Connect with us

ದೇಶ

130 Kmph ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿದರೆ ಎಫ್‌ಐಆರ್‌

ಬೆಂಗಳೂರು: ರಾಜ್ಯಾದ್ಯಂತ (Karnataka) ಗಂಟೆಗೆ 130 ಕಿ.ಮೀ ವೇಗಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಸಂಚಾರ ಹಾಗೂ ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಹೇಳಿದ್ದಾರೆ.

ಇಲ್ಲಿಯವರೆಗೆ ನಿಗದಿ ಪಡಿಸಿದ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ ಕೇವಲ ದಂಡ ವಿಧಿಸಲಾಗುತ್ತಿತ್ತು. ಆದರೆ ಆಗಸ್ಟ್‌ 1 ರಿಂದ ದಂಡದ ಜೊತೆ ಪ್ರಕರಣ ಸಹ ದಾಖಲಿಸಲಾಗುವುದು ಎಂದು ಅಲೋಕ್‌ ಕುಮಾರ್‌ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bengaluru-Mysuru Expressway) ಭಾರೀ ಸಂಖ್ಯೆಯಲ್ಲಿ ಅಪಘಾತವಾಗುತ್ತಿರುವ ಹಿನ್ನೆಲೆಯಲ್ಲಿ ಈಗ ವೇಗದ ಮಿತಿಯನ್ನು ವಿಧಿಸಲಾಗಿದೆ. ಗರಿಷ್ಠ ಗಂಟೆಗೆ 100 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸಲು ಅನುಮತಿ ನೀಡಲಾಗಿದೆ. ಗಂಟೆಗೆ 105 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸಿದರೆ ರಸ್ತೆಯಲ್ಲಿ ಅಳವಡಿಸಿದ ಎಐ ಕ್ಯಾಮೆರಾ ಕ್ಲಿಕ್ಕಿಸಿದ ಫೋಟೋ ಆಧಾರದ ಮೇಲೆ ಮಾಲೀಕರಿಗೆ ದಂಡದ ನೋಟಿಸ್‌ ಕಳುಹಿಸಲಾಗುತ್ತದೆ.

ಅಲೋಕ್‌ ಕುಮಾರ್‌ ಹೇಳಿದ್ದೇನು?
ಅತಿ ವೇಗವು 90% ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗುತ್ತದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶುಕ್ರವಾರ 155 ಮಂದಿ ಗಂಟೆಗೆ 130 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಸಂಚರಿಸಿದ್ದಾರೆ. ಇನ್ನು ಮುಂದೆ ಆಗಸ್ಟ್‌ 1 ರಿಂದ ಕರ್ನಾಟಕದಲ್ಲಿ 130 ಕಿಮೀಗಿಂತ ಹೆಚ್ಚಿನ ವೇಗದಲ್ಲಿ ಚಾಲನೆ ಮಾಡಿದರೆ ಎಫ್‌ಐಆರ್‌ ದಾಖಲಿಸಲಾಗುತ್ತದೆ.

ಏನಿದು ತಂತ್ರಜ್ಞಾನ?
ಎಕ್ಸ್‌ಪ್ರೆಸ್‌ವೇಯಲ್ಲಿ ವೇಗ ನಿಯಂತ್ರಣಕ್ಕೆ ಪೊಲೀಸರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ಮೊರೆ ಹೊಗಿದ್ದು ಎಐ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ. ರಾಜ್ಯ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಆದೇಶದ ಮೇರೆಗೆ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ (Automatic Number Plate Recognition – ANPR) ಕ್ಯಾಮೆರಾವನ್ನು ಅಳವಡಿಕೆ ಮಾಡಲಾಗಿದೆ. ವಾಹನದ ನಂಬರ್‌ನಿಂದ ಆರ್‌ಟಿಒ ಸಂಪರ್ಕ ಪಡೆದು ಮೊಬೈಲಿಗೆ ದಂಡ ಪಾವತಿಸುವಂತೆ ನೋಟಿಸ್ ಬರುತ್ತದೆ.

