ದೇಶ
Amith Shah ಬಂಗಾಳ ಪ್ರವಾಸದ ಪ್ರಮುಖ ಅಜೆಂಡಾ ಏನು? ಗಡಿ ಭದ್ರತೆಯಿಂದ ಅಭಿವೃದ್ಧಿ ಯೋಜನೆಗಳವರೆಗೆ ಚರ್ಚೆ
ಕೋಲ್ಕತ್ತಾ: Amith Shah ಅವರು ಜುಲೈ 17ರಿಂದ 19ರವರೆಗೆ ಮೂರು ದಿನಗಳ ಕಾಲ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದು, ಗಡಿ ಭದ್ರತೆ, ಕಾನೂನು ಸುವ್ಯವಸ್ಥೆ, ಆಡಳಿತ ಸುಧಾರಣೆ ಹಾಗೂ ಅಭಿವೃದ್ಧಿ ಯೋಜನೆಗಳ ಕುರಿತು ಸರಣಿ ಸಭೆಗಳನ್ನು ನಡೆಸಲಿದ್ದಾರೆ. ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗೃಹ ಸಚಿವರ ಮೊದಲ ಅಧಿಕೃತ ಭೇಟಿ ಇದಾಗಿದ್ದು, ಹಲವು ಮಹತ್ವದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಜುಲೈ 18ರಂದು ಅಮಿತ್ ಷಾ ಅವರು ಸಿಲಿಗುರಿಯ ಜುಮಾಗಾಚ್ ಗಡಿ ಹೊರಠಾಣೆಗೆ ಭೇಟಿ ನೀಡಿ ಗಡಿ ಭದ್ರತಾ ಪಡೆ (BSF) ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ. ಇದೇ ವೇಳೆ ಬಿಎಸ್‌ಎಫ್‌ನ ವಿವಿಧ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವುದರ ಜೊತೆಗೆ ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದಾದ ಬಳಿಕ ಪಶ್ಚಿಮ ಬಂಗಾಳದ ಗಡಿ ಭದ್ರತೆಗೆ ಸಂಬಂಧಿಸಿದ ವಿಷಯಗಳ ಕುರಿತು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಲಿರುವ ಅವರು, ರಾಜ್ಯದಲ್ಲಿ ಜಾರಿಯಾಗಿರುವ ಮೂರು ಹೊಸ ಕ್ರಿಮಿನಲ್ ಕಾಯಿದೆಗಳ ಅನುಷ್ಠಾನ ಪ್ರಗತಿಯನ್ನೂ ಪರಿಶೀಲಿಸಲಿದ್ದಾರೆ. ಅಲ್ಲದೆ, ಜನನ ಮತ್ತು ಮರಣ ನೋಂದಣಿ ವ್ಯವಸ್ಥೆ ಕುರಿತ ವಿಶೇಷ ಸಭೆಯನ್ನೂ ನಡೆಸಲಿದ್ದಾರೆ.
ಪ್ರವಾಸದ ಕೊನೆಯ ದಿನ ಅಮಿತ್ ಷಾ ಕೋಲ್ಕತ್ತಾದಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ. ಬಳಿಕ ಆಲಿಪೋರ್‌ನ ರಾಷ್ಟ್ರೀಯ ಗ್ರಂಥಾಲಯದಲ್ಲಿ ‘ಮ್ಯೂಸಿಯಂ ಆಫ್ ವರ್ಡ್ಸ್’ ಮೊದಲ ಹಂತವನ್ನು ಉದ್ಘಾಟಿಸಲಿದ್ದು, ನಂತರ ಬಿಸ್ವಾ ಬಾಂಗ್ಲಾ ಕನ್ವೆನ್ಷನ್ ಸೆಂಟರ್‌ನಲ್ಲಿ ಅಮುಲ್ ಡೈರಿಯ ಮೊಸರು ಸಂಸ್ಕರಣಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದರ ನಡುವೆಯೇ ಪಶ್ಚಿಮ ಬಂಗಾಳ ಸರ್ಕಾರ ಆಡಳಿತ ಸುಧಾರಣೆಯ ಭಾಗವಾಗಿ ಏಕರೂಪದ ವರ್ಗಾವಣೆ ನೀತಿ ಜಾರಿಗೊಳಿಸಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ನಿವೃತ್ತಿಗೆ ಮುನ್ನದ ಕೊನೆಯ ಎರಡು ವರ್ಷಗಳನ್ನು ಹೊರತುಪಡಿಸಿ ಯಾವುದೇ ಅಧಿಕಾರಿಯನ್ನು ಅವರ ಸ್ವಂತ ಜಿಲ್ಲೆಯಲ್ಲಿ ನಿಯೋಜನೆ ಮಾಡಬಾರದು ಎಂದು ಸ್ಪಷ್ಟಪಡಿಸಲಾಗಿದೆ. ಒಂದೇ ಹುದ್ದೆಯಲ್ಲಿ ಮೂರು ವರ್ಷಗಳ ಸೇವೆಯ ನಂತರ ಸಾಮಾನ್ಯವಾಗಿ ವರ್ಗಾವಣೆ ಕಡ್ಡಾಯವಾಗಿದ್ದು, ಯಾವುದೇ ಕಾರಣಕ್ಕೂ ನಾಲ್ಕು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ಇರುವುದಿಲ್ಲ.
