ದೇಶ
Pakistan ಮಾಡಿದ ಕೆಲಸಕ್ಕೆ India ತಿರುಗೇಟು: ಹೈಕಮಿಷನ್ ಹೊರಗಿನ ಬ್ಯಾರಿಕೇಡ್ಗಳು ತೆರವು
ನವದೆಹಲಿ: ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯ(Pakistan High Commission) ಹೊರಭಾಗದಲ್ಲಿ ಅಳವಡಿಸಲಾಗಿದ್ದ ಭದ್ರತಾ ಬ್ಯಾರಿಕೇಡ್ಗಳು ಮತ್ತು ಸಂಚಾರ ಬೋಲಾರ್ಡ್ಗಳನ್ನು ಭಾರತೀಯ ಅಧಿಕಾರಿಗಳು ಬುಲ್ಡೋಜರ್(Bulldozer) ಬಳಸಿ ತೆರವುಗೊಳಿಸಿದ್ದಾರೆ. ಭಾರತ-ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಮತ್ತೊಂದು ಬೆಳವಣಿಗೆ ಇದೀಗ ಕುತೂಹಲ ಮೂಡಿಸಿದೆ.
ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ(Indian High Commission) ಮುಂಭಾಗದಲ್ಲಿ ಅಳವಡಿಸಲಾಗಿದ್ದ ಭದ್ರತಾ ಬೇಲಿಗಳನ್ನು ಪಾಕಿಸ್ತಾನ ಸರ್ಕಾರ ಇತ್ತೀಚೆಗೆ ತೆರವುಗೊಳಿಸಿತ್ತು. ಪಾಕಿಸ್ತಾನದ ಈ ಕ್ರಮಕ್ಕೆ ಪ್ರತಿಯಾಗಿ ಭಾರತವೂ ಇದೀಗ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಹೊರಭಾಗದ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿದೆ ಎಂದು ವರದಿಯಾಗಿದೆ.
ಭಾರತ-ಪಾಕಿಸ್ತಾನ ನಡುವೆ ಮತ್ತಷ್ಟು ಬಿಗಡಾಯಿಸಿದ ಪರಿಸ್ಥಿತಿ
ಇತ್ತೀಚಿನ ಬೆಳವಣಿಗೆಗಳಿಂದ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಸೂಕ್ಷ್ಮ ಹಂತ ತಲುಪಿದೆ. ಭದ್ರತಾ ವ್ಯವಸ್ಥೆ ಹಾಗೂ ರಾಜತಾಂತ್ರಿಕ ಕಚೇರಿಗಳ ಸುತ್ತಮುತ್ತಲಿನ ನಿರ್ಬಂಧಗಳಿಗೆ ಸಂಬಂಧಿಸಿದಂತೆ ಎರಡೂ ದೇಶಗಳು ಪರಸ್ಪರ ಕ್ರಮ ಕೈಗೊಳ್ಳುತ್ತಿರುವುದು ಗಮನ ಸೆಳೆದಿದೆ.
ಇದರ ನಡುವೆ ಭಾರತಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಶ್ರೀನಗರಕ್ಕೆ ಭೇಟಿ ನೀಡಿ, ಕಾಶ್ಮೀರ ಭಾರತದ ಪ್ರಮುಖ ಹಾಗೂ ಅವಿಭಾಜ್ಯ ಅಂಗ ಎಂದು ಹೇಳಿಕೆ ನೀಡಿದ್ದರು. ಅಮೆರಿಕ ರಾಯಭಾರಿಯ ಈ ಹೇಳಿಕೆಗೆ ಪಾಕಿಸ್ತಾನ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
ಅಮೆರಿಕ ರಾಯಭಾರಿಗೆ ಪಾಕಿಸ್ತಾನದಿಂದ ಸಮನ್ಸ್
ಕಾಶ್ಮೀರ ಕುರಿತ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಪಾಕಿಸ್ತಾನ, ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಅವರಿಗೆ ಸಮನ್ಸ್ ಜಾರಿ ಮಾಡಿ ತನ್ನ ಆಕ್ಷೇಪ ದಾಖಲಿಸಿತ್ತು.