ಅಪಘಾತ ಇಳಿಕೆ:
ಎಕ್ಸ್‌ಪ್ರೆಸ್‌ವೇನಲ್ಲಿ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 100 ಕಿ.ಮೀ ನಿಗದಿ ಪಡಿಸಲಾಗಿದೆ. ಅಷ್ಟೇ ಅಲ್ಲದೇ ರೆಡಾರ್ ಗನ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ವೇಗ ಮಿತಿ ದಾಟಿದರೆ 1000 ರೂ. ದಂಡ ಹಾಗೂ ಡಿಎಲ್ ರದ್ದುಪಡಿಸುವ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ನಿಯಮ ಉಲ್ಲಂಘನೆಯ ಫೋಟೋ ಹಾಗೂ ನೋಟಿಸ್ ನೀಡಿ ದಂಡ ವಸೂಲಿ ಮಾಡಲಾಗುತ್ತಿದೆ. ಈ ತಂತ್ರಜ್ಞಾನ ಅಳವಡಿಸಿದ ನಂತರ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ಪ್ರಮಾಣ ಭಾರೀ ಇಳಿಕೆಯಾಗಿದೆ.

ಕ್ರೀಡೆ

ಕರ್ನಾಟಕ ಗ್ರಾಮೀಣ ಲೀಗ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್: ಮರಿಯನ್ಸ್ ಬಿಸಿ ಚಿಕ್ಕಮಗಳೂರು ಚಾಂಪಿಯನ್

ಬೆಂಗಳೂರು: 7ನೇ ಆವೃತ್ತಿಯ ಕರ್ನಾಟಕ ಗ್ರಾಮೀಣ ಲೀಗ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ (KBL) ಅಂತಿಮ ಹಂತದ ಪಂದ್ಯಗಳು ಫೆಬ್ರವರಿ 13, 2026ರಂದು ನಗರದ Sri Kanteerava Stadium ಬಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ನಡೆದವು. ರೋಚಕ ಹಣಾಹಣಿಯ ಬಳಿಕ ಮರಿಯನ್ಸ್ ಬಿಸಿ ಚಿಕ್ಕಮಗಳೂರು ತಂಡ ಚಾಂಪಿಯನ್ ಪಟ್ಟ ಕೈಸೇರಿಸಿಕೊಂಡಿತು.

🏆 ಫೈನಲ್ ಪಂದ್ಯ ಫಲಿತಾಂಶ

ಮರಿಯನ್ಸ್ ಬಿಸಿ ಚಿಕ್ಕಮಗಳೂರು 85 (ಓಂ ಶೆಟ್ಟಿ 20, ರಿಷಭ್ 19)
ನ್ಯಾಷನಲ್ಸ್ ಎಸ್‌ಸಿ ಮೈಸೂರು 65 (ರೋನಕ್ 24, ಶ್ಲೋಕ್ 17)
ಅರ್ಧಾವಧಿ: 44-33

ಮರಿಯನ್ಸ್ ತಂಡ ಪ್ರಾರಂಭದಿಂದಲೇ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ 20 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು.

🥉 ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯ

ಮಂಗಳೂರು ಬಿಸಿ 79 (ದೀಕ್ಷಿತ್ 16, ದಿವಿತ್ 14)
ಪ್ರೊಟೆಕ್ ಅಸೋಸಿಯೇಶನ್ ಮೈಸೂರು 77 (ರಂಜಿತ್ 28, ರಾನೆನ್ 22)
ಅರ್ಧಾವಧಿ: 41-47

ತೀವ್ರ ಪೈಪೋಟಿಯ ಪಂದ್ಯದಲ್ಲಿ ಮಂಗಳೂರು ಬಿಸಿ ಕೇವಲ 2 ಅಂಕಗಳ ಅಂತರದಿಂದ ಜಯಗಳಿಸಿತು.


ಸೂಪರ್ ಲೀಗ್ ಪಂದ್ಯಗಳ ಫಲಿತಾಂಶ (ಬೆಳಿಗ್ಗೆ ಅಧಿವೇಶನ)

  1. ನ್ಯಾಷನಲ್ಸ್ ಎಸ್‌ಸಿ ಮೈಸೂರು 80 (ಸೂಮನ್ 28, ರೋನಕ್ 21)
    ಪ್ರೊಟೆಕ್ ಅಸೋಸಿಯೇಶನ್ ಮೈಸೂರು 70 (ಕಿಶನ್ 13, ರಂಜಿತ್ 12)
    ಅರ್ಧಾವಧಿ: 37-35
  2. ಮರಿಯನ್ಸ್ ಬಿಸಿ ಚಿಕ್ಕಮಗಳೂರು 55 (ರಿಷಭ್ 23, ಓಂ ಶೆಟ್ಟಿ)
    ಮಂಗಳೂರು ಬಿಸಿ 50 (ಅಮೃತ್ 17, ಆದಿತ್ಯ 12)
    ಅರ್ಧಾವಧಿ: 37-27

