ಸಿನಿಮಾ
ಬ್ರೇಕಪ್ ಬಳಿಕ ಜೀವನ ಹೇಗಿದೆ ಎಂದು ಹಾಡಿದ ಶ್ರುತಿ ಹಾಸನ್
ಸಲಾರ್’ (Salaar) ನಟಿ ಶ್ರುತಿ ಹಾಸನ್ (Shruti Haasan) ಇತ್ತೀಚೆಗೆ ಶಾಂತನು ಹಜಾರಿಕಾ (Santanu Hazarika) ಜೊತೆ ಬ್ರೇಕಪ್ ಮಾಡಿಕೊಂಡರು. ಇದೀಗ ಸಿಂಗಲ್ ಇರುವ ನಟಿ, ಬ್ರೇಕಪ್ ಕುರಿತಂತೆ ಗೀತೆ ರಚಿಸಿ ಆ ಹಾಡಿಗೆ ಶ್ರುತಿ ದನಿಯಾಗಿದ್ದಾರೆ. ಬ್ರೇಕಪ್ (Breakup) ಮತ್ತು ಸೆಲ್ಫ್ ಲವ್ ಬಗ್ಗೆ ಹಾಡಿನ ಮೂಲಕ ನಟಿ ತಿಳಿಸಿದ್ದಾರೆ. ಸದ್ಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿವ್ಸ್ ಪಡೆದುಕೊಳ್ಳುತ್ತಿದೆ, ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ಗೆ ಚಿತ್ರರಂಗದಲ್ಲಿ ಭಾರೀ ಬೇಡಿಕೆ ಇದೆ. ಆದರೆ ಸಿನಿಮಾಗಿಂತ ಖಾಸಗಿ ಬದುಕಿನ ವಿಚಾರವಾಗಿ ಹೆಚ್ಚೆಚ್ಚು ಸುದ್ದಿಯಾಗುತ್ತಿದ್ದಾರೆ. ಇನ್ನೇನು ಬಹುಕಾಲದ ಗೆಳೆಯ ಶಾಂತನು ಜೊತೆ ಶ್ರುತಿ ಮದುವೆ ಸುದ್ದಿ ವೈರಲ್ ಆಗುತ್ತಿದ್ದಂತೆ ಬ್ರೇಕಪ್ ನ್ಯೂಸ್ ಕೊಟ್ಟು ನಟಿ ಶಾಕ್ ಕೊಟ್ಟಿದ್ದರು, ಸದ್ಯ ಮಾಜಿ ಗೆಳೆಯನ ಜೊತೆ ಬೇರೆಯಾದ್ಮೇಲೆ ಜೀವನ ಹೇಗಿದೆ ಎಂದು ತಮ್ಮ ಹಾಡಿನ ಮೂಲಕ ನಟಿ ಸುಳಿವು ನೀಡಿದ್ದಾರೆ. ನನ್ನ ಹೃದಯದ ಬಾಗಿಲು ಮುಚ್ಚಿದೆ. ಪ್ರೀತಿ ಎನ್ನುವ ಬೀಗದ ಕೈ ಬೇಕಿಲ್ಲ ಎನ್ನುವ ಅರ್ಥದಲ್ಲಿ ನಟಿ ಹಾಡಿದ್ದಾರೆ. ನಟಿಯ ಹಾಡಿಗೆ ನೆಟ್ಟಿಗರಿಂದ ಬಗೆ ಬಗೆಯ ಕಾಮೆಂಟ್ಗಳು ಹರಿದು ಬರುತ್ತಿದೆ
ದೇಶ
25 ವರ್ಷದ ಸ್ನೇಹಕ್ಕೆ ಮದುವೆಯ ಮುದ್ರೆ? ಗೌರಿ ಜೊತೆ ಅಮೀರ್ ಹೊಸ ಜೀವನ ಆರಂಭ!
ಮುಂಬೈ: ಬಾಲಿವುಡ್ನ ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಎಂದೇ ಖ್ಯಾತರಾಗಿರುವ Aamir Khan ಅವರ ವೈಯಕ್ತಿಕ ಜೀವನ ಮತ್ತೆ ಸುದ್ದಿಯಲ್ಲಿದೆ. ಹಲವು ಮಾಧ್ಯಮ ವರದಿಗಳ ಪ್ರಕಾರ, ಅಮೀರ್ ಖಾನ್ ತಮ್ಮ ಗೆಳತಿ Gauri Spratt ಅವರನ್ನು ಇದೇ ವರ್ಷದ ಜುಲೈನಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವರದಿಗಳು ನಿಜವಾದರೆ, ಇದು ಅಮೀರ್ ಖಾನ್ ಅವರ ಮೂರನೇ ವಿವಾಹವಾಗಲಿದೆ.
