ರಾಜ್ಯ
‘ನನ್ನ ಕಾಲಿಗೆ ಬಿದ್ದಿದ್ದು ನೀನು!’: ಜನಾರ್ಧನ ರೆಡ್ಡಿ ವಿರುದ್ಧ ಫೇಸ್‌ಬುಕ್‌ನಲ್ಲಿ ಬೆಂಕಿ ಉಗುಳಿದ ಸಚಿವ Shivaraj Tangadagi
ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಮತ್ತು ಶಾಸಕ ಹಾಗೂ ಮಾಜಿ ಸಚಿವ ಜಿ. ಜನಾರ್ಧನ ರೆಡ್ಡಿ (Janardhana Reddy) ನಡುವಿನ ವಾಕ್ಸಮರ ತಾರಕಕ್ಕೇರಿದೆ. ತಮ್ಮ ಅಧಿಕೃತ ಫೇಸ್‌ಬುಕ್ (Facebook) ಖಾತೆಯಲ್ಲಿ ತೀವ್ರ ಆಕ್ರೋಶ ಭರಿತ ಸಂದೇಶ ಹಂಚಿಕೊಂಡಿರುವ ಸಚಿವ ಶಿವರಾಜ್ ತಂಗಡಗಿ, ಜನಾರ್ಧನ ರೆಡ್ಡಿ ವಿರುದ್ಧ ಏಕವಚನದಲ್ಲೇ ಹರಿಹಾಯ್ದಿದ್ದು ಬಹಿರಂಗವಾಗಿ ನೇರ ರಾಜಕೀಯ ಸವಾಲು ಹಾಕಿದ್ದಾರೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ ಶಿವರಾಜ್ ತಂಗಡಗಿ ವ್ಯಕ್ತಪಡಿಸಿದ ಆಕ್ರೋಶ ಹೀಗಿದೆ:
“ಲೇ…! ಜನಾರ್ದನರೆಡ್ಡಿ, ಲೇ…! ಚಂಚಲಗೂಡ ಕೈದಿ ನಂ. 697, ಅಲೆ ಲೇ… ಜೈಲಿನಲ್ಲಿ ಮುದ್ದೆ ಮುರಿದ ಗಣಿ ಲೂಟಿಕೋರ. ಹೀಗೆಲ್ಲಾ ನಾನೂ ಕೂಡ ‘ಲೇ’ ಎನ್ನಬಲ್ಲೆ. ಘನತೆ, ನಡತೆಯಲ್ಲಿ ಅಲ್ಲದಿದ್ದರೂ ವಯಸ್ಸಿನಲ್ಲಿ ನೀವು ಹಿರಿಯರು. ಜೊತೆಗೆ ನನ್ನ ಹಿರಿಯರು ಸಂಸ್ಕಾರ ಕಲಿಸಿರುವುದರಿಂದ ‘ಲೇ’ ಎನ್ನುವ ಮಟ್ಟಕ್ಕೆ ನಾ ಇಳಿಯಲಾರೆ” ಎಂದು ತಂಗಡಗಿ ವ್ಯಂಗ್ಯವಾಡಿದ್ದಾರೆ.
ತಮ್ಮ ಮೊದಲ ಚುನಾವಣಾ ಗೆಲುವನ್ನು ಸ್ಮರಿಸಿದ ತಂಗಡಗಿ, “ನಾನು ಮೊದಲ ಬಾರಿಗೆ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದಾಗ ‘ತಮ್ಮುಡು, ತಮ್ಮುಡು’ ಎಂದು ಗೋಗೆರೆದು ಬೆಂಬಲ ಕೇಳಿದವನು ನೀನು. ಈಗ ಸುಳ್ಳುಗಳ ಸರಮಾಲೆಯನ್ನೇ ಹೆಣೆದು ಬೊಗಳೆ ಬಿಡುತ್ತಿದ್ದೀಯಾ? ಯಪ್ಪಾ ಬೊಗಳೆ ವೀರ, ‘ನಿನಗೆ ತಾಕತ್ತು ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾ. ನೀನು ರಾಜೀನಾಮೆ ಕೊಟ್ಟ 24 ಗಂಟೆಯಲ್ಲಿ ನಾನೂ ರಾಜೀನಾಮೆ ಕೊಡುತ್ತೇನೆ. ಗಂಗಾವತಿಯಲ್ಲಿ ನನ್ನ ವಿರುದ್ಧ ಉಪ ಚುನಾವಣೆ ಎದುರಿಸಿ ನಿನ್ನ ಬಲಾಬಲ ತೋರಿಸು. ಪ್ರಚಾರ ಶೋಕಿಗೆ ವ್ಯರ್ಥ ಪ್ರಲಾಪ ಮಾಡಬೇಡ’” ಎಂದು ನೇರ ಸವಾಲು ಒಡ್ಡಿದ್ದಾರೆ.