ಅಂತಿಮ ಸ್ಥಾನಮಾನ

  1. ಮರಿಯನ್ಸ್ ಬಿಸಿ – ವಿಜೇತರು
  2. ನ್ಯಾಷನಲ್ಸ್ ಎಸ್‌ಸಿ – ರನ್ನರ್ ಅಪ್
  3. ಮಂಗಳೂರು ಬಿಸಿ – ಮೂರನೇ ಸ್ಥಾನ
  4. ಪ್ರೊಟೆಕ್ ಅಸೋಸಿಯೇಶನ್ – ನಾಲ್ಕನೇ ಸ್ಥಾನ

ಬಹುಮಾನ ವಿವರಗಳು

  • ವಿಜೇತರಿಗೆ ₹75,000 ನಗದು ಬಹುಮಾನ
  • ರನ್ನರ್ ಅಪ್ ತಂಡಕ್ಕೆ ₹50,000
  • ಮೂರನೇ ಸ್ಥಾನಕ್ಕೆ ₹25,000
  • ಒಟ್ಟು ₹1,50,000 ನಗದು ಬಹುಮಾನ ವಿತರಣೆ

ವೈಯಕ್ತಿಕ ಪ್ರಶಸ್ತಿಗಳು

  • ಟೂರ್ನಿಯ ಅತ್ಯುತ್ತಮ ಆಟಗಾರ: ರೋನಕ್ (ನ್ಯಾಷನಲ್ಸ್ ಎಸ್‌ಸಿ ಮೈಸೂರು)
  • ಅತ್ಯಂತ ಭರವಸೆಯ ಆಟಗಾರ: ಕೇಶವ್ (ಪ್ರೊಟೆಕ್ ಅಸೋಸಿಯೇಶನ್ ಬಿಸಿ ಮೈಸೂರು)

ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಫಿಬಾ ಏಷ್ಯಾ ಅಧ್ಯಕ್ಷರು ಮತ್ತು ಎಂಎಲ್‌ಸಿ ಡಾ. ಕೆ. ಗೋವಿಂದರಾಜ್, ಕೆಎಸ್‌ಬಿಬಿಎ ಉಪಾಧ್ಯಕ್ಷ ಆರ್. ರಾಜನ್, ಸಹ ಕಾರ್ಯದರ್ಶಿ ಆರ್. ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು. ವಿಜೇತ ತಂಡದ ಆಟಗಾರರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಲಾಯಿತು.

Continue Reading

ಕ್ರೀಡೆ

TCS WORLD 10K ಬೆಂಗಳೂರು ಏಪ್ರಿಲ್ 26ರಂದು: ನೋಂದಣಿ ಆರಂಭ, USD 2.1 ಲಕ್ಷ ಬಹುಮಾನ

ಬೆಂಗಳೂರು: ವಿಶ್ವದ ಪ್ರಮುಖ 10K ಮ್ಯಾರಥಾನ್‌ಗಳಲ್ಲಿ ಒಂದಾದ TCS World 10K Bengaluru 18ನೇ ಆವೃತ್ತಿ ಏಪ್ರಿಲ್ 26, 2026ರಂದು ನಡೆಯಲಿದೆ. ಫೆಬ್ರವರಿ 13ರಿಂದ ಆನ್-ಗ್ರೌಂಡ್ ಮತ್ತು ವರ್ಚುವಲ್ ವಿಭಾಗಗಳಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಪ್ರತಿಷ್ಠಿತ ಓಟಕ್ಕೆ ಒಟ್ಟು USD 210,000 (ಸುಮಾರು ₹2.1 ಲಕ್ಷ ಅಮೆರಿಕನ್ ಡಾಲರ್) ಬಹುಮಾನ ಮೊತ್ತ ನಿಗದಿಯಾಗಿದೆ. ವಿಶ್ವದ ಖ್ಯಾತ ಅಥ್ಲೀಟ್‌ಗಳು ಹಾಗೂ ಸಾವಿರಾರು ಹವ್ಯಾಸಿ ಓಟಗಾರರು ಭಾಗವಹಿಸಲಿದ್ದಾರೆ. ಮ್ಯಾರಥಾನ್ ಕಬ್ಬನ್ ರಸ್ತೆಯ ಆರ್‌ಎಸ್‌ಎಒಐ ಗೇಟ್ ನಂ.5ರ ಎದುರು ಪ್ರಾರಂಭವಾಗಿ, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೇಕ್‌ಶಾ ಪೆರೇಡ್ ಮೈದಾನದ ಹೊರಭಾಗದಲ್ಲಿ ಮುಕ್ತಾಯಗೊಳ್ಳಲಿದೆ.


