Connect with us

ಬೆಂಗಳೂರು

ಮಳೆ-ಬಿಸಿಲನ್ನೂ ಲೆಕ್ಕಿಸದೆ ಸೇವೆ: 7,000 ಚಾಲಕರಿಗೆ MLA S T Soma Shekhar ವಿಶೇಷ ಗೌರವ

Published

on

ಬೆಂಗಳೂರು: ಪ್ರತಿದಿನ ಸಂಚಾರ ನಡೆಸುವ ಆಟೋ ಮತ್ತು ಕ್ಯಾಬ್ ಚಾಲಕರು ಕೇವಲ ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸುವವರಲ್ಲ. ತಮ್ಮ ಕುಟುಂಬದ ಭವಿಷ್ಯದ ಕನಸುಗಳನ್ನು ಹೊತ್ತುಕೊಂಡು ದುಡಿಯುವವರು ಎಂದು ಯಶವಂತಪುರ ಕ್ಷೇತ್ರದ MLA S T Soma Shekhar ಚಾಲಕರ ಸೇವೆಯನ್ನು ಶ್ಲಾಘಿಸಿದ್ದಾರೆ.

ಕೆಂಗೇರಿ ಉಪನಗರದ ಕೊಮ್ಮಘಟ್ಟ ಮೈದಾನದಲ್ಲಿ ಆಯೋಜಿಸಿದ್ದ ‘Sanchari Heroes ’ ಕಾರ್ಯಕ್ರಮದಲ್ಲಿ ಯೆಲ್ಲೋ ಬೋರ್ಡ್ ಬ್ಯಾಡ್ಜ್ ಹೊಂದಿರುವ ಸುಮಾರು 7,000 ಆಟೋ ಮತ್ತು ಕ್ಯಾಬ್ ಚಾಲಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಪ್ರತಿದಿನ ವಿವಿಧ ವರ್ಗದ ಜನರನ್ನು ತಮ್ಮ ವಾಹನಗಳಲ್ಲಿ ಕರೆದೊಯ್ಯುವ ಚಾಲಕರು ಜಾತಿ, ಧರ್ಮ ಸೇರಿದಂತೆ ಯಾವುದೇ ಭೇದಭಾವವಿಲ್ಲದೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಗಮ್ಯಸ್ಥಾನಕ್ಕೆ ತಲುಪಿಸುವ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸೋಮಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು.

“ಪ್ರತಿ ಸಂಚಾರದಲ್ಲೂ ಚಾಲಕರು ಹೊತ್ತೊಯ್ಯುವುದು ಕೇವಲ ಪ್ರಯಾಣಿಕರನ್ನಲ್ಲ, ತಮ್ಮ ಮಕ್ಕಳ ಭವಿಷ್ಯದ ಕನಸುಗಳನ್ನು. ಅಂತಹ ಚಾಲಕರನ್ನು ಸಂಚಾರಿ ಹೀರೊಸ್ ಎಂದು ಕರೆಯುವುದೇ ಸೂಕ್ತ” ಎಂದು ಅವರು ಹೇಳಿದರು.

ಟೀಕೆಗೆ ಜನಪರ ಕಾರ್ಯಕ್ರಮಗಳ ಮೂಲಕ ಉತ್ತರ

ತಮ್ಮನ್ನು ‘ರಂಗೋಲಿ ಶಾಸಕ’, ‘ಕುಕ್ಕರ್ ಶಾಸಕ’ ಎಂದು ಟೀಕಿಸುವವರಿಗೆ ಜನಪರ ಕಾರ್ಯಕ್ರಮಗಳ ಮೂಲಕ ಉತ್ತರ ನೀಡಲಾಗುತ್ತಿದೆ ಎಂದು ಎಸ್.ಟಿ. ಸೋಮಶೇಖರ್ ಹೇಳಿದರು.

7,000 ಚಾಲಕರಿಗೆ ಸನ್ಮಾನ ಮಾಡುವುದರ ಜೊತೆಗೆ ಸುಮಾರು 1,600 ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಜನರ ಅಗತ್ಯಗಳಿಗೆ ಸ್ಪಂದಿಸುವುದು ತಮ್ಮ ಆದ್ಯತೆಯಾಗಿದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

₹209 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

ಯಶವಂತಪುರ ಕ್ಷೇತ್ರದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಸೋಮಶೇಖರ್ ತಿಳಿಸಿದರು. ₹209 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲಿದೆ ಎಂದು ಅವರು ಹೇಳಿದರು.

