ದೇಶ
ನಿಮಗೆ ಈ ರೋಗ ಲಕ್ಷಣಗಳಿದ್ದರೆ ಜಾಗರೂಕರಾಗಿರಿ: ಅದು ‘ಮಂಕಿಪಾಕ್ಸ್’ ಆಗಿರಬಹುದು! – Monkeypox Symptoms
Monkeypox Symptoms: ಕೋವಿಡ್-19ನಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಸಾಂಕ್ರಾಮಿಕ ರೋಗವು ಜಗತ್ತನ್ನು ಬೆಚ್ಚಿಬೀಳಿಸಿದೆ. ಆ ಮಹಾಮಾರಿಯೇ ಮಂಕಿಪಾಕ್ಸ್. ಆಫ್ರಿಕಾದ ಮಧ್ಯಭಾಗದಲ್ಲಿ ಹರಡಿರುವ ಮಂಗನ ಕಾಯಿಲೆ ಈಗ ನಮ್ಮ ನೆರೆಯ ರಾಷ್ಟ್ರವಾದ ಪಾಕಿಸ್ತಾನಕ್ಕೂ ಬಂದಿದೆ. ಯುರೋಪಿಯನ್ ಖಂಡದ ಸ್ವೀಡನ್‌ನಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್‌ಒ) ಈಗಾಗಲೇ ಮಂಗನ ಕಾಯಿಲೆಗೆ ಅಂತರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಈ ಮಂಗನ ಕಾಯಿಲೆಯು ಮೊದಲು ಎಲ್ಲಿ ಪತ್ತೆಯಾಯಿತು? ಇದರಲ್ಲಿ ಎಷ್ಟು ವಿಧ? ಈ ರೋಗ ಲಕ್ಷಣಗಳೇನು? ಇದು ಹೇಗೆ ಹರಡುತ್ತದೆ? ಎನ್ನುವ ವಿವರಗಳನ್ನು ತಿಳಿಯೋಣಬನ್ನಿ.
ಮಂಕಿಪಾಕ್ಸ್ ಎಂದರೇನು?: ಇದು ವೈರಲ್ ರೋಗ. ಇದು ಸಿಡುಬು ಕುಟುಂಬಕ್ಕೆ ಸೇರಿದೆ. ಈ ವೈರಸ್ ಹೆಚ್ಚಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಹರಡುತ್ತಿದೆ. ಈ ವೈರಸ್ ಅನ್ನು ಮೊದಲು 1958 ರಲ್ಲಿ ಮಂಗಗಳಲ್ಲಿ ಪತ್ತೆ ಮಾಡಲಾಯಿತು. ಅದಕ್ಕಾಗಿಯೇ ಇದಕ್ಕೆ ಮಂಗನ ಕಾಯಿಲೆ ಎಂದು ಹೆಸರು ಬಂದಿದೆ.
ಮನುಷ್ಯನಲ್ಲಿ ಮೊದಲ ಪ್ರಕರಣ ಪತ್ತೆಯಾಗಿದ್ದು ಯಾವಾಗ?: 1970ರಲ್ಲಿ ಮೊದಲ ಬಾರಿಗೆ ಮನುಷ್ಯನದಲ್ಲಿ ಈ ರೋಗ ತಗುಲಿತ್ತು. ಇದು ಹೆಚ್ಚಾಗಿ ಉಷ್ಣವಲಯದ ಆಫ್ರಿಕನ್ ದೇಶಗಳ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುತ್ತಿದೆ. ಇದರ ಪರಿಣಾಮವಾಗಿ, ಪ್ರಪಂಚದಾದ್ಯಂತದ ವಿಜ್ಞಾನಿಗಳು ಮತ್ತು ಆರೋಗ್ಯ ಇಲಾಖೆಗಳು ಇದನ್ನು ನಿರ್ಲಕ್ಷಿಸಿವೆ. ಇದರಿಂದಾಗಿ 2022ರಲ್ಲಿ ಮೊಟ್ಟಮೊದಲ ಬಾರಿಗೆ ಪ್ರಪಂಚದಾದ್ಯಂತ ಮಂಗನ ಕಾಯಿಲೆಯ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ಕಂಡುಬಂದಿದ್ದವು. 