ಬೆಂಗಳೂರು
ವಿಧಾನ ಪರಿಷತ್ ನೂತನ ಸದಸ್ಯರಾಗಿ ಉಮಾಶ್ರೀ, ಸೀತಾರಾಂ, ಸುಧಾಮ್ ದಾಸ್ ಪ್ರಮಾಣ ವಚನ
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ನ ನೂತನ ಸದಸ್ಯರಾಗಿ ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ಮಾಜಿ ಸಚಿವರಾದ ಎಂ.ಆರ್. ಸೀತಾರಾಂ, ಉಮಾಶ್ರೀ ಹಾಗೂ ಪಕ್ಷದ ಮುಖಂಡ ಎಚ್ ಪಿ ಸುದಾಮ್ ದಾಸ್ ಪ್ರಮಾಣವಚನ ಸ್ವೀಕರಿಸಿದರು.
ವಿಧಾನಸೌಧ ಬಾಂಕ್ವೆಟ್ ಹಾಲ್ ನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಭಾಪತಿ ಅವರು ನೂತನ ಸದಸ್ಯರಿಗೆ ಸಂಪ್ರದಾಯದಂತೆ ವಿಧಾನ ಪರಿಷತ್ತಿನ ನಡಾವಳಿ ಪುಸ್ತಕ ಒಳಗೊಂಡ ಸೂಟ್ ಕೇಸ್ ನೀಡಿ ಶುಭ ಹಾರೈಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಸದಸ್ಯರಿಗೆ ಹೂಗುಚ್ಚ ನೀಡಿ ಸಿಹಿ ತಿನ್ನಿಸಿ ಶುಭಾಶಯ ಕೋರಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಹಲವು ಶಾಸಕರು ಭಾಗವಹಿಸಿದ್ದರು.
ಮಾಜಿ ಸಚಿವರಾದ ಎಂ.ಆರ್. ಸೀತಾರಾಂ, ಉಮಾಶ್ರೀ ಹಾಗೂ ಮಾಜಿ ಐಆರ್‌ಎಸ್ ಅಧಿಕಾರಿ ಎಚ್.ಪಿ. ಸುಧಾಮ್ ದಾಸ್ ಅವರನ್ನು ಸರ್ಕಾರದ ಶಿಫಾರಸ್ಸಿನ ಮೇರೆಗೆ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲು ರಾಜ್ಯಪಾಲರು ಅಂಕಿತ ಹಾಕಿದ್ದರು. ಇದರಲ್ಲಿ ಸುಧಾಮ್ ದಾಸ್ ಅವರ ನಾಮನಿರ್ದೇಶನಕ್ಕೆ ಕಾಂಗ್ರೆಸ್ ಪಕ್ಷದೊಳಗೇ ಬಹಳ ವಿರೋಧವಿತ್ತು
ಸಚಿವರಾದ ಡಾ.ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ, ಡಾ.ಮಹದೇವಪ್ಪ ಅವರು ಸುಧಾಮ್ ದಾಸ್ ನಾಮನಿರ್ದೇಶನ ಬೇಡ ಎಂದು ಪಕ್ಷದ ಹೈಕಮಾಂಡ್‌ಗೆ ಪತ್ರ ಕೂಡ ಬರೆದಿದ್ದರು. ಅವರ ಬದಲು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡುವಂತೆ ಕೋರಿದ್ದರು. ಈ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಸಿದ್ದರಾಮಯ್ಯ ಅವರು ಹೈಕಮಾಂಡ್ ಅನ್ನು ಮನವೊಲಿಸುವಲ್ಲಿ ಯಶಸ್ವಿಯಾದ ಕಾರಣ ಸುಧಾಮ್ ದಾಸ್ ಅವರ ನಾಮನಿರ್ದೇಶನಕ್ಕೆ ಅಡ್ಡಿಯಾಗಲಿಲ್ಲ.
