ಬೆಂಗಳೂರು
ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ಸ್ಫೋಟಕ ಹೇಳಿಕೆ
ಬೆಂಗಳೂರು: ”ಯೋಗೇಶ್ವರ್ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಜೆಡಿಎಸ್-ಬಿಜೆಪಿ ಮೈತ್ರಿಗೆ ಹುಳಿ ಹಿಂಡಲು ಕೆಲ ಬಿಜೆಪಿಗರು ಕಾಂಗ್ರೆಸ್ ಜೊತೆ ಶಾಮೀಲಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಹಾಳು ಮಾಡುವ ಹುನ್ನಾರ ನಡೆದಿದೆ. ಸಿ.ಪಿ.ಯೋಗೇಶ್ವರ್ ಅವರು ಮೇಲೆ ಇದ್ದಾರೆ. ಅವರ ಬಗ್ಗೆ ನಾನೇನು ಚರ್ಚೆ ಮಾಡಲಿ” ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಭಾನುವಾರ ಸಂಜೆ ಮಂಡ್ಯ ಜಿಲ್ಲೆಯಿಂದ ಮರಳಿದ ಬಳಿಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು. ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿಯಾಗಿ ಯೋಗೇಶ್ವರ್ಗೆ ಜೆಡಿಎಸ್ ಚಿಹ್ನೆ ಅಡಿ ನಿಲ್ಲಿಸಲಾಗುತ್ತದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿ, ”ಅವರು ಏನು ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಎಲ್ಲವನ್ನೂ ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇನೆ. ಅವರು ಬೇರೆ ಬೇರೆ ಪಕ್ಷಗಳ ಮುಖಂಡರ ಜೊತೆ, ಪಕ್ಕದ ಮದ್ದೂರು ಕ್ಷೇತ್ರದ ಶಾಸಕರ ಜೊತೆಯೂ ಸಂಪರ್ಕದಲ್ಲಿದ್ದಾರೆ ಅಂತ ಚರ್ಚೆ ನಡೆಯುತ್ತಿದೆ. ಎಲ್ಲವನ್ನೂ ಬಿಜೆಪಿ ವರಿಷ್ಠರು ಗಮನಿಸುತ್ತಿದ್ದಾರೆ” ಎಂದು ಹೇಳಿದರು.
ಇನ್ನೂ ನಿರ್ಧಾರ ಮಾಡಿಲ್ಲ: ”ಚನ್ನಪಟ್ಟಣ ವಿಚಾರವಾಗಿ ಅಭ್ಯರ್ಥಿ ಘೋಷಣೆ ಬಾಕಿ ಇದೆ. ಈಗಾಗಲೇ ಬಿಜೆಪಿ ವರಿಷ್ಠ ನಾಯಕರೇ ಹಲವು ಬಾರಿ ಹೇಳಿದ್ದಾರೆ. ನೀವು ಪ್ರತಿನಿಧಿಸುತ್ತಿರುವ ಕ್ಷೇತ್ರದ ಬಗ್ಗೆ ನೀವೇ ಅಂತಿಮ ನಿರ್ಧಾರ ತೆಗೆದುಕೊಳ್ಳಿ ಎಂದಿದ್ದಾರೆ. ಚನ್ನಪಟ್ಟಣ ಜೆಡಿಎಸ್ ಸ್ಪರ್ಧಿಸಿರುವ ಕ್ಷೇತ್ರ ಎನ್ನುವುದು ಅವರಿಗೆ ಗೊತ್ತಿದೆ. ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಚನ್ನಪಟ್ಟಣದಲ್ಲಿ ನಾವು ಘೋಷಣೆ ಮಾಡುತ್ತೇವೆ. ಚನ್ನಪಟ್ಟಣ ವಿಚಾರದಲ್ಲಿ ಇನ್ನೂ ನಾವು ಯಾವುದೇ ನಿರ್ಧಾರ ಮಾಡಿಲ್ಲ” ಎಂದರು.