2022ರಲ್ಲಿ ಭಾರತದಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಈ ರೋಗವು ಪ್ರಸ್ತುತ ಆಫ್ರಿಕನ್ ದೇಶಗಳಲ್ಲಿ ಹರಡುತ್ತಿರುವುದರಿಂದ WHO ಅಂತರರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಮಂಕಿಪಾಕ್ಸ್‌ನಲ್ಲಿ ಎಷ್ಟು ವಿಧಗಳಿವೆ?: ಮಂಕಿಪಾಕ್ಸ್ ಅನ್ನು ಕ್ಲಾಡ್-1 (ಕಾಂಗೊ ಬೇಸಿನ್ ಕ್ಲೇಡ್) ಮತ್ತು ಕ್ಲಾಡ್-2 (ಪಶ್ಚಿಮ ಆಫ್ರಿಕಾದ ಕ್ಲೇಡ್) ಎಂಬ ಎರಡು ರೂಪಾಂತರಗಳಾಗಿ ವರ್ಗೀಕರಿಸಲಾಗಿದೆ. ಇದರಲ್ಲಿನ ಕ್ಲಾಡ್-1 ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನ್ಯುಮೋನಿಯಾ, ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ಉಸಿರಾಟದ ತೊಂದರೆಗಳು ಸಹ ಸಂಭವಿಸುತ್ತವೆ. ಮರಣ ಪ್ರಮಾಣವು ಶೇ 1ರಿಂದ 10ರಷ್ಟು ಆಗಿದೆ. ಕ್ಲಾಡ್-2 ಸ್ವಲ್ಪ ಕಡಿಮೆ ಅಪಾಯಕಾರಿ. ದೇಹದಲ್ಲಿ ಗುಳ್ಳೆಗಳು ಮತ್ತು ಜ್ವರದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮರಣ ಪ್ರಮಾಣವು ಶೇಕಡಾ 1ಕ್ಕಿಂತ ಕಡಿಮೆಯಿದೆ.
ಈ ರೋಗ ಹರಡುವುದು ಹೇಗೆ?: ನೇರ ಸಂಪರ್ಕದ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಮಂಗನ ಕಾಯಿಲೆ ಹರಡುತ್ತದೆ. ಬಾಯಿ ಮತ್ತು ಇತರ ಅಂಗಗಳ ಸ್ರವಿಸುವಿಕೆಯಿಂದ ಸೋಂಕಿನ ಸಾಧ್ಯತೆಯೂ ಇದೆ. ರೋಗಿಗಳು ಬಳಸಿದ ಬಟ್ಟೆ, ಇತರೆ ವಸ್ತುಗಳು, ಟ್ಯಾಟೂಗಳ ಹಾಕಿಸಿಕೊಳ್ಳುವುದರಿಂದಲು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು. ಸೋಂಕಿತ ಪ್ರಾಣಿಗಳನ್ನು ಸ್ಪರ್ಶಿಸುವುದು ಮತ್ತು ಆ ಪ್ರಾಣಿಗಳು ಕಚ್ಚುವುದರಿಂದ ವೈರಸ್ ಮನುಷ್ಯರಿಗೆ ಹರಡುತ್ತದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಕ್ಲಾಡ್-1 IB ರೂಪಾಂತರವು ಪ್ರಸ್ತುತ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಲೈಂಗಿಕ ಸಂಪರ್ಕದಿಂದಲೂ ಈ ರೂಪಾಂತರವು ವೇಗವಾಗಿ ಹರಡುತ್ತಿದೆ ಎಂದು ತಿಳಿಸುತ್ತಾರೆ ವೈದ್ಯರು.
