‘ಗ್ಯಾಂಗ್ಸ್ ಆಫ್ ವಾಸೇಪುರ್’ ರೀತಿಯ ಚಿತ್ರಗಳು ಈಗ ಅಸಾಧ್ಯ: ಅನುರಾಗ್ ಕಶ್ಯಪ್ ಆತಂಕ | Hosa Suddi

ದೇಶ

‘ಗ್ಯಾಂಗ್ಸ್ ಆಫ್ ವಾಸೇಪುರ್’ ರೀತಿಯ ಚಿತ್ರಗಳು ಈಗ ಅಸಾಧ್ಯ: ಅನುರಾಗ್ ಕಶ್ಯಪ್ ಆತಂಕ

Published

on

ಬೆಂಗಳೂರು: ಇಂದಿನ ಪರಿಸ್ಥಿತಿಯಲ್ಲಿ ‘ಗ್ಯಾಂಗ್ಸ್ ಆಫ್ ವಾಸೇಪುರ್’ ಅಥವಾ ‘ಬ್ಲ್ಯಾಕ್ ಫ್ರೈಡೇ’ನಂತಹ ಧೈರ್ಯಶಾಲಿ ಚಿತ್ರಗಳನ್ನು ನಿರ್ಮಿಸುವುದು ಅಸಾಧ್ಯವಾಗಿದೆ ಎಂದು ಖ್ಯಾತ ಬಾಲಿವುಡ್ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಅಭಿಪ್ರಾಯಪಟ್ಟಿದ್ದಾರೆ. ಕೆಲವು ವಿಷಯಗಳು ರಾಜಕೀಯವಾಗಿ ಅತಿಸೂಕ್ಷ್ಮವಾಗಿದ್ದು, ಅವು ಅನಗತ್ಯ ವಿವಾದಗಳಿಗೆ ಕಾರಣವಾಗುತ್ತಿವೆ ಎಂದು ಅವರು ಹೇಳಿದರು.

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಶನಿವಾರ ನಡೆದ ‘ಫಿಯರ್‌ಲೆಸ್ ಫಿಲ್ಮ್ ಮೇಕಿಂಗ್’ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಕಶ್ಯಪ್, ಸದ್ಯದ ಸಿನಿಮಾ ಪ್ರವೃತ್ತಿ, ರಾಜಕೀಯ ಒತ್ತಡ ಮತ್ತು ತಂತ್ರಜ್ಞಾನದ ಪ್ರಭಾವದ ಕುರಿತು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಖ್ಯಾತ ಚಿತ್ರ ವಿಮರ್ಶಕ ಭಾರದ್ವಾಜ್ ರಂಗನ್ ಸಂವಾದವನ್ನು ನಡೆಸಿಕೊಟ್ಟರು.

ಇರಾನ್ ಹಾಗೂ ರಷ್ಯಾದಂತಹ ರಾಷ್ಟ್ರಗಳ ನಿರ್ದೇಶಕರು ಹೆಚ್ಚಿನ ನಿರ್ಬಂಧಗಳ ನಡುವೆಯೂ ಧೈರ್ಯವಾಗಿ ಸಿನಿಮಾ ಮಾಡುತ್ತಿದ್ದಾರೆ. ಭಾರತೀಯ ನಿರ್ದೇಶಕರು ಅವರಿಂದ ಪ್ರೇರಣೆ ಪಡೆಯಬೇಕು ಎಂದು ಕಶ್ಯಪ್ ಸಲಹೆ ನೀಡಿದರು. ಇತ್ತೀಚೆಗೆ ಬಿಡುಗಡೆಯಾದ ‘ಧುರಂಧರ್’ ಚಿತ್ರದ ಕುರಿತು ಮಾತನಾಡಿದ ಅವರು, ಇದು ಧೈರ್ಯಶಾಲಿ ಮುಖ್ಯವಾಹಿನಿ ಚಿತ್ರಕ್ಕೆ ಉತ್ತಮ ಉದಾಹರಣೆ ಎಂದರು. ಆದರೆ, “ಇದು ಹೊಸ ಭಾರತ” ಎಂಬ ಸಂಭಾಷಣೆ ಹಾಗೂ ಕೆಲವು ರಾಜಕೀಯ ಏಕಪಾತ್ರಾಭಿನಯ ದೃಶ್ಯಗಳು ಅನಗತ್ಯವಾಗಿದ್ದವು ಎಂದು ಟೀಕಿಸಿದರು.

ಸಿನಿಮಾಗಳನ್ನು ‘ಪ್ರಚಾರ’ ಅಥವಾ ‘ಪ್ರೊಪಗಾಂಡಾ’ ಎಂದು ಕರೆಯುವುದೇ ಒಂದು ರೀತಿಯ ಪ್ರಚಾರ ಎಂದು ಹೇಳಿದ ಕಶ್ಯಪ್, ಹಾಲಿವುಡ್‌ನ ಮಾರ್ವೆಲ್ ಚಿತ್ರಗಳು ಅಮೆರಿಕದ ಶ್ರೇಷ್ಠತೆಯನ್ನು ಸಾರುತ್ತವೆ. ಆದರೆ ಅದನ್ನು ಯಾರೂ ಪ್ರಶ್ನಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಕನ್ನಡದ ‘ಟಾಕ್ಸಿಕ್’ ಚಿತ್ರದ ಟೀಸರ್ ಕುರಿತು ಮಾತನಾಡಿದ ಅವರು, ಅದೊಂದು ಅತ್ಯಂತ ಧೈರ್ಯಶಾಲಿ ಪ್ರಯತ್ನ ಎಂದು ಶ್ಲಾಘಿಸಿದರು. ಮಹಿಳೆಯರು ತಮ್ಮ ಲೈಂಗಿಕತೆಯನ್ನು ವ್ಯಕ್ತಪಡಿಸಿದಾಗ ಮಾತ್ರ ವಿರೋಧ ವ್ಯಕ್ತವಾಗುವುದು ನಮ್ಮ ಸಾಂಸ್ಕೃತಿಕ ಬೂಟಾಟಿಕೆಯನ್ನೇ ತೋರಿಸುತ್ತದೆ ಎಂದು ಕಶ್ಯಪ್ ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ, ಖ್ಯಾತ ಬರಹಗಾರ ವಿವೇಕ್ ಶಾನಭಾಗ್ ಅವರ ‘ಘಾಚರ್ ಘೋಚರ್’ ಕಾದಂಬರಿಯನ್ನು ಆಧರಿಸಿ ಕನ್ನಡ ಚಿತ್ರ ನಿರ್ಮಿಸುತ್ತಿರುವುದನ್ನು ಬಹಿರಂಗಪಡಿಸಿದರು. ಈ ಚಿತ್ರ ಸದ್ಯ ಬರವಣಿಗೆ ಹಂತದಲ್ಲಿದ್ದು, ಮುಂದಾಗಿ ಹಿಂದಿಯಲ್ಲೂ ಬರಲಿದೆ ಎಂದು ತಿಳಿಸಿದರು.

Trending

Exit mobile version