌ಸಿಬಿ ಪರ Bhuvneshwar Kumar, Josh Hazlewood ಹಾಗೂ Rasikh Salam ಒಟ್ಟಾಗಿ 7 ವಿಕೆಟ್‌ಗಳನ್ನು ಕಬಳಿಸಿ ಗುಜರಾತ್ ತಂಡವನ್ನು ಕಟ್ಟಿಹಾಕಿದರು.

155 ರನ್ ಗುರಿ ಬೆನ್ನತ್ತಿದ ಆರ್‌ಸಿಬಿಗೆ Virat Kohli ಅಜೇಯ 75 ರನ್ ಸಿಡಿಸಿ ಗೆಲುವಿನ ಶಿಲ್ಪಿಯಾಗಿದರು. ವೆಂಕಟೇಶ್ ಅಯ್ಯರ್ 32 ಮತ್ತು ಟಿಮ್ ಡೇವಿಡ್ 24 ರನ್‌ಗಳ ಕೊಡುಗೆ ನೀಡಿದರು. ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿ IPL ಟ್ರೋಫಿ ಗೆದ್ದು, Chennai Super Kings ಹಾಗೂ Mumbai Indians ಬಳಿಕ ಈ ಸಾಧನೆ ಮಾಡಿದ ಮೂರನೇ ತಂಡವಾಗಿ ದಾಖಲೆ ಬರೆದಿದೆ.

ಕ್ರೀಡೆ

ವಿರಾಟ್ ಕೊಹ್ಲಿ ಮಾಸ್ಟರ್ ಕ್ಲಾಸ್; ಆರ್‌ಸಿಬಿ ಐತಿಹಾಸಿಕ ಗೆಲುವಿಗೆ MLA S T Somashekhar ಮೆಚ್ಚುಗೆ

Published

on

ಬೆಂಗಳೂರು: ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಸಂತಸ ವ್ಯಕ್ತಪಡಿಸಿದ ಅವರು, ಆರ್‌ಸಿಬಿ ತಂಡದ ಎಲ್ಲ ಆಟಗಾರರು, ತರಬೇತುದಾರರು ಹಾಗೂ ನಿರ್ವಹಣಾ ಮಂಡಳಿಗೆ ಶುಭಾಶಯ ಕೋರಿದರು. ಫೈನಲ್ ಪಂದ್ಯದಲ್ಲಿ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ವೆಂಕಟೇಶ್ ಅಯ್ಯರ್ ಅವರೊಂದಿಗೆ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ಗುರಿ ಬೆನ್ನತ್ತಿದ ಆರಂಭದಲ್ಲೇ ವಿರಾಟ್ ಕೊಹ್ಲಿ ಹಾಗೂ ವೆಂಕಟೇಶ್ ಅಯ್ಯರ್ ಅವರ ಆಕರ್ಷಕ ಆಟದಿಂದ ಆರ್‌ಸಿಬಿ ತಂಡ ಪವರ್‌ಪ್ಲೇನಲ್ಲೇ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು. ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಅನುಭವ ಮತ್ತು ಕ್ಲಾಸ್ ತೋರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು,” ಎಂದು ಎಸ್.ಟಿ. ಸೋಮಶೇಖರ್ ಹೇಳಿದರು.

ತಾವು ಆರ್‌ಸಿಬಿಯ ದೊಡ್ಡ ಅಭಿಮಾನಿಯಾಗಿದ್ದು, ತಂಡವು ಎರಡನೇ ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವುದು ಅಪಾರ ಸಂತಸ ತಂದಿದೆ ಎಂದರು. “ನಿನ್ನೆ ಬೆಂಗಳೂರಿನಲ್ಲಿ ಮಾತ್ರವಲ್ಲ, ಇಡೀ ಕರ್ನಾಟಕ ರಾಜ್ಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಲಕ್ಷಾಂತರ ಆರ್‌ಸಿಬಿ ಅಭಿಮಾನಿಗಳು ತಂಡದ ಐತಿಹಾಸಿಕ ಗೆಲುವನ್ನು ಸಂಭ್ರಮದಿಂದ ಆಚರಿಸಿದರು. ಕರ್ನಾಟಕದ ಹೆಮ್ಮೆ ಎನಿಸಿರುವ ಆರ್‌ಸಿಬಿ ಮತ್ತೊಮ್ಮೆ ಚಾಂಪಿಯನ್ ಆಗಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ,” ಎಂದು ಹೇಳಿದರು.