ಎಂಪಾಕ್ಸ್‌ನ ಲಕ್ಷಣಗಳೇನು? WHO ಪ್ರಕಾರ, ಈ ವೈರಸ್ ಮಾನವನ ದೇಹವನ್ನು ಪ್ರವೇಶಿಸಿದ ನಂತರ, 1 ರಿಂದ 21 ದಿನಗಳವರೆಗೆ ಯಾವುದೇ ಸಮಯದಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಗುಳ್ಳೆಗಳು, ಜ್ವರ, ಒಣ ಗಂಟಲು, ತಲೆನೋವು, ಸ್ನಾಯು ನೋವು, ಬೆನ್ನು ನೋವು, ಆಲಸ್ಯ ಸಾಮಾನ್ಯವಾಗಿದೆ. ಇದು ಸುಮಾರು 2 ರಿಂದ 4 ವಾರಗಳವರೆಗೆ ಇರುತ್ತದೆ. ಇದು ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಅವಲಂಬಿಸಿರುತ್ತದೆ. ಕೆಲವರಿಗೆ ಬಾಯಿ, ಕಣ್ಣು, ಗಂಟಲು ಮತ್ತು ಖಾಸಗಿ ಭಾಗಗಳಲ್ಲಿ ಗುಳ್ಳೆಗಳು ಬರಬಹುದು.
ಎಂಪಾಕ್ಸ್ ತಡಗಟ್ಟುವುದು ಹೇಗೆ?:
- ಎಂಪಾಕ್ಸ್ ಅಥವಾ ಮಂಕಿಪಾಕ್ಸ್‌ನಂತೆ ಕಾಣುವ ದದ್ದು ಹೊಂದಿರುವ ಜನರನ್ನು ಸಮೀಪದಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ, ಸ್ವಲ್ಪ ಅಂತರವನ್ನು ಕಾಯ್ದುಕೊಳ್ಳಿ.
- ಸೋಂಕಿತ ಪ್ರಾಣಿ ಅಥವಾ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರುವ ಬಟ್ಟೆಗಳು, ಹೊದಿಕೆಗಳು ಅಥವಾ ಇತರ ವಸ್ತುಗಳನ್ನು ಮುಟ್ಟಬೇಡಿ.
- ಕೈಗಳನ್ನು ಸಾಬೂನು ನೀರಿನಿಂದ ನಿಯಮಿತವಾಗಿ ತೊಳೆಯಬೇಕು.
- ಕೈ ತೊಳೆಯುವುದು ಲಭ್ಯವಿಲ್ಲದಿದ್ದರೆ, ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಬಳಸಿ.
- ಅಂತಿಮವಾಗಿ, ತಜ್ಞರು ಹೇಳುವ ಪ್ರಕಾರ, ಈ ರೋಗದ ಲಕ್ಷಣಗಳನ್ನು ತಿಳಿದುಕೊಳ್ಳುವುದು ಮತ್ತು ಅದರಿಂದ ಪ್ರಭಾವಿತವಾಗದಂತೆ ಕಾಲಕಾಲಕ್ಕೆ ನಿಮ್ಮನ್ನು ಪರೀಕ್ಷಿಸಿಕೊಳ್ಳುವುದು ಬಹಳ ಮುಖ್ಯ.
ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ರಾಜಕೀಯ
Yathindra Siddaramaiah ಸದ್ದಿಲ್ಲದೆ ಶುರು ಮಾಡಿದ್ರಾ ಹೊಸ ರಾಜಕೀಯ ಲೆಕ್ಕಾಚಾರ? ಜಮೀರ್ ಭೇಟಿಗೆ ಹೆಚ್ಚಿದ ಕುತೂಹಲ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ Yathindra Siddaramaiah ಅವರು ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಹೆಚ್ಚು ಸಕ್ರಿಯರಾಗುತ್ತಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಯತೀಂದ್ರ ಭೇಟಿ ಮಾಡಿರುವುದು ಇದೀಗ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಯತೀಂದ್ರ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಖಾನ್ ಅವರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಈ ಭೇಟಿ ಸೌಹಾರ್ದಯುತ ಭೇಟಿಯೇ ಅಥವಾ ಇದರ ಹಿಂದೆ ರಾಜಕೀಯ ಲೆಕ್ಕಾಚಾರವಿದೆಯೇ ಎಂಬ ಬಗ್ಗೆ ಇದೀಗ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ.