ಕಂದಾಯ, ತೆರಿಗೆ ವಸೂಲಿ ಹಾಗೂ ಇತರೆ ಸೂಕ್ಷ್ಮ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಇನ್ನಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಅವರು ಎರಡು ವರ್ಷಗಳ ಬಳಿಕ ಕಡ್ಡಾಯವಾಗಿ ವರ್ಗಾವಣೆಯಾಗಬೇಕು ಎಂದು ಸೂಚಿಸಲಾಗಿದೆ. ಈ ನೀತಿಯಿಂದ ಆಡಳಿತಾತ್ಮಕ ದಕ್ಷತೆ, ಪಾರದರ್ಶಕತೆ ಹಾಗೂ ಸಾರ್ವಜನಿಕ ಸೇವಾ ವಿತರಣೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಕ್ರೀಡೆ
FIFA World Cup 2026: ವಿಶ್ವಕಪ್ ವಿಜೇತರಿಗೆ ಮೊದಲ ಬಾರಿಗೆ ವಿಶೇಷ ಚಾಂಪಿಯನ್‌ಶಿಪ್ ರಿಂಗ್ಸ್!
ನ್ಯೂಯಾರ್ಕ್: FIFA World Cup 2026 ಟೂರ್ನಿಯು ಅಂತಿಮ ಹಂತ ತಲುಪಿದ್ದು, ಈ ಬಾರಿಯ ಚಾಂಪಿಯನ್ ತಂಡಕ್ಕೆ ಫಿಫಾ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶೇಷ ಚಾಂಪಿಯನ್‌ಶಿಪ್ ರಿಂಗ್ಸ್ (Championship Rings) ನೀಡಲು ನಿರ್ಧರಿಸಿದೆ. ಸಾಂಪ್ರದಾಯಿಕ ವಿಶ್ವಕಪ್ ಟ್ರೋಫಿ ಹಾಗೂ ಚಿನ್ನದ ಪದಕಗಳ ಜೊತೆಗೆ ಈ ವಿಶೇಷ ಉಂಗುರಗಳನ್ನು ನೀಡಿ ವಿಜೇತ ತಂಡವನ್ನು ಗೌರವಿಸಲಾಗುವುದು ಎಂದು ಫಿಫಾ ಅಧಿಕೃತವಾಗಿ ಪ್ರಕಟಿಸಿದೆ.
ಅಮೆರಿಕದ ಪ್ರಮುಖ ಕ್ರೀಡೆಗಳಲ್ಲಿ ಪ್ರಸಿದ್ಧವಾಗಿರುವ ಚಾಂಪಿಯನ್‌ಶಿಪ್ ರಿಂಗ್ ಸಂಪ್ರದಾಯವನ್ನು ಇದೀಗ ಜಾಗತಿಕ ಫುಟ್‌ಬಾಲ್‌ಗೂ ಪರಿಚಯಿಸಲಾಗುತ್ತಿದೆ. ಈ ಮೂಲಕ ವಿಶ್ವಕಪ್ ಗೆಲುವಿನ ಸ್ಮರಣೆಯನ್ನು ಇನ್ನಷ್ಟು ವಿಶೇಷಗೊಳಿಸಲು ಫಿಫಾ ಮುಂದಾಗಿದೆ.
