AI ಕಾರಣಕ್ಕೆ ಉದ್ಯೋಗ ಸಿಗೋದು ಕಷ್ಟವಾ? ಬೆಂಗಳೂರಿನ ಸ್ಟಾರ್ಟ್‌ಅಪ್ ಸಂಸ್ಥಾಪಕರ ಹೇಳಿಕೆ ವೈರಲ್ | Hosa Suddi

ದೇಶ

AI ಕಾರಣಕ್ಕೆ ಉದ್ಯೋಗ ಸಿಗೋದು ಕಷ್ಟವಾ? ಬೆಂಗಳೂರಿನ ಸ್ಟಾರ್ಟ್‌ಅಪ್ ಸಂಸ್ಥಾಪಕರ ಹೇಳಿಕೆ ವೈರಲ್

Published

on

ಬೆಂಗಳೂರು, ಮಾರ್ಚ್ 21: ಇಂದಿನ ತಂತ್ರಜ್ಞಾನ ಯುಗದಲ್ಲಿ Artificial Intelligence ಉದ್ಯೋಗ ಕ್ಷೇತ್ರದಲ್ಲಿ ಹೊಸ ಸವಾಲುಗಳನ್ನು ತಂದಿದೆ ಎಂಬ ಚರ್ಚೆಗಳು ಹೆಚ್ಚಾಗುತ್ತಿವೆ. ಉದ್ಯೋಗ ಹುಡುಕುವವರಿಗೆ ಸಹಾಯವಾಗಬೇಕಾದ AI ಇದೀಗ ನೇಮಕಾತಿ ಪ್ರಕ್ರಿಯೆಯನ್ನೇ ಸಂಕೀರ್ಣಗೊಳಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬೆಂಗಳೂರು ಮೂಲದ Tech You Forward ಸಂಸ್ಥೆಯ ಸಂಸ್ಥಾಪಕ ರಾಜ್ ವಿಕ್ರಮಾದಿತ್ಯ ತಮ್ಮ X ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ಇದಕ್ಕೆ ಸಾಕ್ಷಿಯಾಗಿದೆ.

ಯೂಸರ್ ಎಕ್ಸ್‌ಪೀರಿಯನ್ಸ್ (UX) ಹುದ್ದೆಗೆ ನಡೆದ ನೇಮಕಾತಿ ಪ್ರಕ್ರಿಯೆಯ ಅನುಭವ ಹಂಚಿಕೊಂಡ ಅವರು, ಹೆಚ್ಚಿನ ಅಭ್ಯರ್ಥಿಗಳ ಅರ್ಜಿಗಳು AI ಮೂಲಕ ತಯಾರಿಸಲ್ಪಟ್ಟಿದ್ದು, ಕೇವಲ ಕಾಪಿ-ಪೇಸ್ಟ್ ರೀತಿಯ ಉತ್ತರಗಳು ಹೆಚ್ಚಾಗಿವೆ ಎಂದು ತಿಳಿಸಿದ್ದಾರೆ. ಅರ್ಜಿಗಳ ಸಂಖ್ಯೆ ಹೆಚ್ಚಾದರೂ ಗುಣಮಟ್ಟದ ಅಭ್ಯರ್ಥಿಗಳು ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ.

ಒಟ್ಟು 35 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ ಬಳಿಕ ನಡೆದ ಮೊದಲ ಹಂತದ ಮೌಲ್ಯಮಾಪನದಲ್ಲಿ ಬಹುತೇಕರು AI ಆಧಾರಿತ ಸಾಮಾನ್ಯ ಉತ್ತರಗಳನ್ನು ಸಲ್ಲಿಸಿದ್ದರು. ಸಂಶೋಧನೆ, ವೈಯಕ್ತಿಕ ಅಭಿಪ್ರಾಯ ಅಥವಾ ಕೆಲಸದ ಮೇಲೆ ಆಸಕ್ತಿ ತೋರಿದವರು ವಿರಳವಾಗಿದ್ದರು.

ಈ ಪೈಕಿ ಕೇವಲ ಒಬ್ಬ ಅಭ್ಯರ್ಥಿ ಮಾತ್ರ ಪ್ರಾಮಾಣಿಕ ಪ್ರಯತ್ನ ತೋರಿದ್ದು, ಅವನನ್ನೇ ಆಯ್ಕೆ ಮಾಡಲಾಗಿದೆ. ಉಳಿದವರು ಮೂಲಭೂತ ಸಿದ್ಧತೆಯನ್ನೂ ತೋರಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು AI ಉಪಕರಣಗಳಿಂದ ಒಂದೇ ಮಾದರಿಯ ಅರ್ಜಿಗಳು ಹೆಚ್ಚಾಗುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸಿಗೆ ವೈಯಕ್ತಿಕತೆ ಮತ್ತು ನಿಷ್ಠೆ ಅಗತ್ಯವೆಂದು ಅಭಿಪ್ರಾಯ ವ್ಯಕ್ತವಾಗಿದೆ.

Trending

Exit mobile version