ರಾಜಕೀಯ
ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸಲು ಹೈಕಮಾಂಡ್ ಹೇಳಿದರೆ, ಅದಕ್ಕೂ ಬದ್ಧ: ಸಿ.ಪಿ.ಯೋಗೇಶ್ವರ್ – C P Yogeshwar

ರಾಮನಗರ: “ಉಪ ಚುನಾವಣೆಯಲ್ಲಿ ತಮಗೆ ಟಿಕೆಟ್ ಸಿಗದಿದ್ದರೂ ಬಿಜೆಪಿ ತೊರೆಯುವುದಿಲ್ಲ. ನಾನು ಬಿಜೆಪಿ ಪಕ್ಷ ಬಿಡುವುದಿಲ್ಲ” ಎಂದು ಮೈತ್ರಿ ಟಿಕೆಟ್ ಪ್ರಬಲ ಆಕಾಂಕ್ಷಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ದೆಹಲಿ ಭೇಟಿ ಬಳಿಕ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, “ಬಿಜೆಪಿ ರಾಜ್ಯ ಹಿರಿಯ ಮುಖಂಡರೊಂದಿಗೆ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿದ್ದೇನೆ. ನಮ್ಮ ಪಕ್ಷದ ನಾಯಕರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದಾರೆ. ಕ್ಷೇತ್ರವನ್ನು ಜೆಡಿಎಸ್ ಉಳಿಸಿಕೊಂಡರೂ ಪರವಾಗಿಲ್ಲ. ನನ್ನ ಪಕ್ಷ ನಿಷ್ಠೆ ಅಚಲ” ಎಂದರು.
ಹೆಚ್ಡಿಕೆ ರಾಜೀನಾಮೆಯಿಂದ ಕ್ಷೇತ್ರಕ್ಕೆ ಉಪಚುನಾವಣೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ತೆರವುಗೊಂಡಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ಗಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮಧ್ಯೆ ಪೈಪೋಟಿ ನಡೆಯುತ್ತಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ಗೆ ಬಿಜೆಪಿಯಲ್ಲಿ ಸಿ.ಪಿ.ಯೋಗೇಶ್ವರ್ ಪ್ರಬಲ ಆಕಾಂಕ್ಷಿಯಾದರೆ, ಅತ್ತ ಹೇಗಾದರೂ ಮಾಡಿ ಗೆದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕು ಎಂದು ಜೆಡಿಎಸ್ ಪಣತೊಟ್ಟಿದೆ. ಇದರ ಭಾಗವಾಗಿಯೇ ಎಚ್.ಡಿ ಕುಮಾರಸ್ವಾಮಿ ತಾನು ಗೆದ್ದ ಕ್ಷೇತ್ರದಲ್ಲಿ ಮತ್ತೊಮ್ಮೆ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ನಿಲ್ಲಿಸಿ ರಾಜಕೀಯದಲ್ಲಿ ಮುನ್ನೆಲೆಗೆ ತರುವ ಪಣ ತೊಟ್ಟಿದ್ದಾರೆ. ಆದರೆ ಸದ್ಯ ಸವಾಲಿರುವುದು ಪಕ್ಷದೊಳಗೆ ಅಲ್ಲ, ಬಿಜೆಪಿಯಿಂದ. ಬಿಜೆಪಿ ಜೆಡಿಎಸ್ ಮೈತ್ರಿಯಾಗಿರೋದ್ರಿಂದ ಎರಡೂ ಪಕ್ಷಗಳು ಕ್ಷೇತ್ರ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿವೆ.
