ದೇಶ
CJP ಸಂಭ್ರಮಾಚರಣೆ ಕುರಿತು ಸೋನಮ್ ವಾಂಗ್ಚುಕ್ ಪ್ರತಿಕ್ರಿಯೆ; ಹೇಳಿದ್ದೇನು?
ನವದೆಹಲಿ:CJP ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ನಡೆದ ಪ್ರತಿಭಟನೆ ಯಶಸ್ವಿಯಾದ ಬಳಿಕ ಕಾಕ್ರೋಚ್ ಜನತಾ ಪಾರ್ಟಿ (CJP) ಕಾರ್ಯಕರ್ತರು ನಡೆಸಿದ ಸಂಭ್ರಮಾಚರಣೆ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಖ್ಯಾತ ಪರಿಸರವಾದಿ Sonam Wangchuk ಪ್ರತಿಕ್ರಿಯೆ ನೀಡಿದ್ದು, “ವಿಜಯದ ಜೊತೆಗೆ ನಮ್ರತೆಯೂ ಇರಬೇಕು” ಎಂದು ಕಿವಿಮಾತು ಹೇಳಿದ್ದಾರೆ.
ಕಳೆದ ಹಲವು ದಿನಗಳಿಂದ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿ ಸರ್ಕಾರದ ಗಮನ ಸೆಳೆದಿದ್ದರು. ಬಳಿಕ ಕೇಂದ್ರ ಸರ್ಕಾರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆದು ಪರೀಕ್ಷಾ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಯಶಸ್ವಿಯಾಗಿದೆ.
ಇದರ ಬಳಿಕ ಸಿಜೆಪಿ ಕಾರ್ಯಕರ್ತರು ಹೋಟೆಲ್‌ನಲ್ಲಿ ಸಂಭ್ರಮಾಚರಣೆ ನಡೆಸಿದ್ದು, ಈ ಕಾರ್ಯಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸೋನಮ್ ವಾಂಗ್ಚುಕ್, “ಯಾವುದೇ ಗೆಲುವಿನ ಸಂಭ್ರಮದಲ್ಲೂ ನಮ್ರತೆ ಇರಬೇಕು. ಎಲ್ಲರನ್ನೂ ಪ್ರೀತಿಯಿಂದ ಕಾಣುವ ಮನೋಭಾವ ಮುಖ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸಿಜೆಪಿ ವಕ್ತಾರ ಸೌರವ್ ದಾಸ್ ಸ್ಪಷ್ಟನೆ ನೀಡಿದ್ದಾರೆ. “ನಾವು ಯಾವುದೇ ಪಂಚತಾರಾ ಹೋಟೆಲ್‌ನಲ್ಲಿ ಪಾರ್ಟಿ ಮಾಡಿಲ್ಲ. ದೇಶದ ವಿವಿಧ ಭಾಗಗಳಿಂದ ಬಂದಿದ್ದ ಕಾರ್ಯಕರ್ತರು 37 ದಿನಗಳ ಹೋರಾಟದ ಬಳಿಕ ತಮ್ಮ ಊರುಗಳಿಗೆ ಮರಳುವ ಮುನ್ನ ಅವರಿಗೆ ಬೀಳ್ಕೊಡುವ ಉದ್ದೇಶದಿಂದ ಮಾತ್ರ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು” ಎಂದು ಅವರು ತಿಳಿಸಿದ್ದಾರೆ.
ಸಿಜೆಪಿ ಸಂಭ್ರಮಾಚರಣೆ ಹಾಗೂ ಸೋನಮ್ ವಾಂಗ್ಚುಕ್ ಅವರ ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ವಿಜಯದ ಬಳಿಕವೂ ಸರಳತೆ ಮತ್ತು ನಮ್ರತೆ ಕಾಪಾಡಿಕೊಳ್ಳುವ ಕುರಿತು ಹೊಸ ಚರ್ಚೆಗೆ ವೇದಿಕೆ ಕಲ್ಪಿಸಿದೆ.