ಏತನ್ಮಧ್ಯೆ ಪಟ್ಟಿಯಲ್ಲಿ ಮನ್ಸೂರ್ ಅಲಿ ಖಾನ್ ಅವರ ಹೆಸರಿತ್ತು. ಆದರೆ ದಿಢೀರ್ ಬೆಳವಣಿಗೆಯಲ್ಲಿಅವರ ಬದಲಿಗೆ ಮಾಜಿ ಸಚಿವೆ ಉಮಾಶ್ರೀ ಅವರನ್ನು ಪರಿಗಣಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರಿಷ್ಠರಿಗೆ ಮನವಿ ಮಾಡಿದ್ದರು. ಹಿಂದೆ ತೇರದಾಳ ಕ್ಷೇತ್ರದ ಶಾಸಕಿಯಾಗಿದ್ದ ಉಮಾಶ್ರೀ ಅವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಕಣಕ್ಕಿಳಿಯಲು ಉತ್ಸುಕವಾಗಿದ್ದರು. ಆ ವೇಳೆ ಅವರಿಗೆ ಪರಿಷತ್ ಸ್ಥಾನದ ಭರವಸೆ ನೀಡಲಾಗಿತ್ತು ಎಂದು ಹೇಳಲಾಗಿದೆ.
ಬೆಂಗಳೂರು
Bengaluru ನಲ್ಲಿ ಖಾಲಿ ಸೈಟ್ ಮಾಲೀಕರಿಗೆ ಬಿಗ್ ಶಾಕ್: ಕಸ ತೆರವು ಮಾಡದಿದ್ದರೆ ₹38,400 ದಂಡ, ದೊಡ್ಡ ಸೈಟ್‌ಗೆ ಲಕ್ಷಕ್ಕೂ ಹೆಚ್ಚು!
ಬೆಂಗಳೂರು: Bengaluru ನಲ್ಲಿ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಕಸ ಹಾಗೂ ಕಟ್ಟಡ ನಿರ್ಮಾಣದ ತ್ಯಾಜ್ಯವನ್ನು ಹಾಗೆಯೇ ಬಿಟ್ಟಿರುವ ಆಸ್ತಿ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬಿಗ್ ಶಾಕ್ ನೀಡಿದೆ. ಆಗಸ್ಟ್ 27ರಿಂದ ನಗರದಾದ್ಯಂತ ಖಾಲಿ ನಿವೇಶನಗಳ ಸ್ವಚ್ಛತಾ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ನಿಯಮ ಉಲ್ಲಂಘಿಸುವ ಮಾಲೀಕರಿಗೆ ಭಾರಿ ದಂಡ ವಿಧಿಸಲು ನಿರ್ಧರಿಸಲಾಗಿದೆ.
ಶಾಂತಿನಗರದಲ್ಲಿ ವಿಶೇಷ ಅಭಿಯಾನಕ್ಕೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷ ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಉಪಸ್ಥಿತರಿದ್ದರು.
ಖಾಲಿ ಸೈಟ್ ಸ್ವಚ್ಛವಾಗಿಡುವುದು ಕಡ್ಡಾಯ
2020ರ ಘನತ್ಯಾಜ್ಯ ನಿರ್ವಹಣೆ ಉಪನಿಯಮಗಳ ಬೈಲಾ 18(1)(b) ಪ್ರಕಾರ, ಪ್ರತಿಯೊಬ್ಬ ಆಸ್ತಿ ಮಾಲೀಕರು ತಮ್ಮ ಖಾಲಿ ನಿವೇಶನಗಳನ್ನು ನೈರ್ಮಲ್ಯಯುತವಾಗಿ ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ.
ಈಗಾಗಲೇ ಆಗಸ್ಟ್ 15ರೊಳಗೆ ಖಾಲಿ ಸೈಟ್‌ಗಳಲ್ಲಿರುವ ಕಸ ಮತ್ತು ತ್ಯಾಜ್ಯವನ್ನು ಸ್ವತಃ ತೆರವುಗೊಳಿಸುವಂತೆ ಮಾಲೀಕರಿಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಗಡುವು ಮುಗಿದರೂ ಸ್ವಚ್ಛಗೊಳಿಸದ ನಿವೇಶನಗಳ ವಿರುದ್ಧ ಇದೀಗ ಜಿಬಿಎ ನೇರವಾಗಿ ಕ್ರಮ ಕೈಗೊಳ್ಳಲಿದೆ.
ಕಸ ತೆರವು ಮಾಡದಿದ್ದರೆ ಭಾರಿ ದಂಡ!