ಜೆಡಿಎಸ್ನಿಂದಾದರೂ ಸ್ಪರ್ಧಿಸುತ್ತೇನೆ: ಮತ್ತೊಂದೆಡೆ, “ಜೆಡಿಎಸ್ ಚಿಹ್ನೆ ಮೂಲಕ ಸ್ಪರ್ಧೆ ಮಾಡುವಂತೆ ಹೈಕಮಾಂಡ್ ತಿಳಿಸಿದರೂ ಕೂಡ ನಾನು ಬದ್ಧ” ಎಂದಿರುವ ಸಿ.ಪಿ.ಯೋಗೇಶ್ವರ್, ಈ ಮಧ್ಯೆ ಚನ್ನಪಟ್ಟಣ ಉಪ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದಲ್ಲಿ ನಾಲ್ಕೈದು ಸಭೆ ನಡೆಸಿರೋದಕ್ಕೆ ಟಾಂಗ್ ನೀಡಿದ್ದಾರೆ. ಇತ್ತೀಚೆಗೆ ಅಕ್ಕೂರು ಜಿ.ಪಂ.ವ್ಯಾಪ್ತಿಯಲ್ಲಿ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಮುಖಂಡರ ಸಭೆ ನಡೆಸಿದ್ದರು. ತಾಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ಸಿ.ಜಯಮುತ್ತು ಈ ಸಭೆಯನ್ನು ಆಯೋಜನೆ ಮಾಡಿದ್ದು, ಈ ವೇಳೆ ನಿಖಿಲ್ ಕುಮಾರಸ್ವಾಮಿ ಮಾತನಾಡಿ ಜೆಡಿಎಸ್ ಪರ ಮಾತನಾಡಿದ್ದರು.
ಆ ಮೂಲಕ ಯೋಗೇಶ್ವರ್ ಜೆಡಿಎಸ್ನಿಂದಲೂ ತಾನು ಸ್ಪರ್ಧೆಗೆ ಸಿದ್ಧ ಎನ್ನುವ ಮೂಲಕ ಹೊಸ ದಾಳ ಉರುಳಿಸಿದ್ದಾರೆ. “ಇದಲ್ಲದೆ ನಾನು ಬಿಜೆಪಿ ಪಕ್ಷದ ಜೊತೆ ನಿಲ್ಲಬೇಕು ಅಂತ ತೀರ್ಮಾನ ಮಾಡಿದ್ದೀನಿ. ನಾನು ಸ್ಪರ್ಧೆ ಮಾಡಬೇಕು ಅನ್ನೋದು ಕಾರ್ಯಕರ್ತರ ಒತ್ತಾಯ. ಇಷ್ಟು ವರ್ಷ ಪಕ್ಷದ ಜೊತೆ ಕೆಲಸ ಮಾಡಿದ್ದೀನಿ. ಸಾಕಷ್ಟು ಏಳು-ಬೀಳು ಕಂಡಿದ್ದೇನೆ. ಹಾಗಾಗಿ, ಪಕ್ಷದ ಜೊತೆ ಹೋಗೋದು ಒಳ್ಳೆಯದು ಎಂಬುದು ಹಿತೈಷಿಗಳ ಭಾವನೆ” ಎಂದು ತಿಳಿಸಿದರು.
ಬಿಜೆಪಿ ವರಿಷ್ಠರ ನಿರ್ಧಾರಕ್ಕೆ ಬದ್ಧ: “ಕೇಂದ್ರ ಸಚಿವ ಕುಮಾರಸ್ವಾಮಿ ಅವರೇ ಜೆಡಿಎಸ್ಗೆ ಟಿಕೆಟ್ ತಕೊಂಡ್ರೆ ನಾನು ಕೆಲಸ ಮಾಡುತ್ತೇನೆ. ನಾನು ಹಾಗೂ ನಮ್ಮ ಕಾರ್ಯಕರ್ತರು ಅವರ ಪರವಾಗಿ ಕೆಲಸ ಮಾಡುತ್ತೇವೆ. ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಮುಂದೆ ಅವಕಾಶ ಬರುತ್ತಿರುತ್ತದೆ ಕಾದು ನೋಡೋಣ” ಎಂದು ಮಾರ್ಮಿಕವಾಗಿ ನುಡಿದರು.