ಈ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಹೊರಭಾಗದ ಭದ್ರತಾ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿರುವುದು ಭಾರತ-ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುವ ಸೂಚನೆಯೇ ಎಂಬ ಚರ್ಚೆ ಆರಂಭವಾಗಿದೆ.
ಭದ್ರತಾ ಬ್ಯಾರಿಕೇಡ್ಗಳ ತೆರವು ವಿಚಾರವು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಮರಕ್ಕೆ ಮತ್ತೊಂದು ಅಧ್ಯಾಯ ಸೇರ್ಪಡೆಯಾಗುವ ಸಾಧ್ಯತೆ ಇದೆ.
ದೇಶ
CM D K Shiv Kumar ದಕ್ಷಿಣ ರಾಜ್ಯಗಳ ಹಕ್ಕಿಗಾಗಿ ಡಿಕೆ ಶಿವಕುಮಾರ್ ಬ್ಯಾಟಿಂಗ್: ತೆರಿಗೆ, ನೀರು, ಕ್ಷೇತ್ರ ಪುನರ್ವಿಂಗಡಣೆ ಬಗ್ಗೆ ಖಡಕ್ ಆಗ್ರಹ
ಚೆನ್ನೈ: ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ದಕ್ಷಿಣ ವಲಯ ಮಂಡಳಿಯ 31ನೇ ಸಭೆಯಲ್ಲಿ ಕರ್ನಾಟಕದ CM D K Shiv Kumar ಅವರು ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದರು. ತೆರಿಗೆ ಪಾಲು, ಕ್ಷೇತ್ರ ಪುನರ್ವಿಂಗಡಣೆ, ಜಲ ವಿವಾದ, ಖನಿಜ ಸಂಪನ್ಮೂಲಗಳ ಮೇಲಿನ ಹಕ್ಕು ಹಾಗೂ ಕೇಂದ್ರದ ಯೋಜನೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ರಾಜ್ಯದ ನಿಲುವನ್ನು ಸ್ಪಷ್ಟಪಡಿಸಿದರು.
ದಕ್ಷಿಣ ಭಾರತದ ಐದು ರಾಜ್ಯಗಳು ದೇಶದ ಒಟ್ಟು ಜನಸಂಖ್ಯೆಯ ಸುಮಾರು ಶೇ.20ರಷ್ಟಿದ್ದರೂ ದೇಶದ ಜಿಡಿಪಿಗೆ ಶೇ.33ರಷ್ಟು ಕೊಡುಗೆ ನೀಡುತ್ತಿವೆ ಎಂದು ಶಿವಕುಮಾರ್ ಹೇಳಿದರು. ದೇಶದ ಆರ್ಥಿಕತೆಯಲ್ಲಿ ಪ್ರತಿ ಮೂರು ರೂಪಾಯಿಗಳಲ್ಲಿ ಒಂದು ರೂಪಾಯಿ ದಕ್ಷಿಣ ಭಾರತದಿಂದ ಬರುತ್ತಿದೆ ಎಂದು ಅವರು ವಿವರಿಸಿದರು.
ತೆರಿಗೆ ಪಾಲು ಕಡಿತಕ್ಕೆ ಆಕ್ಷೇಪ
15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕದ ತೆರಿಗೆ ಪಾಲು ಶೇ.4.7ರಿಂದ ಶೇ.3.6ಕ್ಕೆ ಇಳಿಕೆಯಾಗಿದ್ದು, ಇದರಿಂದ ಆರು ವರ್ಷಗಳಲ್ಲಿ ರಾಜ್ಯಕ್ಕೆ ಸುಮಾರು ₹65,000 ಕೋಟಿ ನಷ್ಟವಾಗಿದೆ ಎಂದು ಶಿವಕುಮಾರ್ ಹೇಳಿದರು.