‘ಜನಾದೇಶ ಲೂಟಿಕೋರನಿಗೋ? ಜನ ಸೇವಕನಿಗೋ? ನೋಡೇ ಬಿಡೋಣ’:
ಮುಂದುವರಿದು ಮಾತನಾಡಿದ ಅವರು, “ನಿನಗೆ ನೇರ ಸವಾಲು ಹಾಕಿ ಪಂಥಾಹ್ವಾನ ನೀಡುತ್ತಿದ್ದೇನೆ. ನೀನು ‘ಎಸ್’ ಎಂದರೆ ನಾಳೆಯೇ ರಾಜೀನಾಮೆ ನೀಡುತ್ತೇನೆ. ಜನಾದೇಶ ಲೂಟಿಕೋರನಿಗೋ? ಜನ ಸೇವಕನಿಗೋ? ನೋಡೇ ಬಿಡೋಣ. ಗಣಿ ಲೂಟಿಯ ಅಕ್ರಮ ಸಂಪತ್ತು ಹಾಗೂ ಅದರಿಂದ ಬಂದಿರುವ ಅಹಂಕಾರ ನಿನ್ನ ನೆತ್ತಿಗೇರಿದೆ. ಹೀಗಾಗಿ ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟಿದ್ದೀಯ. ಗಣಿ ಲೂಟಿ ಕಳ್ಳ ಅಂದ ಕೂಡಲೇ ನೀನು ಉರಿದು ಬೀಳುತ್ತಿದ್ದೀಯ. ನೀನೇನು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಸೇರಿದ ಮಹಾನೀಯನಾ? ಜೈಲಿನಿಂದ ಹೊರ ಬರಲೂ ಕಳ್ಳಾಟ ಮಾಡಿದ ಭೂಪ ತಾನೇ?” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
“ಗಣಿ ಲೂಟಿ ಮಾಡಿ ಜೈಲಿಗೆ ಹೋಗಿಲ್ಲ ಎಂದರೆ ‘ಫೀಲ್ ದಿ ಜೈಲ್’ ಪ್ಯಾಕೇಜ್ ಮೇಲೆ ಹೋಗಿದ್ದ್ಯಾ? ಅಥವಾ ‘ಜಯ ಜನಾರ್ದನ ಕೃಷ್ಣ ರಾಧಿಕಾಪತೇ’ ಅಂಥ ಕೃಷ್ಣ ಜನ್ಮಾಷ್ಟಮಿ ದಿನ ಕೃಷ್ಣನ ಭಜನೆ ಮಾಡಿದ್ದಕ್ಕೆ ನಿನ್ನನ್ನು ಕೃಷ್ಣ ಜನ್ಮಸ್ಥಾನಕ್ಕೆ ಕಳಿಸಿದರಾ? ಹೇಳಪ್ಪಾ ಕೊಳಲು ತೊಟ್ಟ ಗಣಿ ಕಳಂಕಿತ. ಗಣಿ ಲೂಟಿ ಕಳ್ಳ ನೀನು. ಸುಂಕಲಮ್ಮ ದೇವಸ್ಥಾನ ಒಡೆದ ಅವಿವೇಕಿ ನೀನು. ಗಂಗಾವತಿಯಲ್ಲಿ ಗೆದ್ದರೆ ಮತದಾರರಿಗೆ ಡಬಲ್ ಬೆಡ್ ರೂಮ್ ಮನೆ ನೀಡ್ತೀನಿ, ಕ್ರಿಕೆಟ್ ಸ್ಟೇಡಿಯಂ ಮಾಡ್ತೀನಿ ಅಂದಿದ್ದೆ, ಈಡೇರಿಸಿದ್ದೀಯಾ? ಸುಳ್ಳು ಹೇಳಿಕೊಂಡು ಜೀವನ ಮಾಡೋ ನಿನಗೆ ಇಷ್ಟಿರುವಾಗ ಸ್ವಾಭಿಮಾನದಿಂದ ಬೆಳೆದವನು ನನಗೆ ಎಷ್ಟಿರಬೇಡ?” ಎಂದು ಕೆಂಡಕಾರಿದ್ದಾರೆ.
ರಾಜ್ಯಸಭಾ ಚುನಾವಣೆಯ ಕಾಲ್ ಲಿಸ್ಟ್ ಬಹಿರಂಗಕ್ಕೆ ಸವಾಲು:
“ನನ್ನ ಕಾಲಿಗೆ ಬಿದ್ದೆ ಎಂದು ಹೇಳಿಕೊಳ್ಳುತ್ತಾ ಇದ್ದೀಯಾ, ನಾಚಿಕೆ ಆಗಲ್ವಾ? ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿದ್ರೆ, ನಿನ್ನ ಬಂಡವಾಳ ಬಟಾ ಬಯಲು ಆಗುತ್ತದೆ. ಕತ್ತಲೆ ಲೋಕದ ಕರಾಳ ಮುಖ ಕಳಚಿ ಬೀಳುತ್ತದೆ, ಹುಷಾರು” ಎಂದು ಎಚ್ಚರಿಸಿದ್ದಾರೆ.
