Connect with us

ರಾಜ್ಯ

‘ನಾನು DK Shivakumar ಮನೆಮಗ, ಶಿವನ ಮುಂದೆ ಇರುವ ಬಸವ ನಾನು’ : ಶಾಸಕ ಶಿವಗಂಗಾ ಬಸವರಾಜ್ ಹೇಳಿಕೆ ವೈರಲ್

Published

on

ದಾವಣಗೆರೆ: “ನಾನು DK Shivakumar ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇರುತ್ತದೆ” ಎಂದು ಕಾಂಗ್ರೆಸ್ ಶಾಸಕ Shivganga Basavaraj ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಲ್ಲಿ ತಮ್ಮ ಹೆಸರು ಪರಿಗಣನೆಯಾಗಬಹುದು ಎಂಬ ನಿರೀಕ್ಷೆ ಇತ್ತು ಎಂದು ಒಪ್ಪಿಕೊಂಡರು. “ಪಕ್ಷದಲ್ಲಿ ಐದು-ಆರು ಬಾರಿ ಗೆದ್ದ ಹಿರಿಯ ಶಾಸಕರು ಇದ್ದಾರೆ. ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸವಿತ್ತು. ಆದರೆ ಈ ಬಾರಿ ಅವಕಾಶ ಸಿಗಲಿಲ್ಲ. ಮುಂದೆಯೂ ಸಾಕಷ್ಟು ಅವಕಾಶಗಳಿವೆ. ಅದರ ಬಗ್ಗೆ ಹೆಚ್ಚು ಮಾತನಾಡುವುದಕ್ಕಿಂತ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸುತ್ತೇನೆ” ಎಂದು ಹೇಳಿದರು.

ಸಚಿವ ಬಿ. ನಾಗೇಂದ್ರ ಅವರಿಗೆ ಭ್ರಷ್ಟಾಚಾರದ ಆರೋಪಗಳ ನಡುವೆಯೂ ಸಚಿವ ಸ್ಥಾನ ನೀಡಲಾಗಿದೆ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಶಿವಗಂಗಾ ಬಸವರಾಜ್, “ಭ್ರಷ್ಟಾಚಾರದ ಆರೋಪ ಯಾರ ಮೇಲೆ ಇಲ್ಲ ಹೇಳಿ? ಬಿಜೆಪಿಯವರಿಗೆ ಈ ವಿಚಾರದಲ್ಲಿ ಮಾತನಾಡುವ ನೈತಿಕತೆ ಇಲ್ಲ. ಆರೋಪ ಮಾತ್ರ ಇದ್ದರೆ ಸಾಕಾಗುವುದಿಲ್ಲ. ನ್ಯಾಯಾಲಯದಲ್ಲಿ ಅಪರಾಧ ಸಾಬೀತಾದ ಬಳಿಕವೇ ತೀರ್ಪು ನೀಡಬೇಕು. ಕಾನೂನು ಪ್ರಕಾರ ಬಂಧನವಾಗಿತ್ತು, ಈಗ ಅವರು ಹೊರಬಂದಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಿರುವುದು ಸರಿಯೇ” ಎಂದು ಸಮರ್ಥಿಸಿಕೊಂಡರು.

ಸಚಿವ ಸಂಪುಟದಲ್ಲಿ ಡಿ.ಕೆ. ಶಿವಕುಮಾರ್ ಅಥವಾ ಸಿದ್ದರಾಮಯ್ಯ ಅವರ ಆಪ್ತರಿಗೆ ಮಾತ್ರ ಸ್ಥಾನ ನೀಡಲಾಗಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದರು. “ಸಚಿವ ಸ್ಥಾನ ಹಂಚಿಕೆ ಪ್ರಾಂತ್ಯವಾರು ಸಮತೋಲನದ ಆಧಾರದಲ್ಲಿ ನಡೆದಿದೆ. ನಮ್ಮ ಭಾಗದಿಂದ ಕೆ.ಎಸ್. ಬಸವಂತಪ್ಪ ಅವರಿಗೆ ಅವಕಾಶ ಸಿಕ್ಕಿರುವುದು ಸಂತೋಷದ ವಿಚಾರ” ಎಂದು ಹೇಳಿದರು.

