ಬೆಂಗಳೂರು
‘ಅಪರಿಚಿತೆ’ ಟ್ರೇಲರ್ ಭರ್ಜರಿ ಲಾಂಚ್ – ಡಿ.ವಿ.ಸದಾನಂದ ಗೌಡ ಬಿಡುಗಡೆ
ಬೆಂಗಳೂರು: ತಾಯವ್ವ ಸಿನಿಮಾ ಮೂಲಕ ಗಮನ ಸೆಳೆದ ಗೀತಪ್ರಿಯ ಸುರೇಶ್ ಕುಮಾರ್, ಈಗ ಅಪರಿಚಿತೆ ಚಿತ್ರದ ಮೂಲಕ ಮತ್ತೊಮ್ಮೆ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಚಿತ್ರದ ಟ್ರೇಲರ್ ಅನಾವರಣ ಸಮಾರಂಭವು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಅದ್ದೂರಿಯಾಗಿ ನೆರವೇರಿತು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಟ್ರೇಲರ್ ಅನ್ನು ಬಿಡುಗಡೆಗೊಳಿಸಿದರು. ಅವರ ಪತ್ನಿ ಡಾಟಿ ಸದಾನಂದ ಗೌಡ ಮತ್ತು ಹಿರಿಯ ನಟಿ ತಾರಾ ಅನುರಾಧ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಟಿ ತಾರಾ ‘ಅಪರಿಚಿತೆ’ ಚಿತ್ರದ ಹಾಡೊಂದನ್ನೂ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ವಿ. ಸದಾನಂದ ಗೌಡ,
“ಚಿತ್ರ ಎಂಬುದು ಸಮಾಜಕ್ಕೆ ಉತ್ತಮ ಸಂದೇಶ ತಲುಪಿಸುವ ಶಕ್ತಿಯುತ ವೇದಿಕೆ. ಅದರ ಪ್ರಯತ್ನದಲ್ಲಿ ಕೆಲಸ ಮಾಡುತ್ತಿರುವ ಗೀತಪ್ರಿಯ ಮತ್ತು ಚಿತ್ರತಂಡಕ್ಕೆ ಹೃತ್ಪೂರ್ವಕ ಶುಭಾಶಯಗಳು” ಎಂದು ಹೇಳಿದರು.
ಚಿತ್ರದ ನಾಯಕಿ ಗೀತಪ್ರಿಯ ಮಾತನಾಡಿ,
“1985ರಲ್ಲಿ ನಾನು ಹಾಗೂ ನನ್ನ ಪತಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದೇವೆ. ಹತ್ತು ಜನರಿಂದ ಆರಂಭವಾದುದು ಇಂದು 10,000 ವಿದ್ಯಾರ್ಥಿಗಳ ಸಾಮ್ರಾಜ್ಯವಾಗಿದೆ. ನಾನು ಈ ಚಿತ್ರದಲ್ಲಿ ಜವಾಬ್ದಾರಿಯುತ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಥೆಯಲ್ಲಿ ಸಮಾಜಕ್ಕೆ ಬೇಕಾದ ಮೌಲ್ಯಗಳಿವೆ, ಅದಕ್ಕಾಗಿ ನಟನೆ ಮಾಡಲು ಒಪ್ಪಿಕೊಂಡೆ” ಎಂದು ಭಾವನಾತ್ಮಕವಾಗಿ ಹೇಳಿದರು.
ಚಿತ್ರವು ರಾಮನಗರದಲ್ಲಿ ಚಿತ್ರೀಕರಿಸಲಾಗಿದ್ದು, ಕ್ರಿಸ್ಮಸ್ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.
ಚಿತ್ರದ ನಿರ್ದೇಶಕ ವಿಶ್ವನಾಥ್,
“ಇದು ನೈಜ ಘಟನೆಯ ಮೇಲೆ ಆಧಾರಿತ ಸಿನಿಮಾ. ಗೀತಪ್ರಿಯ ಜೊತೆಗೆ ಸಿಂಧೂ ಲೋಕನಾಥ್, ಆರ್.ಜೆ ನಿಖಿತಾ, ಹಿರಿಯ ನಟ ಶ್ರೀನಾಥ್ ಮತ್ತು ಅವರ ಪುತ್ರ ರೋಹಿತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಈಗ ಸೆನ್ಸಾರ್ ಹಂತದಲ್ಲಿದೆ” ಎಂದು ತಿಳಿಸಿದರು.
ಹಿರಿಯ ನಟ ಶ್ರೀನಾಥ್,
“ಒಂದೇ ಸಿನಿಮಾದಲ್ಲಿ ನಾನು ಮತ್ತು ನನ್ನ ಮಗ ರೋಹಿತ್ ನಟಿಸಿರುವುದು ಹೆಮ್ಮೆಯ ವಿಷಯ” ಎಂದರು.
ಅಪರಿಚಿತೆ ಸಿನಿಮಾ ಈಗಾಗಲೇ ಅಭಿಮಾನಿಗಳು ಮತ್ತು ಚಿತ್ರರಂಗದಲ್ಲಿ ಕುತೂಹಲ ಹೆಚ್ಚಿಸಿದೆ.