Connect with us

ದೇಶ

BRICS ಶೃಂಗಸಭೆಯಲ್ಲಿ PM MODI ಮಾಸ್ಟರ್ ಪ್ಲ್ಯಾನ್; ವಿಶ್ವ ಆಡಳಿತ ಬದಲಿಸಲು 10 ಅಂಶಗಳ ರೋಡ್‌ಮ್ಯಾಪ್!

Published

on

ನವದೆಹಲಿ: ಭಾರತ್ ಮಂಟಪದಲ್ಲಿ ಆರಂಭವಾಗಿರುವ 18ನೇ BRICS ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬ್ರಿಕ್ಸ್ ಒಕ್ಕೂಟವು ಯಾವುದೇ ದೇಶದ ವಿರುದ್ಧ ಇರುವ ವೇದಿಕೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ಗ್ಲೋಬಲ್ ಸೌತ್ ರಾಷ್ಟ್ರಗಳು ಕೇವಲ ನಿಯಮ ಪಾಲಕರಾಗಿ ಉಳಿಯದೆ, ನಿಯಮ ರೂಪಕರಾಗಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಜಾಗತಿಕ ಸಂಸ್ಥೆಗಳಲ್ಲಿ ತುರ್ತು ಸುಧಾರಣೆ ತರಬೇಕಿದ್ದು, ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ 10 ಅಂಶಗಳ ರೋಡ್‌ಮ್ಯಾಪ್ ಅನ್ನು ಪ್ರಸ್ತುತಪಡಿಸಿದ್ದಾರೆ.

ಅಧಿಕಾರದ ಪಿರಮಿಡ್ ಬದಲು ಪಾಲುದಾರಿಕೆಯ ವೇದಿಕೆ

ಪ್ರಸ್ತುತ ಜಾಗತಿಕ ಆಡಳಿತ ವ್ಯವಸ್ಥೆಯು ಪಿರಮಿಡ್ ಮಾದರಿಯಲ್ಲಿದ್ದು, ಅಧಿಕಾರ ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳು ಮೇಲ್ಮಟ್ಟದಲ್ಲಿ ಕೇಂದ್ರೀಕೃತವಾಗಿವೆ ಎಂದು ಮೋದಿ ಅಭಿಪ್ರಾಯಪಟ್ಟರು.

ಕೆಳಹಂತದ ರಾಷ್ಟ್ರಗಳು ಈ ನಿರ್ಧಾರಗಳಿಂದ ನೇರವಾಗಿ ಬಾಧಿತವಾಗುತ್ತಿದ್ದರೂ, ನಿರ್ಧಾರ ರೂಪಿಸುವ ಪ್ರಕ್ರಿಯೆಯಲ್ಲಿ ಅವುಗಳಿಗೆ ಸಮರ್ಪಕ ಅವಕಾಶವಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಸವಲತ್ತುಗಳ ಪಿರಮಿಡ್ ಅನ್ನು ಪಾಲುದಾರಿಕೆಯ ವೇದಿಕೆಯಾಗಿ ಪರಿವರ್ತಿಸಬೇಕು. ಪ್ರತಿಯೊಂದು ದೇಶಕ್ಕೂ ಸಮಾನ ಪಾತ್ರ ಮತ್ತು ಧ್ವನಿ ಇರಬೇಕು ಎಂದು ಮೋದಿ ಕರೆ ನೀಡಿದರು.

ಜಾಗತಿಕ ಸುಧಾರಣೆಗೆ ಮೂರು ಪ್ರಮುಖ ಅಂಶ

ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಪ್ರಧಾನಿ ಮೋದಿ ಮೂರು ಪ್ರಮುಖ ಅಂಶಗಳನ್ನು ಮುಂದಿಟ್ಟರು. ಪ್ರಾತಿನಿಧ್ಯ, ಸ್ಪಂದನಾಶೀಲತೆ ಮತ್ತು ನಿಯಮ ರೂಪಿಸುವಿಕೆ ಅತ್ಯಗತ್ಯ ಎಂದು ಅವರು ಹೇಳಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯನ್ನು ಇನ್ನು ಮುಂದೆ ಮುಂದೂಡಲು ಸಾಧ್ಯವಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದರು. ನಿಗದಿತ ಕಾಲಮಿತಿ ಹಾಗೂ ಸ್ಪಷ್ಟ ಫಲಿತಾಂಶಗಳೊಂದಿಗೆ ಈ ಕುರಿತು ಮಾತುಕತೆಗಳು ನಡೆಯಬೇಕು ಎಂದು ಆಗ್ರಹಿಸಿದರು.

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿ ಮತದಾನದ ಅಧಿಕಾರ, ನಾಯಕತ್ವದ ಸ್ಥಾನಗಳು ಮತ್ತು ನೀತಿ ಆದ್ಯತೆಗಳು ಇಂದಿನ ಆರ್ಥಿಕ ವಾಸ್ತವತೆಗೆ ಅನುಗುಣವಾಗಿ ಬದಲಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ನಾವಿಕರ ಸುರಕ್ಷತೆಗೆ ತುರ್ತು ಬೆಂಬಲ ಜಾಲ

ಜಾಗತಿಕ ವ್ಯಾಪಾರದಲ್ಲಿ ನಾವಿಕರು ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಸ್ಮರಿಸಿದ ಪ್ರಧಾನಿ, ಹಾರ್ಮುಜ್ ಜಲಸಂಧಿಯಲ್ಲಿ ಇತ್ತೀಚಿನ ಯುದ್ಧದ ಹಿನ್ನೆಲೆಯಲ್ಲಿ ವಾಣಿಜ್ಯ ನೌಕೆಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನೂ ಉಲ್ಲೇಖಿಸಿದರು.