ನನ್ನ ವರ್ಚಸ್ಸು ಕುಗ್ಗಿಸುವ ಹುನ್ನಾರ: ”ಕಾಂಗ್ರೆಸ್ ನಾಯಕರಲ್ಲಿ ಏನಾದರೂ ಮಾಡಿ ಕುಮಾರಸ್ವಾಮಿ ವರ್ಚಸ್ಸು ಕುಗ್ಗಿಸಬೇಕು ಅನ್ನುವುದು ಕೆಲವರ ಉದ್ದೇಶ. ನಾನು ಎಲ್ಲಾ ಬಿಜೆಪಿ ನಾಯಕರ ಬಗ್ಗೆ ಹೀಗೆ ಹೇಳುತ್ತಿಲ್ಲ. ಕೆಲವರಿಗೆ ಈ ಮೈತ್ರಿಯನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತಿದೆ” ಎಂದು ದೂರಿದರು.
”ಮೈತ್ರಿಯನ್ನು ಹಾಳು ಮಾಡಲು ಕೆಲವರು ಹೀಗೆ ಮಾಡುತ್ತಿರಬಹುದು. ನನ್ನ ಗಮನಕ್ಕೂ ಹಲವಾರು ವಿಚಾರಗಳು ಬರುತ್ತಿವೆ. ಯೋಗೇಶ್ವರ್ ಅವರು ಉಪ ಮುಖ್ಯಮಂತ್ರಿಯನ್ನು ಈಗಾಗಲೇ ಎರಡು ಬಾರಿ ಭೇಟಿ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಅವರು ಏತಕ್ಕೆ ಭೇಟಿ ಮಾಡಿದ್ದರು ಎಂಬುದು ನನಗೆ ಬೇಕಿಲ್ಲ” ಎಂದು ಹೇಳಿದರು.
ಬಿಜೆಪಿಯ ಕೆಲವರು ಕಾಂಗ್ರೆಸ್ ಜೊತೆ ಶಾಮೀಲು: ”ಬಿಜೆಪಿಯಲ್ಲಿ ಇರುವಂತಹ ಕೆಲವೇ ಕೆಲವರು ಕುಮಾರಸ್ವಾಮಿಗೆ ದೆಹಲಿಮಟ್ಟದಲ್ಲಿ ಉತ್ತಮ ಬಾಂಧವ್ಯ ಇದೆ. ಹೀಗಾಗಿ, ಅವರಿಗೆ ಏನಾದರೂ ಸಮಸ್ಯೆ ಉದ್ಭವ ಮಾಡಬೇಕು ಎನ್ನುವ ಕಾರಣಕ್ಕೆ ಇಂತಹ ಪ್ರಕರಣಗಳನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಅಂತ ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ. ಅದು ನನ್ನ ಕಿವಿಗೂ ಬಿದ್ದಿದೆ. ಬಿಜೆಪಿ – ಜೆಡಿಎಸ್ ಮೈತ್ರಿಗೆ ಹುಳಿ ಹಿಂಡುವವರು ಬಹಳಷ್ಟು ಜನ ಇದ್ದಾರೆ. ಒಟ್ಟಾರೆ ಕುಮಾರಸ್ವಾಮಿಯನ್ನು ಹಾಳು ಮಾಡಲು ಹೊರಟಿದ್ದಾರೆ. ಅವರ ಪ್ರಯತ್ನ ಫಲ ಕೊಡುವುದಿಲ್ಲ” ಎಂದು ಕುಮಾರಸ್ವಾಮಿ ಕಿಡಿಕಾರಿದರು.
”ಹುಳಿ ಹಿಂಡುವವರು ನಮ್ಮ ಪಕ್ಷದಲ್ಲಿ ಇಲ್ಲ. ಆದರೆ ಅಲ್ಲಿನ ಹುಳಿ ಹಿಂಡುವವರು ಕಾಂಗ್ರೆಸ್ ನಾಯಕರ ಜೊತೆ ಸೇರಿಕೊಂಡಿದ್ದಾರೆ. ಅದು ನನಗೆ ಗೊತ್ತಿದೆ. ಪ್ರಧಾನಮಂತ್ರಿ ಅವರನ್ನು ಅಸ್ಥಿರಗೊಳಿಸಲು ಅವರು ಕಾಂಗ್ರೆಸ್ ನಾಯಕರೊಂದಿಗೆ ಸೇರಿಕೊಂಡು ಮಸಲತ್ತು ಮಾಡುತ್ತಿರಬಹುದು. ಇದೆಲ್ಲವನ್ನು ಗಮನಿಸುತ್ತಿದ್ದೇನೆ. ಇದಕ್ಕೆ ನಾನು ಅವಕಾಶ ಕೊಡಬೇಕಾ?” ಎಂದು ಪ್ರಶ್ನಿಸಿದರು.