ಸಿದ್ದರಾಮಯ್ಯ ಆಪ್ತರನ್ನು ಮತ್ತೆ ಒಗ್ಗೂಡಿಸುವ ಪ್ರಯತ್ನ?
ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ನಾಯಕರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಯತೀಂದ್ರ ಮುಂದಾಗಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ವಿಶೇಷವಾಗಿ, ಹಿಂದೆ ಸಿದ್ದರಾಮಯ್ಯ ಅವರೊಂದಿಗೆ ಕೆಲವು ವಿಚಾರಗಳಲ್ಲಿ ಅಂತರ ಕಾಯ್ದುಕೊಂಡಿದ್ದ ನಾಯಕರೊಂದಿಗೂ ಯತೀಂದ್ರ ಮತ್ತೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಭಾಗವಾಗಿಯೇ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಭೇಟಿಯನ್ನು ನೋಡಲಾಗುತ್ತಿದೆ.
ಇದಕ್ಕೂ ಮುನ್ನ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೂ ಯತೀಂದ್ರ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದರು. ಸತೀಶ್ ಜಾರಕಿಹೊಳಿ ಮತ್ತು ಜಮೀರ್ ಅಹ್ಮದ್ ಖಾನ್ ಅವರಂತಹ ಪ್ರಮುಖ ನಾಯಕರನ್ನು ಯತೀಂದ್ರ ಸತತವಾಗಿ ಭೇಟಿ ಮಾಡುತ್ತಿರುವುದು ರಾಜಕೀಯವಾಗಿ ಗಮನ ಸೆಳೆದಿದೆ.
ಭೇಟಿಗಳ ಹಿಂದೆ ರಾಜಕೀಯ ಕಾರ್ಯತಂತ್ರ?
ಯತೀಂದ್ರ ಅವರ ಈ ಭೇಟಿಗಳನ್ನು ಸದ್ಯಕ್ಕೆ ಸಾಮಾನ್ಯ ಸೌಹಾರ್ದಯುತ ಭೇಟಿಗಳೆಂದು ಹೇಳಲಾಗುತ್ತಿದ್ದರೂ, ರಾಜಕೀಯ ಬೆಳವಣಿಗೆಗಳು ಹಾಗೂ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆದಿರಬಹುದೆಂಬ ಮಾತುಗಳು ಕೇಳಿಬರುತ್ತಿವೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ರಾಜಕೀಯ ಸಮೀಕರಣಗಳು ಹೇಗೆ ಬದಲಾಗಲಿವೆ ಎಂಬುದು ಕುತೂಹಲ ಮೂಡಿಸಿರುವ ಸಂದರ್ಭದಲ್ಲೇ ಯತೀಂದ್ರ ಅವರ ಚಟುವಟಿಕೆಗಳು ಹೆಚ್ಚಾಗಿವೆ.
ತಂದೆ ಸಿದ್ದರಾಮಯ್ಯ ಅವರ ರಾಜಕೀಯ ಅನುಭವ ಮತ್ತು ಪ್ರಭಾವವನ್ನು ಬಳಸಿಕೊಂಡು ಪಕ್ಷದ ಪ್ರಮುಖ ನಾಯಕರೊಂದಿಗೆ ಬಾಂಧವ್ಯ ಬಲಪಡಿಸುವ ಪ್ರಯತ್ನ ಇದಾಗಿರಬಹುದು ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.
