ರಾಜ್ಯ
ನೀಟ್ ಎಕ್ಸಾಂ ರಿಸಲ್ಟ್ ಔಟ್.. ಕರ್ನಾಟಕದ 6 ವಿದ್ಯಾರ್ಥಿಗಳು ಟಾಪರ್ಸ್..!
ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ -ನೀಟ್ 2024 ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದ್ದು ಕರ್ನಾಟಕದ 6 ವಿದ್ಯಾರ್ಥಿಗಳು ಅತ್ಯುನ್ನತ ಸ್ಥಾನ ಪಡೆದುಕೊಂಡಿದ್ದಾರೆ. ದೇಶದಲ್ಲಿ ಟಾಪ್ 100 ವಿದ್ಯಾರ್ಥಿಗಳ ಲಿಸ್ಟ್ನಲ್ಲಿ ರಾಜ್ಯದ 6 ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ.
ನೀಟ್ ಬರೆದ ವಿದ್ಯಾರ್ಥಿಗಳ ಪೈಕಿ ಆಲ್ ಇಂಡಿಯಾ ರ‍್ಯಾಂಕ್- 1ಅನ್ನು 720 ಅಂಕಗಳಿಗೆ 720 ಅಂಕ ಪಡೆಯುವ ಮೂಲಕ ಅರ್ಜುನ್ ಕಿಶೋರ್ ಎನ್ನುವ ವಿದ್ಯಾರ್ಥಿ ಸಾಧನೆ ಮಾಡಿದ್ದಾರೆ. ಇಡೀ ದೇಶಕ್ಕೆ ಅರ್ಜುನ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳಾದ ವಿ.ಕಲ್ಯಾಣ್, ಶ್ಯಾಮ್ ಶ್ರೇಯಸ್ ಜೋಸೆಫ್, ಅರ್ಜುನ್ ಕಿಶೋರ್, ಪದ್ಮನಾಭ್ ಮೆನನ್, ಪ್ರಜ್ಞಾ ಪಿ.ಶೆಟ್ಟಿ, ಖುಷಿ ಮಗನೂರ್ ಎಂಬ ವಿದ್ಯಾರ್ಥಿಗಳು ಟಾಪ್ 100ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಶೇ.99.98 ಅಂಕಗಳನ್ನು ಗಳಿಸುವ ಮೂಲಕ ಟಾಪರ್ ಎನಿಸಿಕೊಂಡಿದ್ದಾರೆ. ಇನ್ನು ನೀಟ್ ರಿಸಲ್ಟ್ ಅನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಬಿಡುಗಡೆ ಮಾಡಿದ್ದು ಪರೀಕ್ಷೆ ಬರೆದ 24 ಲಕ್ಷ ಅಭ್ಯರ್ಥಿಗಳು ಎನ್‌ಟಿಎ ನೀಟ್ ಪೋರ್ಟಲ್‌ನಲ್ಲಿ ಲಾಗಿನ್ ಆಗುವ ಮೂಲಕ ಚೆಕ್ ತಮ್ಮ ರಿಸಲ್ಟ್ ಪರಿಶೀಲನೆ ಮಾಡಬಹುದಾಗಿದೆ. ದೇಶದಾದ್ಯಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನೀಟ್ ಪರೀಕ್ಷೆಯನ್ನು ಮೇ 05 ರಂದು 13 ಭಾಷೆಗಳಲ್ಲಿ ನಡೆಸಲಾಗಿತ್ತು. ದೇಶದ 571 ನಗರಗಳು ಹಾಗೂ ಹೊರಗಿನ 14 ನಗರಗಳು ಸೇರಿದಂತೆ ಒಟ್ಟು 4,750 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆ ಬರೆಯಲು ಒಟ್ಟು 24,06,079 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು
ದೇಶ
UG CET 2026 ಫಲಿತಾಂಶ ಪ್ರಕಟ; ಇಂಜಿನಿಯರಿಂಗ್ ವಿಭಾಗದಲ್ಲಿ ತನಿಷಾ ಕಾರ್ತಿಕ್‌ಗೆ ಮೊದಲ ರ‍್ಯಾಂಕ್
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ್ದ UG CET 2026 ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದೆ. ಏಪ್ರಿಲ್ 22, 23 ಮತ್ತು 24ರಂದು ನಡೆದಿದ್ದ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ RV PU College ವಿದ್ಯಾರ್ಥಿನಿ Tanisha Karthik ಮೊದಲ ರ‍್ಯಾಂಕ್ ಪಡೆದು ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಬೆಳ್ತಂಗಡಿಯ Sir M.V. PU College ವಿದ್ಯಾರ್ಥಿ Shrajan ದ್ವಿತೀಯ ರ‍್ಯಾಂಕ್ ಪಡೆದಿದ್ದು, ಬೆಂಗಳೂರಿನ ಜಯನಗರದ ಆರ್‌ವಿ ಪಿಯು ಕಾಲೇಜಿನ Ninad Vasishta ತೃತೀಯ ರ‍್ಯಾಂಕ್ ಪಡೆದಿದ್ದಾರೆ.