ಇಂತಹ ಕುತಂತ್ರಕ್ಕೆ ನಾನು ಯಾಕೆ ಬಲಿಯಾಗಬೇಕು? ನೋಡೋಣ, ಮುಂದೆ ಅಭ್ಯರ್ಥಿ ತೀರ್ಮಾನ ಮಾಡುತ್ತೇವೆ. ನನಗೆ ಬೇಕಿರುವುದು ಪ್ರಧಾನಮಂತ್ರಿಯವರಿಗೆ ಶಕ್ತಿ ತುಂಬುವುದಷ್ಟೇ. ಆ ನಿಟ್ಟಿನಲ್ಲಿ ನಾನು ತೀರ್ಮಾನ ಮಾಡುತ್ತೇನೆ. ಆ ನಿಟ್ಟಿನಲ್ಲಿ ಚನ್ನಪಟ್ಟಣ ಸೀಟು ಗೆಲ್ಲಬೇಕು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಹುನ್ನಾರಕ್ಕೆ ಬಲಿ ಆಗುವುದಿಲ್ಲ” ಎಂದರು.
ಎನ್‌ಡಿಎ ಅಭ್ಯರ್ಥಿ ನಿಲ್ಲುತ್ತಾರೆ: ನಿಮ್ಮ ಕುಟುಂಬದಿಂದಲೇ ಯಾರಾದರೂ ಸ್ಪರ್ಧೆ ಮಾಡುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿ, ”ಇಲ್ಲಿವರೆಗೂ ಎಲ್ಲೂ ನಮ್ಮ ಕುಟುಂಬದವರು ಸ್ಪರ್ಧೆ ಮಾಡುತ್ತಾರೆ ಎಂದು ನಾನು ಹೇಳಿಲ್ಲ. ನಾನು ಸ್ಪರ್ಧೆ ಮಾಡಲ್ಲ ಎಂದು ನಿಖಿಲ್ ಕುಮಾರಸ್ವಾಮಿ ನೂರು ಬಾರಿ ಹೇಳಿದ್ದಾರೆ. ಚುನಾವಣೆಯಲ್ಲಿ ನಿಲ್ಲಲ್ಲ.. ಇನ್ನು ಮೂರು ವರ್ಷ ಕಾಯುತ್ತೇನೆ ಎಂದು ಅವರು ಹೇಳಿದ್ದಾರೆ. ನಿಖಿಲ್ ಕುಮಾರಸ್ವಾಮಿ ನಿಲ್ಲುತ್ತಾರೆ ಎಂದು ನಾನೇನಾದರೂ ಹೇಳಿದ್ದೀನಾ? ಎನ್‌ಡಿಎ ಅಭ್ಯರ್ಥಿ ನಿಲ್ಲುತ್ತಾರೆ ಎಂದು ನಾನು ಹೇಳಿರುವುದು. ಅದು ಬಿಜೆಪಿಯಿಂದ ಅಥವಾ ಜೆಡಿಎಸ್ನಿಂದ ಆದರೂ ಆಗಬಹುದು ಅಂತ ಅಷ್ಟೇ. ಅಭ್ಯರ್ಥಿ ನಿಲ್ಲಿಸಲೇಬೇಕಲ್ವಾ? ಪಲಾಯನ ಮಾಡೋಕಾಗುತ್ತಾ?” ಎಂದು ಪ್ರತಿಕ್ರಿಯಿಸಿದರು.