ವರದಿಗಳ ಪ್ರಕಾರ, ಜುಲೈ 5ರಂದು ಅಮೀರ್ ಮತ್ತು ಗೌರಿ ಆತ್ಮೀಯ ವಾತಾವರಣದಲ್ಲಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಅದ್ಧೂರಿ ಬಾಲಿವುಡ್ ಮದುವೆಯ ಬದಲು, ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ನಡೆಸಲು ಜೋಡಿ ನಿರ್ಧರಿಸಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಅಮೀರ್ ಮತ್ತು ಗೌರಿ ಕಳೆದ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕುಟುಂಬದಂತೆ ಒಟ್ಟಿಗೆ ಜೀವನ ನಡೆಸುತ್ತಿದ್ದು, ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಲು ಸಜ್ಜಾಗಿದ್ದಾರೆ. ಎರಡೂ ಕುಟುಂಬಗಳ ಆಶೀರ್ವಾದದೊಂದಿಗೆ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಗಮನಾರ್ಹವಾಗಿ, 2025ರಲ್ಲಿ ತಮ್ಮ 60ನೇ ಜನ್ಮದಿನದ ಸಂದರ್ಭದಲ್ಲಿ ಅಮೀರ್ ಖಾನ್ ಮೊದಲ ಬಾರಿಗೆ ಗೌರಿ ಸ್ಪ್ರಾಟ್ ಅವರನ್ನು ಸಾರ್ವಜನಿಕವಾಗಿ ಪರಿಚಯಿಸಿದ್ದರು. ಸುಮಾರು 25 ವರ್ಷಗಳಿಂದ ಪರಸ್ಪರ ಪರಿಚಯವಿದ್ದರೂ, ಪ್ರೇಮ ಸಂಬಂಧ ಇತ್ತೀಚೆಗೆ ಆರಂಭವಾಗಿದೆ ಎಂದು ಅವರು ತಿಳಿಸಿದ್ದರು. ನಂತರದ ಹಲವು ಸಂದರ್ಶನಗಳಲ್ಲಿ ಗೌರಿ ತಮ್ಮ ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿ ತಂದ ವ್ಯಕ್ತಿ ಎಂದು ಅಮೀರ್ ಹೇಳಿಕೊಂಡಿದ್ದರು.
ಅಮೀರ್ ಖಾನ್ ಈ ಹಿಂದೆ Reena Dutta ಅವರನ್ನು ವಿವಾಹವಾಗಿದ್ದು, 2002ರಲ್ಲಿ ಇಬ್ಬರೂ ಬೇರ್ಪಟ್ಟಿದ್ದರು. ಬಳಿಕ 2005ರಲ್ಲಿ Kiran Rao ಅವರನ್ನು ವಿವಾಹವಾಗಿದ್ದು, 2021ರಲ್ಲಿ ವಿಚ್ಛೇದನ ಘೋಷಿಸಿದ್ದರು. ಆದರೂ ತಮ್ಮ ಮಾಜಿ ಪತ್ನಿಯರೊಂದಿಗೆ ಉತ್ತಮ ಬಾಂಧವ್ಯ ಉಳಿಸಿಕೊಂಡಿದ್ದಾರೆ.
ಆದರೆ, ಜುಲೈ 5ರ ವಿವಾಹದ ಕುರಿತು ಅಮೀರ್ ಖಾನ್ ಅಥವಾ ಗೌರಿ ಸ್ಪ್ರಾಟ್ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಹೀಗಾಗಿ ಅಭಿಮಾನಿಗಳು ಅಧಿಕೃತ ದೃಢೀಕರಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
ದೇಶ
“ನೀವು ನಮ್ಮೆಲ್ಲರ ಸ್ಫೂರ್ತಿ”: ತಾತನ ಬಗ್ಗೆ ಜೂನಿಯರ್ ಎನ್ಟಿಆರ್ ಭಾವನಾತ್ಮಕ ಪೋಸ್ಟ್
ಆಂಧ್ರಪ್ರದೇಶ: ತೆಲುಗು ಸಿನಿಮಾರಂಗದ ಮೇರು ನಟ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ನಂದಮೂರಿ ತಾರಕ ರಾಮರಾವ್ (ಎನ್ಟಿಆರ್) ಅವರ 103ನೇ ಜಯಂತಿ ಅಂಗವಾಗಿ ಹೈದರಾಬಾದ್ನ ಎನ್ಟಿಆರ್ ಘಾಟ್ನಲ್ಲಿ ಭಾವುಕ ಕ್ಷಣಗಳು ಕಂಡುಬಂದವು. ಮೊಮ್ಮಗ ಹಾಗೂ ಖ್ಯಾತ ನಟ ಜೂನಿಯರ್ ಎನ್ಟಿಆರ್ ತಮ್ಮ ಅಜ್ಜನ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು.