ಮಾಲೀಕರು ತಮ್ಮ ಜಾಗವನ್ನು ಸ್ವಚ್ಛಗೊಳಿಸದಿದ್ದರೆ, ಪ್ರಾಧಿಕಾರವೇ ನಿವೇಶನದಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸಲಿದೆ. ಇದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ದಂಡದ ರೂಪದಲ್ಲಿ ಆಸ್ತಿ ತೆರಿಗೆಯೊಂದಿಗೆ ಸೇರಿಸಿ ವಸೂಲಿ ಮಾಡಲಾಗುತ್ತದೆ.
ನಿವೇಶನದ ಗಾತ್ರಕ್ಕೆ ಅನುಗುಣವಾಗಿ ದಂಡದ ಮೊತ್ತವೂ ಬದಲಾಗಲಿದೆ.
- 20×30 ಸೈಟ್: ₹19,200ರಿಂದ ದಂಡ
- 30×40 ಸೈಟ್: ₹38,400ರವರೆಗೆ ದಂಡ
- ದೊಡ್ಡ ನಿವೇಶನಗಳು: ₹1 ಲಕ್ಷಕ್ಕೂ ಅಧಿಕ ದಂಡ ಬೀಳುವ ಸಾಧ್ಯತೆ
ಹೀಗಾಗಿ ಖಾಲಿ ಸೈಟ್ ಹೊಂದಿರುವವರು ತಕ್ಷಣವೇ ತಮ್ಮ ನಿವೇಶನದಲ್ಲಿರುವ ಕಸ, ಕಟ್ಟಡ ತ್ಯಾಜ್ಯ ಸೇರಿದಂತೆ ಎಲ್ಲ ರೀತಿಯ ತ್ಯಾಜ್ಯವನ್ನು ತೆರವುಗೊಳಿಸುವುದು ಸೂಕ್ತವಾಗಿದೆ.
ಮಾಲೀಕರೇ ಕಸ ಒಟ್ಟುಗೂಡಿಸಿದರೆ ಹೆಚ್ಚುವರಿ ಶುಲ್ಕವಿಲ್ಲ
ಆಸ್ತಿ ಮಾಲೀಕರು ಸ್ವತಃ ಮುಂದೆ ನಿಂತು ನಿವೇಶನದಲ್ಲಿರುವ ಕಸ ಮತ್ತು ತ್ಯಾಜ್ಯವನ್ನು ಒಂದೆಡೆ ಒಟ್ಟುಗೂಡಿಸಿದರೆ, ಅದನ್ನು ಪಾಲಿಕೆಯೇ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ವಿಲೇವಾರಿ ಮಾಡಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬೆಂಗಳೂರಿನ ಖಾಲಿ ನಿವೇಶನಗಳು ಕಸ ಹಾಕುವ ಸ್ಥಳಗಳಾಗುವುದನ್ನು ತಡೆಯುವುದು ಹಾಗೂ ನಗರವನ್ನು ಸ್ವಚ್ಛವಾಗಿಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಬೆಂಗಳೂರು
Bengaluru ಪಾರ್ಕ್ ಜಾಗ ಬಳಕೆಗೆ ವಿರೋಧ: ಸರ್ಕಾರದ ವಿರುದ್ಧ ಸಿಡಿದೆದ್ದ ನಾಗರಿಕರು, 6 ಪ್ರಮುಖ ಬೇಡಿಕೆ
ಬೆಂಗಳೂರು: ರಾಜ್ಯ ಸರ್ಕಾರದ ಮೂಲಸೌಕರ್ಯ ಯೋಜನೆಗಳಿಗೆ Bengaluru ರಿನ ಉದ್ಯಾನವನ ಹಾಗೂ ಉದ್ಯಾನಗಳ ಜಾಗವನ್ನು ಬಳಸಿಕೊಳ್ಳುವ ಸಚಿವ ಸಂಪುಟದ ನಿರ್ಧಾರಕ್ಕೆ ನಾಗರಿಕರು ಮತ್ತು ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಪಾರ್ಕ್‌ಗಳ ಭೂಮಿಯನ್ನು ಇತರ ಕಾಮಗಾರಿಗಳಿಗೆ ಬಳಸುವುದರಿಂದ ನಗರದ ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಲಾಲ್‌ಬಾಗ್‌ನಲ್ಲಿ ಬೃಹತ್ ಬ್ಯಾನರ್‌ಗಳನ್ನು ಪ್ರದರ್ಶಿಸುವ ಮೂಲಕ ನಾಗರಿಕರು ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಮುಖ್ಯಮಂತ್ರಿ ಅವರಿಗೆ ಜಂಟಿ ಮನವಿ ಸಲ್ಲಿಸಿ, ಉದ್ಯಾನವನಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ನಾಗರಿಕ ಸಂಘಟನೆಗಳ ಪ್ರಕಾರ, ಉದ್ಯಾನವನಗಳು ಖಾಲಿ ಜಾಗವಲ್ಲ. ಅವು ನಗರದ ಉಷ್ಣಾಂಶ ನಿಯಂತ್ರಣ, ಮಳೆನೀರು ನಿರ್ವಹಣೆ, ಜೀವವೈವಿಧ್ಯ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಮೂಲಸೌಕರ್ಯಗಳಾಗಿವೆ.