ಇಂಜಿನಿಯರಿಂಗ್ ವಿಭಾಗದ ಟಾಪ್ 3 ರ‍್ಯಾಂಕ್‌ಗಳು
| ರ‍್ಯಾಂಕ್ | ವಿದ್ಯಾರ್ಥಿ |
|---|---|
| 1 | ತನಿಷಾ ಕಾರ್ತಿಕ್ |
| 2 | ಶ್ರಾಜನ್ |
| 3 | ನಿನಾದ್ ವಸಿಷ್ಠ |
ವೆಟನರಿ ವಿಭಾಗದ ಟಾಪ್ 3
ವೆಟನರಿ ವಿಭಾಗದಲ್ಲೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಈ ವಿಭಾಗದ ಮೊದಲ ಮೂರು ರ‍್ಯಾಂಕ್‌ಗಳು ಈ ಕೆಳಗಿನಂತಿವೆ:
| ರ‍್ಯಾಂಕ್ | ವಿದ್ಯಾರ್ಥಿ |
|---|---|
| 1 | ನಯನಾ ಗೋಪಿ |
| 2 | ಅಮೂಲ್ಯ |
| 3 | ರಿತ್ವಿಕ್ ಕುಮಾರ್ |
UG CET ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಾಜ್ಯದಾದ್ಯಂತ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಸಂಭ್ರಮ ಮನೆ ಮಾಡಿದೆ. ಇಂಜಿನಿಯರಿಂಗ್, ಕೃಷಿ, ವೆಟನರಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಈ ಫಲಿತಾಂಶ ಪ್ರಮುಖವಾಗಿದ್ದು, ಮುಂದಿನ ಹಂತದಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶೀಘ್ರದಲ್ಲೇ ಕೌನ್ಸೆಲಿಂಗ್ ವೇಳಾಪಟ್ಟಿ ಹಾಗೂ ಸೀಟ್ ಹಂಚಿಕೆ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು ತಮ್ಮ ರ‍್ಯಾಂಕ್ ಮತ್ತು ಅಂಕಗಳನ್ನು ಪರಿಶೀಲಿಸಿ ಮುಂದಿನ ಪ್ರವೇಶ ಪ್ರಕ್ರಿಯೆಗೆ ಸಿದ್ಧರಾಗಬಹುದು.
ದೇಶ
ಎಸ್‌ಐಆರ್‌ಗೆ ಮುನ್ನ ಆತಂಕ: 2.06 ಲಕ್ಷ ಮತದಾರರ ವಿವರಗಳು ಇನ್ನೂ ದಾಖಲಾಗಿಲ್ಲ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಲು ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ, ಎರಡು ಲಕ್ಷಕ್ಕೂ ಅಧಿಕ ಮತದಾರರ ಮಾಹಿತಿ ಇನ್ನೂ ಮ್ಯಾಪಿಂಗ್ ಆಗದಿರುವುದು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಜಿಲ್ಲೆಯ ಒಟ್ಟು 18,05,189 ಮತದಾರರ ಪೈಕಿ 15,98,723 ಮತದಾರರ ಮಾಹಿತಿ ಮಾತ್ರ ಮ್ಯಾಪಿಂಗ್ ಆಗಿದ್ದು, ಇನ್ನೂ 2,06,466 ಮತದಾರರ ಮಾಹಿತಿ ಡಿಜಿಟಲ್ ವ್ಯವಸ್ಥೆಗೆ ಜೋಡಣೆಯಾಗಿಲ್ಲ. ಜಿಲ್ಲಾಡಳಿತದ ಪ್ರಕಾರ, ಮ್ಯಾಪಿಂಗ್ ಕಾರ್ಯದಲ್ಲಿ ಶೇ.88.56ರಷ್ಟು ಪ್ರಗತಿ ಸಾಧನೆಯಾಗಿದೆ.