ಇದರ ಜೊತೆಗೆ ಸುಮಾರು ₹17 ಕೋಟಿ ವೆಚ್ಚದಲ್ಲಿ ಡಯಾಲಿಸಿಸ್ ಕೇಂದ್ರ, ಮುಕ್ಕಾಲು ಎಕರೆ ಪ್ರದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಐದು ಎಕರೆ ಜಾಗದಲ್ಲಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಗಣೇಶ ಆಟದ ಮೈದಾನದ ಅಭಿವೃದ್ಧಿ ಮತ್ತು ನವೀಕರಣಕ್ಕಾಗಿ ₹5 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದರು.

ಹಲವು ಪ್ರಮುಖ ಸಂಚಾರ ಯೋಜನೆಗಳು

ಮಾಜಿ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಸಹಕಾರದಿಂದ ಕೆಂಗೇರಿ ಉಪನಗರದ ರೈಲ್ವೆ ಸೇತುವೆ ಅಗಲೀಕರಣ ಸೇರಿದಂತೆ ಹಲವು ಸಂಚಾರ ಸಂಬಂಧಿತ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸೋಮಶೇಖರ್ ಹೇಳಿದರು.

ದುಬಾಸಿಪಾಳ್ಯ ಅಂಡರ್‌ಪಾಸ್, ರಾಮೋಹಳ್ಳಿ ಗೇಟ್ ಹಾಗೂ ಚಲ್ಲಘಟ್ಟ ಅಂಡರ್‌ಪಾಸ್ ಈಗಾಗಲೇ ಸಂಚಾರಕ್ಕೆ ಮುಕ್ತವಾಗಿವೆ ಎಂದು ತಿಳಿಸಿದರು. ಟೌನ್ ಹಾಲ್ ಫ್ಲೈಓವರ್ ಅನ್ನು ಕುಂಬಳಗೋಡುವರೆಗೆ ವಿಸ್ತರಿಸುವ ಯೋಜನೆಯನ್ನೂ ರೂಪಿಸಲಾಗುತ್ತಿದೆ ಎಂದರು.

ಕ್ಷೇತ್ರದಲ್ಲಿ ಸುಮಾರು 14 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

‘ಚಾಲಕರು ಅನಕ್ಷರಸ್ಥರಲ್ಲ’

ಕಾರ್ಯಕ್ರಮದಲ್ಲಿ ಮಾತನಾಡಿದ ಯುವ ಮುಖಂಡ ನಿಶಾಂತ್ ಸೋಮಶೇಖರ್, ಆಟೋ ಚಾಲಕರು ಅನಕ್ಷರಸ್ಥರು ಎಂಬ ಭಾವನೆ ಸರಿಯಲ್ಲ. ಸ್ವಾಭಿಮಾನದ ಜೀವನಕ್ಕಾಗಿ ಹೆಚ್ಚಿನ ವಿದ್ಯಾವಂತರು ಕೂಡ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಆಟೋಗಳ ಹಿಂಭಾಗದಲ್ಲಿ ಬರೆಯಲಾಗಿರುವ ಹಲವು ಸ್ಫೂರ್ತಿದಾಯಕ ಸಾಲುಗಳು ಜೀವನದ ಸಂದೇಶಗಳನ್ನು ಸಾರುತ್ತವೆ. ಮಳೆ, ಬಿಸಿಲು ಮತ್ತು ಗಾಳಿಯನ್ನು ಲೆಕ್ಕಿಸದೆ ಜನರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸುವ ಕೆಲಸವನ್ನು ಚಾಲಕರು ಮಾಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಆಟೋ ಚಾಲಕ ರಂಗೇಶ್ ಮಾತನಾಡಿ, ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಜನಪರ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ವಿಸ್ತರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಚಿತ್ರರಂಗದ ನಟರು ತಮ್ಮ ಪಾತ್ರಗಳು ಮತ್ತು ಸಮವಸ್ತ್ರಗಳ ಮೂಲಕ ಪರದೆಯ ಮೇಲೆ ಹೀರೋಗಳಾಗುತ್ತಾರೆ. ಆದರೆ ತಮ್ಮಂತಹ ಆಟೋ ಚಾಲಕರನ್ನು ‘ಸಂಚಾರಿ ಹೀರೊಸ್’ ಎಂದು ಗೌರವಿಸಿದವರು ಶಾಸಕ ಎಸ್.ಟಿ. ಸೋಮಶೇಖರ್ ಎಂದು ರಂಗೇಶ್ ಹೇಳಿದರು.