ಆದರೆ, ಜಮೀರ್ ಅಹ್ಮದ್ ಖಾನ್ ಮತ್ತು ಸತೀಶ್ ಜಾರಕಿಹೊಳಿ ಅವರೊಂದಿಗಿನ ಯತೀಂದ್ರ ಸಿದ್ದರಾಮಯ್ಯ ಅವರ ಭೇಟಿಗಳ ನಿಖರ ರಾಜಕೀಯ ಉದ್ದೇಶವೇನು ಎಂಬುದು ಇನ್ನೂ ಅಧಿಕೃತವಾಗಿ ಸ್ಪಷ್ಟವಾಗಿಲ್ಲ. ಹೀಗಾಗಿ ಈ ಸರಣಿ ಭೇಟಿಗಳು ಮುಂದಿನ ದಿನಗಳಲ್ಲಿ ಯಾವ ರೀತಿಯ ರಾಜಕೀಯ ಬೆಳವಣಿಗೆಗೆ ಕಾರಣವಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
ದೇಶ
Indian Army ಗೆ ಅಮೆರಿಕದ ಜಾವೆಲಿನ್ ಕ್ಷಿಪಣಿ! ಚೀನಾ-ಪಾಕ್ ಗಡಿಗೆ ಮತ್ತಷ್ಟು ಬಲ; ದೊಡ್ಡ ಘೋಷಣೆ
ನವದೆಹಲಿ: Indian Army ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಯುದ್ಧಭೂಮಿಯಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿರುವ ಜಾವೆಲಿನ್ ಆಂಟಿ-ಟ್ಯಾಂಕ್ ಕ್ಷಿಪಣಿ ವ್ಯವಸ್ಥೆಯನ್ನು ಅಮೆರಿಕದಿಂದ ಖರೀದಿಸಲು ಭಾರತ ಯೋಜಿಸುತ್ತಿದೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ತಿಳಿಸಿದ್ದಾರೆ.
ಒಬ್ಬ ಸೈನಿಕನೇ ಹೊತ್ತೊಯ್ಯಬಹುದಾದ ಮಧ್ಯಮ ಶ್ರೇಣಿಯ ಜಾವೆಲಿನ್ ಕ್ಷಿಪಣಿ ವ್ಯವಸ್ಥೆಯು ‘ಫೈರ್ ಆ್ಯಂಡ್ ಫರ್ಗೆಟ್’ ತಂತ್ರಜ್ಞಾನವನ್ನು ಹೊಂದಿದೆ. ಅಂದರೆ ಕ್ಷಿಪಣಿಯನ್ನು ಗುರಿಯತ್ತ ಉಡಾಯಿಸಿದ ಬಳಿಕ ಅದನ್ನು ನಿರಂತರವಾಗಿ ನಿಯಂತ್ರಿಸುವ ಅಗತ್ಯವಿಲ್ಲ. ಈ ಸಾಮರ್ಥ್ಯವು ಆಧುನಿಕ ಯುದ್ಧಭೂಮಿಯಲ್ಲಿ ಮಹತ್ವದ್ದಾಗಿದೆ.
ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ FGM-148 Javelin ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕದ ವಿದೇಶಾಂಗ ಇಲಾಖೆ ಕಳೆದ ವರ್ಷದ ನವೆಂಬರ್‌ನಲ್ಲಿ ಅನುಮೋದನೆ ನೀಡಿತ್ತು.
ಜಾವೆಲಿನ್ ಖರೀದಿ ಕುರಿತು ಅಮೆರಿಕದಿಂದ ಮಾಹಿತಿ
ಈ ಕುರಿತು ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಯುದ್ಧ-ಪರೀಕ್ಷಿತ ಜಾವೆಲಿನ್ ಆಂಟಿ-ಟ್ಯಾಂಕ್ ವ್ಯವಸ್ಥೆಯನ್ನು ಖರೀದಿಸಲು ಭಾರತ ಯೋಜಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮೇ 2026ರಲ್ಲಿ ನಡೆದ ಶಾಂಗ್ರಿ-ಲಾ ಸಂವಾದದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಪ್ರಸ್ತಾಪಿಸಿದ ರಕ್ಷಣಾ ಸಹಕಾರದ ಮುಂದುವರಿದ ಭಾಗವಾಗಿ ಈ ಬೆಳವಣಿಗೆ ನಡೆದಿದೆ ಎಂದು ಗೋರ್ ಹೇಳಿದ್ದಾರೆ.
