Connect with us

ದೇಶ

ಶಾಂತಿ ಒಪ್ಪಂದ ಮುರಿದಿತೇ? ಹೊರ್ಮುಜ್ ಜಲಸಂಧಿಯಲ್ಲಿ ಮತ್ತೆ ಅಮೆರಿಕಾ-ಇರಾನ್ ಸಂಘರ್ಷ; ಕ್ಷಿಪಣಿ ದಾಳಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ

Published

on

ಟೆಹ್ರಾನ್/ವಾಷಿಂಗ್ಟನ್: ಅಮೆರಿಕಾ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿ ಮೊದಲ ಸುತ್ತಿನ ಮಾತುಕತೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ಅಂತ್ಯವಾಗಬಹುದು ಎಂಬ ನಿರೀಕ್ಷೆ ಮೂಡಿತ್ತು. ಆದರೆ ಆ ಆಶಾವಾದ ಹೆಚ್ಚು ದಿನ ಉಳಿಯದೇ, ಹೊರ್ಮುಜ್ ಜಲಸಂಧಿಯಲ್ಲಿ ಮತ್ತೆ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಬಳಿಕವೂ ಇರಾನ್ ಪಡೆಗಳು ಸಿಂಗಾಪುರ ಧ್ವಜದಡಿ ಸಂಚರಿಸುತ್ತಿದ್ದ M/V ಎವರ್ ಲವ್ಲಿ ಕಾರ್ಗೋ ಹಡಗಿನ ಮೇಲೆ ದಾಳಿ ನಡೆಸಿವೆ ಎಂದು ಅಮೆರಿಕಾ ಆರೋಪಿಸಿದೆ. ಇದನ್ನು ಕದನ ವಿರಾಮದ ಸ್ಪಷ್ಟ ಉಲ್ಲಂಘನೆ ಎಂದು ಬಣ್ಣಿಸಿರುವ ಅಮೆರಿಕಾದ ಸೆಂಟ್ರಲ್ ಕಮಾಂಡ್, ಪ್ರತೀಕಾರವಾಗಿ ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ಸಂಗ್ರಹಣಾ ಕೇಂದ್ರಗಳು ಹಾಗೂ ಕರಾವಳಿ ರಾಡಾರ್ ವ್ಯವಸ್ಥೆಗಳ ಮೇಲೆ ವೈಮಾನಿಕ ದಾಳಿ ನಡೆಸಿರುವುದಾಗಿ ತಿಳಿಸಿದೆ.

ಈ ಬೆಳವಣಿಗೆಗೂ ಮುನ್ನವೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ನ ಕ್ರಮವನ್ನು ಖಂಡಿಸಿ “ಇದು ಕದನ ವಿರಾಮದ ಮೂರ್ಖತನದ ಉಲ್ಲಂಘನೆ” ಎಂದು ಹೇಳಿದ್ದರು. ಪ್ರತೀಕಾರ ಕೈಗೊಳ್ಳುತ್ತೀರಾ ಎಂಬ ಪ್ರಶ್ನೆಗೆ “ನೀವು ಶೀಘ್ರದಲ್ಲೇ ನೋಡುತ್ತೀರಿ” ಎಂದು ನೀಡಿದ್ದ ಪ್ರತಿಕ್ರಿಯೆ ದಾಳಿಯ ಮುನ್ಸೂಚನೆಯಾಗಿತ್ತು.

ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಗಲ್ಫ್ ಪ್ರದೇಶದಲ್ಲಿರುವ ಅಮೆರಿಕಾದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಪ್ರತೀಕಾರದ ದಾಳಿ ನಡೆಸಿದೆ ಎಂದು ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ ಕಾರ್ಪ್ಸ್ (IRGC) ತಿಳಿಸಿದೆ. ಇದೇ ವೇಳೆ, ಗಲ್ಫ್ ಸಹಕಾರ ಮಂಡಳಿ (GCC) ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿರುವ ಇರಾನ್, ಅಮೆರಿಕಾದ ಭದ್ರತಾ ವ್ಯವಸ್ಥೆಯನ್ನು ಅವಲಂಬಿಸುವುದು ಅಪಾಯಕಾರಿ ಎಂದು ಹೇಳಿದೆ.