ಸಮುದ್ರ ಮಾರ್ಗಗಳಲ್ಲಿ ನಾವಿಕರ ಸುರಕ್ಷತೆಯನ್ನು ಖಚಿತಪಡಿಸಲು ‘ನಾವಿಕರ ತುರ್ತು ಬೆಂಬಲ ಜಾಲ’ ಸ್ಥಾಪಿಸುವ ಅಗತ್ಯವಿದೆ ಎಂದು ಮೋದಿ ಪ್ರಸ್ತಾಪಿಸಿದರು.

ಗ್ಲೋಬಲ್ ಸೌತ್ ನಿಯಮ ರೂಪಕರಾಗಬೇಕು

ಕೃತಕ ಬುದ್ಧಿಮತ್ತೆ, ಸೈಬರ್‌ವೇದಿಕೆ, ಬಾಹ್ಯಾಕಾಶ, ಜೈವಿಕ ತಂತ್ರಜ್ಞಾನ ಮತ್ತು ನಿರ್ಣಾಯಕ ತಂತ್ರಜ್ಞಾನಗಳು ಭವಿಷ್ಯದ ಅವಕಾಶಗಳು ಹಾಗೂ ನಿಯಮಗಳನ್ನು ನಿರ್ಧರಿಸುತ್ತಿವೆ ಎಂದು ಮೋದಿ ಹೇಳಿದರು.

ಈ ಕ್ಷೇತ್ರಗಳಲ್ಲಿ ಭವಿಷ್ಯದ ನಿಯಮಗಳನ್ನು ರೂಪಿಸುವಾಗ ಎಲ್ಲ ರಾಷ್ಟ್ರಗಳಿಗೂ ಸಮಾನ ಪಾಲ್ಗೊಳ್ಳುವಿಕೆ ಇರಬೇಕು ಎಂದು ಅವರು ಪ್ರತಿಪಾದಿಸಿದರು.

ಗ್ಲೋಬಲ್ ಸೌತ್ ರಾಷ್ಟ್ರಗಳ ಯುವ ರಾಜತಾಂತ್ರಿಕರು ಮತ್ತು ನೀತಿ ನಿರೂಪಕರಿಗೆ ಸಮಾಲೋಚನಾ ಕೌಶಲ, ಪ್ರಾಯೋಗಿಕ ತರಬೇತಿ ಹಾಗೂ ಕಾನೂನು ಪರಿಣತಿಯನ್ನು ಒದಗಿಸುವ ಮೂಲಕ ಬ್ರಿಕ್ಸ್ ವೇದಿಕೆಯು ಅವರನ್ನು ಪ್ರಬಲ ನಿಯಮ ರೂಪಕರನ್ನಾಗಿ ಬೆಳೆಸಬಹುದು ಎಂದು ಪ್ರಧಾನಿ ಹೇಳಿದರು.

‘ನಮ್ಮ ಭವಿಷ್ಯವನ್ನು ರೂಪಿಸುವ ಹಕ್ಕು ಎಲ್ಲರಿಗೂ ಇರಬೇಕು’

ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಸಂದೇಶ ಸ್ಪಷ್ಟವಾಗಿದೆ ಎಂದು ಮೋದಿ ಹೇಳಿದರು. ನಮ್ಮ ಭವಿಷ್ಯ ಹಂಚಿಕೆಯಾಗಿದ್ದರೆ, ಅದನ್ನು ರೂಪಿಸುವ ಹಕ್ಕು ಕೂಡ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ಧ್ವನಿಯಿಂದ ಪ್ರಭಾವದವರೆಗೆ, ಸವಲತ್ತುಗಳಿಂದ ಪಾಲುದಾರಿಕೆಯವರೆಗೆ ಎಂಬ ಮಂತ್ರವೇ ಪ್ರಸ್ತುತ ಬ್ರಿಕ್ಸ್ ಒಕ್ಕೂಟದ ಪ್ರಮುಖ ಸಂಕಲ್ಪವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದರು.

J S Vasudev is a journalist and writer with 15 years of experience in writing and journalism. He founded Hosasuddi.in in 2023 with a vision to deliver credible and timely Kannada news. With a strong passion for journalism, he focuses on presenting news in a clear, simple and reader-friendly manner. His work covers current affairs, Karnataka news, national developments, business, technology and social issues. He believes in independent journalism and responsible reporting that puts readers first. His guiding motto is “Write on Your Own,” reflecting his commitment to original and independent content. Through Hosasuddi.in, he continues to contribute to Kannada digital journalism with dedication and integrity.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

CM D K Shiv Kumar 100 ದಿನಗಳ ಸಂವಾದ: ‘ಗಟ್ಟಿ ತೀರ್ಮಾನ ಮಾಡದಿದ್ದರೆ ನನ್ನನ್ನು ಕಾಲಿ ಡಬ್ಬಿ ಅಂತಾರೆ’!