“ನಮ್ಮ ಹೈಕಮಾಂಡ್ ನಾಯಕರು ಹಲವು ಸಲಹೆ, ಸೂಚನೆ ನೀಡಿದ್ದಾರೆ. ಎರಡೂ ಪಕ್ಷದ ಮುಖಂಡರು ಒಟ್ಟಾಗಿ ಚುನಾವಣೆಗೆ ಹೋಗಬೇಕು. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧವಾಗಿರಬೇಕು. ಕ್ಷೇತ್ರದ ವಿದ್ಯಮಾನದ ಬಗ್ಗೆ ಹೈಕಮಾಂಡ್ಗೆ ಮಾಹಿತಿ ನೀಡಿದ್ದೇನೆ. ಕ್ಷೇತ್ರಕ್ಕೆ ಯಾರೇ ಅಭ್ಯರ್ಥಿ ಆಗಲಿ, ಬೇಗ ತೀರ್ಮಾನ ಆದ್ರೆ ಒಳ್ಳೆಯದು. ಇದು ಉಪಚುನಾವಣೆ ಆಗಿರುವುದರಿಂದ ಇಡೀ ಸರ್ಕಾರವೇ ಬಂದು ಇಲ್ಲಿ ಚುನಾವಣೆ ಪ್ರಚಾರ ಮಾಡುತ್ತದೆ. ಈ ನಿಟ್ಟಿನಲ್ಲಿ ಎರಡೂ ಪಕ್ಷದ ಹಿರಿಯರು ಆದಷ್ಟು ಬೇಗ ತೀರ್ಮಾನ ಮಾಡಬೇಕು” ಎಂದು ಅಭಿಪ್ರಾಯಪಟ್ಟರು.
ಉಪಚುನಾವಣೆ ಬಳಿಕ ಸರ್ಕಾರ ಉಳಿಯೋದು ಅನುಮಾನ: “ನೀನು ಆತುರ ಪಡಬೇಡ, ಪಕ್ಷ ಬಿಡಬೇಡ ಎಂದು ಹೈಕಮಾಂಡ್ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಹಾಗಾಗಿ, ಪಕ್ಷದ ಆದೇಶ ಮೀರಿ ಹೋಗಬಾರದು ಅನಿಸುತ್ತಿದೆ. ಈಗಾಗಲೇ ಆತಂತ್ರದತ್ತ ಸಾಗಿರುವ ಕಾಂಗ್ರೆಸ್ ಸರ್ಕಾರ ಏನು ಬೇಕಾದರೂ ಆಗಬಹುದು. ಉಪಚುನಾವಣೆ ಬಳಿಕ ಸರ್ಕಾರ ಇರುತ್ತಾ, ಇರಲ್ವಾ ಅಂತ ಗೊತ್ತಿಲ್ಲ. ಸರ್ಕಾರ ಹಗರಣಗಳಲ್ಲಿ ನಲುಗುತ್ತಿದೆ. ಈ ಸಂದರ್ಭದಲ್ಲಿ ಈ ಚುನಾವಣೆ ಗೆಲ್ಲಬೇಕು ಎನ್ನುವ ಹಠ ಮೈತ್ರಿ ಪಕ್ಷಗಳಲ್ಲಿದೆ” ಎಂದು ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ಪಕ್ಷೇತರವಾಗಿ ಕ್ಷೇತ್ರದಲ್ಲಿ ನಿಲ್ಲುವ ನಿಲುವ ಹೊಂದಿದ್ದ ಸಿಪಿವೈ ದೆಹಲಿಗೆ ಹೋಗಿ ಬಂದ ಬಳಿಕ ಹೈಕಮಾಂಡ್ ಹೇಳಿದರೆ ಮಾತ್ರ ನಿಲ್ಲುವುದಾಗಿ ತಿಳಿಸಿರುವುದನ್ನು ನೋಡಿದರೆ ಚನ್ನಪಟ್ಟಣ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಲಿದ್ದಾರೆಂಬ ಸ್ಪಷ್ಟ ಸೂಚನೆ ಸಿಕ್ಕಿದೆ.
ಬೆಂಗಳೂರು
ಪತ್ನಿ ಬಳಿಯೂ ರಾಜಕೀಯ ಮಾತಾಡಲ್ಲ, ಪರಂ ಗರಂ!