ಫಿಫಾ ವಿನ್ಯಾಸಗೊಳಿಸಿರುವ ವಿಶೇಷ ಉಂಗುರದ ಒಂದು ಬದಿಯಲ್ಲಿ FIFA World Cup Trophy ಆಕೃತಿ ಇರಲಿದ್ದು, ಮತ್ತೊಂದು ಬದಿಯಲ್ಲಿ ವಿಜೇತ ತಂಡದ ಲೋಗೋ ಮತ್ತು ವಿಶೇಷ ವಿನ್ಯಾಸ ಅಳವಡಿಸಲಾಗುತ್ತದೆ. ಪ್ರತಿಯೊಂದು ಉಂಗುರಕ್ಕೂ ಪ್ರತ್ಯೇಕ ಸರಣಿ ಸಂಖ್ಯೆ (Unique Number) ನೀಡಲಾಗುತ್ತಿದ್ದು, ವಿಜೇತರ ಬೆರಳಿನ ಗಾತ್ರಕ್ಕೆ ಅನುಗುಣವಾಗಿ ಕಸ್ಟಮೈಸ್ ಮಾಡಿ ಅಧಿಕೃತ ಪ್ರಮಾಣಪತ್ರದೊಂದಿಗೆ ಹಸ್ತಾಂತರಿಸಲಾಗುತ್ತದೆ.
ಫೈನಲ್ ಪಂದ್ಯ ಮುಗಿದ ತಕ್ಷಣ ಚಾಂಪಿಯನ್ ತಂಡದ ನಾಯಕ ಹಾಗೂ ಮುಖ್ಯ ಕೋಚ್‌ಗೆ ತಾತ್ಕಾಲಿಕ ರಿಂಗ್ ನೀಡಲಾಗುತ್ತದೆ. ಬಳಿಕ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ ಒಟ್ಟು 30 ವಿಶೇಷ ಚಾಂಪಿಯನ್‌ಶಿಪ್ ರಿಂಗ್ಸ್ ತಯಾರಿಸಿ ಅಧಿಕೃತವಾಗಿ ವಿತರಿಸಲಾಗುತ್ತದೆ.
ಇದಷ್ಟೇ ಅಲ್ಲದೆ, ವಿಶ್ವದ ಫುಟ್‌ಬಾಲ್ ಅಭಿಮಾನಿಗಳಿಗೂ ಫಿಫಾ ವಿಶೇಷ ಅವಕಾಶ ಕಲ್ಪಿಸಿದೆ. ಒಟ್ಟು 2,026 ಸೀಮಿತ ಆವೃತ್ತಿಯ ರಿಂಗ್ಸ್ ತಯಾರಿಸಲಾಗುತ್ತಿದ್ದು, ಅವುಗಳಲ್ಲಿ 30 ರಿಂಗ್ಸ್ ಚಾಂಪಿಯನ್ ತಂಡಕ್ಕೆ ಮೀಸಲಾಗಿರುತ್ತವೆ. ಉಳಿದ 1,996 ರಿಂಗ್ಸ್ ಅನ್ನು ಅಧಿಕೃತ ಪರವಾನಗಿ ಉತ್ಪನ್ನಗಳ ರೂಪದಲ್ಲಿ ಅಭಿಮಾನಿಗಳು ಖರೀದಿಸಬಹುದಾಗಿದೆ.
ಈ ಬಾರಿಯ FIFA World Cup 2026 Finalನಲ್ಲಿ ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಹಾಗೂ ಯೂರೋಪಿಯನ್ ಚಾಂಪಿಯನ್ ಸ್ಪೇನ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಸೆಮಿಫೈನಲ್‌ನಲ್ಲಿ ಸ್ಪೇನ್ ಬಲಿಷ್ಠ ಫ್ರಾನ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರೆ, ಅರ್ಜೆಂಟೀನಾ ಸತತ ಉತ್ತಮ ಪ್ರದರ್ಶನದೊಂದಿಗೆ ತನ್ನ ಏಳನೇ ವಿಶ್ವಕಪ್ ಫೈನಲ್‌ಗೆ ಅರ್ಹತೆ ಪಡೆದಿದೆ.
ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಈ ಟೂರ್ನಿಯಲ್ಲಿ ಈಗಾಗಲೇ 8 ಗೋಲುಗಳನ್ನು ದಾಖಲಿಸಿದ್ದು, ವಿಶ್ವಕಪ್ ಇತಿಹಾಸದಲ್ಲಿ ಒಟ್ಟು 21 ಗೋಲುಗಳ ಸಾಧನೆ ಮಾಡಿದ್ದಾರೆ. ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳು ಇದೀಗ ಫೈನಲ್ ಪಂದ್ಯ ಮತ್ತು ಹೊಸ ಚಾಂಪಿಯನ್‌ಶಿಪ್ ರಿಂಗ್ ಸಂಪ್ರದಾಯಕ್ಕೆ ಕಾತರದಿಂದ ಕಾಯುತ್ತಿದ್ದಾರೆ.
ದೇಶ
PM NARENDRA MODI ಮೈಸೂರು ಪ್ರವಾಸ ಫಿಕ್ಸ್; ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಪಾಲ್ಗೊಳ್ಳಲಿರುವ ಕಾರ್ಯಕ್ರಮಗಳು
ಮೈಸೂರು: PM Narendra Modi (Narendra Modi) ಅವರು ಮತ್ತೊಮ್ಮೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಲಿದ್ದಾರೆ. ಆಗಸ್ಟ್ 1ರಂದು ಮೈಸೂರಿಗೆ ಭೇಟಿ ನೀಡಲಿರುವ ಪ್ರಧಾನಿ, ಶ್ರೀ ರಾಮಕೃಷ್ಣ ಆಶ್ರಮದಲ್ಲಿ ನಡೆಯಲಿರುವ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಭದ್ರತಾ ಇಲಾಖೆಗಳು ಅಗತ್ಯ ಸಿದ್ಧತೆಗಳನ್ನು ಆರಂಭಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮೈಸೂರಿಗೂ ವಿಶೇಷ ನಂಟಿದ್ದು, ಅವರು ಮುಖ್ಯಮಂತ್ರಿಯಾಗಿದ್ದ ಸಮಯದಿಂದಲೇ ಹಲವು ಬಾರಿ ನಗರಕ್ಕೆ ಭೇಟಿ ನೀಡಿದ್ದಾರೆ. 2004ರಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಮೋದಿ, ಬಳಿಕ 2009ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ದಸರಾ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಸುತ್ತೂರು ಮಠದಲ್ಲಿ ನಡೆದ ಚಿಂತನಾ ಶಿಬಿರದಲ್ಲೂ ಅವರು ಉಪಸ್ಥಿತರಿದ್ದರು.
2014ರ ಲೋಕಸಭಾ ಚುನಾವಣೆಯ ವೇಳೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು. ಪ್ರಧಾನಿ ಆದ ಬಳಿಕವೂ ಮೈಸೂರಿನೊಂದಿಗೆ ಅವರ ಸಂಪರ್ಕ ಮುಂದುವರಿದಿದ್ದು, 2016ರಲ್ಲಿ ಗಣಪತಿ ಸಚ್ಚಿದಾನಂದ ಆಶ್ರಮದ ಎಸ್‌ಜಿಇಎಸ್ ಆಸ್ಪತ್ರೆ ಉದ್ಘಾಟನೆ, ಸುತ್ತೂರು ಮಠದ ಶ್ರೀ ಶಿವರಾತ್ರಿರಾಜೇಂದ್ರ ಸ್ವಾಮೀಜಿಗಳ ಜನ್ಮಶತಮಾನೋತ್ಸವ ಹಾಗೂ ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಅಂಗವಾಗಿ ನಡೆದ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
2018ರಲ್ಲಿ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಹಾಗೂ ರೈಲ್ವೆ ಕಾಮಗಾರಿಗಳಿಗೆ ಚಾಲನೆ ನೀಡಿದ ಪ್ರಧಾನಿ, 2022ರಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿ ನಡೆದ ಬೃಹತ್ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2023ರಲ್ಲಿ ಬಂಡೀಪುರದಲ್ಲಿ ನಡೆದ ಕಾರ್ಯಕ್ರಮ, ಹುಲಿ ಗಣತಿ ವರದಿ ಬಿಡುಗಡೆ ಹಾಗೂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರೋಡ್‌ಶೋ ಮತ್ತು ಚುನಾವಣಾ ಪ್ರಚಾರ ಸಭೆಗಳಲ್ಲೂ ಪಾಲ್ಗೊಂಡಿದ್ದರು.
