ಅಪರಾಧ
ಕಾರಾಗೃಹದಲ್ಲಿ ವಿಶೇಷ ಆತಿಥ್ಯ ಪ್ರಕರಣ, ಕೋರ್ಟ್ ಅನುಮತಿ ಪಡೆದು ತನಿಖೆ: ಬೆಂಗಳೂರು ನಗರ ಪೊಲೀಸ್ ಆಯುಕ್ತ – Darshan in Jail
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಸೇರಿ ರೌಡಿಗಳಿಗೆ ವಿಶೇಷ ಆತಿಥ್ಯ ಕಲ್ಪಿಸಿದ ಸಂಬಂಧ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಪ್ರಕರಣ ತನಿಖೆ ಕುರಿತಂತೆ ಇಂದು ಮಧ್ಯಾಹ್ನ ನಂತರ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಭೇಟಿ ನೀಡಿ ತನಿಖೆ ಕುರಿತು ಮಾಹಿತಿ ಪಡೆಯಲಿದ್ದಾರೆ.
ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ಹಿನ್ನೆಲೆ ಅಧೀಕ್ಷಕ ಹಾಗೂ ಸೂಪರಿಡೆಂಟೆಂಟ್ ಸೇರಿದಂತೆ 9 ಮಂದಿ ಜೈಲು ಸಿಬ್ಬಂದಿಯನ್ನ ಅಮಾನತುಗೊಳಿಸಲಾಗಿದೆ. ದರ್ಶನ್ ಕುಳಿತುಕೊಂಡಿರುವ ಫೋಟೊ ತೆಗೆದ ವಿಚಾರಣಾಧೀನ ಕೈದಿ ಹಾಗೂ ಸೆಲ್ನಲ್ಲಿ ದರ್ಶನ್ ಜೊತೆ ಕುಳಿತಿರುವ ಮತ್ತೊಬ್ಬ ಕೈದಿ ಮೊಬೈಲ್ ಬಳಸಿರುವುದು ಬೆಳಕಿಗೆ ಬಂದಿದೆ. ಕೆಲ ಸಂದರ್ಭಗಳನ್ನು ಹೊರತುಪಡಿಸಿ ಅಧೀಕ್ಷಕರಿಗೂ ಮೊಬೈಲ್ ಬಳಕೆ ನಿಷಿದ್ಧ. ಆದಾಗ್ಯೂ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಐಎಸ್ಎಫ್) ಸಿಬ್ಬಂದಿಯ ಕಣ್ತಪ್ಪಿಸಿ ಮೊಬೈಲ್ ಬಳಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ದರ್ಶನ್ ಸೇರಿದಂತೆ ಇನ್ನಿತರ ಆರೋಪಿಗಳು ಮೊಬೈಲ್ ಬಳಸುತ್ತಿರುವುದು ಭದ್ರತಾ ಸಿಬ್ಬಂದಿಗೆ ಗಮನಕ್ಕೆ ಬಂದಿತ್ತಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜೈಲಿನಲ್ಲಿ ಭದ್ರತಾ ಜವಾಬ್ದಾರಿ ಸಂಪೂರ್ಣವಾಗಿ ಕೆಐಎಸ್ಎಫ್ ಇಲಾಖೆ ಮೇಲಿರಲಿದೆ. ಕೇಂದ್ರ ಕಾರಾಗೃಹ ಭದ್ರತೆಗಗಾಗಿ ಓರ್ವ ಅಸಿಸ್ಟೆಂಟ್ ಕಮಾಂಡೆಂಟ್ ಇಬ್ಬರು ಇನ್ಸ್ಪೆಕ್ಟರ್ಗಳು ಸೇರಿ 100ಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಐಎಸ್ಎಫ್ ಇಬ್ಬರು ಇನ್ಸ್ಪೆಕ್ಟರ್ಗಳು ಕಳೆದ ಆರೇಳು ವರ್ಷದಿಂದ ಇದೇ ಜೈಲಿನ ಭದ್ರತಾ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಜೈಲಿನ ಹೊರಭಾಗದಲ್ಲಿರುವ ಚೆಕ್ ಪಾಯಿಂಟ್, ಜೈಲಿನ ಮುಖ್ಯ ಪ್ರವೇಶದ್ವಾರ ಸೇರಿದಂತೆ ಜೈಲಿನ ಸುತ್ತಮತ್ತಲಿನ ವಾಚ್ ಟವರ್ನಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಾರೆ. ಜೈಲಿಗೆ ಎಂಟ್ರಿಯಾಗುವ ದಿನಸಿ ಪದಾರ್ಥಗಳಿಂದ ಹಿಡಿದು ಎಲ್ಲಾ ವಸ್ತುಗಳನ್ನ ಈ ಅಧಿಕಾರಿಗಳು ತಪಾಸಣೆ ಮಾಡುತ್ತಾರೆ. ಅಲ್ಲದೆ ಅಲ್ಲಿನ ಮುಖ್ಯ ಅಧೀಕ್ಷರು ಸೇರಿದಂತೆ ಎಲ್ಲಾ ಅಧಿಕಾರಿ ಸಿಬ್ಬಂದಿಯನ್ನ ಈ ಅಧಿಕಾರಿಗಳು ಎಂಟ್ರಿ ಮತ್ತು ಎಗ್ಸಿಟ್ನಲ್ಲಿ ತಪಾಸಣೆ ಮಾಡುತ್ತಾರೆ. ಸದ್ಯ ಜೈಲು ಅಧಿಕಾರಿಗಳ ವಿಚಾರಣೆ ಮಾಡುವುದಕ್ಕೆ ಮುನ್ನ ಈ ಅಧಿಕಾರಿಗಳ ವಿಚಾರಣೆ ಮಾಡಲು ಮುಂದಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೋರ್ಟ್ ಅನುಮತಿ ಪಡೆದು ತನಿಖೆ: ಆರೋಪಿಗಳಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿರುವುದರ ಕುರಿತು ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಓರ್ವ ಎಸಿಪಿ ಹಾಗೂ ಇಬ್ಬರು ಇನ್ಸ್‌ಪೆಕ್ಟರ್ಸ್ ನೇತೃತ್ವದಲ್ಲಿ ತನಿಖೆ ಆರಂಭವಾಗಲಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಕಾರಾಗೃಹದ ವಿಷಯಗಳ ಕುರಿತು ತನಿಖೆಗೆ ನ್ಯಾಯಾಲಯದ ಅನುಮತಿ ಅಗತ್ಯವಿರುವುದರಿಂದ, ಅನುಮತಿ ಪಡೆದುಕೊಂಡು ತನಿಖೆ ಆರಂಭಿಸಲಾಗುತ್ತದೆ. ನಂತರದಲ್ಲಿ ತನಿಖೆಯ ಭಾಗವಾಗಿ ಆರೋಪಿಗಳನ್ನ ಕಸ್ಟಡಿಗೆ ಪಡೆಯುವುದು ಅಗತ್ಯವಿದ್ದರೆ ಪಡೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕಾರಾಗೃಹದಲ್ಲಿರುವ ಕೆಲ ಅಪರಾಧಿಗಳು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದರ ಕುರಿತು ಮಾಹಿತಿ ಲಭ್ಯವಾದುದರಿಂದ ಕಳೆದ ಶನಿವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಯಾವುದೇ ರೀತಿ ಪೂರಕ ದಾಖಲೆಗಳು ಲಭ್ಯವಾಗಿರಲಿಲ್ಲ, ಆದರೆ ದಾಳಿಗೂ ಪೂರ್ವದಲ್ಲೇ ಕೆಲವು ವಸ್ತುಗಳನ್ನ ಬೇರೆಡೆ ಸಾಗಿಸಿರುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿರುವುದರಿಂದ ತನಿಖೆ ನಡೆಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಆಯುಕ್ತರು ಮಾಹಿತಿ ನೀಡಿದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೋಕಾ ಕಾಯ್ದೆಯಡಿ ಬಂಧಿಸಲ್ಪಟ್ಟಿರುವ ಆರೋಪಿಗಳೂ ಸೇರಿದಂತೆ ಅನೇಕ ಆರೋಪಿಗಳಿದ್ದು, ಅವರು ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಾಧ್ಯತೆಯಿರುವುದರಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಕಾರಾಗೃಹ ಇಲಾಖೆಗೆ ಮನವಿ ಮಾಡಿಕೊಂಡಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದರು.