ದೇಶ
Google Pay, PhonePe, Paytm ಬಳಕೆದಾರರಿಗೆ ಹೊಸ ಅಪ್‌ಡೇಟ್; UPIನಲ್ಲಿ ಬದಲಾಗಲಿದೆ ಈ ನಿಯಮ
ನವದೆಹಲಿ: ದೇಶದ ಕೋಟ್ಯಂತರ UPI ಬಳಕೆದಾರರ ಗೌಪ್ಯತೆ ಹೆಚ್ಚಿಸುವ ಉದ್ದೇಶದಿಂದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮಹತ್ವದ ಕ್ರಮ ಕೈಗೊಂಡಿದೆ. ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ (DPDP) ಕಾಯ್ದೆ ಜಾರಿಗೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಎಲ್ಲಾ UPI ಆ್ಯಪ್‌ಗಳು ಮತ್ತು ಸದಸ್ಯ ಬ್ಯಾಂಕ್‌ಗಳು ಬಳಕೆದಾರರ ಮೊಬೈಲ್ ಸಂಖ್ಯೆಯನ್ನು ಮರೆಮಾಚುವ (Masking) ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದೆ.
NPCI ಈಗಾಗಲೇ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಸೆಪ್ಟೆಂಬರ್ 4ರೊಳಗೆ ಹೊಸ ನಿಯಮಗಳನ್ನು ಜಾರಿಗೆ ತರಲು ಗಡುವು ನೀಡಿದೆ. ಈ ಕ್ರಮದ ಉದ್ದೇಶ ಬಳಕೆದಾರರ ಗುರುತು, ಗೌಪ್ಯತೆ ಹಾಗೂ ಭದ್ರತೆಯನ್ನು ಮತ್ತಷ್ಟು ಬಲಪಡಿಸುವುದಾಗಿದೆ.
ಏನು ಬದಲಾಗಲಿದೆ?
ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ UPI ಮೂಲಕ ಹಣ ವರ್ಗಾವಣೆ ಮಾಡುವಾಗ ಎದುರಿನ ವ್ಯಕ್ತಿಗೆ ಮೊಬೈಲ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳು ಮಾತ್ರ ಗೋಚರಿಸಲಿವೆ. ಸಂಪೂರ್ಣ ಮೊಬೈಲ್ ಸಂಖ್ಯೆ, UPI ID ಹಾಗೂ ಬ್ಯಾಂಕ್ ಖಾತೆ ಸಂಖ್ಯೆಯನ್ನು ಗ್ರಾಹಕರಿಗೆ ಕಾಣುವ ಯಾವುದೇ ಇಂಟರ್‌ಫೇಸ್‌ನಲ್ಲಿ ಸಂಪೂರ್ಣವಾಗಿ ತೋರಿಸಬಾರದು ಎಂದು NPCI ಸೂಚಿಸಿದೆ.
ಅದರ ಜೊತೆಗೆ, QR ಕೋಡ್ ಮೂಲಕ ಪಾವತಿ ಮಾಡಿದ ಬಳಿಕವೂ ಮೊಬೈಲ್ ಸಂಖ್ಯೆ ಪ್ರದರ್ಶಿಸಬಾರದು ಎಂಬ ಹೊಸ ನಿಯಮವನ್ನು ಕೂಡ ಜಾರಿಗೆ ತರಲಾಗುತ್ತಿದೆ.
Username ಆಧಾರಿತ UPI IDಗೆ ಆದ್ಯತೆ
ಈವರೆಗೆ ಬಹುತೇಕ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನೇ UPI ID (Virtual Payment Address) ಆಗಿ ಬಳಸುತ್ತಿದ್ದರು. ಆದರೆ ಹೊಸ ನಿಯಮದಂತೆ, ಮೊಬೈಲ್ ಸಂಖ್ಯೆಯ ಬದಲು Username ಆಧಾರಿತ UPI ID ಅನ್ನು ಡೀಫಾಲ್ಟ್ ಆಯ್ಕೆಯಾಗಿ ನೀಡಬೇಕು ಎಂದು NPCI ಸೂಚಿಸಿದೆ.