ಈಗ ಮತ್ತೊಮ್ಮೆ ಮೈಸೂರಿಗೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ, ಶ್ರೀ ರಾಮಕೃಷ್ಣ ಆಶ್ರಮದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ವಿಶೇಷ ಮಹತ್ವ ಪಡೆದಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಭದ್ರತೆ, ಸಂಚಾರ ವ್ಯವಸ್ಥೆ ಹಾಗೂ ಕಾರ್ಯಕ್ರಮಗಳ ಸಿದ್ಧತೆ ಕುರಿತು ಅಧಿಕಾರಿಗಳು ಈಗಾಗಲೇ ಸಭೆಗಳನ್ನು ನಡೆಸುತ್ತಿದ್ದಾರೆ.
ಪ್ರಧಾನಿ ಮೋದಿ ಅವರ ಆಗಮನದಿಂದ ಮೈಸೂರಿನಲ್ಲಿ ಮತ್ತೊಮ್ಮೆ ರಾಜಕೀಯ ಹಾಗೂ ಸಾರ್ವಜನಿಕ ಚಟುವಟಿಕೆಗಳು ಚುರುಕುಗೊಳ್ಳುವ ನಿರೀಕ್ಷೆಯಿದ್ದು, ಕಾರ್ಯಕ್ರಮದ ಪೂರ್ಣ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಧಾನಿ ಕಾರ್ಯಾಲಯ ಹಾಗೂ ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ.
ಬೆಂಗಳೂರು
Karnataka Teacher Recruitment 2026: 15 ಸಾವಿರ ಶಿಕ್ಷಕರ ಹುದ್ದೆ ಭರ್ತಿಗೆ ಗ್ರೀನ್ ಸಿಗ್ನಲ್
ಬೆಂಗಳೂರು: Karnataka Teacher Recruitment ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಒಟ್ಟು 15,000 ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದರಿಂದ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಸಾವಿರಾರು ಅಭ್ಯರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ.
2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ನೀಡಿದ್ದ ಘೋಷಣೆಯಂತೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವ್ಯಾಪ್ತಿಯಲ್ಲಿರುವ ಖಾಲಿ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಈ ಅನುಮೋದನೆ ನೀಡಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ) ಬಿ.ಕೆ. ಮಮತಾ ರಾಣಿ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಈ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಆ ಭಾಗದಲ್ಲಿ ಒಟ್ಟು 6,967 ಹುದ್ದೆಗಳು ಭರ್ತಿಯಾಗಲಿದ್ದು, ಇದರಲ್ಲಿ 3,228 ಪದವೀಧರ ಪ್ರಾಥಮಿಕ ಶಿಕ್ಷಕರು (GPT), 2,214 ಸಹ ಶಿಕ್ಷಕರು (ಪ್ರೌಢಶಾಲೆ), 800 ಪ್ರಾಥಮಿಕ ಶಾಲಾ ಶಿಕ್ಷಕರು, 425 ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ 300 ಗಣಕಯಂತ್ರ ವಿಜ್ಞಾನ ಶಿಕ್ಷಕರ ಹುದ್ದೆಗಳು ಸೇರಿವೆ.
ಇನ್ನು ಕಲ್ಯಾಣ ಕರ್ನಾಟಕ ಹೊರತುಪಡಿಸಿದ ಜಿಲ್ಲೆಗಳಲ್ಲಿ 8,033 ಹುದ್ದೆಗಳು ಭರ್ತಿಯಾಗಲಿವೆ. ಇದರಲ್ಲಿ 5,272 ಪದವೀಧರ ಪ್ರಾಥಮಿಕ ಶಿಕ್ಷಕರು, 2,286 ಸಹ ಶಿಕ್ಷಕರು (ಪ್ರೌಢಶಾಲೆ), 100 ಪ್ರಾಥಮಿಕ ಶಾಲಾ ಶಿಕ್ಷಕರು, 175 ದೈಹಿಕ ಶಿಕ್ಷಣ ಶಿಕ್ಷಕರು ಮತ್ತು 200 ಗಣಕಯಂತ್ರ ವಿಜ್ಞಾನ ಶಿಕ್ಷಕರ ಹುದ್ದೆಗಳು ಒಳಗೊಂಡಿವೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹಲವು ವರ್ಷಗಳಿಂದ ಶಿಕ್ಷಕರ ಕೊರತೆ ಉಂಟಾಗಿದ್ದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿತ್ತು. ಇದೀಗ 15 ಸಾವಿರ ಹುದ್ದೆಗಳ ನೇರ ನೇಮಕಾತಿಯಿಂದ ಶಾಲೆಗಳಲ್ಲಿ ಬೋಧನಾ ವ್ಯವಸ್ಥೆ ಮತ್ತಷ್ಟು ಬಲವಾಗಲಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವ ನಿರೀಕ್ಷೆಯಿದೆ.