“ನಾನು ಸೇರಿ ಪಕ್ಷೇತರ ಶಾಸಕರ ಬೆಂಬಲದ ಭಿಕ್ಷೆಯಿಂದ ಒಬ್ಬ ಶಾಸಕನಾಗಲೂ ಅರ್ಹತೆ ಇಲ್ಲದವನು ಅಂದು ಸಚಿವನಾದವನು ನೀನು. ನನಗೆ ಹಣ ಕೊಟ್ಟಿದ್ದೆ ಎಂದಿದ್ದೀಯ. ನಿನ್ನಂತಹ ಅಡ್ಡದಿಡ್ಡಿ ದಾರಿಯಲ್ಲಿ ಹಣ ಸಂಪಾದಿಸಿದ ಅಡ್ಡಾಡಿ ಬಳಿ ಹಣ ಪಡೆಯುವ ದುರ್ದೈವ ನನಗೆ ಬಂದಿಲ್ಲ. ಜನಾರ್ದನರೆಡ್ಡಿ, ನಾನು ಪಕ್ಷೇತರನಾಗಿ ಗೆದ್ದಾಗ ನನ್ನ ಮನೆ ಮುಂದೆ ಕಾದು ಕುಳಿತವರು ನಿನ್ನ ಪಟಾಲಂ, ಅದನ್ನು ಮರೆಯಬೇಡ” ಎಂದು ಕಿಡಿಕಾರಿದ್ದಾರೆ.
“ನಮ್ಮ ಹೆಸರಿನಲ್ಲಿ ಯಡಿಯೂರಪ್ಪ ಅವರನ್ನು ಬ್ಲಾಕ್ ಮೇಲ್ ಮಾಡಿದ ಎಡಬಿದಂಗಿ ಗಿರಾಕಿ ನೀನು. ನನಗೆ ಕರೆ ಮಾಡಿ ದಮ್ಮಯ್ಯ ಎಂದು ಬೇಡಿಕೊಂಡವನು ಈಗ ನಾನು ನಿನ್ನ ಕಾಲಿಗೆ ಬಿದ್ದೆ ಎಂದು ಬಾಲ ಬಿಚ್ಚುತ್ತಿದ್ದೀಯಾ? ನಿನಗೆ ತಾಕತ್ತಿದ್ದರೆ ಕಳೆದ ಬಾರಿ ರಾಜ್ಯಸಭಾ ಚುನಾವಣೆಯಲ್ಲಿ ನನಗೆ ಎಷ್ಟು ಕರೆ ಮಾಡಿದ್ದೀಯ? ಯಾರಿಗೆ ವೋಟ್ ಹಾಕಿದ್ಯಾ? ಕಾಲ್ ಲಿಸ್ಟ್ ತೆಗೆದು ಬಹಿರಂಗ ಪಡಿಸು. ನಿನ್ನ ಯೋಗ್ಯತೆ, ಪಕ್ಷವಿರೋಧಿ ಬೂಟಾಟಿಕೆ ರಾಜ್ಯದ ಜನತೆಗೆ ಹಾಗೂ ನಿನ್ನ ಬಿಜೆಪಿ ಪಕ್ಷದವರಿಗೆ ತಿಳಿಯಲಿ. ನಿನ್ನ ಮಿಥ್ಯಾ ಸಾಧನೆ ಜನರಿಗೆ ತಿಳಿದಿದೆ. ನಿನಗೆ ಕಿಂಚಿತ್ ಮಾನ ಮರ್ಯಾದೆ ಇದ್ದರೂ ನನ್ನ ಸವಾಲು ಸ್ವೀಕರಿಸು” ಎಂದು ಶಾಸಕ ಜನಾರ್ಧನ ರೆಡ್ಡಿಗೆ ಸಚಿವ ತಂಗಡಗಿ ಫೇಸ್‌ಬುಕ್ ಮೂಲಕ ಬಹಿರಂಗ ಸವಾಲು ಹಾಕಿದ್ದಾರೆ.