ಶಿವಗಂಗಾ ಬಸವರಾಜ್ ಅವರ “ಮನೆಮಗ” ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ ಒಳರಾಜಕೀಯ ಹಾಗೂ ಭವಿಷ್ಯದ ಸಚಿವ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ವೇಗ ನೀಡಿದೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಆರೋಗ್ಯ

Cancer ರೋಗಿಗಳಿಗೆ ಗುಡ್ ನ್ಯೂಸ್! ಬೆಂಗಳೂರಿನಲ್ಲಿ ವಿಶ್ವದ ಅತ್ಯಾಧುನಿಕ MR-Linac ಚಿಕಿತ್ಸೆ ಆರಂಭ

Published

on

ಬೆಂಗಳೂರು: Cancer ಚಿಕಿತ್ಸೆಯಲ್ಲಿ ಕರ್ನಾಟಕಕ್ಕೆ ಮಹತ್ವದ ಸಾಧನೆ ಸಿಕ್ಕಿದ್ದು, ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ (HCG) ಬೆಂಗಳೂರಿನಲ್ಲಿ ರಾಜ್ಯದ ಮೊದಲ Elekta Unity MR-Linac ತಂತ್ರಜ್ಞಾನದ ಮೂಲಕ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯನ್ನು ಆರಂಭಿಸಿದೆ. ಈ ಮೂಲಕ ಕರ್ನಾಟಕ ಹಾಗೂ ನೆರೆಯ ರಾಜ್ಯಗಳ ರೋಗಿಗಳಿಗೆ ಅತ್ಯಾಧುನಿಕ MR-Guided Adaptive Radiation Therapy ಸೌಲಭ್ಯ ಲಭ್ಯವಾಗಲಿದೆ.

Unity MR-Linac ವ್ಯವಸ್ಥೆಯು 1.5 ಟೆಸ್ಲಾ MRI ಸ್ಕ್ಯಾನರ್ ಮತ್ತು Linear Accelerator ಅನ್ನು ಸಂಯೋಜಿಸಿರುವ ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಇದರ ನೆರವಿನಿಂದ ಚಿಕಿತ್ಸೆ ನಡೆಯುವ ಸಂದರ್ಭದಲ್ಲಿಯೇ ವೈದ್ಯರು ಗಡ್ಡೆಯ (Tumor) ಸ್ಥಿತಿ ಹಾಗೂ ಸುತ್ತಮುತ್ತಲಿನ ಅಂಗಾಂಶಗಳನ್ನು ನೈಜ ಸಮಯದಲ್ಲಿ ವೀಕ್ಷಿಸಿ, ರೋಗಿಯ ದೇಹದಲ್ಲಿ ಉಂಟಾಗುವ ಬದಲಾವಣೆಗಳಿಗೆ ಅನುಗುಣವಾಗಿ ವಿಕಿರಣ ಚಿಕಿತ್ಸೆಯನ್ನು ತಕ್ಷಣವೇ ಹೊಂದಾಣಿಕೆ ಮಾಡಬಹುದು. ಇದರಿಂದ ಆರೋಗ್ಯಕರ ಅಂಗಾಂಶಗಳಿಗೆ ಹಾನಿ ಕಡಿಮೆಯಾಗುವುದರ ಜೊತೆಗೆ ಚಿಕಿತ್ಸೆ ಹೆಚ್ಚು ನಿಖರವಾಗುತ್ತದೆ.

ಜಾಗತಿಕ ಕ್ಯಾನ್ಸರ್ ವೀಕ್ಷಣಾಲಯ (GLOBOCAN) ಅಂದಾಜಿನ ಪ್ರಕಾರ, ಭಾರತದಲ್ಲಿ 2040ರ ವೇಳೆಗೆ ಹೊಸ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 2.08 ಮಿಲಿಯನ್‌ಗೆ ಏರಲಿದ್ದು, ಇದು 2020ರ ಹೋಲಿಕೆಯಲ್ಲಿ ಶೇ.57.5ರಷ್ಟು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ವೈಯಕ್ತಿಕಗೊಳಿಸಿದ ಹಾಗೂ ನಿಖರ ಚಿಕಿತ್ಸೆಯ ಅಗತ್ಯ ಹೆಚ್ಚುತ್ತಿದೆ.