ಆರ್‌ಸಿಬಿ ಅಭಿಮಾನಿಗಳ ಬಹುಕಾಲದ ಕನಸಾಗಿದ್ದ ‘ಈ ಸಲ ಕಪ್ ನಮ್ದೇ’ ಎಂಬ ಘೋಷಣೆ ಇದೀಗ ಮತ್ತೊಮ್ಮೆ ನಿಜವಾಗಿದೆ. ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದು ಆರ್‌ಸಿಬಿ ಐಪಿಎಲ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. ಈ ಗೆಲುವು ಕರ್ನಾಟಕದ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಿಗೆ ಮರೆಯಲಾಗದ ಕ್ಷಣಗಳನ್ನು ನೀಡಿದೆ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಸಂತಸ ವ್ಯಕ್ತಪಡಿಸಿದರು.

Continue Reading

ಕ್ರೀಡೆ

15ರ ಹರೆಯದಲ್ಲೇ ಐಪಿಎಲ್ ಇತಿಹಾಸ ನಿರ್ಮಿಸಿದ ವೈಭವ್ ಸೂರ್ಯವಂಶಿ! 5 ಪ್ರಶಸ್ತಿಗಳೊಂದಿಗೆ ಭರ್ಜರಿ ದಾಖಲೆ

Published

on

ಅಹಮದಾಬಾದ್‌: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ಆವೃತ್ತಿಯಲ್ಲಿ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಹೊಸ ಇತಿಹಾಸ ಬರೆದಿದ್ದಾರೆ. ಕೇವಲ 15 ವರ್ಷದ ವಯಸ್ಸಿನಲ್ಲೇ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳನ್ನು ಕಲೆಹಾಕಿ ಆರೆಂಜ್ ಕ್ಯಾಪ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಅಪರೂಪದ ದಾಖಲೆಗೆ ಅವರು ಪಾತ್ರರಾಗಿದ್ದಾರೆ.

ಪ್ರಸಕ್ತ ಆವೃತ್ತಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ Vaibhav Suryavanshi, 16 ಪಂದ್ಯಗಳಲ್ಲಿ ಒಟ್ಟು 776 ರನ್‌ಗಳನ್ನು ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಮೂಲಕ ಕಳೆದ ಆವೃತ್ತಿಯಲ್ಲಿ 15 ಪಂದ್ಯಗಳಿಂದ 759 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದ Sai Sudharsan ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಸಾಯಿ ಸುದರ್ಶನ್ 23 ವರ್ಷ ವಯಸ್ಸಿನಲ್ಲಿ ಸಾಧಿಸಿದ್ದ ಈ ಮೈಲಿಗಲ್ಲನ್ನು ವೈಭವ್ ಕೇವಲ 15ನೇ ವಯಸ್ಸಿನಲ್ಲಿ ಮುಟ್ಟಿರುವುದು ವಿಶೇಷ.

ಆರೆಂಜ್ ಕ್ಯಾಪ್ ಗೆಲ್ಲುವುದರ ಜೊತೆಗೆ ವೈಭವ್ ಸೂರ್ಯವಂಶಿ ಟೂರ್ನಿಯ ವಿವಿಧ ವಿಭಾಗಗಳಲ್ಲಿ ಪ್ರಾಬಲ್ಯ ಮೆರೆದು ಒಟ್ಟು ಐದು ಪ್ರಮುಖ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಟೂರ್ನಿಯ ಅತ್ಯುತ್ತಮ ಆಟಗಾರ (Most Valuable Player) ಪ್ರಶಸ್ತಿಯನ್ನು 436.5 ಪಾಯಿಂಟ್ಸ್‌ಗಳೊಂದಿಗೆ ಗೆದ್ದ ಅವರು 15 ಲಕ್ಷ ರೂ. ಬಹುಮಾನ ಪಡೆದರು. 237.3 ಸ್ಟ್ರೈಕ್‌ರೇಟ್‌ನೊಂದಿಗೆ ರನ್‌ಗಳ ಸುರಿಮಳೆಗೈದು ಸೂಪರ್ ಸ್ಟ್ರೈಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದು, ಇದರೊಂದಿಗೆ Tata Sierra ಕಾರನ್ನೂ ಬಹುಮಾನವಾಗಿ ಪಡೆದಿದ್ದಾರೆ.

ಇದಲ್ಲದೆ, ಟೂರ್ನಿಯಲ್ಲಿ ಬರೋಬ್ಬರಿ 75 ಸಿಕ್ಸರ್‌ಗಳನ್ನು ಸಿಡಿಸಿ ಸೂಪರ್ ಸಿಕ್ಸರ್ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಉದಯೋನ್ಮುಖ ಆಟಗಾರ (Emerging Player of the Season) ಗೌರವವೂ ಇವರ ಪಾಲಾಗಿದೆ. ಈ ಎಲ್ಲ ಸಾಧನೆಗಳ ಮೂಲಕ ಒಟ್ಟು 45 ಲಕ್ಷ ರೂ. ನಗದು ಬಹುಮಾನ ಹಾಗೂ ಟಾಟಾ ಸಿಯೆರಾ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹದಿನೈದರ ಹರೆಯದಲ್ಲೇ ಅನುಭವಿ ಬೌಲರ್‌ಗಳನ್ನು ಧೂಳಿಪಟ ಮಾಡಿ ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಐದು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿರುವ ವೈಭವ್ ಸೂರ್ಯವಂಶಿ, ಭಾರತೀಯ ಕ್ರಿಕೆಟ್‌ನ ಮುಂದಿನ ಸೂಪರ್‌ಸ್ಟಾರ್ ಎಂಬ ಭರವಸೆಯನ್ನು ಮೂಡಿಸಿದ್ದಾರೆ.