16ನೇ ಹಣಕಾಸು ಆಯೋಗದಲ್ಲಿ ಕರ್ನಾಟಕದ ಪಾಲು ಶೇ.4.131ಕ್ಕೆ ಏರಿಕೆಯಾಗಿರುವುದನ್ನು ಸ್ವಾಗತಿಸಿದ ಅವರು, ರಾಜ್ಯದ ಮೂಲ ಪಾಲನ್ನು ಮತ್ತೆ ಶೇ.4.7ಕ್ಕೆ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಉತ್ತಮ ತೆರಿಗೆ ಸಂಗ್ರಹ ಮತ್ತು ಆರ್ಥಿಕ ಬೆಳವಣಿಗೆ ಸಾಧಿಸುವ ರಾಜ್ಯಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಕರ್ನಾಟಕಕ್ಕೆ ಕೇಂದ್ರ ಯೋಜನೆಗಳ ಬೇಡಿಕೆ
ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು ಯೋಜನೆ, ಎಸ್ಟಿಆರ್ಆರ್ನ ದಕ್ಷಿಣ ಭಾಗ, ರಾಯಚೂರಿಗೆ ಏಮ್ಸ್ ಹಾಗೂ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಸೇರಿದಂತೆ ಹಲವು ಕೇಂದ್ರ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಕ್ಷೇತ್ರ ಪುನರ್ವಿಂಗಡಣೆ ಬಗ್ಗೆ ದಕ್ಷಿಣದ ರಾಜ್ಯಗಳ ಆತಂಕ
ಜನಸಂಖ್ಯೆ ನಿಯಂತ್ರಣದಲ್ಲಿ ದಕ್ಷಿಣ ಭಾರತದ ರಾಜ್ಯಗಳು ದೇಶದ ಹಿತದೃಷ್ಟಿಯಿಂದ ಶಿಸ್ತು ಪಾಲಿಸಿವೆ. ಆದರೆ ಇದೇ ಕಾರಣದಿಂದ ಭವಿಷ್ಯದ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ದಕ್ಷಿಣ ರಾಜ್ಯಗಳ ಸಂಸತ್ತಿನ ಪ್ರಾತಿನಿಧ್ಯ ಕಡಿಮೆಯಾಗಬಾರದು ಎಂದು ಶಿವಕುಮಾರ್ ಹೇಳಿದರು.
“ನಾವು ಪಾಲಿಸಿದ ಶಿಸ್ತೇ ನಮಗೆ ಮುಳುವಾಗಬಾರದು” ಎಂದು ಹೇಳಿದ ಅವರು, ಯಾವುದೇ ದಕ್ಷಿಣ ರಾಜ್ಯದ ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಜಲ ವಿವಾದಕ್ಕೆ ಸಹಕಾರದ ಪರಿಹಾರ
ದಕ್ಷಿಣ ರಾಜ್ಯಗಳ ನಡುವಿನ ಜಲ ವಿವಾದಗಳ ಕುರಿತು ಮಾತನಾಡಿದ ಶಿವಕುಮಾರ್, ನೀರು ರಾಜ್ಯಗಳನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು ಎಂದರು. ಟ್ರಿಬ್ಯೂನಲ್ಗಳ ತೀರ್ಪುಗಳ ಅಡಿಯಲ್ಲಿ ಪ್ರತಿಯೊಂದು ರಾಜ್ಯದ ಕಾನೂನುಬದ್ಧ ನೀರಿನ ಪಾಲನ್ನು ಗೌರವಿಸಬೇಕು ಎಂದು ಹೇಳಿದರು.