ಜಾವೆಲಿನ್ ವ್ಯವಸ್ಥೆಯ ಖರೀದಿಯು ಅಮೆರಿಕ-ಭಾರತ ರಕ್ಷಣಾ ಸಂಬಂಧದಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ಅಲ್ಲದೆ, ಭವಿಷ್ಯದಲ್ಲಿ ಈ ಶಸ್ತ್ರಾಸ್ತ್ರ ವ್ಯವಸ್ಥೆಯ ಜಂಟಿ ಉತ್ಪಾದನೆಗೆ ಅವಕಾಶಗಳನ್ನು ತೆರೆಯಬಹುದು ಎಂದು ಅವರು ತಿಳಿಸಿದ್ದಾರೆ.
ಎಷ್ಟು ಜಾವೆಲಿನ್ ಕ್ಷಿಪಣಿ ಖರೀದಿ?
ಸದ್ಯ ಭಾರತವು ಎಷ್ಟು ಸಂಖ್ಯೆಯ ಜಾವೆಲಿನ್ ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಲಿದೆ ಎಂಬ ನಿಖರ ಮಾಹಿತಿ ಬಹಿರಂಗವಾಗಿಲ್ಲ. ಇದೇ ರೀತಿ ಒಪ್ಪಂದದ ಒಟ್ಟು ಮೌಲ್ಯ ಎಷ್ಟು ಎಂಬುದೂ ಇನ್ನೂ ಸ್ಪಷ್ಟವಾಗಿಲ್ಲ.
ಜಾವೆಲಿನ್ ಕ್ಷಿಪಣಿ ವ್ಯವಸ್ಥೆಯನ್ನು ಮುಖ್ಯವಾಗಿ ಶತ್ರುಗಳ ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಗುರಿಯಾಗಿಸಲು ಬಳಸಲಾಗುತ್ತದೆ. ಅದರ ಸಾಗಾಟದ ಸುಲಭತೆ ಹಾಗೂ ‘ಫೈರ್ ಆ್ಯಂಡ್ ಫರ್ಗೆಟ್’ ಸಾಮರ್ಥ್ಯದಿಂದಾಗಿ ಸೈನಿಕರಿಗೆ ಯುದ್ಧಭೂಮಿಯಲ್ಲಿ ಹೆಚ್ಚಿನ ಚಲನೆಯ ಸ್ವಾತಂತ್ರ್ಯ ದೊರೆಯುತ್ತದೆ.
ಭಾರತ ಈಗಾಗಲೇ ತನ್ನ ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ವಿವಿಧ ದೇಶಗಳಿಂದ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನಗಳನ್ನು ಪಡೆಯುವುದರ ಜೊತೆಗೆ ದೇಶೀಯವಾಗಿ ಶಸ್ತ್ರಾಸ್ತ್ರಗಳ ಉತ್ಪಾದನೆಗೂ ಆದ್ಯತೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಜಾವೆಲಿನ್ ವ್ಯವಸ್ಥೆಯ ಖರೀದಿ ಹಾಗೂ ಭವಿಷ್ಯದಲ್ಲಿ ಜಂಟಿ ಉತ್ಪಾದನೆಯ ಸಾಧ್ಯತೆಗಳು ಭಾರತ-ಅಮೆರಿಕ ರಕ್ಷಣಾ ಸಹಕಾರಕ್ಕೆ ಮತ್ತಷ್ಟು ವೇಗ ನೀಡುವ ನಿರೀಕ್ಷೆಯಿದೆ.
ರಾಜ್ಯ
Mysuru Dasara ಗಜಪಡೆ ಅರಮನೆಗೆ ಎಂಟ್ರಿ; ಜನಸಂದಣಿ ಕಂಡು ಶ್ರೀರಾಮ ಆನೆ ಗಾಬರಿ, ಬಳಿಕ ಏನಾಯ್ತು?
ಮೈಸೂರು: ವಿಶ್ವವಿಖ್ಯಾತ Mysuru Dasara 2026 ಹಿನ್ನೆಲೆಯಲ್ಲಿ ದಸರಾ ಗಜಪಡೆಗಳಿಗೆ ಮೈಸೂರು ಅರಣ್ಯ ಭವನದಲ್ಲಿ ಇಂದು ಬೆಳಗ್ಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ಒಟ್ಟು 9 ದಸರಾ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗಜಪಡೆಗಳು ಮೈಸೂರು ಅರಮನೆಯತ್ತ ಪ್ರಯಾಣ ಬೆಳೆಸಿದವು.