ಕಾರ್ಯಕ್ರಮದಲ್ಲಿ ಮಹಿಳಾ ಬ್ಲಾಕ್ ಅಧ್ಯಕ್ಷರಾದ ಸುಮಾ ಜನಾರ್ಧನ್, ಲಕ್ಷ್ಮೀ ಪ್ರಭುರಾಜ್, ವಿನೋದ ನರಸಿಂಹಮೂರ್ತಿ, ವಿವಿಧ ಬ್ಲಾಕ್ ಅಧ್ಯಕ್ಷರು, ಸಂಭಾವ್ಯ ಅಭ್ಯರ್ಥಿಗಳು, ಗ್ಯಾರಂಟಿ ಸಮಿತಿ ಅಧ್ಯಕ್ಷರು ಹಾಗೂ ವಾರ್ಡ್ ಅಧ್ಯಕ್ಷರು ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

J S Vasudev is a journalist and writer with 15 years of experience in writing and journalism. He founded Hosasuddi.in in 2023 with a vision to deliver credible and timely Kannada news. With a strong passion for journalism, he focuses on presenting news in a clear, simple and reader-friendly manner. His work covers current affairs, Karnataka news, national developments, business, technology and social issues. He believes in independent journalism and responsible reporting that puts readers first. His guiding motto is “Write on Your Own,” reflecting his commitment to original and independent content. Through Hosasuddi.in, he continues to contribute to Kannada digital journalism with dedication and integrity.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Siddaramaiah ಮುಂದಿನ ಸಿಎಂ? ಅರಮನೆ ಮೈದಾನದಲ್ಲಿ ಪ್ರದೀಪ್ ಈಶ್ವರ್ ಸ್ಫೋಟಕ ಹೇಳಿಕೆ

Published

on

ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆದ ಹಿಂದುಳಿದ ಜಾತಿಗಳ ಜನಜಾಗೃತಿ ಸಮಾವೇಶದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಣ್ಣಿಸಿದ್ದಾರೆ. ಈ ಹೇಳಿಕೆ ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.

ಸಮಾವೇಶದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ಸಿದ್ದರಾಮಯ್ಯ ಅವರ ನಾಯಕತ್ವವನ್ನು ಹಾಡಿಹೊಗಳಿದರು. ಸಿದ್ದರಾಮಯ್ಯ ಅವರು ಕೇವಲ ಕುರುಬ ಸಮುದಾಯದ ನಾಯಕರಲ್ಲ, ಅವರು ಅಹಿಂದ ನಾಯಕ ಎಂದು ಬಣ್ಣಿಸಿದರು.

‘ನನ್ನ ಎದೆಯಲ್ಲಿ ರಾಮನೂ ಇದ್ದಾನೆ, ಸಿದ್ದರಾಮಯ್ಯರೂ ಇದ್ದಾರೆ’

ತಮ್ಮ ಭಾಷಣದಲ್ಲಿ ಪ್ರದೀಪ್ ಈಶ್ವರ್, “ನನ್ನ ಎದೆಯಲ್ಲಿ ರಾಮನೂ ಇದ್ದಾನೆ, ಸಿದ್ದರಾಮಯ್ಯರೂ ಇದ್ದಾರೆ” ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರನ್ನು ಈ ಹಿಂದೆ ಕೆಲವರು ವಿವಿಧ ರೀತಿಯಲ್ಲಿ ಟೀಕಿಸುತ್ತಿದ್ದರು. ಕುರಿ ಕಾಯುವ ವ್ಯಕ್ತಿ ಎಂಬ ರೀತಿಯಲ್ಲಿಯೂ ಟೀಕೆ ಮಾಡಲಾಗುತ್ತಿತ್ತು. ಆದರೆ ಸಿದ್ದರಾಮಯ್ಯ ಅವರು ದಾಖಲೆ ಬಜೆಟ್ ಮಂಡಿಸಿದ ಖ್ಯಾತಿ ಹೊಂದಿದ್ದಾರೆ ಎಂದು ಪ್ರದೀಪ್ ಈಶ್ವರ್ ಹೇಳಿದರು.