ಬೆಂಗಳೂರು: ಮಂಗಳೂರಲ್ಲಿ ನಡೆದ ಸರಣಿ ಕೊಲೆ ಪ್ರಕರಣಗಳ ಬಳಿಕ ಇತ್ತೀಚಿಗೆ ಆರ್ಸಿಬಿ ತಂಡ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಘಟನೆಯಲ್ಲಿ 11 ಜನ ಉಸಿರು ಚೆಲ್ಲಿದ್ದಾರೆ,
ನಿರಂತರವಾಗಿ ಕಾನೂನು ವ್ಯವಸ್ಧೆ ಹದಗೆಡುತ್ತಿದೆ, ಗೃಹ ಸಚಿವ ಜಿ.ಪರಮೇಶ್ವರ್ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳ ಆಗ್ರಹ ಬೆನ್ನಲ್ಲೇ ತಮಗಿರುವ ಗೃಹ ಇಲಾಖೆ ಖಾತೆ ಬದಲಾಯಿಸಿ ಎಂದು ಪರಮೇಶ್ವರ್ ಅವರು ಕೇಳಿಕೊಂಡಿದ್ದಾರೆ ಎಂಬ ವದಂತಿಗೆ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ,
ಏನೇ ಇದ್ದರೂ ನನ್ನ ಬಳಿಯೇ ಸ್ಪಷ್ಟನೇ ಕೇಳಿ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ನಾನು ನನ್ನ ಪತ್ನಿ ಬಳಿಯೂ ಯಾವತ್ತೂ ರಾಜಕೀಯ ಮಾತನಾಡಲ್ಲ, ಹೀಗಿರವಾಗ ಈ ವದಂತಿ ಏಕೆ? ಖಾತೆ ಬದಲಾವಣೆ ಅಂತಾ ನಿಮಗೆ ಯಾರು ಹೇಳಿದ್ದಾರೆ? ಏನೇ ಇದ್ದರೂ ನನ್ನ ಬಳಿ ಮಾಹಿತಿ ಪಡೆಯಿರಿ ಎಂದಿದ್ದಾರೆ,
ನಾನು ಸಾಫ್ಟ್ ಆಗಿಯೇ ನಡೆದುಕೊಂಡಿದ್ದೇನೆ, ಏನೇ ಕೇಳಿ ನಾನೇ ಉತ್ತರ ಕೊಡುತ್ತೇನೆ, ಸುಮ್ಮನೇ ಒಬ್ಬರ ವ್ಯಕ್ತಿತ್ವದ ಕೊಲೆ ಮಾಡಬಾರದು, ಅದು ಯಾರಿಗೂ ಶೋಭೆ ತರಲ್ಲ, ಖಾತೆ ಬದಲಾಯಿಸಿ ಎಂದು ಸಿಎಂ ಹೇಳಿದ್ದಾರೆ ಎಂಬ ಸುದ್ದಿ ಸುಳ್ಳು, ಈ ರೀತಿ ಹೇಳಬೇಡಿ, ಇಂತಹ ವದಂತಿಯಿಂದ ನಮ್ಮ ಮತದಾರರು ಅಭಿಮಾನಿಗಳಿಗೆ ತಪ್ಪಾಗಿ ಸಂದೇಶ ಹೋಗುತ್ತದೆ, ಇದೇ ಖಾತೆಯನ್ನೇ ನೀಡಿ ಎಂದು ನಾನು ಯಾರಿಗೂ ಕೇಳಿಲ್ಲ, ಕಾಲ್ತುಳಿತ ದುರಂತದಿಂದ ಎಲ್ಲರಿಗೂ ನೋವಾಗಿದೆ, ಇದರ ಮಧ್ಯೆ ಖಾತೆ ಬದಲಾವಣೆ ಎಂಬ ಸಂಗತಿ ಸತ್ಯಕ್ಕೆ ದೂರವಾದದ್ದು ಎಂದು ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು
ಆರೋಗ್ಯ ಇಲಾಖೆಯಿಂದ ಗಂಭೀರ ರೋಗಿಗಳಿಗೆ ಉಚಿತ ಒಪಿಡಿ ಸೇವೆ: ಇನ್ಮುಂದೆ ಮನೆ ಬಾಗಿಲಿಗೆ ಚಿಕಿತ್ಸೆ!