ಅರಮನೆ ದ್ವಾರಕ್ಕೆ ಆಗಮಿಸಿದ ದಸರಾ ಗಜಪಡೆಗಳನ್ನು ಮೈಸೂರು ಜಿಲ್ಲಾಡಳಿತ ವತಿಯಿಂದ ಸಂಪ್ರದಾಯಬದ್ಧವಾಗಿ ಸ್ವಾಗತಿಸಲಾಯಿತು. ಶುಭ ಲಗ್ನದಲ್ಲಿ ಆನೆಗಳು ಅರಮನೆ ಪ್ರವೇಶಿಸಬೇಕಿದ್ದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಸಾಂಪ್ರದಾಯಿಕ ಪೂಜೆ ಹಾಗೂ ಸ್ವಾಗತದ ಬಳಿಕ ದಸರಾ ಆನೆಗಳು ಅರಮನೆ ಆವರಣ ಪ್ರವೇಶಿಸಿದವು.
ಅರಮನೆ ಪ್ರವೇಶದ ವೇಳೆ ಶ್ರೀರಾಮ ಆನೆಗೆ ಗಾಬರಿ
ಇದೇ ವೇಳೆ ಮೈಸೂರು ಅಂಬಾವಿಲಾಸ ಅರಮನೆ ಪ್ರವೇಶಿಸುವ ಸಂದರ್ಭದಲ್ಲಿ ಶ್ರೀರಾಮ ಆನೆ ಏಕಾಏಕಿ ಗಾಬರಿಗೊಂಡ ಘಟನೆ ನಡೆದಿದೆ. ಅರಮನೆ ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದನ್ನು ಕಂಡು ಆನೆ ಕೆಲಕಾಲ ಬೆಚ್ಚಿಬಿದ್ದು ಹಿಂದಕ್ಕೆ ಸರಿಯಲು ಯತ್ನಿಸಿತು.
ಅರಮನೆ ದ್ವಾರದ ಬಳಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳು, ಜನರ ಚಲನವಲನ ಹಾಗೂ ಸುತ್ತಮುತ್ತಲಿನ ಗದ್ದಲದಿಂದ ಶ್ರೀರಾಮ ಆನೆ ಮತ್ತಷ್ಟು ಆತಂಕಗೊಂಡಿತು. ಇದರ ನಡುವೆ ಕೇಳಿಬಂದ ನಾದಸ್ವರದ ಸದ್ದಿಗೂ ಆನೆ ಪ್ರತಿಕ್ರಿಯಿಸಿ, ಅರಮನೆ ಆವರಣ ಪ್ರವೇಶಿಸಲು ಹಿಂದೇಟು ಹಾಕಿತು.
ಶ್ರೀರಾಮ ಆನೆ ಗಾಬರಿಗೊಂಡಿದ್ದರಿಂದ ಸ್ಥಳದಲ್ಲಿದ್ದ ಜನರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿಯನ್ನು ಗಮನಿಸಿದ ಮಾವುತರು ಹಾಗೂ ಕಾವಾಡಿಗರು ತಕ್ಷಣವೇ ಆನೆಯನ್ನು ನಿಯಂತ್ರಣಕ್ಕೆ ತರಲು ಮುಂದಾದರು.
ಮಾವುತರು, ಕಾವಾಡಿಗರಿಂದ ಆನೆ ಹತೋಟಿ
ಮಾವುತರು ಮತ್ತು ಕಾವಾಡಿಗರು ಆನೆಯನ್ನು ಸಮಾಧಾನಪಡಿಸಿ ಹತೋಟಿಗೆ ತಂದ ಬಳಿಕ, ಯಾವುದೇ ತೊಂದರೆಯಾಗದಂತೆ ಸುರಕ್ಷಿತವಾಗಿ ಅರಮನೆ ಆವರಣದೊಳಗೆ ಕರೆದುಕೊಂಡು ಹೋದರು. ಇದರಿಂದ ಸ್ಥಳದಲ್ಲಿದ್ದವರು ನಿಟ್ಟುಸಿರು ಬಿಟ್ಟರು.