Published

on

ಬೆಂಗಳೂರು: CM D K Shiv Kumar ಅವರು ಮುಖ್ಯಮಂತ್ರಿಯಾಗಿ 100 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸುದ್ದಿಮಾಧ್ಯಮಗಳ ಸಂಪಾದಕರೊಂದಿಗೆ ಸಂವಾದ ನಡೆಸಿ, ತಮ್ಮ ಸರ್ಕಾರದ ನೂರು ದಿನಗಳ ಹೆಜ್ಜೆಗುರುತು, ಮುಂದಿನ ಯೋಜನೆಗಳು ಹಾಗೂ ಎದುರಿಸುತ್ತಿರುವ ಸವಾಲುಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಆರೋಗ್ಯ ಸಹಕರಿಸಿದರೆ ಇನ್ನೂ 15 ವರ್ಷ ರಾಜಕೀಯದಲ್ಲಿ ಸಕ್ರಿಯವಾಗಿರುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಪರಿಸ್ಥಿತಿ ಅರಿತೇ ಯೋಜನೆಗಳ ಘೋಷಣೆ

ಕಳೆದ ನೂರು ದಿನಗಳಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡೇ ಅನುಷ್ಠಾನ ಮಾಡಲು ಸಾಧ್ಯವಿರುವ ಯೋಜನೆಗಳನ್ನು ಮಾತ್ರ ಘೋಷಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನುಡಿದಂತೆ ನಡೆಯಬೇಕು ಎಂಬ ಅರಿವು ತಮ್ಮಲ್ಲಿದೆ. ಇಲ್ಲವಾದರೆ ಎಲ್ಲರ ಎದುರು ನಗೆಪಾಟಲಿಗೀಡಾಗಬೇಕಾಗುತ್ತದೆ. ಹೀಗಾಗಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಒಸಿ, ಸಿಸಿ ವಿಚಾರದಲ್ಲಿಯೂ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ವಸತಿ ಕಟ್ಟಡಗಳ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದ್ದು, ವಾಣಿಜ್ಯ ಕಟ್ಟಡಗಳ ವಿಚಾರವನ್ನು ಪರಿಗಣಿಸಿದರೆ ಬೇರೆ ರೀತಿಯ ನಿರ್ಧಾರವಾಗುತ್ತದೆ. ಭೂ ಗ್ಯಾರಂಟಿಯನ್ನೂ ನೀಡಲಾಗಿದೆ ಎಂದು ಹೇಳಿದ್ದಾರೆ.

ಹೊರರಾಜ್ಯದವರಿಗೆ ಉಚಿತ ಸೌಲಭ್ಯ ಯಾಕೆ?

ಶಕ್ತಿ ಯೋಜನೆಯಡಿ ಫಲಾನುಭವಿಗಳಿಗೆ ಕಾರ್ಡ್‌ ನೀಡಲು ತೀರ್ಮಾನಿಸಲಾಗಿದ್ದು, ಕಾರ್ಡ್‌ ಸ್ಕ್ಯಾನ್‌ ಮಾಡಿ ಪ್ರಯಾಣಿಸುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಡಿಕೆಶಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 14 ಲಕ್ಷದಷ್ಟು ಹೊರರಾಜ್ಯದವರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಹಾಗಿದ್ದಾಗ ಹೊರರಾಜ್ಯದವರಿಗೆ ಏಕೆ ಉಚಿತ ಅವಕಾಶ ನೀಡಬೇಕು ಎಂಬ ಪ್ರಶ್ನೆ ಇದೆ. ಇದೇ ರೀತಿ ಹೊರರಾಜ್ಯದವರಿಗೆ ಉಚಿತ ವಿದ್ಯುತ್‌ ನೀಡುವ ವಿಚಾರದಲ್ಲಿಯೂ ಪರಿಷ್ಕರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಸಣ್ಣಪುಟ್ಟ ವಿಚಾರಗಳಲ್ಲಿಯೂ ಗಟ್ಟಿ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿದೆ. ಇಲ್ಲವಾದರೆ ತಮ್ಮನ್ನು ‘ಕಾಲಿ ಡಬ್ಬ’ ಎಂದು ಕರೆಯುತ್ತಾರೆ ಎಂಬ ಅರಿವು ಇದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಟನಲ್‌ ರಸ್ತೆ ಯಾರಿಗಾಗಿ?

ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ನೀಡಲು ಉದ್ದೇಶಿಸಿರುವ ಟನಲ್‌ ರಸ್ತೆ ಯೋಜನೆಗೆ ಹಲವು ಅಡೆತಡೆಗಳಿವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಪಾರ್ಕ್‌ನ ಒಂದು ಮೂಲೆಯ ಜಾಗವನ್ನು ಬಳಸಿಕೊಳ್ಳುವುದಕ್ಕೂ ಆಕ್ಷೇಪ ವ್ಯಕ್ತವಾಗುತ್ತಿದೆ. ಸಣ್ಣ ಬಂಡೆಯೊಂದನ್ನು ತೆಗೆಯಬೇಕಾದ ಪರಿಸ್ಥಿತಿಯನ್ನೂ ದೊಡ್ಡ ವಿಚಾರವನ್ನಾಗಿ ಮಾಡಲಾಗುತ್ತಿದೆ. ಬೇರೆ ಕಟ್ಟಡಗಳನ್ನು ಒಡೆಯಲು ಸಾಧ್ಯವಿಲ್ಲ. ಹಾಗಾದರೆ ಈ ಟನಲ್‌ ರಸ್ತೆ ಯಾರಿಗಾಗಿ ಎಂಬ ಪ್ರಶ್ನೆಯನ್ನು ಡಿಕೆಶಿ ಮುಂದಿಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಏಳು ಟನಲ್‌ ರಸ್ತೆಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಕರ್ನಾಟಕದ ದಾಖಲೆಗಳನ್ನು ತೆಗೆದುಕೊಂಡು ಕೆಲವು ರಾಜ್ಯಗಳಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಟನಲ್‌ ರಸ್ತೆಯನ್ನು ನಿರ್ಮಿಸಲು ಸರ್ಕಾರ ಸುಮಾರು ₹4,000 ಕೋಟಿ ಮಾತ್ರ ನೀಡಲಿದೆ. ಉಳಿದ ಹಣವನ್ನು ಖಾಸಗಿ ಸಂಸ್ಥೆಗಳು ಹೂಡಿಕೆ ಮಾಡಿ, 25ರಿಂದ 30 ವರ್ಷಗಳ ಕಾಲ ನಿರ್ವಹಣೆ ಮಾಡುವ ರೀತಿಯಲ್ಲಿ ಬಿಲ್ಡ್‌-ಆಪರೇಟ್‌-ಟ್ರಾನ್ಸ್‌ಫರ್‌ ಮಾದರಿಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಹಣ ಪಾವತಿಸಲು ಸಿದ್ಧರಿರುವವರು ಟನಲ್‌ ರಸ್ತೆಯಲ್ಲಿ ಸಂಚರಿಸಿ ಸಮಯ ಉಳಿಸಿಕೊಳ್ಳಬಹುದು. ಹಣ ನೀಡಲು ಸಾಧ್ಯವಾಗದವರು ಮೇಲಿನ ಸಾಮಾನ್ಯ ರಸ್ತೆಯಲ್ಲಿ ಸಂಚರಿಸಬಹುದು. ಟನಲ್‌ ರಸ್ತೆಯಿಂದ ಕನಿಷ್ಠ ಒಂದು ಗಂಟೆ ಸಮಯ ಉಳಿಯಬಹುದು ಎಂದು ಡಿಕೆಶಿ ಹೇಳಿದ್ದಾರೆ.

ನಿದ್ದೆಗೆ ಕಡಿಮೆ ಸಮಯ: ‘ರಾಜಕೀಯವೇ ನನ್ನ ದೊಡ್ಡ ಅಭ್ಯಾಸ’

ತಮ್ಮ ನಿದ್ದೆಯ ಅವಧಿ ಕಳೆದ ಐದಾರು ವರ್ಷಗಳಿಂದ ಬಹಳ ಕಡಿಮೆಯಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಎರಡು ದಿನಗಳ ಹಿಂದೆ ರಾತ್ರಿ 2 ಗಂಟೆಗೆ ಮಲಗಿ, ಬೆಳಗ್ಗೆ 5.15ಕ್ಕೆ ಎದ್ದು ಎಪಿಎಂಸಿ ಭೇಟಿ ನೀಡಿದ್ದೆ. ಬೆಳಗ್ಗೆ 9.45ರ ವೇಳೆಗೆ ವಾಪಸ್‌ ಬಂದಿದ್ದೆ. ಮೊದಲ ಬಾರಿಗೆ ಮಧ್ಯಾಹ್ನ ದೈಹಿಕವಾಗಿ ವ್ಯತ್ಯಾಸ ಕಂಡುಬಂತು ಎಂದು ತಿಳಿಸಿದ್ದಾರೆ.

ಪಕ್ಷದ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಕನಿಷ್ಠ ಐದಾರು ಗಂಟೆಗಳ ವಿಶ್ರಾಂತಿಯೂ ಸಿಗುತ್ತಿಲ್ಲ. ಗುರಿ ಮುಟ್ಟಬೇಕು ಎಂಬ ಪ್ರಯತ್ನದಿಂದ ಪ್ರತಿದಿನ ರಾತ್ರಿ 2 ಗಂಟೆಯವರೆಗೂ ಯಾರಾದರೂ ಭೇಟಿಯಾಗುತ್ತಿರುತ್ತಾರೆ. ಹಲವು ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ತಮ್ಮ ಕುಟುಂಬ ಸಂಪೂರ್ಣ ಸಹಕಾರ ನೀಡುತ್ತಿದೆ. ಅದೇ ತಮ್ಮ ದೊಡ್ಡ ಶಕ್ತಿ. ಬೇರೆ ಯಾವುದೇ ಅಭ್ಯಾಸವಿಲ್ಲ, ರಾಜಕೀಯವೇ ತಮ್ಮ ದೊಡ್ಡ ಅಭ್ಯಾಸ ಎಂದು ಡಿಕೆಶಿ ಹೇಳಿದ್ದಾರೆ.