”ಯಾವುದೇ ಕಾರಣಕ್ಕೂ ಕಾಂಗ್ರೆಸ್ ಇಲ್ಲಿ ಲಾಭ ಪಡೆಯಲು ಸಾಧ್ಯವಿಲ್ಲ. ಏಕೆಂದರೆ, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಬಲಯುತವಾಗಿಲ್ಲ. ಆ ಪಕ್ಷಕ್ಕೆ ಅಲ್ಲಿ ಕಾರ್ಯಕರ್ತರ ಪಡೆಯೇ ಇಲ್ಲ. ಹಣದ ಮುಖಾಂತರ ಅಧಿಕಾರದ ದುರುಪಯೋಗದ ಮೂಲಕ ರಾಜಕಾರಣ ಮಾಡಬೇಕು ಅಷ್ಟೆ. ಕಳೆದ 25 ವರ್ಷಗಳಿಂದ ಚನ್ನಪಟ್ಟಣದಲ್ಲಿ ಕಾಂಗ್ರೆಸ್ 3ನೇ ಸ್ಥಾನದಲ್ಲಿದೆ. ಈಗ ಕಾಂಗ್ರೆಸ್ನ ಕುತಂತ್ರಕ್ಕೆ ಕೆಲವರು ಬಲಿಯಾಗಲು ಹೊರಟಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ದೇಶ
ಮಹಿಳೆಯರಿಗೆ ಫ್ರೀ ಸ್ಮಾರ್ಟ್ ಕಾರ್ಡ್, ಪುರುಷರಿಗೆ ಪೇಯ್ಡ್ ಕಾರ್ಡ್: ಸಾರಿಗೆ ಇಲಾಖೆಯ ಹೊಸ ಪ್ಲ್ಯಾನ್
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಇನ್ನಷ್ಟು ತಂತ್ರಜ್ಞಾನ ಸ್ನೇಹಿಯಾಗಲು ಸಜ್ಜಾಗಿದೆ. ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ವ್ಯವಸ್ಥಿತಗೊಳಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರ ವಿಶೇಷ ಉದ್ದೇಶಿತ ವಾಹಕ (SPV) ರಚಿಸಲು ಮುಂದಾಗಿದ್ದು, ಇಡೀ ಪ್ರಕ್ರಿಯೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಜಾರಿಗೆ ತರಲು ತೀರ್ಮಾನಿಸಿದೆ. ಇದಕ್ಕಾಗಿ ಜಾಗತಿಕ ಟೆಂಡರ್ ಆಹ್ವಾನಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ವಹಿವಾಟು ಸಲಹೆಗಾರರ ಸಮಿತಿಯ ವರದಿ ಜೂನ್ ಅಂತ್ಯದೊಳಗೆ ಸಲ್ಲಿಕೆಯಾಗುವ ನಿರೀಕ್ಷೆಯಿದೆ.
ರಾಜ್ಯದಲ್ಲಿ ಸುಮಾರು 2.5 ರಿಂದ 3 ಕೋಟಿ ಮಹಿಳೆಯರಿಗೆ ಉಚಿತ ಸ್ಮಾರ್ಟ್ ಕಾರ್ಡ್ ವಿತರಿಸುವ ಗುರಿ ಹೊಂದಲಾಗಿದೆ. ಪ್ರಸ್ತುತ ಮಹಿಳೆಯರು ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ತೋರಿಸಿ ಉಚಿತ ಪ್ರಯಾಣ ಪಡೆಯುತ್ತಿದ್ದಾರೆ. ಆದರೆ, ಪ್ರಯಾಣಿಕರ ಗುರುತಿನ ಪರಿಶೀಲನೆ ಸುಲಭಗೊಳಿಸಲು, ನಿಖರ ದತ್ತಾಂಶ ಸಂಗ್ರಹಿಸಲು ಹಾಗೂ ದುರುಪಯೋಗ ತಡೆಯಲು ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.
ಇನ್ನು ಪುರುಷ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಕಾರ್ಡ್ ಮಾದರಿಯ ಪಾವತಿ ಆಧಾರಿತ ಸ್ಮಾರ್ಟ್ ಕಾರ್ಡ್ ನೀಡುವ ಯೋಜನೆಯೂ ಸರ್ಕಾರದ ಮುಂದಿದೆ.
ಇದರ ಜೊತೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆಧುನೀಕರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಂತಹಂತವಾಗಿ 4,000ಕ್ಕೂ ಹೆಚ್ಚು ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ನಿರ್ಧರಿಸಿದೆ. ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ನಿರ್ಮಾಣದತ್ತ ಇದು ಮಹತ್ವದ ಹೆಜ್ಜೆಯಾಗಿದೆ.