ಸಂಶೋಧನೆಗಳನ್ನು ಉಲ್ಲೇಖಿಸಿರುವ ಸಂಘಟನೆಗಳು, ಬೆಂಗಳೂರಿನ ಹಸಿರು ಪ್ರದೇಶಗಳು ಸುತ್ತಮುತ್ತಲಿನ ಪ್ರದೇಶಗಳಿಗಿಂತ ಸರಾಸರಿ 2.23 ಡಿಗ್ರಿ ಸೆಲ್ಸಿಯಸ್‌ವರೆಗೆ ತಂಪಾಗಿರುತ್ತವೆ ಎಂದು ಹೇಳಿದ್ದಾರೆ. ಉದ್ಯಾನವನಗಳಿಂದ ಉಂಟಾಗುವ ಈ ತಂಪಿನ ಪರಿಣಾಮ ಸುಮಾರು 347 ಮೀಟರ್ ವ್ಯಾಪ್ತಿಯವರೆಗೆ ಕಂಡುಬರುತ್ತದೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.
ಶೇ.28ರಷ್ಟು ವಾರ್ಡ್‌ಗಳಲ್ಲಿ ಪಾರ್ಕ್‌ಗಳೇ ಇಲ್ಲ!
ಐಐಹೆಚ್‌ಎಸ್ ಸಂಶೋಧನೆಯನ್ನು ಉಲ್ಲೇಖಿಸಿರುವ ನಾಗರಿಕ ಗುಂಪುಗಳು, ಬೆಂಗಳೂರಿನ ಸುಮಾರು 28 ಪ್ರತಿಶತ ವಾರ್ಡ್‌ಗಳಲ್ಲಿ ಒಂದೇ ಒಂದು ಉದ್ಯಾನವನ ಅಥವಾ ಸೂಕ್ತ ಹಸಿರು ಪ್ರದೇಶವಿಲ್ಲ ಎಂದು ಹೇಳಿದ್ದಾರೆ. ಈಗಿರುವ ಉದ್ಯಾನವನಗಳ ಜಾಗವನ್ನೂ ಮೂಲಸೌಕರ್ಯ ಯೋಜನೆಗಳಿಗೆ ಬಳಸಿಕೊಂಡರೆ ಪರಿಸರದ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಲಿದೆ ಎಂದು ಎಚ್ಚರಿಸಿದ್ದಾರೆ.
ಸರ್ಕಾರದ ಮುಂದೆ 6 ಪ್ರಮುಖ ಬೇಡಿಕೆ
ನಾಗರಿಕ ಸಂಘಟನೆಗಳು ಸರ್ಕಾರದ ಮುಂದೆ ಪ್ರಮುಖವಾಗಿ ಆರು ಬೇಡಿಕೆಗಳನ್ನು ಇಟ್ಟಿವೆ.
- ಕರ್ನಾಟಕ ಸರ್ಕಾರಿ ಉದ್ಯಾನವನಗಳ ಸಂರಕ್ಷಣೆ ಕಾಯ್ದೆಗೆ ಉದ್ದೇಶಿಸಿರುವ ತಿದ್ದುಪಡಿಯನ್ನು ಹಿಂಪಡೆಯಬೇಕು.