ಮಂಗಳೂರು ದಕ್ಷಿಣ ಮತ್ತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಮ್ಯಾಪಿಂಗ್ ಆಗದ ಮತದಾರರ ಸಂಖ್ಯೆ ಹೆಚ್ಚಿರುವುದು ಗಮನ ಸೆಳೆದಿದೆ. ಮಂಗಳೂರು ದಕ್ಷಿಣದಲ್ಲಿ 63,853 ಹಾಗೂ ಮಂಗಳೂರು ಉತ್ತರದಲ್ಲಿ 50,558 ಮತದಾರರ ಮಾಹಿತಿ ಇನ್ನೂ ದಾಖಲಾಗಿಲ್ಲ. ಉಳಿದಂತೆ ಮೂಡುಬಿದಿರೆ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಮತ್ತು ಸುಳ್ಯ ಕ್ಷೇತ್ರಗಳಲ್ಲಿಯೂ ಸಾವಿರಾರು ಮತದಾರರ ಮಾಹಿತಿ ಬಾಕಿಯಿದೆ.
ಜಿಲ್ಲಾಡಳಿತದ ಸ್ಪಷ್ಟನೆ
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ H. V. Darshan ಅವರು ಈ ಬಗ್ಗೆ ಸ್ಪಷ್ಟನೆ ನೀಡಿ, ಮ್ಯಾಪಿಂಗ್ ಆಗದಿರುವುದರಿಂದ ಮತದಾರರ ಹೆಸರು ಪಟ್ಟಿಯಿಂದ ಅಳಿಸಲಾಗಿದೆ ಎಂಬ ಅರ್ಥವಲ್ಲ ಎಂದು ಹೇಳಿದ್ದಾರೆ.
ಜೂನ್ 30ರಿಂದ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಲಿದ್ದು, ಬಿಎಲ್‌ಒಗಳು ಮನೆ-ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರ್ಮ್ ವಿತರಿಸಲಿದ್ದಾರೆ. ಜುಲೈ 29ರವರೆಗೆ ಮತದಾರರು ತಮ್ಮ ದಾಖಲೆಗಳನ್ನು ಸಲ್ಲಿಸಲು ಅವಕಾಶವಿದ್ದು, ನಂತರ ಪರಿಶೀಲನೆ, ಆಕ್ಷೇಪಣೆ ಹಾಗೂ ತಿದ್ದುಪಡಿ ಪ್ರಕ್ರಿಯೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 7ರಂದು ಪ್ರಕಟವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮತದಾರರ ಅನುಕೂಲಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವೋಟರ್ ಫೆಸಿಲಿಟೇಷನ್ ಸೆಂಟರ್‌ಗಳನ್ನು ತೆರೆಯಲಾಗುತ್ತಿದ್ದು, ಜಿಲ್ಲೆಯಲ್ಲಿ 206 ಬಿಎಲ್‌ಒಗಳು ಮತ್ತು 1,876 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.
ಕಾಂಗ್ರೆಸ್ ಅನುಮಾನ, ಬಿಜೆಪಿ ಎಚ್ಚರಿಕೆ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ Harish Kumar ಅವರು ಈ ಪ್ರಕ್ರಿಯೆ ಕುರಿತು ಅನುಮಾನ ವ್ಯಕ್ತಪಡಿಸಿದ್ದು, ಎನ್ಯುಮರೇಷನ್ ಫಾರ್ಮ್ ಸಲ್ಲಿಸದ ಮತದಾರರ ಹೆಸರು ಅಂತಿಮ ಪಟ್ಟಿಯಲ್ಲಿ ಕಾಣಿಸದಿರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಬಿಜೆಪಿ ಜಿಲ್ಲಾ ಅಧ್ಯಕ್ಷ Satish Kumpala ಅವರು, ಜಿಲ್ಲಾಡಳಿತ ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಇನ್ನೂ ಉತ್ತರ ಸಿಗದ ಪ್ರಶ್ನೆ
ಪ್ರಸ್ತುತ ಚರ್ಚೆಯ ಕೇಂದ್ರಬಿಂದುವಾಗಿರುವ ಪ್ರಶ್ನೆ ಎಂದರೆ, ಮ್ಯಾಪಿಂಗ್ ಆಗದ 2,06,466 ಮತದಾರರು ಯಾರು? ಅವರು ವಿದೇಶ ಅಥವಾ ಹೊರರಾಜ್ಯಗಳಲ್ಲಿ ವಾಸಿಸುತ್ತಿರುವವರೇ, ಡುಪ್ಲಿಕೇಟ್ ನೋಂದಣಿದಾರರೇ ಅಥವಾ ಮಾಹಿತಿ ಸಂಗ್ರಹಣೆಯ ವೇಳೆ ಕೈತಪ್ಪಿದವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಪ್ರಶ್ನೆಗಳಿಗೆ ಉತ್ತರ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಸಿಗುವ ಸಾಧ್ಯತೆ ಇದೆ.