ಈ ವೇಳೆ ಅವರು “ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ” ಎಂದು ಘೋಷಣೆ ಕೂಗಿದರು.

‘ನನಗೆ ರಾಜಕೀಯಕ್ಕೆ ಬಂದಿದ್ದೇಕೆ ಅನಿಸಿತ್ತು’

ತಾವು ರಾಜಕಾರಣಕ್ಕೆ ಬಂದು ಕೇವಲ ಮೂರು ವರ್ಷಗಳಾಗಿವೆ ಎಂದು ಪ್ರದೀಪ್ ಈಶ್ವರ್ ಹೇಳಿದರು. ಆದರೆ ಸಿದ್ದರಾಮಯ್ಯ ಅವರು ಸುಮಾರು 45 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಹೋರಾಟ ನಡೆಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.

“ನಾನು ರಾಜಕಾರಣಕ್ಕೆ ಬಂದು ಮೂರು ವರ್ಷ ಆಗಿದೆ. ನಮ್ಮ ಸಿದ್ದರಾಮಯ್ಯ ಅವರು ಬಂದು 45 ವರ್ಷಗಳಾಗಿದೆ” ಎಂದು ಹೇಳಿದ ಪ್ರದೀಪ್ ಈಶ್ವರ್, ತಮ್ಮ ರಾಜಕೀಯ ಅನುಭವದ ಆರಂಭಿಕ ಹಂತವನ್ನು ಸಿದ್ದರಾಮಯ್ಯ ಅವರ ದೀರ್ಘ ರಾಜಕೀಯ ಹೋರಾಟದೊಂದಿಗೆ ಹೋಲಿಸಿದರು.

ರಾಜಕೀಯಕ್ಕೆ ಬಂದ ಆರಂಭದಲ್ಲಿ “ಯಾಕಪ್ಪ ರಾಜಕೀಯಕ್ಕೆ ಬಂದೇ ಗುರು” ಎಂದು ತಮಗೆ ಅನಿಸಿದ್ದೂ ಇದೆ. ಆದರೆ ಸಿದ್ದರಾಮಯ್ಯ ಅವರು 45 ವರ್ಷಗಳ ಕಾಲ ಹೋರಾಟ ನಡೆಸಿದ್ದಾರೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಸ್ಪರ್ಧೆಗೆ ಬೆಂಬಲಿಗರ ಆಗ್ರಹ

ಇದೇ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ಮುಂದೆಯೇ ಮುಂದಿನ ಚುನಾವಣೆಯಲ್ಲಿ ಅವರು ಸ್ಪರ್ಧಿಸಬೇಕು ಎಂದು ಆಗ್ರಹಿಸುವ ಬ್ಯಾನರ್‌ಗಳನ್ನು ಬೆಂಬಲಿಗರು ಪ್ರದರ್ಶಿಸಿದರು.

ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಬೇಡಿಕೆಯನ್ನು ಬೆಂಬಲಿಗರು ವ್ಯಕ್ತಪಡಿಸಿದ್ದು, ಸಮಾವೇಶದಲ್ಲಿ ಈ ವಿಚಾರವೂ ಗಮನ ಸೆಳೆಯಿತು.

ಪ್ರದೀಪ್ ಈಶ್ವರ್ ಅವರ ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂಬ ಹೇಳಿಕೆ ಹಾಗೂ ಬೆಂಬಲಿಗರ ಬ್ಯಾನರ್ ಪ್ರದರ್ಶನವು ರಾಜ್ಯ ಕಾಂಗ್ರೆಸ್‌ನ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ನಲ್ಲಿ ನಾಯಕತ್ವ ಹಾಗೂ ಮುಖ್ಯಮಂತ್ರಿ ಸ್ಥಾನದ ಕುರಿತು ಈಗಾಗಲೇ ಹಲವು ರೀತಿಯ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ.