ಬೆಂಗಳೂರು
Medahalli ಸರ್ವಿಸ್ ರಸ್ತೆಯಲ್ಲಿ ಅಕ್ರಮ ಚಟುವಟಿಕೆಗಳ ಅಟ್ಟಹಾಸ: ಸಾರ್ವಜನಿಕರ ಆತಂಕ
ಬೆಂಗಳೂರು: ರಾಜಧಾನಿ ಬೆಂಗಳೂರಿನ ವೈಟ್‌ಫೀಲ್ಡ್ ವಿಭಾಗಕ್ಕೆ ಒಳಪಡುವ ಅವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮೇಡಹಳ್ಳಿ ಸರ್ವಿಸ್ ರಸ್ತೆ (Medahalli Service Road) ಈಗ ಅಕ್ರಮ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬ ಗಂಭೀರ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಐಟಿ ಸಂಪರ್ಕ ಕೊಂಡಿಯಾಗಿರುವ ವೈಟ್‌ಫೀಲ್ಡ್‌ನಂತಹ ಪ್ರತಿಷ್ಠಿತ ವಿಭಾಗದಲ್ಲೇ ಇಂತಹ ರೆಡ್ ಲೈಟ್ ಮಾದರಿಯ ಅಕ್ರಮ ದಂಧೆಗಳು ನಿರಂತರವಾಗಿ ನಡೆಯುತ್ತಿರುವುದು ಸ್ಥಳೀಯರು ಹಾಗೂ ದಾರಿಹೋಕರಲ್ಲಿ ತೀವ್ರ ಆತಂಕವನ್ನು ಉಂಟುಮಾಡಿದೆ.
ಸಂಜೆಯಾಗುತ್ತಿದ್ದಂತೆ ರಸ್ತೆಯಲ್ಲಿ ಸಕ್ರಿಯವಾಗುವ ತಂಡ
ಪ್ರತಿದಿನ ಸಂಜೆ ಕತ್ತಲಾಗುತ್ತಿದ್ದಂತೆ ಈ ಸರ್ವಿಸ್ ರಸ್ತೆಯಲ್ಲಿ ನಿರ್ದಿಷ್ಟ ಅಕ್ರಮ ಗುಂಪೊಂದು ಸಕ್ರಿಯವಾಗುತ್ತದೆ. ರಸ್ತೆ ಬದಿಯಲ್ಲಿ ನಿಂತುಕೊಂಡು, ಹೋಗಿ ಬರುವ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಕೈ ಸನ್ನೆ ಮಾಡಿ ಕರೆಯುವುದು ಇವರ ದಿನಚರಿಯಾಗಿದೆ. ಈ ಗುಂಪಿನಲ್ಲಿ ಟ್ರಾನ್ಸ್‌ಜೆಂಡರ್‌ಗಳು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಾರ್ವಜನಿಕರ ಬಳಿ ಬಹಿರಂಗವಾಗಿಯೇ ಹಣದ ಚೌಕಾಸಿ ನಡೆಸುವ ಈ ಗುಂಪು, ಐನೂರು ರೂಪಾಯಿ ಕೊಟ್ಟರೆ ಬರುತ್ತೇವೆ, ಮುನ್ನೂರು ರೂಪಾಯಿ ಕೊಟ್ಟರೆ ಬರುವುದಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತದೆ. ಯಾರಾದರೂ ಈ ಅಸಭ್ಯ ವರ್ತನೆಯನ್ನು ಪ್ರಶ್ನಿಸಿದರೆ ಅಥವಾ ವಾಗ್ವಾದಕ್ಕೆ ಇಳಿದರೆ, “ನಾವೇ ಪೊಲೀಸರಿಗೆ ಕರೆ ಮಾಡುತ್ತೇವೆ” ಎಂದು ಬೆದರಿಕೆ ಹಾಕಿ ಹೆದರಿಸುವುದು ಇಲ್ಲಿ ನಿತ್ಯದ ಸನ್ನಿವೇಶವಾಗಿದೆ.