HCG ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ಬಿ.ಎಸ್. ಅಜಯಕುಮಾರ್ ಮಾತನಾಡಿ, “ಈ ತಂತ್ರಜ್ಞಾನದಿಂದ ಗಡ್ಡೆಯ ಮೇಲೆಯೇ ನಿಖರವಾಗಿ ವಿಕಿರಣ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಇದರಿಂದ ಅಡ್ಡಪರಿಣಾಮಗಳು ಕಡಿಮೆಯಾಗುತ್ತವೆ ಮತ್ತು ರೋಗಿಗಳಿಗೆ ಉತ್ತಮ ಚಿಕಿತ್ಸಾ ಫಲಿತಾಂಶ ದೊರೆಯುತ್ತದೆ” ಎಂದು ಹೇಳಿದರು.

HCG ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಮನೀಶ್ ಮಟ್ಟೂ ಅವರ ಪ್ರಕಾರ, MR-Linac ಮೂಲಕ ಪ್ರತಿಯೊಬ್ಬ ರೋಗಿಯ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆಯನ್ನು ರೂಪಿಸಬಹುದಾಗಿದ್ದು, ಆರೋಗ್ಯಕರ ಅಂಗಾಂಶಗಳನ್ನು ಸುರಕ್ಷಿತವಾಗಿಡುವ ಮೂಲಕ ಚಿಕಿತ್ಸೆಯ ಗುಣಮಟ್ಟ ಮತ್ತಷ್ಟು ಹೆಚ್ಚಲಿದೆ.

ಎಲೆಕ್ಟಾ ಸಂಸ್ಥೆಯ ಟೈಮಿಯಾ ವಿಭಾಗದ ಮುಖ್ಯಸ್ಥ ಫೆರಸ್ ಅಲ್ ಹಸನ್ ಅವರು, HCG ಜೊತೆಗಿನ ಸಹಭಾಗಿತ್ವ ಭಾರತದಲ್ಲಿ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆಯ ವಿಸ್ತರಣೆಗೆ ಹೊಸ ದಿಕ್ಕು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಾಧನೆಯೊಂದಿಗೆ ಕರ್ನಾಟಕದಲ್ಲಿ ವಿಶ್ವಮಟ್ಟದ ನಿಖರ ಕ್ಯಾನ್ಸರ್ ಚಿಕಿತ್ಸೆ ಮತ್ತಷ್ಟು ಸುಲಭವಾಗಿ ಲಭ್ಯವಾಗುವಂತಾಗಿದೆ.

Continue Reading

ಬೆಂಗಳೂರು

NICE ರಸ್ತೆಯಲ್ಲಿ BMTC ಪ್ರಯಾಣಿಕರಿಗೆ ಹೆಚ್ಚುವರಿ ಹೊರೆ! ಬಸ್ ಪಾಸ್ ಇದ್ದರೂ ಟೋಲ್ ಶುಲ್ಕ ಕಡ್ಡಾಯ

Published

on

ಬೆಂಗಳೂರು: ಬೆಂಗಳೂರಿನ ನೈಸ್ ರಸ್ತೆ (NICE Road) ಮೂಲಕ ಸಂಚರಿಸುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಪ್ರತ್ಯೇಕವಾಗಿ ಟೋಲ್ ಶುಲ್ಕ ವಸೂಲಿ ಮಾಡುತ್ತಿರುವುದು ವ್ಯಾಪಕ ಆಕ್ಷೇಪಕ್ಕೆ ಕಾರಣವಾಗಿದೆ. ಸರ್ಕಾರದ ಉಚಿತ ಹಾಗೂ ರಿಯಾಯಿತಿ ಪ್ರಯಾಣ ಯೋಜನೆಗಳಿದ್ದರೂ ಟೋಲ್ ಶುಲ್ಕವನ್ನು ಪ್ರಯಾಣಿಕರೇ ಭರಿಸಬೇಕಾಗಿರುವುದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚುವರಿ ಆರ್ಥಿಕ ಹೊರೆ ತಂದಿದೆ.