ಇದರಿಂದ ಬಳಕೆದಾರರ ವೈಯಕ್ತಿಕ ಮಾಹಿತಿಯ ಸೋರಿಕೆ ಸಾಧ್ಯತೆ ಕಡಿಮೆಯಾಗಲಿದ್ದು, ಡಿಜಿಟಲ್ ವಹಿವಾಟಿನ ವೇಳೆ ಗೌಪ್ಯತೆ ಮತ್ತಷ್ಟು ಹೆಚ್ಚಲಿದೆ.
DPDP ಕಾಯ್ದೆಯ ಪರಿಣಾಮ
ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ (DPDP) ಕಾಯ್ದೆಯಡಿ ವೈಯಕ್ತಿಕ ಮಾಹಿತಿಯ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರ ಭಾಗವಾಗಿ NPCI, ಬ್ಯಾಂಕ್‌ಗಳು ಹಾಗೂ UPI ಸೇವಾ ಪೂರೈಕೆದಾರರೊಂದಿಗೆ ಸಮಾಲೋಚನೆ ನಡೆಸುತ್ತಿದ್ದು, ಪ್ರತಿಯೊಬ್ಬರ ಜವಾಬ್ದಾರಿಗಳನ್ನು ಸ್ಪಷ್ಟಪಡಿಸುವ ಕೆಲಸವೂ ನಡೆಯುತ್ತಿದೆ.
ಈ ಹೊಸ ಕ್ರಮಗಳು ಜಾರಿಯಾದ ಬಳಿಕ Google Pay, PhonePe, Paytm ಸೇರಿದಂತೆ ಎಲ್ಲಾ UPI ಆ್ಯಪ್‌ಗಳಲ್ಲಿ ಬಳಕೆದಾರರ ಮೊಬೈಲ್ ಸಂಖ್ಯೆ ಬಹಿರಂಗವಾಗುವ ಸಾಧ್ಯತೆ ಕಡಿಮೆಯಾಗಲಿದ್ದು, ಡಿಜಿಟಲ್ ಪಾವತಿಗಳು ಇನ್ನಷ್ಟು ಸುರಕ್ಷಿತ ಮತ್ತು ಗೌಪ್ಯತೆಯೊಂದಿಗೆ ನಡೆಯಲಿವೆ.
ರಾಜ್ಯ
DK Shivkumar-Usha ದಂಪತಿಗೆ 33ನೇ ವಿವಾಹ ವಾರ್ಷಿಕೋತ್ಸವ; ಹಳೆಯ ಆಮಂತ್ರಣ ಪತ್ರ ವೈರಲ್
ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ DK Shivkumar ಹಾಗೂ ಅವರ ಪತ್ನಿ ಇಂದು (ಜುಲೈ 28) ತಮ್ಮ 33ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಮುಖ್ಯಮಂತ್ರಿ ದಂಪತಿಗೆ ರಾಜಕೀಯ ನಾಯಕರು, ಅಭಿಮಾನಿಗಳು ಹಾಗೂ ಸಾರ್ವಜನಿಕರಿಂದ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರ ಹರಿದುಬಂದಿದೆ.
ವಿವಾಹ ವಾರ್ಷಿಕೋತ್ಸವದ ಸಂಭ್ರಮದ ನಡುವೆ 1993ರ ಡಿಕೆ ಶಿವಕುಮಾರ್ ಅವರ ಮದುವೆಯ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಹಲವರು ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಾ ಮುಖ್ಯಮಂತ್ರಿ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
1993ರ ಜುಲೈ 27ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿಕೆ ಶಿವಕುಮಾರ್ ಮತ್ತು ಉಷಾ ಅವರ ವಿವಾಹ ನೆರವೇರಿತ್ತು. ಬೆಳಿಗ್ಗೆ 9.45ರಿಂದ 10.25ರ ಕನ್ಯಾ ಲಗ್ನ ಮುಹೂರ್ತದಲ್ಲಿ ನಡೆದ ಈ ವಿವಾಹದ ಆಹ್ವಾನ ಪತ್ರಿಕೆಯಲ್ಲಿ, ಡಿಕೆ ಶಿವಕುಮಾರ್ ಅವರು ಆಗಲೇ ಸಾತನೂರು ಕ್ಷೇತ್ರದ ಶಾಸಕರಾಗಿದ್ದರು ಎಂಬ ಮಾಹಿತಿ ಕೂಡ ಗಮನ ಸೆಳೆಯುತ್ತಿದೆ.