ಖನಿಜ ಸಂಪನ್ಮೂಲ, ಮಾದಕ ದ್ರವ್ಯ ನಿಯಂತ್ರಣಕ್ಕೂ ಒತ್ತು
ಖನಿಜ ಸಂಪನ್ಮೂಲಗಳ ಮೇಲಿನ ರಾಜ್ಯಗಳ ಹಣಕಾಸು ಹಕ್ಕು ಮತ್ತು ಸ್ವಾಯತ್ತತೆಯನ್ನು ರಕ್ಷಿಸಬೇಕು ಎಂದು ಅವರು ಪ್ರತಿಪಾದಿಸಿದರು. ಗಡಿಯಾಚೆಗಿನ ಮಾದಕ ದ್ರವ್ಯ ಕಳ್ಳಸಾಗಣೆಯನ್ನು ನಿಯಂತ್ರಿಸಲು ಕೇಂದ್ರ ಹಾಗೂ ನೆರೆ ರಾಜ್ಯಗಳು ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಹಕ್ಕುಗಳಿಗೆ ನ್ಯಾಯ ದೊರೆಯುವುದರ ಜೊತೆಗೆ, ದಕ್ಷಿಣ ಭಾರತದ ಆರ್ಥಿಕ ಕೊಡುಗೆಗೆ ತಕ್ಕ ಪ್ರೋತ್ಸಾಹ ಸಿಗಬೇಕು ಎಂಬ ಸಂದೇಶವನ್ನು ಶಿವಕುಮಾರ್ ಸಭೆಯಲ್ಲಿ ಮಂಡಿಸಿದರು.
ಬೆಂಗಳೂರು
Bengaluru ಟ್ರಾಫಿಕ್ಗೆ ಬಿಗ್ ರಿಲೀಫ್: 28 ಕಿ.ಮೀ ಎಲಿವೇಟೆಡ್ ಕಾರಿಡಾರ್, 90 ನಿಮಿಷದ ಪ್ರಯಾಣ 30 ನಿಮಿಷಕ್ಕೆ!
ಬೆಂಗಳೂರು: ರಾಜಧಾನಿ ಬೆಂಗಳೂರಿನ(Bengaluru) ಸಂಚಾರ ದಟ್ಟಣೆಗೆ ಪರಿಹಾರ ನೀಡಲು ನಗರದ ಅತಿದೊಡ್ಡ ಎಲಿವೇಟೆಡ್ ಕಾರಿಡಾರ್(Elevated Corridor) ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ತುಮಕೂರು ರಸ್ತೆ(Tumakuru Road)ಯಿಂದ ಹಳೇ ಮದ್ರಾಸ್ ರಸ್ತೆ(Old Madras Road)ಯನ್ನು ಸಂಪರ್ಕಿಸುವ ಸುಮಾರು 28 ಕಿ.ಮೀ ಉದ್ದದ ಶುಲ್ಕ ಸಹಿತ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (B-SMILE) ಮುಂದಾಗಿದೆ.
ಸುಮಾರು ₹3,500 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ-ಖಾಸಗಿ ಸಹಭಾಗಿತ್ವದ(PPP) ಮೂಲಕ BOOT ಮಾದರಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಯೋಜನಾ ವೆಚ್ಚದ ಶೇ.40ರಷ್ಟನ್ನು ರಾಜ್ಯ ಸರ್ಕಾರ ಭರಿಸಲಿದ್ದು, ಉಳಿದ ಶೇ.60ರಷ್ಟು ಮೊತ್ತವನ್ನು ಗುತ್ತಿಗೆದಾರ ಸಂಸ್ಥೆ ಹೂಡಿಕೆ ಮಾಡಲಿದೆ.
30 ವರ್ಷ ಟೋಲ್ ಸಂಗ್ರಹಕ್ಕೆ ಅವಕಾಶ
ಕಾರಿಡಾರ್ ನಿರ್ಮಾಣ ಪೂರ್ಣಗೊಂಡ ಬಳಿಕ ಗುತ್ತಿಗೆದಾರ ಸಂಸ್ಥೆಗೆ 30 ವರ್ಷಗಳ ಕಾಲ ವಾಹನಗಳಿಂದ ಬಳಕೆದಾರರ ಶುಲ್ಕ ಸಂಗ್ರಹಿಸಲು ಅವಕಾಶ ನೀಡಲಾಗುತ್ತದೆ. ಆದರೆ, ವಾಹನಗಳಿಗೆ ವಿಧಿಸುವ ಶುಲ್ಕದ ಪ್ರಮಾಣವನ್ನು ಸರ್ಕಾರವೇ ಅಂತಿಮಗೊಳಿಸಲಿದೆ.