ಭದ್ರತಾ ಸಿಬ್ಬಂದಿಯೊಂದಿಗೆ ಎನ್ಟಿಆರ್ ಘಾಟ್ಗೆ ಆಗಮಿಸಿದ ಜೂನಿಯರ್ ಎನ್ಟಿಆರ್, ಅಜ್ಜನ ಸಮಾಧಿ ಎದುರು ಕೆಲಕಾಲ ಮೌನವಾಗಿ ನಿಂತು ಭಾವುಕರಾದರು. ಬಳಿಕ ಹೂವಿನ ನಮನ ಸಲ್ಲಿಸಿ ಗೌರವ ವ್ಯಕ್ತಪಡಿಸಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದೇ ವೇಳೆ ತಮ್ಮ ಎಕ್ಸ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಜೂನಿಯರ್ ಎನ್ಟಿಆರ್, “ತೆಲುಗು ಚಿತ್ರರಂಗ ಮತ್ತು ಆಂಧ್ರಪ್ರದೇಶದ ಮೇಲೆ ಎನ್ಟಿಆರ್ ಅವರ ಪ್ರಭಾವ ಹಾಗೂ ಪ್ರೇರಣೆ ಅನನ್ಯವಾಗಿದೆ. ಚಿತ್ರರಂಗದಲ್ಲಿ ಅವರನ್ನು ದಂತಕಥೆಯಂತೆ ಕಾಣಲಾಗುತ್ತದೆ. ಇದಕ್ಕಾಗಿ ನಾನು ಸದಾ ಕೃತಜ್ಞ” ಎಂದು ಬರೆದುಕೊಂಡಿದ್ದಾರೆ.
ಸಿನಿಮಾ ಮಾತ್ರವಲ್ಲದೆ, ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಜನಪರ ಯೋಜನೆಗಳು ಹಾಗೂ ಬಡವರ ಕಲ್ಯಾಣಕ್ಕಾಗಿ ಮಾಡಿದ ಸೇವೆಗಳನ್ನು ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿದ ಎನ್ಟಿಆರ್ ಆದರ್ಶಗಳು ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ಜೂನಿಯರ್ ಎನ್ಟಿಆರ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಕೂಡ ಎನ್ಟಿಆರ್ ಅವರನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. “ಸಿನಿಮಾ ಮತ್ತು ರಾಜಕೀಯದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಎನ್ಟಿಆರ್ ಅವರ ಜೀವನ ಮತ್ತು ಆದರ್ಶಗಳು ಸ್ಫೂರ್ತಿಯ ಮೂಲ” ಎಂದು ಮೋದಿ ಬರೆದುಕೊಂಡಿದ್ದಾರೆ.
ಚಂದ್ರಬಾಬು ನಾಯ್ಡು ನೇತೃತ್ವದ ಎನ್ಡಿಎ ಸರ್ಕಾರ ಆಂಧ್ರಪ್ರದೇಶದ ಜನರ ಕನಸುಗಳನ್ನು ಸಾಕಾರಗೊಳಿಸಲು ಬದ್ಧವಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ದೇಶ
ತಮಿಳು ಚಿತ್ರರಂಗಕ್ಕೆ ಸಿಎಂ ವಿಜಯ್ ಬಂಪರ್ ಗಿಫ್ಟ್: ದಿನಕ್ಕೆ 5 ಶೋಗಳಿಗೆ ಗ್ರೀನ್ ಸಿಗ್ನಲ್!