ವೈರಲ್ ಆಗಿರುವ ಮದುವೆ ಆಮಂತ್ರಣ ಪತ್ರವನ್ನು ಕಂಡು ನೆಟ್ಟಿಗರು ವಿವಿಧ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. “ಹಳೆಯ ನೆನಪುಗಳೇ ಸದಾ ಮಧುರ”, “ಇಂತಹ ಅಪರೂಪದ ನೆನಪುಗಳು ಸಂಗ್ರಹವಾಗಿರಬೇಕು” ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಮತ್ತು ಉಷಾ ದಂಪತಿಗೆ ಐಶ್ವರ್ಯಾ, ಆಭರಣ ಎಂಬ ಇಬ್ಬರು ಪುತ್ರಿಯರು ಹಾಗೂ ಆಕಾಶ್ ಎಂಬ ಪುತ್ರ ಇದ್ದಾರೆ. ಇವರಲ್ಲಿ ಐಶ್ವರ್ಯಾ ಅವರು ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ಧಾರ್ಥ ಮತ್ತು ಮಾಳವಿಕಾ ಕೃಷ್ಣ ಅವರ ಪುತ್ರ ಅಮರ್ತ್ಯ ಹೆಗ್ಡೆ ಅವರನ್ನು 2021ರ ಫೆಬ್ರವರಿ 14ರಂದು ವಿವಾಹವಾಗಿದ್ದರು.
ಇತ್ತೀಚೆಗೆ 2026ರ ಮೇ ತಿಂಗಳಲ್ಲಿ ಐಶ್ವರ್ಯಾ ಮತ್ತು ಅಮರ್ತ್ಯ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಡಿಕೆ ಶಿವಕುಮಾರ್ ಅವರು ತಾತನಾಗಿರುವ ಸಂತಸವನ್ನೂ ಅನುಭವಿಸುತ್ತಿದ್ದಾರೆ. 33 ವರ್ಷಗಳ ದಾಂಪತ್ಯ ಪಯಣ ಪೂರೈಸಿರುವ ಮುಖ್ಯಮಂತ್ರಿ ದಂಪತಿಗೆ ವಿವಿಧ ವಲಯಗಳಿಂದ ಶುಭಾಶಯಗಳು ಮುಂದುವರಿದಿವೆ.
ದೇಶ
BS-6 ವಾಹನ ಮಾಲೀಕರಿಗೆ ಸಿಹಿ ಸುದ್ದಿ; PUC ಪ್ರಮಾಣಪತ್ರದ ಅವಧಿ 3 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾಪ
ನವದೆಹಲಿ: ದೇಶದ ಕೋಟ್ಯಂತರ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಮಹತ್ವದ ಸಿಹಿ ಸುದ್ದಿ ನೀಡಿದೆ. ಬಿಎಸ್-6 (BS-6) ಮಾಲಿನ್ಯ ನಿಯಂತ್ರಣ ಮಾನದಂಡಗಳಿಗೆ ಒಳಪಡುವ ಆರು ವರ್ಷದೊಳಗಿನ ಖಾಸಗಿ ವಾಹನಗಳ ‘ಪೊಲ್ಯೂಷನ್ ಅಂಡರ್ ಕಂಟ್ರೋಲ್’ (PUC) ಪ್ರಮಾಣಪತ್ರದ ಸಿಂಧುತ್ವವನ್ನು ಒಂದು ವರ್ಷದಿಂದ ಮೂರು ವರ್ಷಗಳಿಗೆ ವಿಸ್ತರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಸ್ತಾಪಿಸಿದೆ. ಈ ಕುರಿತು ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಸಾರ್ವಜನಿಕರ ಅಭಿಪ್ರಾಯವನ್ನೂ ಆಹ್ವಾನಿಸಲಾಗಿದೆ.
ಹೊಸ ನಿಯಮದಲ್ಲಿ ಏನಿದೆ?