Continue Reading

ರಾಜ್ಯ

Study Abroad 2026: ವಿದೇಶದಲ್ಲಿ ಓದಿ, ಜಗತ್ತನ್ನು ಗೆಲ್ಲಿ; CM D K Shiv Kumar

Published

on

ಬೆಂಗಳೂರು: ಕರ್ನಾಟಕದಲ್ಲಿರುವ ಪ್ರತಿಭಾವಂತ ಮಾನವ ಸಂಪನ್ಮೂಲ ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿಲ್ಲ ಎಂದು CM D K Shiv Kumar (DK Shivakumar) ಹೇಳಿದ್ದಾರೆ. ನಮ್ಮ ಮಕ್ಕಳು ಜಾಗತಿಕ ಮಟ್ಟದಲ್ಲಿ ಶಿಕ್ಷಣ ಪಡೆಯಬೇಕು. ಅವರು ಕೇವಲ ಉದ್ಯೋಗಿಗಳಾಗದೆ, ಭವಿಷ್ಯದಲ್ಲಿ ಉದ್ಯೋಗದಾತರಾಗಬೇಕು ಎಂಬುದು ಸರ್ಕಾರದ ಆಶಯ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ಭಾನುವಾರ ಆಯೋಜಿಸಿದ್ದ ‘ವಿದೇಶದಲ್ಲಿ ಅಧ್ಯಯನ 2026 (Study Abroad 2026)’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾಗತಿಕ ಶಿಕ್ಷಣಕ್ಕೆ ಹೊಸ ಅವಕಾಶ

ವಿದೇಶದಲ್ಲಿ ಶಿಕ್ಷಣ ಪಡೆಯಲು ರಾಜ್ಯ ಸರ್ಕಾರ ಹೊಸ ಬಾಗಿಲು ತೆರೆದಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ನೇತೃತ್ವದಲ್ಲಿ ಸಾಗರೋತ್ತರ ಜ್ಞಾನವನ್ನು ರಾಜ್ಯದ ವಿದ್ಯಾರ್ಥಿಗಳೊಂದಿಗೆ ಬೆಸೆಯುವ ನಿಟ್ಟಿನಲ್ಲಿ ಉತ್ತಮ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಜ್ಞಾನದ ಮೇಲಿನ ಹೂಡಿಕೆ ಪ್ರತಿಯೊಬ್ಬರಿಗೂ ಅತ್ಯುತ್ತಮ ಆಸ್ತಿಯಾಗುತ್ತದೆ. ಮಾನವನಿಗೆ ಎಲ್ಲೆಗಳಿದ್ದರೂ ಜ್ಞಾನಕ್ಕೆ ಯಾವುದೇ ಗಡಿ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ತಾವು ಕಲಿತ ವಿದ್ಯೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ನಮ್ಮ ಹಿರಿಯರು ಕಲಿಸಿಕೊಟ್ಟಿದ್ದಾರೆ. ಹೀಗಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಅಧ್ಯಯನ ಮಾಡಲು ಸರ್ಕಾರ ಅವಕಾಶ ಕಲ್ಪಿಸುತ್ತಿದ್ದು, ಇದನ್ನು ಬಳಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಸಲಹೆ ನೀಡಿದರು.

ಬೆಂಗಳೂರಿನಲ್ಲಿ 26 ಲಕ್ಷ ಐಟಿ ವೃತ್ತಿಪರರು

ಬೆಂಗಳೂರು ಜಾಗತಿಕ ನಗರವಾಗಿ ಬೆಳೆದಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು. ನಗರದಲ್ಲಿ ಸುಮಾರು 2 ಲಕ್ಷ ವಿದೇಶಿ ಪಾಸ್‌ಪೋರ್ಟ್‌ದಾರರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿ ಸುಮಾರು 16 ಲಕ್ಷ ಐಟಿ ವೃತ್ತಿಪರರಿದ್ದರೆ, ಬೆಂಗಳೂರಿನಲ್ಲಿ ಸುಮಾರು 26 ಲಕ್ಷ ಐಟಿ ವೃತ್ತಿಪರರು ಇದ್ದಾರೆ ಎಂದು ಅವರು ವಿವರಿಸಿದರು.