ಕೂಲಿ ಕಾರ್ಮಿಕರು ಮತ್ತು ಉದ್ಯೋಗಿಗಳೇ ಮುಖ್ಯ ಗುರಿ
ಈ ಅಕ್ರಮ ಜಾಲದ ಮುಖ್ಯ ಗುರಿ ಸಂಜೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುವ ಕೂಲಿ ಕಾರ್ಮಿಕರು ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳು. ಕಾಮದ ಆಸೆ ತೋರಿಸಿ ಜನರನ್ನು ಕತ್ತಲ ಪ್ರದೇಶಗಳಿಗೆ ಕರೆದುಕೊಂಡು ಹೋಗಿ, ಅಸಭ್ಯವಾಗಿ ವರ್ತಿಸುತ್ತಾ ಅವರ ಬಳಿ ಇರುವ ಹಣ, ಮೊಬೈಲ್ ಹಾಗೂ ಮೌಲ್ಯಯುತ ವಸ್ತುಗಳನ್ನು ದೋಚಿ ಪರಾರಿಯಾಗುವುದು ಇಲ್ಲಿ ಸಾಮಾನ್ಯವಾಗಿದೆ. ನಂಬಿ ಹೋದವರು ತಮ್ಮ ಜೇಬು ಖಾಲಿ ಮಾಡಿಕೊಂಡು, ಮಾನ ಮುಚ್ಚಿಕೊಳ್ಳಲು ಸುಮ್ಮನಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಟುಂಬಗಳು ಮತ್ತು ಹಿರಿಯ ನಾಗರಿಕರಿಗೆ ಸಂಚಾರ ಸವಾಲು
ಈ ಅಕ್ರಮ ದಂಧೆಯ ಪರಿಣಾಮವಾಗಿ ಸಭ್ಯ ನಾಗರಿಕರು, ಮಹಿಳೆಯರು, ಹಿರಿಯ ನಾಗರಿಕರು ಮತ್ತು ಮಕ್ಕಳೊಂದಿಗೆ ಸಂಚರಿಸುವ ಕುಟುಂಬಗಳಿಗೆ ಈ ರಸ್ತೆಯಲ್ಲಿ ಓಡಾಡುವುದೇ ಒಂದು ದೊಡ್ಡ ಸವಾಲಾಗಿದೆ. ಅಸಭ್ಯ ವರ್ತನೆಗಳು ಕಣ್ಣಿಗೆ ಬೀಳುವುದರಿಂದ ಸಾರ್ವಜನಿಕರು ತೀವ್ರ ಮುಜುಗರ ಮತ್ತು ಭಯದಿಂದ ಓಡಾಡುವಂತಾಗಿದೆ. ಯಾವುದೇ ಸಮಯದಲ್ಲೂ ಅನಾಹುತ ಸಂಭವಿಸಬಹುದು ಎಂಬ ಭೀತಿ ಸಂಚಾರ ಸವಾರರಲ್ಲಿ ಮನೆಮಾಡಿದೆ.
ವೈರಲ್ ಆದರೂ ಕ್ರಮ ಕೈಗೊಳ್ಳದ ಪೊಲೀಸರು?
ಈ ಅಶ್ಲೀಲ ದಂಧೆಯ ದೃಶ್ಯಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಭಾರಿ ವೈರಲ್ ಆಗಿವೆ. ಆದಾಗ್ಯೂ, ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಹಾಗೂ ಅವಲಹಳ್ಳಿ ಠಾಣೆಯ ಸಿಬ್ಬಂದಿ ಈವರೆಗೆ ಯಾವುದೇ ಸೂಕ್ತ ಅಥವಾ ಗಂಭೀರ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತುರ್ತು ನೆರವಿಗಾಗಿ ನಾಗರಿಕರು ‘112’ ತುರ್ತು ಸಹಾಯವಾಣಿಗೆ ಕರೆ ಮಾಡಿದರೂ, ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಈ ಅಕ್ರಮ ಗುಂಪು ಅಲ್ಲಿಂದ ಕಾಲ್ಕಿತ್ತು ತಲೆಮರೆಸಿಕೊಳ್ಳುತ್ತದೆ ಎಂದು ಸಾರ್ವಜನಿಕರು ಹೇಳುತ್ತಾರೆ.
ಆದ್ದರಿಂದ, ಗೃಹ ಇಲಾಖೆ ಹಾಗೂ ಬೆಂಗಳೂರು ನಗರ ಪೊಲೀಸ್ ಹಿರಿಯ ಅಧಿಕಾರಿಗಳು ತಕ್ಷಣವೇ ಜಾಗೃತರಾಗಿ, ಮೇಡಹಳ್ಳಿ ಸರ್ವಿಸ್ ರಸ್ತೆಯಲ್ಲಿ ನಿರಂತರ ಪೊಲೀಸ್ ಗಸ್ತು ಹೆಚ್ಚಿಸಬೇಕು ಮತ್ತು ಈ ಅಕ್ರಮ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳೀಯರ ಬಲವಾದ ಆಗ್ರಹವಾಗಿದೆ.
