Connect with us

ಚುನಾವಣೆ

ಲೋಕಸಭೆ ಚುನಾವಣಾ ಫಲಿತಾಂಶದಿಂದ ಕುಗ್ಗಿದ ನೈತಿಕ ಸ್ಥೈರ್ಯ: ZP-TP, ಪಾಲಿಕೆ ಚುನಾವಣೆ ನಡೆಸಲು ಕಾಂಗ್ರೆಸ್ ಹಿಂದೇಟು!

Published

on

ಮೈಸೂರು: ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಒಕ್ಕಲಿಗ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿವೆ.

ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮೈಸೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗೆ ನಡೆಯುವ ಬಹು ನಿರೀಕ್ಷಿತ ಚುನಾವಣೆಯ ಬಗ್ಗೆ ಕಾಂಗ್ರೆಸ್ ಮರು ಚಿಂತನೆ ನಡೆಸಿದೆ. ಬಿಬಿಎಂಪಿ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸುವಂತೆ ಪಕ್ಷದೊಳಗೆ ಒತ್ತಡವಿದ್ದರೂ ಲೋಕಸಭೆ ಚುನಾವಣೆ ತೀರ್ಪು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದೆ. ಬಿಜೆಪಿ-ಜೆಡಿಎಸ್ 146 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದ್ದರಿಂದ ಬಿಜೆಪಿ ಮತ್ತು ಜೆಡಿಎಸ್ ಪಾಳಯಗಳು ಉತ್ಸಾಹದಲ್ಲಿದ್ದು, ತಮ್ಮ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ಪಂಚಾಯತ್ ಚುನಾವಣೆಯಲ್ಲಿ ಒಟ್ಟಿಗೆ ಹೋಗುವುದಾಗಿ ಘೋಷಿಸಿವೆ.

ಆಂತರಿಕ ಸಮೀಕ್ಷೆಯು ಅನುಕೂಲಕರ ಅಭಿಪ್ರಾಯ ನೀಡದ ಕಾರಣ ಶಾಸಕರು ಮತ್ತು ಮುಖಂಡರು ಚುನಾವಣೆಗೆ ಆತುರ ಹೊಂದಿಲ್ಲ ಎಂದು ಕಾಂಗ್ರೆಸ್ ಮೂಲಗಳು ಬಹಿರಂಗಪಡಿಸಿವೆ. ಬಿಜೆಪಿ-ಜೆಡಿಎಸ್ ದಕ್ಷಿಣ ಜಿಲ್ಲೆಗಳಲ್ಲಿ ಉತ್ತಮ ಸಾಧನೆ ಮಾಡಲಿದ್ದು, ಈಗ ಚುನಾವಣೆ ನಡೆದರೆ ಪಾಲಿಕೆ ಮತ್ತು ಪಂಚಾಯ್ತಿಗಳಲ್ಲಿ ತನ್ನ ಸೀಟು ಹಂಚಿಕೆಯೊಂದಿಗೆ ಅಧಿಕಾರ ಹಿಡಿಯಲಿದೆ.

5 ವಾರ್ಡ್‌ಗಳ ಪೈಕಿ 35ಕ್ಕೂ ಹೆಚ್ಚು ವಾರ್ಡ್‌ಗಳನ್ನು ಗೆಲ್ಲುತ್ತೇವೆ ಎಂದು ಹೇಳಿಕೊಂಡು ಲೋಕಸಭೆ ಚುನಾವಣೆಗೂ ಮುನ್ನವೇ ಪಾಲಿಕೆ ಚುನಾವಣೆ ನಡೆಸುವಂತೆ ಮೈಸೂರು ನಗರ ಕಾಂಗ್ರೆಸ್‌ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಸಲ್ಲಿಸಿದ್ದರು. ಪಾಲಿಕೆಯಲ್ಲಿ ಕಾಂಗ್ರೆಸ್ 24, ಬಿಜೆಪಿ 21 ಮತ್ತು ಜೆಡಿಎಸ್ 18 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿತ್ತು. ಇದರ ಜೊತೆಗೆ ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ನರಸಿಂಹರಾಜ ಒಡೆಯರ್ ಅವರ ಅಮೋಘ ಗೆಲುವು ಕಾಂಗ್ರೆಸ್ ನಾಯಕರನ್ನು ಬದಲಿಸುವಂತೆ ಮಾಡಿದೆ.