ಪ್ರತಿ ವರ್ಷ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಇಂಜಿನಿಯರ್‌ಗಳು ಹಾಗೂ 13,940 ವೈದ್ಯರು ರೂಪುಗೊಳ್ಳುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲವನ್ನು ಬೇರೆಡೆ ಸೃಷ್ಟಿಸಲಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

80ಕ್ಕೂ ಹೆಚ್ಚು ವಿದೇಶಿ ವಿವಿಗಳ ಭಾಗವಹಿಸುವಿಕೆ

Study Abroad 2026 ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ವಿದೇಶಿ ವಿಶ್ವವಿದ್ಯಾಲಯಗಳು ಭಾಗವಹಿಸಿವೆ. 300ಕ್ಕೂ ಹೆಚ್ಚು ವಿಷಯಗಳಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಇದರ ಜೊತೆಗೆ ಸರ್ಕಾರದ ವಿವಿಧ ಇಲಾಖೆಗಳಿಂದ ವಿಶೇಷ ವಿದ್ಯಾರ್ಥಿವೇತನಗಳನ್ನೂ ನೀಡಲಾಗುತ್ತಿದೆ. ವಿವಿಧ ಬ್ಯಾಂಕ್‌ಗಳು ಶಿಕ್ಷಣಕ್ಕಾಗಿ ನೆರವು ನೀಡುತ್ತಿದ್ದು, ₹2 ಕೋಟಿ ವರೆಗೆ ಸಾಲ ಸೌಲಭ್ಯ ದೊರೆಯಲಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ರಾಜ್ಯದ ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

3,145 ವಿದ್ಯಾರ್ಥಿಗಳ ಆಯ್ಕೆ

ಕರ್ನಾಟಕ ಸರ್ಕಾರವು ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ವಿದೇಶದ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಲು ಈಗಾಗಲೇ 3,145 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕವೂ ಹೆಚ್ಚಿನ ಜ್ಞಾನ ಮತ್ತು ಮಾಹಿತಿ ಪಡೆಯಲು ರಾಜ್ಯಕ್ಕೆ ಮರಳಿ ಬರುವಂತೆ ಡಿಕೆ ಶಿವಕುಮಾರ್ ಕರೆ ನೀಡಿದರು.

‘ನಿಮ್ಮ ಭವಿಷ್ಯವೇ ರಾಜ್ಯದ ಭವಿಷ್ಯ’

ವಿದ್ಯಾರ್ಥಿಗಳ ಭವಿಷ್ಯ ರಾಜ್ಯದ ಭವಿಷ್ಯವಾಗಿದ್ದು, ಅವರ ಶಕ್ತಿಯೇ ದೇಶದ ಶಕ್ತಿ ಎಂದು ಮುಖ್ಯಮಂತ್ರಿ ಹೇಳಿದರು. ವಿದ್ಯಾರ್ಥಿಗಳು ದೇಶದ ಆಸ್ತಿ. ಇಡೀ ವಿಶ್ವ ಇಂದು ಭಾರತವನ್ನು ಗಮನಿಸುತ್ತಿದ್ದು, ಬೆಂಗಳೂರಿನ ಮೂಲಕ ಕರ್ನಾಟಕ ಹಾಗೂ ಭಾರತವನ್ನು ನೋಡಲಾಗುತ್ತಿದೆ ಎಂದು ಅವರು ಹೇಳಿದರು.

ವಿಶ್ವದ ಉದ್ಯಮ ಕ್ಷೇತ್ರದ ನಾಯಕರು ಕರ್ನಾಟಕದ ವಿದ್ಯಾರ್ಥಿಗಳ ಚುರುಕುತನವನ್ನು ಗಮನಿಸುತ್ತಿದ್ದಾರೆ. ರಾಜ್ಯದ ಸಂಸ್ಕೃತಿ, ಇತಿಹಾಸ ಮತ್ತು ಬಾಂಧವ್ಯದ ಮೌಲ್ಯಗಳೊಂದಿಗೆ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ತಮ್ಮ ಮೂಲವನ್ನು ಮರೆಯಬಾರದು. ಯಶಸ್ಸಿನ ಹಾದಿಯಲ್ಲಿ ಪೋಷಕರು ಹಾಗೂ ಶಿಕ್ಷಕರ ಕೊಡುಗೆಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಡಿಕೆ ಶಿವಕುಮಾರ್ ಕಿವಿಮಾತು ಹೇಳಿದರು.