30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ
ಯೋಜನೆಯ ಪ್ರಕಾರ ಕಾಮಗಾರಿಯನ್ನು 30 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಯಶವಂತಪುರ ಫ್ಲೈಓವರ್ ಬಳಿಯಿಂದ ಆರಂಭವಾಗುವ ನಾಲ್ಕು ಪಥಗಳ ಕಾರಿಡಾರ್ನಲ್ಲಿ ಒಟ್ಟು 12 ಕಡೆ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಇರಲಿದೆ. ಕಾರಿಡಾರ್ನಲ್ಲಿ ವಾಹನಗಳು ಗರಿಷ್ಠ 60ರಿಂದ 80 ಕಿ.ಮೀ ವೇಗದಲ್ಲಿ ಸಂಚರಿಸುವಂತೆ ವಿನ್ಯಾಸಗೊಳಿಸಲಾಗುತ್ತದೆ.
90 ನಿಮಿಷದ ಪ್ರಯಾಣ ಕೇವಲ 30 ನಿಮಿಷಕ್ಕೆ?
ಪ್ರಸ್ತುತ ಯಶವಂತಪುರದಿಂದ ಕೆ.ಆರ್.ಪುರ ಸಿಗ್ನಲ್ ಬಳಿಯ ಹೂವಿನ ಮಾರುಕಟ್ಟೆ ಪ್ರದೇಶಕ್ಕೆ ಪೀಕ್ ಅವಧಿಯಲ್ಲಿ ಸುಮಾರು 90 ನಿಮಿಷಗಳವರೆಗೆ ಪ್ರಯಾಣ ಸಮಯ ಬೇಕಾಗುತ್ತದೆ. ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾದರೆ ಇದೇ ಪ್ರಯಾಣವನ್ನು ಸುಮಾರು 28ರಿಂದ 30 ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು ಎಂಬ ನಿರೀಕ್ಷೆ ಇದೆ.
ಯಾವ ಮಾರ್ಗದಲ್ಲಿ ಎಲಿವೇಟೆಡ್ ಕಾರಿಡಾರ್?
ಯಶವಂತಪುರ ಫ್ಲೈಓವರ್ ಸರ್ಕಲ್ನಿಂದ ಆರಂಭವಾಗುವ ಕಾರಿಡಾರ್ ಐಐಎಸ್ಸಿ, ಮೇಕ್ರಿ ಸರ್ಕಲ್, ಜಯಮಹಲ್, ಸೇಂಟ್ ಜಾನ್ಸ್ ಚರ್ಚ್ ರಸ್ತೆ ಹಾಗೂ ಹಲಸೂರು ಕೆರೆ ಮಾರ್ಗವಾಗಿ ಸಾಗಲಿದೆ. ಬಳಿಕ ಹಳೇ ಮದ್ರಾಸ್ ರಸ್ತೆಯನ್ನು ಸಂಪರ್ಕಿಸಿ ಕೆ.ಆರ್.ಪುರ ಸಿಗ್ನಲ್ ನಂತರ ಮುಕ್ತಾಯಗೊಳ್ಳಲಿದೆ.
ಎಲಿವೇಟೆಡ್ ಕಾರಿಡಾರ್ ಬಳಸಲು ಇಚ್ಛಿಸದ ವಾಹನ ಸವಾರರಿಗೆ ಈಗಿರುವ ಸಾಮಾನ್ಯ ರಸ್ತೆಗಳು ಎಂದಿನಂತೆ ಲಭ್ಯವಿರಲಿವೆ. ಹೀಗಾಗಿ ಯೋಜನೆ ಜಾರಿಯಾದರೆ ನಗರದ ಪ್ರಮುಖ ಜಂಕ್ಷನ್ಗಳಲ್ಲಿ ಸಂಚಾರದ ಒತ್ತಡ ಕಡಿಮೆಯಾಗುವ ನಿರೀಕ್ಷೆ ಇದೆ.