ಲೋಕಸಭೆ ಚುನಾವಣೆಯಲ್ಲಿ ಉತ್ತಮ ಪೈಪೋಟಿ ನೀಡಿದರೂ ಈಗ ಚುನಾವಣೆ ನಡೆದರೆ ಕಾಂಗ್ರೆಸ್ 12-13 ವಾರ್ಡ್‌ಗಳಿಗಿಂತ ಹೆಚ್ಚು ಗೆಲ್ಲುವುದು ಕಷ್ಟ ಎಂದು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. ಎನ್.ಆರ್.ಮೊಹಲ್ಲಾ, ಕೆಸರೆ, ಯರಗನಹಳ್ಳಿ, ರಾಘವೇಂದ್ರ ನಗರ ಮತ್ತಿತರ ಹಿಂದೂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಮತಗಳನ್ನು 53,000ದಿಂದ 62,000ಕ್ಕೆ ಸುಧಾರಿಸುವಲ್ಲಿ ಯಶಸ್ವಿಯಾಗಿದೆ.

ಜಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಲ್ಲದೆ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಲೀಡ್ ಸಾಧಿಸಿದ್ದಾರೆ.ಹೀಗಾಗಿ ಮೈಸೂರು, ಮಂಡ್ಯ, ಕೋಲಾರ ಮತ್ತಿತರ ಜಿಲ್ಲೆಗಳ ಕಾಂಗ್ರೆಸ್ ಶಾಸಕರು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಒಲವು ತೋರುತ್ತಿಲ್ಲ. ಇನ್ನು ಕೆಲವೇ ತಿಂಗಳಲ್ಲಿ ಬಿಜೆಪಿ-ಜೆಡಿಎಸ್ ಗೆಲುವಿನ ವೇಗ ಕಡಿಮೆಯಾಗಲಿದೆ ಎಂದ ಅವರು, ಕಾಂಗ್ರೆಸ್ ಪಕ್ಷವನ್ನು ಆತ್ಮಾವಲೋಕನ ಮಾಡಿಕೊಳ್ಳಲು ಹಾಗೂ ಸಂಘಟಿಸಲು ಬೂತ್ ಹಾಗೂ ವಾರ್ಡ್ ಮಟ್ಟದ ಸಭೆಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಸ್ಥಳೀಯ ಸಮಸ್ಯೆಗಳು ಮತ್ತು ಸ್ಥಳೀಯ ಅಭ್ಯರ್ಥಿಗಳ ಮೇಲೆ ಅವಲಂಬಿತವಾಗಿದ್ದರೂ, ಕಾಂಗ್ರೆಸ್ ಸೋಲಿಸಲು ಜೆಡಿಎಸ್ ಬಿಜೆಪಿಯೊಂದಿಗೆ ಯಾವುದೇ ಮಟ್ಟಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಾಗಿದೆ, ಹೀಗಾಗಿ ಆತುರಪಡದಿರುವುದು ಉತ್ತಮ ಎಂದು ತಿಳಿಸಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಭವಿಷ್ಯ ಕುರಿತು ಬೆಂಗಳೂರಿನ ಶಾಸಕರು, ಮುಖಂಡರು ಸಿಎಂ ಬಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚುನಾವಣೆಯಲ್ಲಿ ಗೆದ್ದು ಜಿಪಂ ಹಾಗೂ ನಗರ ಪಾಲಿಕೆಗಳಲ್ಲಿ ಅಧಿಕಾರಕ್ಕೆ ಬರಬೇಕು ಎಂಬ ಏಕೈಕ ಉದ್ದೇಶದಿಂದ ಜೆಡಿಎಸ್ ಮುಖಂಡರಾದ ಜಿಟಿ ದೇವೇಗೌಡ, ಸಾ.ರಾ.ಮಹೇಶ್ ಮತ್ತಿತರರು ಎರಡು ಪಕ್ಷಗಳ ಸಂಖ್ಯಾಬಲದ ಆಧಾರದ ಮೇಲೆ ಸೀಟು ಹಂಚಿಕೆಗೆ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆ

ನರೋತ್ತಮ್ ಮಿಶ್ರಾಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಭಾರೀ ಬಂಡಾಯ! ರಸ್ತೆ ತಡೆ, ಕಲ್ಲು ತೂರಾಟ, ಹಲವು ರಾಜೀನಾಮೆ