ಶಿಕ್ಷಕರಿಗೆ ಗೌರವ ನೀಡಲು ‘Tr.’ ಬಳಕೆ

ಶಿಕ್ಷಕರಿಗೆ ಗೌರವ ನೀಡುವ ಉದ್ದೇಶದಿಂದ ಅವರ ಹೆಸರಿನ ಮುಂದೆ ‘Tr.’ (Teacher) ಎಂದು ಸೇರಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಈ ನಿರ್ಧಾರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನೂರಾರು ಮಂದಿ ಕರೆ ಮಾಡಿ ಸ್ವಾಗತಿಸಿದ್ದಾರೆ ಎಂದು ಅವರು ಹೇಳಿದರು. ಗುರುಗಳನ್ನು ದೇವರಂತೆ ಕಾಣುವ ಪರಂಪರೆ ನಮ್ಮಲ್ಲಿದೆ. ಶಿಕ್ಷಕರಿಗೆ ಗೌರವ ನೀಡುವುದು ಸಮಾಜದ ಜವಾಬ್ದಾರಿ ಎಂದರು.

ಕರ್ನಾಟಕ ಜ್ಞಾನದ ಕೇಂದ್ರ

ಬೆಂಗಳೂರು ನಗರದಲ್ಲಿ ಸುಮಾರು 1.40 ಕೋಟಿ ಜನಸಂಖ್ಯೆ ಇದ್ದು, ದೇಶದಲ್ಲಿರುವ 140 ಅಂತಾರಾಷ್ಟ್ರೀಯ ಶಾಲೆಗಳಲ್ಲಿ 38 ಶಾಲೆಗಳು ಬೆಂಗಳೂರಿನಲ್ಲಿವೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಇದು ಕರ್ನಾಟಕದ ಶಕ್ತಿ. ಕರ್ನಾಟಕ ದೇಶದ ಜ್ಞಾನದ ಕೇಂದ್ರವಾಗಿ ಬೆಳೆಯುತ್ತಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು. ರಾಜ್ಯದ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಶಿಕ್ಷಣ ಪಡೆದು ಯಶಸ್ಸು ಸಾಧಿಸಲಿ ಎಂದು ಅವರು ಶುಭ ಹಾರೈಸಿದರು.

Continue Reading

ಬೆಂಗಳೂರು

Bengaluru Pothole Horror: ‘ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ?’ ಮಹಿಳೆ ಆಕ್ರೋಶ

Published

on

Bengaluru

ಬೆಂಗಳೂರು: ಬೆಂಗಳೂರಿನಲ್ಲಿ ಮಳೆನೀರಿನಲ್ಲಿ ಮುಚ್ಚಿಹೋಗಿದ್ದ ರಸ್ತೆ ಗುಂಡಿಗೆ ಬಿದ್ದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ರಸ್ತೆ ಗುಂಡಿಗಳ ನಿರ್ವಹಣೆಯಲ್ಲಿ GBA (Greater Bengaluru Authority) ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿರುವ ಸಂತ್ರಸ್ತೆ, ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ನಿವಾಸಿ ಇಶಾನಿ ಅವರು ತಮ್ಮ ದೈನಂದಿನ ಕೆಲಸಕ್ಕಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಳೆಯಿಂದಾಗಿ ರಸ್ತೆಯ ಮೇಲೆ ನೀರು ನಿಂತಿದ್ದರಿಂದ ಕೆಳಭಾಗದಲ್ಲಿದ್ದ ದೊಡ್ಡ ರಸ್ತೆ ಗುಂಡಿ ಅವರಿಗೆ ಕಾಣಿಸಿರಲಿಲ್ಲ.

ನೀರಿನ ಮೇಲೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕಾಲು ಗುಂಡಿಗೆ ಬಿದ್ದಿದ್ದು, ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಅವರ ಕಾಲಿಗೆ ಗಂಭೀರ ಗಾಯವಾಗಿದೆ.