ಕರಡು ನಿಯಮಗಳ ಪ್ರಕಾರ, ಆರು ವರ್ಷದೊಳಗಿನ BS-6 ಖಾಸಗಿ ವಾಹನಗಳಿಗೆ PUC ಪ್ರಮಾಣಪತ್ರವು ಮೂರು ವರ್ಷಗಳವರೆಗೆ ಮಾನ್ಯವಾಗಲಿದೆ. ಇದರಿಂದ ವಾಹನ ಮಾಲೀಕರು ಪದೇ ಪದೇ ಪಿಯುಸಿ ಕೇಂದ್ರಗಳಿಗೆ ತೆರಳಿ ಪ್ರಮಾಣಪತ್ರ ನವೀಕರಿಸುವ ಅಗತ್ಯ ಕಡಿಮೆಯಾಗಲಿದೆ.
ಇನ್ನು 6 ರಿಂದ 10 ವರ್ಷದೊಳಗಿನ BS-6 ವಾಹನಗಳು ವರ್ಷಕ್ಕೊಮ್ಮೆ PUC ಪ್ರಮಾಣಪತ್ರವನ್ನು ನವೀಕರಿಸಬೇಕು. ಹಾಗೆಯೇ 10 ವರ್ಷಕ್ಕಿಂತ ಹಳೆಯದಾದ BS-6 ವಾಹನಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಮಾಲಿನ್ಯ ಪರೀಕ್ಷೆ ಕಡ್ಡಾಯವಾಗಲಿದೆ.
ಹಳೆಯ ವಾಹನಗಳಿಗೆ ಕಠಿಣ ನಿಯಮ
ಕರಡು ಅಧಿಸೂಚನೆಯ ಪ್ರಕಾರ, BS-4 ವಾಹನಗಳು ಪ್ರತಿ ಆರು ತಿಂಗಳಿಗೊಮ್ಮೆ PUC ಪ್ರಮಾಣಪತ್ರ ನವೀಕರಿಸಬೇಕಾಗುತ್ತದೆ. ಇನ್ನೂ ಹಳೆಯ BS-1, BS-2 ಹಾಗೂ BS-3 ವಾಹನಗಳು ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಮಾಲಿನ್ಯ ಪರೀಕ್ಷೆ ಮಾಡಿಸಿ ಪ್ರಮಾಣಪತ್ರ ಪಡೆಯಬೇಕಾಗುತ್ತದೆ.
BS-6 ಎಂದರೇನು?
ಭಾರತ್ ಸ್ಟೇಜ್ (BS) ಎನ್ನುವುದು ಭಾರತದಲ್ಲಿ ವಾಹನಗಳ ಮಾಲಿನ್ಯ ಹೊರಸೂಸುವಿಕೆಯನ್ನು ನಿಯಂತ್ರಿಸುವ ರಾಷ್ಟ್ರೀಯ ಮಾನದಂಡವಾಗಿದೆ. ವಾಹನಗಳಿಂದ ಹೊರಬರುವ ಕಾರ್ಬನ್ ಮೊನಾಕ್ಸೈಡ್, ನೈಟ್ರೋಜನ್ ಆಕ್ಸೈಡ್, ಹೈಡ್ರೋಕಾರ್ಬನ್ ಹಾಗೂ ಇತರ ಹಾನಿಕಾರಕ ಕಣಗಳ ಪ್ರಮಾಣವನ್ನು ನಿಯಂತ್ರಿಸಲು ಈ ಮಾನದಂಡಗಳನ್ನು ಜಾರಿಗೆ ತರಲಾಗಿದೆ.
ಭಾರತದಲ್ಲಿ 2020ರ ಏಪ್ರಿಲ್‌ನಿಂದ ನೇರವಾಗಿ BS-6 ನಿಯಮಗಳನ್ನು ಜಾರಿಗೆ ತರಲಾಗಿತ್ತು. ಇದಕ್ಕೂ ಮೊದಲು ಜಾರಿಯಲ್ಲಿದ್ದ BS-5 ಹಂತವನ್ನು ಸಂಪೂರ್ಣವಾಗಿ ಕೈಬಿಡಲಾಗಿತ್ತು. BS-6 ತಂತ್ರಜ್ಞಾನದ ವಾಹನಗಳು ಕಡಿಮೆ ಪ್ರಮಾಣದಲ್ಲಿ ಮಾಲಿನ್ಯ ಹೊರಸೂಸುವುದರಿಂದ ಪರಿಸರ ಸ್ನೇಹಿಯಾಗಿವೆ.