ದೇಶ
ಶೈಕ್ಷಣಿಕ ಜಾಗ ದುರ್ಬಳಕೆ ಆರೋಪ: ಕೆಂಗೇರಿ ಟ್ರಸ್ಟ್ ವಿರುದ್ಧ PIL ವಿಚಾರಣೆ
ಬೆಂಗಳೂರು: ಮೈಸೂರು ರಸ್ತೆಯ ಕೆಂಗೇರಿ ಎಜುಕೇಷನ್ ಟ್ರಸ್ಟ್‌ಗೆ ಸೇರಿದ ಜಾಗದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಸಂಬಂಧಪಟ್ಟ ಅಧಿಕಾರಿಗಳಿಗೆ ಮಹತ್ವದ ನಿರ್ದೇಶನ ನೀಡಿದೆ.
ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಖಾಸಗಿ ಕಂಪನಿಯು ಸಂಬಂಧಪಟ್ಟ ಅಧಿಕಾರಿಗಳ ಪೂರ್ವಾನುಮತಿ ಪಡೆದು ಉಗ್ರಾಣ ಮತ್ತು ಪಾರ್ಕಿಂಗ್ ಕಟ್ಟಡಗಳ ನಿರ್ಮಾಣ ನಡೆಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಸ್ಥಳೀಯ ನಿವಾಸಿಗಳಾದ ಎಂ. ಶ್ರೀಕಾಂತ್ ಸೇರಿದಂತೆ ಮೂವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುನೀಲ್ ದತ್ ಯಾದವ್ ಹಾಗೂ ಎಸ್. ರಾಚಯ್ಯ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಜೊತೆಗೆ ಸರ್ಕಾರ, ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆ, ಜಿಬಿಎ ಟ್ರಸ್ಟ್ ಅಧ್ಯಕ್ಷರು ಮತ್ತು ಟ್ರಸ್ಟಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಅರ್ಜಿದಾರರ ಪ್ರಕಾರ, 1957ರಲ್ಲಿ ಸ್ಥಾಪನೆಯಾದ ಕೆಂಗೇರಿ ಎಜುಕೇಷನ್ ಟ್ರಸ್ಟ್‌ಗೆ ಸ್ಥಳೀಯ ನಿವಾಸಿಗಳು ಸುಮಾರು 12 ಎಕರೆ ಭೂಮಿಯನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ದಾನವಾಗಿ ನೀಡಿದ್ದರು. ಈ ಜಾಗದಲ್ಲಿ ಸ್ಥಾಪನೆಯಾದ ಕನ್ನಡ ಮಾಧ್ಯಮ ಶಾಲೆಗೆ ಸರ್ಕಾರ ಅನುದಾನಿತ ಶಿಕ್ಷಣ ಸಂಸ್ಥೆಯ ಮಾನ್ಯತೆಯನ್ನೂ ನೀಡಿತ್ತು.
ಆದರೆ, ಪ್ರಸ್ತುತ ಟ್ರಸ್ಟ್‌ನ ಆಡಳಿತವು ಶಾಲೆಯ ಜಾಗವನ್ನು ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಟ್ರಸ್ಟ್ ಭೂಮಿಯಲ್ಲಿ ವ್ಯಾಪಾರಿಗಳಿಗಾಗಿ ಉಗ್ರಾಣ ನಿರ್ಮಾಣ ಹಾಗೂ ಆಟದ ಮೈದಾನದಲ್ಲಿ ಸಾರಿಗೆ ಸಂಸ್ಥೆಗಳ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ದೂರಲಾಗಿದೆ.
ಇದಲ್ಲದೆ, ಟ್ರಸ್ಟ್‌ನ ಹಣಕಾಸು ದುರ್ಬಳಕೆ ನಡೆಯುತ್ತಿದೆ ಎಂಬ ಆರೋಪವನ್ನೂ ಅರ್ಜಿದಾರರು ಮುಂದಿಟ್ಟಿದ್ದಾರೆ. ಶಿಕ್ಷಣಕ್ಕಾಗಿ ದಾನವಾಗಿ ದೊರೆತ ಭೂಮಿಯಲ್ಲಿ ವಾಣಿಜ್ಯ ಚಟುವಟಿಕೆ ನಡೆಯದಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅವರು ನ್ಯಾಯಾಲಯವನ್ನು ಕೋರಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆ ವೇಳೆ ಸಂಬಂಧಪಟ್ಟ ಇಲಾಖೆಗಳಿಂದ ಸಲ್ಲಿಕೆಯಾಗುವ ವರದಿಯ ಆಧಾರದ ಮೇಲೆ ಹೈಕೋರ್ಟ್ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