ಚೆನ್ನೈ: Vijay ನೇತೃತ್ವದ ತಮಿಳುನಾಡು ಸರ್ಕಾರ ಚಿತ್ರೋದ್ಯಮಕ್ಕೆ ಮಹತ್ವದ ಸಿಹಿಸುದ್ದಿ ನೀಡಿದೆ. ಹೊಸ ಸಿನಿಮಾ ಬಿಡುಗಡೆಯಾದ ಮೊದಲ ಒಂದು ವಾರದವರೆಗೆ ದಿನಕ್ಕೆ 5 ಪ್ರದರ್ಶನಗಳನ್ನು ನಡೆಸಲು ಸರ್ಕಾರ ಅಧಿಕೃತ ಅನುಮತಿ ನೀಡಿದ್ದು, ನಿರ್ಮಾಪಕರು ಹಾಗೂ ಚಿತ್ರಮಂದಿರ ಮಾಲೀಕರಲ್ಲಿ ಸಂತಸ ಮೂಡಿಸಿದೆ.
ಚಿತ್ರರಂಗದ ಪ್ರತಿನಿಧಿಗಳು, ಚಲನಚಿತ್ರ ಮಂಡಳಿಯ ಪದಾಧಿಕಾರಿಗಳು ಹಾಗೂ ಚಿತ್ರೋದ್ಯಮದ ಪ್ರಮುಖರು ಮೇ 16ರಂದು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿ ಮಾಡಿ ಹಲವು ಬೇಡಿಕೆಗಳನ್ನೊಳಗೊಂಡ ಮನವಿ ಪತ್ರ ಸಲ್ಲಿಸಿದ್ದರು. ಚಿತ್ರಮಂದಿರಗಳ ಆರ್ಥಿಕ ಚೇತರಿಕೆ ಮತ್ತು ಪ್ರೇಕ್ಷಕರ ಅನುಕೂಲಕ್ಕಾಗಿ ದಿನಕ್ಕೆ ಐದು ಶೋಗಳಿಗೆ ಅವಕಾಶ ನೀಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿತ್ತು.
ಈ ಮನವಿಯನ್ನು ಪರಿಗಣಿಸಿದ ಸರ್ಕಾರ, ಚಿತ್ರೋದ್ಯಮದ ಹಿತದೃಷ್ಟಿಯಿಂದ ಹೊಸ ಆದೇಶ ಹೊರಡಿಸಿದೆ. ಈ ಕುರಿತು Tamil Nadu Chief Minister’s Office ತನ್ನ ಅಧಿಕೃತ ‘ಎಕ್ಸ್’ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದೆ.
ಈ ಮೊದಲು ಜಾರಿಯಲ್ಲಿದ್ದ ಚಿತ್ರಮಂದಿರಗಳ ನಿಯಮ 14-ಎ ಪ್ರಕಾರ, ತಮಿಳುನಾಡಿನಲ್ಲಿ ದಿನಕ್ಕೆ ಕೇವಲ ನಾಲ್ಕು ಪ್ರದರ್ಶನಗಳಿಗೆ ಮಾತ್ರ ಅವಕಾಶವಿತ್ತು. ಹಬ್ಬ-ಹರಿದಿನಗಳು ಅಥವಾ ಸಾರ್ವಜನಿಕ ರಜಾದಿನಗಳಲ್ಲಿ ಮಾತ್ರ ವಿಶೇಷ ಅನುಮತಿ ಪಡೆದು ಐದನೇ ಪ್ರದರ್ಶನ ನಡೆಸಲಾಗುತ್ತಿತ್ತು.
ಆದರೆ ಹೊಸ ನಿಯಮದಂತೆ, ಯಾವುದೇ ಹೊಸ ಸಿನಿಮಾ ಬಿಡುಗಡೆಯಾದ ಬಳಿಕ ಮೊದಲ ಏಳು ದಿನಗಳವರೆಗೆ ಪ್ರತಿದಿನ ಐದು ಪ್ರದರ್ಶನಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಈ ಕ್ರಮದಿಂದ ಹೊಸ ಸಿನಿಮಾಗಳಿಗೆ ಹೆಚ್ಚಿನ ಆದಾಯ ಸಾಧ್ಯವಾಗಲಿದ್ದು, ಚಿತ್ರಮಂದಿರಗಳ ವ್ಯವಹಾರಕ್ಕೂ ಉತ್ತೇಜನ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
ತಮಿಳು ಚಿತ್ರರಂಗದ ನಿರ್ಮಾಪಕರು, ವಿತರಕರು ಮತ್ತು ಥಿಯೇಟರ್ ಮಾಲೀಕರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ಇದು ಚಿತ್ರೋದ್ಯಮಕ್ಕೆ “ಬೂಸ್ಟರ್ ಡೋಸ್” ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