ಅಪರಾಧ
ಐಪಿಎಲ್ ಟಿಕೆಟ್ ಕ್ರೇಜ್ ನಡುವೆ ದೊಡ್ಡ ಮೋಸ: ಟೆಕ್ಕಿಗೆ ₹1.46 ಲಕ್ಷ ನಷ್ಟ!
ಬೆಂಗಳೂರು, ಏಪ್ರಿಲ್ 04: ನಗರದಲ್ಲಿ IPL 2026 ಟಿಕೆಟ್ ಕ್ರೇಜ್ ಜೋರಾಗಿರುವ ನಡುವೆ ಆನ್ಲೈನ್ ಮೋಸದ ಪ್ರಕರಣವೂ ಬೆಳಕಿಗೆ ಬಂದಿದೆ. ಅನಧಿಕೃತ ಪ್ಲಾಟ್ಫಾರ್ಮ್ ಮೂಲಕ ಟಿಕೆಟ್ ಖರೀದಿಸಲು ಯತ್ನಿಸಿದ ಟೆಕ್ಕಿ ಒಬ್ಬರು ₹1.46 ಲಕ್ಷ ಕಳೆದುಕೊಂಡಿರುವ ಘಟನೆ ಕ್ರಿಕೆಟ್ ಅಭಿಮಾನಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.
Bengaluruನ ಬಿ. ನಾರಾಯಣಪುರ ನಿವಾಸಿಯಾದ 25 ವರ್ಷದ ಟೆಕ್ಕಿ, Instagramನಲ್ಲಿ ಪರಿಚಯವಾದ ವ್ಯಕ್ತಿಯಿಂದ ಮೋಸಕ್ಕೆ ಒಳಗಾಗಿದ್ದಾರೆ. ಆತ ತನ್ನನ್ನು M. Chinnaswamy Stadium ಟಿಕೆಟ್ ಕೌಂಟರ್ ಹಿರಿಯ ಮೇಲ್ವಿಚಾರಕ ಸುಮಿತ್ ಬಿಸ್ವಾಲ್ ಎಂದು ಪರಿಚಯಿಸಿಕೊಂಡು ನಂಬಿಕೆ ಮೂಡಿಸಿದ್ದಾನೆ.
ಮೊದಲಿಗೆ ಎರಡು ಟಿಕೆಟ್ಗಳಿಗೆ ₹3,700 ಕೇಳಿದ ಆರೋಪಿಯು, ಬಳಿಕ ಭದ್ರತಾ ಠೇವಣಿ, ಐಡಿ ಕಾರ್ಡ್ ಮತ್ತು ಫುಡ್ ಕೂಪನ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಡೆದುಕೊಂಡಿದ್ದಾನೆ. ಪಂದ್ಯದ ದಿನ ಗೇಟ್ ನಂ.10 ಬಳಿ ಬರಲು ಹೇಳಿ ನಕಲಿ ಇಮೇಲ್ ದೃಢೀಕರಣವನ್ನೂ ಕಳುಹಿಸಿದ್ದಾನೆ.