ಈ ಬೆಳವಣಿಗೆಗಳಿಂದ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡಗಳು ಕವಿದಿದ್ದು, ಜಾಗತಿಕ ತೈಲ ಮಾರುಕಟ್ಟೆ ಹಾಗೂ ಸಮುದ್ರ ವ್ಯಾಪಾರದ ಮೇಲೂ ಪರಿಣಾಮ ಬೀರುವ ಆತಂಕ ಹೆಚ್ಚಾಗಿದೆ. ರಾಜತಾಂತ್ರಿಕರು ಕದನ ವಿರಾಮವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ, ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ.

Continue Reading
Click to comment

Leave a Reply

Your email address will not be published. Required fields are marked *

ದೇಶ

ತೊಡೆ ತಟ್ಟಿ ಸವಾಲು ಹಾಕಿದ ಪ್ರದೀಪ್ ಈಶ್ವರ್; ಲಾಠಿ ಪ್ರಹಾರ ನಡೆಸಿದ ಪೊಲೀಸರು

Published

on

ಚಿಕ್ಕಬಳ್ಳಾಪುರ: ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವು ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ಗದ್ದಲಕ್ಕೆ ವೇದಿಕೆಯಾಗಿದ್ದು, ಶಾಸಕ ಪ್ರದೀಪ್ ಈಶ್ವರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಸಂಸದ ಡಾ. ಕೆ. ಸುಧಾಕರ್ ಬೆಂಬಲಿಗರ ನಡುವೆ ತೀವ್ರ ವಾಗ್ವಾದ, ತಳ್ಳಾಟ-ನೂಕಾಟ ನಡೆದಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಶನಿವಾರ ನಡೆದಿದೆ.

ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಪ್ರದೀಪ್ ಈಶ್ವರ್ ಆಗಮಿಸುತ್ತಿದ್ದಂತೆ, ಕುಮಾರಸ್ವಾಮಿ ಹಾಗೂ ಸಂಸದ ಡಾ. ಕೆ. ಸುಧಾಕರ್ ಬೆಂಬಲಿಗರು ಅವರನ್ನು ವೇದಿಕೆಯಿಂದ ಕೆಳಗಿಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಘಟನಾ ಸ್ಥಳದಲ್ಲಿದ್ದ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿ ಆಕ್ರೋಶಗೊಂಡಿದ್ದ ಎರಡೂ ಗುಂಪುಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿತು. ಪರಿಸ್ಥಿತಿ ಹದಗೆಡುತ್ತಿದ್ದಂತೆ ಶಾಸಕ ಪ್ರದೀಪ್ ಈಶ್ವರ್ ತಮ್ಮ ಬೆಂಬಲಿಗರೊಂದಿಗೆ ಕಾರ್ಯಕ್ರಮದಿಂದ ಹೊರನಡೆದರು. ಈ ವೇಳೆ ವಿರೋಧಿಗಳಿಗೆ ತೊಡೆ ತಟ್ಟಿ ಸವಾಲು ಹಾಕಿದ ದೃಶ್ಯಗಳು ಗಮನ ಸೆಳೆದವು.

ಕನ್ನಡ ಭವನದ ಮುಂಭಾಗದಲ್ಲಿ ಒಕ್ಕಲಿಗ ಯುವಕರು ಹಾಗೂ ಪ್ರದೀಪ್ ಈಶ್ವರ್ ಬೆಂಬಲಿಗರ ನಡುವೆ ಗಲಾಟೆ ತಾರಕಕ್ಕೇರಿತು. ಗುಂಪುಗಳನ್ನು ಚದುರಿಸಲು ಪೊಲೀಸರು ಮಧ್ಯಪ್ರವೇಶಿಸಿ ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಘಟನೆ ಬಳಿಕ ಶಾಸಕ ಪ್ರದೀಪ್ ಈಶ್ವರ್, ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೆಂಪೇಗೌಡ ಜಯಂತಿಯಂತಹ ಸಾಂಸ್ಕೃತಿಕ ಕಾರ್ಯಕ್ರಮ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದ್ದು, ಈ ಘಟನೆ ಜಿಲ್ಲೆಯ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Continue Reading