ವಾಹನ ಸವಾರರಿಗೆ ಏನು ಲಾಭ?
ಈ ಪ್ರಸ್ತಾವನೆ ಜಾರಿಯಾದರೆ, ಹೊಸ BS-6 ವಾಹನಗಳ ಮಾಲೀಕರು ಮೂರು ವರ್ಷಗಳವರೆಗೆ PUC ಪ್ರಮಾಣಪತ್ರ ನವೀಕರಿಸುವ ಅಗತ್ಯವಿರುವುದಿಲ್ಲ. ಇದರಿಂದ ಸಮಯ ಮತ್ತು ವೆಚ್ಚ ಉಳಿತಾಯವಾಗುವುದರ ಜೊತೆಗೆ ಪಿಯುಸಿ ಕೇಂದ್ರಗಳಲ್ಲಿ ಉಂಟಾಗುವ ಅನಗತ್ಯ ಓಡಾಟವೂ ಕಡಿಮೆಯಾಗಲಿದೆ. ಆದರೆ, ಈ ನಿಯಮಗಳು ಕರಡು ಅಧಿಸೂಚನೆ ರೂಪದಲ್ಲಿದ್ದು, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಅಂತಿಮ ಅಧಿಸೂಚನೆ ಹೊರಬಿದ್ದ ನಂತರವೇ ಜಾರಿಗೆ ಬರಲಿವೆ.
-
ಅಪರಾಧ7 hours agoBengaluru ಕ್ಯಾಬ್ಗಾಗಿ ಕಾಯುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ; ವಿಡಿಯೋ ವೈರಲ್, ಆರೋಪಿಯ ಬಂಧನಕ್ಕೆ ಆಗ್ರಹ
-
ದೇಶ8 hours agoPralhad Joshi ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ; ಯುವತಿಯ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ
-
ದೇಶ8 hours agoWhatsApp ಹೊಸ ಫೀಚರ್: ಅಪರಿಚಿತ ಕರೆಗಳಿಂದ ಕಿರಿಕಿರಿ? ಈ ಸೆಟ್ಟಿಂಗ್ ಆನ್ ಮಾಡಿದರೆ ಸಾಕು!
-
ಕ್ರೀಡೆ8 hours agoCommon Wealth ನಲ್ಲಿ ಭಾರತದ ಹೊಸ ಅಧ್ಯಾಯ; ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಚಿನ್ನ, ಕನ್ನಡತಿಗೆ ಕಂಚು
-
ದೇಶ7 hours agoKangana Ranaut Gen Z ಪ್ರತಿಭಟನಾಕಾರರ ವಿರುದ್ಧ ಕಂಗನಾ ರಣಾವತ್ ಕಿಡಿ
-
ದೇಶ6 hours agoCJP ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆಯಾಯಿತೇ? DD ದಾಖಲೆ ಬಹಿರಂಗ
-
ಕ್ರೀಡೆ7 hours ago149 ವರ್ಷದ ಟೆಸ್ಟ್ ಇತಿಹಾಸದಲ್ಲಿ ಹೊಸ ದಾಖಲೆ; 5 ಮೇಡನ್ ಓವರ್ಗಳಲ್ಲಿ 5 ವಿಕೆಟ್ ಪಡೆದು ಜಸ್ಟಿನ್ ಗ್ರೀವ್ಸ್ ವಿಶ್ವದಾಖಲೆ
-
ದೇಶ8 hours agoCJP ಮತ್ತೆ ರಾಷ್ಟ್ರವ್ಯಾಪಿ ಹೋರಾಟದ ಎಚ್ಚರಿಕೆ; ಮಧ್ಯರಾತ್ರಿ ಸರ್ಕಾರದೊಂದಿಗೆ ಮಹತ್ವದ ಸಭೆಯಲ್ಲಿ ಏನಾಯಿತು?