Published

on

ಭೋಪಾಲ್: ಮಧ್ಯಪ್ರದೇಶದ ದತಿಯಾ ವಿಧಾನಸಭಾ ಉಪಚುನಾವಣೆಗೆ ಮಾಜಿ ಗೃಹಸಚಿವ ನರೋತ್ತಮ್ ಮಿಶ್ರಾ ಅವರಿಗೆ ಬಿಜೆಪಿ ಟಿಕೆಟ್ ನೀಡದೆ, ಅವರ ಬದಲಿಗೆ ಅಶುತೋಷ್ ತಿವಾರಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ನಿರ್ಧಾರವನ್ನು ವಿರೋಧಿಸಿ ದತಿಯಾ ಬಿಜೆಪಿ ಘಟಕದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಜಿಲ್ಲಾಧ್ಯಕ್ಷ ರಘುವೀರ್ ಶರಣ್ ಸೇರಿದಂತೆ ಹಲವು ಕೌನ್ಸಿಲರ್‌ಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಟಿಕೆಟ್ ನಿರಾಕರಣೆಯ ಸುದ್ದಿ ಹೊರಬಿದ್ದ ತಕ್ಷಣ ಸಾವಿರಾರು ಬೆಂಬಲಿಗರು NH-44 ಝಾನ್ಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪರಿಣಾಮ ಸುಮಾರು 15 ಕಿಲೋಮೀಟರ್‌ಗಳಷ್ಟು ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ಪರದಾಡುವಂತಾಯಿತು. ಪ್ರತಿಭಟನೆ ವೇಳೆ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಯಿತು.

ದತಿಯಾ ಎಸ್‌ಪಿ ಮಯೂರ್ ಖಾಂಡೇಲ್ವಾಲ್ ಅವರ ಪ್ರಕಾರ, 3,000ಕ್ಕೂ ಹೆಚ್ಚು ಪ್ರತಿಭಟನಾಕಾರರು ಮಾರುಕಟ್ಟೆ ಬಂದ್ ಮಾಡಲು ಯತ್ನಿಸಿದ್ದು, ಹಲವು ಬಾರಿ ಮನವಿ ಮಾಡಿದರೂ ರಸ್ತೆ ತಡೆ ಹಿಂಪಡೆಯಲಿಲ್ಲ. ಬಳಿಕ ಪೊಲೀಸರು ಅಶ್ರುವಾಯು ಬಳಸಿದರೂ ಕಲ್ಲು ತೂರಾಟ ಮತ್ತಷ್ಟು ತೀವ್ರಗೊಂಡಿತು. ಘಟನೆಯಲ್ಲಿ ಆರುಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಹೆಚ್ಚುವರಿ ಎಸ್‌ಪಿ ಹಾಗೂ ಎಸ್‌ಪಿಗೂ ಗಾಯಗಳಾಗಿವೆ. ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಯಾರು ನರೋತ್ತಮ್ ಮಿಶ್ರಾ?

ನರೋತ್ತಮ್ ಮಿಶ್ರಾ ಮಧ್ಯಪ್ರದೇಶದ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಗೃಹಸಚಿವರಾಗಿದ್ದಾರೆ. 2008ರಿಂದ ದತಿಯಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಅವರು ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದಲ್ಲಿ ಗೃಹ, ಆರೋಗ್ಯ, ವೈದ್ಯಕೀಯ ಶಿಕ್ಷಣ, ಜಲಸಂಪನ್ಮೂಲ, ನಗರಾಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ಸಚಿವಾಲಯಗಳನ್ನು ನಿರ್ವಹಿಸಿದ್ದರು.

ಉಪಚುನಾವಣೆ ಏಕೆ ನಡೆಯುತ್ತಿದೆ?

ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರತಿ ವಿರುದ್ಧ ವಂಚನೆ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬಳಿಕ ಅವರ ಶಾಸಕ ಸ್ಥಾನ ರದ್ದುಗೊಂಡಿದೆ. ಇದರ ಪರಿಣಾಮವಾಗಿ ದತಿಯಾ ಕ್ಷೇತ್ರಕ್ಕೆ ಜುಲೈ 30ರಂದು ಉಪಚುನಾವಣೆ ನಡೆಯಲಿದ್ದು, ಆಗಸ್ಟ್ 3ರಂದು ಮತ ಎಣಿಕೆ ನಡೆಯಲಿದೆ. ಟಿಕೆಟ್ ಘೋಷಣೆಯ ಬೆನ್ನಲ್ಲೇ ಬಿಜೆಪಿ ಒಳಜಗಳ ತೀವ್ರಗೊಂಡಿರುವುದು ಚುನಾವಣೆಗೆ ಹೊಸ ತಿರುವು ನೀಡಿದೆ.