ದೇಶ

ವಿಕಸಿತ ಭಾರತ 2047 ಗುರಿಗೆ ಕಾರ್ಮಿಕ ಸುಧಾರಣೆ, ಕೌಶಲ್ಯಾಭಿವೃದ್ಧಿ ಒತ್ತು: ಸಂಸದರು-ಶಾಸಕರಿಗೆ NFPRC ಕಾರ್ಯಾಗಾರ

Published

on

ನವದೆಹಲಿ, ಜೂನ್ 26: ವಿಕಸಿತ ಭಾರತ–2047 ಗುರಿ ಸಾಧಿಸಲು ಕಾರ್ಮಿಕರ ಔಪಚಾರಿಕೀಕರಣ, ಸಾರ್ವತ್ರಿಕ ಸಾಮಾಜಿಕ ಭದ್ರತೆ, ಕೌಶಲ್ಯಾಭಿವೃದ್ಧಿ ಹಾಗೂ ಡಿಜಿಟಲ್ ಆಡಳಿತ ಅತ್ಯಗತ್ಯ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಯುವಜನ ವ್ಯವಹಾರಗಳು ಹಾಗೂ ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅಭಿಪ್ರಾಯಪಟ್ಟರು.

ದೆಹಲಿ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನ ಗುಲ್ಮೋಹರ್ ಸಭಾಂಗಣದಲ್ಲಿ ನೇಷನ್ ಫಸ್ಟ್ ಪಾಲಿಸಿ ರಿಸರ್ಚ್ ಅಂಡ್ ಚೇಂಜ್ ಫೌಂಡೇಶನ್ (NFPRC) ಆಯೋಜಿಸಿದ್ದ ಸಂಸದರು ಮತ್ತು ಶಾಸಕರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ದೇಶದ ವಿವಿಧ ರಾಜ್ಯಗಳ ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನಸಭೆಗಳ ಸುಮಾರು 70ಕ್ಕೂ ಹೆಚ್ಚು ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಮಿಕರ ಔಪಚಾರಿಕೀಕರಣ ಹಾಗೂ ಹೊಸ ಕಾರ್ಮಿಕ ಸಂಹಿತೆಗಳ ಮೂಲಕ ಸಾಮಾಜಿಕ ಭದ್ರತೆ ವಿಸ್ತರಣೆ ದೇಶದ ಲಕ್ಷಾಂತರ ಅಸಂಘಟಿತ, ಗಿಗ್ ಹಾಗೂ ವೇದಿಕೆ ಆಧಾರಿತ ಕಾರ್ಮಿಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಸಚಿವರು ಹೇಳಿದರು. ಇ-ಶ್ರಮ್ ಪೋರ್ಟಲ್, ರಾಷ್ಟ್ರೀಯ ವೃತ್ತಿ ಸೇವೆ (NCS) ಹಾಗೂ ಡಿಜಿಟಲ್ ಲೇಬರ್ ಚೌಕ್ ಸೇರಿದಂತೆ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು ಉದ್ಯೋಗಾವಕಾಶಗಳನ್ನು ವಿಸ್ತರಿಸುತ್ತಿವೆ ಎಂದರು.

ಎನ್‌ಎಫ್‌ಪಿಆರ್‌ಸಿ ಅಧ್ಯಕ್ಷ ತರುಣ್ ಚುಗ್ ಅವರು, ಕಾರ್ಮಿಕರ ಔಪಚಾರಿಕೀಕರಣ, ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಮೂಲಕ ಸಮಗ್ರ ಅಭಿವೃದ್ಧಿಗೆ ವೇಗ ನೀಡುವುದು ವಿಕಸಿತ ಭಾರತದ ಪ್ರಮುಖ ಅಡಿಪಾಯ ಎಂದು ತಿಳಿಸಿದರು.