ಸರ್ಕಾರದ ಮುಂದೆ ಹಲವು ಸವಾಲುಗಳು

ತಮ್ಮ ಸರ್ಕಾರದ ಕಾಲಾವಧಿ ಕಡಿಮೆ ಇದೆ ಎಂಬ ಅರಿವಿದೆ. ಆದರೆ ಇದು ಡಿಕ್ಟೇಟರ್‌ಶಿಪ್‌ ಸರ್ಕಾರವಲ್ಲ, ಪ್ರಜಾಪ್ರಭುತ್ವದ ಸರ್ಕಾರ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ಸೇರಿದಂತೆ ಹಲವು ಹಂತಗಳಲ್ಲಿ ಸರ್ಕಾರದ ಪ್ರತಿಯೊಂದು ತೀರ್ಮಾನವೂ ಪ್ರಶ್ನೆಗೆ ಒಳಗಾಗುತ್ತದೆ. ಅಧಿಕಾರಿಗಳು ಕೂಡ ಎಲ್ಲ ನಿರ್ಧಾರಗಳನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಯಾರೂ ಅಪಾಯ ತೆಗೆದುಕೊಳ್ಳಲು ಸಿದ್ಧರಿರುವುದಿಲ್ಲ ಎಂದು ತಿಳಿಸಿದ್ದಾರೆ.

ರಾಜಕೀಯದಲ್ಲಿ ಮೇಲೇರಲು ಪ್ರಯತ್ನಿಸುವವರ ಕಾಲೆಳೆಯುವುದು ಸಹಜ. ನ್ಯಾಯಾಲಯಕ್ಕೆ ಯಾರಾದರೂ ಹೋಗಿ ತಡೆಯಾಜ್ಞೆ ತಂದರೂ ಯೋಜನೆಗಳು ಸ್ಥಗಿತಗೊಳ್ಳುವ ಪರಿಸ್ಥಿತಿ ಇದೆ. ಶಿವರಾಮ ಕಾರಂತ ಬಡಾವಣೆ ವಿಚಾರವೇ ಇದಕ್ಕೆ ಉದಾಹರಣೆ. ಈ ಎಲ್ಲ ಕಾರಣಗಳಿಂದ ಸಾಕಷ್ಟು ಸವಾಲುಗಳಿವೆ ಎಂದು ಡಿಕೆಶಿ ಹೇಳಿದ್ದಾರೆ.

ಪ್ರಧಾನಿ ಮೋದಿ ಜತೆಗಿನ ಮಾತುಕತೆ ಬಹಿರಂಗಪಡಿಸುವುದಿಲ್ಲ

ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಕರೆದು ಮಾತನಾಡಿದ್ದರು. ಅದು ಅವರ ಹೃದಯಶ್ರೀಮಂತಿಕೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಜನರು, ದೇಶ ಹಾಗೂ ಸ್ವಾಮಿ ವಿವೇಕಾನಂದರ ಬಗ್ಗೆ ಚರ್ಚೆ ನಡೆಸಿದ್ದೇವೆ. ಪ್ರಧಾನಿ ಮತ್ತು ಮುಖ್ಯಮಂತ್ರಿ ನಡುವೆ ನಡೆದ ಮಾತುಕತೆಯ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅದಾನಿ ಭೇಟಿ ಬಗ್ಗೆ ರಾಹುಲ್‌ ಗಾಂಧಿ ಕೇಳಿಲ್ಲ

ಉದ್ಯಮಿ ಗೌತಮ್‌ ಅದಾನಿ ಬಹಳ ದಿನಗಳಿಂದ ಪರಿಚಯವಿರುವವರು. ವಿದ್ಯುತ್‌, ಸಿಮೆಂಟ್‌ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.

ಒಬ್ಬ ಉದ್ಯಮಿಯಾಗಿ ಅದಾನಿ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಬಂದಾಗ ಬೇಡ ಎಂದು ಹೇಳಲು ಸಾಧ್ಯವಿಲ್ಲ. ರಾಹುಲ್‌ ಗಾಂಧಿಯವರು ಅದಾನಿ ಜತೆಗಿನ ತಮ್ಮ ಭೇಟಿಯ ಬಗ್ಗೆ ಯಾವುದೇ ಪ್ರಶ್ನೆ ಕೇಳಿಲ್ಲ ಎಂದು ತಿಳಿಸಿದ್ದಾರೆ.

‘ಜನರನ್ನು ಗೊಂದಲಕ್ಕೆ ಸಿಲುಕಿಸುವುದಿಲ್ಲ’

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಯಶಸ್ವಿಯಾಗಿ ನಡೆದಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹಲವು ರಾಜ್ಯಗಳಲ್ಲಿ ಯೋಜನೆಗಳನ್ನು ಘೋಷಿಸಿದರೂ ಮುಂದುವರಿಸಲು ಸಾಧ್ಯವಾಗದೆ ನಿಲ್ಲಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿಯನ್ನೂ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.

‘ವಿ ವಿಲ್ ಕನ್ವಿನ್ಸ್ಡ್ ದಿ ಪೀಪಲ್, ವಿ ವಿಲ್ ನಾಟ್ ಕನ್ಫ್ಯೂಸ್ಡ್ ದಿ ಪೀಪಲ್’ ಎಂದು ಹೇಳಿರುವ ಡಿಕೆಶಿ, ಜನರಲ್ಲಿ ಸರ್ಕಾರದ ಬಗ್ಗೆ ವಿಶ್ವಾಸ ಮೂಡಿದೆ ಎಂದು ಹೇಳಿದ್ದಾರೆ.