- ಅಸ್ತಿತ್ವದಲ್ಲಿರುವ ಉದ್ಯಾನವನಗಳನ್ನು ನಿರ್ಮಾಣ ಕಾಮಗಾರಿಗಳಿಗೆ ಬಳಸುವುದನ್ನು ತಡೆಯಬೇಕು.
- ಯೋಜನೆಗಳಿಗೆ ಉದ್ಯಾನವನಗಳನ್ನು ಹೊರತುಪಡಿಸಿ ಪರ್ಯಾಯ ಜಾಗಗಳನ್ನು ಮೊದಲು ಪರಿಶೀಲಿಸಬೇಕು.
- ಹಸಿರು ಪ್ರದೇಶಗಳಿಗೆ ಸಂಬಂಧಿಸಿದ ಯೋಜನೆಗಳ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು.
- ಪರಿಸರ, ಸಾಮಾಜಿಕ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಯೋಜನೆಗಳ ಪರಿಣಾಮದ ಸಮಗ್ರ ಅಧ್ಯಯನ ನಡೆಸಬೇಕು.
- ನಗರ ಯೋಜನೆಯಲ್ಲಿ ಉದ್ಯಾನವನಗಳನ್ನು ಅತ್ಯಗತ್ಯ ಸಾರ್ವಜನಿಕ ಆಸ್ತಿಯಾಗಿ ಗುರುತಿಸಿ ರಕ್ಷಿಸಬೇಕು.
ಬೆಂಗಳೂರು ನಗರಕ್ಕೆ ಇನ್ನಷ್ಟು ಹಸಿರು ಪ್ರದೇಶಗಳ ಅಗತ್ಯವಿದೆ. ಇರುವ ಉದ್ಯಾನವನಗಳ ಜಾಗವನ್ನು ಕಡಿಮೆ ಮಾಡುವ ಬದಲು ಅವುಗಳನ್ನು ಮತ್ತಷ್ಟು ಸಂರಕ್ಷಿಸಿ ವಿಸ್ತರಿಸಬೇಕು ಎಂದು ನಾಗರಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರು
Nalanda English Medium School ವಾರ್ಷಿಕೋತ್ಸವದಲ್ಲಿ ಎಸ್. ಜಾನಕಿ ಗೀತೆಗಳಿಗೆ ವಿದ್ಯಾರ್ಥಿಗಳ ನೃತ್ಯ ನಮನ
ಬೆಂಗಳೂರು: ಜೆ.ಪಿ.ನಗರದಲ್ಲಿರುವ ಪ್ರತಿಷ್ಠಿತ ನNalanda English Medium School ವಾರ್ಷಿಕೋತ್ಸವ ಹಲವು ವಿಶೇಷತೆಗಳೊಂದಿಗೆ ಗಮನ ಸೆಳೆಯಿತು. ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕಿ S.Janaki ಅವರ ವಿವಿಧ ಭಾಷೆಗಳ ಜನಪ್ರಿಯ ಹಾಡುಗಳನ್ನು ಗಾಯನ ಹಾಗೂ ನೃತ್ಯದ ಮೂಲಕ ಪ್ರಸ್ತುತಪಡಿಸಿ ಗಾನಕೋಗಿಲೆಗೆ ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಮಿಸ್ ಇಂಡಿಯಾ ಕಿರೀಟ ವಿಜೇತೆ, ಕಿರುತೆರೆ ಹಾಗೂ ಚಲನಚಿತ್ರ ಕಲಾವಿದೆ ಸ್ಮೀತಾಪ್ರಭು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಶೈಕ್ಷಣಿಕ ಸಾಧನೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ಅತ್ಯಂತ ಅಗತ್ಯ ಎಂದು ಹೇಳಿದರು.
ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಳಂದ ಆಂಗ್ಲ ಮಾಧ್ಯಮ ಶಾಲೆ ಸಾಕಷ್ಟು ಮುತುವರ್ಜಿ ವಹಿಸುತ್ತಿದೆ ಎಂದು ಸ್ಮೀತಾಪ್ರಭು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್. ಜಾನಕಿ ಗೀತೆಗಳಿಗೆ ವಿದ್ಯಾರ್ಥಿಗಳ ನಮನ
ವಾರ್ಷಿಕೋತ್ಸವದ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಎಸ್. ಜಾನಕಿ ಅವರ ವಿವಿಧ ಭಾಷೆಗಳ ಹಾಡುಗಳನ್ನು ಗಾಯನ ಮತ್ತು ನೃತ್ಯದ ಮೂಲಕ ಪ್ರಸ್ತುತಪಡಿಸಿದರು. ಸಂಗೀತ ಹಾಗೂ ನೃತ್ಯದ ಸುಂದರ ಸಂಯೋಜನೆ ಪ್ರೇಕ್ಷಕರ ಗಮನ ಸೆಳೆಯಿತು.
ವಿದ್ಯಾರ್ಥಿಗಳ ಈ ವಿಶೇಷ ಪ್ರದರ್ಶನದ ಮೂಲಕ ಅಗಲಿದ ಹಿರಿಯ ಗಾಯಕಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆಗೆ ಪಾಲಕರು ಹಾಗೂ ಶಿಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ
ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಸ್ಮೀತಾಪ್ರಭು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ನಳಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಕುಪ್ಪುರಾಜ್, ಕಾರ್ಯದರ್ಶಿ ಶಿವಶಂಕರ್, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.
-
ಬೆಂಗಳೂರು22 ಗಂಟೆಗಳು agoVande Mataram ಸಂಪೂರ್ಣ ಹಾಡುವ ವಿಚಾರಕ್ಕೆ ರಾಜಕೀಯ ರಂಪಾಟ; CM ಡಿಕೆಶಿ ಹೇಳಿದ್ದೇನು?
-
ರಾಜಕೀಯ24 ಗಂಟೆಗಳು agoValmiki ನಿಗಮದ ಅಕ್ರಮ: ಸಚಿವ ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದೇನು?
-
ರಾಜಕೀಯ24 ಗಂಟೆಗಳು agoValmiki Corporation Scam: ‘ನಾಗೇಂದ್ರ ನಿರಪರಾಧಿ ಎಂದು ಸಾಬೀತಾದರೆ ಸಿಎಂ ಮಾಡಿಕೊಳ್ಳಿ’ ಎಂದ ವಿಜಯೇಂದ್ರ
-
ದೇಶ22 ಗಂಟೆಗಳು agoBJP ಶಾಸಕರ ಖಾಸಗಿ ಕಾರು ತೊಳೆಯಲು ಅಗ್ನಿಶಾಮಕ ವಾಹನ ಬಳಕೆ? ವಿಡಿಯೋ ವೈರಲ್, ಭಾರೀ ಆಕ್ರೋಶ
-
ಬೆಂಗಳೂರು4 ಗಂಟೆಗಳು agoEid Milad ಮೆರವಣಿಗೆ ಗಲಾಟೆ: ಪುನೀತ್ ಕೆರೆಹಳ್ಳಿ ಸೇರಿ ಹಲವರ ವಿರುದ್ಧ FIR, 6 ಮಂದಿ ಬಂಧನ
-
ದೇಶ3 ಗಂಟೆಗಳು agoMantralaya: ಇಂದಿನಿಂದ ಸಪ್ತರಾತ್ರೋತ್ಸವ ಆರಂಭ; ಮಹಾರಥೋತ್ಸವ, ತೆಪ್ಪೋತ್ಸವ ಸೇರಿದಂತೆ ಹಲವು ಕಾರ್ಯಕ್ರಮ
-
ಬೆಂಗಳೂರು3 ಗಂಟೆಗಳು agoNalanda English Medium School ವಾರ್ಷಿಕೋತ್ಸವದಲ್ಲಿ ಎಸ್. ಜಾನಕಿ ಗೀತೆಗಳಿಗೆ ವಿದ್ಯಾರ್ಥಿಗಳ ನೃತ್ಯ ನಮನ
-
ದೇಶ4 ಗಂಟೆಗಳು agoNepal Flood: ನೇಪಾಳದಲ್ಲಿ ಸಿಲುಕಿದ ಕನ್ನಡಿಗರೇ ಗಮನಿಸಿ; ಸರ್ಕಾರದಿಂದ Google Form ಬಿಡುಗಡೆ