ಹರಿಯಾಣ ವಿಧಾನಸಭೆಯ ಸ್ಪೀಕರ್ ಹರ್ವಿಂದರ್ ಕಲ್ಯಾಣ್ ಅವರು, ಸಾಕ್ಷ್ಯಾಧಾರಿತ ನೀತಿ ರೂಪಣೆ ಹಾಗೂ ಜ್ಞಾನಾಧಾರಿತ ಶಾಸನ ಪ್ರಕ್ರಿಯೆ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ವಿನೋದ್ ತಾವಡೆ ಅವರು ಡಿಜಿಟಲ್ ಸಂವಹನ, ಸಾಮಾಜಿಕ ಮಾಧ್ಯಮ ನಿರ್ವಹಣೆ, ತಪ್ಪು ಮಾಹಿತಿಯನ್ನು ಎದುರಿಸುವ ತಂತ್ರಗಳು ಹಾಗೂ ಜನಸಂಪರ್ಕದ ಮಹತ್ವದ ಕುರಿತು ಶಾಸಕರಿಗೆ ಮಾರ್ಗದರ್ಶನ ನೀಡಿದರು. ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದ (NSDC) ಸಿಇಒ ಅರುಣ್ ಕುಮಾರ್ ಪಿಳ್ಳೈ ಅವರು ಜಾಗತಿಕ ಕೌಶಲ್ಯ ಮಾದರಿಗಳು ಹಾಗೂ ಸ್ಕಿಲ್ ಇಂಡಿಯಾ ಡಿಜಿಟಲ್ ವೇದಿಕೆಯ ಮೂಲಕ ಉದ್ಯೋಗ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದರು.

ಕಾರ್ಯಾಗಾರದ ಕೊನೆಯಲ್ಲಿ ನೀತಿ ಸಂಶೋಧನೆ, ಡಿಜಿಟಲ್ ಆಡಳಿತ, ಜನಕೇಂದ್ರಿತ ಸೇವೆ ಹಾಗೂ ಶಾಸಕರ ಸಾಮರ್ಥ್ಯ ವೃದ್ಧಿಗೆ ಇಂತಹ ಸಂವಾದಗಳು ಅತ್ಯಂತ ಅಗತ್ಯ ಎಂದು ಭಾಗವಹಿಸಿದ ಜನಪ್ರತಿನಿಧಿಗಳು ಅಭಿಪ್ರಾಯಪಟ್ಟರು.

Continue Reading

ದೇಶ

ಅಡುಗೆ ಮನೆ ಬಜೆಟ್‌ಗೆ ಭಾರೀ ಹೊರೆ! ಬೆಂಗಳೂರಿನಲ್ಲಿ ತರಕಾರಿ ಬೆಲೆ ದಿನದಿಂದ ದಿನಕ್ಕೆ ಏರಿಕೆ

Published

on

ಬೆಂಗಳೂರು: ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಮತ್ತೊಂದು ಆಘಾತ ಎದುರಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ತರಕಾರಿ, ಸೊಪ್ಪು ಹಾಗೂ ಹಣ್ಣುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮನೆಗಳ ಮಾಸಿಕ ಬಜೆಟ್‌ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ. ವಿಶೇಷವಾಗಿ ಮಳೆಯ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದ ತರಕಾರಿ ಉತ್ಪಾದನೆ ಕುಂಠಿತವಾಗಿರುವುದರಿಂದ ಮಾರುಕಟ್ಟೆಯಲ್ಲಿ ದರಗಳು ಗಗನಕ್ಕೇರಿವೆ.