ಬೆಂಗಳೂರು
Bengaluru Cloudnine ಸೇರಿ ಹಲವು ಆಸ್ಪತ್ರೆಗಳಿಗೆ ಭಾರೀ ದಂಡ! KPME ಉಲ್ಲಂಘನೆಗೆ ಬೆಂಗಳೂರು ಜಿಲ್ಲಾಡಳಿತದ ಕ್ರಮ
ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯಿದೆ (KPME) ನಿಯಮಗಳನ್ನು ಉಲ್ಲಂಘಿಸಿರುವ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳ ವಿರುದ್ಧ ಬೆಂಗಳೂರು ನಗರ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ KPME ಮತ್ತು ಕುಂದುಕೊರತೆ ಪ್ರಾಧಿಕಾರದ ಸಭೆಯಲ್ಲಿ, ಜಿಲ್ಲಾಧಿಕಾರಿ ಕಾಂತರಾಜು ಅವರು ನಿಯಮ ಉಲ್ಲಂಘಿಸಿದ ವೈದ್ಯಕೀಯ ಸಂಸ್ಥೆಗಳ ಪ್ರತಿನಿಧಿಗಳ ವಿಚಾರಣೆ ನಡೆಸಿ ದಂಡ ಹಾಗೂ ಇತರ ಕ್ರಮಗಳಿಗೆ ಆದೇಶಿಸಿದ್ದಾರೆ.
ನಿಯಮ ಉಲ್ಲಂಘನೆ ಗಂಭೀರವಾಗಿದ್ದ ಮೂರು ವೈದ್ಯಕೀಯ ಸಂಸ್ಥೆಗಳ KPME ಪರವಾನಗಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಟಿ.ದಾಸರಹಳ್ಳಿಯ ಶ್ರೀ ಅಯ್ಯಪ್ಪ ಟೆಂಪಲ್ ಮೆಡಿಕಲ್ ಸೆಂಟರ್ಗೆ ₹50,000, ಜಿಗಣಿಯ ಶ್ರೀ ಪದ್ಮಗಿರಿ ಕ್ಲಿನಿಕ್ಗೆ ₹1 ಲಕ್ಷ ಹಾಗೂ ಬಿ.ಜಿ. ರಸ್ತೆಯ ಶ್ರೀ ಹರ್ಷವರ್ಧನ್ ಆಸ್ಪತ್ರೆಗೆ ₹20,000 ದಂಡ ವಿಧಿಸಿ ಪರವಾನಗಿ ರದ್ದುಗೊಳಿಸಲಾಗಿದೆ.
ಹಲವು ಆಸ್ಪತ್ರೆಗಳಿಗೆ ದಂಡ
KPME ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಮತ್ತಷ್ಟು ವೈದ್ಯಕೀಯ ಸಂಸ್ಥೆಗಳಿಗೂ ಜಿಲ್ಲಾಡಳಿತ ದಂಡ ವಿಧಿಸಿದೆ. ಎಚ್ಎಎಲ್ ರಸ್ತೆಯ Cloudnine Hospital ಆಸ್ಪತ್ರೆಗೆ ₹50,000, ಹುಲ್ಲಹಳ್ಳಿಯ ಆರ್.ವಿ. ಕ್ಲಿನಿಕ್ಗೆ ₹1 ಲಕ್ಷ, ಮುನೇಶ್ವರ ಲೇಔಟ್ನ ಇಕ್ಷಾ ಕ್ಲಿನಿಕ್ಗೆ ₹10,000 ಹಾಗೂ ರಾಜಾಜಿನಗರದ ಎನ್ಯು ಹಾಸ್ಪಿಟಲ್ಸ್ಗೆ ₹10,000 ದಂಡ ವಿಧಿಸಲಾಗಿದೆ.
ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂಘನೆ ಅಥವಾ ನ್ಯೂನತೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳಿಗೆ ಎಚ್ಚರಿಕೆ ನೀಡಲಾಗಿದೆ. ಈ ಸಂಬಂಧ ವೈದ್ಯಕೀಯ ಸಂಸ್ಥೆಗಳ ಪ್ರತಿನಿಧಿಗಳಿಂದ ಮುಚ್ಚಳಿಕೆ ಪತ್ರವನ್ನೂ ಪಡೆಯಲಾಗಿದೆ.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮದಿನಿ ಸೇರಿದಂತೆ ಹಲವು ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳು KPME ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಡಳಿತ ಸ್ಪಷ್ಟ ಸಂದೇಶ ನೀಡಿದೆ.
-
ಬೆಂಗಳೂರು21 ಗಂಟೆಗಳು agoKarnataka Housing Board ಅಧ್ಯಕ್ಷರಾಗಿ MLA Srinivas Mane ಪದಗ್ರಹಣ; ಜನಸೇವೆಗೆ ಮೊದಲ ಆದ್ಯತೆ ಎಂದ ಶಾಸಕ
-
ದೇಶ22 ಗಂಟೆಗಳು agoStrait of Hormuz ಮೇಲೆ ಟ್ರಂಪ್ ಹೊಸ ಘೋಷಣೆ; ಇರಾನ್ಗೆ ಭಾರೀ ಸವಾಲು!
-
ದೇಶ22 ಗಂಟೆಗಳು agoDog Mask Protest ನಾಯಿ ಕಾಟಕ್ಕೆ ಜನ ಹೈರಾಣ! ಜಿಲ್ಲಾಧಿಕಾರಿ ಕಚೇರಿಗೆ ನಾಯಿ ವೇಷದಲ್ಲಿ ಬಂದ ವ್ಯಕ್ತಿ, ವಿಡಿಯೋ ವೈರಲ್
-
ರಾಜ್ಯ23 ಗಂಟೆಗಳು agoTamil Nadu CM ವಿಜಯ್-ತ್ರಿಷಾ ಭೇಟಿಗೆ ರಾಜಕೀಯ ಬಣ್ಣ! Murasoli ಸಂಪಾದಕೀಯದಿಂದ ತಮಿಳುನಾಡಿನಲ್ಲಿ ಹೊಸ ವಿವಾದ
-
ದೇಶ23 ಗಂಟೆಗಳು agoBihar ‘ಸರ್ಕಾರ ತಲೆಬಾಗಲೇಬೇಕು’: ವಾಟರ್ ಕ್ಯಾನನ್ ಪ್ರಯೋಗಕ್ಕೂ ಜಗ್ಗದ Tejashwi Yadav
-
ರಾಜ್ಯ24 ಗಂಟೆಗಳು agoTamil Nadu ಶಾಸಕರಿಗೆ ಭರ್ಜರಿ ಗಿಫ್ಟ್: 234 MLAsಗೆ ಕಾರು, ₹75 ಸಾವಿರ ಭತ್ಯೆ; ಕಾರ್ಯದರ್ಶಿಗೂ ₹25 ಸಾವಿರ!
-
ಬೆಂಗಳೂರು24 ಗಂಟೆಗಳು agoBengaluru Traffic 4 ಕಿ.ಮೀಗೆ 30 ನಿಮಿಷ, 17 ಕಿ.ಮೀಗೆ 2 ಗಂಟೆ! ಬೆಂಗಳೂರಿನ ಟ್ರಾಫಿಕ್ ಬಗ್ಗೆ ಬಾಸ್ ಆಕ್ರೋಶ
-
ಅಪರಾಧ23 ಗಂಟೆಗಳು agoRamanagara ದಲ್ಲಿ ಕೋಟಿ ಕೋಟಿ ನಕಲಿ ಔಷಧ ದಂಧೆ ಬಯಲು! ಫಾರ್ಮ್ಹೌಸ್ನಲ್ಲಿ ಏನಾಗುತ್ತಿತ್ತು?