ಅರ್ಹತಾ ಮಾನದಂಡ ಮೊದಲ ಬಾರಿಗೆ

ಓಟಗಾರರ ಸುರಕ್ಷತೆ ಹಾಗೂ ಉತ್ತಮ ಅನುಭವದ ದೃಷ್ಟಿಯಿಂದ 2026ರ ಓಪನ್ 10K ವಿಭಾಗಕ್ಕೆ ಮೊದಲ ಬಾರಿಗೆ ಅರ್ಹತಾ ಮಾನದಂಡಗಳನ್ನು ಪರಿಚಯಿಸಲಾಗಿದೆ. ಮಾನ್ಯ ಸಮಯದ ಪ್ರಮಾಣಪತ್ರ ಸಲ್ಲಿಸಿದವರಿಗೆ ಮಾತ್ರ ನೋಂದಣಿ ಮಾನ್ಯವಾಗಲಿದೆ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.


ಆರ್ಥಿಕ ಪರಿಣಾಮದ ಅಂಕಿ-ಅಂಶಗಳು

  • ಹಿಂದಿನ ಆವೃತ್ತಿಗಳಲ್ಲಿ ಓಟಗಾರರು ತರಬೇತಿ, ಬೂಟು, ಉಡುಪು, ತಂತ್ರಜ್ಞಾನ, ಆಹಾರ ಹಾಗೂ ವಸತಿಗೆ ₹179.91 ಕೋಟಿ ಖರ್ಚು.
  • ಪೌಷ್ಠಿಕಾಂಶ ಹಾಗೂ ಆರೋಗ್ಯ ರಕ್ಷಣೆಗೆ ₹78.69 ಕೋಟಿ ಹೂಡಿಕೆ.
  • 85.45% ಮಂದಿ ತಂತ್ರಜ್ಞಾನ ಆಧಾರಿತ ಫಿಟ್ನೆಸ್ ಪರಿಹಾರಗಳ ಬಳಕೆ.
  • ಒಟ್ಟು ಆರ್ಥಿಕ ಪರಿಣಾಮದಲ್ಲಿ 40% ಕೊಡುಗೆ ವಿಶಾಲ ಪರಿಸರ ವ್ಯವಸ್ಥೆಗೆ ಬೆಂಬಲ.

ಆರೋಗ್ಯದ ಮೇಲೆ ಪರಿಣಾಮ

  • 54.21% ಮಂದಿ ಉತ್ತಮ ಆರೋಗ್ಯಕ್ಕಾಗಿ ಓಟ.
  • 70.12% ಮಂದಿ ಪೂರ್ಣ ದೇಹ ತಪಾಸಣೆ ಮಾಡಿಸಿಕೊಂಡಿದ್ದಾರೆ.
  • 53.07% ಮಂದಿ ದೂರದ ಓಟದಿಂದ ಮಾನಸಿಕ ಯೋಗಕ್ಷೇಮ ಹೆಚ್ಚಾಗಿದೆ ಎಂದು ಅಭಿಪ್ರಾಯ.
  • 22.5% ಮಂದಿ ಔಷಧಿ ಬಳಕೆ ಕಡಿಮೆ ಮಾಡಿರುವ ವರದಿ.
  • 85% ಮಂದಿ ಶಕ್ತಿ ತರಬೇತಿ (ಸ್ಟ್ರೆಂಗ್ತ್ ಟ್ರೈನಿಂಗ್) ಅಳವಡಿಸಿಕೊಂಡಿದ್ದಾರೆ.
  • 47.94% ಮಂದಿ ಒತ್ತಡ ನಿರ್ವಹಣೆಗೆ ನಿಯಮಿತ ವ್ಯಾಯಾಮ.

📝 ನೋಂದಣಿ ವಿವರಗಳು

ಆನ್-ಗ್ರೌಂಡ್ ವಿಭಾಗಗಳು:

  • ಓಪನ್ 10K
  • ಮಜ್ಜಾ ರನ್ (4.2 ಕಿ.ಮೀ)
  • ಹಿರಿಯ ನಾಗರಿಕರ ಓಟ
  • ಅಂಗವಿಕಲ (ವಿಶೇಷ) ಚಾಂಪಿಯನ್ಸ್ (3 ಕಿ.ಮೀ)

ಎಲ್ಲಾ ವಿಭಾಗಗಳ ನೋಂದಣಿ ಫೆಬ್ರವರಿ 13ರಿಂದ ಆರಂಭವಾಗಿದ್ದು, ಮಾರ್ಚ್ 20, 2026ರ ರಾತ್ರಿ 11:59ರವರೆಗೆ ಅಥವಾ ಸೀಟುಗಳು ಭರ್ತಿಯಾಗುವವರೆಗೆ ಮುಕ್ತವಾಗಿರುತ್ತದೆ.