ರಾಜ್ಯ
CM Vijay ಅಬ್ಬರದ ಭಾಷಣಕ್ಕೆ ಉದಯನಿಧಿ ಸ್ಟಾಲಿನ್ ತಿರುಗೇಟು: ಡಮ್ಮಿ ಸಿಎಂ ಎಂದು ವ್ಯಂಗ್ಯ
ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಸೋಮವಾರ (ಸೆ. 07) ಡಿಎಂಕೆ ನಾಯಕರ ವಿರುದ್ಧ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ನಡೆಸಿದ ಅಬ್ಬರದ ಹಾಗೂ ಉಗ್ರ ಭಾಷಣಕ್ಕೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ತೀವ್ರ ತಿರುಗೇಟು ನೀಡಿದ್ದಾರೆ. ಜಾರಿ ನಿರ್ದೇಶನಾಲಯದ (ED) ಆರೋಪಗಳನ್ನು ಉಲ್ಲೇಖಿಸಿ ವಿಜಯ್ ನಡೆಸಿದ ವಾಗ್ದಾಳಿಯನ್ನು ಕಟುವಾಗಿ ಟೀಕಿಸಿರುವ ಉದಯನಿಧಿ, ಇಡಿ ಆರೋಪಗಳ ಪ್ರತಿಗಳನ್ನು ಮುದ್ರಿಸಲು ಮೂರು ದಿನಗಳ ಕಾಲಾವಕಾಶ ಬೇಕಿತ್ತೇ ಎಂದು ಪ್ರಶ್ನಿಸಿದ್ದು, ಇದು ಕೇವಲ “ಡಮ್ಮಿ ಸಿಎಂ ಹಾಗೂ ಕ್ಯಾಮೆರಾ-ಆಕ್ಷನ್ ಡ್ರಾಮಾ” ಎಂದು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಸರಣಿ ಪೋಸ್ಟ್ ಹಾಕಿರುವ ಉದಯನಿಧಿ ಸ್ಟಾಲಿನ್, ಜಾರಿ ನಿರ್ದೇಶನಾಲಯದ ಆರೋಪಗಳನ್ನು ಮುದ್ರಿಸಿ ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಮೂರು ದಿನ ಯಾಕೆ ಬೇಕಾಯಿತು ಎಂದು ಪ್ರಶ್ನಿಸಿದ್ದಾರೆ. ಸರ್ಕಾರದ ಪ್ರತಿಕ್ರಿಯೆಯು ಯಾವುದೇ ಸ್ಪಷ್ಟತೆಯಿಲ್ಲದೆ, ಕೇವಲ ದೋಷಾರೋಪಣೆ ಮತ್ತು ವಿಷಯಾಂತರ ಮಾಡುವ (Diversion tactics) ತಂತ್ರಗಳಿಂದ ಕೂಡಿದೆ ಎಂದು ಕಿಡಿಕಾರಿದ್ದಾರೆ. ಯಾವುದೇ ಪೂರ್ವಸಿದ್ಧತೆಯಿಲ್ಲದೆ, ಕೇವಲ ರೋಲ್, ಕ್ಯಾಮೆರಾ, ಆಕ್ಷನ್ ಶೈಲಿಯಲ್ಲಿ ಚಲನಚಿತ್ರದ ಸಂಭಾಷಣೆಯಂತಿದೆ ಎಂದು ಲೇವಡಿ ಮಾಡಿರುವ ಅವರು, ಇದೊಂದು ರೀತಿ ಡಮ್ಮಿ ಸಿಎಂ ವರ್ತನೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲು ಹೆದರಿ ಮತ್ತೆ ಓಡಬೇಡಿ, ಮುಂದಿನ ಬಾರಿಯಾದರೂ ಉತ್ತಮ ಸಿದ್ಧತೆಯೊಂದಿಗೆ ಸದನಕ್ಕೆ ಬನ್ನಿ ಎಂದು ವಿಜಯ್ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ವಿಧಾನಸಭೆಯಲ್ಲಿ ಸಿಎಂ ವಿಜಯ್ ಹೇಳಿದ್ದೇನು?
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ವಿಧಾನಸಭೆಯಲ್ಲಿ ಇಲ್ಲಿಯವರೆಗೆ ಸಾಕಷ್ಟು ಶಾಂತ ರೀತಿಯಲ್ಲಿದ್ದ ಸಿಎಂ ವಿಜಯ್, ಸೋಮವಾರದ ಅಧಿವೇಶನದಲ್ಲಿ ಮೊದಲ ಬಾರಿಗೆ ಡಿಎಂಕೆ ನಾಯಕರ ವಿರುದ್ಧ ರೋಷಾವೇಷದಿಂದ ಮಾತನಾಡಿದರು. ಡಿಎಂಕೆ ನಾಯಕರು ಪಕ್ಷದ ನಿಧಿ ಹೆಸರಿನಲ್ಲಿ ಭಾರೀ ಪ್ರಮಾಣದಲ್ಲಿ ಹಣ ಸಂಗ್ರಹಿಸಿದ್ದಾರೆ ಎಂದು ಇಡಿ ವರದಿಯನ್ನು ಉಲ್ಲೇಖಿಸಿ ಕಠಿಣ ಆರೋಪಗಳನ್ನು ಮಾಡಿದರು.