ಇದೇ ವೇಳೆ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆ, ಅರ್ಜಿ ಸಲ್ಲಿಕೆ ದಿನಾಂಕ, ಅರ್ಹತೆ ಹಾಗೂ ಆಯ್ಕೆ ಪ್ರಕ್ರಿಯೆಯ ವಿವರಗಳನ್ನು ಶಾಲಾ ಶಿಕ್ಷಣ ಇಲಾಖೆ ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ. ಹೀಗಾಗಿ Karnataka Teacher Recruitment 2026ಗಾಗಿ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಇಲಾಖೆಯ ಮುಂದಿನ ಪ್ರಕಟಣೆಗಳತ್ತ ಗಮನ ಹರಿಸುವಂತೆ ಸೂಚಿಸಲಾಗಿದೆ.
-
ರಾಜ್ಯ4 hours agoPM Narendra Modi ಉದ್ಘಾಟನೆಗೂ ಮುನ್ನವೇ ಕೊಪ್ಪಳ ರೈಲ್ವೆ ನಿಲ್ದಾಣ ಸೋರಿಕೆ; ಕಳಪೆ ಕಾಮಗಾರಿಗೆ ಜನರ ಆಕ್ರೋಶ
-
ಬೆಂಗಳೂರು2 hours agoGBA Election Update: ಎಸ್ಆರ್ಆರ್ ಪ್ರಕ್ರಿಯೆ ಹಿನ್ನೆಲೆ ಚುನಾವಣೆ ಮುಂದೂಡಿಕೆ, ಸುಪ್ರೀಂ ಕೋರ್ಟ್ ಆದೇಶ
-
ರಾಜ್ಯ1 hour agoE-Swanthu ಮನೆಬಾಗಿಲಿಗೆ! ಗ್ರಾಮಸ್ಥರಿಗೆ ಗುಡ್ ನ್ಯೂಸ್ ನೀಡಿದ ಸಚಿವ ಈಶ್ವರ ಖಂಡ್ರೆ
-
ಬೆಂಗಳೂರು52 minutes agoBIdadi Township ವಿರುದ್ಧ ಬಿಜೆಪಿ ರಣಕಹಳೆ; ಡಿ.ಕೆ. ಶಿವಕುಮಾರ್ ವಿರುದ್ಧ ಬಿ.ವೈ. ವಿಜಯೇಂದ್ರ ಕಿಡಿ
-
ರಾಜ್ಯ6 hours agoBidadi Township ಭೂಸಂಗ್ರಾಮಕ್ಕೆ ಹೊಸ ತಿರುವು; ಮಹಿಳೆಯರು ಸೇರಿ ರಕ್ತದ ಸಹಿ ಅಭಿಯಾನ
-
ದೇಶ41 minutes agoNEET 2026 ಫಲಿತಾಂಶದ ಬೆನ್ನಲ್ಲೇ NMC ಗುಡ್ ನ್ಯೂಸ್; ಕರ್ನಾಟಕಕ್ಕೆ ಸಿಕ್ಕಿತು ಸಿಂಹಪಾಲು
-
ಬೆಂಗಳೂರು4 hours agoಇಂಡಿಗೋ ವಿಮಾನದಲ್ಲಿ ಆತಂಕದ ಕ್ಷಣ; ಬೆದರಿಕೆ ಚೀಟಿಯಿಂದ ಪ್ರಯಾಣಿಕರಲ್ಲಿ ಭೀತಿ
-
ರಾಜ್ಯ6 hours agoChamundi ದರ್ಶನಕ್ಕೆ ಭಾರೀ ಜನಸಾಗರ; ₹2,000 ಟಿಕೆಟ್ಧಾರಿಗಳಿಗೆ ನೇರ ದರ್ಶನ ವ್ಯವಸ್ಥೆ