ಪ್ರತಿದಿನ ಕಾಲೇಜು, ತರಬೇತಿ ಕೇಂದ್ರಗಳು ಹಾಗೂ ಉದ್ಯೋಗ ಸ್ಥಳಗಳಿಗೆ ನೈಸ್ ರಸ್ತೆ ಮಾರ್ಗವಾಗಿ ಪ್ರಯಾಣಿಸುವ ಸಾವಿರಾರು ವಿದ್ಯಾರ್ಥಿಗಳು ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ಹೊಂದಿದ್ದರೂ, ಟೋಲ್ ವೆಚ್ಚವನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗಿದೆ. ಇದರಿಂದ ಪ್ರತಿನಿತ್ಯ ಹೆಚ್ಚುವರಿ ಹಣ ಖರ್ಚಾಗುತ್ತಿದ್ದು, ತಿಂಗಳ ಕೊನೆಯಲ್ಲಿ ಗಮನಾರ್ಹ ವೆಚ್ಚವಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ರೀತಿ, ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ದೊರೆಯುತ್ತಿದ್ದರೂ, ನೈಸ್ ರಸ್ತೆ ಮೂಲಕ ಸಂಚರಿಸುವ ಬಸ್‌ಗಳಲ್ಲಿ ಟೋಲ್ ಶುಲ್ಕ ವಿನಾಯಿತಿ ಅನ್ವಯಿಸುವುದಿಲ್ಲ ಎಂದು ಚಾಲಕರು ಹಾಗೂ ನಿರ್ವಾಹಕರು ಸ್ಪಷ್ಟಪಡಿಸುತ್ತಿದ್ದಾರೆ. ಪರಿಣಾಮ ಮಹಿಳಾ ಪ್ರಯಾಣಿಕರೂ ಹೆಚ್ಚುವರಿ ಹಣ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಸರ್ಕಾರ ಉಚಿತ ಪ್ರಯಾಣ ಮತ್ತು ರಿಯಾಯಿತಿ ಬಸ್ ಪಾಸ್ ಯೋಜನೆಗಳನ್ನು ಜಾರಿಗೊಳಿಸಿರುವ ಉದ್ದೇಶಕ್ಕೆ ಈ ಹೆಚ್ಚುವರಿ ಟೋಲ್ ಶುಲ್ಕ ವಿರುದ್ಧವಾಗಿದೆ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. ನೈಸ್ ರಸ್ತೆ ಬಳಕೆ ಮಾಡುವ ಬಸ್‌ಗಳಿಗೆ ಸಂಬಂಧಿಸಿದ ಟೋಲ್ ವೆಚ್ಚವನ್ನು ಸರ್ಕಾರ ಅಥವಾ ಬಿಎಂಟಿಸಿ ಸಂಸ್ಥೆಯೇ ಭರಿಸಬೇಕು ಎಂಬ ಒತ್ತಾಯವೂ ಹೆಚ್ಚುತ್ತಿದೆ.

ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಪ್ರಕಾರ, ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಪ್ರತಿದಿನ ಪ್ರಯಾಣಿಸುವವರಿಗೆ ಈ ಹೆಚ್ಚುವರಿ ವೆಚ್ಚ ದೊಡ್ಡ ಹೊರೆ ಆಗಿದ್ದು, ತಕ್ಷಣವೇ ಟೋಲ್ ಶುಲ್ಕವನ್ನು ಬಸ್ ಪಾಸ್ ವ್ಯಾಪ್ತಿಗೆ ಸೇರಿಸುವುದು ಅಥವಾ ಸರ್ಕಾರವೇ ಅದರ ವೆಚ್ಚವನ್ನು ಭರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಈ ಕುರಿತು ಬಿಎಂಟಿಸಿ ಹಾಗೂ ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಲ್ಲಿ ಸಾವಿರಾರು ಪ್ರಯಾಣಿಕರು ಕಾಯುತ್ತಿದ್ದಾರೆ.

Continue Reading

ಬೆಂಗಳೂರು

Brahmin Community ಗೆ ಸಚಿವ ಸ್ಥಾನ ಇಲ್ಲ! ಕಾಂಗ್ರೆಸ್ ವಿರುದ್ಧ ಫ್ರೀಡಂ ಪಾರ್ಕ್‌ನಲ್ಲಿ ಆಕ್ರೋಶದ ಪ್ರತಿಭಟನೆ

Published

on

ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ Brahmin Community ಯಾವುದೇ ಪ್ರಾತಿನಿಧ್ಯ ನೀಡದಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಿತು. ಸಮುದಾಯದ ಮುಖಂಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸ್ಥಾನ ನೀಡುವಂತೆ ಆಗ್ರಹಿಸಿದರು.

ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜಯಸಿಂಹ ಮಾತನಾಡಿ, ಮಹಾತ್ಮ ಗಾಂಧಿಯನ್ನು ಮೊಟ್ಟಮೊದಲು ಕರ್ನಾಟಕಕ್ಕೆ ಕರೆತಂದವರು ಡಿ.ವಿ. ಗುಂಡಪ್ಪ ಎಂಬುದನ್ನು ಕಾಂಗ್ರೆಸ್ ಮರೆಯಬಾರದು ಎಂದು ಹೇಳಿದರು. ಬ್ರಾಹ್ಮಣ ಸಮುದಾಯವು ಎಲ್ಲ ವರ್ಗಗಳ ಹಿತವನ್ನು ಬಯಸುವ ಸಮುದಾಯವಾಗಿದ್ದು, ಇಂತಹ ಸಮಾಜಕ್ಕೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದು ನೋವಿನ ಸಂಗತಿ ಎಂದು ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರು ಬೆಂಗಳೂರಿನ ಅಭಿವೃದ್ಧಿಗೆ ನೀಡಿದ ಕೊಡುಗೆ ಹಾಗೂ ಎಲ್ಲಾ ಸಮುದಾಯಗಳಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೊಳಿಸಿದ್ದನ್ನು ಅವರು ಸ್ಮರಿಸಿದರು. ಜೊತೆಗೆ, ಹಲವು ಬಾರಿ ಶಾಸಕರಾಗಿ ಆಯ್ಕೆಯಾದ ಹಿರಿಯ ನಾಯಕರುಗಳಾದ ಆರ್.ವಿ. ದೇಶಪಾಂಡೆ ಹಾಗೂ ದಿನೇಶ್ ಗುಂಡೂರಾವ್ ಅವರನ್ನು ಸಚಿವ ಸಂಪುಟದಿಂದ ದೂರವಿಟ್ಟಿರುವುದು ಉತ್ತಮ ಬೆಳವಣಿಗೆ ಅಲ್ಲ ಎಂದು ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷ ಹಾಗೂ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಕಾರ್ನಹಳ್ಳಿ ಮಾತನಾಡಿ, ಬ್ರಾಹ್ಮಣ ಸಮುದಾಯದ ಸಂಖ್ಯಾಬಲ ಕಡಿಮೆ ಎಂಬ ಕಾರಣಕ್ಕೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದು ಹೇಳಿದರು. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಶಿಕ್ಷಣ, ಆಡಳಿತ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮುದಾಯದ ಕೊಡುಗೆ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಘುನಾಥ್ ಮಾತನಾಡಿ, ಹಿಂದಿನ ಯಾವುದೇ ಸರ್ಕಾರ ಸಚಿವ ಸಂಪುಟ ರಚಿಸುವಾಗ ಬ್ರಾಹ್ಮಣ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿರಲಿಲ್ಲ. ಆದರೆ ಈ ಬಾರಿ ಮೊದಲ ಬಾರಿಗೆ ಸಮುದಾಯಕ್ಕೆ ಯಾವುದೇ ಸ್ಥಾನ ನೀಡದಿರುವುದು ಆಶ್ಚರ್ಯ ಹಾಗೂ ಬೇಸರ ಮೂಡಿಸಿದೆ ಎಂದು ಹೇಳಿದರು. ಯಾವುದೇ ನಿರ್ದಿಷ್ಟ ವ್ಯಕ್ತಿಗೆ ಸಚಿವ ಸ್ಥಾನ ಕೇಳುವುದಿಲ್ಲ, ಸಮುದಾಯದ ಪರವಾಗಿ ಒಬ್ಬರಿಗೆ ಅವಕಾಶ ನೀಡಬೇಕು ಎಂಬುದೇ ನಮ್ಮ ಬೇಡಿಕೆ ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಪುರೋಹಿತರು, ದೇವಾಲಯಗಳ ಅರ್ಚಕರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳು ಭಾಗವಹಿಸಿ ಸರ್ಕಾರವು ಸಚಿವ ಸಂಪುಟದಲ್ಲಿ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.

Continue Reading

Trending