ಹಿಮ್ಮಡಿ ಮೂಳೆಗೆ ತೀವ್ರ ಹಾನಿ

ಘಟನೆ ನಡೆದ ಕೂಡಲೇ ಇಶಾನಿ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ವೈದ್ಯರ ಪರಿಶೀಲನೆಯಲ್ಲಿ ಅವರ ಹಿಮ್ಮಡಿ ಮೂಳೆ ತೀವ್ರವಾಗಿ ಮುರಿದಿರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಮ್ಮಡಿ ಮೂಳೆ ನಜ್ಜುಗುಜ್ಜಾಗಿರುವ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು, ಇದಕ್ಕಾಗಿ ಆಸ್ಪತ್ರೆಯಿಂದ ಸುಮಾರು ₹1.97 ಲಕ್ಷದ ಬಿಲ್ ಬಂದಿದೆ ಎಂದು ಸಂತ್ರಸ್ತೆ ಹೇಳಿದ್ದಾರೆ.

ರಸ್ತೆಯಲ್ಲಿದ್ದ ಗುಂಡಿ ಮಳೆನೀರಿನಿಂದ ಮುಚ್ಚಿಹೋಗಿದ್ದರಿಂದ ಅದು ಕಾಣದೆ ಈ ಅಪಘಾತ ಸಂಭವಿಸಿದೆ ಎಂದು ಇಶಾನಿ ವಿವರಿಸಿದ್ದಾರೆ.

‘ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ?’

ಈ ಘಟನೆ ಕುರಿತು ಇಶಾನಿ ತಮ್ಮ X ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ನಾವು ಕಟ್ಟುವ ತೆರಿಗೆಯ ಹಣ ಎಲ್ಲಿಗೆ ಹೋಗುತ್ತಿದೆ?” ಎಂದು ಪ್ರಶ್ನಿಸಿರುವ ಅವರು, ನಾಗರಿಕ ಸಂಸ್ಥೆಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ತಮ್ಮ ದೇಹದ ಭಾಗಗಳಿಗೆ ಗಾಯ ಮಾಡಿಕೊಂಡು, ಮತ್ತೊಂದೆಡೆ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಪರಿಸ್ಥಿತಿ ಬರಬೇಕೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಗಾಲದಲ್ಲಿ ನಗರದ ರಸ್ತೆಗಳಲ್ಲಿ ನೀರು ನಿಲ್ಲುವ ಸಮಸ್ಯೆ ಹಾಗೂ ಅದರಡಿ ಮುಚ್ಚಿಹೋಗುವ ಗುಂಡಿಗಳಿಂದ ಸಾರ್ವಜನಿಕರ ಸುರಕ್ಷತೆಗೆ ಅಪಾಯ ಎದುರಾಗುತ್ತಿದೆ ಎಂದು ಅವರು ದೂರಿದ್ದಾರೆ.

ಗುಂಡಿಗಳನ್ನು ಮುಚ್ಚಿ ಪರಿಹಾರ ನೀಡಲು ಆಗ್ರಹ

ತಕ್ಷಣವೇ ಸಂಬಂಧಪಟ್ಟ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಬೇಕು ಎಂದು ಇಶಾನಿ ಆಗ್ರಹಿಸಿದ್ದಾರೆ. ಜೊತೆಗೆ ತಮಗಾಗಿರುವ ವೈದ್ಯಕೀಯ ವೆಚ್ಚ ಮತ್ತು ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಮತ್ತೆ ಚರ್ಚೆಗೆ ಬಂದಿರುವ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ವಿಶೇಷವಾಗಿ ಮಳೆಗಾಲದಲ್ಲಿ ರಸ್ತೆ ಗುಂಡಿಗಳು ನೀರಿನಿಂದ ಮುಚ್ಚಿಹೋಗುವುದರಿಂದ ಅವು ವಾಹನ ಸವಾರರು ಮಾತ್ರವಲ್ಲದೆ, ಪಾದಚಾರಿಗಳಿಗೂ ಅಪಾಯಕಾರಿಯಾಗುತ್ತಿವೆ.

ಇಂತಹ ಘಟನೆಗಳು ಮರುಕಳಿಸದಂತೆ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಗುರುತಿಸಿ ದುರಸ್ತಿ ಮಾಡುವುದು, ಮಳೆನೀರು ನಿಲ್ಲದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಹಾಗೂ ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ.

Continue Reading

Trending