ಮೈಸೂರು ದಸರಾ ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಯ ಆಗಮನದೊಂದಿಗೆ ಅರಮನೆ ಆವರಣದಲ್ಲಿ ದಸರಾ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ. ಆನೆಗಳ ಆರೋಗ್ಯ, ಸುರಕ್ಷತೆ ಮತ್ತು ತರಬೇತಿಗೆ ಅರಣ್ಯ ಇಲಾಖೆ ಹಾಗೂ ಮಾವುತರು ವಿಶೇಷ ಗಮನ ಹರಿಸುತ್ತಿದ್ದಾರೆ.
-
ದೇಶ12 ಗಂಟೆಗಳು agoKPSC Recruitment Scam: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ಗಂಭೀರ ಆರೋಪ; ನೇಮಕಾತಿ ದಂಧೆ ಬಯಲು ಎಂದ ಕೇಂದ್ರ ಸಚಿವ
-
ದೇಶ12 ಗಂಟೆಗಳು agoNepal Flood Horror: ಮಹಿಳೆಯ ಮೃತದೇಹದಿಂದ ಆಭರಣ ಕಳವು; ವೈರಲ್ ವಿಡಿಯೋ ಆಧರಿಸಿ ಇಬ್ಬರ ಬಂಧನ
-
ಬೆಂಗಳೂರು13 ಗಂಟೆಗಳು agoMake My Propertyz ಟೈಟಲ್ ಸ್ಪಾನ್ಸರ್; ಮೋಹನ್, ಆಂಜನಪ್ಪ, ಹರೀಶ್, ಸಂತೋಷ್, ಗೌರೀಶ್, Hosa Suddi, ಶಿವಕುಮಾರ್ರಿಂದ ಕ್ರೀಡೆಗೆ ಬೆಂಬಲ!
-
ರಾಜ್ಯ11 ಗಂಟೆಗಳು agoMysuru Dasara ಗಜಪಡೆ ಅರಮನೆಗೆ ಎಂಟ್ರಿ; ಜನಸಂದಣಿ ಕಂಡು ಶ್ರೀರಾಮ ಆನೆ ಗಾಬರಿ, ಬಳಿಕ ಏನಾಯ್ತು?
-
ರಾಜ್ಯ11 ಗಂಟೆಗಳು agoKRS ಡ್ಯಾಂಗೆ ಭಾರೀ ಶಾಕ್! ಒಳಹರಿವು ದಿಢೀರ್ ಕುಸಿತ; ಸದ್ಯದ ನೀರಿನ ಮಟ್ಟ ಎಷ್ಟು ಗೊತ್ತಾ?
-
ದೇಶ9 ಗಂಟೆಗಳು agoIndian Army ಗೆ ಅಮೆರಿಕದ ಜಾವೆಲಿನ್ ಕ್ಷಿಪಣಿ! ಚೀನಾ-ಪಾಕ್ ಗಡಿಗೆ ಮತ್ತಷ್ಟು ಬಲ; ದೊಡ್ಡ ಘೋಷಣೆ
-
ರಾಜಕೀಯ9 ಗಂಟೆಗಳು agoYathindra Siddaramaiah ಸದ್ದಿಲ್ಲದೆ ಶುರು ಮಾಡಿದ್ರಾ ಹೊಸ ರಾಜಕೀಯ ಲೆಕ್ಕಾಚಾರ? ಜಮೀರ್ ಭೇಟಿಗೆ ಹೆಚ್ಚಿದ ಕುತೂಹಲ
-
ದೇಶ15 ಗಂಟೆಗಳು agoPM Narendra Modi Foreign Visit: ಮೋದಿ 4 ದಿನಗಳ ವಿದೇಶ ಪ್ರವಾಸ, ಎಸ್ಸಿಒ ಶೃಂಗಸಭೆಯಲ್ಲಿ ಭಾಗಿ