ಪಕ್ಷದ ನಿಧಿಯ ಹೆಸರಿನಲ್ಲಿ ಹಣ ಸಂಗ್ರಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಹಾಗೂ ಸಚಿವ ಸೆಂಥಿಲ್ ಬಾಲಾಜಿ ಅವರ ಹೆಸರನ್ನು ಇಡಿ ಪ್ರಸ್ತಾಪಿಸಿದೆ ಎಂದು ವಿಜಯ್ ಸದನದಲ್ಲಿ ತಿಳಿಸಿದರು. ಅಷ್ಟೇ ಅಲ್ಲದೇ, 1976ರಲ್ಲಿ ಆಗಿನ ಡಿಎಂಕೆ ಸರ್ಕಾರದ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು ರಚಿಸಲಾಗಿದ್ದ ಹಿರಿಯ ಸರ್ಕಾರಿಯಾ ಆಯೋಗದ ವರದಿ ಮತ್ತು ‘ವೀರಾನಂ’ ಕುಡಿಯುವ ನೀರಿನ ಯೋಜನೆಯ ಪರಿಶೀಲನೆಯನ್ನು ಉಲ್ಲೇಖಿಸಿದರು. ಮಾಜಿ ಸಿಎಂ ಎಂ. ಕರುಣಾನಿಧಿ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ ಎಂದರು.
ವರದಿಯನ್ನು ಮತ್ತಷ್ಟು ಆಳವಾಗಿ ಉಲ್ಲೇಖಿಸಿದ ಅವರು, 16 ಕೋಟಿ ರೂ.ಗಿಂತಲೂ ಹೆಚ್ಚಿನ ಮೌಲ್ಯದ ಯೋಜನೆಗಾಗಿ ಪೈಪ್‌ಗಳ ತಯಾರಿಕೆ ಮತ್ತು ಪೂರೈಕೆಯ ಗುತ್ತಿಗೆಯನ್ನು ‘ಸತ್ಯನಾರಾಯಣ ಬ್ರದರ್ಸ್’ ಸಂಸ್ಥೆಗೆ ನೀಡಿದ ವಿಷಯದಲ್ಲಿ ಭಾರಿ ಗೋಲ್‌ಮಾಲ್ ಹಾಗೂ ಆರೋಪಗಳು ಕೇಳಿಬಂದಿದ್ದವು ಎಂದು ವಿವರಿಸಿದರು. 1970 ಮತ್ತು 1974ರ ನಡುವಿನ ಅವಧಿಯಲ್ಲಿ ಶೇಕಡಾ 2.5ರಷ್ಟು ಕಮಿಷನ್ ನೀಡುವಂತೆ ಬೇಡಿಕೆ ಇಟ್ಟಿದ್ದರ ಬಗ್ಗೆ ಹಾಗೂ ವಿವಿಧ ಕಂತುಗಳಲ್ಲಿ ಒಟ್ಟು ಸುಮಾರು 29 ಲಕ್ಷ ರೂ. ಹಣವನ್ನು ಪಾವತಿಸಿದ್ದರ ಬಗ್ಗೆ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಗಂಭೀರ ಆರೋಪಗಳನ್ನು ಮಾಡಿದರು. ತಮಿಳುನಾಡು ರಾಜಕೀಯದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವಿನ ಈ ನೇರಾ ನೇರ ವಾ್ದಸಮರವು ರಾಜ್ಯದಲ್ಲಿ ತೀವ್ರ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ.
ರಾಜಕೀಯ
ಮಹಿಳೆಯರ ವಿರುದ್ಧದ ದ್ವರ್ಥಾರ್ಥಕ ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ; ಡಿಎಂಕೆ ನಾಯಕರಿಗೆ CM Vijay ಎಚ್ಚರಿಕೆ
ಚೆನ್ನೈ: ಮಹಿಳೆಯರ ವಿರುದ್ಧದ ವೈಯಕ್ತಿಕ ದಾಳಿ ಹಾಗೂ ದ್ವರ್ಥಾರ್ಥಕ (Double Meaning) ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ತಮಿಳುನಾಡು CM Vijay (Vijay) ಅವರು ಆಡಳಿತ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನಟಿ ತ್ರಿಶಾ ಕೃಷ್ಣನ್ ಅವರ ಕುರಿತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ನೀಡಿರುವ ಆಕ್ಷೇಪಾರ್ಹ ಹೇಳಿಕೆಗಳ ಹಿನ್ನೆಲೆಯಲ್ಲಿ ಈ ಚರ್ಚೆ ಕಾವೇರಿದೆ. ವಿಧಾನಸಭೆಯಲ್ಲಿ ಈ ಕುರಿತು ಮಾತನಾಡಿದ ಸಿಎಂ ವಿಜಯ್, ರಾಜಕೀಯದಲ್ಲಿ ಎಷ್ಟೇ ತೀವ್ರವಾದ ಟೀಕೆ-ಟಿಪ್ಪಣಿಗಳಿದ್ದರೂ ಅದನ್ನು ಸೈದ್ಧಾಂತಿಕವಾಗಿ ಎದುರಿಸಬೇಕೇ ಹೊರತು ಮಹಿಳೆಯರ ತೇಜೋವಧೆ ಮಾಡಬಾರದು ಎಂದು ಕಟ್ಟುನಿಟ್ಟಾಗಿ ಎಚ್ಚರಿಸಿದ್ದಾರೆ.
ವಿವಾದಕ್ಕೆ ಮುಖ್ಯ ಕಾರಣವೇನು?