‘ಜನರ ಬಗ್ಗೆ ಕಾಳಜಿಯಷ್ಟೇ’

ಪಾರ್ಕ್‌ ಜಾಗ ಬಳಕೆ ಸೇರಿದಂತೆ ಯಾವುದೇ ವಿಚಾರದಲ್ಲಿಯೂ ಸರ್ಕಾರ ಯುಟರ್ನ್‌ ಹೊಡೆದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಾಡಿನ ಜನರ ಕುರಿತು ಕಾಳಜಿ ಮತ್ತು ಗೌರವ ಮಾತ್ರ ಸರ್ಕಾರದ ಉದ್ದೇಶ. ಜನರ ಭಾವನೆಗಳಿಗೆ ಗೌರವ ನೀಡಬೇಕು ಮತ್ತು ಅದನ್ನು ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಕಸ: ‘ದೊಡ್ಡ ಮಾಫಿಯಾ’

ಬೆಂಗಳೂರು ಕಸ ನಿರ್ವಹಣೆ ವಿಚಾರವೂ ಸರ್ಕಾರದ ಮುಂದಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.

ಕಳೆದ 15 ವರ್ಷಗಳಿಂದ ಬೆಂಗಳೂರಿನ ಕಸದ ಟೆಂಡರ್‌ ಅಂತಿಮಗೊಳಿಸಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್‌, ಬಿಜೆಪಿ ಅಥವಾ ಜೆಡಿಎಸ್‌ ಸರ್ಕಾರವಿದ್ದರೂ ಈ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಕ್ಕಿರಲಿಲ್ಲ. ಇದು ದೊಡ್ಡ ಮಾಫಿಯಾ ಆಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಈಗ ಕಸ ನಿರ್ವಹಣೆಗೆ ಪ್ಯಾಕೇಜ್‌ಗಳನ್ನು ರೂಪಿಸಿ ಟೆಂಡರ್‌ ನೀಡಲಾಗಿದೆ. ನ್ಯಾಯಾಲಯದ ಮಧ್ಯಪ್ರವೇಶ ಸೇರಿದಂತೆ ಹಲವು ವಿಚಾರಗಳು ಇದರಲ್ಲಿವೆ. ಈ ಸಮಸ್ಯೆಯನ್ನು ಒಂದು ಹಂತಕ್ಕೆ ತರುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Continue Reading

ದೇಶ

BRICS ಘೋಷಣೆಯಲ್ಲಿ ಡಾಲರ್‌ಗೆ ದೊಡ್ಡ ಸವಾಲು? ಸ್ಥಳೀಯ ಕರೆನ್ಸಿ ವಹಿವಾಟಿಗೆ ಮಹತ್ವದ ನಿರ್ಧಾರ

Published

on

ನವದೆಹಲಿ: ಭಾರತ್ ಮಂಟಪದಲ್ಲಿ ನಡೆದ 18ನೇ BRICS ಶೃಂಗಸಭೆಯಲ್ಲಿ ‘ಬ್ರಿಕ್ಸ್ ಹೊಸ ದೆಹಲಿ ಘೋಷಣೆ’ ಅಂಗೀಕರಿಸಲಾಗಿದ್ದು, ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ, ಸ್ಥಳೀಯ ಕರೆನ್ಸಿಗಳಲ್ಲಿ ವಹಿವಾಟು, ಅಭಿವೃದ್ಧಿಶೀಲ ರಾಷ್ಟ್ರಗಳ ಹೆಚ್ಚಿನ ಪ್ರಾತಿನಿಧ್ಯ ಹಾಗೂ ಜಾಗತಿಕ ಸಂಘರ್ಷಗಳಿಗೆ ರಾಜತಾಂತ್ರಿಕ ಪರಿಹಾರಕ್ಕೆ ಒತ್ತು ನೀಡಲಾಗಿದೆ.

ಗ್ಲೋಬಲ್ ಸೌತ್ ರಾಷ್ಟ್ರಗಳಿಗೆ ಹೆಚ್ಚಿನ ಧ್ವನಿ ಮತ್ತು ಪ್ರಭಾವ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಸಂದೇಶ ನೀಡಿರುವ ಘೋಷಣೆಯಲ್ಲಿ, ಬಹುಧ್ರುವೀಯ ಜಾಗತಿಕ ವ್ಯವಸ್ಥೆಯ ಅಗತ್ಯವನ್ನು ಒತ್ತಿಹೇಳಲಾಗಿದೆ.

ಡಾಲರ್ ಅವಲಂಬನೆ ಕಡಿಮೆ ಮಾಡಲು ಸ್ಥಳೀಯ ಕರೆನ್ಸಿಗೆ ಒತ್ತು

ಬ್ರಿಕ್ಸ್ ರಾಷ್ಟ್ರಗಳ ನಡುವಿನ ವಹಿವಾಟಿನಲ್ಲಿ ರಾಷ್ಟ್ರೀಯ ಮತ್ತು ಸ್ಥಳೀಯ ಕರೆನ್ಸಿಗಳ ಬಳಕೆಯನ್ನು ಹೆಚ್ಚಿಸುವ ಅಗತ್ಯಕ್ಕೆ ಘೋಷಣೆಯಲ್ಲಿ ಒತ್ತು ನೀಡಲಾಗಿದೆ.

ಅಂತರರಾಷ್ಟ್ರೀಯ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಸದಸ್ಯ ರಾಷ್ಟ್ರಗಳ ಆರ್ಥಿಕತೆಯನ್ನು ಬಾಹ್ಯ ಹಣಕಾಸು ಅಸ್ಥಿರತೆಯಿಂದ ರಕ್ಷಿಸುವ ಉದ್ದೇಶವೂ ಇದರಲ್ಲಿ ಅಡಕವಾಗಿದೆ.