ಶಕ್ತಿ ಯೋಜನೆಯ ಫಲಾನುಭವಿಗಳಿಗೆ ಈ ಹೊಸ ವ್ಯವಸ್ಥೆ ಮತ್ತಷ್ಟು ಅನುಕೂಲವಾಗಲಿದ್ದು, ರಾಜ್ಯ ಸಾರಿಗೆ ವ್ಯವಸ್ಥೆಯಲ್ಲಿ ಡಿಜಿಟಲ್ ಕ್ರಾಂತಿಗೆ ದಾರಿ ಮಾಡಿಕೊಡುವ ನಿರೀಕ್ಷೆಯಿದೆ.
ದೇಶ
ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮೊದಲ ಕಾಂಗ್ರೆಸ್ ಶಾಸಕಾಂಗ ಸಭೆ ಇಂದು: ಬಿಡದಿಯಲ್ಲಿ ಮಹತ್ವದ ಚರ್ಚೆ
ರಾಮನಗರ: ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವದ ಶಾಸಕಾಂಗ ಸಭೆ ಇಂದು ಸಂಜೆ 6.30ಕ್ಕೆ ರಾಮನಗರ ಜಿಲ್ಲೆಯ ಬಿಡದಿಯ ವಂಡರ್ ಲಾ ರೆಸಾರ್ಟ್‌ನಲ್ಲಿ ನಡೆಯಲಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ಈ ಶಾಸಕಾಂಗ ಸಭೆ ನಡೆಯುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷದ ಶಾಸಕರೊಂದಿಗೆ ಸಮಾಲೋಚನೆ ನಡೆಸಲು ಈ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು ಭಾಗವಹಿಸಲಿದ್ದು, ಚುನಾವಣಾ ತಂತ್ರಗಾರಿಕೆ ಮತ್ತು ಮತಗಳ ಸಮನ್ವಯ ಕುರಿತು ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ.
ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಪಕ್ಷದ ಸಂಘಟನೆ ಬಲವರ್ಧನೆ ಹಾಗೂ ಮುಂಬರುವ ಚುನಾವಣಾ ಸವಾಲುಗಳ ಕುರಿತೂ ಸಭೆಯಲ್ಲಿ ಮಾತುಕತೆ ನಡೆಯಲಿದೆ ಎನ್ನಲಾಗಿದೆ. ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಮೊದಲ ಶಾಸಕಾಂಗ ಸಭೆಯಾಗಿರುವುದರಿಂದ ಪಕ್ಷದ ಒಳರಾಜಕೀಯ ಮತ್ತು ಭವಿಷ್ಯದ ಕಾರ್ಯತಂತ್ರದ ದೃಷ್ಟಿಯಿಂದ ಇದು ಮಹತ್ವ ಪಡೆದಿದೆ.
ಸಭೆ ಹಿನ್ನೆಲೆಯಲ್ಲಿ ರೆಸಾರ್ಟ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಸಾರ್ವಜನಿಕರ ಪ್ರವೇಶವನ್ನು ಸಂಜೆ ಬಳಿಕ ನಿರ್ಬಂಧಿಸಲಾಗಿದ್ದು, ಕಾಂಗ್ರೆಸ್ ಶಾಸಕರು ಮತ್ತು ಆಹ್ವಾನಿತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯ ಗೆಲುವಿಗೆ ಅಗತ್ಯವಿರುವ ಬೆಂಬಲವನ್ನು ಕ್ರೋಢೀಕರಿಸುವ ಉದ್ದೇಶದಿಂದ ಈ ಸಭೆ ನಡೆಸುತ್ತಿದ್ದು, ಸಭೆಯ ಬಳಿಕ ಮಹತ್ವದ ರಾಜಕೀಯ ಸಂದೇಶ ಹೊರಬೀಳುವ ನಿರೀಕ್ಷೆಯಿದೆ.
ದೇಶ
ಗ್ಯಾರಂಟಿ ಯೋಜನೆಗಳಿಗೆ ಸರ್ಜರಿ? ಮರು ಅರ್ಜಿ ಕಡ್ಡಾಯ ಸಾಧ್ಯತೆ; ಸರ್ಕಾರದ 100 ಕೋಟಿ ರೂ. ಉಳಿತಾಯ ಪ್ಲ್ಯಾನ್
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಸಿದ್ಧತೆಗಳು ಜೋರಾಗಿದ್ದು, ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಕೆ ಮಾಡಬೇಕಾಗುವ ಸಾಧ್ಯತೆ ಇದೆ. ಯೋಜನೆಗಳ ದುರುಪಯೋಗ ತಡೆಯುವ ಜೊತೆಗೆ ಅನರ್ಹರನ್ನು ಪಟ್ಟಿಯಿಂದ ಹೊರಗಿಡುವ ಮೂಲಕ ಸರ್ಕಾರ ವರ್ಷಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯ ಮಾಡುವ ಗುರಿ ಹೊಂದಿದೆ.