ಕಾವೇರಿ ನೀರು ಹಂಚಿಕೆ ಪ್ರತಿಭಟನೆಯ ವೇಳೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ನಟಿ ತ್ರಿಶಾ ಅವರ ಹೆಸರನ್ನು ಪ್ರಸ್ತಾಪಿಸಿ ಆಡಿದ ಕೆಲವು ಮಾತುಗಳು ತಮಿಳುನಾಡು ರಾಜಕಾರಣದಲ್ಲಿ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದ್ದವು. ಈ ಘಟನೆಯ ನಂತರ ವ್ಯಾಪಕ ಟೀಕೆಗಳು ವ್ಯಕ್ತವಾಗಿ, ಉದಯನಿಧಿ ಅವರ ಬಂಧನ ಮತ್ತು ಬಿಡುಗಡೆ ಪ್ರಕ್ರಿಯೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಪ್ರಸ್ತುತ ವಿಧಾನಸಭೆಯಲ್ಲಿ ಮಾತನಾಡಿರುವ ಸಿಎಂ ವಿಜಯ್, ಅಸಂಸದೀಯ ಶಬ್ದಗಳ ಬಳಕೆಯನ್ನು ಕಟುವಾಗಿ ವಿರೋಧಿಸಿದ್ದಾರೆ. “ತಮ್ಮ ರಾಜಕೀಯ ಗೆಲುವಿಗೆ ಮಹಿಳೆಯರೇ ಮುಖ್ಯ ಕಾರಣ” ಎಂದು ಬಲವಾಗಿ ಸ್ಮರಿಸಿದ ಅವರು, ಸಾರ್ವಜನಿಕ ಜೀವನದಲ್ಲಿರುವವರು ಮಾತನಾಡುವಾಗ ನಿಂದನಾತ್ಮಕ ಹಾಗೂ ಕೀಳುಮಟ್ಟದ ಭಾಷೆಯನ್ನು ಬಳಸಬಾರದು ಎಂದು ಅಗ್ರಹಿಸಿದ್ದಾರೆ.
ಸಭೆಯಲ್ಲಿ ವಿಜಯ್ ನೀಡಿದ ಸ್ಪಷ್ಟನೆ
ವಿಧಾನಸಭೆಯಲ್ಲಿ ಮಾತನಾಡುತ್ತಾ ಸಿಎಂ ವಿಜಯ್, “ನಾವು ರಾಜಕೀಯವಾಗಿ ಯಾರನ್ನು ಬೇಕಾದರೂ ಟೀಕಿಸಬಹುದು, ಅದು ಅಭಿವೃದ್ಧಿಯ ಚರ್ಚೆಯಾಗಬಹುದು. ಆದರೆ ಇದರ ಹೆಸರಿನಲ್ಲಿ ಮಹಿಳೆಯರನ್ನು ಅಥವಾ ಇವರನ್ನು ವೈಯಕ್ತಿಕವಾಗಿ ಗುರಿಯಾಗಿಸಿ ಕೀಳುಮಟ್ಟದಲ್ಲಿ ಮಾತನಾಡುವುದನ್ನು ದಯವಿಟ್ಟು ನಿಲ್ಲಿಸಿ” ಎಂದು ಮನವಿ ಮಾಡಿದರು. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕೆಲವರು ಮಹಿಳೆಯರ ವಿರುದ್ಧ ದ್ವರ್ಥಾರ್ಥಕ ಪದಗಳನ್ನು ಬಳಸುತ್ತಿರುವುದನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಅವರು ಎಚ್ಚರಿಸಿದರು. ಅಲ್ಲದೆ, ಹಿಂದೊಮ್ಮೆ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಇದೇ ವಿಧಾನಸಭೆಯಲ್ಲಿ ಎದುರಿಸಿದ್ದ ಅವಮಾನಗಳನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಿ, ಸದನದಲ್ಲಿ ಮಹಿಳೆಯರಿಗೆ ಎಲ್ಲ ಕಾಲದಲ್ಲೂ ಸೂಕ್ತ ಗೌರವ ಸಿಗಬೇಕು ಎಂದು ಒತ್ತಾಯಿಸಿದರು.
ವಿಜಯ್ ಅವರ ಈ ಖಡಕ್ ಎಚ್ಚರಿಕೆಯು ತಮಿಳುನಾಡು ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಡಿಎಂಕೆ ಹಾಗೂ ಟಿವಿಕೆ (TVK) ನಡುವಿನ ರಾಜಕೀಯ ಸೆಣಸಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ. ಮಹಿಳಾ ಪರ ನಿಲುವನ್ನು ಸ್ಪಷ್ಟಪಡಿಸಿರುವ ವಿಜಯ್ ಅವರ ಮಾತುಗಳು ರಾಜ್ಯದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.