ರೈತರು ನಿರೀಕ್ಷಿಸಿದ ಪ್ರಮಾಣದಲ್ಲಿ ಮಳೆಯಾಗದ ಕಾರಣ ಹಲವು ಬೆಳೆಗಳ ಇಳುವರಿ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಮಾರುಕಟ್ಟೆಗೆ ತರಕಾರಿಗಳ ಪೂರೈಕೆ ಇಳಿಕೆಯಾಗಿದ್ದು, ಬೇಡಿಕೆ ಹೆಚ್ಚಾದ ಕಾರಣ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿಯೂ ಮಳೆಯ ಪ್ರಮಾಣ ಕಡಿಮೆಯಾದರೆ ತರಕಾರಿ ಹಾಗೂ ಸೊಪ್ಪಿನ ಬೆಲೆಗಳು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಹಾಪ್‌ಕಾಮ್ಸ್ ಪ್ರಕಟಿಸಿರುವ ಇತ್ತೀಚಿನ ದರಪಟ್ಟಿಯ ಪ್ರಕಾರ, ಹಲವು ತರಕಾರಿಗಳ ಬೆಲೆ ಸಾಮಾನ್ಯ ಗ್ರಾಹಕರಿಗೆ ದುಬಾರಿಯಾಗಿದೆ. ಹುರಳಿಕಾಯಿ ಒಂದು ಕೆ.ಜಿಗೆ ₹110, ಬಿಳಿ ಬದನೆಕಾಯಿ ₹95, ದಪ್ಪ ಮೆಣಸಿನಕಾಯಿ ₹90, ಬಜ್ಜಿ ಮೆಣಸಿನಕಾಯಿ ₹85, ಬಿಳಿ ಹುರಳಿಕಾಯಿ ₹85, ಬಟಾಣಿ ಕಾಳು ₹200, ಹಿರೇಕಾಯಿ ₹60, ಹಾಗಲಕಾಯಿ ₹64, ಶುಂಠಿ ₹177, ಬೆಳ್ಳುಳ್ಳಿ ₹270, ಊಟಿ ಕ್ಯಾರೆಟ್ ₹90, ಡಬಲ್ ಬೀನ್ಸ್ ₹160 ಹಾಗೂ ಗೋರಿಕಾಯಿ ₹70ಕ್ಕೆ ಮಾರಾಟವಾಗುತ್ತಿದೆ.

ಸೊಪ್ಪಿನ ದರದಲ್ಲಿಯೂ ಏರಿಕೆ ಕಂಡುಬಂದಿದೆ. ಮೆಂತ್ಯೆ ಸೊಪ್ಪು ಪ್ರತಿ ಕೆ.ಜಿಗೆ ₹125 (ಒಂದು ಕಟ್ಟಿಗೆ ₹30) ಹಾಗೂ ಪುದೀನ ₹95 (ಒಂದು ಕಟ್ಟಿಗೆ ₹20) ದರ ನಿಗದಿಯಾಗಿದೆ.

ಹಣ್ಣುಗಳ ದರ ಕೂಡ ಗ್ರಾಹಕರಿಗೆ ದುಬಾರಿಯಾಗಿದ್ದು, ವಾಷಿಂಗ್ಟನ್ ಸೇಬು ₹325, ಗಾಲಾ ಸೇಬು ₹350, ಕಿವಿ ಹಣ್ಣು ₹800, ಗೋಲ್ಡ್ ಕಿವಿ ₹1,000, ಲಿಚ್ಚಿ ₹500, ಮೂಸಂಬಿ ₹160, ಬಾದಾಮಿ ಮಾವು ₹200, ಸಕ್ಕರೆಗುತ್ತಿ ಮಾವು ₹230 ಹಾಗೂ ಸಪೋಟ ₹190 ಪ್ರತಿ ಕೆ.ಜಿಗೆ ಮಾರಾಟವಾಗುತ್ತಿದೆ.

ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನರು, ತರಕಾರಿ ಮತ್ತು ಹಣ್ಣುಗಳ ದರ ಏರಿಕೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿ ಉತ್ತಮ ಮಳೆಯಾದರೆ ಮಾತ್ರ ಮುಂದಿನ ದಿನಗಳಲ್ಲಿ ದರಗಳು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Continue Reading

Trending