ಕರ್ನಾಟಕ ಆರೋಗ್ಯ ಇಲಾಖೆಯು ಬಡವರಿಗೆ, ಕ್ಯಾನ್ಸರ್ ಪೀಡಿತರಿಗೆ, ವಯೋವೃದ್ಧರಿಗೆ ಮತ್ತು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮನೆ ಬಾಗಿಲಿಗೆ ಉಚಿತ ಒಪಿಡಿ (OPD) ಸೇವೆ ಒದಗಿಸಲು ಹೊಸ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ, ಸಿವಿ ರಾಮನ್ ನಗರದ ಸಾರ್ವಜನಿಕ ಆಸ್ಪತ್ರೆಯಿಂದ ಮೊಬೈಲ್ ಆಸ್ಪತ್ರೆ ಮಾದರಿಯಲ್ಲಿ ಚಿಕಿತ್ಸೆ ಆರಂಭವಾಗಿದೆ. ಈ ಕಾರ್ಯಕ್ರಮವು ಆರೋಗ್ಯ ಕ್ಷೇತ್ರದಲ್ಲಿ ಸಮಾಜದ ದುರ್ಬಲ ವರ್ಗಕ್ಕೆ ಗುಣಮಟ್ಟದ ಚಿಕಿತ್ಸೆಯನ್ನು ತಲುಪಿಸುವ ಗುರಿಯನ್ನು ಹೊಂದಿದೆ.
ಯೋಜನೆಯ ವಿಶೇಷತೆಗಳೇನು?
ರಾಜ್ಯದಲ್ಲಿ ಮೊದಲ ಬಾರಿಗೆ, ಕ್ಯಾನ್ಸರ್, ಹೃದಯ ಸಮಸ್ಯೆ, ಬ್ರೇನ್ ಹೆಮರೇಜ್ ಮತ್ತು ಇತರ ಗಂಭೀರ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಆರೋಗ್ಯ ಇಲಾಖೆಯು ಮನೆಗೆ ತೆರಳಿ ಉಚಿತ ಒಪಿಡಿ ಸೇವೆ ಒದಗಿಸಲಿದೆ. ಸಿವಿ ರಾಮನ್ ನಗರದ ಸಾರ್ವಜನಿಕ ಆಸ್ಪತ್ರೆಯಿಂದ ಈ ಯೋಜನೆಯನ್ನು ಪೈಲಟ್ ಯೋಜನೆಯಾಗಿ ಆರಂಭಿಸಲಾಗಿದೆ. ಈ ಸೇವೆಯಿಂದ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡದೆಯೇ ತಮ್ಮ ಮನೆಯ ಬಳಿಯೇ ಚಿಕಿತ್ಸೆ ಪಡೆಯಬಹುದು.
ಗಂಭೀರ ರೋಗಿಗಳಿಗೆ ಆಸ್ಪತ್ರೆಗೆ ತೆರಳುವುದು ಕಷ್ಟಕರವಾಗಿರುತ್ತದೆ. ಆಸ್ಪತ್ರೆಯಲ್ಲಿ ಕಾಯುವ ಸಾಲುಗಳು, ದೀರ್ಘ ಕಾಯುವಿಕೆ, ಮತ್ತು ಆರ್ಥಿಕ ಒತ್ತಡದಿಂದ ಬಳಲುವವರಿಗೆ ಈ ಯೋಜನೆಯು ತುರ್ತು ಚಿಕಿತ್ಸೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ, ಮೊಬೈಲ್ ಆಸ್ಪತ್ರೆಗಳ ಮೂಲಕ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ನೇರವಾಗಿ ರೋಗಿಗಳ ಮನೆಗೆ ತೆರಳಿ ಚಿಕಿತ್ಸೆ ನೀಡಲಿದ್ದಾರೆ.
ಪ್ರಸ್ತುತ, ಸಿವಿ ರಾಮನ್ ನಗರದಿಂದ ಐದಕ್ಕೂ ಹೆಚ್ಚು ಪ್ರದೇಶಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಬೆಂಗಳೂರಿನ ಇತರ ಪ್ರದೇಶಗಳಿಗೆ ಮತ್ತು ರಾಜ್ಯದ ಇತರ ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆಯಿದೆ ಎಂದು ಸಿವಿ ರಾಮನ್ ನಗರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ್ ತಿಳಿಸಿದ್ದಾರೆ.