ಸರ್ಕಾರವು ವಿಶೇಷವಾಗಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸಲು ಮುಂದಾಗಿದೆ. ಮೃತರ ಹೆಸರಿನಲ್ಲಿ ಹಣ ವರ್ಗಾವಣೆ ಆಗುತ್ತಿರುವ ಪ್ರಕರಣಗಳು, ಆದಾಯ ತೆರಿಗೆ (ಐಟಿ) ಹಾಗೂ ಜಿಎಸ್‌ಟಿ ಪಾವತಿದಾರರು ಯೋಜನೆಗಳ ಲಾಭ ಪಡೆಯುತ್ತಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪರಿಷ್ಕರಣೆಯ ಬಳಿಕ ಸುಮಾರು 3 ರಿಂದ 4 ಲಕ್ಷ ಅನರ್ಹ ಫಲಾನುಭವಿಗಳನ್ನು ಕೈಬಿಡುವ ಸಾಧ್ಯತೆ ಇದೆ.
ಪ್ರಸ್ತುತ ಗೃಹಲಕ್ಷ್ಮಿ ಯೋಜನೆಯಡಿ 1.24 ಕೋಟಿ ಮಹಿಳೆಯರು ಪ್ರತಿ ತಿಂಗಳು ₹2,000 ನೆರವು ಪಡೆಯುತ್ತಿದ್ದು, ಸರ್ಕಾರ ತಿಂಗಳಿಗೆ ₹2,480 ಕೋಟಿ ಹಾಗೂ ವರ್ಷಕ್ಕೆ ₹29,760 ಕೋಟಿ ವೆಚ್ಚ ಮಾಡುತ್ತಿದೆ. ಈ ಯೋಜನೆಗೆ ಏಪ್ರಿಲ್ ಅಂತ್ಯದವರೆಗೆ ಒಟ್ಟು ₹72,253 ಕೋಟಿ ಪಾವತಿಸಲಾಗಿದೆ.
ಗೃಹಜ್ಯೋತಿ ಯೋಜನೆಯಡಿ 1.64 ಕೋಟಿ ಗ್ರಾಹಕರು 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದು, ಇದರ ವೆಚ್ಚ ₹26,115 ಕೋಟಿಗೆ ತಲುಪಿದೆ. ಅನ್ನಭಾಗ್ಯ ಯೋಜನೆಗೆ ಇದುವರೆಗೆ ₹18,897 ಕೋಟಿ ವೆಚ್ಚವಾಗಿದ್ದರೆ, ಶಕ್ತಿ ಯೋಜನೆಯಡಿ ಮಹಿಳೆಯರು 757.62 ಕೋಟಿ ಉಚಿತ ಪ್ರಯಾಣ ಟಿಕೆಟ್‌ಗಳ ಪ್ರಯೋಜನ ಪಡೆದಿದ್ದು, ಇದರ ಮೌಲ್ಯ ₹19,890 ಕೋಟಿ ಎಂದು ಅಂದಾಜಿಸಲಾಗಿದೆ.
ಇನ್ನು ಯುವನಿಧಿ ಯೋಜನೆಯಡಿ 3.59 ಲಕ್ಷ ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೊಮಾ ಪದವೀಧರರಿಗೆ ನೆರವು ನೀಡಲಾಗಿದ್ದು, ಈವರೆಗೆ ₹1,115 ಕೋಟಿ ಪಾವತಿಸಲಾಗಿದೆ.
ಒಟ್ಟಾರೆ, ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳಿಗಾಗಿ ಇದುವರೆಗೆ ₹1,38,270.21 ಕೋಟಿ ವೆಚ್ಚ ಮಾಡಿದ್ದು, ಅನರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಪರಿಷ್ಕರಣೆ ನಡೆಸಲು ಮುಂದಾಗಿದೆ.