ಆತನ ಮಾತು ನಂಬಿದ ಟೆಕ್ಕಿ, ತನ್ನ ಹಾಗೂ ತಾಯಿಯ ಖಾತೆಯಿಂದ ಯುಪಿಐ ಮೂಲಕ ಒಟ್ಟು ₹1.46 ಲಕ್ಷ ವರ್ಗಾವಣೆ ಮಾಡಿದ್ದಾರೆ. ಆದರೆ ಹಣ ಪಡೆದ ಬಳಿಕ ಆರೋಪಿಯು ಟಿಕೆಟ್ ನೀಡದೆ ಸಂಪರ್ಕ ಕಡಿತಗೊಳಿಸಿದ್ದಾನೆ.
ಈ ಕುರಿತು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಐಪಿಎಲ್ ಟಿಕೆಟ್ ಖರೀದಿಸುವಾಗ ಅಧಿಕೃತ ವೆಬ್ಸೈಟ್ ಅಥವಾ ಮಾನ್ಯ ಮಾರಾಟಗಾರರ ಮೂಲಕವೇ ಖರೀದಿಸಲು ಸಲಹೆ ನೀಡಿದ್ದಾರೆ. ಅನಧಿಕೃತ ಲಿಂಕ್ಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವ್ಯವಹಾರ ಮಾಡುವುದರಿಂದ ಇಂತಹ ಮೋಸಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಅಪರಾಧ
ಶಿಡ್ಲಘಟ್ಟದಲ್ಲಿ ರೌಡಿ ಶೀಟರ್ಗಳಿಗೆ ಕಟ್ಟೆಚ್ಚರ: ಗೈರುಹಾಜರಾದರೆ ಕಠಿಣ ಕ್ರಮ
ಶಿಡ್ಲಘಟ್ಟ: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ರೌಡಿ ಶೀಟರ್ಗಳ ಮೇಲೆ ನಿಗಾವಣೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.
ರೌಡಿ ಶೀಟರ್ಗಳ ಪರೇಡ್
ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಮುರಳಿಧರ್ ನೇತೃತ್ವದಲ್ಲಿ ಶುಕ್ರವಾರ ರೌಡಿ ಶೀಟರ್ಗಳ ಪರೇಡ್ ನಡೆಯಿತು. ಠಾಣಾ ವ್ಯಾಪ್ತಿಯ ಎಲ್ಲಾ ರೌಡಿ ಶೀಟರ್ಗಳನ್ನು ಕಡ್ಡಾಯವಾಗಿ ಹಾಜರುಪಡಿಸಿ ಪರಿಶೀಲನೆ ನಡೆಸಲಾಯಿತು.
ಗೈರುಹಾಜರಾದರೆ ಕಾನೂನು ಕ್ರಮ
ಪರೇಡ್ಗೆ ಗೈರುಹಾಜರಾಗುವ ರೌಡಿ ಶೀಟರ್ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಮುರಳಿಧರ್ ಎಚ್ಚರಿಕೆ ನೀಡಿದ್ದಾರೆ.
ಅಪರಾಧ ನಿಯಂತ್ರಣಕ್ಕೆ ಕ್ರಮ
ಶಿಡ್ಲಘಟ್ಟ ನಗರ, ಗ್ರಾಮಾಂತರ ಹಾಗೂ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಯುವುದು ಪ್ರಮುಖ ಗುರಿಯಾಗಿದೆ. ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರಿಗೆ ಭದ್ರತೆ
ಇಂತಹ ನಿಯಮಿತ ಪರೇಡ್ಗಳ ಮೂಲಕ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವುದರ ಜೊತೆಗೆ ಸಾರ್ವಜನಿಕರಲ್ಲಿ ಭದ್ರತಾ ಭಾವನೆ ಮೂಡಿಸುವುದು ಪೊಲೀಸರ ಉದ್ದೇಶವಾಗಿದೆ.