ಈ ಯೋಜನೆಯಿಂದ ಬಡವರಿಗೆ, ವಯೋವೃದ್ಧರಿಗೆ, ಮತ್ತು ಗಂಭೀರ ರೋಗಿಗಳಿಗೆ ಆರ್ಥಿಕ ಹೊರೆಯಿಲ್ಲದೆ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಲಿದೆ. ಒಬ್ಬ ರೋಗಿಯ ತಾಯಿ ಆಶಾದೇವಿ, “ಈ ಸೇವೆಯಿಂದ ಬಡವರಿಗೆ ತುಂಬಾ ಉಪಯೋಗವಾಗಲಿದೆ. ಸರ್ಕಾರ ಈ ಯೋಜನೆಯನ್ನು ಎಲ್ಲೆಡೆ ವಿಸ್ತರಿಸಬೇಕು,” ಎಂದು ಒತ್ತಾಯಿಸಿದ್ದಾರೆ.
ಯೋಜನೆಯ ಪ್ರಯೋಜನಗಳು:
- ಉಚಿತ ಚಿಕಿತ್ಸೆ: ಕ್ಯಾನ್ಸರ್, ಹೃದಯ ಸಮಸ್ಯೆ, ಬ್ರೇನ್ ಹೆಮರೇಜ್ ಇತ್ಯಾದಿ ಗಂಭೀರ ರೋಗಿಗಳಿಗೆ ಉಚಿತ ಒಪಿಡಿ ಸೇವೆ.
- ಮನೆ ಬಾಗಿಲಿಗೆ ಸೇವೆ: ಆಸ್ಪತ್ರೆಗೆ ತೆರಳುವ ತೊಂದರೆ ತಪ್ಪಿಸಲು ಮೊಬೈಲ್ ಆಸ್ಪತ್ರೆ ಮಾದರಿ.
- ದುರ್ಬಲ ವರ್ಗಕ್ಕೆ ಒತ್ತು: ಬಡವರು, ವಯೋವೃದ್ಧರು, ಮತ್ತು ಗಂಭೀರ ರೋಗಿಗಳಿಗೆ ಆದ್ಯತೆ.
- ತುರ್ತು ಚಿಕಿತ್ಸೆ: ಆಸ್ಪತ್ರೆಯ ಕಾಯುವಿಕೆಯಿಂದ ರೋಗಿಗಳಿಗೆ ಮುಕ್ತಿ.
ದೇಶ
ದೆಹಲಿ ತಲುಪಿದ DCM ಡಿಕೆ.ಶಿವಕುಮಾರ್: ಹೈಕಮಾಂಡ್ ಭೇಟಿ, ಊಹಾಪೋಹ ಶುರು..!

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆಯಿದ್ದು, ಭಾನುವಾರ ಸಂಜೆಯೇ ದೆಹಲಿ ತಲುಪಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ರಾಜಕೀಯ ವಲಯದಲ್ಲಿ ಊಹಾಪೋಹಗಳು ಶುರುವಾಗಿವೆ.
ಡಿಕೆ.ಶಿವಕುಮಾರ್ ಅವರ ದೆಹಲಿ ಭೇಟಿ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ಜೂ.13ರಂದು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆಂದು ತಿಳಿದುಬಂದಿದೆ.
ರಾಜ್ಯದ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಇಬ್ಬರೂ ನಾಯಕರ ವರಿಷ್ಠರ ಭೇಟಿ ಮಾಡುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.
ಇಂದು ಬೆಳಗ್ಗೆ 11ಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳೊದಿಗೆ ದೆಹಲಿ ಮಹಾನಗರ ಪಾಲಿಕೆ ಅಧಿಕಾರಿಗಳ ಜತೆ ಆಡಳಿತ ಹಾಗೂ ಘನ ತ್ಯಾಜ್ಯ ನಿರ್ವಹಣೆ ಕುರಿತು ಡಿ.ಕೆ.ಶಿವಕುಮಾರ್ ಸಭೆ ನಡೆಸಲಿದ್ದಾರೆ.ಬಳಿಕ ಜಲಶಕ್ತಿ ಸಚಿವರು, ಇಂಧನ ಸಚಿವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಇದರ ನಡುವೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಸೇರಿ ಇತ್ತೀಚಿನ ರಾಜ್ಯದ ಬೆಳವಣಿಗೆಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇದರ ಬೆನ್ನಲ್ಲೇ ಜೂ.12ಕ್ಕೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಜೂ.13 ರಂದು ಹಣಕಾಸು ಆಯೋಗದ ಸಭೆಯಲ್ಲಿ ಭಾಗವಹಿಸಲಿದ್ದು, ಬಳಿಕ ಎಐಸಿಸಿ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ರಾಜ್ಯದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸ ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ದೆಹಲಿ ಭೇಟಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ.ಶಿವಕುಮಾರ್ ಅವರು, ದೆಹಲಿ ಭೇಟಿ ಸಂಪೂರ್ಣವಾಗಿ ತಾಂತ್ರಿಕವಾಗಿದೆ ಎಂದು ಹೇಳಿದರು.