Continue Reading

ಕ್ರೀಡೆ

ವೈಭವ್ ಸೂರ್ಯವಂಶಿ ಆಟಕ್ಕೆ ಕಮಿನ್ಸ್ ಫಿದಾ: ‘ಅವನನ್ನು ತಡೆಯಲು ಸಾಧ್ಯವಿಲ್ಲ’

Published

on

ನವದೆಹಲಿ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿ ಅಂತಿಮ ಹಂತ ತಲುಪಿರುವ ಸಂದರ್ಭದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಈ ಸೋಲಿನ ಬಳಿಕ ಮಾತನಾಡಿದ ತಂಡದ ನಾಯಕ ಪ್ಯಾಟ್ ಕಮಿನ್ಸ್, ನಿರ್ಣಾಯಕ ಘಟ್ಟಗಳಲ್ಲಿ ಸರಣಿ ವಿಕೆಟ್ ಕಳೆದುಕೊಂಡಿದ್ದೇ ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ನ್ಯೂ ಚಂಡೀಗಢದ ಮುಲ್ಲನ್ಪುರ್ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 47 ರನ್‌ಗಳ ಭರ್ಜರಿ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ, ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿತು. ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿದ ಸೂರ್ಯವಂಶಿ ಶತಕದ ಅಂಚಿನಲ್ಲಿ ಔಟಾದರೆ, ಧ್ರುವ್ ಜುರೆಲ್ 50 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು.

244 ರನ್‌ಗಳ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ 19.2 ಓವರ್‌ಗಳಲ್ಲಿ 196 ರನ್‌ಗಳಿಗೆ ಆಲೌಟ್ ಆಯಿತು. ನಿತೀಶ್ ಕುಮಾರ್ ರೆಡ್ಡಿ, ಸಲೀಲ್ ಅರೋರಾ ಹಾಗೂ ಇಶಾನ್ ಕಿಶನ್ ಹೋರಾಟ ನಡೆಸಿದರೂ ಗೆಲುವು ಸಾಧ್ಯವಾಗಲಿಲ್ಲ. ರಾಜಸ್ಥಾನ ಪರ ಜೋಫ್ರಾ ಆರ್ಚರ್ 3 ವಿಕೆಟ್ ಪಡೆದು ಮಿಂಚಿದರು.

ಪಂದ್ಯದ ಬಳಿಕ ಮಾತನಾಡಿದ ಪ್ಯಾಟ್ ಕಮಿನ್ಸ್, “ಪಿಚ್ ಬ್ಯಾಟಿಂಗ್‌ಗೆ ಅತ್ಯಂತ ಅನುಕೂಲಕರವಾಗಿತ್ತು. 244 ರನ್ ಗುರಿ ಬೆನ್ನಟ್ಟಲು ಸಾಧ್ಯವಿತ್ತು. ಆದರೆ ಪ್ರಮುಖ ಘಟ್ಟಗಳಲ್ಲಿ ವಿಕೆಟ್ ಕಳೆದುಕೊಂಡದ್ದು ಪಂದ್ಯ ಕೈತಪ್ಪಲು ಕಾರಣವಾಯಿತು” ಎಂದು ಹೇಳಿದರು.

ಇದೇ ವೇಳೆ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್‌ನ್ನು ಕಮಿನ್ಸ್ ಮುಕ್ತಕಂಠದಿಂದ ಶ್ಲಾಘಿಸಿದರು. “ಅವನು ಆ ರೀತಿಯಲ್ಲಿ ಬ್ಯಾಟ್ ಬೀಸುತ್ತಿದ್ದಾಗ ಬೌಲರ್‌ಗಳು ಏನೂ ಮಾಡಲು ಸಾಧ್ಯವಿಲ್ಲ. ಯಾರ್ಕರ್‌ಗಳನ್ನೂ ಸಿಕ್ಸರ್‌ಗೆ ಅಟ್ಟುತ್ತಿದ್ದ ರೀತಿ ಅದ್ಭುತ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೂರು ವರ್ಷಗಳಲ್ಲಿ ಎರಡನೇ ಬಾರಿ ಪ್ಲೇಆಫ್ ತಲುಪಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಕಮಿನ್ಸ್, ಯುವ ಆಟಗಾರರ ಪ್ರದರ್ಶನದ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದರು.

Continue Reading

Trending