ಸ್ಥಳೀಯ ಕರೆನ್ಸಿ ಪಾವತಿ ವ್ಯವಸ್ಥೆಗಳನ್ನು ಬಲಪಡಿಸುವುದು ಹಾಗೂ ಗಡಿಯಾಚೆಗಿನ ಹಣಕಾಸು ವಹಿವಾಟಿಗೆ ಪರ್ಯಾಯ ವ್ಯವಸ್ಥೆಗಳ ಅನ್ವೇಷಣೆಗೆ ಸದಸ್ಯ ರಾಷ್ಟ್ರಗಳು ಒತ್ತು ನೀಡಿವೆ. ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ನ ವಿಸ್ತರಣೆಯ ಬಗ್ಗೆಯೂ ಗಮನ ಹರಿಸಲಾಗಿದೆ.

UNSC ಸೇರಿದಂತೆ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗೆ ಕರೆ

ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿಶ್ವ ವ್ಯಾಪಾರ ಸಂಸ್ಥೆ ಸೇರಿದಂತೆ ಬಹುಪಕ್ಷೀಯ ಜಾಗತಿಕ ಸಂಸ್ಥೆಗಳಲ್ಲಿ ಸಮಗ್ರ ಸುಧಾರಣೆ ಅಗತ್ಯ ಎಂದು ಬ್ರಿಕ್ಸ್ ನಾಯಕರು ಪ್ರತಿಪಾದಿಸಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಹಾಗೂ ಧ್ವನಿ ದೊರೆಯುವಂತೆ ರಚನಾತ್ಮಕ ಸುಧಾರಣೆ ತರಬೇಕೆಂಬ ಬೇಡಿಕೆಯನ್ನು ಘೋಷಣೆ ಮುಂದಿಟ್ಟಿದೆ.

ಯುದ್ಧಕ್ಕೆ ವಿರೋಧ, ರಾಜತಾಂತ್ರಿಕ ಪರಿಹಾರಕ್ಕೆ ಆದ್ಯತೆ

ಜಾಗತಿಕ ಸಂಘರ್ಷಗಳು ಹಾಗೂ ಪ್ರಾದೇಶಿಕ ಉದ್ವಿಗ್ನತೆಗಳ ಬಗ್ಗೆ ಬ್ರಿಕ್ಸ್ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಯುದ್ಧಗಳು ಕೇವಲ ಯುದ್ಧಭೂಮಿಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಸಂದೇಶದೊಂದಿಗೆ, ಸಂಘರ್ಷಗಳಿಗೆ ಶಾಂತಿಯುತ ಮಾತುಕತೆ, ಮಧ್ಯಸ್ಥಿಕೆ ಹಾಗೂ ಅಂತರರಾಷ್ಟ್ರೀಯ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳಲು ಒತ್ತು ನೀಡಲಾಗಿದೆ.

ರಾಜ್ಯ ಮಟ್ಟದ ಆಕ್ರಮಣಕಾರಿ ಕ್ರಮಗಳು ಮತ್ತು ಸೇನಾ ಸಂಘರ್ಷಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ನಾಯಕರು, ರಾಜತಾಂತ್ರಿಕ ಪ್ರಯತ್ನಗಳಿಗೆ ಆದ್ಯತೆ ನೀಡುವಂತೆ ಕರೆ ನೀಡಿದ್ದಾರೆ.

ಹಾರ್ಮುಜ್ ಜಲಸಂಧಿ ಸೇರಿದಂತೆ ಸಮುದ್ರ ಮಾರ್ಗಗಳ ಸುರಕ್ಷತೆ

ಜಾಗತಿಕ ವ್ಯಾಪಾರದ ಪ್ರಮುಖ ಜೀವನಾಡಿಯಾಗಿರುವ ಸಮುದ್ರ ಮಾರ್ಗಗಳ ಸುರಕ್ಷತೆಯ ಬಗ್ಗೆಯೂ ಬ್ರಿಕ್ಸ್ ಘೋಷಣೆಯಲ್ಲಿ ಗಮನ ಹರಿಸಲಾಗಿದೆ.

ಹಾರ್ಮುಜ್ ಜಲಸಂಧಿಯಂತಹ ಪ್ರಮುಖ ಮಾರ್ಗಗಳಲ್ಲಿ ಉಂಟಾಗುವ ಭದ್ರತಾ ಬಿಕ್ಕಟ್ಟುಗಳು ವಾಣಿಜ್ಯ ನೌಕೆಗಳ ಸಂಚಾರ ಹಾಗೂ ಜಾಗತಿಕ ವ್ಯಾಪಾರದ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ, ವಾಣಿಜ್ಯ ನೌಕೆಗಳು ಮತ್ತು ನಾವಿಕರ ಸುರಕ್ಷತೆಯನ್ನು ಖಚಿತಪಡಿಸುವ ಅಗತ್ಯವನ್ನು ಒತ್ತಿಹೇಳಲಾಗಿದೆ.

ನಾವಿಕರ ಸುರಕ್ಷತೆಗಾಗಿ ‘ನಾವಿಕರ ತುರ್ತು ಬೆಂಬಲ ಜಾಲ’ ಸ್ಥಾಪಿಸುವ ಪ್ರಸ್ತಾಪಕ್ಕೂ ಮಹತ್ವ ನೀಡಲಾಗಿದೆ.