ಹೈದರಾಬಾದ್, ಚೆನ್ನೈ ಮತ್ತು ಈಗ ದೆಹಲಿಯಲ್ಲಿ ಈಗಾಗಲೇ ಜಾರಿಯಲ್ಲಿರುವ ಘನತ್ಯಾಜ್ಯ ನಿರ್ವಹಣಾ ತಂತ್ರಜ್ಞಾನಗಳನ್ನು ಪರಿಶೀಲಿಸಲು ನಿರ್ಧರಿಸಿದ್ದೆ. ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಬಳಸಲಾಗುತ್ತಿರುವ ತಂತ್ರಜ್ಞಾನವನ್ನು ವೀಕ್ಷಿಸಲು ನಾನು ಹಾಗೂ ಬೆಂಗಳೂರು ಪಾಲಿಕೆಯಿಂದ ಸುಮಾರು 15 ಸದಸ್ಯರ ತಂಡ ದೆಹಲಿಗೆ ಆಗಮಿಸಿದ್ದೇವೆ. ಇಲ್ಲಿ ನಗರದ ಹೊರಭಾಗದಲ್ಲಿ ವಾಸನೆ ರಹಿತವಾಗಿ ತ್ಯಾಜ್ಯ ವಿಲೇವಾರಿ ಕೇಂದ್ರ ಮಾಡಿದ್ದಾರೆ ಎಂದು ಕೇಳಿದ್ದೇನೆ.
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಂಬಂಧ ಟೆಂಡರ್ ಕರೆಯಲಾಗಿದ್ದು, ಕಸದಿಂದ ಇಂಧನ, ಅನಿಲ ಉತ್ಪಾದನೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಈಗಾಗಲೇ ಹೈದರಾಬಾದ್ ಹಾಗೂ ಚೆನ್ನೈಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ್ದೇನೆ. ದೆಹಲಿಯಲ್ಲಿನ ತಂತ್ರಜ್ಞಾನ ಅಳವಡಿಕೆ ಬಗ್ಗೆ ನಮಗೆ ಪ್ರಸ್ತಾವನೆ ಬಂದಿದ್ದು, ಹೀಗಾಗಿ ಅದನ್ನು ವೀಕ್ಷಣೆ ಮಾಡುತ್ತೇವೆ. ದೆಹಲಿಯಲ್ಲಿ ನಗರ ಯೋಜನಾ ಪ್ರಾಧಿಕಾರದಲ್ಲಿ ರಸ್ತೆ ವಿಚಾರವಾಗಿ ಪ್ರತ್ಯೇಕ ನೀತಿ ಹೊಂದಿದ್ದು, ಇದನ್ನು ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.
ಹೈಕಮಾಂಡ್ ನಾಯಕರ ಭೇಟಿ ಸಧ್ಯಕ್ಕೆ ಇಲ್ಲ. ಸಮಯ ಸಿಕ್ಕರೆ ಭೇಟಿ ಮಾಡುತ್ತೇನೆ. ಜೂನ್.10 ರಂದು ಎತ್ತಿನಹೊಳೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದಿದ್ದಾರೆ. ಹೀಗಾಗಿ ನಾಳೆ ಸಂಜೆ ಬೆಂಗಳೂರಿಗೆ ವಾಪಸ್ಸಾಗುತ್ತೇವೆ ಎಂದರು
-
ಬಿಬಿಎಂಪಿ4 weeks ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು1 year ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು7 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