ಅಧಿಕಾರಿಗಳ ಉಪಸ್ಥಿತಿ
ಈ ಸಂದರ್ಭದಲ್ಲಿ ಸಿಪಿಐ ಆನಂದ್, ಪಿಎಸ್ಐ ವೇಣುಗೋಪಾಲ್, ಸುನಿಲ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಅಪರಾಧ
ಕಲಬುರಗಿಯಲ್ಲಿ ಭೀಕರ ಹತ್ಯೆ: ಮಾಜಿ ಸಚಿವರ ಸಂಬಂಧಿ ಫೈನಾನ್ಸ್ ಕಚೇರಿಯಲ್ಲೇ ಕೊಚ್ಚಿ ಕೊಲೆ
ಕಲಬುರಗಿ: ನಗರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವ ಬೆನ್ನಲ್ಲೇ ಮತ್ತೊಂದು ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಫೈನಾನ್ಸ್ ಕಚೇರಿಗೆ ನುಗ್ಗಿ ಮಾಜಿ ಸಚಿವರ ಸಂಬಂಧಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಫೈನಾನ್ಸ್ ಕಚೇರಿಯಲ್ಲೇ ಹತ್ಯೆ
ಪಿ & ಟಿ ಕಾಲೋನಿಯ ವೆಂಕಟೇಶ್ವರ ಕಾಂಪ್ಲೆಕ್ಸ್ನಲ್ಲಿ ನಡೆದ ಈ ಘಟನೆದಲ್ಲಿ 45 ವರ್ಷದ ಅನೀಲ್ ರಾಠೋಡ್ ಎಂಬವರು ಸಾವನ್ನಪ್ಪಿದ್ದಾರೆ. ಅವರು ಸಿದ್ದೇಶ್ವರ ಬಡಾವಣೆಯ ನಿವಾಸಿಯಾಗಿದ್ದು, ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು.
ಹಣಕಾಸು ವ್ಯವಹಾರವೇ ಕಾರಣ?
ಘಟನೆ ನಡೆದ ರಾತ್ರಿ, ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ಕಚೇರಿಗೆ ನುಗ್ಗಿ ಅನೀಲ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಹಣಕಾಸಿನ ವಿಚಾರಕ್ಕೆ ಜಗಳ ತೀವ್ರಗೊಂಡಿದ್ದು, ಬಳಿಕ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆಗೈದು ಪರಾರಿಯಾಗಿದ್ದಾರೆ. ಸಾಲ ನೀಡಿದ ಹಣ ವಾಪಸ್ ಕೇಳಿದ್ದಕ್ಕೆ ಈ ಕೃತ್ಯ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾವು
ಹಠಾತ್ ದಾಳಿ ನಡೆದಾಗ ಅನೀಲ್ ರಾಠೋಡ್ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಕಚೇರಿ ಬಾಗಿಲು ಬಳಿ ಅವರನ್ನು ಬೆನ್ನಟ್ಟಿ ಕೊಚ್ಚಿ ಕೊಲೆ ಮಾಡಲಾಗಿದೆ.
ಪೊಲೀಸರ ತನಿಖೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಬಳಸಿಕೊಂಡು ಸಾಕ್ಷ್ಯ ಸಂಗ್ರಹಿಸಲಾಗಿದೆ. ಹಂತಕರ ಬಂಧನಕ್ಕಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಕುಟುಂಬದ ಆರೋಪ
ಮೃತನ ಕುಟುಂಬಸ್ಥರು, “ಹಣಕಾಸಿನ ವಿಚಾರಕ್ಕೆ ನಮ್ಮ ಮಗನನ್ನು ಕೊಲೆ ಮಾಡಿದ್ದಾರೆ. ಜೀವ ಬೆದರಿಕೆ ಇದೆ ಎಂದು ಮೊದಲು ಹೇಳಿಕೊಂಡಿದ್ದ” ಎಂದು ಆರೋಪಿಸಿದ್ದಾರೆ.
ಹೆಚ್ಚುತ್ತಿರುವ ಅಪರಾಧ
ನಗರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸರಣಿ ಹತ್ಯೆಗಳು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ. ಈ ಪ್ರಕರಣದ ನಿಖರ ಕಾರಣ ತನಿಖೆಯ ಬಳಿಕವೇ ಬಹಿರಂಗವಾಗಲಿದೆ.