ಗ್ಲೋಬಲ್ ಸೌತ್ ಇನ್ನು ನಿಯಮ ಪಾಲಕರಲ್ಲ, ನಿಯಮ ರೂಪಕರು

ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಬಾಹ್ಯಾಕಾಶ, ಹಸಿರು ತಂತ್ರಜ್ಞಾನ ಸೇರಿದಂತೆ ಭವಿಷ್ಯದ ಪ್ರಮುಖ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಗ್ಲೋಬಲ್ ಸೌತ್ ರಾಷ್ಟ್ರಗಳು ಸಕ್ರಿಯ ಪಾತ್ರ ವಹಿಸಬೇಕು ಎಂಬ ಸಂದೇಶವನ್ನು ಬ್ರಿಕ್ಸ್ ಪುನರುಚ್ಚರಿಸಿದೆ.

ಇದುವರೆಗೆ ಅಂತಾರಾಷ್ಟ್ರೀಯ ನಿಯಮಗಳನ್ನು ಪಾಲಿಸುವ ರಾಷ್ಟ್ರಗಳಾಗಿ ಮಾತ್ರ ಉಳಿಯದೆ, ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯಲ್ಲೂ ಸಮಾನವಾಗಿ ಭಾಗವಹಿಸಬೇಕು ಎಂಬ ಆಶಯವನ್ನು ಘೋಷಣೆ ಪ್ರತಿಬಿಂಬಿಸಿದೆ.

ಒಟ್ಟಾರೆ, ಹೊಸ ದೆಹಲಿ ಘೋಷಣೆಯು ಜಾಗತಿಕ ಆಡಳಿತದಲ್ಲಿ ಸುಧಾರಣೆ, ಸ್ಥಳೀಯ ಕರೆನ್ಸಿ ವಹಿವಾಟು, ಸಮುದ್ರ ಮಾರ್ಗಗಳ ಸುರಕ್ಷತೆ, ಶಾಂತಿಯುತ ರಾಜತಾಂತ್ರಿಕ ಪರಿಹಾರ ಮತ್ತು ಗ್ಲೋಬಲ್ ಸೌತ್ ರಾಷ್ಟ್ರಗಳ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಒತ್ತು ನೀಡಿದೆ.

Continue Reading

ರಾಜ್ಯ

ED ಕಾರ್ಯಾಚರಣೆಗೆ ರಾಜಕೀಯ ಬಣ್ಣ ಬೇಡ; ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಮಾಡಿದ್ದ ಟೀಕೆ ಏನು?

Published

on

ಮೈಸೂರು: ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲಿನ ಜಾರಿ ನಿರ್ದೇಶನಾಲಯದ (ED) ಪರಿಶೀಲನೆಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಈ ಆರೋಪಗಳು ಕೇವಲ ರಾಜಕೀಯ ತಂತ್ರ ಎಂದು ಅವರು ಟೀಕಿಸಿದ್ದಾರೆ.

ಇಡಿ ಸೇರಿದಂತೆ ಪ್ರತಿಯೊಂದು ತನಿಖಾ ಸಂಸ್ಥೆಯ ಕ್ರಮಕ್ಕೂ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ ಎಂದು ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.

‘ತನಿಖಾ ಸಂಸ್ಥೆಗಳ ಕಾರ್ಯಕ್ಕೆ ರಾಜಕೀಯ ಬಣ್ಣ ಬೇಡ’

ತನಿಖಾ ಸಂಸ್ಥೆಗಳ ಪರಿಶೀಲನೆ ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮುಖಂಡರು ಹಾಗೂ ಚಿತ್ರರಂಗದ ಪ್ರಮುಖರ ನಿವಾಸಗಳ ಮೇಲೆಯೂ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

ಹೀಗಾಗಿ ಕೇಂದ್ರ ತನಿಖಾ ಸಂಸ್ಥೆಗಳ ಕಾರ್ಯವೈಖರಿಯನ್ನು ಉದ್ದೇಶಪೂರ್ವಕವಾಗಿ ರಾಜಕೀಯಕ್ಕೆ ಎಳೆದು ತರುವುದು ಸೂಕ್ತವಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲಿನ ಇಡಿ ಪರಿಶೀಲನೆಗೂ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧವಿಲ್ಲ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಮಾಡಲಾಗುತ್ತಿರುವ ಆರೋಪಗಳು ರಾಜಕೀಯ ತಂತ್ರ ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಟೀಕೆ

ಇದೇ ವೇಳೆ ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವದ ಕುರಿತು ಮಾತನಾಡಿದ ಪ್ರತಾಪ್ ಸಿಂಹ, ಮಾಜಿ ಮುಖ್ಯಮಂತ್ರಿ ತಮ್ಮ ಪ್ರಭಾವವನ್ನು ಬಳಸಿರುವುದು ಕೇವಲ ಮಾಜಿ ಸಚಿವ ಮಹದೇವಪ್ಪ ಅವರ ನಿವಾಸ ಖಾಲಿ ಮಾಡಿಸಿದ ಪ್ರಕರಣದಲ್ಲಿ ಮಾತ್ರ ಎಂದು ಟೀಕಿಸಿದ್ದಾರೆ.

ಈ ಹೇಳಿಕೆಯ ಮೂಲಕ ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವದ ಬಗ್ಗೆ ಪ್ರತಾಪ್ ಸಿಂಹ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.

Continue Reading

Trending