Continue Reading

ಅಪರಾಧ

ಚಿಕ್ಕಬಳ್ಳಾಪುರದಲ್ಲಿ ಆರ್‌ಟಿಓ ಇನ್ಸ್‌ಪೆಕ್ಟರ್ ಎಡವಟ್ಟು: ಅಧಿಕಾರ ವ್ಯಾಪ್ತಿ ಮೀರಿ ಪರಿಶೀಲನಾ ವರದಿ?

ಚಿಕ್ಕಬಳ್ಳಾಪುರ: ತಮ್ಮ ಅಧಿಕಾರ ವ್ಯಾಪ್ತಿಗೆ ಸೇರದ ಪ್ರಕರಣದಲ್ಲಿ ಪರಿಶೀಲನಾ ವರದಿ ನೀಡಿದ ಆರೋಪಕ್ಕೆ ಆರ್‌ಟಿಓ ಇನ್ಸ್‌ಪೆಕ್ಟರ್ ಒಬ್ಬರು ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ದೇವನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ಸ್‌ಪೆಕ್ಟರ್, ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

KA 40 TB 2054 ನಂಬರ್‌ನ ಟ್ರ್ಯಾಕ್ಟರ್ ಅಪಘಾತ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಸುಪರ್ಧಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಗೌರಿಬಿದನೂರು ಪೊಲೀಸರು ಚಿಕ್ಕಬಳ್ಳಾಪುರ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪರಿಶೀಲನಾ ವರದಿ ನೀಡುವಂತೆ ಪತ್ರ ಬರೆದಿದ್ದರು.

ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವ್ಯಾಪ್ತಿಯ ಆರ್‌ಟಿಓ ಇನ್ಸ್‌ಪೆಕ್ಟರ್ ಶ್ವೇತಾ ಅವರು, ಆರ್‌ಟಿಓ ಏಜೆಂಟ್‌ನಿಂದ ₹5,000 ಲಂಚ ಪಡೆದು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅಪಘಾತ ವಾಹನಕ್ಕೆ ಪರಿಶೀಲನಾ ವರದಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ವರದಿಯನ್ನು ಸ್ವೀಕರಿಸಿದ ಗೌರಿಬಿದನೂರು ಪೊಲೀಸರು ವಾಹನವನ್ನು ಬಿಡುಗಡೆ ಮಾಡಿದ್ದರು. ಬಳಿಕ ಈ ಎಡವಟ್ಟು ಬಹಿರಂಗವಾಗುತ್ತಿದ್ದಂತೆ, ಈಗಾಗಲೇ ನೀಡಿದ ಪರಿಶೀಲನಾ ವರದಿಯನ್ನು ವಾಪಸ್ ಪಡೆಯಲು ಇನ್ಸ್‌ಪೆಕ್ಟರ್ ಶ್ವೇತಾ ಗೌರಿಬಿದನೂರು ಗ್ರಾಮಾಂತರ ಠಾಣೆ ಸಂಪರ್ಕಿಸಿರುವುದಾಗಿ ತಿಳಿದುಬಂದಿದೆ.

ಇನ್ನೊಂದೆಡೆ, ಬಿಡುಗಡೆಗೊಂಡ ಟ್ರ್ಯಾಕ್ಟರ್ ಅನ್ನು ಪೊಲೀಸರು ಮತ್ತೆ ವಾಪಸ್ ಪಡೆದು ಠಾಣೆ ಆವರಣದಲ್ಲಿ ನಿಲ್ಲಿಸಿದ್ದಾರೆ. ಜೊತೆಗೆ, ಹೊಸ ಪರಿಶೀಲನಾ ವರದಿ ನೀಡುವಂತೆ ಮತ್ತೆ ಚಿಕ್ಕಬಳ್ಳಾಪುರ ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆಗೆ ಪತ್ರ ಬರೆದಿದ್ದಾರೆ.

ಈ ಕುರಿತು ಚಿಕ್ಕಬಳ್ಳಾಪುರ ಆರ್‌ಟಿಓ ಅಧಿಕಾರಿಗಳು, “ಈ ರೀತಿಯ ಕ್ರಮ ಕೈಗೊಳ್ಳಲು ಅವಕಾಶವಿಲ್ಲ. ವಿಷಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು” ಎಂದು ತಿಳಿಸಿದ್ದಾರೆ.

Continue Reading

Trending