Continue Reading

ಚುನಾವಣೆ

ಐದು ನಗರ ಪಾಲಿಕೆ ಚುನಾವಣೆ ಕಾವು: ಕಾಂಗ್ರೆಸ್ ಸೇರಿದಂತೆ ಪಕ್ಷಗಳಲ್ಲಿ ಚಟುವಟಿಕೆ ಜೋರು

Published

on

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಆಗಸ್ಟ್ 31ರೊಳಗೆ ಕಡ್ಡಾಯವಾಗಿ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಚುನಾವಣಾ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದ್ದು, ಆಗಸ್ಟ್ ಮೂರನೇ ವಾರದಲ್ಲಿ ಮತದಾನ ನಡೆಯುವ ನಿರೀಕ್ಷೆ ಮೂಡಿದೆ.

ಸುಪ್ರೀಂ ಕೋರ್ಟ್ ಮೊದಲು ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಸೂಚಿಸಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ, ಸಿಬ್ಬಂದಿ ಕೊರತೆ ಹಾಗೂ ಆಡಳಿತಾತ್ಮಕ ಕಾರಣಗಳನ್ನು ಪರಿಗಣಿಸಿ ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿದೆ. ಆದರೆ ಇದೇ ಅಂತಿಮ ಅವಕಾಶವಾಗಿದ್ದು, ಮತ್ತೊಮ್ಮೆ ಯಾವುದೇ ಕಾರಣಕ್ಕೂ ಕಾಲಾವಕಾಶ ನೀಡುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟ ಎಚ್ಚರಿಕೆ ನೀಡಿದೆ.

ರಾಜ್ಯ ಸರ್ಕಾರವು ಸೆಪ್ಟೆಂಬರ್ ಅಂತ್ಯದವರೆಗೆ ಕಾಲಾವಕಾಶ ಕೋರಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಚುನಾವಣಾ ಪ್ರಕ್ರಿಯೆ ವೇಗ ಪಡೆಯಲು ಕಾರಣವಾಗಿದೆ. ಈ ಬೆಳವಣಿಗೆಯ ನಂತರ ರಾಜ್ಯ ಚುನಾವಣಾ ಆಯೋಗ ಸದ್ದಿಲ್ಲದೇ ಅಗತ್ಯ ಸಿದ್ಧತೆಗಳನ್ನು ಆರಂಭಿಸಿದೆ.

ಮತದಾರರ ಪಟ್ಟಿ ಅಂತಿಮಗೊಳಿಸುವುದು, ಮತಗಟ್ಟೆಗಳ ಗುರುತಿಸುವಿಕೆ, ಚುನಾವಣಾ ಸಿಬ್ಬಂದಿ ನಿಯೋಜನೆ ಹಾಗೂ ಇತರೆ ಆಡಳಿತಾತ್ಮಕ ಕಾರ್ಯಗಳು ಈಗಾಗಲೇ ನಡೆಯುತ್ತಿವೆ. ಎಲ್ಲ ಸಿದ್ಧತೆಗಳು ಪೂರ್ಣಗೊಂಡ ಬಳಿಕ ಜುಲೈ 10ರೊಳಗೆ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ವೇಳಾಪಟ್ಟಿ ಘೋಷಣೆಯಾದ ತಕ್ಷಣ ಜಿಬಿಎ ವ್ಯಾಪ್ತಿಯಲ್ಲಿ ಮಾದರಿ ನೀತಿಸಂಹಿತೆ ಜಾರಿಗೆ ಬರಲಿದೆ.

ಇತ್ತ ರಾಜಕೀಯ ಪಕ್ಷಗಳೂ ಚುನಾವಣಾ ಕಣಕ್ಕೆ ಇಳಿಯಲು ಸಜ್ಜಾಗಿವೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಐದು ನಗರ ಪಾಲಿಕೆಗಳ ವ್ಯಾಪ್ತಿಯ ಮುಖಂಡರು ಮತ್ತು ಕಾರ್ಯಕರ್ತರಿಗೆ ಸಂಘಟನಾ ಚಟುವಟಿಕೆಗಳನ್ನು ತೀವ್ರಗೊಳಿಸುವಂತೆ ಸೂಚಿಸಿದೆ. ಮನೆಮನೆಗೆ ಭೇಟಿ, ಸರ್ಕಾರದ ಸಾಧನೆಗಳ ಪ್ರಚಾರ, ಗ್ಯಾರಂಟಿ ಯೋಜನೆಗಳ ಮಾಹಿತಿ ಹಾಗೂ ವಾರ್ಡ್‌ವಾರು ಮತದಾರರ ಸಂಪರ್ಕ ಅಭಿಯಾನಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಜಿಬಿಎ ಚುನಾವಣೆಗಳು ಬೆಂಗಳೂರು ನಗರ ಆಡಳಿತದ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಚುನಾವಣೆಗಳಾಗಿದ್ದು, ರಾಜಕೀಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.

Continue Reading

ಚುನಾವಣೆ

GBA ELECTION : ಜುಲೈ ಮೊದಲ ವಾರದಲ್ಲೇ ವೇಳಾಪಟ್ಟಿ? ಬೆಂಗಳೂರು ರಾಜಕೀಯ ಕಣ ರಂಗೇರಲು ಸಜ್ಜು

Published

on

ಬೆಂಗಳೂರು: ಸುಪ್ರೀಂ ಕೋರ್ಟ್ ನೀಡಿರುವ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರಪಾಲಿಕೆಗಳ ಚುನಾವಣೆ ಆಗಸ್ಟ್ 31ರೊಳಗೆ ನಡೆಸುವುದು ಬಹುತೇಕ ಖಚಿತವಾಗಿದೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಚುನಾವಣಾ ಆಯೋಗವು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಆರಂಭಿಸಿದೆ.

ಮೂಲಗಳ ಪ್ರಕಾರ, ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಅಧಿಕೃತ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಜುಲೈ 10ರೊಳಗೆ ದಿನಾಂಕ ಘೋಷಣೆಯಾಗಬಹುದು ಎಂದು ಹೇಳಲಾಗುತ್ತಿದ್ದು, ವೇಳಾಪಟ್ಟಿ ಪ್ರಕಟವಾದ ತಕ್ಷಣವೇ ಬೆಂಗಳೂರು ನಗರದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಆಗಸ್ಟ್ ಮೂರನೇ ವಾರದಲ್ಲಿ ಮತದಾನ ನಡೆಸುವ ಬಗ್ಗೆ ಆಯೋಗ ಚಿಂತನೆ ನಡೆಸಿದೆ.

ಈ ಹಿಂದೆ ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಗಡುವು ನೀಡಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಹಾಗೂ ಸಿಬ್ಬಂದಿ ಕೊರತೆಯನ್ನು ಪರಿಗಣಿಸಿ ನ್ಯಾಯಾಲಯವು ಗಡುವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿತ್ತು. ಜೊತೆಗೆ, ಯಾವುದೇ ಕಾರಣಕ್ಕೂ ಮತ್ತೆ ಚುನಾವಣೆ ಮುಂದೂಡುವ ಪ್ರಸ್ತಾಪವನ್ನು ತನ್ನ ಮುಂದೆ ತರಬಾರದು ಎಂದು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ ಅಂತ್ಯದವರೆಗೆ ಕಾಲಾವಕಾಶ ನೀಡುವಂತೆ ಸರ್ಕಾರ ಸಲ್ಲಿಸಿದ್ದ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.

ಇದರ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿ ಅಂತಿಮಗೊಳಿಸುವುದು, ಮತಗಟ್ಟೆಗಳ ಸಿದ್ಧತೆ ಹಾಗೂ ಸಿಬ್ಬಂದಿ ನಿಯೋಜನೆ ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿದೆ. ರಾಜಕೀಯ ಪಕ್ಷಗಳೂ ಚುನಾವಣೆಗೆ ಸಜ್ಜಾಗಿವೆ. ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಕಾರ್ಯಕರ್ತರಿಗೆ ಸೂಚನೆ ನೀಡಿದೆ. ಬಿಜೆಪಿ, ಕಳೆದ ಆರು ವರ್ಷಗಳಿಂದ ಚುನಾವಣೆ ನಡೆಯದ ಪರಿಣಾಮ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಆರೋಪಿಸುತ್ತಿದೆ. ಇತ್ತ ಬಿಜೆಪಿ-ಜೆಡಿಎಸ್ ಮೈತ್ರಿಯೂ ಚುನಾವಣಾ ಅಖಾಡಕ್ಕೆ ಸಜ್ಜಾಗಿದ್ದು, ಪಂಚ ಪಾಲಿಕೆ ಚುನಾವಣೆ ಭಾರೀ ಪೈಪೋಟಿಗೆ ಸಾಕ್ಷಿಯಾಗುವ ನಿರೀಕ್ಷೆ ಮೂಡಿದೆ.

Continue Reading

Trending